ಮಕ್ಕಳ ಕವನಗಳು (ಮಳೆಯ ಫಜೀತಿ ಪ್ರಸಂಗ) : ಸಂಚಿಕೆ -24
Friday, August 2, 2024
Edit
ಮಕ್ಕಳ ಕವನಗಳು (ಮಳೆಯ ಫಜೀತಿ ಪ್ರಸಂಗ) : ಸಂಚಿಕೆ -24
ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಮಳೆಯ ಬಗ್ಗೆ ಜಗಲಿಯ ಮಕ್ಕಳ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕಾವ್ಯಶ್ರೀ, ದ್ವೀತಿಯ ಪಿಯುಸಿ (ವಿಜ್ಞಾನ)
◾ ದಿವ್ಯಶ್ರೀ,10ನೇ ತರಗತಿ
◾ ಆತ್ಮಿಕಾ ರೈ, ದ್ವೀತಿಯ ಪಿಯುಸಿ (ವಿಜ್ಞಾನ)
◾ ಶೋಭಿತ್, 9ನೇ ತರಗತಿ
◾ ಪಯಸ್ವಿನಿ, 9ನೇ ತರಗತಿ
◾ ಅಂಕಿತ, 9ನೇ ತರಗತಿ
◾ ಫಾತಿಮತ್ ಲಾಮಿಅಃ, 10ನೇ ತರಗತಿ
◾ ಸುಧನ್ವ ಎಸ್ ಹೊಳ್ಳ, 8ನೇ ತರಗತಿ
◾ ವೀಕ್ಷಿತಾ, 10ನೇ ತರಗತಿ
ಮಳೆಯಿಂದ ಈ ಭೂಮಿಯೇ ತತ್ತರಿಸಿದೆ.... ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಪ್ರಳಯಾಂತಕ ಮಳೆ... ಹೀಗೆ ನಾನಾ ರೀತಿಯಲ್ಲಿ ಮಕ್ಕಳ ಮನದಲ್ಲಿ ಮೂಡಿದ ಮಕ್ಕಳ ಭಾವನಾತ್ಮಕ ಕವನಗಳು ಇಲ್ಲಿವೆ... "ಮಳೆಯ ಫಜೀತಿ ಪ್ರಸಂಗ" ಮಕ್ಕಳ ಜಗಲಿಯಲ್ಲಿ ನೀಡಿದ TASK ಗೆ ಬಹಳಷ್ಟು ಜಗಲಿಯ ವಿದ್ಯಾರ್ಥಿಗಳು ಬರಹ ಹಾಗೂ ಕವನದ ರೂಪದಲ್ಲಿ ಬರೆದು ಕಳಿಸಿದ್ದಾರೆ... ಅಭಿನಂದನೆಗಳು ಎಲ್ಲಾ ಮಕ್ಕಳಿಗೆ....
ನೂರಾರು ಮಕ್ಕಳು ಬರೆಯುತ್ತಿದ್ದಾರೆ, ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ... ಇದುವೇ ಖುಷಿಯ ವಿಚಾರ... ತಾರಾನಾಥ್ ಕೈರಂಗಳ
ನಲುಗಿ ಹೋಗುತಿದೆ
ಗಿಡ ಮರ ಬಳ್ಳಿಗಳು ॥೧॥
ಮಿಂಚು ಸಿಡಿಲಿಗೆ ಹೆದರಿ
ಮೇಯಲು ಹೋದ ದನಗಳು
ಬೊಬ್ಬಿಡುತಿದೆ॥೨॥
ಸದ್ದನು ಮಾಡುತ
ಬಂದೇ ಬಿಟ್ಟಿತು
ಅಬ್ಬರದಲಿ ಮಳೆಗಾಲ॥೩॥
ನೀರಿಲ್ಲ ಎಂಬ ಜನರ ಮೊರೆ
ದೇವತೆಗಳ ಮನಕೆ ತಲುಪಿ
ಕರಗಿತು ಕಾರ್ಮೋಡ ಮಳೆ
ಹನಿಯಾಗಿ॥೪॥
ಸುರಿಯಿತು ಮೊದಲ ಮಳೆ
ಹರಿಯಿತು ರೈತನ ಮನದಲಿ
ನಗುವಿನ ಹೊಳೆ॥೫॥
ಮಳೆ ಹನಿ ಬಿದ್ದೊಡನೆ
ಘೋಷಿಸಿತು ಸರಕಾರ
ಶಾಲೆಯ ಆರಂಭದ ದಿನವನು॥೬॥
ಮಕ್ಕಳೆಲ್ಲರೂ ನಲಿಯುತ
ಕುಣಿಯುತ ಪಯಣ ಬೆಳೆಸಿದರು
ಶಾಲೆಯತ್ತ॥೭॥
ತುಂಬಿತು ಎಲ್ಲೆಲ್ಲೂ ನೀರು
ಬಗೆಹರಿಯಿತು ನೀರಿಲ್ಲದ ನೋವು
ಮನತುಂಬಿತು ಒಲವಿನ ತೇರು॥೮॥
ದ್ವೀತಿಯ ಪಿಯುಸಿ ( ವಿಜ್ಞಾನ)
ಸರಕಾರಿ ಹೈಯರ್ ಸೆಕೆಂಡರಿ ಶಾಲೆ
ಬೇಕೂರು.
ಮಂಜೇಶ್ವರ ತಾಲ್ಲೂಕು, ಕಾಸರಗೋಡು ಜಿಲ್ಲೆ
********************************************
ಎಲ್ಲೆಲ್ಲೂ ಕತ್ತಲಾಯಿತು
ಭಯ-ಭೀತಿ ಗೊಳಿಸುವ ಮಿಂಚಿನ ಚೀರಾಟ
ಮೈ-ಜುಂ ಎನಿಸುವ ಸಿಡಿಲಿನ ಆರ್ಭಟ
ದೂರದಿ ಭೋರ್ಗರೆಯುವ ಸ್ವರಧಾರೆ
ಆಗಸದಿಂದ ಸುರಿದೇ ಬಿಟ್ಟಿತು ಜಲಧಾರೆ
ತಂಪಾಯಿತು ಇಳೆ
ಅತಿಯಾಯಿತು ಮಳೆ
ಹಳ್ಳ-ಕೊಳ್ಳ, ನದಿ-ಕೆರೆಗಳು ತುಂಬಿ
ಸೊಬಗನಿತ್ತವು ಮೈದುಂಬಿ
ಆದರೂ ಬಿಡಲಿಲ್ಲ ವರುಣನಾರ್ಭಟ
ಜೀವರಾಶಿಗಳಿಗೆ ಶುರುವಾಯಿತು ಸಂಕಟ
ಒಂದೆಡೆ ಗುಡ್ಡ ಕುಸಿತ, ಪ್ರವಾಹದ ನರಳಾಟ
ತಮ್ಮವರನ್ನು ಕಳೆದುಕೊಂಡ ಕೂಗಾಟ
ಬದುಕು ಕೊಚ್ಚಿ ಹೋಯಿತು
ಪ್ರತಿನಿತ್ಯದ ದಾರಿ ಮುಚ್ಚಿಹೋಯಿತು
ಪ್ರಕೃತಿಯೇ ಕರುಣೆ ತೋರದಾಯಿತು
ಬದುಕೇ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು...... ................................................ ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಚಿಣ್ಣರೆಲ್ಲರೂ ಸೇರಿದರು ಮನೆ
ಗದ್ದೆಗಳಲ್ಲಿ ಮೂಡಿತು ಕೆಸರಿನ ಕೆನೆ
ಇದರಿಂದ ಕೆಂಪಾಯಿತು ಸೂರ್ಯನ ಕೆನ್ನೆ
ಮೊದಲ ರಜೆ ನೀಡಿದ ಖುಷಿ
ಇದರಿಂದ ಮಳೆಯಾಯಿತು ಶತಾಯುಷಿ
ಪ್ರಾರಂಭದಲ್ಲಿದ್ದ ಉತ್ಸಾಹ
ಕೊನೆಗಾಯಿತು ನಿರುತ್ಸಾಹ
ಏರುತ್ತಿರುವ ರಜೆಗಳ ಸಂಖ್ಯೆ
ಮಕ್ಕಳಿಗೆ ಹಾಕಿದರು ಲಕ್ಷ್ಮಣ ರೇಖೆ
ಸೆರೆಮನೆಯಂತೆ ಬಂಧಿಯಾದ ಸ್ಥಿತಿ
ಇದುವೇ ಮಳೆ ನೀಡಿದ ಗತಿ
ಸಂಜೆಯಾಯಿತು ಬೇಗನೆ
ಮಕ್ಕಳಿಗೆ ಶುರುವಾಯಿತು ಕ್ಷಣಗಣನೆ
ಜಿಲ್ಲಾಧಿಕಾರಿಯಿಂದ ರಜೆ ಘೋಷಣೆ
ಮಕ್ಕಳ ಮೇಲಿನ ಹಿತರಕ್ಷಣೆ
ಮಳೆಯಸ್ಪಾದನೆಯಲ್ಲಿ ತಿಳಿದ ಸುದ್ದಿ
ಹೃದಯವನ್ನೇ ಬೆಚ್ಚಿ ಬೀಳಿಸಿತು ಗುದ್ದಿ
ಪ್ರಕೃತಿಯ ಕ್ರೂರವಾದ ಮುನಿಸು
ಬಲಿಯಾದವು ಸಾವಿರಾರು ಕನಸು
ರಭಸವಾದ ಮಳೆರಾಯನ ಅಬ್ಬರ
ಸಹಸ್ರ ಜೀವಿಗಳ ಬದುಕು ನಶ್ವರ
ಇದರಿಂದ ಕಣ್ಣ ತೆರೆಯುವನೇ ಈಶ್ವರ
ಅವನ ಸಹಾಯಕ್ಕಾಗಿ ಚಾಚಿದೆ ಕರ
ತತ್ತರಿಸಿದೆ ಮಲೆಗಳ ನಾಡು
ಅನಂತದಲ್ಲೆಲ್ಲೋ ಮರೆಯಾಗಿದೆ ವಯನಾಡು
ಮಣ್ಣಲ್ಲಿ ಮಣ್ಣಾದ ಪ್ರೇಕ್ಷಣೀಯ ನಾಡು
ಕಣ್ಣೀರ ಕಂಬನಿಗೆ ನೆಲೆಯಾದ ಬೀಡು
ರಜೆಯಲ್ಲಿ ನೀಡಿದ ಕಹಿ ಅನುಭವ
ಅವರಿಗೆ ನೀಡಲಿ ಹೊಸ ಭಾವ
ದೇವರು ನೀಡಿದ ಈ ಕಠಿಣ ಪರೀಕ್ಷೆ
ಅವರ ಬಾಳಲ್ಲಿ ಹೊಸ ನಿರೀಕ್ಷೆ
ಮಣ್ಣಿನಡಿಯಲ್ಲಿ ಅವರ ಪಯಣ
ಕಣ್ಣೀರಿನಿಂದ ತುಂಬಿದೆ ನಯನ
ಆವರಿಸಿದೆ ಕಾರ್ಮೋಡಗಳ ಗಗನ
ಹುಡುಕಾಟದಲ್ಲಿ ತೊಡಗಿದೆ ಹಲವಾರು ಮನ
ದ್ವೀತಿಯ ಪಿಯುಸಿ ( ವಿಜ್ಞಾನ)
ಸರಕಾರಿ ಹೈಯರ್ ಸೆಕೆಂಡರಿ ಶಾಲೆ
ಬೇಕೂರು.
ಮಂಜೇಶ್ವರ ತಾಲ್ಲೂಕು, ಕಾಸರಗೋಡು ಜಿಲ್ಲೆ
********************************************
ಬಾನಾಯಿತು ಕರಿ ಕಪ್ಪು
ವರುಣನ ಆಗಮನಕ್ಕೆ ಕರೆಯೋಲೆಯಂತೆ
ಬಂದು ಸೇರಿತು ಗಾಳಿಯ ತಂಪು
ಗಗನದಲ್ಲಿ ನೇಸರನಿರುವಾಗಲೇ
ಸುತ್ತಲೂ ಆವರಿಸಿದೆ ಕಗ್ಗತ್ತಲೆ
ನನ್ನ ಸುತ್ತಲೂ ಕವಿದಿದೆ
ನಿರೀಕ್ಷಣೆಯ ಸುತ್ತೋಲೆ
ಬರಲಿರುವ ಮಳೆ ಇಳೆಯ ಸಮಾಗಮ
ಭುವಿಯಲ್ಲಿ ಎಲ್ಲಿಲ್ಲದ ಸಂಭ್ರಮ
ಖಗ ಮೃಗಗಳ ಸರಿಗಮ
ಪಡುವಣದಿ ದಿನಮಣಿಯ ಪರಿಭ್ರಮ
ಹಕ್ಕಿಯ ಹಾಡಿಗೆ ತಲೆದೂಗುವ ಮರಗಳು
ಮೊದಲ ಹನಿಗಾಗಿ ಕಾಯುವ ಮನಗಳು
ನೀರಿಗಾಗಿ ಹಾತೊರೆಯುವ ತರುಗಳು
ಎಲ್ಲೆಡೆಯು ನಿರೀಕ್ಷಣೆಯ ಕಂಗಳು
ಭಾನುಭುವಿಯನ್ನೇ ಒಂದಾಗಿಸುವ
ಗುಡುಗು ಮಿಂಚಿನ ತ್ರಾಣ
ಇದುವೇ ವರುಣನ ಆರ್ಭಟಕ್ಕೆ
ಮೇಘಗಳು ನೀಡಿದ ಆಮಂತ್ರಣ
ಮಳೆ ಹನಿಗೆ ಭೂ ಸ್ಪರ್ಶದ ತವಕ
ಹೂಬಳ್ಳಿಗೆ ಸಂತಸದ ಪುಳಕ
ಕೆರೆತೊರೆಗಳ ಮೈತುಂಬುವ ಚುಂಬಕ
ಕಣ್ಮನ ತಣಿಸುವ ಸೌಂದರ್ಯಕ್ಕೆ
ಮನಸೋತ ಗಾಯಕ
ಮಣ್ಣಿನ ಕಂಪು ಸೂಸಿತು ಇಳೆ
ಧರಣಿಯ ತುಂಬಾ ಪ್ರಕೃತಿ ಮಾತೆಯ ಕಳೆ
ಸಪ್ತ ಸ್ವರಗಳಂತೆ ಸುರಿದ ಹೂಮಳೆ
ರಭಸದಿ ತುಂಬಿ ಹರಿದವು ಹೊಳೆ
ಕಡಲಂತ ಮೋಡಕೆ ಕರಗುವುದೇ ಸೊಗಸು
ಮಡಿಲಂತ ಮಣ್ಣಿಗೂ ಮೂಡೋದಿಲ್ಲ ಮುನಿಸು
ಅದೇನೋ ಮಲೆನಾಡ ಮನಸ್ಸು
ಪ್ರತಿ ಮಳೆ ಹನಿಯೊಂದಿಗೆ ನೂರಾರು ಸವಿಗನಸು.
ದ್ವೀತಿಯ ಪಿಯುಸಿ ( ವಿಜ್ಞಾನ)
ಸರಕಾರಿ ಹೈಯರ್ ಸೆಕೆಂಡರಿ ಶಾಲೆ
ಬೇಕೂರು.
ಮಂಜೇಶ್ವರ ತಾಲ್ಲೂಕು, ಕಾಸರಗೋಡು ಜಿಲ್ಲೆ
********************************************
ಬರುತಲಿದೆ ಮಳೆ ಇಂದು
ಅವಾಂತರ ಊಹಿಸಲು
ಸಾಧ್ಯವಿಲ್ಲ ನಮಗಿಂದು
ಮೋಡ ಮುಸುಕಿತು
ಗಾಳಿ ಬೀಸಿತು
ಮಳೆಯು ಸುರಿಯಿತು
ಹೊಳೆಯು ತುಂಬಿ ಹರಿಯಿತು
ಮಳೆಯ ಅಬ್ಬರಕೆ
ಗುಡ್ಡ ಬೆಟ್ಟಗಳು ಕುಸಿಯಿತು
ದಿಕ್ಕಾಪಲಾದವು
ಮನುಕುಲದ ಜೀವ ಸಂಕುಲವು
ಅತಿವೃಷ್ಟಿಯಿಂದ ನಾಶವಾಯಿತು ಬೆಳೆ
ಹಾನಿಗೊಳಗಾಯಿತು ಇಳೆ
ನಾಡಾಯಿತು ಕೆಸರಿನ ಕೊಳೆ
ಕಳೆಗುಂದಿತು ಮನದ ಕಳೆ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬೇಕೂರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
********************************************
ಭೂಕುಸಿತದ ವಾರ್ತೆ
ಉಕ್ಕಿ ಹರಿಯುತ್ತಿರುವ ಹೊಳೆ
ಮನೆಗಳಿಗೆ ನುಗ್ಗುತ್ತಿದೆ ಕೆಸರಿನ ಕೊಳೆ
ಪಶ್ಚಿಮ ಘಟ್ಟದ ಮಲೆನಾಡು
ಕೇರಳದ ಈ ವಯನಾಡು
ಮಳೆಗಾಲದಲ್ಲಿ ಇದು ಸೊಂಪಾದ ಸ್ವರ್ಗ
ಬಿಡದೆ ಜಡಿ ಹಿಡಿದ ಮಳೆಯಲ್ಲೇ
ದುರಂತಕ್ಕೊಳಗಾಗಿದೆ ವಯನಾಡಿನ ನಿಸರ್ಗ
ಹೊಳೆಯ ಗರ್ಜನೆ ಕೇಳಿಸಿತು ಎಲ್ಲಿಂದೆಲ್ಲೆಡೆಗೆ
ಜನರ ಜೀವ ರಕ್ಷಣೆಗೆಂದೇ
ಪರದಾಡಿದರು ಹಲವರು
ಮಣ್ಣು ಪಾಲಾದರು
ಸಾವಿರಾರು ಜನರು
ಕೈಗೆಟುಕದ ಲೋಕಕ್ಕೆ ಮರಳಿ ಹೋದರು.
ಮುಂಡಕೈ ಊರೆ ಅಲ್ಲೋಲ ಕಲ್ಲೋಲದಲಿ
ಮಳೆಯಲಿ ನೊಂದ ಹೃದಯಗಳಿಗಾಗಿ
ಆ ಸಮೂಹವೇ ಕಣ್ಣೀರಿನಲಿ
ಬಂಡೆಯ ಹೊರಳಾಡುತ ಆರ್ಭಟದಿ
ಹರಿಯುತಿದೆ ಜಲಮೂಲ
ಗುಡ್ಡಬೆಟ್ಟವ ಕೊರೆ ಕೊರೆಯುತ
ನಾಡನ್ನೇ ಮಗುಚಿ ಹಾಕಿದೆ
ಊರೇ ನಿದ್ರೆಯಂಚಿಗೆ ಸಾಗುತಲಿ
ಮನೆಗಳೆಲ್ಲ ಮಣ್ಣಿನ ಅಡಿಯಲಿ
ಕುಟುಂಬದ ಜನರು ಚೆಲ್ಲಾಪಿಲ್ಲಿ ಆಗುತ್ತಾ
ನೂರಾರು ಜನ ಸಾಯುತಲಿ
ತಾಯಂದಿರು ಮಕ್ಕಳನ್ನು ತಬ್ಬಿ ಹಿಡಿದು
ಸಾವಿನ ಕಡೆಗೆ ಸಾಗಿದರು
ಕೆಲವು ಮಕ್ಕಳ ಭವಿಷ್ಯ ಹರಿದು
ತಾಯಂದಿರು ಮರಣವನ್ನಪ್ಪಿದರು
ನಾಡಿನ ರಕ್ಷಣೆಗಾಗಿ
ಭಾರತದ ಯೋಧರು ಬಂದರು
ಅಧಿಕ ಜನರ ಪ್ರಾಣದ ಉಳಿವಿಗಾಗಿ
ಹಗಲಿರುಳೆನ್ನದೆ ಶ್ರಮಿಸಿದರು
ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ
ಯಾರಿಗೂ ತಡೆಯಲಾರದ ಬೇಸರ
ಹೊತ್ತಿ ಉರಿಯುತಲಿದೆ
ಬಂಧುಗಳ ಹೆಣ.
ಮಗದೊಮ್ಮೆ ಹುಟ್ಟಿ ಬನ್ನಿ ಈ ಲೋಕದಲಿ
ನಿಮಗಾಗಿ ಲೋಕ ಕಾಯುತಿದೆ
ಇದೇ ನಾವು ನಿಮಗೆ ಅರ್ಪಿಸುವ ಆದರಾಂಜಲಿ
ದೇವರಲ್ಲಿ ಕರ ಮುಗಿದು ಪ್ರಾರ್ಥಿಸುವ
ನಮ್ಮಿಂದ ಆಗುವಷ್ಟು ಸಹಾಯ ಮಾಡುವ
ಅವರೊಂದಿಗೆ ಕೈಜೋಡಿಸುವ
ಇನ್ನಾದರೂ ಮಾನವನ ಅತಿ ಆಸೆ ನಿಲ್ಲಲಿ
ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರಲಿ
ಬೆಟ್ಟಗುಡ್ಡಗಳನ್ನು ಅಗೆಯದಿರಿ
ಮರಗಳನ್ನು ಕಡಿಯದಿರಿ
ಜಲಹರಿಯುವ ಮಾರ್ಗಗಳನ್ನು ಮುಚ್ಚದಿರಿ
ಸುಂದರ ಪರಿಸರವ ಕಾಪಾಡೋಣ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬೇಕೂರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
********************************************
ಅನಾಹುತ ಸಂಭವಿಸಿತು
ಗುಡ್ಡ ಬೆಟ್ಟಗಳು ಕುಸಿದು
ಬಂಡೆ ಕಲ್ಲುಗಳು ಜರಿದು
ಕುಟುಂಬಗಳೆಲ್ಲ ನಾಶ
ಜನಮನಕ್ಕಿದುವೆ ಪಾಶ
ನೀರು ತುಂಬಿ ತುಳುಕಿತು
ಜನರ ಆಕ್ರಂದನ ಮುಗಿಲು ಮುಟ್ಟಿತು
ಅಂದಿನ ವಯನಾಡು
ಇಂದಾಗಿದೆ ಕಣ್ಣೀರ ಬೀಡು
ಅನಾಹುತಗಳು ಸಂಭವಿಸದಿರಲು
ನಾವೆಲ್ಲರು ಜಾಗ್ರತೆ ವಹಿಸೋಣ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬೇಕೂರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
********************************************
ಅದರಿಂದಾಗುತ್ತಿದೆ ಪ್ರಾಣಕ್ಕಪಾಯ
ಮಳೆಯಿಲ್ಲದಿದ್ದರೆ ಬದುಕಲಾರೆವು
ಅದೇ ಪ್ರಳಯ ಬಂದರೆ ಉಳಿಯಲಾರೆವು
ಮಳೆ ಎಂದರೆ ಎಲ್ಲರಿಗೂ ಇಷ್ಟ
ಅದು ಅಮಿತವಾದರೆ ಎಲ್ಲರಿಗೂ ನಷ್ಟ
ಪ್ರಳಯದಿಂದ ಕೆಲವರು ಹಲವರನ್ನು
ಕಳೆದುಕೊಂಡರು
ಕೊನೆಗೆ ವಿದಾಯ ಹೇಳಲು ಆಗದೆ ಕಣ್ಮರೆಯಾದರು
ಮಳೆಯಿಂದ ಸಂತೋಷಿಸಲೇ
ಪ್ರಳಯದಿಂದ ದುಃಖಿಸಲೇ
ವಿಧಿಯೇ ನೀನೆಷ್ಟು ಕ್ರೂರ
10ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಕೆರೆ ತುಂಬಿತು
ತೊರೆ ಹರಿಯಿತು
ಭೋರ್ಗರೆಯಿತು ಕಡಲು
ಹಸಿರಾಯಿತು ಒಡಲು
ಕಂಗೊಳಿಸಿತು ಮಡಿಲು
ಹರುಷಗೊಂಡಿತು ರೈತನ ಮನ
ತುಂಬಿ ತುಳುಕಿತು ಕೃಷಿ ಜೀವನ
ಧನ್ಯವಾಯಿತು ತನು ಮನ
ಕಡಲಿನ ಅಬ್ಬರಕ್ಕೆ ಬಿರುಸಾಯಿತು ಮಳೆ
ಕೆರೆ ತುಂಬಿ ಹರಿಯುತು ಹೊಳೆ
ನೆರೆಗೆ ನಲುಗಿ ಹೋಯಿತು ಇಳೆ.
8ನೇ ತರಗತಿ
ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಲಯ
ಕೊಂಡೆವೂರು, ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ
********************************************
ಬಾನಾಯಿತು ಕತ್ತಲು
ಮಿಂಚಿನೊಡನೆ ಗುಡುಗು ಸಿಡಿಯಿತು
ಮಳೆ ಹನಿಯಿತು ಎತ್ತಲೂ
ತಂಗಾಳಿ ಬೀಸಿತು
ಮುದಗೊಂಡರು ಜನ
ಧರೆ ತಂಪಾಯಿತು
ಹಚ್ಚಹಸಿರಿನಿಂದ ಕಂಗೊಳಿಸಿತು ಭೂವನ
ಹಕ್ಕಿಗಳ ಕೂಜನ
ಕಿವಿಗೆ ಇಂಪಾಯಿತು
ಮುಂಗಾರಿನ ಆಗಮನ
ಹರುಷಗೊಂಡಿತು ನನ್ನೀ ಮನ
8ನೇ ತರಗತಿ
ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಲಯ
ಕೊಂಡೆವೂರು, ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ
********************************************
ಮುನಿದಿರುವೆಯಾ ಮಾನವನ ರಕ್ಕಸ ವರ್ತನೆಗೆ
ತೋಡು, ಹಳ್ಳ, ನದಿ, ತುಂಬಿಹುದು
ನಿನ್ನ ಅವ್ಯಾಹತ ಹರಿವಿಗೆ
ಬರಿದು ಮಾಡಿಹರು ಅಂತರ್ಜಲವ
ಅಭಿವೃದ್ಧಿ ಎಂಬ ನೆಪದಲ್ಲಿ
ಸುರಿದು ಹರಿದಿದೆ ಧೋ ಧೋ ಎಂದು
ಇಳೆಗೆ ಇಂಗಿಸಲಸಾಧ್ಯ ನಿನ್ನನು ತನ್ನ ಮಡಿಲಲ್ಲಿ
ಓ ಮನುಜ ಎಚ್ಚೆತ್ತುಕೊ
ಮುಂದಿನ ಪೀಳಿಗೆಗೆ ಬಚ್ಚಿಟ್ಟುಕೊ
ಪ್ರತಿ ಬೊಗಸೆಯಲಿ ಪ್ರತಿ ಹನಿಯ
ಮಕ್ಕಳಿಗೆ ಜೋಪಾನದಿ ಕಾಪಾಡಿಕೊ
ಓ ಬನ್ನಿ ಬನ್ನಿ ಓ ತನ್ನಿ ತನ್ನಿ
ಯೋಜನೆಗಳ ಸರಮಾಲೆ
ನಾವು ನೀವು ಅವರು ಇವರು ಎನ್ನದೆ
ಮಾಡೋಣ ಈ ಇಳೆಯ ಸಸ್ಯ ಶ್ಯಾಮಲೆ
ಮಳೆಯಿಂದ ಇಳೆ, ಇಳೆಯಿಂದ ಬೆಳೆ
ಮಳೆ ನಮ್ಮ ಜೀವನಾಡಿ
ಅರಿಯೋಣ ಈ ನಿಜವ ಬನ್ನಿ ಬಾಂಧವರೇ
ಇಳೆಯನ್ನು ಮಾಡೋಣ ಜರಡಿ.
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾವಳಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************