-->
ಜೀವನ ಸಂಭ್ರಮ : ಸಂಚಿಕೆ - 140

ಜೀವನ ಸಂಭ್ರಮ : ಸಂಚಿಕೆ - 140

ಜೀವನ ಸಂಭ್ರಮ : ಸಂಚಿಕೆ - 140
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 


                            
ಮಕ್ಕಳೇ, ಕಳೆದ ಲೇಖನದಲ್ಲಿ ಅವಿದ್ಯಾಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಸ್ಮಿತ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಅಸ್ಮಿತ ಎಂದರೆ ನಾ, ನಾನು. ಈ ಸೂತ್ರದಲ್ಲಿ ಮೂರು ಪದಗಳು ಬರುತ್ತವೆ. ದೃಕ್, ದರ್ಶನ ಮತ್ತು ಏಕಾತ್ಮಕ. ಈ 'ನಾನು' ಅನ್ನುವುದೇ ಎಲ್ಲಾ ಸಾಧನೆ ಮತ್ತು ಹೋರಾಟಕ್ಕೆ ಕಾರಣ. ನಾನು ಈ ಮನೆಯಲ್ಲಿ ಇದ್ದೇನೆ. ಇದರಲ್ಲಿ ನಾನು ಅನ್ನುವುದು ಮಧುರವಾಗಿದೆ. ನಾನೇ ಮಾಡಿದ್ದು, ಇಲ್ಲಿ ನಾನು ಅನ್ನೋದು ಪ್ರತಿಫಲಿತವಾಗಿದೆ.

ದೃಕ್ ಶಕ್ತಿ ಅಂದರೆ ಚೇತನ. ಅರಿವು, ಜ್ಞಾನ ಅಥವಾ ಪ್ರಜ್ಞೆ ಎಂದರ್ಥ. ನಾನು ಇದ್ದೇನೆ ಎನ್ನುವ ಅರಿವೇ ದೃಕ್ ಶಕ್ತಿ. ಇದನ್ನೇ ಆತ್ಮ ಎನ್ನುವರು. ನಾನು ಅಂದರೆ ಅರಿಯುವವ, ತಿಳಿಯುವವ ಎಂದರ್ಥ. ದರ್ಶನ ಶಕ್ತಿ ಎಂದರೆ ಯಾವುದರ ಸಹಾಯದಿಂದ ಜ್ಞಾನ ಮಾಡಿಕೊಳ್ಳುತ್ತೇವೆಯೋ ಅದು. ಮನಸ್ಸು, ಬುದ್ಧಿ ಒಳಗೆ ತಿಳಿದುಕೊಳ್ಳುವ ಸಾಧನಕ್ಕೆ ದರ್ಶನ ಎನ್ನುವರು. ಮನಸೇ ಇಲ್ಲದಿದ್ದರೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಿಳಿದುಕೊಳ್ಳುವ ಮಾನಸಿಕ ಅಂಶವೇ ಬುದ್ದಿ. ಮನಸ್ಸು ಸ್ವಂತತ್ರವಾಗಿ ಕೆಲಸ ಮಾಡುವುದಿಲ್ಲ. ಅದಕ್ಕೆ ಬೆಳಕು ನೀಡುವುದೇ ದೃಕ್ ಶಕ್ತಿ. ದೃಕ್ ಎಂದರೆ ಅರಿವಿನ ತತ್ವ, ಪ್ರಜ್ಞಾತತ್ವ. ಇದು ನಮ್ಮ ಒಳಗೆ ಹೊಳೆಯುತ್ತದೆ. ದೃಕ್, ದರ್ಶನ ಬೇರೆ ಬೇರೆ. ಅರಿವಿನ ವಸ್ತು ಎಲ್ಲರಲ್ಲೂ ಇರುತ್ತದೆ. ಇದೇ ಪ್ರಮುಖ. ನಾನು ಅನ್ನುವುದು ಅರಿವೇ ಹೊರತು ಬೇರೆನಿಲ್ಲ. ಮನಸ್ಸಿನಲ್ಲಿ ಮೂಡಿದ ಎಲ್ಲಾ ಚಿತ್ರಗಳ ಅರಿವು, ಅದನ್ನು ಬೆಳಗಿಸುವ, ಅನುಭವಿಸುವ ಅರಿವು. ಆ ಅರಿವು ಮನಸ್ಸು ತುಂಬಿದಾಗ ಮಾನಸಿಕ ಅರಿವು ಒಂದಾಗುತ್ತದೆ. ಆ ತಕ್ಷಣ ನಾನು ಅನ್ನುವುದು ಶುರುವಾಗುತ್ತದೆ. ಇದಕ್ಕೆ ಅಸ್ಮಿತ ಎನ್ನುವರು. ಬೇರ್ಪಡಿಸಿ ನೋಡಿದರೆ ಅಸ್ಮಿತ ಇರುವುದಿಲ್ಲ. ಅರಿವೇ ಇಲ್ಲದೆ ದೇಹ ಮನಸು ಇದ್ದರೆ, ಮನುಷ್ಯ ಅಲ್ಲ. ಇವುಗಳನ್ನು ಪ್ರತ್ಯೇಕಿಸಿದರೆ ನಾನು ಮರೆಯಾಗುತ್ತದೆ. ಉದಾಹರಣೆಗೆ, ನಾನು ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದೇನೆ ಅಂತ ಇಟ್ಟುಕೊಳ್ಳಿ. ನಾಟಕದಲ್ಲಿ ನನ್ನ ಹಾವಭಾವ, ಭಂಗಿ, ಮಾತು ಮತ್ತು ಬಟ್ಟೆ ಎಲ್ಲಾ ರಾವಣನ ರೀತಿಯೇ. ನಾನು ರಾವಣನ ಪಾತ್ರದಲ್ಲಿ ಬೆರೆತಿರುತ್ತೇನೆ, ಒಂದಾಗಿರುತ್ತೇನೆ. ಆದರೆ ನಾನು ರಾವಣ ಅಲ್ಲ. ನಾನು ರಾವಣನ ಪಾತ್ರಧಾರಿ. ನಾನೇ ಬೇರೆ, ರಾವಣ ಬೇರೆ. ಪುರಾಣದ ಒಂದು ಘಟನೆ, ಒಬ್ಬ ಹುಡುಗ, 18 ವಯಸ್ಸು, ಸುಂದರ ಮೈಕಟ್ಟು. ತಂದೆ ವಿದ್ವಾಂಸ. ತಂದೆಗೆ ಮಗ ತನ್ನಂತೆಯೇ ವಿದ್ವಾಂಸನಾಗಬೇಕೆಂಬ ಆಸೆ. ಆ ಊರಿಗೆ ಒಂದು ನಾಟಕ ಕಂಪನಿ ಬಂದಿತ್ತು. ಒಂದು ದಿನ ನಾಟಕ ನೋಡಲು ಈ ಹುಡುಗ ಹೋದನು. ಆ ದಿನ ನಾಟಕ ಕಂಪನಿಯ ಮಾಲೀಕನ ಮಗಳು, ವಯಸ್ಸು 12, ಒಂದು ಪಾತ್ರ ಮಾಡಿದ್ದಳು. ಆಕೆಯ ನಟನೆ, ಹಾಡು, ಮಾತು ಈತನಿಗೆ ಹಿಡಿಸಿತು. ಮನಸ್ಸಿನಲ್ಲಿ ತೀರ್ಮಾನ ಮಾಡಿದ, ಈಕೆಯನ್ನೇ ವಿವಾಹ ಆಗಬೇಕೆಂದು. ಮನೆಗೆ ಬಂದವನೇ, ತಂದೆ ಬಳಿ ಹೇಳಿದ. ತಂದೆ ಹೇಳಿದ, ನಾಟಕ ನೋಡಬೇಕೆ ವಿನಹ ಅದರ ಬೆನ್ನು ಹತ್ತಬಾರದು. ಈ ಮಾತು ಮಗನಿಗೆ ಹಿಡಿಸಲಿಲ್ಲ. ನಾನು ಆಕೆಯನ್ನೇ ವಿವಾಹವಾಗಬೇಕೆಂದು ಹಠ ಮಾಡಿದನು. ಆಗ ತಂದೆ ಹೇಳಿದ ನಿನ್ನಿಚ್ಛೆ. ನೀನು ಆಕೆಯನ್ನೇ ವಿವಾಹ ಆಗಬೇಕೆಂದು ತೀರ್ಮಾನಿಸಿದ್ದರೆ, ನೀನೇ ಹೋಗು, ಅವರ ತಂದೆ ಬಳಿ ಮಾತನಾಡು, ನಾನು ಬರುವುದಿಲ್ಲ ಎಂದನು. ಮಾರನೇ ದಿನ, ಹುಡುಗನು ನಾಟಕ ಕಂಪನಿ ಮಾಲೀಕನ ಬಳಿ ಹೋಗಿ, ನನಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದನು. ಆಗ ಹುಡುಗಿಯ ತಂದೆ ನೋಡಿದ, ಸುಂದರ ಮೈ ಕಟ್ಟು, ಧ್ವನಿ ಮಧುರವಾಗಿದೆ. ತಂದೆ ವಿದ್ವಾಂಸ. ಇದನ್ನೆಲ್ಲ ಕೇಳಿ ಮಾಲೀಕನಿಗೆ ಹುಡಗ ಇಷ್ಟವಾದ. ಆಗ ಮಾಲೀಕ ಷರತ್ತು ಹಾಕಿದ. ಈಗ ನನ್ನ ಮಗಳಿಗೆ ಕೇವಲ 12 ವರ್ಷ. ನೀನು ನನ್ನ ಮಗಳ ಮದುವೆಯಾಗಬೇಕಾದರೆ, ನೀನು ಶ್ರೇಷ್ಠ ನಟನಾಗಬೇಕು. ನಿನ್ನ ನಟನೆ ನೋಡಿ, ರಾಜ ನಿನ್ನ ಗೌರವಿಸಬೇಕು. ಆಗ ನಾನು ನನ್ನ ಮಗಳನ್ನು ನಿನಗೆ ವಿವಾಹ ಮಾಡಿಕೊಡುವುದಾಗಿ ಹೇಳಿದನು. ಈ ಹುಡುಗ, ಆ ಹುಡುಗಿಗೆ ಸೋತುಬಿಟ್ಟಿದ್ದನು. ನೀವು ಏನು ಹೇಳ್ತಿರೋ ಅದನ್ನೆಲ್ಲ ಮಾಡ್ತೀನಿ ಅಂದ. ಅಂದಿನಿಂದ ನಾಟಕದ ಪಾತ್ರಧಾರಿಯ ಕಲಿಕೆ ಶುರುವಾಯಿತು. ತಂದೆ ಹೇಳಿದ್ದ ವಿದ್ವಾಂಸನಾಗು ಎಂದು. ಆ ಮಾತು ಕೇಳಿರಲಿಲ್ಲ. ಇಲ್ಲಿ ಆಕೆಯನ್ನು ಮದುವೆಯಾಗುವ ಪ್ರಬಲ ಇಚ್ಛೆಯಿಂದ ಒಪ್ಪಿ ಶುರುಮಾಡಿದ್ದನು. ಪ್ರಬಲ ಇಚ್ಛೆ ಇದ್ರೆ, ಪಡೆದೇ ತೀರಬೇಕು ಎನ್ನುವ ಹಂಬಲ ಇದ್ದರೆ, ಸಾಧನೆ ಆಗಿಯೇ ಆಗುತ್ತದೆ. ಒಂದು ವರ್ಷದಲ್ಲಿ ಒಳ್ಳೆಯ ಕಲಾವಿದನಾದನು. ಐದು, ಆರು ವರ್ಷದಲ್ಲಿ ಆತ ತುಂಬಾ ಪ್ರಸಿದ್ಧನಾಗಿದ್ದನು. ಪಾತ್ರ ಬೇರೆ, ಅವನು ಬೇರೆ ಅಲ್ಲ. ಅಷ್ಟು ಮಗ್ನ. ಆ ಹುಡುಗ ಇದ್ರೆ ಸಾಕು ಜನ ಬರಲು ಶುರುವಾಯಿತು. ಆತ ಸ್ತ್ರೀ, ಪುರುಷ ಸೇರಿದಂತೆ ಎಲ್ಲಾ ಪಾತ್ರ ಮಾಡುತ್ತಿದ್ದನು. ಆ ಪಾತ್ರದಲ್ಲಿ, ಆ ಪಾತ್ರವೇ ಆಗಿ ಬಿಡುತ್ತಿದ್ದನು. ಹಾವ ಭಾವ, ನಡೆ ನುಡಿಯಲ್ಲಿ ಆ ಪಾತ್ರವೇ ಆಗಿ ಬಿಡುತ್ತಿದ್ದನು. ಈ ವಿಷಯ ಆ ಪ್ರದೇಶದ ರಾಜನಿಗೆ ಗೊತ್ತಾಗಿ, ಅರಮನೆಯಲ್ಲಿ ನಾಟಕ ಏರ್ಪಡಿಸಿದನು. ಈತನ ಪಾತ್ರಕ್ಕೆ ಮನಸ್ಸೋತು, ರಾಜ ಹೇಳಿದ. "ಅಸಾಮಾನ್ಯ ಕಲಾಗಾರ" ಎಂದು ಹೇಳಿ ಗೌರವ ಮಾಡಿದನು. ಮರುದಿನ ಕಂಪನಿ ಮಾಲೀಕ ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಅರಮನೆಯಿಂದ ಬಂದು ಈ ಹುಡುಗ ಮನೆಯಲ್ಲಿ ಮಲಗಿದನು. ಆ ರಾತ್ರಿ ಚಿಂತಿಸಿದನು. ನಾನು ನಾಲ್ಕು, ಐದು ವರ್ಷ ಏನು ಮಾಡಿದೆ? ನಾನು ಮೊದಲು ಏನಾಗಿದ್ದೆ? ಈಗ ಏನಾಗಿದೆ? ರಾಜನೋ, ಮಂತ್ರಿಯೋ? ನಾನು ಏನು ಅನ್ನುವುದನ್ನು ಮರೆತುಬಿಟ್ಟಿದ್ದೇನೆ. ಅದೇ ಪಾತ್ರ ಮಾಡಿ ಮಾಡಿ ತನ್ನನ್ನೇ ಮರೆತಿದ್ದನ್ನು. ನಾನು ಏನಾಗಿದ್ದೇನೆ ಹುಡುಕಾಡಬೇಕು ಎಂದ. ಬೆಳಿಗ್ಗೆ ನಸುಕಿನಲ್ಲಿ ಎದ್ದು ಬೆಟ್ಟದ ಮೇಲೆ ಹೋದ. ನಾನು ಏನು? ಪಾತ್ರ ಬಿಟ್ಟು ನಾನು ಏನು? ನನಗೆ ಬರೋದು ಆ ಪಾತ್ರದ ಮಾತು. ಹಗಲು ರಾತ್ರಿ ಮಾಡಿದ್ದೆ ಅದು. ಕಂಠಪಾಠ ಮಾಡಿದ್ದು ಅದೇ ಪಾತ್ರಕ್ಕಾಗಿ, ನಾನು ನನ್ನನ್ನೇ ಕಳೆದುಕೊಂಡು ಇದ್ದೀನಿ. ನಾನು ರಾಮನೋ, ಸೀತೆಯೋ, ಅಥವಾ ರಾವಣನೋ? ನಾನು ಮೊದಲು ನನ್ನನ್ನು ಕಂಡುಕೊಳ್ಳಬೇಕು ಎಂದು ಚಿಂತಿಸುತ್ತಾ ಮನೆ ಕಡೆಗೆ ಬಂದನು. ಮಾವ ಲಗ್ನದ ತಯಾರಿಯಲ್ಲಿದ್ದನು. ಈತನ ಮುಖದಲ್ಲಿ ಉತ್ಸಾಹ ಇರಲಿಲ್ಲ. ಮಾವ, ಮಗಳು ಬಂದು ಹೇಳಿದರು. ಈ ಸಮಯದಲ್ಲಿ ನೀವು ಉತ್ಸಾಹದಿಂದಿರಬೇಕು. ಏಕೆ, ಏನಾಯ್ತು ?ಎಂದರು. ಆಗ ಹುಡುಗ ಹೇಳಿದ್ದು, ನಾನು ಕಳೆದು ಹೋಗಿದ್ದೇನೆ. ಮೊದಲು ನಾನು ಯಾರು ಎಂಬುದಾಗಿ ಕಂಡುಕೊಳ್ಳಬೇಕು. ತಿಳಿದ ಬಳಿಕ ಆಮೇಲೆ ಮದುವೆ ಎಂದು ಹೇಳಿ ಮನೆಗೆ ಹೋದನು. ಈ ಮಾತು ಕೇಳಿ ತಂದೆ ಮನೆಯಲ್ಲಿ ಹಬ್ಬ ಮಾಡಿದನು. ಹುಡುಗ ಇದೇ ಚಿಂತನೆಯಲ್ಲಿ ತೊಡಗಿ ಮುಂದೆ ದೊಡ್ಡ ಸಂತನಾದನು. ದೃಕ್ ಮತ್ತು ದರ್ಶನ ಒಂದಾಗಿ ತನ್ಮಯಗೊಂಡರೆ ಅದನ್ನು ಅಸ್ಮಿತ ಎನ್ನುವರು. ದೃಕ್ ಮತ್ತು ದರ್ಶನ ಮಿಶ್ರ ವಾದರೆ ಅದು ಕ್ಲೇಶ. ಅದೇ ದೃಕ್ ಮತ್ತು ದರ್ಶನ ಬೇರೆ ಬೇರೆಯಾದರೆ ಕ್ಲೇಶ ಹೋಗುತ್ತದೆ.
ಶರೀರ ಪುರುಷ , ಸ್ತ್ರೀಯರಾಗಿರಬಹುದು. ಒಳಗೆ ನೋಡುವ ಅರಿವು ಒಂದೇ. ಆ ಅರಿವು ಶರೀರದಲ್ಲಿ ಬೆರೆತರೆ, ನಾನು ಸ್ತ್ರೀ, ನಾನು ಪುರುಷ. ಅರಿವು ಮನಸ್ಸಿನಲ್ಲಿ ಬೆರೆತರೆ ನಾನು ಬುದ್ಧಿವಂತ, ನಾನು ಜ್ಞಾನಿ ಎನ್ನುತ್ತೇವೆ. ಅಂದರೆ ಅರಿವು ಬೇರೆಯದರೊಂದಿಗೆ ಏಕಾತ್ಮಕ ಸಮಾವೇಶವಾಗಿದೆ. ಅದನ್ನೇ ಅಸ್ಮಿತ ಎಂದು ಪತಂಜಲಿ ಹೇಳುತ್ತಾರೆ. ಮನುಷ್ಯ ಅಂದರೆ ಪುರುಷ. ನಾವು ತಿಳಿದ ಪುರುಷ, ಸ್ತ್ರೀ ಅಲ್ಲ. ಪುರುಷ ಅಂದರೆ ನೋಡುವವ, ಇರುವವ ಎಂದರ್ಥ. ಮನುಷ್ಯ ಅಂದರೆ ಜ್ಞಾನದ ಬೆಳಕು, ಜ್ಞಾನದೀಪವೇ ಆತ್ಮ. ಇದರ ಅರ್ಥ ದೇಹ ಬೇರೆ, ಅದರಲ್ಲಿ ಅರಿಯುವ ನಾ ಬೇರೆ. ದೇಹ ಅರಿವು ಒಂದಾಗುವುದೇ ಅಸ್ಮಿತ ಕ್ಲೇಶ. ನಾನು ಬೇರೆ ದೇಹ ಬೇರೆ. ನಾನು ಈ ದೇಹ ಬಳಸಿ, ದೇಹದ ಬಗ್ಗೆ, ಜಗತ್ತಿನ ಬಗ್ಗೆ, ಜಗತ್ತಿನ ಹಿಂದಿರುವ, ಜಗತ್ತಿಗೆ ಆಧಾರವಾಗಿರುವ, ಪರಮ ವಸ್ತುವಿನ ಬಗ್ಗೆ ಅರಿಯುವ ಮತ್ತು ಸದಾ ಇರುವವ ಆತ್ಮ ಎಂದು ತಿಳಿದಿರಬೇಕು. ಆತ್ಮ ಎಂದರೆ ವ್ಯಾಪಿಸಿರುವುದು ಮತ್ತು ಅರಿಯುವುದು ಎಂದರ್ಥ. ಪರಮ ಆತ್ಮ, ಪರಮಾತ್ಮ ಎಂದರೆ ವಿಶ್ವದ ತುಂಬಾ ವ್ಯಾಪಿಸಿರುವ ಜ್ಞಾನದ ಪ್ರಜ್ಞಾವಸ್ತು ಎಂದು ತಿಳಿಯಬೇಕು, ಅಲ್ಲವೇ ಮಕ್ಕಳೇ
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************




Ads on article

Advertise in articles 1

advertising articles 2

Advertise under the article