ಪ್ರವಾಸ ಕಥನ : ಶಿಲೆಯಲ್ಲರಳಿದ ಸೊಬಗು - ಲೇಪಾಕ್ಷಿ
Wednesday, July 17, 2024
Edit
ಪ್ರವಾಸ ಕಥನ : ಶಿಲೆಯಲ್ಲರಳಿದ ಸೊಬಗು - ಲೇಪಾಕ್ಷಿ
ಲೇಖಕಿ : ಚಿತ್ರಾಶ್ರೀ ಕೆ ಎಸ್
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
''ಕಲಿಕೆ ನಿರಂತರವಾಗಿರಬೇಕು' ಎಂದು ಭಾವಿಸುವ ಶಿಕ್ಷಕರ ಗುಂಪಿಗೆ ಸೇರುವ ನನಗೆ ಪ್ರತಿ ರಜೆಯೂ ಹೊಸತನ್ನು ಕಲಿಯುವ ಅವಕಾಶ ಎಂಬ ಭಾವ. 2023ರಲ್ಲಿ ಬೇಸಿಗೆ ರಜೆ ಎಂದು ದೊರೆತ ಅವಧಿ ಅತ್ಯಲ್ಪ. ಹಾಗಾಗಿ ರಜೆ ಸಿಕ್ಕಿದ ನಂತರ ಬೆಂಗಳೂರಿಗೆ ಹೊರಟಾಗ ನಗರದ ನಡುವೆ ಕುಳಿತು ಸಮಯ ಕಳೆಯಲು ನನಗೆ ಮನಸಿರಲಿಲ್ಲ… ಬೆಂಗಳೂರಿನಿಂದ ಎರಡು ಮೂರು ಗಂಟೆಗಳ ಪ್ರಯಾಣದ ಅವಧಿಯಲ್ಲಿ ನೋಡಬಹುದಾದ ಸ್ಥಳಗಳನ್ನು ಹುಡುಕುತ್ತಿದ್ದಾಗ ಬಹುದಿನಗಳ ಕನಸು ಲೇಪಾಕ್ಷಿಯ ಭೇಟಿ ಮಾಡಬಹುದು ಎನಿಸಿತು. ನಮಗೆ ಆತಿಥ್ಯ ನೀಡಿದ್ದ ಅನು ಅಕ್ಕ & ಸಂಜಯ ಭಾವ ಇತ್ತೀಚೆಗೆ ಒಮ್ಮೆ ಹೋಗಿ ಬಂದಿದ್ದರೂ ಮತ್ತೊಮ್ಮೆ ಹೋಗೋಣ ಎಂದು ಹೊರಟಿದ್ದು ನಮ್ಮ ಸುಯೋಗ.
ಬೆಳಿಗ್ಗೆ ಬೆಂಗಳೂರಿನಿಂದ ಹೊರಟಾಗ ಮಳೆ ಬರುವ ಮುನ್ಸೂಚನೆ ಇತ್ತು. ಆದರೆ ಅಲ್ಲಿಂದ 125 ಕಿ.ಮೀ. ದೂರದ ಲೇಪಾಕ್ಷಿಗೆ ಹೋದಾಗ ನೆಲಕ್ಕೆ ಕಾಲಿಡಲಾರದಷ್ಟು ಬಿಸಿ! ಹಾಸುಬಂಡೆಯ ಮೇಲೆ ರಚನೆಯಾಗಿರುವ ಈ ದೇವಾಲಯ ಆಂಧ್ರ ಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮ ಲೇಪಾಕ್ಷಿಯಲ್ಲಿದೆ. 16ನೇ ಶತಮಾನದ ವಿಜಯನಗರ ಶೈಲಿಯ ಅಪ್ರತಿಮ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ವರ್ಣಚಿತ್ರಗಳ ಸಂಗ್ರಹವಾಗಿರುವ ಕಾರಣ ಖ್ಯಾತಿ ಗಳಿಸಿದೆ. ಭಾರತೀಯ ಪುರಾತತ್ವ ಇಲಾಖೆ ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ಎಂದು ಗುರುತಿಸಿ ಗೌರವಿಸಿದೆ.
ಲೇಪಾಕ್ಷಿಯ ದೇವಾಲಯದ ಹೊರ ಆವರಣದ ಗೋಡೆಗೆ ಬಳಸಿದ ಕಲ್ಲುಗಳ ನಡುವೆ ಈ ಕಾಲದಂತೆ ಸಿಮೆಂಟ್ ಬಂಧವಿಲ್ಲ! ಕಲ್ಲುಗಳನ್ನೇ ಚಾಕಚಕ್ಯತೆಯಿಂದ ಜೋಡಿಸಿದ ಈ ರಚನೆ ನೂರಾರು ವರ್ಷಗಳಿಂದ ನಿಂತ ದೃಢ ನಿಲುವು ಮೊದಲಿಗೆ ಕಣ್ಸೆಳೆಯುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲದ ರಾಜ ಅಚ್ಯುತರಾಯನ ಕಾಲದಲ್ಲಿ ಆಡಳಿತ ಸಹಾಯಕರಾದ ಸಹೋದರರಾದ ವಿರೂಪಣ್ಣ ಹಾಗೂ ವೀರಣ್ಣ ಎಂಬುವವರು ಈ ದೇವಾಲಯ ರಚನೆಗೆ ಕಾರಣರಾದರು ಎಂಬ ಐತಿಹ್ಯವಿದೆ. ರಾಮಾಯಣದ ಕಾಲದಲ್ಲಿ ಶ್ರೀರಾಮ ಅಪಹರಣಕ್ಕೊಳಗಾದ ತನ್ನ ಪತ್ನಿ ಸೀತೆಯನ್ನು ಹುಡುಕಿಕೊಂಡು ಬಂದಾಗ ಅವಳ ರಕ್ಷಣೆಗಾಗಿ ರಾವಣನ ಮೇಲೆ ದಾಳಿ ನಡೆಸಿ ಹೋರಾಡಿ ಪೆಟ್ಟಾಗಿ ಬಿದ್ದಿದ್ದ ಜಟಾಯುವನ್ನು ಇಲ್ಲಿ ಕಂಡಾಗ ಕಾಳಜಿಯಿಂದ 'ಲೇ ಪಕ್ಷಿ' (ತೆಲುಗಿನಲ್ಲಿ ಅರ್ಥ “ಎದ್ದೇಳು ಪಕ್ಷಿ”) ಎಂದು ಕರೆದ ಕಾರಣ ಈ ಸ್ಥಳ ಲೇಪಾಕ್ಷಿ ಎನಿಸಿಕೊಂಡಿತೆಂಬುದು ಜನಪ್ರಿಯ ಸ್ಥಳಪುರಾಣ.
ಅದಕ್ಕೆ ಹೊಂದುವಂತೆ ಈ ದೇವಾಲಯದ ಆವರಣದ ಒಳಗೆ ಒಂದು ಪಾದದ ಗುರುತಿದೆ. ಅದನ್ನು ದುರ್ಗಾಪಾದ ಎನ್ನುವ ಪರಿಪಾಠ ಇದ್ದರೂ ಸ್ಥಳೀಯರು ಸೀತಾಮಾತೆಯ ಹೆಜ್ಜೆಯ ಗುರುತು ಎಂದು ಹೇಳುತ್ತಾರೆ. ನಾವು ಹೋದಾಗ ಎಷ್ಟು ಬಿಸಿಲಿತ್ತೆಂದರೆ ಒಂದೆಡೆ ಪಾದ ಊರಿ ಕೆಲವು ಕ್ಷಣಗಳ ಕಾಲ ನಿಂತರೂ ಬಿಸಿಯಾದ ಬಂಡೆಯ ತಾಪಕ್ಕೆ ಕಾಲು ಸುಟ್ಟುಹೋಗುವಷ್ಟು! ಕಷ್ಟಪಟ್ಟು ಓಡಾಡಿ ಒಂದೆರಡು ಚಿತ್ರ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದ ನನಗೆ ಸ್ಥಳೀಯ ಹೆಂಗಸೊಬ್ಬಳು ತನ್ನ ಮಗುವಿಗೆ ಆ ಪಾದದ ಗುರುತು ತೋರಿಸಿ ತೆಲುಗಿನಲ್ಲಿ ಹೇಳಿದ ಮಾತು ಅಚ್ಚರಿ ಹುಟ್ಟಿಸಿತು.. ಅದರ ಅನುವಾದ- "ನೋಡು ಮಗು, ಎಷ್ಟೇ ಬಿಸಿಲಿದ್ದರೂ ಈ ಪಾದದ ಗುರುತಿನಲ್ಲಿ ಒಂದು ಹನಿಯಾದರೂ ನೀರು ಉಳಿದಿರುತ್ತದೆ!" ಅವಳ ಆ ಮಾತಿಗೆ ನಾನೂ ಅತ್ತ ಕಣ್ಣು ಹಾಯಿಸಿದೆ.. ಆ ಬಿರು ಬಿಸಿಲಿನಲ್ಲೂ ಹೆಜ್ಜೆಯೊಳಗೆ ನೀರಿನ ಪಸೆ ಇದ್ದಿದ್ದು ನೋಡಿ ಅಚ್ಚರಿಯಾಯ್ತು...!
ರಾವಣ ತನ್ನನ್ನು ಎದುರಿಸಲು ಬಂದ ಜಟಾಯುವಿನೊಡನೆ ಹೋರಾಡುವ ಸಂದರ್ಭದಲ್ಲಿ ಸೀತೆಯ ಒಂದು ಪಾದ ನೆಲ ಮುಟ್ಟಿದ ಗುರುತು ಎಂದು ಇದನ್ನು ಸ್ಥಳೀಯರು ಪೂಜನೀಯ ದೃಷ್ಟಿಕೋನದಿಂದ ನೋಡುತ್ತಾರೆ. ದೇಗುಲದ ಉಯ್ಯಾಲೆ ಮಂಟಪದ ಬಳಿ ಈ ಗುರುತು ಇದೆ.
ಯಾವುದೇ ಸ್ಥಳದ ವೀಕ್ಷಣೆಗೆ ಹೊರಡುವ ಮೊದಲು ಒಂದಿಷ್ಟು ಮಾಹಿತಿ ಸಂಗ್ರಹಿಸಿ ಆ ಸ್ಥಳವನ್ನು ನೋಡಿಬರುವುದು ನನ್ನ ಅಭ್ಯಾಸ. ಆದರೆ ಲೇಪಾಕ್ಷಿಯ ಭೇಟಿಗೆ ಈ ಹಂತದ ತಯಾರಿ ಆಗಿರಲಿಲ್ಲ.. ಮಾರ್ಗದರ್ಶಿ (ಗೈಡ್) ಕರೆದುಕೊಂಡು ಹೋದರೆ ಅವರು ಅಲ್ಲಿ ನೋಡಿ ಇಲ್ಲಿ ನೋಡಿ ಅಂತ ಅವರಿಗೆ ಬಾಯಿಪಾಠ ಆಗಿರುವಷ್ಟನ್ನೇ ಹೇಳಿ ತೋರಿಸಿ ಮುಗಿಸಿಬಿಡುತ್ತಾರೆ. ಹಾಗಾಗಿ ನಾನು ಈ ಬಾರಿಯ ಭೇಟಿಯಲ್ಲಿ ದೇಗುಲವನ್ನು ನಿಧಾನವಾಗಿ ಸುತ್ತಾಡುತ್ತಾ ಕಣ್ಣಿಗೆ ಕಾಣುವ ಶಿಲ್ಪ ಸೌಂದರ್ಯ ನೋಡುತ್ತಾ, ಸ್ಥಳೀಯರು ಮಾತನಾಡುವ ವಿಚಾರಗಳಲ್ಲಿರುವ ಅಲ್ಲಿನ ವಿಶೇಷಗಳನ್ನು ತುಂಬಿಕೊಳ್ಳುತ್ತಾ ಕಲಿಯುವ ವಿಧಾನ ಆರಿಸಿಕೊಳ್ಳಬೇಕಾಯಿತು. ಹಳಗನ್ನಡದ ಬಳಕೆ ತಿಳಿದ ಕಾರಣ ತೆಲುಗು ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಯಿತು.
ದೇವಾಲಯದ ಸುತ್ತಲೂ ಅನೇಕ ಕಂಬಗಳು ಹಾಗೂ ಮೇಲ್ಛಾವಣಿ ಇರುವ ಪ್ರದಕ್ಷಿಣಾ ಪಥವಿದೆ. ಇಲ್ಲಿನ ಬಿಸಿಲಿಗೆ ದೇವಾಲಯವನ್ನು ಸಂಪೂರ್ಣ ಪ್ರದಕ್ಷಿಣೆ ಹಾಕಲು ಇದು ನಿರ್ಮಾಣವಾಗಿರಬೇಕು. ಜೊತೆಗೆ ಆ ಕಾಲದ ದೇವಾಲಯಗಳು ವಿದ್ಯಾ ಕೇಂದ್ರಗಳಾಗಿ, ಅನ್ನ ಸಂತರ್ಪಣೆಯ ಸ್ಥಳಾವಕಾಶವಾಗಿ, ಉತ್ಸವಗಳ ಸಂದರ್ಭದಲ್ಲಿ ಜನರು ನಿಂತೋ- ಕುಳಿತೋ ಅದನ್ನು ಕಣ್ತುಂಬಿಕೊಳ್ಳುವ ಉದ್ದೇಶಕ್ಕಾಗಿಯೂ ರಚಿಸಿರಬಹುದು.
ಬಿಸಿಲು ಬಹಳ ಹೆಚ್ಚಿದ್ದರಿಂದ ದೇವಾಲಯದ ಮುಖ್ಯ ಪ್ರಾಂಗಣಕ್ಕೆ ಹಿಂತಿರುಗಿದ ನನಗೆ ತಲೆ ಎತ್ತಿ ಮೇಲ್ಛಾವಣಿ ನೋಡುತ್ತಾ ಮಾತನಾಡಿಕೊಳ್ಳುತ್ತಿದ್ದ ಪ್ರವಾಸಿಗಳ ಗುಂಪಿನ ಚರ್ಯೆ ಅಚ್ಚರಿ ಮೂಡಿಸಿತು. ಅವರಂತೆ ತಲೆ ಎತ್ತಿ ಕಣ್ಣು ಹಾಯಿಸಿದಲ್ಲೆಲ್ಲ ಕಂಡ 15ನೇ ಶತಮಾನದ ಚಿತ್ರಕಲೆ ಕಂಡು ವಿಸ್ಮಿತಳಾದೆ! ಶಿಲೆಯ ಸೊಬಗೇ ಹಲವು ವರ್ಷಗಳು ಉರುಳುವಷ್ಟರಲ್ಲಿ ಅಲ್ಲಲ್ಲಿ ಸವಯಲಾರಂಭಿಸುತ್ತದೆ.. ಅದಕ್ಕೆ ಹೋಲಿಸಿದರೆ ಗಾಳಿ - ಮಳೆ - ಬಿಸಿಲುಗಳಿಗೆ ತೆರೆದಿಟ್ಟ ದೇವಾಲಯದ ಈ ಚಿತ್ರಕಲೆ ಇಷ್ಟು ವರ್ಷಗಳನ್ನು ದಾಟಿ ಇಂದಿಗೂ ನಮ್ಮೆದುರು ಅಂದಿನವರ ಚಾತುರ್ಯವನ್ನು ಹಿಡಿದಿಟ್ಟು ತೋರಿಸುವುದು ವಿಶೇಷವೇ!
ಕೇವಲ ನೈಸರ್ಗಿಕ ಬಣ್ಣಗಳು ಮಾತ್ರ ಬಳಸಲ್ಪಡುತ್ತಿದ್ದ ಆ ಕಾಲದ ವರ್ಣ ಚಿತ್ರಗಳಲ್ಲಿ ರಾಮಾಯಣದ ಸುಂದರ ವರ್ಣನೆಯಿದೆ. ಸಮಯದ ಕೊರತೆ ಇದ್ದಿದ್ದರಿಂದ ಮನಸು ತಣಿಯುವಷ್ಟು ಅದನ್ನು ನೋಡಲು ಅವಕಾಶವಾಗಲಿಲ್ಲ ಎಂಬ ಸಣ್ಣ ಕೊರತೆಯೊಂದು ಕಾಡುತ್ತಿದೆ.
ನನ್ನ ಗಮನ ಸೆಳೆದ ಮತ್ತೊಂದು ಅಂಶ - ಅಲ್ಲಿ ಅತ್ಯಂತ ಪ್ರಸಿದ್ಧವಾದ ಮೇಲ್ಛಾವಣಿಯಿಂದ ಜೋತಾಡುವಂತೆ ಕಾಣುವ ಕಂಬ! ಅಲ್ಲಿಗೆ ಬರುವ ಹಲವರು ಈ ಕಂಬ ನೋಡಲೆಂದೇ ಬರುತ್ತಾರೆ! ಕಂಬದ ಒಂದು ಭಾಗದ ತುದಿ ಮಾತ್ರ ನೆಲ ತಾಗುವಂತಿದ್ದು ಉಳಿದ ಭಾಗ ನೆಲಮಟ್ಟ ಮುಟ್ಟುವುದಿಲ್ಲ. ಈ ಕಂಬದ ಅಡಿಯಲ್ಲಿ ಯಾವುದಾದರೂ ಬಟ್ಟೆ ಹಾಸಿ ಪರೀಕ್ಷಿಸುವ ಜನರು ಇದ್ದೇ ಇರುತ್ತಾರೆ. ಹಾಗಾಗಿ ಈ ಕಂಬವನ್ನು ಗುರುತಿಸುವುದು ಸುಲಭ! ಈ ಕಂಬ ಆ ಕಾಲದ ವಾಸ್ತುಶಿಲ್ಪ ರಚನೆಕಾರರ ಸಾಧನೆಗೆ ಸಾಕ್ಷಿ ಎಂದು ಹಲವರು ಭಾವಿಸಿದರೆ ಕೆಲವರು ಇಲ್ಲ, ಅದು ಭೂಕಂಪ ವಲಯದಲ್ಲಿ ಬರುವ ಪ್ರದೇಶವಾಗಿದ್ದು, ಭೂ ಅಂತರಾಳದ ಚಲನೆಗಳಿಂದ ಆಗಿರುವ ಪ್ರಭಾವ ಎಂದು ಭಾವಿಸುತ್ತಾರೆ. ಕಾರಣ ಏನಿದ್ದರೂ - ನನ್ನ ದೃಷ್ಟಿಕೋನದಲ್ಲಿ ಅದು ವಿಶಿಷ್ಟ ಮತ್ತು ಗಮನಾರ್ಹವೇ! ಮೇಲ್ಛಾವಣಿಗೆ ಜೋಡಿಸಲ್ಪಟ್ಟ ಕಂಬದ ಜೋಡಣೆಯ ಬಲ ಹೇಗಿದೆಯೆಂದರೆ ಇಷ್ಟು ವರ್ಷಗಳ ನಂತರವೂ ಆ ಕಂಬ ಬೀಳದೇ - ಓಲಾಡದೇ ನಿಂತಿದೆಯಲ್ಲ! ಶಿಲ್ಪಿಗಳ ಆ ನಿರ್ಮಾಣ ಚಾತುರ್ಯವನ್ನು ಮೆಚ್ಚಿ ಮನಸು ಬಾಗಲೇಬೇಕು ಎನಿಸಿತು.
ಸುಂದರವಾದ ಕಂಬಗಳ ಕಲ್ಯಾಣ ಮಂಟಪವೊಂದಿದೆ ಅಲ್ಲಿ. ಅದರ ಪ್ರತಿ ಸ್ತಂಭದ ಕೆತ್ತನೆ ಗಮನಿಸಲು ಕೆಲವು ನಿಮಿಷಗಳನ್ನು ಕಳೆದ ನನಗೆ ಹಲವು ಗಂಟೆಗಳ ಸಮಯ ಕೈಯ್ಯಲ್ಲಿರಬೇಕಿತ್ತು ಎನಿಸಿತು. ಪ್ರತಿ ಕಂಬದ ಮೇಲಿನ ಕೆತ್ತನೆಯೂ ಅಷ್ಟು ವಿಶಿಷ್ಟ ಮತ್ತು ವೈವಿಧ್ಯಮಯ! ಅಷ್ಟೆಲ್ಲ ಸೃಜನಶೀಲತೆ ತುಂಬಿಕೊಂಡಿದ್ದ ಶಿಲ್ಪಿಗಳ ರಚನೆಗಳನ್ನು ನೋಡುವ ಭಾಗ್ಯವಾದರೂ ನಮ್ಮದಾಗಿದೆ ಎಂಬ ಸಂತಸವೊಂದು ಉಳಿಯಿತು.
ಪ್ರತಿ ಶಿಲ್ಪದ ಮೈಮೇಲಿನ ಆಭರಣಗಳು, ವಸ್ತ್ರ ವಿನ್ಯಾಸ, ಕೈಗಳಲ್ಲಿದ್ದ ವೈವಿಧ್ಯಮಯ ಆಯುಧಗಳು.. ನಿಧಾನವಾಗಿ ಗಮನಿಸಿದಷ್ಟೂ ಆಕರ್ಷಕವೆನಿಸುವ ರಚನೆಗಳ ನಡುವೆ ಕಾಲ ಸರಿದಿದ್ದು ತಿಳಿಯುವಂತಾಗಿದ್ದು ಬಿಸಿಲಿನ ತಾಪದಿಂದಷ್ಟೇ!
ಮುಂದೆ ನಡೆದಾಗ ಕಂಡ ಗಣಪತಿಯ ಭವ್ಯ ಮೂರ್ತಿಯೊಂದು ಅದರ ಶಿಲೆಯ ಬಣ್ಣಕ್ಕಾಗಿ ಗಮನ ಸೆಳೆಯಿತು. ಅಲ್ಲಿದ್ದ ಗ್ರಾನೈಟ್ ಬಂಡೆಯನ್ನೇ ಕಡೆದು ನಿಲ್ಲಿಸಿದ ಆ ನಸುಗೆಂಪು ಬಣ್ಣದ ಮೂರ್ತಿಯನ್ನು ಕಲ್ಪಿಸಿಕೊಂಡು ರಚಿಸಿದ ಶಿಲ್ಪಿಯ ಚಾತುರ್ಯಕ್ಕೆ ನಮಿಸಬೇಕು.
ಲೇಪಾಕ್ಷಿ ಎಂದೊಡನೆ ಮನಸಿಗೆ ಬರುವ ಶಿಲ್ಪವೊಂದಿದೆ ಅರಳಿಸಿದ ಹಾವಿನ ಹೆಡೆ ಹಾಗೂ ಅದರಡಿಗೆ ನಿರ್ಮಿತವಾದ ಶಿವಲಿಂಗ. ಇದರ ಅರ್ಧ ರಚನೆ ಕೆತ್ತಿದ್ದ ಶಿಲ್ಪಿಗಳು ಊಟದ ವಿರಾಮ ಮುಗಿಸಿ ಬರುವುದರೊಳಗಾಗಿ ತನ್ನಷ್ಟಕ್ಕೇ ಶಿಲ್ಪ ಪೂರ್ಣಗೊಂಡಿತ್ತು ಎಂಬ ಕಥೆಯ ಹಿನ್ನೆಲೆ ಇದಕ್ಕಿದ್ದರೂ ಇದು ಅರ್ಧ ದಿನದಲ್ಲಿ ಕಡೆದು ಮುಗಿಸುವ ಶಿಲ್ಪದಂತೆ ಸುಲಭದ ರಚನೆಯಲ್ಲ! ಶಿಲ್ಪಿಯ ಕಲ್ಪನಾ ಶಕ್ತಿಯ ಸೌಂದರ್ಯ ಮತ್ತೊಮ್ಮೆ ಅನಾವರಣಗೊಳಿಸುವ ಈ ಶಿಲ್ಪದ ರಚನೆಯೂ ಮನ ಸೆಳೆಯುತ್ತದೆ.
ದೇವಾಲಯದ ಪ್ರಾಂಗಣದಲ್ಲಿರುವ ಸ್ತಂಭಗಳಲ್ಲಿ ವಾದ್ಯಗಳನ್ನು ಹಿಡಿದು ನುಡಿಸುತ್ತಿರುವ ಹಲವು ಶಿಲ್ಪಗಳಿವೆ. ಕಠಿಣ ಗ್ರಾನೈಟ್ ಶಿಲೆಯಲ್ಲಿ ಇಷ್ಟೆಲ್ಲ ಸೂಕ್ಷ್ಮ ಕೆತ್ತನೆಗಳು ಸುಂದರವಾಗಿ ಮೂಡಿ ಇಂದಿಗೂ ಉಳಿದು ಸೆಳೆಯುತ್ತಿರುವುದನ್ನು ನೋಡುವುದೇ ಸಂಭ್ರಮ! ವಿಜಯನಗರ ಸಾಮ್ರಾಜ್ಯದ ಕಾಲಾವಧಿಯ ಆಭರಣಗಳು, ಬಟ್ಟೆ ಹಾಗೂ ಆಭರಣಗಳ ಶೈಲಿಗಳ ಸಂಗ್ರಹಾಲಯದಂತೆ ಕಾಣುವ ಈ ಪ್ರಾಂಗಣವೇ ಅತ್ಯಂತ ಆಕರ್ಷಕ ಭಾಗ ಎನಿಸಿತು.
ದೇವಾಲಯದ ವೀಕ್ಷಣೆಗೆ ಒಂದೆರಡು ಗಂಟೆಗಳ ಅವಧಿ ಏನೇನೂ ಸಾಲಲಿಲ್ಲ.. ಮತ್ತೊಮ್ಮೆ ಇನ್ನಷ್ಟು ಸಮಯ ಸಿಗುವಂತೆ ಯೋಜಿಸಿಕೊಂಡು ಹೋಗಬೇಕೆಂಬ ನಿರ್ಧಾರದೊಂದಿಗೆ ಹೊರಗೆ ಬಂದೆ.
ಈ ದೇವಾಲಯದಿಂದ ಸ್ವಲ್ಪ ದೂರದಲ್ಲಿ ನಂದಿಯ ಮೂರ್ತಿಯೊಂದಿದೆ. ಗ್ರಾನೈಟ್ ಏಕಶಿಲೆಯ ಅತಿದೊಡ್ಡ ನಂದಿಯ ಮೂರ್ತಿಯಾದ ಇದು 20 ಅಡಿ ಎತ್ತರ ಹಾಗೂ 30ಅಡಿ ಅಗಲವಿದೆ. ನಂದಿಯ ಗಾತ್ರಕ್ಕೆ ತಕ್ಕಂತೆ ಗಾಂಭೀರ್ಯ ಹಾಗೂ ಅಲಂಕಾರ ಮನ ಸೆಳೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ನಂದಿಯ ನೋಟ 660ಅಡಿಗಳಷ್ಟು ದೂರದಲ್ಲಿರುವ ದೇಗುಲದ ಪ್ತಾಂಗಣದತ್ತ ಮುಖ ಮಾಡಿದ್ದು ಹಾವಿನ ಹೆಡೆಯ ಅಡಿಯಲ್ಲಿನ ಲಿಂಗದೆಡೆಗೆ ನೋಡುತ್ತಿರುವಂತಿದೆ! ದೇವಾಲಯದಲ್ಲಿ ದೇವರೆದುರಿಗೆ ನಂದಿಯ ಪ್ರತಿಷ್ಠಾಪನೆ ಸಾಮಾನ್ಯ. ಆದರೆ ಈ ಅಸಾಮಾನ್ಯ ರಚನೆ ಮತ್ತು ಅದರ ರಚನೆಯ ನಿಖರತೆಗೆ ಮನ ಸೋಲದವರಿಲ್ಲ!
ಇತಿಹಾಸದ ಅಧ್ಯಯನ ಸದಾ ಆಸಕ್ತಿ ಮೂಡಿಸುವ ಅವಕಾಶವಾಗಿರುವಂತೆ ಮಾಡಿದ ಪ್ರಾಚೀನ ಭಾರತದ ಶಿಲ್ಪಿಗಳಿಗೆ, ಅವರನ್ನು ಪ್ರೋತ್ಸಾಹಿಸಿದ ರಾಜ ಮನೆತನಗಳಿಗೆ ಹಾಗೂ ತಮ್ಮ ಹಳ್ಳಿಯನ್ನು ಹಳ್ಳಿಯಾಗಿಯೇ ಉಳಿಸಿಕೊಂಡು ಪ್ರವಾಸಿಗರ ಕುತೂಹಲ ತಣಿಸುತ್ತಿರುವ ಲೇಪಾಕ್ಷಿಯ ಜನರ ಸೌಜನ್ಯಕ್ಕೆ ಮನಸು ಮಣಿಯಿತು.
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob : 9449946810
**********************************************