-->
ಸವಿಜೇನು : ಸಂಚಿಕೆ - 09

ಸವಿಜೇನು : ಸಂಚಿಕೆ - 09

ಸವಿಜೇನು : ಸಂಚಿಕೆ - 09
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ  ಜೇನುಹುಳುಗಳ ಪಾತ್ರ  ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ   'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ   ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ  ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು

 

ಸುಮಾರು 6 ವರ್ಷಗಳ ಹಿಂದೆ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದ ಹಾದಿ ಶುರುವಾಗಿತ್ತು. ನಾನು, ಕುಮುದಾ, ಮಗಳು ತನೇಹಾ, ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇರುತ್ತಿದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ  110-120 km/h ಇರುತ್ತದೆ. ಅದರಂತೆ ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ರಾತ್ರಿ ಅಲ್ಲಿಯೇ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು. ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬಾರಿಯೂ  ವಿಶೇಷ ವಿಭಿನ್ನ... ಮೈಸೂರೇ ಹಾಗೇ... ಅಂದು  ಯೋಜನೆಯಂತೆ ಶ್ರೀರಂಗಪಟ್ಟಣ ದ ಬಳಿ ಯಾವುದೂ ಒಂದು ಹೋಟೆಲಲ್ಲಿ  ವೆಜ್ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಮಗಳಿಗೆ ಕಾರಿನಲ್ಲೇ ಊಟ ಮಾಡಿಸುತ್ತಾ ಹೆದ್ದಾರಿಯ ದಾಟಿ ಮೈಸೂರು ನಗರಕ್ಕೆ ಬಂದೆವು. ನಾವು ಹೋಗುವ ಕೆಲವೇ ಹೊತ್ತಿನಲ್ಲಿ ಒಂದು ಸುತ್ತು ಮಳೆ ಹನಿ ಬಂದು ಹೋಗಿ  ಆಗ ತಾನೇ ಮಳೆಬಿಟ್ಟು ಸೋನೆಮಳೆ ಸುಳಿಗಾಳಿಯಲ್ಲಿ ತೇಲಿಬರುತ್ತಿತ್ತು. ನಂಜನಗೂಡು ರಸ್ತೆಗಾಗಿ  ಲೊಕೇಶಣ್ಣನ (google location) ಮಾರ್ಗದರ್ಶನದಲ್ಲಿ  ಹೋಗಲು ಮುಂದೆ ಸಾಗುತ್ತಾ ಬಂದೆವು. ಮೈಸೂರು ರಿಂಗ್ ರೋಡಲ್ಲಿ ಬಂದಾಗ ಸುಮಾರು ಹನ್ನೊಂದು ಹನ್ನೊಂದು ಇಪ್ಪತ್ತು.. ಬಲಕ್ಕೆ ಚಾಮುಂಡೇಶ್ವರಿ ಬೆಟ್ಟ ಕಾಣುತ್ತಿರುವುದು ಬಿಟ್ಟರೆ ನಾವೆಲ್ಲಿದ್ದಿವಿ... ನಾವು ಹೋಗುತ್ತಾ ಇರುವ ದಾರಿ ಸರಿನಾ?? ನಾವು ನಂಜನಗೂಡಿಗೆ ಹೋಗುತ್ತಿದ್ದೇನೋ ಬೇರೆ ಎಲ್ಲಿಗಾದರೂ ಹೋಗುತ್ತಿದ್ದೇನೋ ಏನು ಗೊತ್ತಾಗುತ್ತಿಲ್ಲ. ಮೊಬೈಲ್ ನೋಡಿದರೆ ಲೋಕೇಶಣ್ಣ ಮೂತಿ ಬೇರೆಕಡೆ ತಿರುಗಿಸಿ ಕೂತಿದ್ದಾನೆ. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ವಾಹನಗಳು ವೇಗವಾಗಿ ಪಾಸ್ ಆಗುತ್ತಿದ್ದವು. ದಿಕ್ಕು ತೋಚದೇ  ಯಾರಿಗೂ ಕೇಳದೇ ಮುಂದೆ ಹೋಗಾಣ ಎಂದರೆ ಧೈರ್ಯ ಬರುತ್ತಿಲ್ಲ. ಯಾರನ್ನಾದರೂ ಕೇಳೋಣ ಎಂದರೆ ಅಲ್ಲಿ ಯಾರೂ ಕಾಣುತ್ತಿಲ್ಲ. ಆ ಸಮಯಕ್ಕೆ  ಸರಿಯಾಗಿ ಅಲ್ಲೊಂದು ಯಾವುದೋ ಪ್ಯಾಸೆಂಜರ್ ಆಟೋ ಬಂತು. ಕೈ ಅಡ್ಡ ಹಾಕಿ ನಂಜನಗೂಡು ಅಂತ ಕೇಳಿದರೆ ಈಗ ನೀವು ಮೈಸೂರು ಸಿಟಿಕಡೆ  ಹೋಯಿತಾ ಇದೀರಿ...  U -Turn  ತಗೊಂಡು  ಸ್ಟ್ರೈಟ್ ಹೋಗಿ  ಹದಿನೈದು ಹದಿನಾರು ಕಿಮೀ ಆದ ಮೇಲೆ ಒಂದು Arch (ಕಮಾನು) ಬರತ್ತೆ ಅಲ್ಲಿ ಡೈರೆಕ್ಷನ್ ತೋರಿಸಿದ್ದಾರೆ ಹೋಗಿ ಎಂದು ಹೇಳಿದ. ಅವನ ಮಾತನ್ನು ಕೇಳಿ ಮುಂದೆ ಬಂದಾಗ ಊಟಿ ಮುಖ್ಯರಸ್ತೆಯಿಂದ ಡೈರೆಕ್ಷನ್ ತೋರಿಸಿದಂತೆ ಎಡಕ್ಕೆ ನಂಜನಗೂಡು ಕಡೆಗೆ ತಿರುಗಿಸಿದೆ. ಊಟಿ ಮುಖ್ಯರಸ್ತೆಯಲ್ಲಿ ಸಿಟಿ ದಾಟಿ ಬಂದೆವು. ಹೈವೆಯ ಯಾವುದೋ  ಒಂದು ಸೇತುವೆ. ಆ ಸೇತುವೆಯ ಮೇಲೆ  HEADLIGHT ಬೆಳಕಿಗೆ ಅರ್ಧ ಗೋಲಾಕಾರದಂತೆ  ಏನೋ ಕಾಣಿಸಿತು. ತಕ್ಷಣಕ್ಕೆ ಅದೇನು ಅಂತ ಗೊತ್ತಾಗಲಿಲ್ಲ. ಹತ್ತಿರ ಬಂದು ನೋಡಿದರೆ ನಾಲ್ಕೈದು  ಕೆಜಿಯಷ್ಟು ತೂಕದ ದೊಡ್ಡ ಆಮೆಯೊಂದು ರಸ್ತೆಯನ್ನು ಕ್ರಾಸ್ ಮಾಡಲು ತೆವಳಿಕೊಂಡು ಹೋಗುತ್ತಿತ್ತು. ವಾಹನಗಳ ಸಂಖ್ಯೆಯು ವಿರಳವಾಗಿತ್ತಾದರೂ ಆ ರಸ್ತೆಯಲ್ಲಿ ಗರಿಷ್ಠ  ವೇಗದಿಂದ ವಾಹನಗಳು ಪಾಸ್ ಆಗುತ್ತಿದ್ದವು. ಯಾರಾದರೂ ಸ್ಯಾಡಿಸ್ಟ್  ಲಾರಿಡ್ರೈವರ್ ಗಳು ಅದರ ಮೇಲೆ ವಾಹನ ಚಲಾಯಿಸಿಕೊಂಡು ಹೋಗಬಹುದೆಂದು ಪಾರ್ಕಿಂಗ್ ಲೈಟ್ ಆನ್ ಮಾಡಿ ಕಾರು ಸೈಡಿಗೆ ಹಾಕಿದೆ. ದೇವರಾಜ ಬಳ್ಳಾರಿ ಭಾಷೆಯಲ್ಲಿ 'ಲೇ ರುದ್ರ ತಬಾಲಿ ಲೇ... ಎದ್ದೇಳು..' ಎಂದು ಸೀಟಿಗೆ ಆನಿಕೊಂಡು ತೂಕಡಿಸುತ್ತಿದ್ದ ರುದ್ರೇಶನನ್ನು ಎಬ್ಬಿಸಿ ಕೆಳಗಿಳಿದರು. ಹೆಡ್ಲೈಟ್ ಬೆಳಕಿನಲ್ಲಿ ತೆವಳಿ ತೆವಳಿ ಸಾಗುತ್ತಿದ್ದ ಆಮೆಯ ಮುಂದೆ ನಿಂತರು. ಅದು ಒಂದು ಕ್ಷಣ ತನ್ನ ಕತ್ತು ಕಾಲು ಒಳಗೆ ಹಾಕಿ ನಿಂತಿತು. "ಸಾರ್ ದೊಡ್ಡ ತಬಾಲಿ ಸಾರ್" ಎಂದು ದೇವರಾಜ ಕೂಗಿದ. ಆಕಡೆ ಬಗ್ಗಿನೋಡು ಏನಿದೆ ಅಂತ ಹೇಳಿದ್ದಕ್ಕೆ ನೀರಿದೆ ಸಾರ್ ಎಂದು ಹೇಳಿದ ಹಾಗದರೆ ಎತ್ತಿ ನೀರಿಗೆ ಹಾಕು ಎಂದು ಹೇಳಿದ್ದಕ್ಕೇ ಕಚ್ಚುವುದೋ ಪರಚುವುದೋ ಎಂಬ ಭಯದಿಂದಲೇ ಎತ್ತಿ ನೀರಿಗೆ ಎಸೆದರು. ಬಹುಶಃ ಅದು ಆ ನೀರಿನಿಂದಲೇ ಎದ್ದು ಬಂದಿರಬೇಕು ಆದರೆ ರಸ್ತೆಯ ಮೇಲೆ ಅಪಾಯಕಾರಿಯಾದ ಜಾಗದಲ್ಲಿ ಇದ್ದುದ್ದರಿಂದ ಅದರ ಉಳಿಗಾಲಕ್ಕೆ ತೊಂದರೆ ಯಾಗಬಹುದೆಂದು ಯಾವುದಾದರೂ ವಾಹನಗಳ ಚಕ್ರಕ್ಕೆ ಸಿಲುಕಿಯೋ, ಅಥವಾ ಆಮೆ ತಿನ್ನುವರ ಕೈಗೆ ಸಿಕ್ಕೋ ಬಲಿಯಾಗುವ ಎಲ್ಲಾ ಸಾದ್ಯತೆ ಇದ್ದುದರಿಂದ ನೀರಿಗೆ ಎಸೆಯಿರಿ ಎಂದು ಹೇಳಿ ನೀರಿಗೆ ಹಾಕಿಸಿ ನಂಜುಂಡೇಶ್ವರನ ಸನ್ನಿದಿಗೆ ಮುಟ್ಟಿದೆವು. ಅಲ್ಲಿದ್ದ ವಸತಿ ಗೃಹಗಳಿಗೆ ರೂಂ ಕೇಳಿದರೆ ಎಲ್ಲವೂ ಪುಲ್ ಆಗಿ ಹಾದಿ ಬೀದಿಯಲೆಲ್ಲಾ ಜನ ಗಾಡಿ ನಿಲ್ಲಿಸಿ ಎಲ್ಲೆಂದರಲ್ಲೇ ಮಲಗಿದ್ದರು. ಆ ರಶ್ ನೋಡಿ ಹಾಗೆ  ಊಟಿ ರಸ್ತೆಯ ಹಿಡಿಯೋಣ ಎಂದೆನಿಸಿದರೂ National Reserve ಪಾರೆಸ್ಟ್ ರೋಡ್ ಆದ್ದರಿಂದ ರಾತ್ರಿ ಒಂಭತ್ತು ಗಂಟೆಯ ನಂತರ ಬಂಡೀಪುರ ಅಭಯಾರಣ್ಯದ ರಸ್ತೆ ಬೆಳಿಗ್ಗೆ ಆರು ಗಂಟೆಯವರೆಗೆ ಕ್ಲೋಸ್ ಇರುತ್ತದೆ. ಅಲ್ಲೆಲ್ಲಿಯೋ  ಹೋಗಿ ಅರಣ್ಯದಲ್ಲಿ ನಿಂತುಕೊಳ್ಳುವುದು ಬೇಡ ಎಂದೆನಿಸಿ  ಇಲ್ಲೇ ಎಲ್ಲೋ ಸೈಡಿಗೆ ಹಾಕಿ ಚಾಪೆ ಹಾಸಿ  ಕಟ್ಟಿಸಿಕೊಂಡು ಬಂದಿದ್ದ ಊಟ ಮಾಡಿ ಮಲಗಿದೆವು. Nonstop ಡ್ರೈವಿಂಗ್ ಆದ್ದರಿಂದ ನಿದ್ರೆ ಬರುತ್ತಿತ್ತಾದರೂ  ಸೊಳ್ಳೆಗಳ ಹಾಡಿಗೆ ನಿದ್ರೆ ಬರಲಿಲ್ಲ. ಹೆಚ್ಚೆಂದರೆ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಮಲಗಿರಬಹುದು. ಹಾಗೆ ತೂಕಡಿಸುತ್ತಾ ಜೋಂಪು ಹತ್ತುವಷ್ಟತ್ತಿಗೆ ಸೊಳ್ಳೆಗಳು ಕಚ್ಚಿ ಎಚ್ಚರಗೊಳಿಸುತ್ತಿದ್ದವು.  ಹಿಂಗೇ ಮಾಡಿ ಹಂಗೂ ಹಿಂಗೂ ನಾಲ್ಕು ಗಂಟೆ ಆಯಿತು. ಎಲ್ಲರನ್ನೂ ಎಬ್ಬಿಸಿ ಗಂಟು ಮೂಟೆಗಳನ್ನು ಕಟ್ಟಿ ಕಾರು ಹತ್ತಿ ಕಪಿಲ ನದಿಕಡೆ ಬಂದೆವು. ಆಗ ಸ್ನಾನಘಟ್ಟದಲ್ಲಿ ಸ್ನಾನ ಮಾಡಲು ಬಂದ ಜನಸ್ತೋಮ ಕಡಿಮೆ ಇತ್ತು. ಎಲ್ಲರೂ ನೀರೊಳಗೆ ಮಿಂದು ಐದು ಗಂಟೆಯೊಳಗೆ ಸಿದ್ದವಾದೆವು. ನಂಜುಂಡನ ದರ್ಶನಕ್ಕೆ ಬಹುದೊಡ್ಡ ಸಾಲು ಇದ್ದುದರಿಂದ ನಂಜುಂಡನ ನೋಡದೇ ಊಟಿಯ ರಸ್ತೆ ಹಿಡಿದೆವು.

ಮೂಡಣದಿ ಶುಕ್ರಗ್ರಹ ಪ್ರಕಾಶಮಾನವಾಗಿ ಕಾಣುತ್ತಿತ್ತು. ಇನ್ನೇನು ಕೆಲವೇ ಹೊತ್ತಿನಲ್ಲಿ ಬೆಳಕು ಹರಿಯುತ್ತಲಿತ್ತು. ಬಂಡೀಪುರ ರಸ್ತೆ ಹಿಡಿದ ನಮ್ಮ ಕಾರು ಶರವೇಗದಿ ಸಾಗುತ್ತಲಿತ್ತು. ಸುತ್ತಲೂ ಬಯಲು ಪ್ರದೇಶವೇ ಕಾಣಿಸುತ್ತಿದ್ದುದರಿಂದ ಆನೆ ಇರುವಂತ ಕಾಡು ಇಲ್ಲಿ ಎಲ್ಲಿದೆಯೇ ?? ಹೆಚ್ಚು ಕಡಿಮೆ ನಮ್ಮ ಏರಿಯಾ ಇದ್ದ ಹಾಗೆಯೇ ಇದೆ ಎಂದೆ. ಮುಂದೆ ಬರುತ್ತಾ ಆ ಕಾಡಿನ ಸುತ್ತಲೂ  ದೊಡ್ಡದಾಗಿ ಆಳವಾಗಿ ಕಂದಕ ಮಾಡಿದ್ದರು. ನಾನು ದಿನಪತ್ರಿಕೆಗಳಲ್ಲಿ ನೋಡಿದಂತೆ ಆನೆ ಹುಲಿಗಳು ಅರಣ್ಯದಾಟಿ ಹೋಗದಂತೆ ಮಾಡಿರುವ ಕಂದಕ ಎಂದು ಎಲ್ಲರಿಗೂ ತೋರಿಸಿ ಹೇಳಿದೆ. ನೋಡಿ ಅದು ಎಂದು ಹೇಳುತ್ತಾ ಚೆಕ್ ಪೋಸ್ಟ್ ಹತ್ತಿರ ಬಂದಾಗ ಆರು ಗಂಟೆಗೆ ಹತ್ತುನಿಮಿಷ ಬಾಕಿ. ನಮಗಿಂತ ಮುಂಚೆ ಯಾವಾಗಲೋ ಬಂದು ನಿಂತ ವಾಹನಗಳು ಅನೇಕ ಇದ್ದವು. ಹತ್ತು ನಿಮಿಷಗಳು ಕಾದು ಚೆಕ್ ಪೋಸ್ಟ್ ಗೇಟ್ ಓಪನ್ ಆದ ಮೇಲೆ ಒಳಗೆ ಬಂದೆವು. ನಾನು 'ಬಂಡೀಪುರ' ಎಂಬ ಹೆಸರನ್ನು ಕೇವಲ ಪಠ್ಯಪುಸ್ತಕಗಳಲ್ಲಿ ಕೇಳಿದ್ದೆ, ಓದಿದ್ದೆ.  ಆದರೆ ಆ ಕಾಡಿನೊಳಗೇ ಪ್ರವೇಶಿಸಿದ್ದು ಅದೇ ಮೊದಲು. ನನ್ನ ಮುಂದೆ ಐದಾರು ಗೂಡ್ಸ್ ವಾಹನಗಳು, ಐದಾರು ಕಾರುಗಳು ಇದ್ದವು. ಸರಿಯಾಗಿ ಆರು ಗಂಟೆಗೆ ಗೇಟ್ ಓಪನ್ ಆದ ತಕ್ಷಣ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಒಳಗೆ ಅಧಿಕೃತ ಪ್ರವೇಶ ಪಡೆದೆವು.

ಬಂಡೀಪುರ ಅಭಯಾರಣ್ಯ 874 ಚದರ ಕಿಲೋಮೀಟರ್ ವಿಸ್ತಾರದ ದಕ್ಷಿಣ ಏಷ್ಯಾದ ಅತಿದೊಡ್ಡ ಆನೆಗಳ, ನಮ್ಮ ರಾಷ್ಟೀಯ ಪ್ರಾಣಿ ಹುಲಿಗಳ ಆವಾಸ ಸ್ಥಾನ. ಅರಣ್ಯಕ್ಕೆ ಪ್ರವೇಶ ಪಡೆದ ಮೇಲೆ ಅಸಲಿ ಮಜಾ ಶುರುವಾಗಿದ್ದು. ದೊಡ್ಡ ದಟ್ಟವಾದ ಕಗ್ಗತ್ತಲಂತಹ ಕಾಡು ಅಲ್ಲದೇ ಇದ್ದರೂ ಕೆಂಪು ನೆಲದಲ್ಲಿ ಸಾಧಾರಣ ಎತ್ತರ ಬೆಳೆದ ಕುರುಚಲು ಕಾಡಿನಂತೆಯೇ ಆರಂಭವಾಗುವ ಸಾಮಾನ್ಯ ಗಿಡಮರಗಳು ಇದ್ದವು. ವಾಹನಗಳನ್ನು ವೇಗವಾಗಿ ಚಲಾಯಿಸಬಾರದೆಂದು ಪ್ರತಿ ನೂರು ಮೀಟರ್ ಗೆ ಒಂದು ರೋಡ್ ಹಂಪ್ಸ್ ಮತ್ತು ವೇಗಮಿತಿ 20-30 km/h. ನಾನು ಆ ಮಾರ್ಗವಾಗಿ ಮೊದಲ ಬೇಟಿಯಾದ್ದರಿಂದ ಪರಿಚಯ ಇರಲಿಲ್ಲ. ಕುಮುದಾ ಜಿಂಕೆಗಳು, ಅನೆಗಳು ಕಾಡಮ್ಮೆ , ಹುಲಿಗಳೂ ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿಲೋಮೀಟರ್ ಏನು ಕಾಣಲಿಲ್ಲ.  ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಒಂಟಿ ಯಾಗಿದ್ದು ಬಹುಶಃ  ಏಕಾಂಗಿಯಾಗಿದ್ದರಿಂದಲೋ ಏನೋ ಗಾಬರಿಯಾದಂತೆ ಜೋರಾಗಿ ನಡೆದುಕೊಂಡು ಹೋಗುತ್ತಾ ಮರೆ ಆಯಿತು. ಅಬ್ಬಾ..! ನಾನು ನಮ್ಮ ಅಡವಿಗಳಲ್ಲಿ ಯಾವಾಗಲಾದರೂ ಒಮ್ಮೆ ಕಾಡುಹಂದಿಯನ್ನೋ, ನರಿಗಳನ್ನೋ ಕಾಣುತ್ತಿದ್ದ ನನಗೆ ಜಿಂಕೆ ಕಣ್ಣೆದುರಿಗೆ ಬಂದಿದ್ದು ಅದ್ಬುತ ಎಂದು ಭಾವಿಸಿದೆ. ಹಾಗೇ ನಿಧಾನವಾಗಿ ಮತ್ತೊಂದು ಕಿಲೋಮೀಟರ್ ನಷ್ಟು  ಮುಂದೆ ಬಂದರೆ  ಏನಾಶ್ಚರ್ಯ?? ನೂರಾರು ಜಿಂಕೆಗಳು ರಸ್ತೆಯ ಮೇಲೆಲ್ಲಾ ಮಲಗಿವೆ! ಸುಮಾರು ಜಿಂಕೆಗಳು ರಸ್ತೆಯ ಇಕ್ಕೆಲಗಳಲ್ಲಿ DEER WALKING ಮಾಡುತ್ತಿವೆ. ನೂರಾರು ಸಂಖ್ಯೆಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಚಿಗುರಿದ್ದ ಹುಲ್ಲನ್ನು ಮುಂಬು (ಸಾಲು) ಹಿಡಿದು ಮೇಯುತ್ತಿದ್ದವು. ಅವುಗಳು ನೂರಾರು ಸಂಖ್ಯೆಯಲ್ಲಿ ಪರಿಸರದಲ್ಲಿ ಸ್ವಚ್ಚಂದವಾಗಿ ಭಯ ರಹಿತವಾಗಿದ್ದುದು ಕಂಡು ಅವುಗಳ ಅಂದ, ಸೊಬಗು ನೋಡಲು ಕಣ್ಣು ಸಾಲದಾದವು. ಈ ಪ್ರಮಾಣದಲ್ಲಿ  ನಮ್ ಏರಿಯಾದಲ್ಲಿ ನಾನು  ಕುರಿಮಂದೆಗಳನ್ನು ನೋಡಿದ್ದೆ. ಆದರೆ ಮೊಟ್ಟಮೊದಲ ಬಾರಿಗೆ ಏಕಕಾಲದಲ್ಲಿ ಇನ್ನೂರು ಮುನ್ನೂರು ಸಂಖ್ಯೆಯಲ್ಲಿ ಜಿಂಕೆಗಳನ್ನು ‌ಓಪನ್ ಫಾರೆಸ್ಟ್ ಲ್ಲಿ ನೋಡಿದ್ದು ಅದೇ ಮೊದಲು. ಮನಸೋ ಇಚ್ಚೆ ಜಿಂಕೆಗಳ ಸೊಬಗನ್ನು ಕಣ್ತುಂಬಿಕೊಂಡೆವು. ಅಂದು ಕಂಡ ಸೊಬಗು ಇಂದಿಗೂ ಮರೆಯಲಾಗದ ಕ್ಷಣ... ನಮ್ ರಸ್ತೆಗಳಲ್ಲಿ ಎಮ್ಮೆಗಳು ಅಡ್ಡ ಬಂದಾಗ ಕೆಲವೊಮ್ಮೆ ಉಜ್ಜಿಕೊಂಡೋ, ಕೈಯಲ್ಲಿ ಉಯ್ಯ.. ಎಂದು ನೂಕಿಯೋ ಮುಂದೆ ಹೋಗುವಂತೆ ಅಂದು ಜಿಂಕೆಗಳನ್ನು ನಾವು ದಾಟಿ ಮುಂದೆ ಬಂದಂತಾಗಿತ್ತು. ನೂರಾರು ಸಂಖ್ಯೆಯ ವಿವಿಧ ವಯೋಮಾನದ ಜಿಂಕೆಗಳ ಹಿಂಡು. ಮುದ್ದು ಮುದ್ದಾದ ಮರಿಗಳು ಜೊತೆಗಿದ್ದವು. ಆಗ ತಾನೆ ಎದ್ದು ಮೈ ಮುರಿಯುತ್ತಿದ್ದ ಜಿಂಕೆಗಳು ದಾರಿಹೋಕರಿಂದ ತಿಂಡಿಯನ್ನು ನೀರೀಕ್ಷೆ ಮಾಡುವಂತಿತ್ತು. ಸಫಾರಿ ಹೋಗಲಿಕ್ಕೆ ಅರಣ್ಯ ಇಲಾಖೆಯ ವಾಹನಗಳು, ಕಛೇರಿ ಮತ್ತು ಪಾರ್ಕಿಂಗ್  ನೋಡಿ ನಾವು ಗಾಡಿ ನಿಲ್ಲಿಸಿ ಸಫಾರಿ ಮಾಡಲು ಎಷ್ಟು ಹಣ ವಿಚಾರಿಸಿಕೊಂಡು ಬಾ ಎಂದು ದೇವರಾಜ, ರುದ್ರೇಶನನ್ನು ಕಳುಹಿಸಿದರೆ ಹಸುವಿನ ಮೈ ಸವರುವ ಹಾಗೆ ಜಿಂಕೆಗಳ ಮೈ ದಡವುತ್ತಾ ಕೋಡುಗಳನ್ನು ಮುಟ್ಟಿ ತಲೆ  ಅಲ್ಲಾಡಿಸುತ್ತಾ ಹೋಗಿ ಕೇಳಿಕೊಂಡು ಬಂದರು. ಶುಲ್ಕ ತಲಾ ಆಗ ಎಂಟುನೂರು ಇದ್ದುದ್ದರಿಂದ  ಎಲ್ಲರಿಗೂ ಅಷ್ಟು ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಆದ್ದರಿಂದ ಉಚಿತವಾಗಿ ಕಾಣುತ್ತಿದ್ದ ಪ್ರಾಣಿಗಳನ್ನೇ  ನೋಡುತ್ತಾ ಮುಂದೆ ಸಾಗಿದೆವು. ಬಹುಶಃ ರಾತ್ರಿಯ ವೇಳೆ ಸಾವಿರಾರು ಜಿಂಕೆಗಳು ಈ ಡಾಂಬರ್ ರಸ್ತೆಯ ಮೇಲೆಯೇ ಮಲಗಿಕೊಳ್ಳುವವು. ಹಾಗೂ ಇಲ್ಲಿ ಮನುಷ್ಯರ ಚಲನವಲನ ಇರುವುದರಿಂದ ಬಹುಶಃ ಹುಲಿ-ಚಿರತೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು. ಆ ಉದ್ದೇಶದಿಂದಲೇ  ಈ ರಸ್ತೆಯಲ್ಲಿ ರಾತ್ರಿಯ ವೇಳೆ ವಾಹನ ಸಂಚಾರಕ್ಕೆ ಅನುಮತಿಯನ್ನು ಕೊಟ್ಟಿರುವುದಿಲ್ಲ. ಹಾಗೆ ಮಾಂಸಹಾರಿ ಪ್ರಾಣಿಗಳು ಆಹಾರ ಹುಡುಕುವುದು, ಬೇಟೆಯಾಡುವುದು ರಾತ್ರಿಯೇ..  ಹಾಗೇ  ಪ್ರಾಣಿಗಳನ್ನೇ  ನೋಡುತ್ತಾ ನಿಧಾನವಾಗಿ ಮುಂದೆ ಬರುತ್ತಿರಲು ಕುರುಚಲು ಕಾಡಿನಂತೆ ಇದ್ದ ಮರಗಳ ಎತ್ತರ ಹೆಚ್ಚಾಯಿತು. ಆರಂಭದಲ್ಲಿ ಕಂಡ ಮರಗಳ ಎತ್ತರಕ್ಕೂ ಈಗ ಕಾಣುತ್ತಿರುವುದಕ್ಕೂ ದುಪ್ಪಟ್ಟಾಗಿವೆ  ಅರಣ್ಯನೋಡಲು ದಟ್ಟವಾಗಿಯೇ ಕಾಣುತ್ತಿದೆ. ದಪ್ಪನೆಯ ಕಾಂಡದ ಸಾಗುವಾನಿ(ತೇಗ), ಶ್ರೀಗಂಧ, ಬೀಟೆಯ, ಬಿದಿರು ಮೆಳೆಗಳ ರಾಶಿ. ಕಾಡಿನಬೆಂಕಿ ಎಂದು ಕರೆಯುವ ಮುತ್ತುಗದ ಹೂಗಳು ಕಾನನದ ಅಂದವನ್ನು ಹೆಚ್ಚಿಸಿದ್ದವು. ಹಾಗೇ ನನಗೆ ಹೆಸರು ಗೊತ್ತಿಲ್ಲದ ಅನೇಕ ಜಾತಿಯ ಹಸಿರ ವನರಾಶಿಯ ಸೊಬಗು ಮನಸೆಳೆಯುತ್ತಿತ್ತು. ಅಲ್ಲಲ್ಲಿ ಇದ್ದ ಬಿದಿರು ಅರೆಗಳು ಒಣಗಿದಂತೆಯೂ, ಅರ್ಧಂಬರ್ಧ ಚಿಗುರಿದಂತೆಯೂ ಇತ್ತು. ಎಲ್ಲರೂ ಆ ಕಡೆ ಈ ಕಡೆ ನೋಡುತ್ತಾ ಇರ್ರಿ.. ಪ್ರಾಣಿಗಳು ಕಾಣುತ್ತಿರುತ್ತಾವೆ  ಎಂದು ಸೂಚನೆ ಕೊಡುವಾಗಲೇ ಆನೆಯ ಪೋ.... ಎಂದು ಘೀಳಿಡುವ ಶಬ್ದ ಕಿವಿಗೆ ಅಪ್ಪಳಿಸಿತು.

ಎಲ್ಲರೂ 'ಆನೆ' ಎಂದು ಉದ್ಗಾರ ತೆಗೆದೆವು. ಎಂಟತ್ತು ಸೆಕೆಂಡ್ ನಂತರ ಮತ್ತೊಮ್ಮೆ ಅದೇ ಆನೆಯು ಘೀಳಿಡುವ ಶಬ್ಧ...!! ಕುಮುದಾ  ಇಲ್ಲೆಲ್ಲೋ ಆನೆ  ಕೂಗುತ್ತಿದೆ. ಗ್ಲಾಸ್ ಎತ್ಕೊಳಿ  ಎಂದೆ. ಎಲ್ಲಿದೆ ಎಂದು ಸುತ್ತಮುತ್ತ ನೋಡಿದರೆ ಆನೆಯ ದೇಹ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಹಾಗೆ ನೋಡುತ್ತ ಇರಲು ಎಡಗಡೆಯ ಹಳ್ಳದಂತಿರುವ ಬಿದಿರುಮೆಳೆಗಳ ಆಚೆ  ನಮ್ಮ ಸಮಾಂತರವಾಗಿ ಕೂಗತ್ತಾ ಹೋಗುತ್ತಿದೆ. ಏಳೆಂಟು ವರ್ಷದ ಪಡ್ಡೆಯಾನೆಯೊಂದು ರಸ್ತೆಯ ಪಕ್ಕದ ಹಳ್ಳದಲ್ಲಿ ಹೆಜ್ಜೆ ಹಾಕುತ್ತಾ ಘೀಳಿಡುತ್ತಾ ದೊಡ್ಡ ಹೆಜ್ಜೆಹಾಕುತ್ತಾ ಹೋಗುತ್ತಿತ್ತು. ಒಂದು ಕ್ಷಣ ಭಯ ಅನಿಸಿತು. ಕಾರನ್ನು ನಿಲ್ಲಿಸಲೋ ಅಥವಾ ವೇಗವಾಗಿ ಹೋಗಲೋ ಗೊಂದಲವಾಯಿತು. ಯಾವುದಕ್ಕೂ Alert ಇರ್ರಿ ಎನ್ನುತಲೇ ಮುಂದೆ ಸಾಗಿದೆವು.

ನಾಟ್ಯ ಮಯೂರಗಳಂತೂ ಅಗಣಿತ ಸಂಖ್ಯೆಯಲ್ಲಿ ಇದ್ದವು. ಹಾಗೆ ಅರಣ್ಯದಲ್ಲಿ  ಮುಂದೆ ಸಾಗುತ್ತಿರುವಾಗ ಮುಂದೆ ಕಂಡಿದ್ದು ರಸ್ತೆಯ ಪಕ್ಕದಲ್ಲಿ ನಿಂತಿರುವ ಗಜರಾಜ, ಬೃಹತ್ ಸಲಗ. ಅಷ್ಟು ದೊಡ್ಡ ಆನೆಯನ್ನು ರಸ್ತೆಯ ಪಕ್ಕದಲ್ಲೇ ಕಂಡ ನನಗೆ ಎದೆಯ ಬಡಿತವೇ ಜೋರಾಯಿತು. ನಿಲ್ಲಿಸೋಣ ಎಂದರೆ ಇತರೆ ಗಾಡಿಗಳು ಮುಂದೆ ಹೋಗಿದ್ದನ್ನು ನೋಡಿ ಅದನ್ನು ನೋಡುತ್ತಾ ಮುಂದೆ ಬಂದೆ.

ನಮ್ಮದೇ ವಾಹನದಲ್ಲಿ ನಿಧಾನಗತಿಯಲ್ಲಿ ಸಫಾರಿ ಮುಂದುವರೆಸಿದೆವು. ಒಂದು ಕೆಸರು ಮೆತ್ತಿಕೊಂಡಿದ್ದ ಗಂಡು ಹಂದಿ ರಸ್ತೆಯ ಒಂದಷ್ಟು ದೂರದಲ್ಲಿ ತನ್ನ ಕೋರೆಹಲ್ಲಿನಿಂದ ನೆಲ ಗೂರಿ ಮಣ್ಣು ತೆಗೆಯುತ್ತಿತ್ತು. ಅದು ನೋಡಿದರೆ ಪೇಟೆಯಲ್ಲಿ ಸಾಕಿರುವ ಜಾಡಾಗಿರುವ ಹಂದಿತರನೇ ಕಾಣಿಸುತ್ತಿತ್ತು. ಅದು ಹಗಲಲ್ಲಿ ಆಹಾರ ಹುಡುಕುತ್ತಿದ್ದುದರಿಂದ ಮತ್ತು ಅಲ್ಲಿ ಕಾಡುಜನಗಳ ಒಂದು ಜನವಸತಿಯೂ ಇದ್ದುದ್ದರಿಂದ ಯಾರೊ ಇವುಗಳನ್ನು ಸಾಕಿರಬೇಕು ಎಂದೆನಿಸಿತು. ನೋಡಿದರೆ ಹಂದಿಗಳು ಮತ್ತು ಜಿಂಕೆಗಳು ಜೊತೆಯಲ್ಲಿಯೇ ಮೇಯುತ್ತಿವೆ.!ನಮ್ಮ ಅಡವಿಯಲ್ಲಿ ಮನುಷ್ಯರನ್ನು ಕಂಡ ತಕ್ಷಣವೇ ಪ್ರಾಣ ಭಯದಿಂದ ಓಡುವ ಪ್ರಾಣಿಗಳು ಹಗಲು ಹೊತ್ತಿನಲ್ಲೂ ಅವುಗಳ ಪಾಡಿಗೆ ಅವು ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವು.

ನಮ್ಮದು ಬಂಡೀಪುರ ಕಾಡಿನಲ್ಲಿ  ಹುಲಿ ಚಿರತೆಗಳನ್ನು ನೋಡುವುದಾಗಿತ್ತು. ಹುಲಿ ಚಿರತೆಗಳ ತಾಣ ಬೇರೆಕಡೆ ಇರತ್ತೆ ಅದಕ್ಕೇ ಸಫಾರಿ (ಕಾಡಿನ ಒಳಗೆ ಸವಾರಿ) ಹೋಗಬೇಕು. ರಸ್ತೆಯಲ್ಲಿ ವಾಹನಗಳು ಜನರ ಕೂಗಾಟಗಳಿಗೆ  ಅವು ಇತ್ತ ಕಡೆ ಬರಲಿಕ್ಕಿಲ್ಲ. ಅದಕ್ಕೇ ಇಷ್ಟೊಂದು ಜಿಂಕೆಗಳು ರಸ್ತೆಯ ಪಕ್ಕದಲೆಲ್ಲಾ ಓಡಾಡುತ್ತಿರುವುದು. ಎಂದು ಮಾತನಾಡುತ್ತಾ ಬರುತ್ತಿರುವಾಗ ತಮಿಳುನಾಡಿನ ಬಾರ್ಡರ್ ಎದುರಾಯಿತು. ಇಲ್ಲಿಂದಲೇ 'ಮದುಮಲೈ'  ಅರಣ್ಯ ಶುರು. ಬಲಕ್ಕೆ ಹೋದರೆ ಕೇರಳ ಕಾಡು. ಇಲ್ಲಿ ಭೌಗೋಳಿಕವಾಗಿ ಭೂ ಪ್ರದೇಶವನ್ನು ಮಾತ್ರ ರಾಜ್ಯದ ಗಡಿಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಕೆಲವೇ ಕಿಲೋಮೀಟರ್ ಮುಂದೆ ಹೋದರೆ ಕೇರಳ ರಾಜ್ಯದ ವೈನಾಡು ಅರಣ್ಯ... ಮೂರು ರಾಜ್ಯಗಳ ಗಡಿ ಹಂಚಿಕೊಂಡ ಬೃಹತ್ ಅರಣ್ಯಪ್ರದೇಶ ಇದು. ಆದರೆ ಇಲ್ಲಿ ಮನುಷ್ಯ ಪ್ರಾಣಿಗಳಿಗೆ ಮಾತ್ರ ಬಾರ್ಡರ್ ಆಗಿ ನಿಜ ವನ್ಯಜೀವಿಗಳಿಗೆ ಯಾವುದೇ BORDER ಇರುವುದಿಲ್ಲ.. ಯಾವ ಪ್ರಾಣಿ ಯಾವ ರಾಜ್ಯದ ಕಾಡಲ್ಲಿ ಬೇಕಾದರೂ ಓಡಾಡಬಹುದು. ಅವುಗಳಿಗೆ ಕಾಡು ಎಲ್ಲಾ ರಾಜ್ಯದ್ದೂ ಒಂದೇ. ಕಾಡಿನ ಪ್ರಾಣಿಗಳು ರಾಷ್ಟ್ರೀಯ ಸಂಪತ್ತು ಆಗಿದ್ದರಿಂದ ಇದು ನಮ್ಮ ಹುಲಿ. ಅದು ನಿಮ್ಮ ಆನೆ ಅಂತ ಜಗಳ ಆಡುವ ಹಾಗೆ ಇಲ್ಲ... ಯಾವ ರಾಜ್ಯದ ಭೂ ಪ್ರದೇಶದಲ್ಲಿ ಯಾವ ಪ್ರಾಣಿ ಇರುತ್ತಾವೋ ಅವು ಆ ರಾಜ್ಯಕ್ಕೆ ಕಾನೂನಾತ್ಮಕವಾಗಿ ಸೇರಿದವು. ಇತ್ತೀಚಿಗೆ ಕೆಲವು ಪ್ರಾಣಿಗಳಿಗೆ ರೇಡಿಯೋ ಕಾಲರ್ ಎಂಬ ತಂತ್ರಜ್ಞಾನದ ಚಿಪ್ ಅಳವಡಿಸಿರುವುದರಿಂದ ಇದು ನಮ್ಮದೇ ಪ್ರಾಣಿ ಎಂದು ಹಕ್ಕು ಪ್ರತಿಪಾದಿಸಬಹುದು. ತಮಿಳುನಾಡಿನ 'ಮುದುಮಲೈ ಟೈಗರ್ ಪಾರೆಸ್ಟ್ ಚೆಕ್ ಪೊಸ್ಟ್ ನಲ್ಲಿ ಯೆಲ್ಲೋ ಬೋರ್ಡಿನ ವಾಹನದವರೆಲ್ಲಾ ಗಾಡಿ ನಿಲ್ಲಿಸಿ ಪರ್ಮಿಟ್ ತೋರಿಸಿ ದಕ್ಷಿಣೆಯ ಹಾಕಿ ಬರುತ್ತಿದ್ದರೆ ವೈಟ್ ಬೋರ್ಡು ವೆಹಿಕಲ್ ಗಳಿಗೆ  ಯಾವುದೇ ನಿರ್ಬಂಧ ಇರಲಿಲ್ಲ. ಆನೆ ಸವಾರಿ ಮಾಡುವವರಿಗೂ ಇಲ್ಲಿ ಅವಕಾಶ ಇತ್ತು.

ಅಲ್ಲಿಂದ ಮುಂದೆ ಸಾಗಿದರೆ ಊಟಿಯ ರೋಡ್ ಕವಲಾಗುವುದು. ಊಟಿಗೆ ಹೋಗಲು ಎರಡು ರಸ್ತೆ. ಒಂದು ರಸ್ತೆ ತೆಪ್ಪಕಾಡುವಿನ ಮೂಲಕ ಕಲ್ಹತ್ತಿ ಘಾಟಿರಸ್ತೆಯ ಮೂಲಕ ಊಟಿ ತಲುಪುವ ರಸ್ತೆ. ಇನ್ನೊಂದು ಸಾಧಾರಣ ಘಾಟಿಯ ಕೇರಳದ ಗುಡ್ಲೂರು ಮೂಲಕ. ಈ ಗುಡ್ಲೂರು ಮಾರ್ಗ ನನಗೆ ಗೊತ್ತಿರಲಿಲ್ಲವಾದರೂ  'ಊಟಿ' ಎಂದು ಬೋರ್ಡು ಮುಖ ಮಾಡಿರುವ ಕಡೆ ಕಾರು ತಿರುಗಿಸಿದೆ. ಎತ್ತರ ಎತ್ತರವಾದ ರಕ್ಷಿತ ತೇಗದ ಮರಗಳಿರುವ ತಮಿಳುನಾಡಿನ 'ಮದುಮಲೈ' ಅರಣ್ಯದ ಒಡಲು. ಇದು ನೂರಾರು ಕಿಲೋಮೀಟರ್ ಅರಣ್ಯದ ಕೇಂದ್ರದಂತಿದೆ. ತಮಿಳುನಾಡಿನ ಅರಣ್ಯ ಇಲಾಖೆ  ಸಫಾರಿ ಟೂರಿಸಂ ಗೆ ಎಲ್ಲಾ  ಅನುಕುಲಕೂಲ ಮಾಡಿಕೊಂಡಿದ್ದಾರೆ. ವಿಶಾಲ ಅರಣ್ಯಪ್ರದೇಶ. ಅಲ್ಲಿ ಹತ್ತಾರು ಜಿಂಕೆಗಳು ರಸ್ತೆಯ ಪಕ್ಕದಲ್ಲಿ  ಹುಲ್ಲು ಮೇಯುವುದನ್ನು ಕಂಡೆವು. ಆದರೆ  ರಸ್ತೆಯ ಮೇಲೆಲ್ಲಾ  ಆನೆಗಳು ಓಡಾಡಿ  ಲದ್ದಿ ಹಾಕಿರುವ ಗುರುತುಗಳು ಹಸಿ ಹಸಿಯಾಗಿಯೇ ಇದ್ದವು. ಅಲ್ಲೆಲ್ಲಾ  ಖಾಸಗಿಯವರು ಮಹಿಂದ್ರಾ ಜೀಪ್ ಇಟ್ಕೊಂಡು ಬಂದ ಪ್ರವಾಸಿಗರ ವಾಹನಕ್ಕೆ ಕೈ ಅಡ್ಡ ಹಾಕುತ್ತಾ 'ಎಲಿಪ್ಯಾಂಟ್ ಸಫಾರಿ ಸಾರ್' ಎಂದು ಕೂಗುತ್ತಿದ್ದರು. ಸಫಾರಿ ಹೋಗುವ ಯೋಚನೆ ಇರಲಿಲ್ಲವಾದರೂ ಮಾಹಿತಿಗಾಗಿ  ಒಂದತ್ರ ನಿಲ್ಲಿಸಿ ಸಫಾರಿಯ ವಿಚಾರಿಸಿದೆ. ಆನೆ ತೋರಿಸುತ್ತೇವೆ ಒಬ್ಬರಿಗೆ ಆರುನೂರು ಎಂದ. ನೋಡಿಕೊಡ್ರಂತೆ  ಬನ್ನಿ ಸಾರ್  ಚೌಕಾಸಿಗೂ ಆಹ್ವಾನವನ್ನು ಕೊಟ್ಟ. ನಾವು ಹೋದಾಗ ಆನೆಗಳು ಕಾಣಲಿಲ್ಲ ಅಂದ್ರೆ?? ಎಂಬ  ನನ್ನ ಪ್ರಶ್ನೆಗೆ "ಆನೆ ನೋಡಿದ ಮೇಲೆನೇ ಕಾಸು ಕೊಡಿ ಸರ್" ಎಂದ ಆ ಸಫಾರಿ ಜೀಪ್ ಸವಾರ.. ಒಂದು ಒಂದುವರೆ ಸಾವಿರಕ್ಕೆ ಸಾರಸಗಟಾಗಿ ಬರುವಂತೆ ಅವನು ಕಂಡನಾದರೂ ರಿಟರ್ನ್ ಆಗುವಾಗ ಬರುತ್ತೀವಿ ಅಂದೆ. 'ಬರುವಾಗ ಈ ರೋಡಲ್ಲಿ ನೀವು ಬರಲ್ಲ ಸಾರ್...' ಎಂದು ಇವರು ಸಫಾರಿ ಸವಾರಿ ಗಿರಾಕಿಗಳಲ್ಲ ಎಂದೆನಿಸಿ ಅವನು ನಮ್ಮ ಹಿಂದೆ ಬರುತ್ತಿದ್ದ ಇತರ ವಾಹನಗಳ ಮೇಲೆ ಅವನ ಕಣ್ಣುಗಳು ಬಿದ್ದವು. ಅದು ಏಕಮುಖ ರಸ್ತೆಯಾದ್ದರಿಂದ ಆ ರಸ್ತೆಯಲ್ಲಿ ವಾಹನಗಳ ಪ್ರಮಾಣ ಕಡಿಮೆಯೇ ಆಗಿತ್ತು. ಅಷ್ಟೊತ್ತಿಗೆ ಎಂಟೂವರೆ ಒಂಭತ್ತು ಸಮಯ ಆದ್ದರಿಂದ ಹೊಟ್ಟೆಯು ಸಮಾಧಾನ ಕೇಳುತ್ತಿತ್ತು. ಅದು ಕೇರಳ ತಮಿಳುನಾಡು ಕರ್ನಾಟಕ ಹೀಗೆ ಮೂರು ರಾಜ್ಯಗಳ ಬಾರ್ಡರ್ ನ ಬಿಂದು ಆಗಿತ್ತು. ಹತ್ತು ಹದಿನೈದು ಕಿಲೋಮೀಟರ್ ಅಂತರದಲ್ಲಿ ಮಾಸಿನಗುಡಿ ಬೆಟ್ಟವೊಂದು ಪರ್ವತ ಬೆಟ್ಟಗಳ ಸಾಲಿನ ಹೆಗ್ಗುರುತಿನಂತೆ ಕಾಣಿಸುತ್ತಿತ್ತು. ಹಸಿರು  ಸಸ್ಯಗಳು, ಬಿಳಿ ಮಂಜು... ಹಿನ್ನೆಲೆಯಲ್ಲಿ ನೀಲಿ ಸಾಗರದಂತ ನೋಟ ಅದು. ರಸ್ತೆಯಲ್ಲಿ ಎದುರಾದ ಅರಣ್ಯದ ತಪ್ಪಲಿನಲ್ಲಿರುವ ಸುತ್ತಲೂ ಆನೆಗಳು ಬಾರದಂತೆ ಎತ್ತರವಾದ ಪೆನ್ಸಿಂಗ್ ಹಾಕಿದ್ದ ಖಾಸಗಿ ಹೋಟೆಲ್/ರೆಸಾರ್ಟ್ ಒಂದು ಕಾಣಿಸಿತು. ಒಳಗೆ  ಹೋಗಿ ಸಿಕ್ಕಿದ್ದೆಲ್ಲವೂ  ತಿಂದು ಸುಮಾರಾಗಿ ಹೊಟ್ಟೆ ತುಂಬಿಸಿದೆವು. ನಮಗೆ ಯಾರಿಗೂ ತಮಿಳು ಬರುತ್ತಿರಲಿಲ್ಲ. ನನಗೆ ನಲ್ಲ ಇರಕ್ಕ, ತೆರಿಯಾದು, ಸಾಪಾಡ್ ಎಂಬ ಮೂರು ಪದ ಬಿಟ್ರೆ ಏನು ಗೊತ್ತಿಲ್ಲ. ಹೊಟೆಲ್ ನವರಿಗೆ ಊಟಿ ಎಷ್ಟು ದೂರ ಇದೆ ಎಂದು ಕೇಳಿದ್ದಕ್ಕೆ ಅರವತ್ತು ಕಿಮಿ ದೂರದಲ್ಲಿದೆ. ಘಾಟಿ ಇದೆಯಾ ಎಂದು ಕೇಳಿದ್ದಕ್ಕೆ , 36 ಶಾರ್ಪ್ ಏರ್ಪಿನ್ ಕರ್ವ್ ಇದ್ದಾವೆ. ಐದು ಕಿಮೀ ಮುಂದೆ ಹೋದರೆ ಘಾಟಿ ರಸ್ತೆ ಶುರು ಎಂದು ಹೇಳಿದರು. ದೂರದಲ್ಲಿ  ಪರ್ವತದಂತೆ ಎತ್ತರದ  ಹಸಿರ ಬೆಟ್ಟದ ಸಾಲು  ಕಾಣುತ್ತಿದೆ. ಮುಳ್ಳುಗಳ ಕೂಡಿದ ಸಾಧಾರಣ ದಟ್ಟವಾದ ಅರಣ್ಯ. ರಸ್ತೆಯಲ್ಲಿ ಹಾದು ಹೋಗುವಾಗ ಬಾರೆ ಗಿಡದಲ್ಲಿ ಒಂದು ಜೇನನ್ನು ನೋಡಿದೆ. ಕಾರು ನಿಧಾನವಾಗಿ ಚಲಿಸುತ್ತಲೇ ಇತ್ತು. ಈ ಅರಣ್ಯದ ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಹಾಗೆ ಇರಲಿಲ್ಲ. ಆನೆಗಳು ವಾಹನಗಳನ್ನು ಹಿಮ್ಮೆಟ್ಟಿಸುವ, ತಳ್ಳುವ ವೀಡಿಯೋ ಚಿತ್ರಗಳನ್ನು ನಾನು ನೋಡಿದ್ದರಿಂದ ಸ್ವಲ್ಪ ಭಯವೂ ಇತ್ತು. ಇಲ್ಲಿಯೂ ಜೇನುಗಳು ನಮ್ಮ ಕಡೆ ಇದ್ದಂತೆಯೇ  ಇದ್ದಾವೆ ಎನಿಸಿತು. ಹಾಗೆ ನೋಡಿದರೆ  ಜೇನು ಕುರುಬರು, ಸೋಲಿಗರು ಈ ಕಾಡೇ  ಇವರ ತವರು. ಇವರ ಬದುಕಿನ ಕಾನನ.. ಸರ್ವರ ಜೀವನದ ಸೆಲೆ, ಭರವಸೆಯ ನಂಬಿಕೆಯೇ ಈ ಕಾಡುಗಳು. ಹಾಗೇ ನೂರು ಮೀಟರ್  ಮುಂದೆ ಸಾಗುತ್ತಾ ರಸ್ತೆಯ ಮೊಗ್ಗುಲಲ್ಲಿ ಆನೆಗಳು ಕಾಣಬಹುದು ಎಂಬ ಅಂದಾಜು ಇತ್ತು. ಮುಂದೆರಡು ಮೂರು ಕಿಲೋಮೀಟರ್ ಹೋದರೆ ಕಡಿದಾದ  ಎತ್ರದ ಬೆಟ್ಟಗಳು ಇರುವುದರಿಂದ ಸಮತಟ್ಟಾದ ಭೂ ಅರಣ್ಯವಾದ್ದರಿಂದ ಖಂಡಿತವಾಗಿ ಆನೆಗಳು ಇರಲೇಬೇಕಾದ ಸ್ಥಳವಾದ್ದರಿಂದ ಆನೆಗಳ ದರ್ಶನ  ಆಗಬಹುದೆಂಬ ನಿರೀಕ್ಷೆಯಿಂದ ನೋಡುತ್ತಾ ಹೋದಂತೆ  ನನಗೆ ಕಾಣಿಸಿದ್ದು ಬಟಾಬಯಲಿನಲ್ಲಿ  ಎಲೆಗಳೆಲ್ಲಾ ಉದುರಿಹೋದ  ಯಾವುದೋ ಬಳ್ಳಿಗೆ ಕಟ್ಟಿದ ಜೇನುಗೂಡು..! ಜೇನು ತೆಗೆಯಲು ಅಷ್ಟು ಶ್ರಮ ಪಡಬೇಕಾಗಿರಲಿಲ್ಲ. ಜೇನು ತೆಗೆಯಲು ಯಾವುದೇ ಅಡೆ ತಡೆಗಳು ಇಲ್ಲದೇ ಇತ್ತು. ಅಡೆ ತಡೆ ಇದ್ದದ್ದು ಆ ಕಾಡಿನಲ್ಲಿರುವ ಆನೆಗಳು ಇತರ ಪ್ರಾಣಿಗಳು  ಮಾತ್ರ. ಅದನ್ನು ಬಿಟ್ಟರೆ ನಾವು ಹೋಗುತ್ತಿದ್ದುದು ಊಟಿಗೆ... ಸಹಜವಾಗಿ ನಮಗೂ ಹೆಂಡತಿಯೊಂದಿಗೆ ಒಳ್ಳೆಯ ಪೋಟೋ ತೆಗೆದುಕೊಳ್ಳುವ ಆಸೆ ಇದ್ದೇ ಇತ್ತು. ಜೇನು ತೆಗೆಯುವಾಗ ಆಕಸ್ಮಿಕವಾಗಿ  ಜೇನು ಹುಳುಗಳು ಮುಖದ ಯಾವ ಭಾಗಕ್ಕೆ ಕಚ್ಚಿದರೂ ಅಂದವಾಗಿ ಪೋಟೋ ತೆಗೆಸಿಕೊಳ್ಳಬೇಕೆಂಬ ಆಸೆಗೆ ತಣ್ಣೀರೆರೆಚ ಬೇಕಿತ್ತು... ಅದಲ್ಲದೇ ಹನುಮಂತನ ಮೂತಿಯನ್ನು ಇಟ್ಟುಕೊಂಡು ಪೋಟೋ ತೆಗೆಸಿಕೊಂಡು ಹಾಸ್ಯಾಸ್ಪದ ಆಗುವುದು ಬೇಡವಾಗಿತ್ತು. ಆದರೆ ಬಯಲಲ್ಲಿ ಕಂಡ ಅದೂ ನಮ್ಮದಲ್ಲದ ಬೇರೆ ವಾಯುಗುಣ, ಪರಿಸರದಲ್ಲಿ ಕಟ್ಟಿದ ಜೇನು ಅಲ್ಲಿನ ಪರಿಸರದ ಹೂಗಳಿಂದ ಜೇನು ಮತ್ತು ಮಕರಂದದ ಮೇಣ ವಿಶೇಷ ಅನಿಸುವುದು. ಅದು ಆ ಪರಿಸರದಲ್ಲಿ ಹೆಚ್ಚು ಇರುವ ಹೂಗಳಂತೆ ಪ್ಲೇವರ್ ಬರುತ್ತಿರುತ್ತದೆ. ವಿಶೇಷವಾಗಿರುತ್ತೆ. ಇದರಿಂದ ಔಷದೀಯ ಗುಣಗಳು ಹೆಚ್ಚಿರುತ್ತೆ. ಅದಕ್ಕಾಗಿ 'ವೈದ್ಯಕ್ಕೆ ಜೇನು' ಎಂಬ ವಿಷಯಕ್ಕೆ ಬಂದಾಗ ಜೇನು ಕೃಷಿಯ ಪೆಟ್ಟಿಗೆಗಳನ್ನು ಆ  ಪ್ರತ್ಯೇಕ ಹೂಗಳ ಸಮೀಪದಲ್ಲಿ ಇಟ್ಟು ಅದರಿಂದ ತುಪ್ಪ ಮತ್ತು ಮೇಣ ಸಂಗ್ರಹಿಸುತ್ತಾರೆ. ಅದು ವಿಶಿಷ್ಟ, ಅತ್ಯಂತ ಸ್ವಾದಿಷ್ಟ ವಾಗಿದ್ದು  ವಿಶೇಷ  ಆಯ್ದ ಕಾಯಿಲೆಗಳಿಗೆ ಔಷಧೀಯವಾಗಿ ಬಳಸುತ್ತಾರೆ. ಇಂತಹ ಜೇನು ತುಪ್ಪ ಬಹಳ ದುಬಾರಿ ಆಗಿರುತ್ತದೆ. ಇದೆಲ್ಲದರ ಅರಿವಿದ್ದ ನನಗೆ ಸಹಜವಾಗಿ ವಿಭಿನ್ನ ಪರಿಸರದಲ್ಲಿ ಕಂಡ ಜೇನು ಬಿಟ್ಟೋಗಲು ಮನಸಾಗಲಿಲ್ಲ.. ಕಾರು ನಿಲ್ಲಿಸಿ ಕೆಳಗಿಳಿದು ವಾಟರ್ ಬಾಟಲ್ ಹಿಡಿದು ನೀರು ಕುಡಿಯುತ್ತಾ ಸಮೀಪದಲ್ಲಿಯೇ ಆನೆಗಳು ಘೀಳಿಡುವ, ಇತರ ಪ್ರಾಣಿಗಳ ಕೂಗಾಟದ ಶಬ್ಧ ಏನಾದರೂ ಕೇಳುತ್ತಿದೆಯಾ ಎಂದು  ಪರಿಸ್ಥಿತಿ ಅವಲೋಕಿಸಿದೆ. ನವಿಲು ಮತ್ತು ಕೆಲವು ಸಣ್ಣ  ಸಣ್ಣ ಹತ್ತಾರು ಪಕ್ಷಿಗಳ ಕಲವರವ ಬಿಟ್ಟರೆ  ರಸ್ತೆಯಲ್ಲಿ ಬರುತ್ತಿದ್ದ ವಾಹನಗಳ ಶಬ್ಧ ಹೊರತು ಬೇರೇನು ಕೇಳುತ್ತಿರಲಿಲ್ಲ. ದೇವರಾಜನನ್ನು ಮಾತ್ರ ಕೆಳಗಿಳಿಸಿ ಕಾರಿನ ignition On ಲ್ಲೇ ಇಟ್ಟು ಆಚೆ ಈಚೆ ಯಾವ ವಾಹನಗಳು ಬಾರದೇ ಇರುವ ಗ್ಯಾಪ್ ನೋಡಿ ಕೆಲವೇ ಸೆಂಕೆಂಡ್ ಗಳಲ್ಲಿ ಆ ಜೇನಿನ ಕೊನೆಯನ್ನು ಅಲ್ಲಾಡಿಸಿ ಹುಳುಗಳ ಎಬ್ಬಿಸಿದೆ.  ಹಸಿ ಕಡ್ಡಿಗೆ ಇಟ್ಟಿದ್ದರಿಂದ ಅದನ್ನು ಸುರಕ್ಷಿತವಾಗಿ ಮುರಿಯುವುದು  ಕೊಂಚ ಸಮಯ ತೆಗೆದುಕೊಂಡಿತು. ಜೇನು ಕಟ್ಟಿದ ಬಳ್ಳಿ ಒಂಥರಾ ರಬ್ಬರ್ ನಂತಹ ಬಳ್ಳಿ... ರಬ್ಬರ್ ನಂತೆ ಯಾವಕಡೆ  ಬಗ್ಗಿಸಿದರೂ ಸ್ವಲ್ಪವೂ ಮುರಿಯದೇ ಬಗ್ಗುತ್ತಿತ್ತು... ಅಲ್ಯೂಮಿನಿಯಂ ರೀತಿ ಹತ್ತಾರು ಸಲ ಬಗ್ಗಿಸಿದಾಗಲೂ ಮುರಿಯಲಿಲ್ಲ.. ಆಗ ಕೊಂಚ ಒಳ ಹೋಗಿ ಆ ಬಳ್ಳಿ ಕವಲೊಡೆದ ಜಾಗದಿಂದ ಎಳೆದು ಜಗ್ಗಬೇಕಾಯಿತು.    ಕಾರಲ್ಲಿ ಎಲ್ಲಾ ರೀತಿಯ Tools ಇದ್ದವಾದರೂ 'ಮಾನವ ಅತಿಕ್ರಮಣ ನಿಷೇಧಿಸಿದ ರಕ್ಷಿತಾರಣ್ಯ'ದಲ್ಲಿ tools ತೆಗೆದುಕೊಳ್ಳಲಿಲ್ಲ. ಯಾರಾದರೂ ಅರಣ್ಯ ಇಲಾಖೆಯ ಗಾರ್ಡ್ಸ್  ನೋಡಬಹುದು ಎಂದು ಬಲ ಹಾಕಿ ಬಳ್ಳಿ ಸಮೇತ ಎಳೆದು ಕಿತ್ತು ತಂದೆ.. ದೇವರಾಜ ಮಾತ್ರ ಪ್ರವಾಸಿಗರ ಕಾರುಗಳು ಹಾದು ಹೋಗುವಾಗ ನೀರು ಕುಡಿಯುವಂತೆ ವಾಟರ್ ಬಾಟಲ್ ಹಿಡಿದು ಪೋಸ್ ಕೊಡುತ್ತಲೇ ಇದ್ದ. ತುಪ್ಪ ಇರುವ ತಲೆಯ ಭಾಗವನ್ನು ಮಾತ್ರ ತೆಗೆದುಕೊಂಡು ಮರಿ ಇರುವ ರೊಟ್ಟಿಯನ್ನು ಕಿತ್ತು ಜೇನು ಮುರಿದ ಕೊನೆಗೆ ಅಡ್ಡಲಾಗಿ ಸಿಕ್ಕಿಸಿದೆ. ತುಪ್ಪದ ಕಡ್ಡಿ ಇರುವ ಬಳ್ಳಿಯನ್ನು ಯಾವ ಕಾಲದಲ್ಲೋ ಮುರಿದು ಬಿದ್ದ ಮುಳ್ಳತಂತಿ ಕಂಬದ ಏಣಿಗೆ ಉಜ್ಜಿ ಕತ್ತರಿಸಿ ಹಿಡಿದು  ತಂದ ನಾನು ಕುಮುದಾಳ ಕೈಗಿಟ್ಟು ಕಾರ್ ಸ್ಟೀರಿಂಗ್ ಹಿಡಿದು ಕಾರು ಮುಂದೆ ಚಲಾಯಿಸುತ್ತಾ ಬಂದೆ... ಅವತ್ತು ಊಟಿಯ ನಿಸರ್ಗಧಾಮದಲ್ಲಿ ಒಳ್ಳೆಯ  ಒಳ್ಳೆಯ ಪೋಟೋಗಳನ್ನು ತೆಗೆಸಿಕೊಳ್ಳಲು ಜೇನುಹುಳಗಳಿಂದ ಯಾವುದೇ ತೊಂದರೆ ಆಗಲಿಲ್ಲ. ಅರ್ಥಾತ್ ಒಂದು ಹುಳುವೂ  ಕಚ್ಚಲಿಲ್ಲ. ಪಯಣ ಸಾಗುತ್ತಲೇ ಇತ್ತು. ಕುಮುದಾ ಒಂದು use and through ಪ್ಲೇಟ್ ಲ್ಲಿ ಜೇನು ಹಾಕಿಕೊಂಡು ಎಲ್ಲರಿಗೂ ಹಂಚಿದಳು. ನಾನು ಕೈಯಲ್ಲಿ ತೆಗೆದುಕೊಂಡರೆ ಸ್ಟೀರಿಂಗ್ ಎಲ್ಲಾ ತುಪ್ಪ ಆಗುವುದು. ಇಲ್ಲ... ಕಾರು ನಿಲ್ಲಿಸಬೇಕಾದ್ದರಿಂದ ಕುಮುದಾಳೇ ತುಪ್ಪ ಬಾಯಿಗಿಟ್ಟಳು. ನನಗೆ ತುಪ್ಪಕ್ಕಿಂತ  ಹೂವಿನ ಮಕರಂದದ ಸಂಗ್ರಹವಾದ ಮೇಣ  ಬಹಳ ಇಷ್ಟ ಆಗುತ್ತಿತ್ತು. ಈ ಮೇಣ ಅಲ್ಲಿನ ಪರಿಸರದ ಎಲ್ಲಾ ಹೂಗಳ ಸಾರ. ನುಣ್ಣನೆಯ ನಾನಾ ಹೂಗಳ ಮಕರಂದ...!! ಅದು ನಮ್ಮ ಭಾಗದ ಮೇಣಕ್ಕಿಂತ ವಿಭಿನ್ನ ಮತ್ತು  ಸುವಾಸಿತ ಪ್ಲೇವರ್ ನೊಂದಿಗೆ ಅದ್ಭುತ ರುಚಿಯಾಗಿತ್ತು. ನಾನು ಸಾವಿರಾರು ಜೇನುಗಳ ಮೇಣ ತಿಂದಿರುವೆನಾದರೂ ಆಯಾ ಪರಿಸರದಿಂದ ಪರಿಸರಕ್ಕೆ ವಿಭಿನ್ನ ಪ್ಲೇವರ್ ನಿಂದ ಕೂಡಿರುತ್ತದೆ. ಇಂತಹ ಆಯ್ದ ಹೂವುಗಳ ಮೇಣವೇ ಇಂದು ಒಂದು ತೊಲಕ್ಕೆ (ಹತ್ತು ಗ್ರಾಂ)  ಹತ್ತರಿಂದ ಇಪ್ಪತ್ತೈದು ಸಾವಿರ ಬೆಲೆಯಿದೆ. ನೀಲಗಿರಿ ಬೆಟ್ಟದ ಸಾಲಿನ ಪಾದಗಳಂಚಿಗೆ ಧಾವಿಸಿದ ನಾವು ಇನ್ನೂ ಘಾಟಿಯ ಆರಂಭ ಆಗಬೇಕಿತ್ತು. ಆದರೆ ಆನೆಗಳ ಲದ್ದಿಯಂತೂ ರಸ್ತೆಯ ತುಂಬೆಲ್ಲಾ ತುಂಬಿ ವಾಹನಗಳಿಂದ ರಚ್ಚುಗೊಚ್ಚಾಗಿ ಹೋಗಿತ್ತು. ನಮ್ಮ ಭಾಗದಲ್ಲಿ ದನಗಳನ್ನೋ, ಕುರಿಗಳನ್ನೊ  ಮೇಯಿಸಲು ಹೊರಡಿಸಿದಾಗ ಹಟ್ಟಿಯ ಭಾಗಿಲಲ್ಲಿ, ದಾರಿಯೆಲ್ಲೆಲ್ಲಾ ಪಿಚ್ಗೆ, ಸಗಣಿ ತೊಪ್ಪೆ ಹಾಕಿದಂತೆ ಆನೆಗಳು ರಸ್ತೆಯ ತುಂಬೆಲ್ಲಾ  ಲದ್ದಿಯ ಹಾಕಿದ್ದವು. ಆ ಲದ್ದಿಯ ನೋಡಿಯೇ  ಹಠತ್ತಾಗಿ ಆನೆಗಳು ಕಾರಿನತ್ತ ನುಗ್ಗಿ ಬಂದರೇ??? ಎಂಬ ದಿಗಿಲು ಒಂದೆಡೆ ಆದರೆ ರಾತ್ರಿ ಹೊತ್ತು ಈ ರಸ್ತೆಯಲ್ಲೇ ಆನೆಗಳು ನಡೆದಾಡುತ್ತಾ ಹೋಗಿರುತ್ತಾವೆ.  ಎತ್ತರದ ಏರುದಿಬ್ಬಗಳ Hairpin curve ಗಳಲ್ಲಿ  ಮೇಲಕ್ಕೆ ಹತ್ತಲಾಗದೇ ವಾಪಾಸು ಬಂದಿರಬಹುದು. ಬರುವಾಗ ರಸ್ತೆಯ ಅಕ್ಕಪಕ್ಕ ಎಲೆ ಸೊಪ್ಪು ತಿಂದು ರಸ್ತೆಯಲೆಲ್ಲಾ ಈ ತೆರನಾಗಿ ಅವಾಂತರ ಮಾಡಿರಬೇಕು ಎಂದು ನಮಗೆ ನಾವೇ ಮಾತಾಡುತ್ತಾ ಐದ-ಆರನೇ ತಿರುವಿನಲ್ಲಿ ಕಾರು ನಿಲ್ಲಿಸಿ ಎಲ್ಲರೂ ಜೇನು ತಿಂದು ಕೈ ತೊಳೆದುಕೊಂಡೆವು. ರುದ್ರ ನನಗೆ ಘಾಟಿ ರಸ್ತೆಯಲ್ಲಿ vomit ಬರತ್ತೆ ಎಂದು ಕಡ್ಡಿಯನ್ನು ಹಿಡಿದು ಚೀಪುತ್ತಲೇ ಇದ್ದ... ಅನೇಕ ತಿರುವುಗಳನ್ನು ತಿರುಗಿದ ಮೇಲೆ ಎಲ್ಲರ ಕಿವಿ ಮುಚ್ಚಿಕೊಂಡಂತಾದವು.. ಸಮುದ್ರ ಮಟ್ಟಕ್ಕಿಂತ ಹೆಚ್ಚು ಮೇಲಕ್ಕೆ ಹೊದಂತೆಲ್ಲಾ ವಾತಾವರಣವೇ ಬದಲಾಗಿ ಹೋಯಿತು. ತೆಪ್ಪಕಾಡುವಿನ ಜೇನನ್ನು ಕದ್ದುತಿಂದು 'ಕಲ್ಲಹತ್ತಿ' ಘಾಟ ನ್ನು ತೆಪ್ಪಗೆ ಹತ್ತುತ್ತಾ.. ಸುತ್ತಮುತ್ತಲಿನ ನಿಸರ್ಗ ಸೌಂದರ್ಯ ಸವಿಯುತ್ತಾ ನೀಲಗಿರಿ ಸಾಲಿನ ರಮ್ಯತಾಣ, ನಿಸರ್ಗಧಾಮ ಊಟಿಗೆ ಹೋದೆವು.

....................... ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************





Ads on article

Advertise in articles 1

advertising articles 2

Advertise under the article