-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 39

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 39

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 39
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

   
ಪ್ರೀತಿಯ ಮಕ್ಕಳೇ... ಹಿಂದಿನ ವಾರ ಹೃದಯ ವಿನ್ಯಾಸ ಮಾಡುವ ಮೊದಲು ನಿಸರ್ಗ ಎಷ್ಟೊಂದು ವಿಷಯಗಳನ್ನು ಗಮನಿಸಿದೆ ಎಂಬುದನ್ನು ನೋಡಿದ್ದೀರಿ. ಇವತ್ತು ಹೃದಯದ ರಚನೆಯ ಬಗ್ಗೆ ತಿಳಿಯೋಣ. 

ದೇಹದಲ್ಲಿ ಕಾರ್ಯ ವಿಧಾನದ ಆಧಾರದ ಮೇಲೆ ಎರಡು ರೀತಿಯ ಸ್ನಾಯುಗಳನ್ನು ಗುರುತಿಸುತ್ತೇವೆ. ನಮ್ಮ ಅಂದರೆ ನಮ್ಮ ಕೇಂದ್ರ ನರ ಮಂಡಲದ ನಿಯಂತ್ರಣಕ್ಕೆ (Central Nervous System) ಅಥವಾ ನಮ್ಮ ಇಚ್ಛೆಗೆ ಅನುಸಾರ ಕೆಲಸ ಮಾಡುವ ಸ್ನಾಯುಗಳು ಐಚ್ಛಿಕ ಸ್ನಾಯುಗಳು. ಇವುಗಳ ಮೇಲೆ ಕೆಂಪು ಮತ್ತು ಬಿಳಿ ಪಟ್ಟೆಗಳಿರುವುದರಿಂದ ಪಟ್ಟೆಯುಕ್ತ ಸ್ನಾಯುಗಳು (striated muscles) ಮತ್ತು ಸಾಮಾನ್ಯವಾಗಿ ಮೂಳೆಗಳಿಗೆ ಅಂಟಿಕೊಂಡಿರುವುದರಿಂದ ಅಸ್ಥಿ ಸ್ನಾಯುಗಳು (skeletal muscles) ಎಂದೂ ಕರೆಯಲ್ಪಡುತ್ತವೆ. ಇವುಗಳು ಪೆನ್ಸಿಲ್ ನಂತೆ ದಂಡಾಕಾರದ ಎಳೆಗಳು. 100 ಮೈಕ್ರಾನ್ ವ್ಯಾಸ ಹೊಂದಿದ್ದರೂ ಕೆಲವೊಮ್ಮೆ 10 ಸೆಂಟಿಮೀಟರ್ ಉದ್ದವಿರುತ್ತವೆ. ಬಹು ಕೋಶ ಕೇಂದ್ರೀಯ (multinucleated) ಕೋಶಗಳಿವು. ಬಹಳ ಮೈಟೊಕಾಂಡ್ರಿಯಾಗಳನ್ನು ಹೊಂದಿರುವುದರಿಂದ ಅಪಾರ ಪ್ರಮಾಣದ ಶಕ್ತಿಯನ್ನು ಒಮ್ಮೆಲೇ ಬಿಡುಗಡೆ ಮಾಡುತ್ತವೆ. ಬಯಸಿದಾಗ ಭೀಮ ಬಲ ನೀಡುವ ಸ್ನಾಯುಗಳು ಇವು. ನಮ್ಮ ನಿಯಂತ್ರಣದಲ್ಲಿಲ್ಲದ ತಮ್ಮಷ್ಟಕ್ಕೆ ತಾವೇ ಸಂಕುಚಿಸುವ ಸ್ನಾಯುಗಳು ಅನೈಚ್ಛಿಕ ಸ್ನಾಯುಗಳು (involuntary muscles). ಇವುಗಳಿಗೆ ಪಟ್ಟೆಗಳಿಲ್ಲ ಮತ್ತು ಬಡಿತದಲ್ಲಿ ಅಂತಹ ಧಾವಂತಗಳಿಲ್ಲದ್ದರಿಂದ ಇವುಗಳು ನಯ ಸ್ನಾಯುಗಳು(smooth muscles). ಇವುಗಳಲ್ಲಿ ಒಂದೇ ಕೋಶ ಕೇಂದ್ರವಿದ್ದು ಕದುರಿನ ಆಕಾರ ಹೊಂದಿರುತ್ತವೆ. ಇವು ಒಂದೇ ರೀತಿ ಕೆಲಸ ಮಾಡುತ್ತಲೇ ಸಾಗುತ್ತವೆ. ಇನ್ನೊಂದು ತುಂಟ ಸ್ನಾಯುಕೋಶಗಳಿವೆ. ಇವುಗಳು ನಮ್ಮ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಲಯಬದ್ಧವಾಗಿ ಬಡಿಯುತ್ತಲೇ ಇರುತ್ತದೆ. ಒಂದೇ ಕೋಶ ಕೇಂದ್ರವಿದ್ದರೂ ಪಟ್ಟೆಗಳನ್ನು ಹೊಂದಿವೆ. ಅಧಿಕ ಸಂಖ್ಯೆಯಲ್ಲಿ ಮೈಟೋಕಾಂಡ್ರಿಯಾಗಳನ್ನು ಹೊಂದಿದ್ದು ಪಟ್ಟೆ ಸ್ನಾಯುಗಳಂತೆ ಒಮ್ಮೆಲೇ ಅಪಾರ ಶಕ್ತಿ ಬಿಡುಗಡೆ ಮಾಡಬಲ್ಲವು. ಆದ್ದರಿಂದ, ಉದ್ವೇಗ, ಒತ್ತಡ, ಕೆಲಸಗಳ ಸಂದರ್ಭದಲ್ಲಿ ಕೆಲಸ ಮಾಡಬಲ್ಲವು. ಈ ಸ್ನಾಯು ಕೋಶಗಳು ಕವಲೊಡೆದು ಪಕ್ಕದ ಸ್ನಾಯುಕೋಶದೊಂದಿಗೆ ಬೆಸೆದು ಕೊಳ್ಳುವುದರಿಂದ ವೇಗದ ಚಲನೆಯ ಸಮಯ ಇವುಗಳು ಬೇರ್ಪಡುವುದಿಲ್ಲ ಅಥವಾ ಹರಿಯುವುದಿಲ್ಲ (muscular tear). ಅಂದರೆ ಐಚ್ಛಿಕ ಸ್ನಾಯುಗಳ ಸಾಮರ್ಥ್ಯ ಮತ್ತು ಅನೈಚ್ಛಿಕ ಸ್ನಾಯುಗಳ ಲಯಬದ್ಧತೆ ಒಂದೇ ಸ್ನಾಯುವಿನಲ್ಲಿ ಅಳವಡಿಸಿದ ಹಾಗೆ ಇರುವ ಈ ಸ್ನಾಯುಗಳೇ ಹೃದಯದ ಸ್ನಾಯುಗಳು. ಕತ್ತೆಗಳ ಹೊರೆ ಹೊರುವ ಗುಣ ಮತ್ತು ಕುದುರೆಯ ವೇಗ ಎರಡನ್ನೂ ಸಮ್ಮಿಳನಗೊಳಿಸಿ ಹೇಸರಗತ್ತೆಗಳನ್ನು ಬಳಸಿದ ಹಾಗೆ. ಇಲ್ಲಿ ಕೂಡಾ ನಿಸರ್ಗ ಹೇಗೆ ವಿನ್ಯಾಸಗೊಳಿಸಿದೆ ನೋಡಿ.

ಹೃದಯ ನಮಗಾಗಿ ಜೀವಮಾನವಿಡೀ ಬಡಿಯುತ್ತದೆ. ಅದಕ್ಕಾಗಿ ನಾವು ಹೃದಯಕ್ಕೆ ಕೃತಜ್ಞರಾಗಿರಬೇಕು ಎಂದು ನೀವು ಮಾತನಾಡುವಾಗ ಹೃದಯ ನಗುತ್ತಿರುತ್ತದೆ. ಏಕೆಂದರೆ ಇವರೆಷ್ಟು ದಡ್ಡರಿದ್ದಾರೆ ಎಂದು. ನಾನು ಮಾಡದ ಕೆಲಸಕ್ಕೆ ಇವರು ಮಾಡಿದ್ದೇನೆ ಎನ್ನುತ್ತಿದ್ದಾರೆ ಎನ್ನುತ್ತದೆ ಹೃದಯ. ಏಕೆ ಕೇಳುತ್ತೀರಾ? ಹೃದಯದಲ್ಲಿ ಒಮ್ಮೆ ಹೃತ್ಕರ್ಣ ಬಡಿದುಕೊಂಡು ರಕ್ತವನ್ನು ಹೃತ್ಕುಕ್ಷಿಗೆ ದೂಡುತ್ತದೆ. ಇದು ಹೃತ್ಕರ್ಣದ ಒದೆತ (atrial kick). ಇದಕ್ಕೆ ತೆಗೆದುಕೊಳ್ಳುವ ಸಮಯ 0.1 ಸೆಕುಂಡ್. ಮುಂದಿನ ಒದೆತಕ್ಕೆ 0.7 ಸೆಕುಂಡ್ ನಷ್ಟು ಬಿಡುವಿರುತ್ತದೆ. ಹೃತ್ಕರ್ಣಗಳು ಬಡಿಯಲು ತೆಗೆದುಕೊಳ್ಳುವ ಸಮಯ (ventricular systole) 0.3 ಸೆಕುಂಡುಗಳಾದರೆ ವಿರಾಮದ ವೇಳೆ (ventricular diastole) 0.5 ಸೆಕುಂಡುಗಳು. ಎರಡನ್ನೂ ಒಟ್ಟಾಗಿ ನಾವು ಹೃದಯದ ಚಕ್ರ (cardiac cycle) ಎಂದು ಕರೆದರೆ ಇದು 0.8 ಸೆಕುಂಡ್ ತೆಗೆದುಕೊಳ್ಳುತ್ತದೆ. ಇದರಲ್ಲಿ ಹೃತ್ಕರ್ಣದ ಒದೆತ 0.1 ಸೆಕೆಂಡ್ ಆದರೆ ಹೃತ್ಕುಕ್ಷಿಯ ಬಡಿತ 0.3 ಸೆಕುಂಡ್. ಉಳಿದ ಸಮಯ ವಿಶ್ರಾಂತಿ. 

ಇದು ಮನುಷ್ಯನಿಗೆ ಅತಿದೊಡ್ಡ ಪಾಠ. ನೀವು ನಿರಂತರವಾಗಿ ಕೆಲಸ ಮಾಡುತ್ತಿರುವಾಗ ವಿಶ್ರಾಂತಿಯನ್ನು ಮರೆಯಬಾರದು. ಆದರೆ ನಿಮ್ಮ ವಿಶ್ರಾಂತಿ ನಿಮ್ಮ ಕಾರ್ಯ ಕ್ಷಮತೆಯನ್ನು ಪ್ರಭಾವಿಸಬಾರದು. 
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article