-->
ಜಗಲಿ ಕಟ್ಟೆ : ಸಂಚಿಕೆ - 59

ಜಗಲಿ ಕಟ್ಟೆ : ಸಂಚಿಕೆ - 59

ಜಗಲಿ ಕಟ್ಟೆ : ಸಂಚಿಕೆ - 59
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಮತ್ತೊಮ್ಮೆ ಪ್ರಕೃತಿಯ ಎದುರು ಮನುಷ್ಯ ಕುಬ್ಜನಾಗುತ್ತಿದ್ದಾನೆ.... ಆಧುನಿಕತೆ, ತಂತ್ರಜ್ಞಾನ, ಅಭಿವೃದ್ಧಿ ಹೀಗೆ ನಾವು ಯಾವ ಪಥದಲ್ಲಿ ಸಾಗಿದರೂ ಪ್ರಕೃತಿಯ ನಿಯಮಗಳನ್ನು ಮೀರಿ ಸಾಗಿದೆವು ಎಂದಾದಲ್ಲಿ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಪ್ರತಿ ಬಾರಿ ಈ ನಿಸರ್ಗ ತನ್ನ ಮುನಿಸಿಗೆ ಪ್ರತ್ಯಕ್ಷ ಸಾಕ್ಷಿಗಳನ್ನು ನೀಡುತ್ತಾ ಬಂದಿದೆ. ನಮಗೆ ಮೂಲಭೂತ ಸೌಕರ್ಯಗಳು ಎಷ್ಟು ಬೇಕೋ ಅಷ್ಟಕ್ಕೆ ಸಾಲದೆ... ಚತುಷ್ಪಥಗಳ ನಿರ್ಮಾಣ, ಸಹಸ್ರಾರು ವರ್ಷಗಳಿಂದ ಬಾಳಿ ಬದುಕಿದ ಊರಿಗೆ ನೀರು ಸಾಗಿಸುವ ಯೋಜನೆಗಳು ಇನ್ನು ಹತ್ತು ಹಲವಾರು ದೂರ ದೃಷ್ಟಿತ್ವ ಇಲ್ಲದ ಕಾಮಗಾರಿಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ. ನಮ್ಮ ಸ್ವಾರ್ಥಕ್ಕಾಗಿ ಈ ನೆಲವನ್ನು ಕೇಕ್ ತುಂಡರಿಸಿದ ಹಾಗೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣನ್ನು ಅಗೆದು ತೆಗೆದ ಫಲದ ಫಲಿತಾಂಶವನ್ನು ಇಂದು ನಾವು ಕಾಣುತ್ತಿದ್ದೇವೆ. 

ಹೌದು ಈ ಬಾರಿ ಹೆಚ್ಚಿನ ಭಾಗದಲ್ಲಿ ಅಧಿಕ ಮಳೆಯನ್ನು ಕಾಣುತ್ತಿದ್ದೇವೆ. ನದಿ ನೀರಿನ ಮಟ್ಟ ಏರಿ ಹರಿಯುತ್ತಿದೆ. ವರ್ಷಗಳ ಹಿಂದೆ ಕಂಡ ಮಳೆಯ ಪ್ರಮಾಣ ಮತ್ತೆ ಏರಿಕೆಯಾಗಿ ಈ ಭೂಮಿಗಿಳಿದಿದೆ. ಅಲ್ಲಲ್ಲಿ ಭೂಕುಸಿತ, ನೀರಿನ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿರುವುದನ್ನು ತಾವೆಲ್ಲಾ ಗಮನಿಸುತಿದ್ದೀರಿ. ಭಾರೀ ಮಳೆಯಿಂದಾಗಿ ಶಾಲೆಗೆ ಹೋಗಲಾರದ ಸ್ಥಿತಿ. ಒಟ್ಟಾಗಿ ಹೇಳುವುದಾದರೆ ನಾವು ಎಣಿಸಿದಂತೆ ಈ ನಿಸರ್ಗ ಇಲ್ಲ ಎನ್ನುವ ಸತ್ಯ ಮತ್ತೆ ಮತ್ತೆ ನಾವು ಒಪ್ಪಲೇಬೇಕು.

ಈ ನಿಸರ್ಗದ ಒಟ್ಟು ಸಂಪತ್ತಿನ ಮೇಲಾಗುತ್ತಿರುವ ಅವ್ಯಾಹತ ದೌರ್ಜನ್ಯದಿಂದ ನಾಳೆಯ ದಿನಗಳನ್ನು ಯೋಚಿಸಲೂ ಅಸಾಧ್ಯವಾಗಿದೆ. ಈ ನಾಡಿನ ಕವಿಯೊಬ್ಬರು ಬರೆದಿರುವ ಹಾಡು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ... ಹಾಡು ಬಹಳ ಅರ್ಥಗರ್ಭಿತವಾಗಿದೆ. ಬಿಡುವಿನ ವೇಳೆಯಲ್ಲಿ ರಾಗ ಸಂಯೋಜನೆ ಮಾಡಿ ಹಾಡಿ. ಹಾಗೂ ಇದೇ ರೀತಿಯ ಹಾಡುಗಳನ್ನು ನೀವೂ ರಚನೆ ಮಾಡಿ ಮಕ್ಕಳ ಜಗಲಿಗೆ ಕಳುಹಿಸಿ. 

ನಾವು ಮಕ್ಕಳು ಮುಂದಿನ ಪ್ರಜೆಗಳು 
ನಮಗೊಂದಿಷ್ಟು ಉಳಿಸಿ
ನಿರ್ಮಲ ಗಾಳಿ ನೀರು ಬೆಳಕು 
ಇಷ್ಟಾದರೂ ನಮಗುಳಿಸಿ (2)

ದೇವರು ಕೊಟ್ಟ ಶುದ್ಧ ನೀರಿಗೆ 
ವಿಷವನ್ನೇಕೆ ಹಾಕುವಿರಿ 
ಕೆರೆಯ ನೀರಿಗೆ ಹರಿಯುವ ನದಿಗೆ 
ಕಾರ್ಖಾನೆಯ ವಿಷ ಹರಿಸುವಿರಿ (2)          
(ನಾವು ಮಕ್ಕಳು)

ಪ್ರಕೃತಿ ಕೊಟ್ಟ ಹಸಿರನ್ನೆಲ್ಲ ಕೊಚ್ಚಿ ಕೊಚ್ಚಿ ಹಾಕುವಿರಿ 
ಜೀವ ಉಳಿಸೋ ಉಸಿರನೆಲ್ಲ 
ಇಲ್ಲದ ಹಾಗೆ ಮಾಡುವಿರಿ
(ನಾವು ಮಕ್ಕಳು)

ಬುದ್ಧಿ ಹೇಳುವ ದೊಡ್ಡವರೇ ನೀವು ನಮ್ಮನೇಕೆ ಕೊಲ್ಲುವಿರಿ 
ಬೆಳೆಯಬೇಡವೇ ನಿಮ್ಮ ಮಕ್ಕಳು 
ನಲಿಯ ಬೇಡವೇ ನಿಮ್ಮ ಮಕ್ಕಳು 
ಶುದ್ಧ ವಾತಾವರಣದಲಿ 

ನಾವು ಮಕ್ಕಳು ಮುಂದಿನ ಪ್ರಜೆಗಳು 
ನಮಗೊಂದಿಷ್ಟು ಉಳಿಸಿ
ನಿರ್ಮಲ ಗಾಳಿ ನೀರು ಬೆಳಕು 
ಇಷ್ಟಾದರೂ ನಮಗುಳಿಸಿ (2)
(ಈ ಕವನ ಬರೆದ ಕವಿ ಹೃದಯಕ್ಕೆ ಧನ್ಯವಾದಗಳು)

      ಈ ಭೂಮಿಯಲ್ಲಿ ನಾಳೆ ಹುಟ್ಟಲಿರುವ ಎಳೆಯ ಮಕ್ಕಳಿಗೆ ಈ ಭೂಮಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು....!!
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 58 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಐರಿನ್ ಫರ್ನಾಂಡಿಸ್, ಸಹಶಿಕ್ಷಕಿ, ರಮ್ಯಾ ಆರ್ ಭಟ್ ಸಹ ಶಿಕ್ಷಕಿ , ವಿದ್ಯಾ ಕಾರ್ಕಳ ಸಹ ಶಿಕ್ಷಕಿ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ಕಾರಗಳು ಸರ್ ಈ ವಾರ ಶಿಕ್ಷಕರ ಡೈರಿ ಯಲ್ಲಿ ಪ್ರಕಟವಾದ ಶಿಕ್ಷಕಿ ರಮ್ಯಾ ಆರ್. ಭಟ್ ಸಿದ್ದಾಪುರ ಅವರ ಲೇಖನ 'ಮಗುವಿನ ಪ್ರಶ್ನೆ' ತುಂಬಾ ಇಷ್ಟವಾಯಿತು. ತರಗತಿಯಲ್ಲಿ ಮೌನವಾಗಿದ್ದ ಮಗುವನ್ನು ಗುರುತಿಸಿದ್ದು.... ಮುಗ್ಧ ಮಗುವಿನ ಸಮಯೋಚಿತ ಪ್ರಶ್ನೆ... ಶಿಕ್ಷಕಿಯ ಸೃಜನಾತ್ಮಕ ಚಟುವಟಿಕೆಯಲ್ಲಿ ಬದಲಾವಣೆಗೆ ಕಾರಣವಾದದ್ದು.... ಎಲ್ಲವೂ ಸಾಧ್ಯವಾದದ್ದೂ ಸಹೃದಯ ಶಿಕ್ಷಕಿಯ ಪ್ರೀತಿಯ ಗುರುತಿಸುವಿಕೆಯಿಂದ, ಆಲಿಸುವಿಕೆಯಿಂದ. ಇಂತಹ ಅದೆಷ್ಟೋ ಪ್ರಶ್ನೆಗಳು ಮುಗ್ಧ ಮನಸ್ಸಿನ ಒಡಲಾಳದಲ್ಲಿ ಇರಬಹುದು....?
     ಕಳೆದ ಬಾರಿ ನೀವು ಪ್ರತಿಭಾ ಕಾರಂಜಿಯ ಬಗ್ಗೆ ಬರೆದಿದ್ದೀರಿ. ಮಕ್ಕಳ ತೊಡಗಿಸಿಕೊಳ್ಳುವಿಕೆ ಭಾಗವಹಿಸುವಿಕೆ ಎಲ್ಲವೂ ಸಂಭ್ರಮವೇ ಸರ್. ಅದನ್ನು ನಾನು ತುಂಬಾ ಚೆನ್ನಾಗಿ ಅನುಭವಿಸಿದ್ದೇನೆ ಸರ್. ಮಕ್ಕಳ ನಿರಂತರ ಅಭ್ಯಾಸ, ಶ್ರಮದ ನಡುವೆಯೂ ಇನ್ನೇನು ಸ್ಪರ್ಧೆಗೆ ಎರಡು ದಿವಸ ಇದೆ ಎನ್ನುವಾಗ ಕೊನೆ ಕ್ಷಣದಲ್ಲಿ ಕೆಲವೊಂದು ಸ್ಪರ್ಧೆಗಳು ರದ್ದಾಗುವುದು... ಇದು ಆ ಸ್ಪರ್ಧಾಕಣದಲ್ಲಿದ್ದ ಮಕ್ಕಳ ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ....? ಇದು ಕೂಡ ಯೋಚಿಸುವ ವಿಚಾರವೇ ಅಲ್ವಾ ಸರ್. ಮಕ್ಕಳ ಲೇಖನಗಳು, ಚಿತ್ರಗಳು, ಕವನಗಳು, ಚಿತ್ರಕಥೆಗಳು ಹೆಚ್ಚಾಗಿ ಪ್ರಕಟಗೊಂಡು ಓದಲು ತುಂಬಾ ಸಂತಸವಾಗುತ್ತಿದೆ. ಈ ಓದುವ ಖುಷಿಯನ್ನು ನೀಡಿದ ಮಕ್ಕಳಿಗೂ, ಜಗಲಿಗೂ ನನ್ನ ಮನದಾಳದ ಧನ್ಯವಾದಗಳು.
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


ಎಲ್ಲರಿಗೂ ನಮಸ್ಕಾರಗಳು....
     ಯಾವ ಕೆಲಸದಲ್ಲಿ ನಾವು ತೊಡಗಿಸಿಕೊಂಡಿದ್ದೇವೋ ಅದಕ್ಕೆ ಮೀಸಲಾಗಿ ಅದನ್ನು ಸಾಧಿಸಿ ತೋರಿಸುವುದೇ ಬೃಹ್ಮಚರ್ಯ. ಬೃಹ್ಮಚರ್ಯದ ಕುರಿತಾಗಿ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ವಿವರಣಾತ್ಮಕ ಲೇಖನ.
     ಚಂಚಲ ಮನಸ್ಸಿನಿಂದ ನಾವು ಯಾವುದನ್ನೂ ಸಾಧಿಸಲಾರೆವು. ಅದು ಯಾವತ್ತೂ ದುರ್ಬಲ ಎನ್ನುವುದನ್ನು ಸರಳವಾಗಿ ತಮ್ಮ ಈ ಸಲದ ಲೇಖನದಲ್ಲಿ ತಿಳಿಸಿದ್ದಾರೆ. ತಮ್ಮ 125 ನೇ ಸಂಚಿಕೆಗೆ ಅಭಿನಂದನೆಗಳು ಸರ್.
     ಅಕಶೇರುಕ ಪ್ರಾಣಿಗಳಿಂದ ತೊಡಗಿ ಕಶೇರುಕ ಮನುಷ್ಯನ ವರೆಗೆ ಬಂದಾಗ ಹೃದಯ ರಚನಾ ವಿನ್ಯಾಸದಲ್ಲಿನ ವ್ಯತ್ಯಾಸ ಹಾಗೂ ಅದಕ್ಕೆ ಕಾರಣಗಳನ್ನು ದಿವಾಕರ ಸರ್ ರವರು ತಮ್ಮಈ ಸಲದ ಸಂಚಿಕೆಯಲ್ಲಿ ವಿವರವಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್. 
     ಎಲ್ಲೋ ನೋಡಿದ ಗಿಡವಾದರೂ ಈಗ ಇದರ ಪರಿಚಯವಾಯಿತು. ಗುರ್ಗಿ ಎಂಬ ಹೊಸ ಗಿಡವೊಂದರ ಸುಂದರ ಪರಿಚಯ ಧನ್ಯವಾದಗಳು ಮೇಡಂ.
     ರಮೇಶ್ ಉಪ್ಪುಂದರವರ ಸೌತಡ್ಕ ಕ್ಷೇತ್ರ ಪರಿಚಯ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನಲೆ ಸಿಕ್ಕಂತಾಯಿತು.
     ಆರ್ಟ್ ಗ್ಯಾಲರಿಯಲ್ಲಿ ದಯಾನಂದ ಬಿಜೈಯವರು ರಚಿಸಿದ ಕಲಾಕೃತಿಗಳ ಪ್ರದರ್ಶನ ಚೆನ್ನಾಗಿತ್ತು ಸರ್..
     ವಾಣಿಯಕ್ಕನವರಿಂದ 'ನನ್ನ ಹಾರೈಕೆ' ಎನ್ನುವ ವಿಶಿಷ್ಠ ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
      ರಮೇಶ್ ಉಪ್ಪಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ. ಹೊಸ ಪದಗಳ ಹುಡುಕಾಟಕ್ಕೆ ಕಾರಣವಾಗುತ್ತಿದೆ.
       ರಮ್ಯಾ ಮೇಡಂರವರು ಶಿಕ್ಷಕರ ಡೈರಿಯಲ್ಲಿ ಮಗುವಿನ ಪ್ರಶ್ನೆ ಕುರಿತಾಗಿ ಹಂಚಿಕೊಂಡ ಅನುಭವ ಚೆನ್ನಾಗಿತ್ತು. ಕೆಲವೊಮ್ಮೆ ಇಂತಹ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದು ಬಿಡುತ್ತವೆ.
      ಈ ಸಲದ ಮಕ್ಕಳ ಚಿತ್ರ ಸಂಚಿಕೆಯಲ್ಲಿ ಮಕ್ಕಳು ಸೊಗಸಾದ ಚಿತ್ರಗಳನ್ನು ರಚಿಸಿದ್ದಾರೆ. ಚಿತ್ರ ಬಿಡಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆಗಳು. ಪ್ರತೀಕ್ಷಾರವರ ಲೇಖನ, ಶರ್ಮಿಳಾರವರ ಕವನಗಳು ನಿನಾದ್ ರವರ ಚಿತ್ರಕಥೆ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನಿಮಗೆಲ್ಲರಿಗೂ ನನ್ನ ಅಭಿನಂದನೆಗಳು.
      ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article