ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 37
Tuesday, July 16, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 37
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ..... ಕಳೆದ ವಾರ ಅಪಧಮನಿಗಳು ಲೋಮನಾಳಗಲ್ಲಿ ಕೊನೆಗೊಂಡರೆ ಅಭಿಧಮನಿಗಳು ಲೋಮನಾಳಗಳಿಂದ ಆರಂಭವಾಗುತ್ತವೆ ಎನ್ನುವುದನ್ನು ನೋಡಿದ್ದೇವೆ. ಆದರೆ ಒಂದು ವಿಧದ ರಕ್ತನಾಳಗಳು ಲೋಮನಾಳಗಳಿಂದ ಆರಂಭವಾಗಿ ಲೋಮನಾಳಗಳಲ್ಲಿ ಕೊನೆಗೊಳ್ಳುತ್ತವೆ. ಇವು ದೇಹದ ಬೇರೆ ಬೇರೆ ಭಾಗಗಳಿಂದ ರಕ್ತವನ್ನು ಸಂಗ್ರಹಿಸುತ್ತವೆ ಆದರೆ ರಕ್ತವನ್ನು ಹೃದಯಕ್ಕೆ ತರುವುದಿಲ್ಲ ಬದಲು ನಿಶ್ಚಿತ ಅಂಗಗಳಲ್ಲಿ ಕೊನೆಗೊಳ್ಳುತ್ತವೆ. ಇವುಗಳ ರಚನೆಯನ್ನು ನೋಡಿದರೆ ಇವುಗಳು ಅಭಿಧಮನಿಗಳು. ಇವುಗಳನ್ನು ಪೋರ್ಟಲ್ ಅಭಿದಮನಿಗಳೆನ್ನುತ್ತೇವೆ (portal veins). ಇಂತಹ ಎರಡು ಪೋರ್ಟಲ್ ವ್ಯವಸ್ಥೆಗಳಿವೆ (portal system). ಕಪ್ಪೆಯಂತಹ ಉಭಯವಾಸಿಗಳಲ್ಲಿ ದೇಹದ ಕೆಳಭಾಗದಿಂದ ಸಂಗ್ರಹಿಸಲ್ಪಟ್ಟ ರಕ್ತ ಮೂತ್ರಜನಕಾಂಗಗಳನ್ನು ತಲುಪಿಸುವ ವ್ಯವಸ್ಥೆ ಮೂತ್ರಜನಕಾಂಗದ ಪೋರ್ಟಲ್ ವ್ಯವಸ್ಥೆ (renal portal system). ಆದರೆ ಇದು ನಾಲ್ಕು ಹೃದಯದ ಕೊಣೆಗಳನ್ನು ಹೊಂದಿರುವ ಜೀವಿಗಳಲ್ಲಿ ಇರುವುದಿಲ್ಲ. ಇನ್ನೊಂದು ಪಿತ್ತ ಜನಕಾಂಗ ಪೋರ್ಟಲ್ ವ್ಯವಸ್ಥೆ (hepatic portal system). ಇದು ಕರುಳಿನ ಲೋಮನಾಳಗಳು ಸೇರಿ ಆಗುವ ಅಭಿಧಮನಿ. ಇದು ಪಿತ್ತ ಜನಕಾಂಗದಲ್ಲಿ ಕೊನೆಗೊಳ್ಳುತ್ತದೆ. ಪೋರ್ಟಲ್ ವ್ಯವಸ್ಥೆ ಒಂದು ಹಿಂದುಳಿದ ಪರಿಚಲನಾ ವ್ಯವಸ್ಥೆ. ಆದರೂ ಮುಂದುವರಿದ ಮಾನವನಲ್ಲಿ ಕೂಡಾ ಈ ವ್ಯವಸ್ಥೆ ಇನ್ನೂ ಏಕೆ ಇದೆ...? ಎಂದು ನಿಮಗೆ ಅಚ್ಚರಿಯಾಗಿದೆಯೇ...? ಅದಕ್ಕೆ ಬಲವಾದ ಕಾರಣ ಇದೆ.
ನಮ್ಮ ಆಹಾರ ಜೀರ್ಣವಾಗುವಾಗ ನಾವು ತಿನ್ನುವ ಆಹಾರದಲ್ಲಿರುವ ಪಿಷ್ಟ ಮತ್ತು ಗ್ಲೈಕೋಜನ್ ಗಳು ಸರಳ ಸಕ್ಕರೆಗಳಾಗಿ ಒಡೆಯಲ್ಪಡುತ್ತದೆ. ಈ ಸರಳ ಸಕ್ಕರೆಯಾದ ಗ್ಲುಕೋಸ್ ರಕ್ತದಿಂದ ಹೀರಲ್ಪಡುತ್ತದೆ. ಎಲ್ಲಿಯಾದರೂ ಈ ಗ್ಲುಕೋಸ್ ರಕ್ತ ಪ್ರವಾಹಕ್ಕೆ ನೇರವಾಗಿ ಸೇರಿಸಲ್ಪಟ್ಟರೆ ರಕ್ತದ ಗ್ಲೂಕೋಸ್ ಮಟ್ಟ 400 ನ್ನಲ್ಲ 800 ನ್ನು ಮುನ್ನಡೆದು ಬಿಡುತ್ತದೆ. ಆಗ ನಾವು ಬದುಕುವುದೇ ಕಷ್ಟವಾದೀತು. ಈ ಗ್ಲುಕೋಸ್ ಅನ್ನು ಬೇರೇ ಸಂಕೀರ್ಣ ಪದಾರ್ಥವಾಗಿ ಪರಿವರ್ತಿಸಬೇಕಾಗುತ್ತದೆ. ಆದ್ದರಿಂದ ರಕ್ತ ಮೊದಲು ಪಿತ್ತ ಜನಕಾಂಗಕ್ಕೆ ಹೋಗುತ್ತದೆ. ಅಲ್ಲಿ ಗ್ಲುಕಗಾನ್ ಹಾರ್ಮೋನ್ ಸಹಾಯದಿಂದ ಗ್ಲುಕೋಸ್ ಗ್ಲೈಕೋಜನ್ ಆಗಿ ಪರಿವರ್ತನೆಯಾಗಿ ಸಂಗ್ರಹಿಸಲ್ಪಡುತ್ತದೆ. ನೋಡಿ ದೇಹ ಈ ಹಿಂದುಳಿದಿರುವಿಕೆ ತನಗೆ ಕಳಂಕ ಎಂದು ತನ್ನನ್ನು ಮಾರ್ಪಾಡಿಸಿಕೊಳ್ಳಲು ಹೋಗುವುದಿಲ್ಲ. ಅದಕ್ಕೆ ಬದುಕುವುದು ಮುಖ್ಯವಾಗುತ್ತದೆ. ಕನ್ನಡದಲ್ಲಿ ಒಂದು ಗಾದೆ ಇದೆ "ಬರ್ದದನೆ ಬಂಟಂ". ಬದುಕಿ ಉಳಿದವನೇ ಶೂರ ಎಂಬುದು ಅದರ ಅರ್ಥ. ನಮಗೂ ಅಷ್ಟೇ ಅನುಕೂಲ ಮುಖ್ಯವೇ ಹೊರತು ಫ್ಯಾಷನ್ ಅಲ್ಲ.
ನಾನು ಯಾವಾಗಲೂ ಹೇಳವ ಮಾತು ಮತ್ತೊಮ್ಮೆ ಸ್ಫುಟವಾಯಿತು ತಾನೇ? ಪ್ರಕೃತಿಯು ಅತ್ಯಂತ ನುರಿತ ವಿನ್ಯಾಸಕಾರ ಮತ್ತು ತಂತ್ರಜ್ಞ ಎಂದು.