-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 123

ಸ್ಫೂರ್ತಿಯ ಮಾತುಗಳು : ಸಂಚಿಕೆ - 123

ಸ್ಫೂರ್ತಿಯ ಮಾತುಗಳು : ಸಂಚಿಕೆ - 123
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

       

    ಜೀವನೋನ್ನತಿಯು ಪೂರ್ವಕರ್ಮದ ಫಲ ಎಂದು ನಂಬುವವರಿದ್ದಾರೆ. ಪೂರ್ವಜನ್ಮ ಇತ್ತೇ? ಆ ಜನ್ಮದ ಕೆಟ್ಟ ಫಲಗಳು ಮುಂದಿನ ಜನ್ಮಕ್ಕೂ ವರ್ಗಾವಣೆಯಾಗುತ್ತವೆಯೇ ಎಂಬುದಕ್ಕೆ ಸಾಕ್ಷ್ಯಾಧಾರಿತ ಉತ್ತರ ದುರ್ಲಭ. ಯಾವುದಾದರೂ ಹಾರಿಕೆಯ, ಜಾಣ್ಮೆಯ ಅಥವಾ ಕುರುಡು ಉತ್ತರ ಸಿಗಬಹುದು. ಆದರೆ ಜೀವನೋನ್ನತಿಯು ವ್ಯಕ್ತಿಯೊಬ್ಬನ ಕಾರಣದಿಂದಲೇ ಆಗುವುದಿಲ್ಲ. ಅವನ ಬೆಳವಣಿಗೆಯಲ್ಲಿ ಅಸಂಖ್ಯ ಪಾತ್ರಧಾರಿಗಳಿರುತ್ತಾರೆ. ಹೆತ್ತವರು, ಒಡಹುಟ್ಟಿದವರು, ಬಂಧುಗಳು, ನೆರೆಹೊರೆಯವರು, ಸಮಾಜ, ಸಂಸ್ಥೆಗಳು, ಸರಕಾರ ಹೀಗೆ ಹಲವರ ಪರಿಶ್ರಮ ಜೋಡಣೆಯಾಗದೆ ಯಾರ ಜೀವನೋನ್ನತಿಯೂ ಆಗದು. ಜೀವನೋನ್ನತಿಗೆ ಕಾರಣಕರ್ತರಾದವರ ಕಾರ್ಯ ಮತ್ತು ಕಾರ್ಯಕ್ರಮಗಳು ವಿಫಲತೆಯತ್ತ ಉರುಳಿದರೆ ಜೀವನದ ಅವನತಿಯೇ ಸಿದ್ಧ. ಕಾರ್ಯವು ದೀರ್ಘಾವಧಿಗೆ ಸಂಬಂಧಿಸಿದೆ. ಕಾರ್ಯಕ್ರಮ ಸೀಮಿತ ಅವಧಿಯೊಳಗೆ ಮುಗಿಯುತ್ತದೆ. ಕೃಷಿಯು ಒಂದು ಕಾರ್ಯವಾದರೆ ಗಿಡ ನೆಡುವುದು ಒಂದು ಕಾರ್ಯಕ್ರಮ. ಕಾರ್ಯಕ್ರಮವು ಕಾರ್ಯದ ಒಂದು ಭಾಗ. ಶಿಕ್ಷಣವು ಒಂದು ಕಾರ್ಯ. ಪರೀಕ್ಷೆ ಒಂದು ಕಾರ್ಯಕ್ರಮ, ಕಾರ್ಯ ಮತ್ತು ಕಾರ್ಯಕ್ರಮಗಳು ಕಾರ್ಯಕರ್ತರ ಪರಿಶ್ರಮದಿಂದ ಅತ್ಯುತ್ತಮವಾದರೆ ಫಲಾನುಭವಿಗಳ ಜೀವನೋನ್ನತಿಯು ಸಾಧ್ಯವಾಗುತ್ತದೆ.
     ಇದೇ ಮಾರ್ಚ್ ಎರಡನೇ ವಾರದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಮಾತನಾಡಿಸಿದೆ. ಅವಳು ಆರನೇ ತರಗತಿ. ಸಹಜವಾಗಿ ಪರೀಕ್ಷಾ ಸಮಯವಾದುದರಿಂದ, “ನಿನಗೆ ಓದಲು ಇದೆಯಲ್ಲ? ನಾಳೆ ಯಾವ ಪರೀಕ್ಷೆ?” ಎಂದೆ. ಮರುದಿನ ನಡೆಯುವ ಪರೀಕ್ಷೆಯ ವಿಷಯ ಹೇಳಿದಳು. “ಈ ದಿನ ರಾತ್ರಿ ಎಂಟು ಘಂಟೆಯಿಂದ ಒಂಭತ್ತು ಘಂಟೆ ತನಕ ಓದುವೆ. ಈಗಲೇ ಓದಿದರೆ ನಾಳೆಗೆ ಮರೆತು ಹೋಗಬಹುದು” ಎಂದಳಾಕೆ. “ಕೇವಲ ಒಂದು ಘಂಟೆಯಲ್ಲಿ ಓದಿ ಮುಗಿಯುತ್ತದೆಯೇ? ತುಂಬಾ ಪಾಠಗಳಿವೆಯಲ್ಲ?” ಎಂದು ನಾನು ಹೇಳಿದಾಗ, ಆಕೆ ನೀಡಿದ ಉತ್ತರ ಶಿಕ್ಷಕನಾಗಿದ್ದ ನನಗೆ ಬೆವರನ್ನಿಳಿಸಿತು. “ಎಂಟು ಪ್ರಶ್ನೆಗೆ ಉತ್ತರ ಹೊಂದಿಸಲು ನಾಲ್ಕು ನಿಮಿಷ, ಬಿಟ್ಟ ಪದ ತುಂಬಿಸಲು, ಇಪ್ಪತ್ತು ನಿಮಿಷ ಮತ್ತು ಒಂದು ಪತ್ರ ಬರೆಯುವ ಅಭ್ಯಾಸ ಮಾಡಲು ಅರ್ಧ ಘಂಟೆ, ಒಟ್ಟು ಒಂದು ಘಂಟೆ ಸಾಲದೇ?” ಎಂಬುದೇ ನನ್ನನ್ನು ಕಕ್ಕಾ ಬಿಕ್ಕಿಗೊಲಿಸಿದ ಆಕೆಯ ಉತ್ತರ. ಎಲ್ಲ ಶಿಕ್ಷಕರೂ ಹೀಗೆ ಮಾಡುವರೆಂದು ಹೇಳುವಂತಿಲ್ಲವಾದರೂ ಒಬ್ಬಿಬ್ಬರು ಇಂತಹವರು ರಾಶಿಯಲ್ಲಿದ್ದರೆ ರಾಶಿಯು ಹಾಳಾಗದಿರಬಹುದೇ? ಶಿಕ್ಷಣವು ಮಗುವಿನ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಬೇಕು. ಹಿಂದಿನ ದಿನ ಮರುದಿನದ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಮಾಹಿತಿಯನ್ನು ಸಾರ್ವಜನಿಕಗೊಳಿಸಿದರೆ ಮಕ್ಕಳ ಭವಿಷ್ಯ ಏನಾಗಬಹುದು ಎಂಬುದೇ ನನ್ನನ್ನು ಕಾಡಿದ ಸಮಸ್ಯೆ. ಜೀವನೋನ್ನತಿಯಲ್ಲಿ ಶಿಕ್ಷಣದ ಭಾಗೇದಾರಿಕೆಯೇ ಮಹತ್ವಪೂರ್ಣವಾದುದು ಎಂಬ ಅರಿವು ಜಾರಿದರೆ ಹೇಗೆ..?
     ನಾನು ಮಾತನಾಡಿಸಿದ್ದ ಅದೇ ಮಗುವಿನಲ್ಲಿ ಫಲಿತಾಂಶದ ಕೆಲದಿನಗಳ ನಂತರ ಮಗದೊಮ್ಮೆ ಮಾತನಾಡಿಸಿದರೆ ಆಕೆ, “PASS” ಮತ್ತು ಪಡೆದ ಅಂಕ “97%”. ಪರಿಶ್ರಮ ಪಡದೆ ಮಗುವಿಗೆ ಉತ್ತಮ ಫಲಿತಾಂಶ ಸಿಕ್ಕಿರಬಹುದಾದರೂ, ಹೆತ್ತವರಿಗೆ ಮಕ್ಕಳ ಸಾಧನೆ ಖುಷಿ ತಂದಿರಬಹುದಾದರೂ ಅದರ ಗುಣಾತ್ಮಕತೆಯೇನು? ಈ ತೃಪ್ತಿ ಶಾಶ್ವತವೇ? ಮಗುವಿನ ಭವಿಷ್ಯದ ದಿನಗಳು ಅದನ್ನು ಉನ್ನತ ಸ್ಥಿತಿಗೊಯ್ಯಲು ಸಾಧ್ಯವೇ. ಪರೀಕ್ಷೆಯಲ್ಲಿ ಅಸಮರ್ಪಕತೆಯಿದ್ದರೂ ನಾನು ಹೇಳುವ ಆ ಶಿಕ್ಷಕ ಯಾ ಶಿಕ್ಷಕಿ ಉತ್ತಮ ಶೈಕ್ಷಣಿಕ ಕಾರ್ಯ ಮಾಡಿರ ಬಹುದೆಂದು ಊಹಿಸಿದರೂ ಇಡೀ ಕಾರ್ಯದ ಫಲವು ಪರೀಕ್ಷಾ ಕಾರ್ಯಕ್ರಮದ “ಗೋಲ್ ಮಾಲ್” ನಲ್ಲಿ ನೀರಿನ ಮೇಲಿಟ್ಟ ಹೋಮದಂತಲ್ಲವೇ...?  
       ಇಂದು ಅಂಕಗಳನ್ನು ಯಾರೂ ಗಮನಿಸುವುದಿಲ್ಲ. ಅಂಕ ಪಟ್ಟಿ ತಿಜೋರಿಯೊಳಗೆ ದಾಸ್ತಾನಿಗೆ ಮಾತ್ರವೇ ಸೀಮಿತ. ಮುಂದಿನ ವ್ಯಾಸಂಗಕ್ಕೆ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಪಡೆಯುವ ತನಕವಷ್ಟೇ ಅಂಕಗಳಿಗೆ ಜೀವಿತ. ಮುಂದೆ ಉತ್ತಮ ಉದ್ಯೋಗ ಪಡೆಯಲು ಅಂಕಗಳಾಗಲೀ, ಶ್ರೇಣಿಯಾಗಲೀ ನೆರವೀಯವು. ಅದಕ್ಕೆ ಪ್ರತ್ಯೇಕ ಪ್ರವೇಶ ಪರೀಕ್ಷೆ, ಸಂದರ್ಶನ, ಪ್ರದರ್ಶನಗಳೆಲ್ಲವೂ ನಡೆಯುತ್ತವೆ. ಈ ಸಂದರ್ಭದಲ್ಲಿ ಜ್ಞಾನದ ಗಟ್ಟಿಗತನ, ನವೀನ ಚಿಂತನೆಗಳು, ಭಾವನೆಗಳು, ಕೌಶಲ್ಯಗಳಷ್ಟೇ ಉಪಯೋಗಕ್ಕೆ ಬರುತ್ತವೆ. ಇವೆಲ್ಲದಕ್ಕೂ ಶಿಕ್ಷಣ ಕಾರ್ಯ ಮತ್ತು ಕಾರ್ಯಕ್ರಮಗಳು ಅತ್ಯಂತ ಸುಸಂಗತ ಮತ್ತು ಪ್ರಾಮಾಣಿಕವಾಗಿರಬೇಕು. ಜೀವನೋನ್ನತಿಯು ಶಿಕ್ಷಣ ಕಾರ್ಯಕರ್ತರ ಬದ್ಧತೆಯನ್ನೂ ಆಧರಿಸಿರುತ್ತದೆ. ವ್ಯಕ್ತಿಯ ಅನಿಯಂತ್ರಿತ ಮತ್ತು ವ್ಯಾಪಕ ಪರಿಶ್ರಮವನ್ನೂ ಆಧರಿಸಿರುತ್ತದೆ.
      ಗುಣಮಟ್ಟದ ಕಲಿಕೆ, ಮೌಲ್ಯಯುತ ಬದುಕು ಕಟ್ಟುವ ಕಲೆಯು ಶಿಕ್ಷಣಕಾರ್ಯದ ಮಹಾ ಸೋಪಾನ. ಈ ಉದ್ದೇಶದ ತಳಹದಿಯಲ್ಲಿ ಬೋಧನಾ ಕಾರ್ಯಕ್ರಮ, ಕಲಿಕಾ ಕಾರ್ಯಕ್ರಮ, ಮೌಲ್ಯಮಾಪನ ಕಾರ್ಯಕ್ರಮ ಶಿಸ್ತುಬದ್ಧವಾಗಿ, ನಿಯಮಬದ್ಧವಾಗಿ, ಪ್ರಾಮಾಣಿಕವಾಗಿ ಸಾಗದೇ ಇದ್ದರೆ ಜೀವನೋನ್ನತಿಯು ಭವಿಷ್ಯದ ಫಲವಾಗದು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** Ads on article

Advertise in articles 1

advertising articles 2

Advertise under the article