ಮಕ್ಕಳ ಲೇಖನ : ಬಾಲ್ಯವ ನೆನಪಿಸಿದ ಜಾತ್ರೆ... ರಚನೆ : ಶರ್ಮಿಳಾ ಕೆ.ಎಸ್, 10 ನೇ ತರಗತಿ
Friday, July 5, 2024
Edit
ಮಕ್ಕಳ ಲೇಖನ : ಬಾಲ್ಯವ ನೆನಪಿಸಿದ ಜಾತ್ರೆ...
ರಚನೆ: ಶರ್ಮಿಳಾ ಕೆ.ಎಸ್
10 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
ದಿನ ಬೆಳಗಾದರೆ ಶಾಲೆಗೆ ಹೊರಟುಕೊಂಡು ಬಸ್ಸಿಗಾಗಿ ಕಾಯುವ ದಿನಚರಿ ಎಲ್ಲ ವಿದ್ಯಾರ್ಥಿಗಳದ್ದು. ಆದರೆ ಸಾಲಿಗ್ರಾಮ ಹಬ್ಬ ಬಂತೆಂದರೆ ನಮ್ಮ ತರಗತಿಯವರಿಗೆಲ್ಲ ಖುಷಿಯಾಗುತ್ತಿತ್ತು. ಕಾರಣ, ಆವಾಗ ನಮ್ಮ ವಿವೇಕ ಬಾಲಕಿಯರ ಪ್ರೌಢಶಾಲೆಗೆ ರಜೆ ಸಿಗುತಿತ್ತು. ನನಗೇನೂ ಖುಷಿಯಾಗುತ್ತಿರಲಿಲ್ಲ. ಏಕೆಂದರೆ ಶಾಲೆಗೆ ರಜೆ ಸಿಕ್ಕಿದರೆ ನಾನು ನನ್ನ ನೆಚ್ಚಿನ ಗುರುಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಅಂದಿನ ಆ ದಿನ ಸಾಲಿಗ್ರಾಮ ಜಾತ್ರೆಯ ದಿನ. ಪೂರ್ವ ದಿಕ್ಕಿನಲ್ಲಿ ಕೆಂಪು ಬಣ್ಣದಿ ಚೆಂಗುಡುವ ನೇಸರ ಕಿರಣಗಳನ್ನು ಸೂಸುತ್ತಾ ಮೇಲೆ ಬರುತ್ತಿದ್ದನು. ಜೊತೆಗೆ ಬಾನಾಡಿಗಳ ಮನೋಹರವಾದ ಚಿಲಿಪಿಲಿ ಹಾಡು ಕೇಳುತ್ತಿತ್ತು. ನೋಡಿದರೆ ಆಗಲೇ ಬೆಳಗ್ಗೆ ಆಗಿತ್ತು. ನನ್ನ ತಂದೆಯವರು ದೇವಸ್ಥಾನಕ್ಕೆ ಹಣ್ಣು ಕಾಯಿ ಸೇವೆ ಮಾಡಲು ಹೋಗಿದ್ದರು. ನಾನು ಮನೆಯಲ್ಲಿ ಇದ್ದೆ. ನನಗೆ ಒಂದೇ ಕೆಲಸ, ನನ್ನ ಗೆಳತಿಯರಿಗೆ ಕರೆ ಮಾಡಿ ಯಾವ ಡ್ರೆಸ್ ಹಾಕಿಕೊಂಡು ಬರುವೆ? ಯಾವಾಗ ಬರುವೆ? ಎಂದು. ಆದರೆ ನನ್ನ ಅಮ್ಮ ಮನೆ ಕೆಲಸಗಳನ್ನೆಲ್ಲ ಮಾಡುತ್ತಿದ್ದರು. ನಾನು ಗೆಳತಿಯರೊಂದಿಗೆ ಮಾತನಾಡಿದ ಬಳಿಕ ಅಮ್ಮನಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಹೋದೆನು. ಬೇರೆ ದಿನಗಳಲ್ಲಿ ನಾನು ಮಾಡುವ ಸಹಾಯ ಒಂದು ರೀತಿಯದಾದರೆ ಅಂದು ಮಾಡಿದ ಸಹಾಯ ಬೇರೆ ರೀತಿಯದು. ಆ ದಿನ ರಾತ್ರಿ ಜಾತ್ರೆಗೆ ಹೋದಾಗ ಅಮ್ಮ ಕೇಳಿದ್ದನೆಲ್ಲ ತೆಗೆದುಕೊಡಬೇಕಲ್ಲ ಆದ್ದರಿಂದ ಸ್ವಲ್ಪ ಜಾಸ್ತಿ ಸಹಾಯ ಮಾಡಿದೆ. ಅಂತೂ ಇಂತೂ ಕಾದು ಕಾದು ರಾತ್ರಿ ಆಗಿಯೇ ಬಿಟ್ಟಿತು. ನಾನು ನನ್ನ ತಂದೆ, ತಾಯಿ ಮೂವರು ಬೈಕ್ ನಲ್ಲಿ ಜಾತ್ರೆಗೆ ಹೊರಟೆವು. ಆಗಲೇ ಭಯವಾಗಲು ಶುರುವಾಯಿತು. ಏಕೆಂದರೆ ನಾವು ಪಾಂಡೇಶ್ವರದಿಂದ ಸಾಲಿಗ್ರಾಮ ಜಾತ್ರೆಗೆ ಹೋಗಬೇಕಾದರೆ ಸಾಸ್ತಾನ ಟೋಲ್ ಗೇಟ್ ದಾಟಿ ಹೋಗಬೇಕು. ಇಲ್ಲಿ ನನಗೆ ಭಯದ ಸಂಗತಿ ಏನೆಂದರೆ ಅಲ್ಲಿ ರಾತ್ರಿ ಸಂಜೆ ಸಂಚರಿಸುವ ದೊಡ್ಡ ವಾಹನಗಳ ತನಿಖೆ ಮಾಡಲು ಪೊಲೀಸ್ ಇರುತ್ತಿದ್ದರು. ನನ್ನ ಭಯ ಅದಲ್ಲ. ಎಲ್ಲಿಯಾದರೂ ಪೊಲೀಸ್ ನಾವು ಮೂರು ಜನ ಒಂದೇ ಬೈಕ್ ಅಲ್ಲಿ ಹೋಗುವುದನ್ನು ನೋಡಿದರೆ ಜಾತ್ರೆಗೆ ಖರ್ಚಾಗುವ ಹಣ ಟೋಲ್ ಅಲ್ಲಿ ಪೊಲೀಸ್ ಅಂಕಲ್ ನ ಕಿಸೆಗೆ ಹೋಗತ್ತೋ ಏನೋ...! ಎಂದು. ತಕ್ಷಣ ಬಾಯಿಗೆ ಬಂದ ದೇವರನ್ನು ನೆನಪು ಮಾಡಿಕೊಂಡೆ. ಮನದೊಳಗೆ ''ದೇವರೇ ಪೊಲೀಸ್ ಇರಬಾರದಪ್ಪ'' ಎಂದು ಪ್ರಾರ್ಥಿಸಿಕೊಂಡೆ. ಅಂದು ನನಗೆ ಅದೃಷ್ಟವಿತ್ತೋ ಏನೋ ಪ್ರತಿದಿನ ಇರುತ್ತಿದ್ದ ಪೊಲೀಸ್ ಅಂದು ಇರಲಿಲ್ಲ. ಅಂತೂ ಕೊನೆಗೆ ಸಾಲಿಗ್ರಾಮ ಜಾತ್ರೆಗೆ ಬಂದೆವು. ಅಪ್ಪ ಗಾಡಿ ಪಾರ್ಕಿಂಗ್ ಮಾಡಿ ಬಂದಾದ ಮೇಲೆ ನಾವು ಒಟ್ಟಿಗೆ ಒಳಗೆ ತೆರಳಿದೆವು. ಕಣ್ಣಿಗೆ ಮುದ ನೀಡುವಂತೆ ಜಾತ್ರೆ ಸಿದ್ಧವಾಗಿತ್ತು. ಬಣ್ಣ ಬಣ್ಣದ ಲೈಟುಗಳಿಂದ ಅಲಂಕೃತವಾದ ವಿವಿಧ ಪ್ರದೇಶಗಳು, ವಿವಿಧ ಬಗೆಯ ಅಂಗಡಿಗಳು, ತಿಂಡಿ ತಿನಿಸುಗಳ ಅಂಗಡಿಗಳು, ಆಟದ ಸಾಮಗ್ರಿಗಳು, ಇನ್ನು ಹಲವಾರು ಅಂಗಡಿಗಳು ಇದ್ದವು. ನನಗೆ ಬೇಕಾಗಿದ್ದ ಕೆಲವು ವಸ್ತುಗಳನ್ನು ತೆಗೆದುಕೊಂಡ ನಂತರ ಶಾಲೆಯ ಗೆಳತಿಯರು ಸಿಕ್ಕಿದರು. ಅವರೊಂದಿಗೆ ಹರಟೆ ಹೊಡೆದನು. ನಂತರ ಆಟದ ಪ್ರದೇಶದಲ್ಲಿ ಆಟವಾಡಲು ಸರದಿಯಲ್ಲಿ ಕಾಯುತ್ತಾ ನಿಂತಿರುವ ನಮ್ಮ ಶಾಲೆಯ ಶಿಕ್ಷಕರನ್ನು ತೋರಿಸಿ ಅವರು ಆ ಮೇಡಂ. ಇವರು ಈ ಮೇಡಂ. ಮಕ್ಕಳ ಮನಸನು ಹೊಂದಿರುವ ಶಿಕ್ಷಕರು... ಎಂತಹ ವಿಪರ್ಯಾಸ ಅಲ್ಲವೆ...?ಎಂದು ಅಮ್ಮನಿಗೆ ಪರಿಚಯಿಸುತ್ತಾ ಇರಬೇಕಾದರೆ ಅವರು ಯಾರು? ಅವರನ್ನು ಎಲ್ಲಿಯೋ ನೋಡಿದ್ದೇನೆ ಅಲ್ಲ...? ಎಂದು ಅನ್ನಿಸಿತು. ನೋಡಿದರೆ ಅವರು ನನ್ನ ಗೆಳತಿಯಂತೆ ಕಾಣಿಸುತ್ತಿದ್ದರು. ಆದರೂ ಅದು ಅವಳಲ್ಲ ಅನ್ನಿಸಿತ್ತು. ಆಗಲೇ ನನ್ನ ಗ್ರಹಚಾರ ಕೆಟ್ಟಿತು. ನಾನು ಐಸ್ ಕ್ರೀಮ್ ಕೊಂಡು ತೆರಳುವಾಗ ಅವಳಿಗೆ ಡಿಕ್ಕಿಯಾದೆ. ನೋಡಿದರೆ ಅವರೇ ನಾನು ಅಂದುಕೊಂಡ ಅವಳು...! ಎಂದು ತಿಳಿಯಿತು. ತಡ ಮಾಡಲಿಲ್ಲ ಅವಳನ್ನು ಮಾತನಾಡಿಸಿದೆ. ನಮ್ಮಿಬ್ಬರಿಗೂ ನಮ್ಮ ಬಾಲ್ಯದ ದಿನಗಳ ನೆನಪಾಗಿ ಸ್ವಲ್ಪ ಅದರ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕಾಲ ಕಳೆದೆವು. ನಂತರ ಇಡೀ ಜಾತ್ರೆಯನ್ನೆಲ್ಲ ಸುತ್ತಿಕೊಂಡು ಬಂದೆವು. ಆ ದಿನದ ಸಾಲಿಗ್ರಾಮ ಜಾತ್ರೆ ನನ್ನ ಬಾಲ್ಯದ ಗೆಳತಿಯೊಂದಿಗೆ ನನ್ನ ಒಡನಾಟ ಬೆಳೆಯುವಂತೆ ಮಾಡಿತು. ಆಮೇಲೆ ಖುಷಿಯಿಂದ ನಾವು ಮೂವರು ಕೂಡ ಬೈಕ್ ಏರಿ ನಮ್ಮ ಮನೆಗೆ ಬಂದು ಸೇರಿದೆವು....!
10 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
*******************************************