ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 02
Sunday, August 4, 2024
Edit
ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 02
..................................................... ಪೂರ್ತಿ
........................................... ಪ್ರಣಮ್ಯ.ಜಿ
....................................... ಸಾತ್ವಿಕ್ ಗಣೇಶ್
........................................ ಅಕ್ಷರ ಪಟವಾಲ್
ಮಕ್ಕಳ ಜಗಲಿಯ ಬಳಗಕ್ಕೆ ಜನನಿ ಮಾಡುವ ನಮಸ್ಕಾರಗಳು. ವಿಪರೀತ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮನೆಯಲ್ಲೇ ಇರುವುದರಿಂದ ನನ್ನ ಮಳೆಯ ಅನುಭವಗಳನ್ನು ಮಕ್ಕಳ ಜಗಲಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲ ಒಂದು ವಾರ ಮಳೆಗೆ ರಜೆ ಸಿಕ್ಕಿದಾಗ ಸಂತೋಷವಾಯಿತು. ಆದರೆ ಇನ್ನೂ ಹೆಚ್ಚು ರಜೆಗಳನ್ನು ನೋಡಿದಾಗ ಚಿಂತೆ ಪ್ರಾರಂಭವಾಗಿದೆ. ಒಂದು ರೀತಿಯಲ್ಲಿ ಮಳೆಯೆಂದರೆ ಸಂತೋಷವೂ ಹೌದು. ಏಕೆಂದರೆ, "ದಕ್ಷಿಣ ಕಾಶಿ" ಎಂದೇ ಪ್ರಸದ್ಧಿಯಾದ ನಮ್ಮ ನೆರೆಯ ಊರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿದಿಯಲ್ಲಿ ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಸಂಗಮವಾಯಿತು. ಆ ದಿನದಂದು ದೇವರಿಗೆ ವಿಶೇಷ ಪೂಜೆಯು ನಡೆಯಿತು. ಇನ್ನೊಂದು ರೀತಿಯಲ್ಲಿ ಬೇಸರವೂ ಹೌದು. ಏಕೆಂದರೆ ದೂರದರ್ಶನದಲ್ಲಿ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು, ಮಕ್ಕಳು, ವೃದ್ಧರು, ವಯಸ್ಕರು ಇಂತಹ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಇವುಗಳನ್ನೆಲ್ಲಾ ವೀಕ್ಷಿಸಿದಾಗ ಬೇಸರವಾಗುತ್ತದೆ. ಪಕ್ಷಿಗಳಿಗೆ ಕಾಳುಗಳನ್ನು ಹುಡುಕಲು ಗೂಡಿನಿಂದ ಹೊರಗೆ ಹೋಗಲು ಸಾಧ್ಯಗಾಗುತ್ತಿಲ್ಲ. ಹಳ್ಳಗಳು, ನದಿಗಳೆಲ್ಲಾ ತುಂಬಿ ಹರಿಯುತ್ತಿದೆ.
.................................................. ಜನನಿ ಪಿ

ಮಕ್ಕಳ ಅನುಭವ ಬರಹಗಳ ಸಂಚಿಕೆ
ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಮಳೆಯ ಬಗ್ಗೆ ಜಗಲಿಯ ಮಕ್ಕಳ ಅನುಭವದ ಬರಹಗಳು
ಅನುಭವ ಬರಹ ರಚಿಸಿರುವ ವಿದ್ಯಾರ್ಥಿಗಳು :
◾ ಪೂರ್ತಿ, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗ
◾ ಪ್ರಣಮ್ಯ.ಜಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
◾ ಸಾತ್ವಿಕ್ ಗಣೇಶ್, 10ನೇ ತರಗತಿ
◾ ಅಕ್ಷರ ಪಟವಾಲ್, 8ನೇತರಗತಿ
◾ ಜನನಿ ಪಿ, 8ನೇ ತರಗತಿ
◾ ಫಾತಿಮತ್ ಶಿಫಾನ, ದ್ವಿತಿಯ ಪಿಯುಸಿ
◾ ಧನ್ವಿ ರೈ ಕೋಟೆ, 9ನೇ ತರಗತಿ
◾ ಶ್ರುತಿಕಾ, 8ನೇ ತರಗತಿ
◾ ಚೈತನ್ಯ ಬಿ ಎನ್, 9ನೇ ತರಗತಿ
◾ ಶ್ರಾವ್ಯ, 10ನೇ ತರಗತಿ
◾ ಸಾಕ್ಷಿ,, ಪ್ರಥಮ ಪಿಯುಸಿ
◾ ಅಖ್ಯಾತ್. ರೈ, 9ನೇ ತರಗತಿ
◾ ಲಕ್ಷಣ್ಯ ಜಿ ಕೆ, 8ನೇ ತರಗತಿ
◾ ಆಶಿತಾ ರೈ, 9ನೇ ತರಗತಿ
ಮಳೆ, ಮಳೆ, ಮಳೆ ಎಲ್ಲೆಂದರಲ್ಲಿ ಮಳೆ... ಅತ್ತ ರೋಡಿನಲ್ಲಿ ಮಳೆಯ ಹೊಳೆ... ಇತ್ತ ತೋಡಿನಲ್ಲಿ ಸಮುದ್ರದ ಅಲೆ... ದೂರದರ್ಶನ, ರೇಡಿಯೋ, ಅಂತರ್ಜಾಲ, ದಿನಪತ್ರಿಕೆ, ಜನರ ಬಾಯಲ್ಲಿ ಎಲ್ಲೆಂದರಲ್ಲಿ ಮಳೆರಾಯನದೇ ಸುದ್ದಿ ಸುಲೇಖ...!
ಹೀಗೆ ಮೊನ್ನೆ ಮೊನ್ನೆಯಷ್ಟೇ ಎಂದಿನಂತೆ ಸಂಜೆ ಹೊತ್ತಲ್ಲಿ ನಾವು (ಅಮ್ಮ, ಅಕ್ಕ, ನಾನು) ಹುಲ್ಲಿಗೆಂದು ಕತ್ತಿ, ಗೋಣಿ, ಹಗ್ಗವನ್ನು ಹಿಡ್ಕೊಂಡು ಅಮ್ಮ ಮತ್ತು ಅಕ್ಕ ರೈನ್ ಕೋಟ್ ಧರಿಸಿ ಹೊರಟರೆ... ನಾನು ಕೊಡೆ ಹಿಡಿದುಕೊಂಡು ಅವರ ಹಿಂದೆಯೇ ಹೆಜ್ಜೆ ಹಾಕಿದೆ.... ನಮ್ಮ ಜೊತೆಗೆ ಮಳೆರಾಯನು ಸಹ ಮೆಲ್ಲಗೆ ಬರುತ್ತಿದ್ದ. ಹುಲ್ಲು ಕೊಯ್ಯಲು ತೋಟಕ್ಕೆ ಹೋಗುವ ಮುನ್ನ ಒಂದು ಹೊಲ ಸಿಗುತ್ತದೆ. ಆ ಹೊಲದ ದಡದ ನಡುವೆ ನಾವು ಸಾಗಿದಂತೆ.... ಮಳೆರಾಯನ ಜೊತೆಗೆ ವಾಯು ದೇವನು ಬರುವುದೇ...!!! ರಭಸವಾಗಿ ಬೀಸುವ ಗಾಳಿಗೆ ನನ್ನ ಕೊಡೆ ಅಣಬೆಯಂತೆ ಅರಳಿತು....!!! ಮತ್ತೆ ಅಮ್ಮ ಕೊಡೆ ಸರಿಪಡಿಸಿದರು. ಅಮ್ಮ ಮತ್ತು ಅಕ್ಕ ಹುಲ್ಲು ಕೊಯ್ಯಲು ಶುರು ಮಾಡಿದರು... ನಾನು ಅವರಿಗೆ ಹುಲ್ಲಿನ ಕಟ್ಟವನ್ನು ತಲೆಗೆ ತುಂಬಿಸಲು ಹೋದ ಕಾರಣ ಮಳೆಗೆ ಕೊಡೆ ಹಿಡಿದುಕೊಂಡು ತೋಟದ ವೀಕ್ಷಣೆಯಲ್ಲಿ ತೊಡಗಿದ್ದೆ. ಆ ಗಾಳಿಯ ರಭಸಕ್ಕೆ ಹಲವು ಅಡಿಕೆ ಮರಗಳು ನೆಲಕ್ಕಪ್ಪಳಿಸಿದ್ದವು. ರಭಸವಾಗಿ ಬೀಸುವ ಗಾಳಿಗೆ ಆಕಾಶದತ್ತ ತಲೆ ಮಾಡಿದಾಗ ಮರಗಳು ಅಲುಗಾಡುತ್ತಿರುವುದನ್ನು ಕಂಡಾಗ ನಮ್ಮ ಮೇಲೆಯೇ ಈಗ ಬೀಳುತ್ತವೆಂಬ ಪುಳಕ ಭಾವ... ಹೇಗೋ ಮಳೆಗೆ ಒದ್ದೆಯಾದ ಹುಲ್ಲಿನ ಅಡಿ ಗೆ ಗೋಣಿಯಿಟ್ಟು ಕಟ್ಟ ಕಟ್ಟಿದರು. ನಾನು ಮತ್ತು ಅಕ್ಕ ಇಬ್ಬರು ಸೇರಿ ಅಮ್ಮನಿಗೆ ಹುಲ್ಲಿನ ಕಟ್ಟವನ್ನು ತಲೆಗೀರಿಸಲು ತಯಾರಾದೆವು. ಮಳೆಗೆ ನೀರನ್ನು ಹೀರಿಕೊಂಡು ಆ ಹುಲ್ಲಿನ ಕಟ್ಟವಂತೂ ಮಣ ಭಾರವಾಗಿತ್ತು...! ಹೇಗೋ ಪೇಚಾಡಿ ಅಮ್ಮನ ತಲೆಗೆ ತುಂಬಿಸಿದೆವು. ನಂತರ ಅಕ್ಕನಿಗೆ ಹುಲ್ಲಿನ ಕಟ್ಟವನ್ನ ನಾನು ತಲೆಗೆ ತುಂಬಿಸಿದೆ. ಹೀಗೆ ಅಮ್ಮ ಮತ್ತು ಅಕ್ಕ ಹುಲ್ಲಿನ ಕಟ್ಟವನ್ನು ತುಂಬಿಕೊಂಡು ಹೋಗುತ್ತಿದ್ದಂತೆ ಧೋ..!! ಮಳೆ ಸುರಿಯಲಾರಂಭಿಸಿತು. ನಾವು ಸೇತುವೆ ದಾಟುವ ತವಕದಲ್ಲಿರುವಾಗ ದೊಡ್ಡ ಸೇತುವೆಯ ಸಂಪೂರ್ಣ ಮುಳುಗಡೆಗೆ ಕ್ಷಣಗಣನೆ ಬಾಕಿ ಇತ್ತು. ಆದಷ್ಟು ಬೇಗ ಆ ಸೇತುವೆಯನ್ನು ದಾಟಿ ಮುಂದೆ ಬಂದೆವು. ಅಲ್ಲೊಂದು ವಿಸ್ಮಯ ನಮ್ಮನ್ನು ಭಯಬುರುಕರನ್ನಾಗಿಸಿತು. ಅಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು...!!! ಏನು ಮಾಡಬೇಕೆಂದು ತೋಚಲಿಲ್ಲ ... ಬೇರೆ ದಾರಿಯೇನಾದ್ರು ಇದೆಯಾ ಎಂದರೆ ಅದು ಕೂಡಾ ಇಲ್ಲ, ಮಳೆ ನಿಲ್ಲುವ ಸೂಚನೆಯೇ ಇಲ್ಲ... ಅದು ಅಲ್ಲದೆ ಸ್ವಲ್ಪ ನೀರು ಕಡಿಮೆಯಾದ ಮೇಲೆ ಸೇತುವೆ ದಾಟೋಣವೆಂದರೆ ಕತ್ತಲೆ ಆಗ್ತಾ ಬರ್ತ್ತಿದೆ. ಅಮ್ಮ ಹೇಗೋ ದೇವರ ಮೇಲೆ ಭಾರ ಹಾಕಿ ಮೆಲ್ಲಗೆ ಆ ಸೇತುವೆ ಇರುವ ಅಂದಾಜಿನ ಅಳತೆಯಲ್ಲಿ ದಾಟಿ ಹುಲ್ಲಿನ ಕಟ್ಟವನ್ನು ದಡಕ್ಕೆ ಹಾಕಿ ನಮ್ಮಿಬ್ಬರನ್ನು ಕೈ ಹಿಡಿದು ಮೆಲ್ಲಗೆ ಸೇತುವೆ ದಾಟಿಸಿದರು. ನಂತರ ಹುಲ್ಲಿನ ಕಟ್ಟವನ್ನು ಪುನಃ ಅಮ್ಮನ ತಲೆಗೆ ನಾವು ತುಂಬಿಸಿದೆವು. ಆ ಮಳೆಗೆ ಹುಲ್ಲಿನ ಕಟ್ಟವನ್ನು ಹಿಡಿದುಕೊಂಡು ಬರುವಾಗ ಕೆಸರಿಗೆ ಸ್ವಲ್ಪ ಕಾಲು ಜಾರಿದರೆ ಕೈ ಕಾಲಿನ ಮೂಳೆ ಮುರಿಯುವುದರಲ್ಲಿ ಬೇರೆ ಮಾತಿಲ್ಲ.!! ಮಣ್ಣಿನ ಮಾರ್ಗದುದ್ದಕ್ಕೂ ನೀರು ಹೊಳೆಯಂತೆ ರಭಸವಾಗಿ ಹರಿದು ಬರುತ್ತಿತ್ತು. ಅಂತೂ ಇಂತೂ ಮಳೆಯನ್ನೆದುರಿಸಿ ಮನೆಗೆ ಬಂದು ದನದ ಕೊಟ್ಟಿಗೆಯ ಎದುರುಗಡೆ ಹುಲ್ಲಿನ ಕಟ್ಟವನ್ನು ಹಾಕಿದಾಗ ಪಶುಗಳ ಆ ಮುಗ್ಧ ಮುಖ ಕಂಡಾಗ ಎಷ್ಟು ಸುಸ್ತಾಗಿ ಬಂದರು ಸುಸ್ತು ಎನಿಸುವುದಿಲ್ಲ. ನಂತರ ಅಮ್ಮ ದನಗಳಿಗೆ ಮಲಗಲು ಅವುಗಳ ಅಡೀ ಗೆ ಸೊಪ್ಪು ಹಾಕಿದರು. ನಂತರ ಅವುಗಳಿಗೆ ಬೈ ಹುಲ್ಲಿನ ಜೊತೆ ಹುಲ್ಲನ್ನು ಹಾಕಿ ಕೈ ಕಾಲು ತೊಳೆದು ಮನೆಯೊಳಗೆ ನಡೆದರು. ಆಗ ಸಮಯ ಸಂಜೆ 7:00 ಆಗಿತ್ತು. ನಂತರ... ನಾನು, ಅಕ್ಕ ಕೈ ಕಾಲುಗಳನ್ನು ತೊಳೆದು ಪೂರ್ತಿ ಒದ್ದೆಯಾಗಿದ್ದ ಕಾರಣ ಚಳಿ ಕಾಯಿಸಿಕೊಳ್ಳುತ್ತ ಒಲೆಯ ಹತ್ತಿರ ಕುಳಿತೆವು. ನಂತರ ಅಮ್ಮ ಬಿಸಿ ಬಿಸಿ ಕಷಾಯ ಮಾಡಿ ಕೊಟ್ಟರು. ಅಲ್ಲೇ ಕುಳಿತು ಯೋಚಿಸಿದಾಗ ನನಗನಿಸಿತು ನಾವೇನಾದರೂ ಮಳೆ ನಿಲ್ಲಲಿ ಎಂದು ಕಾದು ಅಲ್ಲೇ ಕುಳಿತಿದ್ದರೆ ಅಲ್ಲೇ ಉಳಿಯಬೇಕಿತ್ತೆಂದು. ನಮ್ಮಲ್ಲಿ ಧೈರ್ಯ, ಹಾಗೂ ನಂಬಿಕೆಯೊಂದಿದ್ದರೆ ಎಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆದ್ದು ಬರುತ್ತೇವೆ. ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸಿವೆ. ಇನ್ನಾದರೂ ವರುಣದೇವನು ಪ್ರಸನ್ನರಾಗಲಿ ಎಂದು ಪ್ರಾರ್ಥಿಸುತ್ತೇನೆ....
ಧನ್ಯವಾದಗಳೊಂದಿಗೆ
ಪ್ರಥಮ ಪಿ.ಯು.ಸಿ (ವಿಜ್ಞಾನ ವಿಭಾಗ)
ಸರಕಾರಿ ಪದವಿ ಪೂರ್ವ ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬಾರೆಂದರೆ ಬಾರದೆ, ಹೋಗೆಂದರೆ ಹೋಗದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮೆಲ್ಲರನ್ನು ತರಾಟೆಗೆ ತೆಗೆದುಕೊಂಡಿರುವ ಮಳೆರಾಯನ ಆರ್ಭಟದ ಬಗ್ಗೆ ವರ್ಣಿಸುವುದಾದರೂ ಹೇಗೆ? ಕ್ಷಣ - ಕ್ಷಣವೂ ಕಿವಿಗಪ್ಪಳಿಸುವ, ಕಣ್ಣಿಗೆ ಗೋಚರಿಸುವ ಸಮಾಚಾರಗಳೆಲ್ಲವೂ ವರುಣನ ಅವಾಂತರಗಳ ಮಹಾಪೂರವನ್ನೇ ಧಾರೆಯೆರೆಯುವಂತೆ ಕಾಣುತ್ತಿದೆ.
ಅಷ್ಟೆಲ್ಲಾ ಅನಾಹುತಗಳ ನಡುವೆಯೂ, ಅಲ್ಲಲ್ಲಿ ಪಿಸುಗುಡುತ್ತಿರುವ ಮಾತುಗಳೆಂದರೆ "ಇಂದು ಶಾಲೆಗೆ ರಜೆ ಇದೆಯಾ?" ಹೌದು ನಾನೂ ಇದರಿಂದ ಹೊರತಾಗಿಲ್ಲ. ನನಗಂತೂ ನನ್ನ ಕಾಲೇಜು ತುಂಬಾನೇ ದೂರವಿರುವುದರಿಂದ ಮುಂಜಾನೆ 7.15 ರ ಸುಮಾರಿಗೆ ಪ್ರತೀದಿನ ಮನೆಯಿಂದ ಹೊರಡಬೇಕಾಗುತ್ತದೆ. ಈ ಕಾರಣಕ್ಕೆ ಬೆಳಗ್ಗೆ ಬೇಗನೇ ಏಳಬೇಕಾಗುತ್ತದೆ. ಮೊದ - ಮೊದಲು, ರಜೆ ಇರುವ ಸಂದೇಶಗಳು ಬೆಳಗ್ಗೆ ಬರುತ್ತಿದ್ದರಿಂದ ನನಗಂತೂ ತುಂಬಾನೇ ಕಷ್ಟ ಎನಿಸುತ್ತಿತ್ತು. ಬೆಳಗ್ಗೆ ಎದ್ದು, ತಯಾರಾಗಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ "ಇಂದು ರಜೆ" ಎಂಬ ಸಂದೇಶಗಳು ತಲುಪುತ್ತಿದ್ದವು. ಜಡಿಮಳೆಗೆ ಎದ್ದೇಳುವುದೇ ಕಷ್ಟ. ಅದರಲ್ಲೂ ಕಾಲೇಜಿಗೆ ಹೊರಟು, ರಜೆಯೆಂದಾಗ ಮತ್ತೆ ಯಥಾಸ್ಥಿತಿಗೆ ನಿರಾಶಭಾವದಿಂದ ಮರಳುವ ಸನ್ನಿವೇಶ ನಿಜಕ್ಕೂ "ಛೆ! ರಜೆಯೆಂಬ ಮಾಹಿತಿ ತುಸು ಬೇಗ ಬರಬಾರದಿತ್ತೆ?" ಎಂಬ ಉದ್ಗಾರವನ್ನು ಪದೇ ಪದೇ ಹೇಳಿಸುವಂತ್ತಿತ್ತು. ಇದೇನೋ ನನಗೆ ಹಾಗೂ ಇಂತಹ ಅನುಭವ ಪಡೆದ ಕೆಲವರಿಗೆ ಒಂದು ರೀತಿಯ ಫಜೀತಿಯಂತೆ ಕಾಣಬಹುದು. ಆದರೆ ರಜೆ ನೀಡುವ ಹಿಂದಿರುವ ಉದ್ದೇಶ ತುಂಬಾನೇ ಗಂಭೀರವಾದದ್ದು. ಅದರಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವವರ ಹೆಗಲ ಮೇಲಿರುವ ಕರ್ತವ್ಯ ತುಂಬಾನೇ ಭಾರವಾದದ್ದು.
ಪ್ರತಿದಿನ ಮಕ್ಕಳಿಗೆ ರಜೆ ಸಾರಿದರೆ, ಮಕ್ಕಳ ಕಲಿಕೆಯ ಮೇಲೆ ಬೀಳುವ ಪೆಟ್ಟು ಒಂದೆಡೆಯಾದರೆ, ಸದಾ ಸುರಿಯುತ್ತಿರುವ ರಣಮಳೆಯ ಅವಾಂತರಗಳ ನಡುವೆಯೂ ಮಕ್ಕಳನ್ನು ಮನೆಯಿಂದ ಹೊರ ಹೋಗಲು ಬಿಡುವುದು ಕ್ಷೇಮವಲ್ಲವೆಂಬ ಜಾಗೃತಿ ಮನೋಭಾವ ಹೊತ್ತಿರುವ ನಮ್ಮ ಅಧಿಕಾರಿಗಳು ತುಂಬಾನೇ ಯೋಚಿಸಿಕೊಂಡು, ಯೋಜಿಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ರಜೆ ಸಾರುತ್ತಿದ್ದಾರೆ. ಅವರ ಆದೇಶವನ್ನು ಸಮರ್ಥವಾಗಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಅದಕ್ಕಾಗಿ ನಾವೆಲ್ಲಾ ಮನೆಯಲ್ಲಿದ್ದುಕೊಂಡು ನಮ್ಮ ಸಮಯವನ್ನು ಆದಷ್ಟೂ ಸದ್ಬಳಕೆ ಮಾಡಿಕೊಳ್ಳುವವರಾಗೋಣ. ಸಕಲ ಕಡೆಗಳಲ್ಲೂ ಅಲ್ಲೋಲ - ಕಲ್ಲೋಲವಾಗಿ ಓಡಾಡುತ್ತಾ, ಅನಾಹುತಗಳ ಪಟ್ಟಿಯನ್ನು ಏರಿಸುತ್ತಿರುವ ಮಳೆರಾಯನಲ್ಲಿ, ಕೋಪವ ತೊರೆದು ಸಮಾಧಾನದಿಂದ ಇರುವಂತೆ ವಿನಮ್ರವಾಗಿ ಬೇಡಿಕೊಳ್ಳುವ ಮನಸ್ಸುಳ್ಳವರಾಗೋಣವೇ?
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
ಎಸ್. ಡಿ.ಎಮ್. ಪಿ.ಯು ಕಾಲೇಜು ಉಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿಯ ನನ್ನ ಬಂಧು ಬಳಗದವರು ಕ್ಷೇಮವೆಂದು ಭಾವಿಸುತ್ತೇನೆ. ನಾವೆಲ್ಲರೂ ಕ್ಷೇಮದಿಂದ ಇರುವೆವು.
ನಮ್ಮ ಮನೆಯ ಮುಂಬಾಗದಲ್ಲಿ ಒಂದು ತೋಡು ಇದೆ. ಅದರ ಆಚೆ ಬದಿ ಗದ್ದೆಗಳು, ತೋಟಗಳು ಇವೆ. ನಮ್ಮ ಮನೆಯ ಪಕ್ಕದ ಮನೆಯ ಎದುರಲ್ಲಿ ತೋಡು ದಾಟಲು ಮರದ್ದು ಅಂದರೆ ಅಡಿಕೆ ಮರದ ಕಾಲು ಸಂಕವು ಇದ್ದಿತು. ಈಗ ಒಂದು ವರ್ಷದ ಹಿಂದೆ ಅದಕ್ಕೆ ಸಿಮೆಂಟ್ ನಿಂದ ಮೋರಿಯನ್ನು ಅಳವಡಿಸಿ ಸಂಕವು ಆಗಿತ್ತು. ಆದರೆ ಅಲ್ಲಿ ಮೊನ್ನೆಯ ಜೋರು ಮಳೆಯಿಂದಾಗಿ ತೋಡಿನ ಮೋರಿ ಚಿಕ್ಕದ್ದಿದ್ದ ಕಾರಣ ನೀರು ಹೋಗಲು ಸಾಧ್ಯವಾಗದೇ ನೀರೆಲ್ಲ ತೋಟ ಗದ್ದೆಗಳಲ್ಲಿ ತುಂಬಿ ಬೆಳಗ್ಗೆ ಎದ್ದು ನೋಡುವಾಗ ಚಿಕ್ಕದಾದ ಹೊಳೆಯಂತೆ ಕಾಣುತ್ತಿತ್ತು. ಕೊನೆಗೆ ನೀರು ತಗ್ಗದೇ ಜೆ ಸಿ ಬಿ ಯನ್ನು ತಂದು ಆ ಸಂಕವನ್ನು ಒಡೆದು ತೆಗೆದರು. ಒಡೆದು ಹಾಕುವ ಕೆಲಸ ಕ್ಷಣ ಮಾತ್ರದಲ್ಲಿ ಮಾಡಿದರು. ಆದರೆ ಸಂಕವನ್ನು ಮಾಡಲು ಅವರಿಗೆ ತುಂಬಾ ಸಮಯ ಬೇಕಾಗಿತ್ತು. ಅದನ್ನು ನೋಡಿ ತುಂಬಾ ಬೇಸರವಾಯ್ತು. ತೋಟಕ್ಕೆ ಹಾಕಿದ ಗೊಬ್ಬರ, ಗದ್ದೆಯಲ್ಲಿ ನೆಟ್ಟ ನೇಜಿ ಎಲ್ಲ ಕೊಚ್ಚಿ ಹೋಯ್ತು. ಸಂಜೆಯ ಹೊತ್ತಿಗೆ ನೀರು ಕಡಿಮೆ ಆಯಿತು.
ನನಗೆ ಅದನ್ನು ನೋಡಿದಾಗ ಅನಿಸಿದ್ದೇನೆಂದರೆ ಮೊದಲೇ ಯೋಚಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದರೆ ಇಂದು ಈ ಪರಿಸ್ಥಿತಿಯು ಬರುತ್ತಿರಲಿಲ್ಲ....
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ನನ್ನ ಹೆಸರು ಅಕ್ಷರ ಪಟವಾಲ್. ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು ಇಲ್ಲಿ ಎಂಟನೇ ತರಗತಿ ಕಲಿಯುತ್ತಿದ್ದೇನೆ. ಈ ವರ್ಷದ ಮಳೆಗಾಲದಲ್ಲಿ ನನ್ನ ಜೀವನದಲ್ಲಿ ನಡೆದ ಮಳೆಯ ಫಜೀತಿಯ ಪ್ರಸಂಗವನ್ನು ಹಂಚಿಕೊಳ್ಳುತ್ತೇನೆ.
ಹೊಸದಾಗಿ 8ನೇ ತರಗತಿಗೆ ಸೇರಿದ ನನಗೆ ತುಂಬಾ ಖುಷಿಯಾಗಿತ್ತು. ಜೂನ್ ತಿಂಗಳಲ್ಲಿ ಮಳೆ ಪ್ರಾರಂಭವಾದರೂ ಒಳ್ಳೆಯ ವಾತಾವರಣವಿತ್ತು. ಜುಲೈ ತಿಂಗಳ ಪ್ರಾರಂಭದಲ್ಲಿ ಮಳೆಯ ಆರ್ಭಟ ಪ್ರಾರಂಭವಾಯಿತು. ಮಳೆ ರಜೆಯಲ್ಲಿಯೇ ಜುಲೈ ತಿಂಗಳು ಮುಗಿದು ಹೋಯಿತು. ಅಬ್ಬಬ್ಬ ಈ ಮಳೆಯಲ್ಲಿ ಎಂತೆಂಥ ಘಟನೆಗಳು ನಡೆದವು. ಈ ಮಳೆಯಲ್ಲಿ ನಮ್ಮ ಊರಲ್ಲಿ ಬಾವಿಯಲ್ಲಿ ದೊಡ್ಡ ಮೊಸಳೆಗಳು ಕಾಣಿಸಿ ಕೊಂಡಿತು. ಅದನ್ನು ಅರಣ್ಯ ಇಲಾಖೆಯವರು ಹರಸಾಹಸ ಮಾಡಿ ಹಿಡಿದರು. ಅಲ್ಲಲ್ಲಿ ಕೆಲವು ಕಡೆ ಗುಡ್ಡ ಕುಸಿದವು. ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ಮೇಲೆ ಬರಲಾಗದೆ ನೀರಿನಲ್ಲಿ ಕೊಳೆತು ಹೋಯಿತು. ಮನೆ, ಶಾಲೆ, ದೇವಾಲಯ ಹಾಗೂ ಇತರೆ ಕಟ್ಟಡಗಳ ಮೇಲ್ಚಾವಣಿಗಳು ಹಾರಿ ಹೋದವು.
ದಿನಾಂಕ 23/07/2024 ಮಂಗಳವಾರದಂದು ನಮಗೆ ಶಾಲೆ ರಜೆ ಇರಲಿಲ್ಲ. ಮುಂಜಾನೆಯ ವಾತಾವರಣ ತುಂಬಾ ಚೆನ್ನಾಗಿತ್ತು. ಬೆಳಿಗ್ಗೆಯಿಂದ ನಾಲ್ಕು ಗಂಟೆಯವರೆಗೆ ಬಿಸಿಲು ಇತ್ತು. 4: 15 ಶಾಲೆ ಬಿಟ್ಟ ತಕ್ಷಣ ಜೋರಾದ ಬಿರುಗಾಳಿ, ಮಳೆ ಪ್ರಾರಂಭವಾಯಿತು. ನಾನೊಬ್ಬಳೇ ರಸ್ತೆಯಲ್ಲಿ ಕೊಡೆ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದೆ. ಗುಡುಗು, ಮಿಂಚು, ಗಾಳಿ ಅಬ್ಬಾ! ನನಗಂತೂ ತುಂಬಾ ಭಯವಾಯಿತು. ರಸ್ತೆಯ ಬದಿಯಲ್ಲಿ ಸಾಲುಮರಗಳು. ಎಲ್ಲಿ ಮರ ಬೀಳುತ್ತೋ ಎನ್ನುವ ಭಯ, ಭಯದಲ್ಲಿಯೇ ಮುಂದೆ ನಡೆದು ಹೋದೆನು. ಹೀಗೆ ಹೋಗುವಾಗ ಜೋರಾಗಿ ಗಾಳಿ ಬೀಸಲು ಪ್ರಾರಂಭಿಸಿತು. ಗಾಳಿಯ ರಭಸಕ್ಕೆ ನನ್ನ ಕೈಯಲ್ಲಿದ್ದ ಸುಂದರವಾದ ಕೊಡೆ ಹಾರಿ ಹೋಗಿ ಪೊದೆ ಯಲ್ಲಿ ಸಿಕ್ಕಿಕೊಂಡಿತು. ನನ್ನ ಬ್ಯಾಗ್ ಡ್ರೆಸ್ ಒದ್ದೆಯಾಯಿತು. ನನ್ನ ಕೊಡೆಯನ್ನು ತೆಗೆದುಕೊಂಡು ಬಂದೆ. ಗಾಳಿಯಲ್ಲಿ ಒಂದು ಹೆಜ್ಜೆ ಮುಂದೆ ಇಡಲು ಸಾಧ್ಯವಾಗಲಿಲ್ಲ. ಅಂತೂ ಇಂತೂ ಹೇಗೋ ಮಾಡಿ ಮನೆ ತಲುಪಿದೆ. ಗಾಳಿ ಮಳೆ ಬಂದಿದೆ ಮಗಳು ಬರಲು ತಡವಾಯಿತು ಎಂದು ಅಮ್ಮ ಬಾಗಿಲಲ್ಲಿ ಕಾಯುತ್ತಿದ್ದಳು. ಮನೆ ಮತ್ತು ಅಮ್ಮನನ್ನು ನೋಡಿದ ನಂತರ ಸ್ವಲ್ಪ ಭಯ ಕಡಿಮೆಯಾಯಿತು. ಸಂಜೆ ಚಳಿ ಜ್ವರ ಬಂದಿತು. ಇದು ನನ್ನ ಜೀವನದಲ್ಲಿ ನಡೆದ ಮಳೆಗಾಲದ ಮರೆಯಲಾಗದ ಫಜಿತೀಯ ಪ್ರಸಂಗ.
8ನೇತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************
ಮಕ್ಕಳ ಜಗಲಿಯ ಬಳಗಕ್ಕೆ ಜನನಿ ಮಾಡುವ ನಮಸ್ಕಾರಗಳು. ವಿಪರೀತ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮನೆಯಲ್ಲೇ ಇರುವುದರಿಂದ ನನ್ನ ಮಳೆಯ ಅನುಭವಗಳನ್ನು ಮಕ್ಕಳ ಜಗಲಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲ ಒಂದು ವಾರ ಮಳೆಗೆ ರಜೆ ಸಿಕ್ಕಿದಾಗ ಸಂತೋಷವಾಯಿತು. ಆದರೆ ಇನ್ನೂ ಹೆಚ್ಚು ರಜೆಗಳನ್ನು ನೋಡಿದಾಗ ಚಿಂತೆ ಪ್ರಾರಂಭವಾಗಿದೆ. ಒಂದು ರೀತಿಯಲ್ಲಿ ಮಳೆಯೆಂದರೆ ಸಂತೋಷವೂ ಹೌದು. ಏಕೆಂದರೆ, "ದಕ್ಷಿಣ ಕಾಶಿ" ಎಂದೇ ಪ್ರಸದ್ಧಿಯಾದ ನಮ್ಮ ನೆರೆಯ ಊರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿದಿಯಲ್ಲಿ ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಸಂಗಮವಾಯಿತು. ಆ ದಿನದಂದು ದೇವರಿಗೆ ವಿಶೇಷ ಪೂಜೆಯು ನಡೆಯಿತು. ಇನ್ನೊಂದು ರೀತಿಯಲ್ಲಿ ಬೇಸರವೂ ಹೌದು. ಏಕೆಂದರೆ ದೂರದರ್ಶನದಲ್ಲಿ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು, ಮಕ್ಕಳು, ವೃದ್ಧರು, ವಯಸ್ಕರು ಇಂತಹ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಇವುಗಳನ್ನೆಲ್ಲಾ ವೀಕ್ಷಿಸಿದಾಗ ಬೇಸರವಾಗುತ್ತದೆ. ಪಕ್ಷಿಗಳಿಗೆ ಕಾಳುಗಳನ್ನು ಹುಡುಕಲು ಗೂಡಿನಿಂದ ಹೊರಗೆ ಹೋಗಲು ಸಾಧ್ಯಗಾಗುತ್ತಿಲ್ಲ. ಹಳ್ಳಗಳು, ನದಿಗಳೆಲ್ಲಾ ತುಂಬಿ ಹರಿಯುತ್ತಿದೆ.
ನಮ್ಮ ಮನೆಯ ತೋಟದಲ್ಲಿ ಅಣಬೆಗಳು ಸಿಕ್ಕಿತ್ತು. ನಮ್ಮ ಮನೆಯ ಪಕ್ಕದಲ್ಲಿರುವ ಕುಮಾರಧಾರ ನದಿಯು ನೀರಿನಿಂದ ತುಂಬಿ ಹರಿಯುತ್ತಿದೆ. ನೀರಿನಿಂದ ತುಂಬಿ ಹರಿಯುವ ನದಿಯ ಝುಳು-ಝುಳು ಶಬ್ದವು ಆಲಿಸಲು ಇಂಪಾಗಿದೆ. ಒಂದು ಕ್ಷಣವೂ ಬಿಡದೇ ಸುರಿಯುತ್ತಿರುವ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದು ಒಂದು ರೀತಿ ಉತ್ತಮ ಎನಿಸುತ್ತದೆ. ಮಳೆಯಿಂದಾಗಿ ಪ್ರಕೃತಿಗೆ, ಪ್ರಾಣಿ-ಪಕ್ಷಿಗಳಿಗೆ, ಮನುಷ್ಯರಿಗೆ ಯಾವುದೇ ರೀತಿಯ ಹಾನಿಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮೊದಲೆಲ್ಲಾ ಮಳೆ ಬರುವಾಗ ಎಷ್ಟೊಂದು ಖುಷಿಯಿಂದ ಇರುತ್ತಿದ್ದೆವು. ಮಳೆ ಬರೋದಕ್ಕಿಂತ ಮೊದಲು ಎಲ್ಲರು ಹಪ್ಪಳ, ಶಾಂತಾನಿ, ಮುಂತಾದವುಗಳನ್ನು ತಯಾರಿಸುತ್ತಿದ್ದರು. ಮಳೆಗಾಲ ಶುರುವಾಗುವಾಗ ಎಲ್ಲರಿಗೂ ಹಬ್ಬವೇ ಹಬ್ಬ. ಎಲ್ಲರು ಮನೆಯಲ್ಲಿ ಕುಳಿತು ಮಳೆ ಬರುವಾಗ ಹಪ್ಪಳ, ಶಾಂತಾನಿ, ಮುಂತಾದವುಗಳನ್ನು ತಿನ್ನುವುದು. ಮಳೆಯ ನೀರು ಹೋಗುವಾಗ ಕಾಗದದೋಣಿ ಮಾಡಿಬಿಡುವುದು. ನೀರಿನಲ್ಲಿ ಆಟ ಆಡುವುದು ಮೀನು ಹಿಡಿಯುವುದು ಹೀಗೆ ಮಜಾ ಮಾಡುತ್ತಿದ್ದೆವು. ಶಾಲೆಗಳಿಗೆ ಹೋಗುವಾಗ ಕೊಡೆ ಹಿಡಿದುಕೊಂಡು ಹೋಗುವುದು ಅದು ಗಾಳಿಗೆ ಹಾರುವುದು ಅದನ್ನು ಸರಿಪಡಿಸುವಾಗ ಚಂಡಿ ಯಾಗುವುದು ಆಹಾ! ಏನೋ ಖುಷಿ. ನೀರಿನಲ್ಲಿ ಆಟ ಆಡುತ್ತಾ ಮನೆಗೆ ಬರುವುದು. ಮಳೆಗಾಲದ ಖುಷಿಗಳನ್ನು ಪದಗಳಲ್ಲಿ ವರ್ಣಿಸಲಾಗದು. ಆದರೆ ಈಗ ಮನುಷ್ಯನಿಂದಾಗಿ ಪ್ರಕೃತಿಯೇ ವಿಕೋಪಕೊಳಗಾಗಿದೆ. ಬೇಸಿಗೆ ಕಾಲದಲ್ಲಿ ಬಿಸಿಲು ತಡೆಯಲಾಗದೆ ಮಳೆ ಗೋಸ್ಕರ ಎಷ್ಟೋ ಜನರು ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ಮಳೆರಾಯ ಬಂದೇ ಬಿಟ್ಟ. ಎಲ್ಲಾ ಜನರಿಗೆ ಏನೋ ಒಂದು ಖುಷಿ. ರೈತರಿಗೆ ಬೆಳೆಯು ಬೆಳೆಯಬಹುದು ಎಂದು ಖುಷಿ. ಹೀಗೆ ಖುಷಿಯಲ್ಲಿದ್ದಾಗ ಆದ ಘಟನೆಯೇ ಬೇರೆ. ಮನುಷ್ಯನು ಮಾಡಿದಂತಹ ಪರಿಸರದ ದುರುಪಯೋಗದಿಂದ ಪ್ರಕೃತಿ ವಿಕೋಪಕ್ಕೊಳಗಾಗಿ ಎಷ್ಟೊಂದು ದುರಂತಗಳು ನಮ್ಮ ಕಣ್ಮುಂದೆ ಕಾಣುತ್ತಿದೆ. ಎಷ್ಟು ಮನೆಗಳು, ಕಟ್ಟಡಗಳು, ಬೆಟ್ಟ, ಗುಡ್ಡಗಳು, ಪ್ರಾಣಿ, ಪಕ್ಷಿ, ಮನುಷ್ಯ ಜೀವಿಗಳು ಮಣ್ಣಲ್ಲಿ ಮಣ್ಣಾಗಿದ್ದಾರೆ. ಎಷ್ಟೋ ಮನೆಗಳು ಕುಸಿದು ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಮೊದಲನೇ ಖುಷಿಗಳು ಈಗ ಇಲ್ಲ. ಈಗ ಮಳೆ ಬಂದರೆ ಏನೋ ಹೆದರಿಕೆ. ಎಲ್ಲಿ ಯಾವಾಗ ಭೂಕುಸಿತ ವಾಗುತ್ತೆ ಎಲ್ಲಿ ಗುಡ್ಡಗಳು ಬೀಳುತ್ತೆ ಎಲ್ಲಿ ಏನೆಲ್ಲಾ ಅನಾಹುತಗಳಾಗುತ್ತೆ ಎಂಬ ಭಯದಿಂದ ಬದುಕಬೇಕಾಗಿದೆ. ಇಂತಹ ಅನಾಹುತಗಳಿಂದ ತಪ್ಪಿಸಲು ಮುಂಜಾಗ್ರತೆ ವಹಿಸಿಕೊಂಡು ನಮ್ಮ ಮಾನ್ಯ ಡಿಸಿ ಯವರು ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟಿರುತ್ತಾರೆ. ಆದರೆ ಮಕ್ಕಳಾದ ನಾವು ಶಾಲಾ ಕಾಲೇಜುಗಳಿಗೆ ರಜೆ ಸಿಕ್ಕಿದೆ ಎಂಬ ಸಂತೋಷ ಪಡುವುದರ ಬದಲು ಈ ಮಳೆಯಿಂದ ಪ್ರಕೃತಿ ವಿಕೋಪ ಕ್ಕೊಳಗಾಗದೆ ಯಾವುದೇ ತೊಂದರೆಗಳಾಗದಂತಹ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ..........