ಮಕ್ಕಳ ಕಥೆಗಳು - ಸಂಚಿಕೆ : 10 - ಸ್ವರಚಿತ ಕಥೆ : ಸಾತ್ವಿಕ್ ಗಣೇಶ್, 10ನೇ ತರಗತಿ
Friday, July 5, 2024
Edit
ಮಕ್ಕಳ ಕಥೆಗಳು - ಸಂಚಿಕೆ : 10
ಸ್ವರಚಿತ ಕಥೆ : ಸಾತ್ವಿಕ್ ಗಣೇಶ್
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
ಒಂದು ದಟ್ಟವಾದ ಅರಣ್ಯವಿತ್ತು. ಆ ಅರಣ್ಯದಲ್ಲಿ ಸಮೃದ್ಧವಾಗಿ ಗಿಡ ಮರಗಳು ಬೆಳೆದಿದ್ದವು. ನಾನಾತರದ ಕಾಡು ಹಣ್ಣುಗಳು, ಹೂಗಳು ಮತ್ತು ಬಳ್ಳಿ ಮೊದಲಾದವುಗಳು ಇದ್ದವು. ಸಿಂಹ, ಆನೆ, ಹುಲಿ, ಅಳಿಲು, ಮಂಗ ಮೊದಲಾದ ಪ್ರಾಣಿಗಳೂ, ಕಾಗೆ, ಗಿಡುಗ, ಗೂಬೆ, ನವಿಲು ಮೊದಲಾದ ಪಕ್ಷಿಗಳೂ ವಾಸವಾಗಿದ್ದವು. ಇವುಗಳಿಗೆಲ್ಲಾ ಕುಡಿಯಲು ಬೇಕಾದ ಒಂದು ಪ್ರಕೃತಿ ನಿರ್ಮಿತ ಸುಂದರವಾದ ಸರೋವರವು ಇದ್ದಿತು. ಪ್ರಾಣಿ ಪಕ್ಷಿಗಳಿಗೆ ಬೇಕಾದ ಹಣ್ಣು ಹಂಪಲು ಬೇಕಾದಷ್ಟು ಗಿಡ ಮರಗಳಲ್ಲಿ ಬೆಳೆಯುತ್ತಿದ್ದವು. ಹಕ್ಕಿಗಳು ಯಾರ ಭಯವೂ ಇಲ್ಲದೆ ಹಾರಾಡುತ್ತಿತ್ತು. ಪ್ರಾಣಿಗಳೂ ಕೂಡ ಎಲ್ಲೆಂದರಲ್ಲಿ ಸಾಗಿ ಬೇಕಾದಾಗ ಆಹಾರವನ್ನು ತಿಂದು ಸಂತೋಷದಿಂದ ಒಗ್ಗಟ್ಟಿನಲ್ಲಿ ಬಾಳುತ್ತಿದ್ದವು.
ಅರಣ್ಯದಿಂದ ಸ್ವಲ್ಪ ದೂರದಲ್ಲಿ ಒಂದು ಪುಟ್ಟ ಹಳ್ಳಿಯಿತ್ತು. ಅಲ್ಲಿಯ ಜನರು ತುಂಬಾ ಸಂತೋಷದಿಂದ ಇರುವುದರಲ್ಲೇ ತೃಪ್ತಿಯನ್ನು ಪಟ್ಟು ಜೀವನ ಸಾಗಿಸುತ್ತಿದ್ದರು. ಇವರಲ್ಲಿ ಕೃಷಿಕರು, ಬಡಗಿಯರು, ಬುಟ್ಟಿ ಹೆಣೆಯುವವರು ಮೊದಲಾದ ಕುಶಲ ಕರ್ಮಿಗಳು ಇದ್ದರು. ಅವರು ಬಳ್ಳಿ, ಸೌದೆ ತರಲು ಆ ಪಕ್ಕದ ಅರಣ್ಯಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಹೋಗಿ ಬಂದು ಅಲ್ಲಿನ ಹಚ್ಚ ಹಸುರಿನ ಮರ ಗಿಡ ವಿಧ ವಿಧವಾದ ಪ್ರಾಣಿ ಪಕ್ಷಿಗಳ ಬಗ್ಗೆ ಹೇಳುತ್ತಿದ್ದರು. ಅವುಗಳು ನಮಗೆ ತೊಂದರೆ ಕೊಡದೆ ಅವುಗಳ ಪಾಡಿಗೆ ಆಹಾರ ತಿಂದು ಬದುಕುವ ಬಗ್ಗೆ ಹೇಳಿ ಹೊಗಳುತ್ತಿದ್ದರು. ಇದ್ದನ್ನೆಲ್ಲ ಕೇಳಿದ ಕೆಲವು ಯುವಕರು ಅರಣ್ಯಕ್ಕೆ ಜೊತೆಯಾಗಿ ಹೋಗುವ ಬಗ್ಗೆ ಮಾತನಾಡಿಕೊಂಡರು.
ಒಂದು ದಿವಸ ಬೆಳಗ್ಗೆ ಎದ್ದು ಅವರೆಲ್ಲಾ ಜೊತೆಯಾಗಿ ಅರಣ್ಯದ ಕಡೆಗೆ ಹೊರಟರು. ಅಲ್ಲಿಗೆ ಹೋದಾಗ ಅಲ್ಲಿನ ಸುಂದರ ಪರಿಸರದಲ್ಲಿ ಅವರೆಲ್ಲಾ ಸಂತಸದಿಂದ ಕಾಲ ಕಳೆದರು. ಅಲ್ಲಿನ ಸುಂದರ ದೃಶ್ಯವನ್ನು ಆಸ್ವಾದಿಸುತ್ತಾ ಮುಂದೆ ಮುಂದೆ ಸಾಗಿದರು. ಅವರು ನಡೆದು ನಡೆದು ಹಸಿವಾದಾಗ ಅಲ್ಲೇ ಇದ್ದ ಹಣ್ಣುಗಳನ್ನು ತಿಂದರು. ಸ್ವಲ್ಪ ಮುಂದೆ ಸಾಗಿದಾಗ ಸರೋವರವೂ ಅವರ ಕಣ್ಣಿಗೆ ಬಿತ್ತು. ಅದರಿಂದ ತಮ್ಮ ತಮ್ಮ ಬೊಗಸೆಯಿಂದಲೇ ನೀರನ್ನೂ ಕುಡಿದುಕೊಂಡರು. ವಿಶ್ರಾಂತಿಗಾಗಿ ಒಂದು ದೊಡ್ಡ ಮರದ ಕೆಳಗೆ ಕುಳಿತುಕೊಂಡರು. ಕುಳಿತಲ್ಲಿಗೇ ಅವರಲ್ಲಿ ಒಬ್ಬನಿಗೆ ನಾವು ಈ ಮರಗಳನ್ನೆಲ್ಲಾ ಕಡಿದು ಮಾರಾಟ ಮಾಡಿದರೆ ನಮಗೆ ದುಡ್ಡು ಸಿಗಬಹುದು ಮತ್ತು ಖಾಲಿಯಾದ ಜಾಗದಲ್ಲಿ ಕಟ್ಟಡ ನಿರ್ಮಿಸಬಹುದು ಎಂಬ ದುರಾಲೋಚನೆಯು ಹೊಳೆಯಿತು. ಕೂಡಲೇ ಅದನ್ನು ಅವನು ಉಳಿದವರಿಗೆ ಹೇಳಿದನು. ತಡ ಮಾಡದೇ ನಾಳೆ ನಾವು ಬಂದು ನಮ್ಮ ಕೆಲಸ ಪ್ರಾರಂಭಿಸೋಣ ಎಂದು ಹೇಳಿ ಹೊರಟು ಹೋದರು.
ಇವರ ಸಂಭಾಷಣೆಯನ್ನು ಅಲ್ಲೇ ಮರದ ಮೇಲಿದ್ದ ಕೋತಿಯು ಕೇಳಿಸಿಕೊಂಡಿತು. ಅಲ್ಲಿಂದ ಕೂಡಲೇ ಕಾಡಿನ ರಾಜ ಸಿಂಹದ ಬಳಿ ಹೋಯಿತು. ಅಲ್ಲಿ ನಡೆದ ವಿಷಯವನ್ನು ಹೇಳಿತು. ಸಿಂಹವು ಕೂಡಲೇ ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆಯಿತು. ಎಲ್ಲಾ ಪ್ರಾಣಿ ಪಕ್ಷಿಗಳು ಬಂದು ಸಭೆಯಲ್ಲಿ ಆಸೀನರಾದವು. ಸಿಂಹ ಕೋತಿ ಹೇಳಿದ ವಿಷಯವನ್ನು ಹೇಳಿತು. ಇದರಿಂದ ಪ್ರಾಣಿಗಳೆಲ್ಲಾ ಹೆದರಿ ಗದ್ದಲವನ್ನು ಎಬ್ಬಿಸಿದವು. ಇವುಗಳ ಪೈಕಿ ಒಂದು ಚಿಕ್ಕದಾದರೂ ಬುದ್ದಿವಂತ ಅಳಿಲು ಇದ್ದಿತು. ಅದು ಮಾತ್ರ ಕೆಲಕ್ಷಣ ಯೋಚಿಸಿತು. ಅದಕ್ಕೆ ಒಂದು ಉಪಾಯವು ಹೊಳೆಯಿತು. ಯಾರೂ ಕೂಡ ಗಾಬರಿಯಾಗಬೇಡಿ ನಾವೆಲ್ಲಾ ಒಟ್ಟಾಗಿ ಸೇರಿದರೆ ಅವರು ನಮ್ಮನ್ನು ಸರಿಸಿ ಒಂದು ಹೆಜ್ಜೆ ಕೂಡ ಮುಂದೆ ಬರಲಾರರು. ನಾವೆಲ್ಲಾ ಒಟ್ಟಾಗಿ ಸೇರಿದರೆ ಅವರನ್ನು ಓಡಿಸಬಹುದು ಎಂದಿತು. ಒಂದು ಕ್ಷಣ ಯೋಚಿಸಿದ ಪ್ರಾಣಿಗಳು ಹಾಗೆಯೇ ಮಾಡೋಣ ಎಂದು ಒಮ್ಮತದಿಂದ ಎಲ್ಲರೂ ಸಮ್ಮತಿ ಸೂಚಿಸಿದವು.
ಮರುದಿವಸ ಮುಂಜಾನೆ ಬೇಗನೆ ಎದ್ದು ಕೊಡಲಿ, ಯಂತ್ರೋಪಕರಣವನ್ನು ತೆಗೆದುಕೊಂಡು ಯುವಕರು ಹೊರಟರು. ಆಗ ಊರ ಹಿರಿಯರು ನಾವು ಹಾಗೆಲ್ಲಾ ಮೂಕ ಪ್ರಾಣಿಗಳಿಗೆ ತೊಂದರೆ ಕೊಟ್ಟು ಅವರ ಜಾಗವನ್ನು ವಶಪಡಿಸಿ ಕೊಳ್ಳಬಾರದು ಎಂದರು. ಆದರೆ ಯುವಕರು ಅವರ ಮಾತನ್ನು ಕೇಳದೇ ಕಾಡಿಗೆ ಹೋದರು. ಒಮ್ಮಿಂದೊಮ್ಮೆಲೇ ಪೊದೆ, ಗಿಡ ಮರಗಳ ಮೇಲೆ ಕುಳಿತ ಪ್ರಾಣಿ ಪಕ್ಷಿಗಳು ಅವರ ಮೇಲೆರಗಿದವು. ಪಕ್ಷಿಗಳು ಕೊಕ್ಕಿನಿಂದ ಚುಚ್ಚಿದವು, ಪ್ರಾಣಿಗಳು ಉಗುರಿನಿಂದ ಪರಚಿದವು. ಅಲ್ಲಿಂದ ಎದ್ದೆವೋ, ಬಿದ್ದೆವೋ ಎಂಬತೆ ಜೀವ ಉಳಿಸಲು ಓಡಿ ಹೋದರು.
ಹಿರಿಯರ ಮಾತನ್ನು ಕೇಳದೇ ಹೋದುದಕ್ಕೆ ನಮಗೆ ತಕ್ಕ ಶಿಕ್ಷೆಯಾಯಿತು. ಹಿರಿಯರಲ್ಲಿ ನಡೆದ ವಿಷಯವನ್ನು ಹೇಳಿದರು. ನಾವು ತೊಂದರೆ ಕೊಟ್ಟರೆ ಅವುಗಳು ತೊಂದರೆ ಕೊಡುವುದೆಂದು ಈಗಲಾದರೂ ತಿಳಿಯಿತಲ್ಲಾ ಎಂದು ಹಿರಿಯರು ಹೇಳಿದರು. ನಮ್ಮನ್ನು ಕ್ಷಮಿಸಿ ಇನ್ನೆಂದೂ ನಾವು ಕಾಡು ನಾಶಮಾಡಲು ಹೋಗುವುದಿಲ್ಲ ಎಂದು ಹಿರಿಯರಿಗೆ ಮಾತು ಕೊಟ್ಟರು.
ಇತ್ತ ಕಡೆ ಪ್ರಾಣಿ ಪಕ್ಷಿಗಳು ಮೊದಲೇ ನಿರ್ಧರಿಸಿದಂತೆ ಯುವಕರ ಜೀವಕ್ಕೆ ತೊಂದರೆ ಯಾಗದಂತೆ ಓಡಿಸಿದ್ದಕ್ಕೆ ಸಂತಸ ಪಟ್ಟರು. ನಾವೆಲ್ಲಾ ಹೆದರಿ ಕುಳಿತಿದ್ದರೆ ನಮಗೆ ವಾಸಿಸಲು ಸುಂದರವಾದ ಕಾಡು ಇಲ್ಲದಾಗುತ್ತಿತ್ತು. ಅಳಿಲು ಹೇಳಿಕೊಟ್ಟ ಉಪಾಯದಿಂದ ನಮಗೆ ಉಳಿಯಲು ನಮ್ಮ ವಾಸ ಸ್ಥಳ ಉಳಿಯಿತು ಎಂದು ಅಳಿಲಿನ ಬುದ್ಧಿವಂತಿಕೆಯನ್ನು ಪ್ರಾಣಿ ಪಕ್ಷಿಗಳು ಕೊಂಡಾಡಿದವು. ತನಗಿಂತ ಚಿಕ್ಕದಾದ ಅಳಿಲಿನ ಸಮಯ ಪ್ರಜ್ಞೆಯನ್ನು ನೋಡಿ ಸಿಂಹವು ಅದನ್ನು ಅಭಿನಂದಿಸಿತು. ಮತ್ತೆಂದೂ ಕಾಡಿನ ನಾಶಕ್ಕೆ ಅವರು ಇತ್ತ ತಲೆ ಹಾಕಲಿಲ್ಲ. ಪ್ರಾಣಿ ಪಕ್ಷಿಗಳು ಮೊದಲಿನಂತೆ ಸಂತೋಷದಿಂದ ಬಾಳಿದವು. "ನಾವು ಒಗ್ಗಟ್ಟಿನಿಂದ ಇದ್ದರೆ ನಮ್ಮನ್ನು ಸೋಲಿಸಲು ಯಾವ ಶತ್ರುಗಳಿಗೂ ಸಾಧ್ಯವಿಲ್ಲ" ಎಂಬುದನ್ನು ಇದರಿಂದ ಅರಿತುಕೊಳ್ಳಬಹುದು.
......................................... ಸಾತ್ವಿಕ್ ಗಣೇಶ್
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
ಒಂದು ದಿವಸ ಒಬ್ಬ ಬಾಲಕ ಮತ್ತು ಅವನ ಗೆಳೆಯರು ಬೇರೆ ಊರಿಗೆ ಪ್ರವಾಸ ಹೋಗಲು ಹೊರಟರು. ಅವರು ರೈಲು ನಿಲ್ದಾಣ ತಲುಪುವಷ್ಟರಲ್ಲಿ ರೈಲು ಹೊರಟು ಹೋಯಿತು. ಹಾಗಾಗಿ ಅವರು ರೈಲ್ವೆ ನಿಲ್ದಾಣದ ಸಮೀಪದ ಒಂದು ಮನೆಯಲ್ಲಿ ತಂಗಿದರು. ಅಲ್ಲಿ ಅವರಿಗೆ ಚೆನ್ನಾಗಿ ನಿದ್ದೆ ಬಂದಿತ್ತು. ಬೆಳಗಿನ ಜಾವ ಬೇಗನೆ ಎದ್ದುನಿತ್ಯ ಕೆಲಸಗಳನ್ನು ಮುಗಿಸಿ ರೈಲು ಹತ್ತಲು ಹೊರಟರು. ಆಗ ಗೆಳೆಯನು ಇಲ್ಲಿಯ ವಾತಾವರಣ ನೋಡಲು ಖುಷಿಯಾಗುತ್ತದೆ ಎಂದನು. ಅಲ್ಲಿಯ ವಾತಾವರಣ ಖುಷಿಯಿಂದ ಅನುಭವಿಸುತ್ತಾ ಇರುವಾಗ ಒಂದು ಬೆಂಗಳೂರಿನಿಂದ ದೆಹಲಿಗೆ ಹೋಗುವ ಒಂದು ರೈಲು ಬಂತು. ನಂತರ ಆ ರೈಲಿಗೆ ಇವರು ಹತ್ತಿದರು. ಅಲ್ಲಿ ಇಬ್ಬರು ಗೆಳೆಯರು ಕುಳಿತು ಮಾತನಾಡುವಾಗ ಒಬ್ಬ ಗೆಳೆಯ ಒಂದು ಕಥೆ ಹೇಳುತ್ತೇನೆ ಎಂದನು. ಆಗ ಗೆಳೆಯ ಆಯ್ತು ಸರಿ ಎಂದನು.
ಒಂದಾನೊಂದು ಹಳ್ಳಿಯಲ್ಲಿ ಸೋಮು ಎಂಬ ಒಬ್ಬ ಬಡ ಹುಡುಗ ಇದ್ದನು. ಅವನಿಗೆ ತೊಡಲು ಸರಿಯಾದ ಬಟ್ಟೆಯೂ, ತಿನ್ನಲು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತು. ಅವನು ಅಲ್ಲಿ ಪಕ್ಕದಲ್ಲಿರುವ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದನು. ಅವನಿಗೆ ಯಾರು ಸ್ನೇಹಿತರು ಕೂಡ ಇರಲಿಲ್ಲ. ಅಲ್ಲಿ ಎಲ್ಲಾ ಮಕ್ಕಳು ಆಟವಾಡುವಾಗ ಅವನಿಗೆ ಬೇಸರವಾಗುತ್ತಿತ್ತು. ಅವನು ಅವರೊಂದಿಗೆ ಗೆಳೆತನವನ್ನು ಬೆಳೆಸಲು ಹೋದರೆ ಅವನನ್ನು ನೀನು ನಮ್ಮೊಂದಿಗೆ ಬರಬೇಡ ಎಂದು ಎಲ್ಲರೂ ನಗುತ್ತಿದ್ದರು. ಅವನ ಮನೆಯಲ್ಲಿ ಬೇಸರದಿಂದಿರುವಾಗ ಅವನ ಅಮ್ಮನು ಅವನಲ್ಲಿ ...... "ನೀನು ಕಷ್ಟಪಟ್ಟು ಕಲಿ ಮಗನೆ ಇದರಿಂದ ನಿನಗೆ ಖಂಡಿತ ಫಲ ದೊರೆಯುತ್ತದೆ" ಎಂದಳು. ಅವನು ಅಮ್ಮನ ಮಾತಿನಂತೆ ಕಷ್ಟಪಟ್ಟು ಕಲಿಯಲು ಶುರು ಮಾಡಿದನು. ಅವನ ಉತ್ತಮ ನಡತೆಯನ್ನು ಹಾಗೂ ಅವನಲ್ಲಿ ಕಲಿಯಲು ಇರುವ ಆಸಕ್ತಿಯನ್ನು ನೋಡಿ ಅಧ್ಯಾಪಕರ ಮೆಚ್ಚಿನ ಶಿಷ್ಯನಾದನು. ಹಾಗೆ ಇವನು ಯಾವುದೇ ಸ್ನೇಹಿತರೊಡನೆ ಹೋಗದೆ ತಾನು ಕಷ್ಟಪಟ್ಟು ಕಲಿತು ಉತ್ತಮ ಫಲಿತಾಂಶವು ದೊರೆಯಿತು. ಹಾಗೆಯೇ ಉನ್ನತ ಸಂಶೋಧನೆಯನ್ನು ಮಾಡಿ ಮತ್ತೆ ಒಂದು ದಿವಸ ಬಹುದೊಡ್ಡ ವಿಜ್ಞಾನಿಯಾದನು. ಅವನನ್ನು ನೋಡಿ ನಗುತ್ತಿದ್ದವರೆಲ್ಲ ಈಗ ಆಶ್ಚರ್ಯಪಟ್ಟರು. ಈ ಕಥೆಯನ್ನು ಕೇಳಿ ಗೆಳೆಯರಿಗೆ ಮೊದಲಿಗೆ ದುಃಖವಾದರೂ ಕೊನೆಗೆ ಆ ಹುಡುಗನ ಸಾಧನೆ ನೋಡಿ ತುಂಬಾ ಸಂತಸವಾಯಿತು. ನಾವು ಯಾರನ್ನೂ ಕೀಳಾಗಿ ಕಾಣಬಾರದು ಎಂಬುದನ್ನು ತಿಳಿದುಕೊಂಡರು. ಈ ಕಥೆ ಮುಗಿಯುವಷ್ಟರಲ್ಲಿ ಬಾಲಕ ಮತ್ತು ಗೆಳೆಯರಿಗೆ ರೈಲು ಇಳಿಯುವ ಸಮಯವಾಯಿತು. ಅಲ್ಲಿ ಇಳಿದು ಅವರು ಅಲ್ಲಿನ ಪರಿಸರವನ್ನು ವೀಕ್ಷಿಸಲು ಹೊರಟರು. ಇದರಿಂದ ತಿಳಿಯುವುದೇನೆಂದರೆ "ಪ್ರಯತ್ನಕ್ಕೆ ತಕ್ಕ ಪ್ರತಿಫಲ ನಮಗೆ ದೊರೆಯುತ್ತದೆ."
......................................... ಸಾತ್ವಿಕ್ ಗಣೇಶ್
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
"ಸರಿ ನಿನ್ನನ್ನು ನನ್ನ ಅಂಗಡಿಯಲ್ಲಿ ಕೆಲಸಕ್ಕೆ ಇಟ್ಟು ಕೊಳ್ಳುವೆನು. ನಾನು ಹೇಳಿದ ಎಲ್ಲಾ ಕೆಲಸ ಮಾಡಬೇಕು" ಎಂದನು ಭೀಮಪ್ಪ.
ಇದಕ್ಕೆ ತಕ್ಷಣ ಒಪ್ಪಿದ ರಾಮಪ್ಪ .
"ಆಗಾಗ ನಮ್ಮ ಪಕ್ಕದ ಅಂಗಡಿ ಕಿಟ್ಟಪ್ಪ ಬೇರೆ ಊರಿಗೆ ಹೋಗುತ್ತಾನೆ ಆಗ ನೀನು ಆ ಅಂಗಡಿಯಲ್ಲಿ ಕೆಲಸ ಮಾಡಬೇಕು. ಆಗ ನೀನು ನನಗೆ ಲಾಭ ಬರುವಂತೆ ಮಾಡಬೇಕು. ನೀನು ಕಿಟ್ಟಪ್ಪನಿಗೆ ತಿಳಿಯದಂತೆ ಅಲ್ಲಿ ಬಂದ ಹಣದಿಂದ ಸ್ವಲ್ಪ ನನಗೆ ಕೊಡಬೇಕು. ನೀನು ಸಿಕ್ಕಿ ಬಿದ್ದರೆ ಆ ತಪ್ಪನ್ನು ನೀನು ಒಪ್ಪಿಕೊಳ್ಳಬೇಕು. ಒಪ್ಪುವಿಯಾ ? ಎಂದು ಕೇಳಿದ ಭೀಮಪ್ಪ.
ಅಯ್ಯಯ್ಯೋ ನನ್ನಿಂದಾಗದು, ನಾನು ಯಾವತ್ತೂ ಇನ್ನೊಬ್ಬರಿಗೆ ಮೋಸ ಮಾಡಿ ಬದುಕಲು ಸಾಧ್ಯವಿಲ್ಲ. ನನಗೆ ನಿಮ್ಮ ಕೆಲಸವೂ ಬೇಡ ನಿಮ್ಮ ಸಹವಾಸವೂ ಬೇಡ ಎಂದು ಓಡಿದನು ರಾಮಪ್ಪ.
ಆಗ ಅವನ ಹಿಂದೆಯೇ ಓಡಿದ ಭೀಮಪ್ಪನು, ನಿಲ್ಲೂ, ನಿಲ್ಲೂ ಓಡದಿರು ನಿನ್ನನ್ನು ಪರೀಕ್ಷಿಸಲು ಆ ರೀತಿಯಾಗಿ ನಾಟಕವಾಡಿದೆ, ನೀನು ಪಕ್ಕದ ಅಂಗಡಿಗೆ ಹೋಗುವುದು ಏನು ಬೇಡ ನಮ್ಮಲ್ಲಿಯೇ ಕೆಲಸ ಮಾಡು ನನಗೆ ನಿನ್ನಂತಹ ಪ್ರಾಮಾಣಿಕನೇ ಬೇಕಾಗಿತ್ತು. ನೀನು ಇನ್ನು ಮುಂದೆ ನಮ್ಮಲ್ಲಿಯೇ ಕೆಲಸಕ್ಕೆ ಬಾ ಎಂದು ಕರೆದನು.
ಸಂತೋಷದಿಂದ ರಾಮಪ್ಪನು ಕೆಲಸ ಮಾಡಲು ಹೋದನು. ಅಲ್ಲಿಯೇ ಕೆಲವು ಕಾಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿದನು. ಮುಂದೊಂದು ದಿನ ಅವನೂ ಕೂಡ ದೊಡ್ಡ ಸಾಹುಕಾರನಾಗಿ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾಗಿ ಬಾಳಿದನು. ಇದರಿಂದ ತಿಳಿಯುವುದೇನೆಂದರೆ ನಾವು ಪ್ರಾಮಾಣಿಕತೆಯಿಂದ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಬಂದರೂ ಮುಂದೊಂದು ದಿನ ಒಳ್ಳೆಯ ಕಾಲವು ಬರುತ್ತದೆ. ನಾವು ಯಾವಾಗಲೂ ಪ್ರಾಮಾಣಿಕರಾಗಿ ಇರಬೇಕು.
10ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************