-->
ಜೀವನ ಸಂಭ್ರಮ : ಸಂಚಿಕೆ - 145

ಜೀವನ ಸಂಭ್ರಮ : ಸಂಚಿಕೆ - 145

ಜೀವನ ಸಂಭ್ರಮ : ಸಂಚಿಕೆ - 145
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 


       
ಮಕ್ಕಳೇ... ಇಂದು 'ಯಮ' ದ ಎರಡನೇ ಅಂಗ 'ಸತ್ಯ' ದ ಬಗ್ಗೆ ತಿಳಿದುಕೊಳ್ಳೋಣ. 
      ಹೃದಯ ಮಧುರ ಆಯ್ತು ಅಂದ ಮೇಲೆ, ಮಧುರ ಹೃದಯ ಬಳಸಿ, ಏನನ್ನು ಪ್ರೀತಿಸಬೇಕು ಎನ್ನುವುದು ಎರಡನೆಯ ನಿಯಮ. ನಾವು ಯಾವುದನ್ನ ಪ್ರೀತಿಸಬೇಕೆಂದರೆ 'ಸತ್ಯ'. ಸತ್ಯವನ್ನು ತಿಳಿದುಕೊಳ್ಳೋದು, ಸತ್ಯವನ್ನ ಪ್ರೀತಿಸುವುದು ಮತ್ತು ಸತ್ಯವನ್ನು ಅನುಭವಿಸುವುದು. ಸತ್ಯ ಯಾರೇ ಹೇಳಿದರು ಅದು ಪ್ರಿಯವಾಗಿರಬೇಕು. ಸತ್ಯವನ್ನು ಪ್ರಿಯವಾಗಿ ಹೇಳಬೇಕು. ಸತ್ಯ ಅಂದರೆ ಇರುವುದು ಎಂದರ್ಥ. ಅಸತ್ಯ ಎಂದರೆ ಅದು ಇರುವುದಿಲ್ಲ. ಇಲ್ಲದನ್ನ ಹೇಳುವುದು ಅಸತ್ಯ. ಇರೋದನ್ನ ಹೇಳುವುದು ಸತ್ಯ. ನಮ್ಮ ಮನಸ್ಸು, ಸತ್ಯ ಯಾವುದು, ಅಸತ್ಯ ಯಾವುದು ಅನ್ನುವುದನ್ನು ಗುರುತಿಸಬೇಕಾಗುತ್ತದೆ. ಆ ಗುರುತಿಸುವ ಸಾಮರ್ಥ್ಯವು ಸತ್ಯದ ಸಾಧನೆಯೇ. ಅವಸರ ಅವಸರವಾಗಿ ನೋಡಿದರೆ ಏನೇನೋ ಕಾಣಲು ಶುರುವಾಗುತ್ತದೆ. ನಿಧಾನ ನಿಧಾನವಾಗಿ ವಸ್ತು, ವ್ಯಕ್ತಿ ಮತ್ತು ಜಗತ್ತನ್ನ ನೋಡಿದರೆ ಸತ್ಯದ ಭಾವ ಮನಸ್ಸಿನಲ್ಲಿ ಮೂಡುತ್ತದೆ. ಸತ್ಯ ಯಾವಾಗ ತಿಳಿಯುತ್ತದೆಯೋ ಆಗ ಅಸತ್ಯ ಬಿಟ್ಟುಬಿಡಬಹುದು. 
       ನಮಗೆ ಸತ್ಯ ಮಹತ್ವದ್ದು. ಸತ್ಯದ ಮೇಲೆ ಪ್ರೇಮ ಇಟ್ಟಾಗ ಅದನ್ನು ಮನಸ್ಸು ಬಯಸುತ್ತದೆ. ಆಗ ಸತ್ಯ ಸಂಶೋಧಿಸಲು, ತಿಳಿಯಲು ಸಾಧ್ಯವಾಗುತ್ತದೆ. ಆಗ ಕೆಲಸದಲ್ಲಿ ಸತ್ಯ ಶುರುವಾಗುತ್ತದೆ. ನೋಟದಲ್ಲಿ, ಮಾತಿನಲ್ಲಿ, ಕೆಲಸದಲ್ಲಿ, ಮತಿಯಲ್ಲಿ ಸತ್ಯ ಶುರುವಾಗುತ್ತದೆ. ನಮ್ಮ ಋಷಿಗಳು ಹೇಳಿದ್ದು ಸತ್ಯವನ್ನು ಅಪ್ರಿಯವಾಗಿ ಹೇಳಬಾರದು. ಪ್ರಿಯವಾಗಿ ಹೇಳುವುದು. ಸತ್ಯವೇ ಧರ್ಮ ಎಂದು ಹೇಳುವರು. ಈ ಜಗತ್ತು ಬರುವ ಮೊದಲು, ಆನಂತರ ಏನು ಇದೆಯೋ ಅದು ಸತ್ಯ. ಅದೇ ಧರ್ಮ. ಧರ್ಮವನ್ನು ಮನುಷ್ಯ ಸ್ಥಾಪಿಸಲು ಬರೋದಿಲ್ಲ. ಇರುವುದನ್ನು ಅನುಸರಿಸುವುದು, ಪ್ರೀತಿಸುವುದು, ಆನಂದಿಸುವುದು. ಸನಾತನ ಎಂದರೆ ಯಾವಾಗಲೂ ನೂತನ. ಅಂದರೆ ಸತ್ಯ ಯಾವಾಗಲೂ ಇರುವಂತದ್ದು. ಜಗತ್ತು ಸತ್ಯದ ಮೇಲೆ ನಿಂತಿದೆ. ಅಸತ್ಯದ ಮೇಲಲ್ಲ. ಅಸತ್ಯ ಅಂದರೆ ಆಧಾರ ಇಲ್ಲದ್ದು. ಸತ್ಯ ಅಂದರೆ ಆಧಾರ ಇರುವಂತದ್ದು. ಉದಾಹರಣೆಗೆ, ನನ್ನ ದೇಹ ಇದೆ ಅಂದರೆ ಅದಕ್ಕೆ ಆಧಾರ ಆತ್ಮ. ಈ ಜಗತ್ತು ಇದೆ ಅಂದರೆ ಅದಕ್ಕೆ ಆಧಾರ ಪರಮಾತ್ಮ. ಈ ಆತ್ಮ, ಪರಮಾತ್ಮವೇ ಸತ್ಯ. ಈ ಸತ್ಯವೇ ದೇವರು. ಮನುಷ್ಯ ಮನುಷ್ಯನಿಗೆ ಮೋಸ ಮಾಡಬಹುದೇ ವಿನಃ ಜಗತ್ತಿಗೆ ಮೋಸ ಮಾಡಲು ಬರುವುದಿಲ್ಲ. ಜಗತ್ತು ಮೋಸ ಹೋಗೋದಿಲ್ಲ. ಕೆಡೋದು ಮನುಷ್ಯನೇ ವಿನಃ ಜಗತ್ತು ಕೆಡೋದಿಲ್ಲ. ನಿಸರ್ಗ ಮೋಸ ಮಾಡುವುದಿಲ್ಲ. ನಾವು ಜಮೀನಿಗೆ 100 ಬೀಜ ಹಾಕಿ, ನಾನು 200 ಬೀಜ ಹಾಕಿದ್ದೇನೆ ಅಂತ ಸುಳ್ಳು ಹೇಳಿದರೆ, ಬೀಜ ಚಿಗುರುವುದು ನೂರೆ. ಉದಾರಣೆ ಒಂದು ಎಮ್ಮೆಗೆ 10 ಕೆ.ಜಿ ತಿಂಡಿ ಹಾಕಿ 10 ಲೀಟರ್ ಹಾಲು ಕರೆಯುತ್ತಿದ್ದರು. ಒಬ್ಬ ಮನುಷ್ಯ ಅದಕ್ಕೆ ಎಂಟು ಕೆಜಿ ಹಾಕಿ, ಹತ್ತು ಕೆಜಿ ಹಾಕಿದ್ದೇನೆ ಎಂದು ಸುಳ್ಳು ಹೇಳಿದನು. ಆ ಎಮ್ಮೆ 8 ಲೀಟರ್ ಹಾಲು ನೀಡಿತು. ಆಗ ಮನುಷ್ಯ ಹೇಳಿದ, ನಾನು ಅದಕ್ಕೆ10ಕೆ.ಜಿ ತಿಂಡಿ ಹಾಕಿದ್ದೇನೆ, ಈ ಎಮ್ಮೆ 8 ಲೀಟರ್ ಹಾಲು ಕೊಟ್ಟಿದೆ ಎಂದನು. ಆಗ ಎಮ್ಮೆ ಹೇಳುತ್ತದೆ ನೀನು ಮೋಸ ಮಾಡಬಹುದು ನಾನು ಮೋಸ ಮಾಡೋದಿಲ್ಲ. ತಿಂದಿರೋದು ನೀನು, ನಾನ್ ಯಾಕೆ ಎರಡು ಲೀಟರ್ ಹೆಚ್ಚು ಹಾಲು ಕೊಡಬೇಕು. ಇದರ ಅರ್ಥ ಯಾವ ಪ್ರಾಣಿ, ಗಿಡ, ನಿಸರ್ಗ ನಮಗೆ ಮೋಸ ಮಾಡುವುದಿಲ್ಲ. 
     ಮನುಷ್ಯ ಮೋಸ ಮಾಡುತ್ತಾನೆ ಮತ್ತು ಮೋಸ ಹೋಗುತ್ತಾನೆ. ನಿಸರ್ಗ ಮೋಸ ಹೋಗೋದಿಲ್ಲ ಹಾಗೂ ಮೋಸ ಮಾಡೋದಿಲ್ಲ. ಜಗತ್ತೆಲ್ಲ ಸತ್ಯದ ಮೇಲೆ ನಿಂತಿದೆ. ಜಗತ್ತಿನ ಧರ್ಮವೇ ಸತ್ಯ. ಜಗತ್ತು ನಿಂತಿರೋದು ಸತ್ಯದ ಮೇಲೆ. ಜಗತ್ತಿಗೆ ಆಧಾರ ಸತ್ಯ. ಆ ಸತ್ಯವೇ ದೇವರು. ಋಷಿಗಳು ಹೇಳಿದ್ದು ಸತ್ಯಂ, ಜ್ಞಾನಂ, ಅನಂತಂ, ಬ್ರಹ್ಮ. ಸತ್ಯ ಅಂದರೆ ಇರುವಂತದ್ದು. ಅದು ಜ್ಞಾನ ರೂಪ. ಅನಂತ ರೂಪ ಹಾಗೂ ಬೃಹತ್ ಆಗಿರುವುದು ಇದಕ್ಕೆ ದೇವರು ಅಂದರು. ನಾವು ಬರೆದಿದ್ದು ಸತ್ಯ ಅಲ್ಲ. ಸತ್ಯ ಇದ್ದರೆ ಸತ್ಯ. ಜೋರಾಗಿ ಅಸತ್ಯ ಹೇಳಿದರೆ, ಕಠೋರವಾಗಿ ಅಸತ್ಯ ಹೇಳಿದರೆ ಸತ್ಯವಾಗುವುದಿಲ್ಲ. ಹಿತವುಂಟು ಮಾಡುವುದೇ ಸತ್ಯ. ಅಂತಿಮವಾಗಿ ಉಳಿಯುವುದೇ ಸತ್ಯ. ಸುಳ್ಳು ನಮ್ಮ ಬದುಕನ್ನು ಸುಂದರಗೊಳಿಸಲು ಸಾಧ್ಯವೇ? ಮನೆಯ ಹೆಂಗಸರು ಅಡುಗೆ ಮಾಡದೆ, ಅಡುಗೆ ಮಾಡಿದ್ದೀನಿ ಎಂದರೆ ನಾವು ತಿನ್ನುವುದೇನು?. ನಾವು ತಿಂದಿದ್ದೇವೆ ಎಂದು ಸುಳ್ಳು ಹೇಳಿದರೆ ದೇಹ ಕೇಳುತ್ತದೆಯೇ? ಆದ್ದರಿಂದ ಪಾತಂಜಲ ಮಹರ್ಷಿ ಹೇಳಿದ್ದು ಸತ್ಯ ತಿಳಿದುಕೋ, ಸತ್ಯ ಪ್ರೀತಿಸು, ಸತ್ಯ ಅನುಭವಿಸು. ಬಸವಣ್ಣ ಹೇಳಿದ್ದು ದೇವಲೋಕ ಮರ್ತ್ಯ ಲೋಕ ಬೇರಿಲ್ಲ ಕಾಣಿರೋ. ಸತ್ಯವ ನುಡಿಯುವುದೇ ದೇವಲೋಕ. ಅಸತ್ಯ ನುಡಿಯುವುದೇ ಮರ್ತ್ಯ ಲೋಕ. ಆಚಾರವೇ ಸ್ವರ್ಗ ಅನಾಚಾರವೇ ನರಕ. ಇದಕ್ಕೆ ನೀವೇ ಪ್ರಮಾಣ ಕೂಡಲಸಂಗಮದೇವ.
      ಮನಸೇ ಹೊಲಸಾದ ಬಳಿಕ ಸತ್ಯ ಕಾಣುವುದಿಲ್ಲ. ಕನ್ನಡಿಯ ಮೇಲೆ ಧೂಳು ಇದ್ದರೆ ನಮ್ಮ ಮುಖ ಚೆನ್ನಾಗಿ ಕಾಣುತ್ತದೆಯೆ? ಮನಸ್ಸು ಸ್ವಚ್ಛವಾಗಿರಬೇಕು. ಮನೆಯೆಲ್ಲಾ ಹೊಲಸಾಗಿದ್ದು, ಸುಗಂಧ ಹೊಡೆದರು ಹೊಲಸು ವಾಸನೆ ಬಂದೇ ಬರುತ್ತದೆ. ಮನೆ ಸ್ವಚ್ಛವಾಗಿದ್ದರೆ ಹೊಲಸು ವಾಸನೆ ಬರುವುದಿಲ್ಲ. ಮನಸ್ಸಿನಲ್ಲಿ ಅಸತ್ಯ ತುಂಬಿದ್ದರೆ ಜಗತ್ತನ್ನು ಸ್ವರ್ಗ ಮಾಡಲು ಆಗುವುದಿಲ್ಲ. ಮನಸ್ಸಿನಲ್ಲಿ ಪ್ರೇಮ ಇರಬೇಕು. ನಾವೆಲ್ಲ ಹೇಳುತ್ತೇವೆ ಸತ್ಯ ನುಡಿದರೆ ಜಗಳವಾಗುತ್ತದೆ ಎಂದು. ಅಂದರೆ ನಾನು ಜಗಳ ಆಗುವಂತೆ ಸತ್ಯ ನುಡಿಯುತ್ತೇನೆ. ಒಳ್ಳೆಯದಾಗಲಿ ಅಂತ ಸತ್ಯ ನುಡಿಬೇಕು. ಅದು ಮಧುರವಾಗಿ ನಡೆಯಬೇಕು. ಏನು ನುಡಿಯಬೇಕು? ಯಾವಾಗ ನುಡಿಯಬೇಕು? ಹೇಗೆ ನುಡಿಯಬೇಕು? ಅದು ಮಧುರವಾಗಿ ನುಡಿಯಬೇಕು. ಎಷ್ಟು ನುಡಿಯಬೇಕು? ಗೊತ್ತು ಮಾಡಿಕೊಂಡು ನುಡಿಯಬೇಕು. ಗೊತ್ತಿದೆ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ನುಡಿಯುವುದಲ್ಲ. ಸತ್ಯ ಯಾವಾಗಲೂ ಮಧುರವಾಗಿರುತ್ತದೆ. ಅದನ್ನು ಬಳಸುವ ರೀತಿ ಮಧುರವಾಗಿರಲಿ. ದುರಾಸೆ ನಮ್ಮನ್ನು ಕೆಡಿಸುತ್ತದೆ. ಮನೆಯವರೆಲ್ಲ ಸುಳ್ಳು ಹೇಳಿದರೆ ಆಗ ಗೊತ್ತಾಗುತ್ತದೆ, ಸತ್ಯದ ಮಹತ್ವ. ಯಜಮಾನ ಕೆಲಸಕ್ಕೆ ಹೋಗದೆ, ಹೋಗಿದ್ದೇನೆ ಎಂದು. ಮಕ್ಕಳು ಶಾಲೆಗೆ ಹೋಗದೆ, ಹೋಗಿದ್ದೀನಿ ಎಂದರೆ. ಮನೆಯವರು ಅಡುಗೆ ಮಾಡದೆ, ಮಾಡಿದ್ದೀನಿ ಅಂದರೆ ಮಾಡೋದೇನು? ಸಂಬಳ ಹೇಗೆ ಬರುತ್ತದೆ...? ವಿದ್ಯೆಹೇಗೆ ಬರುತ್ತದೆ...? ಹೊಟ್ಟೆ ಹೇಗೆ ತುಂಬುತ್ತದೆ...? ಜಗತ್ತು ನಿಂತಿರೋದೆ ಸತ್ಯದ ಮೇಲೆ. ತಿಳಿದಿದ್ದೆಲ್ಲ ಸತ್ಯವಲ್ಲ. 
      ಪಾತಂಜಲ ಮಹರ್ಷಿ ಹೇಳುವುದು, ಸತ್ಯ ಸಂಶೋಧಿಸು, ತಿಳಿದುಕೋ, ಸತ್ಯ ಪ್ರೀತಿಸು ಮತ್ತು ಸತ್ಯ ಅನುಭವಿಸು ಎಂದು. ಸತ್ಯವನ್ನು ಅಸತ್ಯ ಮಾಡಲು ಬರುವುದಿಲ್ಲ. ಸುಳ್ಳು ಎಂದೂ ಸತ್ಯವಾಗುವುದಿಲ್ಲ. ಸುಳ್ಳು ಹೇಳಿದಾಗ ನೆಮ್ಮದಿ ಇರುವುದಿಲ್ಲ. ಯಾವಾಗ ಸತ್ಯ ಗೊತ್ತಾಗುತ್ತೋ ಅನ್ನೋ ಭಯ ಸದಾ ಕಾಡುತ್ತದೆ. ಯಾವಾಗಲೂ ಇರೋದನ್ನ ಇಲ್ಲ ಮಾಡಲು ಬರೋದಿಲ್ಲ. ಇಲ್ಲದ್ದನ್ನು ಇದೆ ಅಂತ ಮಾಡಲು ಸಾಧ್ಯವಿಲ್ಲ. ತಪ್ಪು ಮಾಹಿತಿ ಯಿಂದ ನಿರ್ಣಯ ತಪ್ಪಾದರೆ ಸತ್ಯ ಇಲ್ಲದಂತೆ ಆಯಿತೇನು. ಇಲ್ಲ. ಪಾತಂಜಲ ಮಹರ್ಷಿ ಹೇಳುತ್ತಾರೆ, "ಮನಸ್ಸಿಗೆ ಸತ್ಯ ಸುಳ್ಳು ಎರಡು ಬಂದರೆ ಮನಸ್ಸು ಹೊಡೆಯುತ್ತದೆ." ಮನಶಾಸ್ತ್ರಜ್ಞರು ಸ್ಪ್ಲಿಟ್ ಪರ್ಸನಾಲಿಟಿ ಎನ್ನುವರು. "ಮನಸ್ಸು ಎರಡು ರೀತಿ ಕೆಲಸ ಮಾಡುವುದರಿಂದ ನಮ್ಮಲ್ಲಿ ಸಮಾಧಾನ ಮರೆಯಾಗುತ್ತದೆ. ವ್ಯಕ್ತಿತ್ವ ಒಡೆದು ಎರಡು ಆಗಬಾರದು. ಒಂದು ಮನಸ್ಸು ಸರಿ ಎನ್ನುತ್ತದೆ. ಇನ್ನೊಂದು ತಪ್ಪು ಅನ್ನುತ್ತದೆ. ಆಗ ಸಮಾಧಾನ ಎಲ್ಲಿ ಬರುತ್ತದೆ. ಎರಡು ಪರಸ್ಪರ ವಿರೋಧ ಅಂಶಗಳು, ಮನಸ್ಸನ್ನು ಪ್ರವೇಶ ಮಾಡಬಾರದಿದ್ದರೆ, ಸತ್ಯ ತಿಳಿಸಿಕೊ, ಸಂಶೋಧಿಸು, ಪ್ರೀತಿಸು, ಅನುಭವಿಸು. ಜಗತ್ತಿಗಾಗಿ ಸತ್ಯಅಲ್ಲ. ಆಂತರಿಕ ಸಂತೋಷಕ್ಕಾಗಿ ಸತ್ಯಬೇಕು. ಮನಸ್ಸು ಅಖಂಡವಾಗಿರಬೇಕು. ಮನಸ್ಸು ಒಡೆದರೆ ಎರಡೆರಡು ಕಾಣಲು ಶುರುವಾಗುತ್ತದೆ. ಕನ್ನಡಿ ಚೂರಾದರೆ ಪ್ರತಿ ಚೂರಿನಲ್ಲೂ ಪ್ರತಿಬಿಂಬ ಕಾಣುತ್ತದೆ. ಹಾಗೆ ಇದಕ್ಕೆ ಒಳಗೊಂದು ಭಾವ, ಹೊರಗೊಂದು ಭಾವ. ಹೇಳೋದೊಂದು ಮಾಡೋದೊಂದು. ಕೆಲವರು ಮನೆಯಲ್ಲಿ ಒಂದು ತರಹ, ಕೆಲಸದ ಸ್ಥಳದಲ್ಲಿ ಮತ್ತೊಂದು ತರಹ ಇರುತ್ತಾರೆ. ಸತ್ಯ ನುಡಿದರೆ ಮನಸ್ಸು ಅಖಂಡವಾಗಿರುತ್ತದೆ. ಮನಸ್ಸಿನ ಹೊಯ್ದಾಟ ಕಡಿಮೆ ಆಗುತ್ತದೆ. ಒಬ್ಬೊಬ್ಬರು ಒಂದೊಂದು ವಸ್ತುವನ್ನು ನೋಡಿದಾಗ, ಒಂದೊಂದು ರೀತಿ ಕಾಣುತ್ತದೆ. ಅಂದರೆ ಅವರ ದೃಷ್ಟಿಯಲ್ಲಿ ಅದು ಸರಿ. ನಮ್ಮ ದೃಷ್ಟಿಯಲ್ಲಿ ಇದು ಸರಿ. ಹೀಗೆ ಆಲೋಚಿಸಬೇಕು. ನಮ್ಮದೇ ಖರೆ ಎಂದರೆ ಜಗಳ ಶುರುವಾಗುತ್ತದೆ. ಹೆಂಗಸರ ದೃಷ್ಟಿಯಲ್ಲಿ ಒಂದು ವಸ್ತು ಒಂದು ರೀತಿ, ಪುರುಷರ ದೃಷ್ಟಿಯಲ್ಲಿ ಅದೇ ವಸ್ತು ಬೇರೆ ರೀತಿ. ಬೇರೆ ಬೇರೆ ಅಂತ ಒಪ್ಪಿಕೊಂಡರೆ ಸಮಾಧಾನ ಉಂಟಾಗುತ್ತದೆ. ಇನ್ನೊಬ್ಬರ ದೃಷ್ಟಿಯನ್ನು ಗೌರವಿಸಬೇಕು. ವಸ್ತುಗಳ ಆಕರ್ಷಣೆಗೆ ಒಳಗಾಗಿ ಒಳಗಾದರೆ ನಾವು ಸತ್ಯದಿಂದ ದೂರ ಸರಿಯುತ್ತೇವೆ ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article