-->
ವಿದ್ಯಾರ್ಥಿಗಳು ಮತ್ತು ನೈತಿಕ ಮೌಲ್ಯಗಳು : ಸೃಷ್ಟಿ ಎ ಶೆಟ್ಟಿ ಪ್ರಥಮ ಪಿಯುಸಿ

ವಿದ್ಯಾರ್ಥಿಗಳು ಮತ್ತು ನೈತಿಕ ಮೌಲ್ಯಗಳು : ಸೃಷ್ಟಿ ಎ ಶೆಟ್ಟಿ ಪ್ರಥಮ ಪಿಯುಸಿ

ಮಕ್ಕಳ ಲೇಖನ : ವಿದ್ಯಾರ್ಥಿಗಳು ಮತ್ತು ನೈತಿಕ ಮೌಲ್ಯಗಳು
ರಚನೆ: ಸೃಷ್ಟಿ ಎ ಶೆಟ್ಟಿ 
ಪ್ರಥಮ ಪಿಯುಸಿ (ವಿಜ್ಞಾನ)
ಎಸ್ ಡಿ ಪಿ ಟಿ ಕಟೀಲ್ ಪದವಿ ಪೂರ್ವ ಕಾಲೇಜು
ಮಂಗಳೂರು ಉತ್ತರ ವಲಯ, ದಕ್ಷಿಣ ಕನ್ನಡ ಜಿಲ್ಲೆ

     
   “ಸತ್ಯವದ ಧರ್ಮಂ ಚರ”-- ಎಂಬ ಮಾತನ್ನು ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನು ಉತ್ತಮ ಬಾಳನ್ನು ಬಾಳಬೇಕೆಂದರೆ, ಸತ್ಯ ಮತ್ತು ಧರ್ಮದ ದಾರಿಯಲ್ಲಿ ನಡೆಯಬೇಕಾದರೆ ನೈತಿಕ ಮೌಲ್ಯಗಳ ಅರಿವು ಪಾಲನೆ ಅಗತ್ಯ. ಇತ್ತೀಚಿಗೆ ಹೆಚ್ಚುತ್ತಿರುವ ಹಿಂಸೆ ಕೋಮುವಾದ ಬಾಲಾಪರಾಧಗಳು, ವಿವಾಹ ವಿಚ್ಛೇದನೆ, ಮುಂತಾದವು. ಈಗಿನ ಪೀಳಿಗೆಗೆ ನೈತಿಕ ಮೌಲ್ಯಗಳ ಬಗ್ಗೆ ಹೆಚ್ಚು ತಿಳಿದಿಲ್ಲವಾದ್ದರಿಂದ ಉಂಟಾಗುತ್ತಿರುವ ಸಮಸ್ಯೆಗಳು ಎಂದು ಹೇಳಬಹುದು.
     “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಹಾಗಾಗಿ ಈ ನೈತಿಕ ಮೌಲ್ಯಗಳು ಮೊದಲಿಗೆ ನನ್ನಂತಹ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಆಗ ಮಾತ್ರ ದೇಶ ಉದ್ಧಾರವಾಗುವುದು. ಆದರೆ, ನಾವು “ಇಂದಿನ ಮಕ್ಕಳು ಮುಂದಿನ ಪ್ರಜೆಗಳು” ಎಂಬುದರ ಬದಲಾಗಿ “ಇಂದಿನ ಮಕ್ಕಳು ಇಂದೇ ಪ್ರಜೆಗಳು” ಎಂದು ತಿಳಿದಾಗ ದೇಶವು ಖಂಡಿತವಾಗಿಯೂ ಇಂದಿನಿಂದಲೇ ಪ್ರಗತಿಪಥದಲ್ಲಿ ಸಾಗುವುದರಲ್ಲಿ ಸಂದೇಹವಿಲ್ಲ.
         ವಿದ್ಯಾರ್ಥಿಗಳು ತಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಅವರ ಜೀವನ ಯಶಸ್ವಿಯಾಗಲು ಸಾಧ್ಯ. ಯಾರನ್ನು ನೋಯಿಸದೆ ಯಾವುದೇ ಜಾತಿ, ಪಂಥ, ಧರ್ಮವನ್ನು ಗೌರವಿಸುವಂತಹ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಬದುಕನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬರಬೇಕು. ಉತ್ತಮ ಗುಣ, ವಿನಯಶೀಲತೆ ಸೋಲನ್ನು ಸ್ವೀಕರಿಸುವ ಗುಣ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಎಂತಹ ಸನ್ನಿವೇಶವು ಜೀವನದಲ್ಲಿ ಎದುರಾದರು ಪಾರಾಗಲು ತಿಳಿದುಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಟಿವಿ, ಮೊಬೈಲ್, ಕಂಪ್ಯೂಟರ್ ಗಳ ದಾಸರಾಗುತ್ತಿರುವುದರಿಂದ ಪರಸ್ಪರ ಪ್ರೀತಿ, ಸಹಾಯ, ಸಹಕಾರಗಳನ್ನೇ ಮರೆತುಬಿಟ್ಟಿದ್ದಾರೆ. ಭಾರತವು ಸರ್ವಧರ್ಮಗಳ ರಾಷ್ಟ್ರವಾಗಿದ್ದು ಭೇದ ಭಾವವನ್ನು ಮರೆತು ಸಾಮರಸ್ಯಗಳಿಂದ ಬದುಕುವ ರೀತಿಯನ್ನು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೌದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಪತನ ಆಗಿರುವುದರಿಂದ ಇಂದಿಗೆ ಇಡೀ ವಿಶ್ವದಲ್ಲಿ ಅದರ ಪರಿಣಾಮವನ್ನು ರಷ್ಯಾ ಮತ್ತು ಉಕ್ರೇನ್ ಯುದ್ಧ ಹಾಗೂ ಹಮಾಸ್ ಮತ್ತು ಇಸ್ರೇಲ್ ಯುದ್ಧಗಳಲ್ಲಿ ಕಾಣುತ್ತಿದ್ದೇವೆ.
      ಅಷ್ಟೇ ಅಲ್ಲ, ಸಮಾಜದಲ್ಲಿ ನೋಡಲು ಹೋದರೆ ಇಂದು ನೈತಿಕ ಮೌಲ್ಯಗಳು ನಶಿಸಿಹೋಗಿದ್ದರಿಂದಲೇ ಮನುಷ್ಯ ಮಾದಕ ದ್ರವ್ಯಗಳ ವ್ಯಸನಿಯಾಗಿ ಸಂಬಂಧಗಳ ಮೌಲ್ಯಗಳನ್ನೇ ಕಳೆದುಕೊಂಡಿದ್ದಾನೆ. ತಾಯಿ ತಂಗಿ, ವೃದ್ಧೆ, ಕೂಸು ಎಂದು ನೋಡದೆ ಅವಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲ್ಲುವ ದೃಶ್ಯಗಳು ನಮಗೆ ನೋಡಲು ಸಿಗುತ್ತದೆ. ಹೌದು ಇದಕ್ಕೆ ಯಾರು ಕಾರಣ ? ನೈತಿಕ ಮೌಲ್ಯಗಳ ಪತನ ಅಲ್ಲವೇ ? 
      ಕವಿ ಕಬೀರರು ಹೇಳಿದಂತೆ “ಕೆಟ್ಟ ವ್ಯಕ್ತಿಯನ್ನು ಇಡೀ ಪ್ರಪಂಚದಲ್ಲಿ ಹುಡುಕಲು ಹೋದೆ ಆದರೆ ಆ ಕೆಟ್ಟ ವ್ಯಕ್ತಿ ತನ್ನ ಮನಸ್ಸಿನಲ್ಲಿ ಇದ್ದಾನೆ” ಎನ್ನುವುದನ್ನು ತಿಳಿದುಕೊಂಡೆ. ಹೌದು, ಯಾವುದೇ ಜೀವ ಉಗ್ರರ ಹಿಡಿತದಿಂದಲೂ, ಮಾದಕ ವ್ಯಸನಿಗಳ ಬಲೆಯಿಂದಲೋ, ಸಿಲುಕಿ ರಕ್ಷಣೆ ಹೊಂದಿ ಬದುಕಬೇಕಾದರೆ ಮೊಟ್ಟಮೊದಲು ನಾವು ಬಾಲ್ಯದಿಂದಲೇ ವಿದ್ಯಾರ್ಥಿ ಜೀವನದಿಂದಲೇ ವ್ಯಕ್ತಿಯಲ್ಲಿ ನೈತಿಕ ಮೌಲ್ಯಗಳನ್ನು ತುಂಬಿಸುವ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ಒಳ್ಳೆಯ ಸಮಾಜವನ್ನು ಉಗ್ರರಹಿತ ಪ್ರಪಂಚವನ್ನಾಗಿ ಮಾಡಲು ಸಾಧ್ಯ ಮಾನವೀಯ ಗುಣಗಳನ್ನು ನಮ್ಮದಾಗಿಸೋಣ, ಹೆಣ್ಣಿನ ಜೀವಕ್ಕೆ ಬೆಲೆ ನೀಡೋಣ, ಉತ್ತಮ ನೀತಿಯುಕ್ತವಾದಂತಹ ವ್ಯಕ್ತಿಗಳನ್ನು ವಿದ್ಯಾರ್ಥಿ ಜೀವನದಿಂದಲೇ ಸೃಷ್ಟಿಸೋಣ ಎಂದು ನನ್ನ ಕಳಕಳಿಯ ವಿನಂತಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಕೊಡುವ ಮಹತ್ವವನ್ನು ಜೀವನ ಮೌಲ್ಯಗಳಿಗೆ ಕೊಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಅನಿಸಿಕೆ.
       ಹಿಂದಿನ ಕಾಲದಿಂದಲೂ ಅನೇಕ ಸಂತ ಕವಿಗಳು ದಾಸರು, ಮೌಖಿಕವಾಗಿ ಸಮಾಜವನ್ನು ಸುಧಾರಿಸುವಲ್ಲಿ ಖಂಡಿಸುವಲ್ಲಿ ನೀತಿಯುಕ್ತ ಬೋಧನೆಗಳನ್ನು ಮಾಡುತ್ತಿದ್ದರು. ಬಸವಣ್ಣನವರು, ಸರ್ವಜ್ಞರು, ತುಳಸಿದಾಸರು, ಕಬೀರರು ಹೀಗೆ ಮುಂತಾದ ದಾಸ ಕವಿಗಳು ಸಮಾಜದ ಅಂಕು ಡೊಂಕುಗಳನ್ನು ನೀತಿಯುತವಾದ ವಚನ ಹಾಗೂ ಪದ್ಯಗಳಿಂದ ಸರಿಪಡಿಸಲು ಪ್ರಯತ್ನಿಸಿದ್ದಾರೆ. “ಪ್ರೌಢರು ಸರಿ ಮತ್ತು ತಪ್ಪಿನ ಭೇದಗಳನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತಿಗೊಳಿಸಿ ಕೊಂಡಿದ್ದಾರೆ.” ಮಾನವ ಕ್ರಿಯೆಗಳನ್ನು ಒಳ್ಳೆಯದು ಅಥವಾ ಕೆಟ್ಟದು, ಸರಿ ಅಥವಾ ತಪ್ಪು, ನೈತಿಕ ಅಥವಾ ಅನೈತಿಕ ಎಂದು ಪರಿಗಣಿಸಬಹುದು. ನೈತಿಕತೆಯು ನಮ್ಮ ಸಹವರ್ತಿಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಕಾನೂನಲ್ಲ. ಇದು ಜೀವನ ಶೈಲಿಯ ನಿಯಮವಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬೇಕು. ತನ್ಮೂಲಕ ವಿವಿಧ ಹುದ್ದೆಗಳನ್ನು ಅಲಂಕರಿಸಬೇಕು, ಎನ್ನುವ ಕನಸು ಕಾಣುತ್ತಾರೆ ಅದೇ ರೀತಿ ಉತ್ತಮ ಮೌಲ್ಯಯುಕ್ತ ವ್ಯಕ್ತಿಯಾಗಬೇಕು ಎನ್ನುವ ಕನಸನ್ನು ಕೂಡ ಕಾಣಬೇಕು.
         ಹಿಂದೆ ಒಂದು ಕಾಲವಿತ್ತು. ಆಗ ಎಲ್ಲವೂ ಅವಿಭಕ್ತ ಕುಟುಂಬಗಳೆ. ಮನೆಯ ಹಿರಿಯರು ಮಕ್ಕಳಿಗೆ ಮೌಲ್ಯಯುಕ್ತ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇಂದು ಮೌಲ್ಯಾಧಾರಿತ ಕಥೆ ಹೇಳಲು ಹಿರಿಯರು ದೂರವಾಗಿದ್ದಾರೆ, ಕಥೆ ಕೇಳಲು ಮಕ್ಕಳಲ್ಲಿ ತಾಳ್ಮೆಯು ಇಲ್ಲ. ಅಂದು ಶ್ರೀಮಂತರ ಕೆಲವು ಮಂದಿಗಳ ಕೈಯಲ್ಲಿ ಪುಸ್ತಕಗಳಿದ್ದವು, ಪತ್ರಿಕೆಗಳಿದ್ದವು. ಅಂದಿನ ಮಕ್ಕಳು ಓದಲು ಸಿಗುತ್ತದೆ ಎಂದು ಹುಡುಕಿ ಹೋಗುತ್ತಿದ್ದರು, ಆದರೆ ಇಂದು ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯ, ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಆಗುತ್ತದೆ. ಆದರೆ ಓದುವ ಆಸಕ್ತಿ ಯಾರಲ್ಲಿಯೂ ಇಲ್ಲ, ಅದೇ ಹಿಂದೆ ಮತ್ತು ಇಂದು ಇರುವ ವಿದ್ಯಾರ್ಥಿಗಳಲ್ಲಿರುವ ಮೌಲ್ಯದ ವ್ಯತ್ಯಾಸ. ಹಾಗಾಗಿ ಮೊದಲು ಮನೆಯಿಂದಲೇ ನೈತಿಕ ಮೌಲ್ಯಗಳ ಅರಿವು ಮೂಡಬೇಕಿದೆ. ಆದ ಕಾರಣ ವಿದ್ಯಾರ್ಥಿಗಳು ಅಂತರ್ಜಾಲ ಬಳಕೆ ಮಾಡುವಾಗ ಹಿರಿಯರು ಗಮನಿಸಿ ನೀತಿಯುಕ್ತ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಕಾಣಲು ಈ ಸಮಾಜಕ್ಕೆ ಸಾಧ್ಯವಾಗಬಹುದು.
        “ಇದುವೇ ಈ ದಿನದ ಸಂದೇಶ, ಇದುವೇ ದೇಶ ಸೇವೆಯ ಉದ್ದೇಶ” ಧನ್ಯವಾದಗಳು.  
.............................................. ಸೃಷ್ಟಿ ಎ ಶೆಟ್ಟಿ 
ಪ್ರಥಮ ಪಿಯುಸಿ (ವಿಜ್ಞಾನ)
ಎಸ್ ಡಿ ಪಿ ಟಿ ಕಟೀಲ್ ಪದವಿ ಪೂರ್ವ ಕಾಲೇಜು
ಮಂಗಳೂರು ಉತ್ತರ ವಲಯ, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article