-->
ಜೀವನ ಸಂಭ್ರಮ : ಸಂಚಿಕೆ - 148

ಜೀವನ ಸಂಭ್ರಮ : ಸಂಚಿಕೆ - 148

ಜೀವನ ಸಂಭ್ರಮ : ಸಂಚಿಕೆ - 148
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
             

ಮಕ್ಕಳೇ..... ಇಂದು ಯಮದ ಐದನೇ ಉಪಾಂಗ ಅಪರಿಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಹೇಳುತ್ತಾರೆ ಪರಿಗ್ರಹ ಎಂದರೆ ಹಿಡಿಯುವುದು. ತುಂಬಿದ್ದು ಚೆಲ್ಲುತ್ತದೆ ಅನ್ನುವುದನ್ನು ಮರೆಯುತ್ತೇವೆ. ಜೀವನಕ್ಕೆ ಮಿತಿ ಇದೆ. ಜಠರಕ್ಕೆ ಮಿತಿ ಇದೆ. ಚೆನ್ನಾಗಿದೆ ಅಂತ ಹೆಚ್ಚು ತಿಂದರೆ ಚೆಲ್ಲಿ ಹೋಗುತ್ತದೆ. ತುಂಬಿದರೆ ಬಳಕೆ ಸಾಕು ಎನ್ನಬೇಕು. ಕೆಲವು ಪಾತ್ರೆಗಳಿವೆ ಎಷ್ಟು ಹಾಕಿದರೂ ತುಂಬುವುದಿಲ್ಲ. ಅದಕ್ಕೆ ಬುಡನೆ ಇಲ್ಲ. ಅದಕ್ಕೆ ಎಷ್ಟೇ ಹಾಕಿದರು ಖಾಲಿಖಾಲಿ. ಯೋಗ ಹೊಸ ದೃಷ್ಟಿ ನೀಡುತ್ತದೆ. ಜಗತ್ತಿನಲ್ಲಿ ಬಾಳುತ್ತೇವೆ ಅಂದಾಗ ಕಷ್ಟ ನಷ್ಟ ಎಲ್ಲ ಇರುತ್ತದೆ. ಜಗತ್ತು ಹೇಗೆ ಇರಲಿ, ನಾನು ನಾನಾಗಿರಬೇಕು. ನನ್ನ ಬದುಕು ಸಮೃದ್ಧವಾಗಿರಬೇಕು. ನಮಗೆ ಎಲ್ಲಾ ಅನುಕೂಲವಾಗಿರುವುದಿಲ್ಲ. ಒಂದು ಬೀಜ ತಿಪ್ಪೆಯೊಳಗೆ ಬೀಳುತ್ತದೆ. ಅದರ ಸುತ್ತ ಮುತ್ತ ಹೊಲಸು. ಅದನ್ನು ತಿರಸ್ಕರಿಸುವುದಿಲ್ಲ. ಅದರಲ್ಲಿ ತನಗೇನು ಬೇಕು ಅದನ್ನು ಪಡೆದು ತಾನು ತಾನಾಗಿ ಬೆಳೆಯುತ್ತದೆ. ಆದರೆ ಹೊಲಸಿನ ಕಡೆ ಲಕ್ಷ್ಯ ಹರಿಸುವುದಿಲ್ಲ. ಬೆಳೆದು ಹೂ, ಹಣ್ಣು ನೀಡಿ ಸುತ್ತಲಿನ ಪರಿಸರವನ್ನು ಆಕರ್ಷಣೆ ಮಾಡುತ್ತದೆ. ತಿಪ್ಪೆಯಲ್ಲೇ ಇರುತ್ತದೆ ಅದರಲ್ಲಿ ತನಗೆ ಏನು ಬೇಕೋ ಅದನ್ನು ಹೀರುತ್ತದೆ, ತಾನು ತಾನಾಗಿರುತ್ತದೆ. ಹೂವು ಎಷ್ಟು ಸುವಾಸನೆ?. ಹಣ್ಣು ಎಷ್ಟು ಮಧುರ?. ಅದು ತಿಪ್ಪೆಯನ್ನು ಬೈದಿಲ್ಲ, ತನ್ನನ್ನು ತಾನು ಮರೆತಿಲ್ಲ. ತಿಪ್ಪೆಯಲ್ಲೇ ಇದ್ದು ಅದಕ್ಕೆ ತೊಂದರೆ ನೀಡದೆ, ತನ್ನ ಮೈಗೆ ಹಚ್ಚಿಕೊಳ್ಳದೆ ಬೆಳೆಯುತ್ತದೆ. ಇದರಿಂದ ನಾವು ಏನು ಕಲಿಯಬೇಕೆಂದರೆ ನಾವು ಹೇಗೆ ಬದುಕು ಕಟ್ಟಿಕೊಳ್ಳಬೇಕು, ತಿಳಿದುಕೊಳ್ಳಬೇಕು ಎನ್ನುವುದನ್ನು. ನಮಗೆ ಎಲ್ಲಾ ಒಳ್ಳೆಯದು ಇರುತ್ತದೆ ಅಂತ ಹೇಳಲಿಕ್ಕೆ ಬರುವುದಿಲ್ಲ. ಅಲ್ಲಿ ಒಂದಿಷ್ಟು ಒಳ್ಳೆಯ ರಸ ಇರುತ್ತದೆ. ಅದನ್ನು ಬಳಸಿಕೊಂಡು ಬೆಳೆಯಬೇಕು. ಆದರೆ ನಮ್ಮ ಸುತ್ತಮುತ್ತ ಇರುವ ಕೆಟ್ಟದ್ದಕ್ಕೆ ಅಂಟಿಕೊಳ್ಳದೆ, ನಾವು ನೂರು ವರ್ಷ ಸುಂದರವಾಗಿ ಬಾಳಬೇಕು. ನಿಸರ್ಗ ನನ್ನೊಳಗೆ ಏನೋ ಇಟ್ಟಿದೆ. ಅದನ್ನು ಅರಳಿಸುವುದೇ ಜೀವನ. ಅದೇ ಜೀವನದ ಸಾರ್ಥಕತೆ. ನಮ್ಮ ಜೀವನ ಬೈಯುವುದರಲ್ಲಿ ಹೋಗುತ್ತದೆ ವಿನಹ, ಬೆಳೆಯುವುದರಲ್ಲಿ ಇಲ್ಲ. ಈ ರೀತಿ ಬೆಳೆಯುವುದೇ ಯೋಗ ವಿಧಾನ. ಬೆಳೆಯುವುದರ ಕಡೆ ಲಕ್ಷ್ಯ ಇರಬೇಕು, ಫಲದ ಕಡೆ ಅಲ್ಲ. 

ಪಾತಂಜಲ ಮಹರ್ಷಿ ಹೇಳಿದ್ದು, "ಏನಾದರೂ ಸಾಧನೆ ಮಾಡೋದಿದ್ರೆ, ಮನಸ್ಸನ್ನು ಸುಂದರಗೊಳಿಸುವ, ಹದಗೊಳಿಸುವ ಸಾಧನೆ ಮಾಡು". ಅದು ನಿನ್ನ ಜೀವನ ಸುಂದರಮಾಡುತ್ತದೆ. ಮನಸ್ಸು ಒಂದು ದರ್ಪಣ ಇದ್ದಂತೆ. ಅದಕ್ಕೆ ಧೂಳು ಬೀಳದಂತೆ, ತೊಳೆಯುವುದು, ಶುಚಿಯಾಗಿ ಇಡುವುದು. ಅದು ಶುಚಿಯಾಗಿದ್ರೆ ಎಲ್ಲವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಡಿಯಬೇಕು, ಎಷ್ಟು ಹಿಡಿಯಬೇಕು? ಹೇಗೆ ಹಿಡಿಯಬೇಕು...? ಗೊತ್ತಿರಬೇಕು. ಕೈಗೆ, ಮನಸ್ಸಿಗೆ, ಜೀವನಕ್ಕೆ ಮಿತಿ ಇದೆ. ಎಷ್ಟು ಬೇಕೋ ಅಷ್ಟೇ ಹಿಡಿಯುವುದಕ್ಕೆ ಅಪರಿಗ್ರಹ ಎಂದು ಪಾತಂಜಲ ಮಹರ್ಷಿ ಹೇಳಿದರು. ಒಂದು ಗಡಿಗೆ ಸಾಗರದಲ್ಲಿ ಇಟ್ಟರು. ಅದೆಷ್ಟೇ ಹೊತ್ತು ಇಟ್ಟರೂ, ಅಷ್ಟೇ ಹಿಡಿಯುವುದು. ಹೆಚ್ಚು ಹಾಕಿದರೆ ಚೆಲ್ಲುತ್ತದೆ. ಎಷ್ಟು ಬೇಕೋ ಅಷ್ಟು ಹಿಡಿಯುವುದು ಅಥವಾ ನಾವು ಬಳಸುವಷ್ಟು ಹಿಡಿಯಬೇಕು ಇದಕ್ಕೆ ಅಪರಿಗ್ರಹ ಎನ್ನುವರು. ಸಂಪಾದನೆಯನ್ನು ಅಷ್ಟೇ... ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗಳಿಸಿ, ನಮಗೆ ಎಷ್ಟು ಬೇಕು ಅಷ್ಟು ಬಳಸಿ, ಉಳಿದದ್ದನ್ನು ಸಮಾಜ ಸುಂದರ ಮಾಡಲು ಬಳಸಬೇಕು. ಯಾವನೇ ಮನುಷ್ಯ ಹಿಡಿದರೆ, ಆತನ ಮನಸ್ಸು ಅದಕ್ಕೆ ಅಂಟಿಕೊಳ್ಳುತ್ತದೆ. ಆ ಮನಸ್ಸು, ಹಿಡಿಯಲು ಸಾಧ್ಯವಾಗದ ಕಡೆ ಲಕ್ಷ್ಯ ವಹಿಸುತ್ತದೆ. ಆ ಮನಸ್ಸು ತುಂಬಿದರ ಕಡೆ ಲಕ್ಷ್ಯ ಕೊಡೋದಿಲ್ಲ. ಹೋದುದರ ಕಡೆ, ಬರಬೇಕಾದ ಕಡೆ ಹರಿಯುತ್ತದೆ. ಇನ್ನು ಹೆಚ್ಚಾಗಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಅದೇ ಜೀವನ ಹಾಳು ಮಾಡುತ್ತದೆ. ಮತ್ತೊಬ್ಬರೊಂದಿಗೆ ಹೋಲಿಸಿ, ಜೀವನ ಹಾಳು ಮಾಡಿಕೊಳ್ಳುತ್ತೇವೆ. ನಾವು ಕಡಿಮೆ ಅಂತ ಬದುಕುತ್ತಿದ್ದೇವೆ, ವಿನಹ ತುಂಬಿದಂತೆ ಬದುಕುತ್ತಿಲ್ಲ. ಅದರ ಬದಲು ಬಂದಿದ್ದರ ಕಡೆ, ತುಂಬಿದ್ದರ ಕಡೆ, ಲಕ್ಷ್ಯ ಕೊಡಬೇಕು. ನಮ್ಮ ಕೈ ಒಂದು ಹೂವನ್ನು ತುಂಬಿದಂತೆ ಹಿಡಿಯಲು ಬರುತ್ತದೆ. ನೂರು ಹೂವನ್ನು ತುಂಬಿದಂತೆ ಹಿಡಿಯಲು ಬರುತ್ತದೆ. ತುಂಬುವುದಕ್ಕೆ ಹೆಚ್ಚು ಸಂಖ್ಯೆ ಬೇಕಾಗೋದಿಲ್ಲ. ಹಿಡಿಯೋ ರೀತಿ ಬೇಕಾಗುತ್ತದೆ. ತುಂಬಿದಂತೆ ಬದುಕಬೇಕು. ಒಬ್ಬ ಬಡ ಹುಡುಗನಿಗೆ ಒಂದು ರೂಪಾಯಿ ನೀಡಿದರೆ, ಆತನಿಗೆ ಅದು ತುಂಬಿದಂತೆ. ಆತನ ಮನಸ್ಸು ತುಂಬಿದೆ. ಏನು ನಗುಮುಖ ನೋಡಬೇಕು. ಆದರೆ ಆತನ ತಂದೆಯ ಬಳಿ ನೂರು ರುಪಾಯಿ ಇದೆ. ಅದು ಕೊರತೆಯಾಗಿದೆ. ಆತನ ಮುಖ ಬಾಡಿದೆ. ಆತನ ಮನಸ್ಸು ತುಂಬಿಲ್ಲ. ತುಂಬಿದ ಅನುಭವ ಬಹಳ ಮಹತ್ವದ್ದು. ಏನಿದೆ... ಅದು ತುಂಬಿದೆ ಅನ್ನುವ ಭಾವ ಬರಬೇಕು. ಲಕ್ಷಾಧೀಶರು ಶ್ರೀಮಂತರು ಅಂತಲ್ಲ. ನಾವು, ನಮ್ಮಲ್ಲಿ ಎಷ್ಟಿದಿಯೋ ಅದು ತುಂಬಿದೆ ಅನ್ನುವ ಭಾವ ಮುಖ್ಯ. ನಮಗೆ ತುಂಬಿಕೊಳ್ಳುವುದು ಗೊತ್ತಿಲ್ಲ. ಖಾಲಿ ಮಾಡಿಕೊಳ್ಳುವುದು ಗೊತ್ತಿದೆ. ಒಂದು ಹೊಸ ಮನೆ, ಒಂದೇ ಪ್ಲಾಸ್ಟಿಕ್ ಕುರ್ಚಿ ಇದೆ. ಅದನ್ನು ಬೇಕಾದಲ್ಲಿ ಹಾಕಿ ಸಂತೋಷ ಪಡಬಹುದು. ಆ ಒಂದು ಕುರ್ಚಿ ಎಲ್ಲ ರೂಂ ತುಂಬುತ್ತದೆ. ಅದು ಮನಸ್ಸು ತುಂಬಿದ್ದರೆ ಮಾತ್ರ, ಎಲ್ಲ ತುಂಬಿದಂತೆ ಆಗುತ್ತದೆ. ಹಾಗೆ ತುಂಬಿದಂತೆ ಇರುವುದೇ ಪರಿಪೂರ್ಣ. ತುಂಬದಂತೆ ಇರುವುದೇ ಅಪರಿಪೂರ್ಣ. 

ಪಕ್ಷಿಗಳು ತಮಗೆ ಎಷ್ಟು ಬೇಕು ಅಷ್ಟು ತಿಂದು ಪೂರ್ಣ ಜೀವನ ಸಾಗಿಸುತ್ತದೆ. ಅದಕ್ಕೆ ಬೇಕು ಅನಿಸುವುದಿಲ್ಲ. ಗುಬ್ಬಿ, ಹದ್ದು ಆಗಬೇಕೆಂದು ಬಯಸುವುದಿಲ್ಲ. ಗುಬ್ಬಿಯದು ಪೂರ್ಣ ಜೀವನವೇ. ನಮಗೆ ಬೇಕು ಅನಿಸುತ್ತದೆಯಲ್ಲ ಅದು ಅಪೂರ್ಣ ಜೀವನ. ಹಿಡಿಯಬೇಕು, ಹಿಡಿಯುವುದೇ ಜೀವನದ ಉದ್ದೇಶ ವಾಗಿರಬಾರದು. ಗಳಿಸಬೇಕು, ಗಳಿಸುವುದೇ ಜೀವನದ ಉದ್ದೇಶ ಆಗಿರಬಾರದು. ಮನುಷ್ಯ ಕೂಡಿಸಲು, ಗಳಿಸಲು ಬದುಕಿದ ಅನ್ನುವ ಹಾಗೆ ಬದುಕಬಾರದು. ಹೇಗೆ ಬದುಕ ಬೇಕೆಂದರೆ?. ಕೂಡಿಸಿ, ಬಳಸಿ ಸಂತೋಷಪಡಲು ಬದುಕಿದ್ದ ಅನ್ನುವ ಹಾಗೆ ಬದುಕಬೇಕು. ನನ್ನಿಂದ ನೀವು, ನಿಮ್ಮಿಂದ ನಾನು, ಪರಸ್ಪರ ಸಂತೋಷ ಪಡುವಂತೆ ಬದುಕಬೇಕು. ಎಲ್ಲರಲ್ಲಿ ಎಲ್ಲ ಇರೋದಿಲ್ಲ. ಉದಾಹರಣೆಗೆ, ನಿಮ್ಮಲ್ಲಿ ಹಾಡು ಇರುತ್ತದೆ, ನನ್ನಲ್ಲಿ ಕಿವಿ ಇದೆ. ನೀವು ಹಾಡಿ ಸಂತೋಷ ಪಡಬೇಕು. ನಾನು ಕೇಳಿ ಸಂತೋಷಪಡಬೇಕು. ಅದು ಬಿಟ್ಟು ನನ್ನಲ್ಲಿ ಹಾಡಿಲ್ಲ ಎಂದು ಖಾಲಿ ಅನುಭವಿಸಬಾರದು. ನಿಮ್ಮಲ್ಲಿ ಒಳ್ಳೆಯ ಒಳ್ಳೆಯ ಸುಂದರ ವಸ್ತುಗಳಿವೆ. ನನ್ನಲ್ಲಿ ಇಲ್ಲ. ನಿಮ್ಮ ಸುಂದರ ವಸ್ತುಗಳನ್ನು ನೋಡುವ ಕಣ್ಣು ಇದೆಯಲ್ಲ, ಅದು ಸಾಕು. ಈಗ ನನ್ನಲ್ಲಿ ಕಾರು ಇಲ್ಲ. ಕಾರು ಇರುವವರು ಮಿತ್ರರು ಅಂದರೆ, ಆ ಕಾರು ನನ್ನದೆ ಆದಂತೆ ಅಲ್ಲವೇನು. ಹೀಗೆ ತುಂಬಿದಂತೆ ಇರುವುದೇ ಅಪರಿಗ್ರಹ. ಏನಿದೆ ಅದನ್ನೇ ತುಂಬಿಕೊಂಡಿರುವುದು. ನಮಗೆ ಖಾಲಿ ಇರುವುದು ಗೊತ್ತೇ ವಿನಹ, ತುಂಬಿರೋದು ಗೊತ್ತಿಲ್ಲ. ಮನಸ್ಸು ತುಂಬಿದ್ದರೆ, ನಾನು ಶ್ರೀಮಂತ ಅನ್ನುವ ಭಾವ ಬರುತ್ತದೆ. ನಾವು ಹೊಸ ಮನೆ ಕಟ್ಟುತ್ತೇವೆ, ಯಾವುದೇ ಉಪಕರಣ, ಪೀಠೋಪಕರಣ ಇರುವುದಿಲ್ಲ. ಪಕ್ಕದ ಮನೆಗೆ ಹೋಗುತ್ತೇವೆ. ಅಲ್ಲಿಯ ಪೀಠ ಪ್ರಕರಣ ನೋಡಿ, ನಮ್ಮ ಮನೆಯಲ್ಲಿ ಇಲ್ಲವಲ್ಲ ಎಂದು ಖಾಲಿತನ ಅನುಭವಿಸಬಾರದು. ನಮ್ಮ ಮನೆಯಲ್ಲಿ ಪೀಠೋಪಕರಣ ಇಲ್ಲದೆ ಇರುವುದರಿಂದ ಕೊಠಡಿ ವಿಶಾಲವಾಗಿದೆ. ಎಲ್ಲಾ ಕಡೆ ತಿರುಗಾಡ ಬಹುದು ಎಂಬ ಭಾವ ಬಂದರೆ ತುಂಬಿದೆ ಎಂದರ್ಥ. ಇಲ್ಲದ ಬಗ್ಗೆ ಯೋಚನೆ ಮಾಡಿದರೆ ಖಾಲಿ ಅನುಭವಿಸುತ್ತೇವೆ. ಇದ್ದುದರ ಕಡೆ ಲಕ್ಷ್ಯ ಕೊಟ್ಟರೆ ತುಂಬಿದಂತೆ. ಸಿರಿವಂತರು ಬಂಗಾರದ ಚಮಚ ಬಳಸುತ್ತಾರೆ. ನಮ್ಮ ಮನೆಯಲ್ಲಿ ಇಲ್ಲ. ಆದರೆ ಕೈ ಇದೆ ಅನ್ನುವ ಭಾವ ಇರಬೇಕು. ಕೈಯೇ ಇಲ್ಲ ಬಂಗಾರದ ಚಮಚ ತೆಗೆದುಕೊಂಡು ಏನು ಮಾಡೋದು?. ಕೈ ಬಳಸಿ ಬಂಗಾರದ ಚಮಚ ಬಳಸಬೇಕು. ಚಮಚ ತನಗೆ ತಾನೇ ಏನು ಮಾಡುವುದಿಲ್ಲ. ನನಗೆ ಸುಂದರ ಕೈ ಇದೆ ಅಂದರೆ ಶ್ರೀಮಂತ. ಪಾತಂಜಲರು ಹೇಳುವುದು ತುಂಬಿದಂತೆ ಬದುಕಬೇಕು ಎಂದು. ಈ ಭಾವ ಬಂದರೆ ನಾವೆಲ್ಲ ಶ್ರೀಮಂತರೇ. ಇಲ್ಲದಿದ್ದರೆ ಬಡವರು. ಬೇಕು ಅನ್ನಿಸಬಾರದು. ತುಂಬಿದಂತೆ ಬದುಕಬೇಕು .ಅದಕ್ಕೆ ಅಪರಿಗ್ರಹ. ಬೇಕು ಅನ್ನುವವನು ಕೂಡಿಸುವವನೇ ವಿನಃ ಅನುಭವಿಸುವುದಿಲ್ಲ. ಸಂಗ್ರಹ ಮುಖ್ಯವಲ್ಲ, ಅನುಭವಿಸುವುದು ಮುಖ್ಯ. ಅನುಭವಿಸುವುದರಿಂದ ಮನಸ್ಸು ತುಂಬುತ್ತದೆ. ಅನುಭವಿಸಲು ಬಹಳ ವಸ್ತು ಬೇಕಾಗಿಲ್ಲ. ಅನುಭವಿಸುವುದರಿಂದ ಮನಸ್ಸು ತುಂಬಿದಂತಾಗಿ, ಖಾಲಿ ಭಾವ ಬರುವುದಿಲ್ಲ. ಅನುಭವ ಶ್ರೀಮಂತಿಕೆ ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article