-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 31

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 31

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 31
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
         

ಪ್ರೀತಿಯ ಮಕ್ಕಳೇ..... ಕಳೆದ ವಾರ ಬರೆಯುವಾಗ ಪ್ರಕೃತಿ ಉಳಿತಾಯ ಮಾಡುವಾಗ ವಿಚಿತ್ರ ಸೃಷ್ಟಿ ಮಾಡಿದೆ. ಅಂತಹ ಸೃಷ್ಟಿಗಳಲ್ಲಿ ಅಣಬೆಯೂ ಒಂದು ಎಂದು ಹೇಳಿದ್ದೆ. ಆದರೆ ಲೇಖಕಿ ಮತ್ತು ಶಿಕ್ಷಕಿಯಾದ ಶ್ರೀಮತಿ ವಿಜಯ ಟೀಚರ್ ನನ್ನ ವಾದ ಸರಣಿಯನ್ನು ಒಪ್ಪಲಾಗದು. ಎಲ್ಲವೂ ವಿಜ್ಞಾನದ ಪ್ರಕಾರ ನಡೆಯ ಬೇಕಲ್ಲವೇ ಎಂಬ ವಾದ ಮಂಡಿಸಿದ್ದಾರೆ. ಪ್ರಕೃತಿಯ ವಿದ್ಯಮಾನಗಳಿಗೆ ವಿವರಣೆ ನೀಡುವ ಕೆಲಸ ವಿಜ್ಞಾನ ಮಾಡುತ್ತದೆಯೇ ಹೊರತು ವಿಜ್ಞಾನ ಹೇಳಿದಂತೆ ಪ್ರಕೃತಿಯ ವ್ಯಾಪಾರ ನಡೆಯುತ್ತಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನನ್ನ ವಿಜ್ಞಾನ ಶಿಕ್ಷಕರೆಂದರೆ ಅಮ್ಮ ಮತ್ತು ಅಪ್ಪ. ಅಮ್ಮನಲೋಕ ಅಡುಗೆ ಮನೆಯಾದರೆ ಅಪ್ಪ ಕಲಿಸಿದ್ದು ಬೇಸಾಯದ ಸಮಯ. ನನ್ನ ಅಮ್ಮ ಬೆಳಿಗ್ಗೆ ಗಂಜಿ ಮಾಡುತ್ತಾಳೆ ಕುಕ್ಕರ್ ನಲ್ಲಿ. ಒಮ್ಮೊಮ್ಮೆ ನನಗೆ ತಡವಾಗುತ್ತದೆ ಎಂದರೆ ಕುಕ್ಕರ್ ಅನ್ನು ಬೇಗನೆ ತೆರೆಯಲು ಅದರ ಮೇಲೆ ಒಂದು ಬಟ್ಟೆಯನ್ನಿಟ್ಟು ನಿಧಾನವಾಗಿ ನೀರನ್ನು ಹಾಕುತ್ತಾಳೆ ಅಥವಾ ಕುಕ್ಕರ್ ನ ಭಾರವನ್ನು (weight) ನಿಧಾನವಾಗಿ ಎತ್ತುತ್ತಾಳೆ. ನಾನು ಇದು ಏಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣ ಎಂದು ಬಹಳ ಬಾರಿ ಕೇಳಿಕೊಂಡಿದ್ದೇನೆ. ಏಕೆಂದರೆ ಇದು ವೈಜ್ಞಾನಿಕ ನಿಖರತೆ ಹೊಂದಿದೆ ಎಂದು ಅನುಮಾನವಿದೆ. ಎರಡೂ ಪ್ರಕರಣದಲ್ಲಿ ಒತ್ತಡವನ್ನು ತಗ್ಗಿಸಲಾಗುತ್ತದೆ. ಮೊದಲನೆಯ ಪ್ರಕರಣದಲ್ಲಿ ಗಾತ್ರ ಸ್ಥಿರವಾಗಿದ್ದು ಉಷ್ಣತೆಯನ್ನು ಕಡಿಮೆ ಮಾಡಲಾಗುತ್ತದೆ ಮತ್ತು ಎರಡನೆಯ ಪ್ರಕರಣದಲ್ಲಿ ಉಷ್ಣತೆಯನ್ನು ಸ್ಥಿರವಾಗಿಟ್ಟು ಒತ್ತಡವನ್ನು ಕಡಿಮೆ ಮಾಡಲಾಗುತ್ತದೆ. ಮೊದಲನೆಯ ಪ್ರಕರಣದಲ್ಲಿ ಚಾರ್ಲ್ಸ್‌ನ ನಿಯಮ ಅನ್ವಯವಾದರೆ ಎರಡನೆಯ ಪ್ರಕರಣ ಬಾಯ್ಲನ ನಿಯಮ. ಸರಿ ಹಾಗಾದರೆ ಅದು ವಿಜ್ಞಾನದ ನಿಯಮಕ್ಕೆ ಅನುಗುಣವಾಗಿ ನಡೆಯುತ್ತಿದೆಯಲ್ಲ ಎಂದು ನೀವು ಹೇಳಬಹುದು ಎನ್ನಬಹುದು. ಅದು ನಿಜ ಆದರೆ ವಿಜ್ಞಾನದ ನಿಯಮಗಳನ್ನೇ ಓದದ ನನ್ನಮ್ಮನಿಗೆ ಇದೊಂದು ನೈಸರ್ಗಿಕ ವಿದ್ಯಮಾನ ಅಷ್ಟೇ. ಅದು ಚಾರ್ಲ್ಸ್ ಮತ್ತು ಬಾಯ್ಲ್ ಅದರ ವಿವರಣೆ ನೀಡಿದ್ದೇ ಹೊರತು ಅನಿಲಗಳು ಅವುಗಳ ವಶವರ್ತಿಗಳಲ್ಲ. 

ಹಾಗೆಯೇ ಬೇಳೆ ಬೇಯಿಸುವಾಗ ಮೊದಲೇ ಉಪ್ಪು ಹಾಕಬಾರದು ಮತ್ತು ಪಾಯಸ ಕುದಿಯುವಾಗ ಬೆಲ್ಲ ಅಥವಾ ಸಕ್ಕರೆ ಸೇರಿಸಿದ ಕೂಡಲೇ ಕುದಿಯುವುದು ನಿಂತು ಹೋಗುತ್ತದೆ ಎನ್ನುತ್ತಾಳೆ ನನ್ನಮ್ಮ. ಅದು ಅವಳಿಗೆ ಸಹಜ ಮತ್ತು ಒಂದು ಅಡುಗೆಯ ಅನುಭವ. ನೀವು ಎಲ್ಲಿಯಾದರೂ ಒಂದು ವಿಜ್ಞಾನ ಪುಸ್ತಕ ತೆಗೆದು ಹುಡುಕಿದರೆ ಯಾವುದೇ ಒಂದು ವಸ್ತುವಿನ ಸೇರ್ಪಡೆ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ ಮತ್ತು ಕರಗುವ ಬಿಂದುವನ್ನು ಕಡಿಮೆ ಮಾಡುತ್ತದೆ ಎನ್ನುತ್ತದೆ. ಇದು ವಿಜ್ಞಾನ. ಆದರೆ ಅಮ್ಮನಿಗೆ ಅನುಭವ. ಆಕೆ ರಸಾಯನ ಶಾಸ್ತ್ರವನ್ನಾಗಲೀ ಭೌತಶಾಸ್ತ್ರವನ್ನಾಗಲೀ ಓದಿಲ್ಲ.

ಈ ನಿಸರ್ಗ ಅಥವಾ ಪ್ರಕೃತಿ ಒಬ್ಬ ಅತ್ಯುತ್ತಮ ಇಂಜಿನಿಯರ್ ಮಾತ್ರವಲ್ಲ ಅತ್ಯುತ್ತಮ ವಿನ್ಯಾಸಗಾರ ಕೂಡಾ. ಎಲ್ಲ ಪ್ರಾಣಿಗಳನ್ನು ಚತುಷ್ಪಾದಿಗಳನ್ನಾಗಿ ಮಾಡಿದ. ಆದರೆ ಮಾನವನನ್ನು ದ್ವಿಪಾದಿಯನ್ನಾಗಿ ಮಾಡಿ ಎರಡು ಕೈಗಳಿಗೆ ಆಯುಧ ಹಿಡಿಯುವ ಸಾಮರ್ಥ್ಯ ಕೊಟ್ಟ. ಇದು ಮನುಷ್ಯ ಕೇಳಿ ಪಡೆದದ್ದಲ್ಲ ಪ್ರಕೃತಿ ಕೊಟ್ಟದ್ದು. ಚಕ್ರದ ಅನ್ವೇಷಣೆ ಮನುಕುಲದ ಒಂದು ಕ್ರಾಂತಿಕಾರಿ ಆವಿಷ್ಕಾರ ಎಂದು ಹೇಳುತ್ತೇವೆ. ಆದರೆ ಪ್ರಕೃತಿ ಪ್ರಾಣಿಗಳ ಕಾಲುಗಳಿಗೆ ಚಕ್ರವನ್ನೇಕೆ ಕೊಟ್ಟಿಲ್ಲ ಎಂದು ತುಂಬಾ ಬಾರಿ ಯೋಚಿಸಿದ್ದೇನೆ. ಚಕ್ರಗಳಿಗೆ ಒಂದು ದೌರ್ಬಲ್ಯವಿದೆ. ಚಕ್ರಗಳು ತಮ್ಮ ತ್ರಿಜ್ಯದ ಅರ್ಧಕ್ಕಿಂತ ಹೆಚ್ಚು ಆಳವಾದ ಗುಂಡಿಗೆ ಬಿದ್ದರೆ ತಾವಾಗಿ ಮೇಲೆ ಬರಲಾರವು. ನೀವೇ ಎತ್ತಿ ಇಡಬೇಕಷ್ಟೆ. ಮಾನವನ ಕಾಲಿಗಾದರೆ ದೊಡ್ಡ ಚಕ್ರ ಜೋಡಿಸಬಹುದು. ಆದರೆ ಇರುವೆಯ ಕಾಲಿಗೆ ಚಕ್ರ ಜೋಡಿಸಿದ್ದರೆ ಅದು ಅಷ್ಟೊಂದು ಚಿಕ್ಕದಾಗಿರಬೇಕು. ಅಂದರೆ ನಮ್ಮ ಇರುವೆ ಎಲ್ಲಿಗೂ ಹೋಗುವಂತೆಯೂ ಇಲ್ಲ. ಪಕ್ಷಿಗಳ ಎದೆ ದೋಣಿಯ ಆಕಾರದಲ್ಲಿರುವುದು ವಿಜ್ಞಾನದ ನಿಯಮಗಳ ಅಧ್ಯಯನದ ನಂತರ ಅಲ್ಲ ಬದಲಾಗಿ ಪ್ರಕೃತಿಯ ಅನ್ವೇಷಣೆಗೆ ವಿಜ್ಞಾನ ಕಂಡುಕೊಂಡಿರುವ ವಿವರಣೆ ಅಷ್ಟೇ. ಮೊಲ ಮತ್ತು ಕಾಂಗರೂವಿನ ಹಿಂಗಾಲುಗಳು ಸನ್ನೆಯ ಕೋಲಿನಂತೆ ಕೆಲಸ ಮಾಡುವುದು, ಹುಲಿಯ ಹೆಜ್ಜೆಗಳ ಸದ್ದು ಕೇಳದಂತೆ ಆಗಿರುವುದು ನಿಸರ್ಗದ ವಿನ್ಯಾಸವೇ ಹೊರತು ವಿಜ್ಞಾನದ ಅಧ್ಯಯನದ ನಂತರ ರೂಪುಗೊಂಡದ್ದಲ್ಲ. ಹವಾಮಾನ ಮುನ್ಸೂಚನೆಗಳು ವೈಜ್ಞಾನಿಕ ವಿವರಣೆಗಳನ್ನು ಸುಳ್ಳಾಗಿಸಿದ್ದನ್ನು ನಾವು ನೋಡುತ್ತಲೇ ಇರುತ್ತದೆ. ಅದು ಯಾಕೆ ಸುಳ್ಳಾಯಿತು ಎಂದು ಕೇಳಿದರೆ ತಜ್ಞರು ಹೊಸ ವಿವರಣೆ ನೀಡುವುದನ್ನು ನೋಡಿದ್ದೀರಿ.

ಆದ್ದರಿಂದ ಪ್ರಕೃತಿಯ ವಿಸ್ಮಯಗಳಿಗೆ ವಿಜ್ಞಾನ ತರ್ಕಬದ್ಧವಾದ ಉತ್ತರ ನೀಡುತ್ತದೆಯೇ ಹೊರತು ವಿಜ್ಞಾನದ ಕಾರಣದಿಂದ ಪ್ರಕೃತಿಯ ವಿದ್ಯಮಾನಗಳು ನಡೆಯುವುದಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article