-->
ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 01

ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 01

ಮಳೆಯ ಫಜೀತಿ ಪ್ರಸಂಗ : ಮಕ್ಕಳ ಬರಹಗಳು : ಸಂಚಿಕೆ - 01
ಮಕ್ಕಳ ಅನುಭವ ಬರಹಗಳ ಸಂಚಿಕೆ 
ಮಳೆ, ಜಡಿ ಮಳೆ, ಭೀಕರ ಮಳೆ, ಧಾರಾಕಾರ ಮಳೆ... ಮಳೆಯ ಬಗ್ಗೆ ಜಗಲಿಯ ಮಕ್ಕಳ ಅನುಭವದ ಬರಹಗಳು 

ಅನುಭವ ಬರಹ ರಚಿಸಿರುವ ವಿದ್ಯಾರ್ಥಿಗಳು :

◾ ಹಿಮಾನಿ ಎನ್ ಶೆಟ್ಟಿ, 7ನೇ ತರಗತಿ
◾ ಅಭಿನವ್ ರಾಜ್ ಎನ್, 7ನೇ ತರಗತಿ
◾ ದಿಯಾ ಉದಯ್ ಡಿ ಯು, 6ನೇ ತರಗತಿ
◾ ಅಭಿನವ್ ಪಿ ಎನ್, 6ನೇ ತರಗತಿ.
◾ ಕಾರ್ತಿಕ್ ಕೇಶವ ಹೆಗಡೆ, 7ನೇ ತರಗತಿ
◾ ಅಭಿರಾಮ. ಕೆ , 4ನೇತರಗತಿ
◾ ಕಿಂಜಲ್ , 7ನೇ ತರಗತಿ
◾ ಅಪೂರ್ವ, 5ನೇತರಗತಿ 
◾ ಶ್ರುತರಾಜ್ ಕೆ ಆರ್, 4ನೇ ತರಗತಿ 
◾ ಪಾರ್ಥ ವಿ ರೈ, 6ನೇ ತರಗತಿ
◾ ಹಾರ್ಧಿಕ್ ಆರ್ , 5ನೇ ತರಗತಿ 
◾ ಭವಿಕ್ ಎಸ್. ಪಿ , 6ನೇ ತರಗತಿ 


          
ನನ್ನ ಹೆಸರು ಹಿಮಾನಿ. ಎನ್ ಶೆಟ್ಟಿ. ನನಗೆ ಮಳೆ ಗಾಲ ಎಂದರೆ ತುಂಬಾ ಖುಷಿ. 'ಮಳೆ' ನೀರಿನಲ್ಲಿ ಆಟ ಆಡುವುದು, ದೋಣಿ ಮಾಡಿ ಬಿಡುವುದೆಂದರೆ ಇಷ್ಟ. ಹಾಗೆಯೇ ಈ ಬಾರಿ ಯ ಮಳೆಗಾಲ ಇನ್ನೂ ಮಜವಾಗಿತ್ತು. ಜೂನ್ ಮೊದಲ ವಾರದಲ್ಲೇ ಮಳೆ ಆರಂಭ ಆಗಿತ್ತು. ಆಗ ನಾನು, ನನ್ನ ತಮ್ಮ ನನ್ನ ಅಕ್ಕ ಪಕ್ಕ ದ ಮನೆಯ ಸ್ನೇಹಿತರೆಲ್ಲರೂ ಸೇರಿ ಗದ್ದೆಯಲ್ಲಿ ಮೀನು, ಏಡಿ ಹಿಡಿದಿದ್ದೆವು. ಮನೆಗೆ ತಂದು ಫ್ರೈ ಮಾಡಿ ತಿಂದೆವು. ಅದು ನಮಗೆ ಆನಂದವಾಯಿತು. ಆಮೇಲೆ ಕೆಲವು ದಿನ ಸ್ಕೂಲ್ ಹೋಗಿ ಬಂದು ಹೋಮ್ ವರ್ಕ್ ಮಾಡಿ ಮತ್ತೆ ಮನೆಯ ಪಕ್ಕದ ತೋಡು ಅಂದ್ರೆ ಕಾಲುವೆ ಹತ್ತಿರ ನಾನು ನನ್ನ ಫ್ರೆಂಡ್ಸ್ ಹೋಗಿ ಹಳೆಯ ಚೂಡಿ ದಾರ್ ಶಾಲ್ ನಲ್ಲಿ ಚಿಕ್ಕ ಚಿಕ್ಕ ಮೀನು ಹಿಡಿದು ಬಿಸ್ಲೇರಿ ಬಾಟಲ್ ಅಲ್ಲಿ ಹಾಕಿ ಅದರ ಒಳಗೆ ನೀರು, ಸಣ್ಣ ಚೂರು ಕಲ್ಲುಗಳನ್ನು ಹಾಕಿ ಇಟ್ಟೆವು. ಆ ದಿನ ತುಂಬಾ ಖುಷಿ ಆಗಿತ್ತು. ಹಾಗೇ ನಿರಂತರ ವಾಗಿ ಮಳೆ ಬರುತ್ತಲೆ ಇತ್ತು. ಹೀಗೆ ಒಂದು ದಿನ ಮಳೆ ಕಾರಣ ದಿಂದ ಸ್ಕೂಲ್ ಗೆ ರಜೆ ಕೊಟ್ಟಿದ್ದರು. ಜುಲೈ ಮೊದಲ ವಾರ. ಆ ದಿನ ಬೆಳಿಗ್ಗೆ ನಾನು ನನ್ನ ತಮ್ಮ ಗುಡ್ಡ ದ ಹತ್ತಿರ ದನ ವನ್ನು ಮೇಯಲು ಕಟ್ಟಿ ಬರಲು ಅಜ್ಜ ನ ಜೊತೆ ಹೋಗಿದ್ದೆವು. ಆಗ ಜೋರಾಗಿ ಮಳೆ ಬಂದ್ದಿತು. ಆ ಸಮಯದಲ್ಲಿ ನನ್ನ ತಮ್ಮ ನ ಚಪ್ಪಲಿ ಕೆಸರಿನಲ್ಲಿ ಮುಳುಗಿ ಹೋಯಿತು. ಅವನು ಜೋರಾಗಿ ಅಳಲು ಶುರು ಮಾಡಿದ. ನನಗೂ ಚಪ್ಪಲಿ ನೀರಿನಲ್ಲಿ ಎಲ್ಲಿ ಹೋಯಿತು ಅಂತ ಗೊತಾಗಲಿಲ್ಲ. ತುಂಬಾ ಹುಡುಕಿದೆ. ಎಲ್ಲಿಯೂ ಸಿಗಲಿಲ್ಲ. ಅಜ್ಜ ಹುಡುಕಿದರೂ ಸಿಗಲಿಲ್ಲ. ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದೆವು. ಅದಕ್ಕೆ ಅಮ್ಮ ಹೋಗಲಿ ಬಿಡಿ. ಬೇರೆ ತರುವ ಅಂದರು. ತಮ್ಮ ಅಳುವುದು ನಿಲ್ಲಿಸಲಿ ಅಂತ ಅಮ್ಮ ಹಾಗೇ ಹೇಳಿದ್ದು. ಆದರೆ ತಮ್ಮ ಅಳುವುದು ನಿಲ್ಲಿಸಲೇ ಇಲ್ಲ. ನನಗೆ ಅದೇ ಚಪ್ಪಲಿ ಬೇಕು ಅಂತ ಹಠ ಮಾಡಿದ. ಸುಮಾರು ಸಮಯದ ನಂತರ ಅಜ್ಜ ಕಾಲುವೆ ಅಲ್ಲಿ ಎಲ್ಲಿ ಕಾಲು ಹಾಕಿದ್ದ ಆ ಜಾಗ ದಲ್ಲಿ ಹಾರೆ ಹಾಕಿ ಹುಡುಕಿದರು. ಅಲ್ಲಿ ಚಪ್ಪಲಿ ಕೆಸರಿನ ಅಡಿ ಇದ್ದಿತು. ಮನೆಗೆ ಬಂದು ತಮ್ಮನಿಗೆ ಕೊಟ್ಟರು. ಅವನಿಗೆ ತುಂಬಾ ಖುಷಿ ಆಯಿತು. ಆ ದಿನದಲ್ಲಿ ಸಮಯ ಪೂರ್ತಿ ಚಪ್ಪಲಿ ಹುಡುಕುವುದರಲ್ಲೇ ಆಯಿತು. ಆದರೂ ಮಜಾ ಆಗಿತ್ತು. ಮತ್ತೆ ಈ ಸಲ ರಜೆ ಜಾಸ್ತಿ ಇದ್ದುದರಿಂದ ನಾನು ನನ್ನ ಫ್ರೆಂಡ್ಸ್ ತುಂಬಾ ಗೇಮ್ಸ್ ಆಡಿದೆವು. ಅದರಲ್ಲೂ ಬೆಳಿಗ್ಗೆ ಬೇಗ ಮೊಬೈಲ್ ನೋಡುವುದು ಸ್ಕೂಲ್ ಗೆ ರಜೆ ಉಂಟಾ ಅಂತ. ಒಟ್ಟಾರೆ ಮಳೆ ಗಾಲ ಖುಷಿ ಆಗಿತ್ತು. ಇದು 2024 ಜೂನ್ ಮಳೆಗಾಲ ದ ನನ್ನ ಅನುಭವ. ಧನ್ಯವಾದಗಳು.
...................................... ಹಿಮಾನಿ ಎನ್ ಶೆಟ್ಟಿ
7ನೇ ತರಗತಿ
ಶ್ರೀ ಸಿದ್ಧಿವಿನಾಯಕ ರೆಸಿಡೆನ್ಷಿಯಲ್ ಸ್ಕೂಲ್
ಹಟ್ಟಿಯಂಗಡಿ, ಕುಂದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************



           
      ನಾನು ಮಳೆಯ ಹತ್ತಿರ ಕೋಪ ಏಕೆ ಗೊತ್ತಾ? ಪ್ರತಿದಿನ ಸಂಜೆಯ ಹೊತ್ತಿಗೆ ನಾನು ಮತ್ತು ಅಪ್ಪ ಕ್ರಿಕೆಟ್ ಆಡಲೆಂದು ಅಂಗಳಕ್ಕೆ ಹೋಗುವಾಗ ಜೋರಾಗಿ ಮಳೆ ಬರಲು ಆರಂಭಿಸುತ್ತದೆ. ಇದನ್ನು ನೋಡುವಾಗ ನನಗೆ ಬಹಳ ಕೋಪ ಬರುತ್ತದೆ. ನಾನು ಯಾವಾಗ ಕ್ರಿಕೆಟ್ ಆಡುವುದೆಂದು ನನಗೆ ಚಿಂತೆಯಾಗುತ್ತದೆ. ಮಳೆಯಲ್ಲಿ ಒದ್ದೆಯಾಗಿಯಾದರೂ ಆಡಬೇಕು ಎನಿಸುತ್ತದೆ. ಆದರೆ ಅಪ್ಪ ಬಿಡುವುದಿಲ್ಲ. ನಾನು ಸಂಜೆ ಹೊತ್ತಿಗೆ ಮಳೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇರುತ್ತೇನೆ. ಕಳೆದ ವಾರ ಹೊಸ ಎರಡು ಕ್ರಿಕೆಟ್ ಬಾಲ್ ತಂದಾಗಿದೆ. ಆದರೆ ನನಗೆ ಆ ಬಾಲ್ ಬಳಸಿ ಆಡಲು ಸಿಕ್ಕಿದ್ದು ಬರೀ ಒಂದು ದಿನ ಮಾತ್ರ.
ನಾನು ಒದ್ದೆಯಾದಾಗ :
      ಒಂದು ಬಾರಿ ನಾನು ಮಳೆ ಜೋರು ಬರುತ್ತಿದ್ದಾಗ ದಿನಪತ್ರಿಕೆ ತರಲು ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಆಗ ರಸ್ತೆಯಲ್ಲಿ ಒಂದು ಕಲ್ಲು ತುಂಬಿದ ಲಾರಿ ಬಂತು. ಆಗ ಮಳೆ ಬರುತ್ತಿತ್ತಲ್ಲವೇ? ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಆ ಲಾರಿಯ ಡ್ರೈವರ್ ಆ ರಸ್ತೆಯಲ್ಲಿದ್ದ ನೀರಿನ ಮೇಲೆ ಲಾರಿ ಚಲಾಯಿಸಿಕೊಂಡು ಹೋದರು. ಆಗ ರಸ್ತೆಯಲ್ಲಿದ್ದ ನೀರೆಲ್ಲ ನಡೆಯುತ್ತಿದ್ದ ನನ್ನ ಮೇಲೆ ಬಿತ್ತು. ನನ್ನ ಬಟ್ಟೆಯೆಲ್ಲ ಒದ್ದೆಯಾಯಿತು. ನಾನು, '"ಹೋ ನನ್ನ ಬಟ್ಟೆಯೆಲ್ಲ ಒದ್ದೆಯಾಯಿತು" ಗಟ್ಟಿ ದ್ವನಿಯಲ್ಲಿ ಹೇಳಿದೆ. ಆದರೆ ಲಾರಿ ಡ್ರೈವರ್ ಗೆ ನನ್ನ ಬೊಬ್ಬೆ ಕೇಳುತ್ತದೆಯೇ! ಕೇಳಲಿಲ್ಲ. ಲಾರಿ ಡ್ರೈವರ್ ಲಾರಿ ಚಲಾಯಿಸಿಕೊಂಡು ಮುಂದೆ ಹೋದರು. ನಾನು ಅಂಗಡಿಗೆ ಹೋಗಿ ದಿನಪತ್ರಿಕೆಯನ್ನು ತೆಗೆದುಕೊಂಡು ಮನೆಗೆ ಬಂದೆ. ಮನೆಗೆ ಬಂದಾಗ ಅಮ್ಮ, "ಯಾಕೆ ನಿನ್ನ ಬಟ್ಟೆ ಒದ್ದೆ ಯಾಗಿದೆ" ಎಂದು ಕೇಳಿದರು ನಡೆದ ವಿಷಯವನ್ನು ಹೇಳಿದೆ. "ನೀನು ನೋಡಿಕೊಂಡು ನಡೆಯಬೇಕಲ್ಲವೇ" ಎಂದು ಅಮ್ಮ ಹೇಳಿದರು. ಆಗ ನಾನು ಹೇಳಿದೆ, "ಅಮ್ಮ ನಾನು ನೋಡಿಕೊಂಡೇ ನಡೆದಿದ್ದೇನೆ ಆದರೆ ಎಲ್ಲಾ ಕಡೆಯಲ್ಲಿಯೂ ನೀರಿದೆ ನಾನು ಏನು ಮಾಡುವುದು.." ಎಂದೆ.. "ಸರಿ, ಇನ್ನು ಹೋಗುವಾಗ ಬಹಳ ಜಾಗರೂಕತೆಯಿಂದ ಹೋಗಬೇಕು" ಎಂದು ಅಮ್ಮ ಎಚ್ಚರಿಕೆಯ ಮಾತನಾಡಿ ನನಗೆ ಒಣಗಿದ ಬಟ್ಟೆಯನ್ನು ಹಾಕಲು ಕೊಟ್ಟರು.
..................................ಅಭಿನವ್ ರಾಜ್ ಎನ್
7ನೇ ತರಗತಿ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************


            
ಪ್ರತಿ ವರ್ಷ ಮಳೆ ಎಂದರೆ ಎಷ್ಟು ಖುಷಿಯೋ, ಶಾಲೆಗೆ ಹೋಗಲು ಅಷ್ಟೇ ಬೇಸರ. ಮಳೆ ಬರುವಾಗಲೇ ಅಮ್ಮನ ಹತ್ತಿರ ಹೇಳಿ ರೈನ್ ಕೋಟ್ ಇರುವ ಬ್ಯಾಗನ್ನೇ ತೆಗೆದುಕೊಂಡು ಆಯ್ತು. ಪುಸ್ತಕ ಒದ್ದೆ ಆಗದೆ ಇರಲಿ ಅಂತ. ಇನ್ನು ಹೊಸ ಕೊಡೆ, ಪ್ರತಿ ಜೂನಿಗೆ ಮಳೆಗಾಲಕ್ಕೆ ಆಗುವ ಹೊಸ ಚಪ್ಪಲಿಗಳನ್ನು ತೆಗೆದುಕೊಂಡು ಶಾಲೆಗೆ ಹೋಗುವಾಗ ಮಳೆ ಗ್ಯಾರಂಟಿ ಬರುತ್ತದೆ. 
      ಈ ಮಳೆಗೆ ನಮ್ಮಂತಹ ಮಕ್ಕಳನ್ನು ಕಂಡರೆ ತುಂಬಾ ಇಷ್ಟ. ಏಕೆಂದರೆ ಮಕ್ಕಳು ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಮತ್ತು ಶಾಲೆಯಿಂದ ಹೊರಗೆ ಬರುವ ಹೊತ್ತಿಗೆ ಮಾತ್ರ. ಎಂತಹಾ ಗಾಳಿ ಮಳೆ ಎಂದರೆ ಮನೆ ಮತ್ತು ಶಾಲೆಯ ಅಂಗಳದಲ್ಲೇ ನಾವು ಒದ್ದೆಯಾಗಿ ಬಿಡುತ್ತೇವೆ. 
       ಇನ್ನು ಮಳೆಗೆ ಅಂತ ಡಿಸಿ ಅಂಕಲ್ ಏನಾದರೂ ಶಾಲೆಗೆ ರಜೆ ಕೊಟ್ಟರೆ ಅಂದು ಮಳೆಗೂ ರಜೆ. ಮಳೆ ಗಟ್ಟಿಯಾಗಿ ಹೊದ್ದುಕೊಂಡು ನಮ್ಮ ಹಾಗೆಯೇ ಮಲಗಿ ಬಿಡುತ್ತದೆ. ಇನ್ನು ಮಳೆಗಾಲದಲ್ಲಿ ಸ್ವಲ್ಪ ವೇಗವಾಗಿ ಹೋದರೆ ಜಾರಿ ಬೀಳುವುದು ಗ್ಯಾರಂಟಿ. 
  ಶಾಲೆಗೆ ಬಸ್ಸಲ್ಲಿ ಹೋಗುವುದಾದರೆ ಕೊಡೆ ಮಡಚಿ ಬಸ್ಸಿಗೆ ಹತ್ತುವಷ್ಟರಲ್ಲಿ ಎಲ್ಲಾ ಒದ್ದೆ. ಇಡೀ ದಿನ ಶಾಲೆಯಲ್ಲಿ ಚಳಿ ಚಳಿ. ಮಳೆಗಾಲದಲ್ಲಿ ಬೆಳಗ್ಗೆ ಏಳಲು ಎಷ್ಟು ಕಷ್ಟ.. ಇನ್ನಷ್ಟು ಮಲಗುವ ಅಂತ ಅನ್ನಿಸಿ ಬಿಡುತ್ತದೆ. ಆಗಲೇ "ಏಳು, ಗಂಟೆ ಎಂಟಾಯಿತು" ಎಂದು ಅಮ್ಮನ ದೊಡ್ಡ ಸ್ವರ ಕೇಳಿ ಶಾಲೆಗೆ ಹೋಗಬೇಕಲ್ಲ ಅಂತ ಏಳುವುದು. ಮೊದಲು ವಾಟ್ಸ್ ಆ್ಯಪ್ ನಲ್ಲಿ ಶಾಲೆಯ ಗುಂಪು ನೋಡುವುದು, ಇವತ್ತು ರಜೆ ಉಂಟಾ ಅಂತ. ಇದ್ದರೆ, ಮತ್ತೆ ಹೊದ್ದು ಮಲಗುವುದು. ಇಲ್ಲದೆ ಇದ್ದರೆ, ಅಯ್ಯೋ ಅಂತ ಎದ್ದು ಹೊರಡುವುದು.  ಮಳೆಗಾಲದಲ್ಲಿ ಬ್ಯಾಗು, ನೀರಿನ ಬಾಟಲಿ, ಊಟ ಇವುಗಳ ಜೊತೆಗೆ ಕೊಡೆ ಒಂದು ಹೆಚ್ಚು. ಕೆಲವರು ರೈನ್ ಕೋಟ್ ತರುತ್ತಾರೆ. ಇನ್ನು ಕೆಲವರು ಏನೂ ತರದೆ ನೆನೆದುಕೊಂಡು ಹೋಗಿ ಜ್ವರ, ಶೀತ ಬರುತ್ತದೆ. ಇನ್ನು ಕೆಲವರು ಸಂಜೆ ಮಳೆ ಇಲ್ಲದೆ ಇದ್ದರೆ ಕೊಡೆಯನ್ನು ಶಾಲೆಯಲ್ಲೇ ಬಿಟ್ಟು ಹೋಗಿರುತ್ತಾರೆ. ಅರ್ಧದಲ್ಲಿ ಮಳೆ ಬಂದರೆ ಪೂರ್ತಿ ಒದ್ದೆ. ಇನ್ನು ಕೆಲವರು ಮನೆಗೆ ಹೋಗುವ, ಬಸ್ಸು ಬರುವ ಅರ್ಜೆಂಟಲ್ಲಿ ಬೇರೆಯವರ ಕೊಡೆ ಹಿಡಿದುಕೊಂಡು ಹೋಗಿರುತ್ತಾರೆ. ಒಬ್ಬೊಬ್ಬರು ಶಾಲೆಯಲ್ಲಿ "ನನ್ನ ಕೊಡೆ ಕಾಣುವುದಿಲ್ಲ" ಎಂದು ಅಳುತ್ತಾ ಕುಳಿತುಕೊಳ್ಳುತ್ತಾರೆ. 
       ಮಳೆಗಾಲದಲ್ಲಿ ರಜೆ ಕೊಟ್ಟರೆ ಖುಷಿಯೇ. ಆದರೆ ಶನಿವಾರ ಇಡೀ ದಿನ ಬೇಡ. ಮತ್ತೆ ಅಜ್ಜಿ ಮನೆಗೆ ಹೋಗಲು ಆಗುವುದಿಲ್ಲ. ಹಾಗೆಯೇ ಬೋರ್ ಆಗುತ್ತದೆ. ಅಂತೂ ಇಂತೂ ಈ ಮಳೆಗಾಲದ ತೊಂದರೆಗಳು ತುಂಬಾ. ಹಲವು ಕಡೆ ಗುಡ್ಡ ಜರಿದು ಬಿದ್ದು ಜನರ ದೇಹ ತುಂಡು ತುಂಡಾಗಿ ಹೋಗಿದೆ. ಹಲವಾರು ಜನ ತಮ್ಮ ಕುಟುಂಬದ ಸದಸ್ಯರನ್ನು, ಮಕ್ಕಳನ್ನು, ಮನೆಗಳನ್ನು, ಸಾಕಿದ ಪ್ರಾಣಿಗಳನ್ನು ಕಳೆದುಕೊಂಡು ಬೇಸರದಲ್ಲಿ ಇರುವುದನ್ನು ಟೀವಿಯಲ್ಲಿ ನೋಡುವಾಗ ನಮಗೂ ಬೇಸರವಾಗುತ್ತದೆ. ದೇವರೇ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡುತ್ತೇವೆ. 
........................... ದಿಯಾ ಉದಯ್ ಡಿ ಯು
6ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮೂಲ್ಕಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


         
ಮಳೆಗೂ ಶಾಲೆಗೂ ಬಹಳ ಹತ್ತಿರದ ಸಂಬಂಧ. ನಾವು ಶಾಲೆಗೆ ಹೊರಡಲು ಗೊತ್ತಿಲ್ಲ ಜೋರಾಗಿ ಮಳೆ ಸುರಿದಾಯಿತು. ಕೆಲವೊಮ್ಮೆ ಬಹಳ ಖುಷಿ, ಕೆಲವೊಮ್ಮೆ ಬಹಳ ಬೇಸರವೂ ಆಗ್ತದೆ. ಏಕೆಂದರೆ ಜೋರಾಗಿ ಮಳೆ ಬಂದರೆ ರಜೆ ಸಿಗುತ್ತದೆ. ಆದರೆ ತುಂಬಾ ದಿನ ರಜೆ ಇದ್ದರೆ ಮನೆಯಲ್ಲೇ ಕೂತು ಹೊರಗಡೆ ಹೋಗಲೂ ಆಗದೆ, ಆಟ ಆಡಲೂ ಸಿಗದೆ ಬೇಸರ ಆಗುತ್ತದೆ. ಶಾಲೆಯಲ್ಲಿ ದಿನಾಲೂ ಸಂಜೆ ವಾಲಿಬಾಲ್ ಅಭ್ಯಾಸ ಮಾಡಲು ಇರುತ್ತಿತ್ತು. ಮಳೆಯಿಂದಾಗಿ ಈಗ ಅದೂ ಇಲ್ಲದಾಗಿದೆ.
     ಮಳೆ ರಜೆಯಿಂದಾಗಿ ನಮ್ಮ ಪರೀಕ್ಷೆಯು ಮುಂದೂಡಲ್ಪಟ್ಟಿತ್ತು. ಮಳೆ ರಜೆಕಳೆದು ಶಾಲೆ ಆರಂಭವಾಯಿತು. ಪರೀಕ್ಷೆಯು ಆರಂಭವಾಯಿತು. ಆದರೆ ಮಾರನೆಯ ದಿನವೇ ವಿಪರೀತ ಮಳೆ. ಪರೀಕ್ಷೆಯು ನಿಂತುಹೋಯಿತು. ಪುನಃ ರಜೆ ಪ್ರಾರಂಭ. ಈ ಮಳೆಯ ಅನಾಹುತ ನೋಡಿ ಬಹಳ ದುಃಖವಾಯಿತು. ನಮ್ಮ ಶಾಲೆಯ ಸುತ್ತ ಮುತ್ತಲೂ ಗುಡ್ಡ ಕುಸಿದು ರಸ್ತೆಯಿಂದ ಹೋಗಲು ಕಷ್ಟವಾಗಿತ್ತು. ಈ ಮಳೆಯಿಂದಾಗಿ ತುಂಬಾ ಪ್ರದೇಶದಲ್ಲಿ ಗುಡ್ಡ ಕುಸಿದು ಬಿದ್ದಿರುವುದನ್ನು ಟಿವಿ ಯಲ್ಲಿ ನೋಡಿ ತುಂಬಾ ಬೇಸರ ವಾಯಿತು.
     ಮನೆಯೊಳಗೇ ಇದ್ದುದರಿಂದ ನನ್ನ ತಮ್ಮನ ಕೀಟಲೆಯನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವನಿಗೆ ಆಟ ಆಡಲೂ, ಕೀಟಲೆ ಮಾಡಲೂ, ಬಯ್ಯಲೂ, ಕೊನೆಗೆ ಹೊಡಿಯಲೂ ನಾನೇ ಬೇಕು. ನಂತರ ಅವನಿಗೆ ಸಹಾಯ ಮಾಡಲೂ ನಾನೇ ಬೇಕು. ಎಲ್ಲದಕ್ಕೂ ನಾನೇ ಬೇಕು, ಇದು ಎಂಥಾ ಅವಸ್ಥೆ ಒಮ್ಮೆ ಮಳೆ ಕಡಿಮೆಯಾಗಿ ಶಾಲೆ ಆರಂಭವಾಗಲಿ ಎಂದು ಅನಿಸುತ್ತಿದೆ.
...................................... ಅಭಿನವ್ ಪಿ ಎನ್
6ನೇ ತರಗತಿ.
ಸ.ಉ .ಹಿ.ಪ್ರಾ.ಶಾಲೆ, ಮುಂಡೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                

 ನನ್ನ ಹೆಸರು ಕಾರ್ತಿಕ್ ಕೇಶವ ಹೆಗಡೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದು ಈ ಬಾರಿ ನಮ್ಮ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಸಹ ಮಳೆಯ ಅಬ್ಬರ ಭೂಕುಸಿತ ಜೋರಾಗಿದೆ. ಇದರಿಂದ ಅನೇಕ ಸಾವು-ನೋವುಗಳು ಸಂಭವಿಸಿದ್ದು ಇನ್ನು ಮುಂದುವರೆಯುತ್ತಿರುವುದು ದುಃಖಕರವಾಗಿದೆ. ಇದರೊಂದಿಗೆ ಮಕ್ಕಳ ಜಗಲಿಯಲ್ಲಿ ಮಳೆಯ ಬಗ್ಗೆ ನನ್ನ ಚಿಕ್ಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. 
     ನಮ್ಮ ಮನೆಯ ಪಕ್ಕದಲ್ಲಿ ಒಂದು ಹಳ್ಳವಿದೆ. ಅದು ಮಳೆಯ ಆರ್ಭಟದಿಂದ ಧುಮುಕ್ಕುತ್ತಿದೆ. ಬೆಟ್ಟಗಳಿಂದ ಸುತ್ತಮುತ್ತಲಿನ ಕಾಲುವೆಗಳಿಂದ ಹರಿದು ಈ ಹಳ್ಳಕ್ಕೆ ಬಂದು ನೀರು ಸೇರಿ ಮುಂದೆ ಹರಿದು ಹೋಗುವುದರಿಂದ ಅದನ್ನು ದಾಟಿ ಶಾಲೆಗೆ ಹೋಗಲು ತುಂಬಾ ಕಷ್ಟವಾಗಿದೆ. ಏನಾದರೂ ಮಾಡಿ ಶಾಲೆಗೆ ಹೋಗಬೇಕು ಎಂದು ಮನಸ್ಸು ಪ್ರೇರೇಪಿಸುತ್ತದೆ. ಆದರೆ ಹಳ್ಳವನ್ನು ದಾಟುವುದು ಮತ್ತು ವಾಹನಗಳನ್ನು ದಾಟಿಸುವುದು ಕಷ್ಟವಾಗಿದೆ. ಮಳೆ ಕಡಿಮೆಯಾಗಿ ಮೂರರಿಂದ ನಾಲ್ಕು ತಾಸುಗಳ ನಂತರ ಕಾಲುವೆ ದಾಟಬಹುದು. ಮಳೆ ಕಡಿಮೆಯಾಗದಿದ್ದರೆ ಶಾಲೆಗೆ ಹೋಗಲು ಸಾಧ್ಯವಿಲ್ಲ. ಈ ತೊಂದರೆಯಿಂದಾಗಿ ನಾನು ೧೧ ರಿಂದ ೧೨ ಗಂಟೆಗೆ ಶಾಲೆಗೆ ಹೋಗಿದ್ದು ಸಹ ಇದೆ. ಇದೇ ರೀತಿ ಮಳೆಯ ಆರ್ಭಟ ಜೋರಾದರೆ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಹುದೇನೋ ಎಂಬ ಆತಂಕ ಒಂದು ಕಡೆಯಾದರೆ ಮತ್ತೊಂದೆಡೆ ಗಾಳಿ ಮಳೆಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸಹ ದೊಡ್ಡ ಸವಾಲಾಗಿದೆ.
ನನ್ನಂತೆ ನಮ್ಮ ಶಾಲೆಯಲ್ಲಿ ಹಲವಾರು ಮಕ್ಕಳು ಮಳೆಯ ಫಜೀತಿಗೆ ಸಿಲುಕಿದ್ದಾರೆ. ಪ್ರಕೃತಿ ಮುನಿದರೆ ಏನೆಲ್ಲ ಸಂಭವಿಸುತ್ತದೆ ಎಂಬುದು ನನಗೆ ಅನುಭವವಾಗುತ್ತಿದೆ. ಬೆಟ್ಟ ಗುಡ್ಡಗಳನ್ನು ಕೊರೆದು ಹೆದ್ದಾರಿ ಮಾಡಿರುವುದು ಸಹ ಭೂಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಅನೇಕ ಜನರು ತಮ್ಮ ಆಶ್ರಯವನ್ನು ಕಳೆದುಕೊಂಡಿದ್ದಾರೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿದ ಅನೇಕ ನಿರಾಶ್ರಿತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ನಮ್ಮವರನ್ನು ರಕ್ಷಿಸಿಕೊಳ್ಳೋಣ. ಎಂದು ಮಕ್ಕಳ ಜಗಲಿಯಲ್ಲಿ ಮಳೆಯ ಫಜೀತಿಯ ಪ್ರಸಂಗದ ಬಗ್ಗೆ ನನ್ನ ಅನುಭವ ಹಂಚಿಕೊಂಡಿರುತ್ತೇನೆ. ಮಳೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಮಕ್ಕಳ ಜಗಲಿಯಲ್ಲಿ ಬಳಗಕ್ಕೆ
ತುಂಬು ಹೃದಯದ ಧನ್ಯವಾದಗಳು
................................ ಕಾರ್ತಿಕ್ ಕೇಶವ ಹೆಗಡೆ
7ನೇ ತರಗತಿ
ಪ್ಲೇಟೊ ಪಯೋನಿಯರ್ ಆವಿನಹಳ್ಳಿ 
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************


            

ಮೊನ್ನೆ ಶಾಲೆಯಿಂದ ಮನೆಗೆ ಬರುವಾಗ ನನ್ನ ಸ್ನೇಹಿತೆಯ ಮನೆಯಲ್ಲಿ ಗುಡ್ಡ ಕುಸಿದದ್ದು ನೋಡಿ ಭಯವಾಯಿತು. ನಮ್ಮ ತೋಟದಲ್ಲಿ ಕಲ್ಲು ಮತ್ತು ಮಣ್ಣು ಸಮೇತ ನೀರು ತುಂಬಿದೆ. ಶಾಲೆಯಿಂದ ಬರುವಾಗ ಕೆಲವು ಕಡೆ ಬರೆಗಳು ಜರಿದ್ದಿದ್ದವು. ನಮ್ಮ ತರಗತಿ ಮತ್ತು L.K.G U.K.G ತರಗತಿ ಒಳಗೆ ನೀರು ತುಂಬಿತ್ತು. ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಮಾಡುವ ಯೋಜನೆ ಹಮ್ಮಿಕೊಂಡಿದ್ದರು. ನಾನು ಅದರಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಮಳೆಯ ರಜಾ ಕಾರಣದಿಂದ ಮುಂದಿನ ದಿನ ಮಾಡುವ ಎನ್ನುವಾಗ ತುಂಬಾ ಬೇಸರವಾಯಿತು. ಮೊನ್ನೆ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಹಿಂದಿನ ಗುಡ್ಡ ಜರಿದು ಮತ್ತು ಅಂಗಳದ ಬಾವಿಯ ಬದಿ ಮಣ್ಣು ಜರಿದದ್ದು ನೋಡಿ ತುಂಬಾ ಭಯಗೊಂಡೆ. ಏಕೆಂದರೆ ನಮ್ಮ ಮನೆಯ ಹಿಂದೆ ಗುಡ್ಡ ಇದೆ ಆದ್ದರಿಂದ ನನಗೆ ಭಯ. ಸೈಕಲ್ ನೋಡಿದಾಗ ಹೊರಗೆ ಆಟವಾಡಲು ನೆನಪಾಗುತ್ತದೆ ಆದರೆ ಬೀಸುವ ಗಾಳಿ ನೋಡಿ ಅತ್ತಿದ್ದು ಉಂಟು. ಈ ಸಲದ ಮಳೆ ನನಗೆ ಭಯವನ್ನುಂಟು ಮಾಡಿದೆ.
........................................... ಅಭಿರಾಮ. ಕೆ 
4ನೇತರಗತಿ
ಸ ಉ ಹಿ ಪ್ರಾ ಶಾಲೆ ಮುಂಡೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************


      

ಅಂದು 30-7- 2024 ಮಂಗಳವಾರದಂದು ಶಾಲೆ ಮುಗಿದ ಬಳಿಕ ನಾನು ಹಾಗೂ ನನ್ನ ಅಮ್ಮ, ತಮ್ಮ, ನನ್ನ ಗೆಳತಿ ಹಾಗೂ ಅವಳ ಅಮ್ಮ ಒಟ್ಟಿಗೆ ಮನೆಗೆ ಬರುತ್ತಿದ್ದೆವು. ನಾವು ಶಾಲೆಯಿಂದ ಹೊರಟ ತಕ್ಷಣ ಮಳೆ ಬರಲು ಶುರುವಾಯಿತು. ನಾವು ಕೆಲವರು Rain Coat ಹಾಕಿಕೊಂಡು ಮತ್ತು ಕೆಲವರು ಕೊಡೆ ತೆಗೆದುಕೊಂಡು ಶಾಲೆಯಲ್ಲಿ ಕೊಟ್ಟ ಮನೆ ಕೆಲಸ ವನ್ನು ಪುನಃ ನೆನಪು ಮಾಡಿಕೊಂಡು ಬರುತ್ತಿದ್ದೆವು. ನಾವು ಬರುವಾಗ ದಾರಿಯಲ್ಲಿ ಪ್ರತಿ ದಿನ ನನ್ನ ಗೆಜ್ಜೆಯಷ್ಟು ನೀರಿರುತ್ತಿತು ಆದರೆ ಆ ದಿನ ನನ್ನ ಕಾಲಿನ ಗಂಟಿನಷ್ಟು ನೀರು ತುಂಬಿತ್ತು. ನಾನು ಆ ದಿನಗಿಂತ ಮೊದಲು ಒಮ್ಮೆ ಕೂಡ ಇಷ್ಟು ನೀರಿನಲ್ಲಿ ನಡೆಯಲಿಲ್ಲ. ನಾವು ಬರುವಾಗ ಗದ್ದೆಯಲ್ಲಿ ನೀರು ತುಂಬಿ ಕೊಂಡಿತ್ತು. ಅದನ್ನು ನೋಡುತ್ತಾ, ಮಾತನಾಡುತ್ತಾ ಮನೆಯ ಹತ್ತಿರ ಮುಟ್ಟಿದ್ವಿ. ನಾವು ಯಾವತ್ತೂ Main road ನಿಂದ ಬರುವುದಿಲ್ಲ. ಏಕೆಂದರೆ ನಮ್ಮ ಮನೆಯಿಂದ ಶಾಲೆಗೆ 1 ಗಂಟೆವರೆಗೆ ನಡೆಯಬೇಕು. ಅದಕ್ಕಾಗಿಯೇ ನಾವು Shortcut ನಿಂದ ಬರುವುದು. ShortCut ನಿಂದ 20 ನಿಮಿಷ ಮಾತ್ರ ನಡೆಯಬೇಕು. ನಾವು ನಮ್ಮ ಮನೆಯ ಬಳಿ ಬರುವಾಗ ನೋಡಿದರೆ ನೀರು ತುಂಬದ ಜಾಗದಲ್ಲಿಯೂ ನೀರು ತುಂಬಿತ್ತು. ನಾವು ಮನೆಗೆ ಮುಟ್ಟಿದೆವು. ಮನೆಗೆ ಮುಟ್ಟಿ Rain Coat ತೆಗೆದರೆ ನನ್ನ ಬಟ್ಟೆ ಮಳೆಯ ರಭಸ ದಿಂದಾಗಿ ಒದ್ದೆ ಯಾಗಿತ್ತು. ಮರುದಿನದಿಂದ ಇವತ್ತಿನವರೆಗೆ [ಶುಕ್ರವಾರದ ತನಕ ಶಾಲೆಗೆ ರಜೆ ಸಿಕ್ಕಿತು.] ಇದು ನನ್ನ ಮಳೆಯ ವಿಶೇಷ ಅನುಭವ.... ಧನ್ಯವಾದಗಳು.
.................................................. ಕಿಂಜಲ್ 
7ನೇ ತರಗತಿ
ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ,
******************************************


                   
ಮಳೆಗಾಲವೆಂದರೆ ನನಗೆ ಬಲು ಇಷ್ಟ. ಎಲ್ಲೆಡೆ ನೋಡಿದರೂ ಹಚ್ಚ ಹಸಿರು. ಭಾರೀ ಮಳೆ ಬಂದರೆ ಶಾಲೆಗೆ ರಜೆ. ರಜೆಯಲ್ಲಿ ಆಟವಾಡುತ್ತಲೇ ಕಾಲ ಕಳೆಯಬಹುದು. 10 ಗಂಟೆಯವರೆಗೆ ಹಾಯಾಗಿ ನಿದ್ರಿಸಬಹುದು. ರಜೆ ಸಿಕ್ಕರೆ ಮಕ್ಕಳಿಗೆಲ್ಲ ಖುಷಿ, 
ಹಲವಾರು ದಿನಗಳವರೆಗೆ ಭಾರಿ ಮಳೆ ಬಂದರೆ, ಪ್ರವಾಹ ಬಂದು ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಕೇರಳದಲ್ಲಿ ಭಾರೀ ಮಳೆ ಬಂದು ಗುಡ್ಡ ಕುಸಿತದಿಂದ ಹಲವಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಬಹಳ ದುಃಖದ ವಿಷಯ. ಮಳೆಗಾಲದಲ್ಲಿ ನನಗೆ ಇಷ್ಟವಾದ ಐಸ್ ಕ್ರೀಮ್ ತಿನ್ನಲಾಗುವುದಿಲ್ಲ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಹಲವಾರು ಜನರು ಡೆಂಗ್ಯೂ, ಮಲೇರಿಯಾ ಮತ್ತು ಚಿಕುನ್ ಗುನ್ಯದಿಂದ ಸತ್ತಿದ್ದಾರೆ. ಈ ಕಾಯಿಲೆಗಳು ಬಾರದಂತೆ ತಡೆಯಬೇಕಾದರೆ, ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕು. ರಾತ್ರಿ ಮಲಗುವಾಗ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ ಬಳಸಬೇಕು.
........................................... ಅಪೂರ್ವ
5ನೇತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ, ಕಿಲ್ಪಾಡಿ, ಮೂಲ್ಕಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


              

ನಮಸ್ತೆ ನಾನು ಶ್ರುತರಾಜ್ ಕೆ ಆರ್. ನಮ್ಮ ಊರಲ್ಲಿಯೂ ಈ ವರ್ಷ ವಿಪರೀತ ಮಳೆ ಬಂದು ಭೂ ಕುಸಿತ ಉಂಟಾಗಿದೆ. ನಮ್ಮ ಮನೆಗೆ ಬರುವ ದಾರಿಗೆ ಬರೆ ಕುಸಿತದಿಂದ ಕಷ್ಟ ಪಟ್ಟು ಹೋಗುತ್ತೇವೆ. ಮೊನ್ನೆ 31ನೇ ತಾರೀಕಿಗೆ ನನ್ನ ಹುಟ್ಟುಹಬ್ಬದ ದಿನವೇ ಮಳೆಗೆ ಶಾಲೆಗೆ ರಜೆ ಇದ್ದುದರಿಂದ ಶಾಲೆಯಲ್ಲಿ ಆಚರಣೆ ಮಾಡಲಾಗಲಿಲ್ಲ. 4 ವರ್ಷದ ನಂತರ ನನ್ನೂರು ಉಪ್ಪಿನಂಗಡಿಯಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಹೊಂದಿರುವ ಶ್ರೀ ಸಹಸ್ರ ಲಿಂಗೇಶ್ವರ, ಹಾಗೂ ಮಹಾಕಾಳಿ ದೇವಾಲಯದ ಸನ್ನಿದಿಯಲ್ಲಿ ಹರಿಯುವ ಕುಮಾರದಾರ ಹಾಗೂ ನೇತ್ರಾವತಿ ನದಿಗಳ ಸಂಗಮವಾಯಿತು. ಶಾಲೆಯಿಂದ ಮನೆಗೆ ಬರುವಾಗ ಗಾಳಿಗೆ ನನ್ನ ಕೊಡೆ ವಾಲಾಡಿ ನನ್ನ ಬ್ಯಾಗ್ ಒದ್ದೆಯಾಯಿತು. ಇನ್ನಾದರೂ ಮಳೆ ಶಾಂತವಾಗಲಿ. ಧನ್ಯವಾದಗಳು ...
.................................ಶ್ರುತರಾಜ್ ಕೆ ಆರ್ 
4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಅಯೋಧ್ಯನಗರ, ಬಜತ್ತೂರು.
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



          

ನಾನು ಪಾರ್ಥ ವಿ ರೈ. ನಮ್ಮ ಮನೆಯಿಂದ ಅಪ್ಪ ಅಥವಾ ಅಮ್ಮನ ಸಹಾಯದೊಂದಿಗೆ ಶಾಲೆಗೆ ಹೋಗಿ ಬರಬೇಕಾದರೆ ನಮ್ಮ ತೋಟದ ಕಡೆಯ ಹತ್ತಿರದ ಕಾಲುದಾರಿ ಕಾಂಕ್ರೀಟ್ ಸೇತುವೆ ಯಲ್ಲಿ ನಡೆದು ಹೋಗುತ್ತಿದ್ದೆ ಮೊನ್ನೆ ಯ ಎಡೆಬಿಡದೆ ಮಳೆ ಬಂದ ಕಾರಣ ರಾತ್ರಿ ಸೇತುವೆಯ ಎರಡು ಬದಿಗಳು ಭೂಕುಸಿತವಾಗಿ ಸೇತುವೆ ಕೆಳಗೆ ಬಿದ್ದಿದ್ದ ದೃಶ್ಯವನ್ನು ಕಂಡು ನನಗೆ ಹೆದರಿಕೆ ಆಯ್ತು. ಯಾರಿಗೂ ಏನೂ ತೊಂದರೆ ಆಗಲಿಲ್ಲ ಎಂದು ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದೆವು.
........................................... ಪಾರ್ಥ ವಿ ರೈ 
6ನೇ ತರಗತಿ
ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ದೋಳ್ಪಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ       
******************************************
 

                      

ನಮಸ್ಕಾರ, ನಾನು ಹಾರಾಡಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಹಾರ್ಧಿಕ್ ಆರ್. ಕಾಲಗಳಲ್ಲಿ ಮೂರು ವಿಧ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ. ಮಳೆಗಾಲ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮೊದಲ ಮಳೆಯ ಸಿಂಚನವಂತೂ ಹೇಳ ತೀರದಷ್ಟು ಖುಷಿಯನ್ನು ಕೊಡುತ್ತದೆ. ಆದರೆ ಈ ವರುಷದ ಮಳೆ ಖುಷಿಗಿಂತ ಹೆಚ್ಚು ಬೇಸರವನ್ನು ತಂದಿದೆ. ಹಲವು ಕಡೆ ಆದ ಅನಾಹುತ ವನ್ನು ನೆನೆದರೆ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ. ವಸತಿ ಇಲ್ಲದೆ ಎಲ್ಲರೂ ಬೀದಿಪಾಲಾಗಿದ್ದಾರೆ. ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಅಧಿಕ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ನಿರಂತರ ರಜೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪ್ರಭಾವ ಬೀರುತ್ತದೆ. ರಜೆಯಲ್ಲಿ ಮಕ್ಕಳು ಒಬ್ಬೊಬ್ಬರೇ ಅಪಾಯಕಾರಿ ಸ್ಥಳಗಳಿಗೆ ಹೋಗದೆ ಹೆಚ್ಚಾಗಿ ಸುರಕ್ಷಿತ ಸ್ಥಳಗಳಲ್ಲಿ ಇರುವುದೇ ಒಳಿತು.
........................................... ಹಾರ್ಧಿಕ್ ಆರ್ 
5ನೇ ತರಗತಿ 
ಸ. ಮಾ. ಉ.ಹಿ.ಪ್ರಾ.ಶಾಲೆ ಹಾರಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

         

      ಎಲ್ಲರಿಗೂ ನಮಸ್ಕಾರ.... ಮೊನ್ನೆಯಷ್ಟೇ ನಡೆದ ಘಟನೆ. ನಾನು ನನ್ನ ತಮ್ಮನೊಂದಿಗೆ ಕಾರ್ಯಕ್ರಮ ಕ್ಕೆ ಹೋಗುತ್ತಿದ್ದೆ. ಆ ಸಂಧರ್ಭದಲ್ಲಿ ನನ್ನ ತಮ್ಮ ನನ್ನನ್ನು ಓಟ ದ ಆಟಕ್ಕೆ ಕರೆದ. ನಾನು ಕೂಡಾ ಓಡಲು ಒಪ್ಪಿಗೆ ಕೊಟ್ಟು ಓಡಿದೆ. ಆವಾಗ ಜೋರು ಮಳೆ ಬಂತು. ನನ್ನ ತಮ್ಮ ಓಡುವಾಗ ಅಲ್ಲಿಂದ ಜಾರಿ ಬಿದ್ದನು. ನನಗೆ ಜೋರು ನಗು ಬಂತು. ಅವನು ಅಳಲು ಆರಂಭಿಸಿದ. ಕೊನೆಗೆ ನಾನು ಅವನನ್ನು ಮೇಲಕ್ಕೆತ್ತಿ ಸಮಾಧಾನ ಪಡಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದೆನು.
........................................... ಭವಿಕ್ ಎಸ್. ಪಿ 
6ನೇ ತರಗತಿ 
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ಕಾವು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article