-->
ಸವಿಜೇನು : ಸಂಚಿಕೆ - 10

ಸವಿಜೇನು : ಸಂಚಿಕೆ - 10

ಸವಿಜೇನು : ಸಂಚಿಕೆ - 10
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು.

           

ನಮ್ಮದು ತೋಟದಲ್ಲಿ ಮನೆ ಆದದ್ದರಿಂದ ನಮ್ಮ ಊರೊಳಗೆ ಹೋಗಿಬರಲು ಸದಾ ನಾನು ಸೈಕಲನ್ನೇ ಬಳಸುತ್ತಿದ್ದೆ. ನನ್ನ ಸೈಕಲ್ ಊರೊಳಗೆ ಬರುವಿಕೆಗಾಗಿ ನನ್ನ ಹಿರಿಯ ಸೀನಿಯರ್ ಬ್ರದರ್ಸ್ಗಳು ನನ್ನ ಸಹಪಾಠಿಗಳು ಸದಾ ಕಾದಿರುತ್ತಿದ್ದರು. ನನ್ನ ಸ್ನೇಹಿತರು ರವಿಕಿರಣ, ವೆಂಕಟೇಶ, ಶಿವರಾಜ, ಜಾನಮದ್ದಿ ಈರಣ್ಣ, ಕಟ್ಟಾ, ಹಾಗೂ ಸೀನಿಯರ್ ಗಳಾದ ಸಂತೋಷ, ತಿರುಮಲೇಶ.. ಇತರರು ನಾನು ಊರೊಳಗೆ ಬಂದೊಡೊನೆ ನನ್ನ ಜೊತೆಯಾಗುತ್ತಿದ್ದರು. ನಾನೂ ಕೂಡ ಹೋದಾಗ ಇವರ ಮನೆಯ ಮುಂದೆ ಒಂದು ರೌಂಡ್ ಹೋಗಿ ಬರುತ್ತಿದ್ದುದರಿಂದ ಅವರೂ ಓಡಿ ಬಂದು ನನ್ನ ಜೊತೆಗೆ ಸೇರಿಕೊಳ್ಳುತ್ತಿದ್ದರು. ನನಗಿಂತಲೂ ಮೂರು ವರ್ಷ ಸೀನಿಯರ್ ಆದ ತಿರುಮಲೇಶನು ನಾನು ಎಂಟನೇ ತರಗತಿಗೆ ಹಾಸ್ಟೆಲ್ ಸೇರಿದಾಗ ಅವರು ಅದೇ ಹಾಸ್ಟೆಲ್ ನಿಂದ ನಿರ್ಗಮಿತವಾಗಿದ್ದರು. ನಾನು ಹಾಸ್ಟೆಲ್ ನಲ್ಲಿ ಸೀನಿಯರ್ಸ್ ಎದುರು ಬಹುಬೇಗ ನೆಲೆ ನಿಲ್ಲಲು ಈ ಬಂಜಗೆರೆ ತಿರುಮಲೇಶ ಹಾಸ್ಟೆಲ್ ನಲ್ಲಿ ಮಾಡಿದ್ದ ಹವಾ ಕೂಡ ಕಾರಣ. ನಮ್ಮ ಊರಿನ ಹೆಸರನ್ನು ಕೇಳಿದ ತಕ್ಷಣ ನನ್ನಿಂದ ಸೇವೆ ತೆಗೆದುಕೊಳ್ಳಲು ಬಯಸಿದ ಒಂಭತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ತಿರುಮಲೇಶನೇ ಇವರುಗಳಿಂದ full ಸರ್ವೀಸ್ ತೆಗೆದುಕೊಂಡಿದ್ದ ಕಾರಣ ಯಾರೂ ನನ್ನನ್ನು ಹುರಿದು ಮುಕ್ಕಲಿಲ್ಲ. ಹಾಸ್ಟೆಲ್ ನಲ್ಲಿ ಹತ್ತನೇ ತರಗತಿಯ ಮುಗಿಸಿ ಚಿತ್ರದುರ್ಗದ ಎಸ್ ಜೆ ಎಂ ಕಾಲೇಜಿನಲ್ಲಿ ನಾನು ಸೇರಿದಾಗ ಅದೇ ಕಾಲೇಜಿನಲ್ಲಿ ಇದೇ ತಿರುಮಲೇಶ ಕಾಲೇಜಿನಿಂದ ಹೊರಹೋಗಿದ್ದ. ನಾನು ಕಾಲೇಜಿಗೆ ಸೇರಿ ಐದಾರು ತಿಂಗಳಾಗಿತ್ತು. ಅದಗಾಲೇ ನನಗೆ ಕಾಲೇಜಿಗೆ ಹೋಗಿಬರುವುದು ಬೋರಾಗುತ್ತಾ ಬಂದಿತ್ತು. ಅದೇ ಶಿವರಾಮ ಶಶಿ ಮೂರ್ ನಾಲ್ಕು ಜನ ಗಂಡು ಸ್ನೇಹಿತರು. ಕಾಲೇಜಿಗೆ ಬಂದು ಪಾಠ ಕೇಳಲು ಅಷ್ಟಾಗಿ ಮನಸ್ಸಿರಲಿಲ್ಲ. ಏನೇನೋ ಚಂಚಲತೆ, ಓದಬೇಕು ಬರೀಬೇಕು ಯಾವುದಕ್ಕೂ ಆಸಕ್ತಿ ಹೆಚ್ಚುಕಾಲ ಉಳಿಯುತ್ತಿರಲಿಲ್ಲ. ಪುಸ್ತಕ ಕೊಂಡುಕೊಳ್ಳಲಾಗದೇ ಪುಸ್ತಕಕ್ಕಾಗಿ ಕಾಲೇಜು library ಯಲ್ಲಿ ಒಂದು ಅಕೌಂಟ್ ಇರಲೆಂದು ಅದನ್ನು ಚಾಲ್ತಿಯಲ್ಲಿಟ್ಟುಕೊಳ್ಳಲು ಮಾತ್ರ ಪ್ರತಿವಾರ ಪುಸ್ತಕಗಳನ್ನು ಬದಲಾಯಿಸಿಕೊಂಡು ಬಂದು ಇಡುತ್ತಿದ್ದೆವು. ಹೀಗೆ ಮಾಡುತ್ತಿದ್ದಾಗ ಒಂದು ದಿನ ಲೈಬ್ರರಿಯ ಪುಸ್ತಕ ಬದಲಾಯಿಸಲು ಹೋದಾಗ ಈ ತಿರುಮಲೇಶ ಆಕಸ್ಮಿಕವಾಗಿ ಕಾಲೇಜಿನ ಮುಖ್ಯದ್ವಾರದಲ್ಲಿ ನನಗೆ ಕಂಡು "ಹೇಯ್ ಬಾ ಇಲ್ಲಿ.. ನಿನಗೊಂದು ಒಳ್ಳೆಯ ಚಾನ್ಸ್ ಕೊಡುಸುವೆ" ಅಂತ ಕಾಲೇಜಿನ ಎನ್ ಎಸ್ ಎಸ್ ಕಚೇರಿಗೆ ಕರೆದುಕೊಂಡು ಹೋದ.. ನನಗೆ ಯಾವ ಚಾನ್ಸ್ ?? ಏನು ಕತೆ ಅಂತ ಕೇಳುವ ಹೊತ್ತಿಗೆ "ಸಾರ್ ಇವನು ನಮ್ಮ ಬ್ರದರ್... ನಾಳೆ ಕ್ಯಾಂಪಿಗೆ ಬರುತ್ತಾನೆ ಕರೆದುಕೊಂಡು ಹೋಗಿ" ಎಂದು NSS ಅಧಿಕಾರಿಗಳಿಗೆ ಶಿಫಾರಸು ಮಾಡಿದ. ಅವರೋ ಕ್ಯಾಂಪಿನ Strength of attendence ಗಾಗಿಯೋ ಅಥವಾ ಈ ತಿರುಮಲ ಹೇಳಿದ ಎಂಬ ಕಾರಣಕ್ಕೋ "ಸರಿ ತಿರುಮಲ... ಬರಲಿ ಬಿಡು" ಎಂದು ತಿರುಮಲೇಶ ಹೇಳಿದ ಒಂದೇ ಮಾತಿಗೆ ಒಪ್ಪಿಕೊಂಡು ನಾಳೆ ಹನ್ನೊಂದು ಗಂಟೆಗೆ ಲಗೇಜ್ ತೆಗೆದುಕೊಂಡು ಬಂದು ಹಾಜರಿರಲು ತಿಳಿಸಿಯೇ ಬಿಟ್ಟರು. ಕಾಲೇಜಿಗೆ ಸರಿಯಾಗಿ ಹೋಗದ ನಾನು Ncc ಬಗ್ಗೆ ಕೇಳಿದ್ದೆ. ಆದರೆ ಈ NSS ಬಗ್ಗೆ ಆಗಲೀ NSS ಕ್ಯಾಂಪಿನ ಬಗ್ಗೆ ಆಗಲೀ ಯಾವ IDEAನೂ ಇಲ್ಲದಿದ್ದ ನನಗೆ ಕ್ಯಾಂಪಿಗೆ ಹೋಗಲು ಹಿಂಜರಿದೆನಾದರೂ ಕಾಲೇಜಿಗೂ ಹೋಗದೇ ದುರ್ಗದ ಕೋಟೆಯ ಮೇಲೆಲ್ಲಾ ಅಲೆಯುತ್ತಾ ಇದ್ದ ನನಗೆ ಏನೋ NSS ಕ್ಯಾಂಪ್ ಗೆ ಹೋಗಿ ನೋಡೋಣ ಎಂದೆನಿಸಿ ಇರುವ ಒಂದೆರಡು ಬಟ್ಟೆಗಳನ್ನು ಯಾವುದೋ ಬ್ಯಾಗಿಗೆ ತುಂಬಿ ಹೊರಟೆ. ನಮ್ಮ ಕಾಲೇಜಿನದೇ ಒಂದು ಬಸ್ಸು ಚಿತ್ರದುರ್ಗದ ಹತ್ತಿರದ ಸೊಂಡೆಕೆರೆ ಎಂಬ ಗ್ರಾಮಕ್ಕೆ ಹೊರಟಿತು. ಆ ಕ್ಯಾಂಪಿನಲ್ಲಿ ನಾನೊಬ್ಬನೇ ಪಿಯು ಹುಡುಗ ಉಳಿದವರೆಲ್ಲರೂ BA ಮತ್ತು BSc ಹುಡುಗರು. ಹುಡುಗರು ಹುಡುಗಿಯರು ಸಮ ಪ್ರಮಾಣದಲ್ಲಿ ಇದ್ದರು. ನಾನು ಮಾತ್ರ ಸಣ್ಣವನು ಪಿಯೂಸಿ ಯವರು ಯಾರೂ ಬರದೇ ಇದ್ದುದರಿಂದ ಬರೀ ಹಿರಿಯರೇ ಇದ್ದುದಕ್ಕೆ ಕೊಂಚಮಟ್ಟಿಗೆ ನನಗೇ ಕೀಳರಿಮೆ ಉಂಟಾಯಿತು. ತಪ್ಪಿಸಿಕೊಂಡು ಬರಲು ಅವಕಾಶ ಇದ್ದರೂ ಆ ಊರಿನಿಂದ ಚಿತ್ರದುರ್ಗಕ್ಕೆ ಬರಲು ನನ್ನ ಬಳಿ ಒಂದು ಪೈಸೆಯೂ ಹಣ ಇರದೇ ಇದ್ದುದರಿಂದ ನಾನು ಕ್ಯಾಂಪಿನಲ್ಲೇ ಮುಂದುವರೆಯುವುದು ಅನಿವಾರ್ಯ ಆಯಿತು. ಅಷ್ಟಾಗಿ ಹೊಸಬರ ಪರಿಚಯದ ಸನಿಹಕ್ಕೂ ಹೋಗದ ನಾನು ಅನಿವಾರ್ಯವಾಗಿ ಹೊಸಬರ ಸ್ನೇಹ ಮಾಡಬೇಕಾಯಿತು. ಕ್ಯಾಂಪಿನ ಮೊದಲನೇ ದಿನ ಸೊಂಡೆಕೆರೆ ಗ್ರಾಮದ ಶಾಲೆ, ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ನಾವು ಸಂಜೆಯ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನೋಡಿ ಭಾಗವಹಿಸಿದ ಕೆಲವರು ಕನಿಷ್ಠ ಸಾಧನೆ ಮಾಡಿದ್ದನ್ನು ನೋಡಿ ಇವರಿಗಿಂತ ನಾನು ಭಾಗವಹಿಸಿದರೆ ಉತ್ತಮ ಎಂದು ತಿಳಿದು ನಾನು ನಾಳೆ ಭಾಗವಹಿಸಬೇಕು ಎಂದು ನಿರ್ಧಾರ ಮಾಡಿದೆ. ಎರಡನೆಯ ದಿನ ಪಕ್ಕದ ಹಳ್ಳಿ ಜೆ ಎನ್ ಕೋಟೆ ಎಂಬ ಊರಿನಲ್ಲಿ ಒಂದು ಹಳೆಯ ಬಳಕೆಯಲ್ಲಿಲ್ಲದ ಕಲ್ಯಾಣಿಯೊಂದರ ಸ್ವಚ್ಚತೆ ಮಾಡಬೇಕಾಗಿತ್ತು. ಎಲ್ಲರೂ ಉಪಹಾರ ಸೇವಿಸಿ ಗ್ರಾಮಸ್ಥರ ಪ್ರಾಯೋಜಕತ್ವದ ಟ್ರಾಕ್ಟರ್ ನಲ್ಲಿ ಆ ಹಳ್ಳಿಗೆ ಒಂಭತ್ತು ಒಂಭತ್ತುವರೆ ಸುಮಾರಿಗೆ ಗುದ್ದಲಿ, ಸಲಿಕೆ, ಪುಟ್ಟಿ, ಹಾರೆ, ಕೊಡಲಿ ಮಚ್ಚುಗಳನ್ನು ಹಿಡಿದು ಹೊರಟೆವು.

ಸಾರ್ವಜನಿಕ ಕಲ್ಯಾಣಿಯಲ್ಲಿ ಸರ್ಕಾರಿ ಜಾಲಿ ಗಿಡಗಳು, ಅಂಟ್ರಿಕೆ, ಉತ್ತರಾಣಿ ಕಡ್ಡಿಯ ಗಿಡಗಳು, ನಾನಾ ಗಿಡಗಂಟೆಗಳೆಲ್ಲವೂ ಬೆಳೆದು ಅಲ್ಲಿ ಕಲ್ಯಾಣಿಯೇ ಇಲ್ಲವೇನೋ ಎಂಬಂತೆ ಆಗಿತ್ತು. ಗ್ರಾಮದ ಹಿರಿಯರ ಸೂಚನೆ ಮೇರೆಗೆ ಅದನ್ನು ಸ್ವಚ್ಛಗೊಳಿಸಲು ಅಣಿಯಾಗಿ ಮೊದಲು ಗಿಡಗಳು, ಸೊಪ್ಪು ಸೆದೆ ಸವರಿ ಆಮೇಲೆ ಬಾವಿಯಲ್ಲಿ ಮುಚ್ಚಿದ್ದ ಹೂಳು ತೆಗೆಯುವುದು ಅಂದಿನ plan of work ಆಗಿತ್ತು. ಅದರಂತೆ ಮೊದಲು ಸರ್ಕಾರಿ ಜಾಲಿಗಿಡಗಳನ್ನು ಸವರುವ ಕೆಲಸಕ್ಕೆ ಅಡಿಯಿಟ್ಟೆವು. ನಾಲ್ಕು ತಂಡವಾಗಿ ಕಲ್ಯಾಣಿಯ ನಾಲ್ಕೂ ಮೂಲೆಗಳಿಂದ ಕೆಲಸ ಆರಂಭ ಮಾಡಿದೆವು. ಒಂದೆರಡು ಗಿಡಗಳನ್ನು ಕಡಿಯುವಾಗ ಅದರೊಳಗೆ ಪೊದೆಯಲ್ಲಿ ಕಟ್ಟಿದ ಜೇನುಗೂಡಿನಿಂದ ಜೇನುಹುಳುಗಳು ಎದ್ದು ಬಂದು ಗಿಡ ಕಡಿಯುತ್ತಿದ್ದ ದೀಪಕ್ ಎಂಬುವವನ ಬಲಗಣ್ಣಿನ ಹುಬ್ಬಿಗೆ ಕಚ್ಚಿತ್ತು. ನಂತರ ಹುಳಗಳು ಗುಂಯ್ ಎನ್ನುತ್ತಾ ಎದ್ದವು. ಸಿಟಿಯ ಹುಡುಗನಾದ ದೀಪಕ್ ಜೇನಿನ ಧಾಳಿಗೆ ಕಕ್ಕಾಬಿಕ್ಕಿಯಾಗಿ ಓಡಿದ. ಕ್ಯಾಂಪಿನ ಬಹುತೇಕ ಶಿಬಿರಾರ್ಥಿಗಳು ನಗರದವರೇ ಆದ್ದರಿಂದ ಅವರಿಗೆ ಈ ಜೇನುಹುಳಗಳ ಹೆದರಿಸಿ ಕೆಲಸ ಮಾಡುವ ಧೈರ್ಯ ಇರಲಿಲ್ಲ. ಇನ್ನು ಉಳಿದ ಕೆಲವರು ಹಳ್ಳಿಹುಡುಗರು ಇದ್ದರಾದರೂ ಜೇನು ಹುಳಗಳನ್ನು ಎದುರಿಸುವ ಸಮರ್ಥರು ಇರಲಿಲ್ಲ. ಜೇನು ಕಚ್ಚಿಸಿಕೊಂಡವನು ಬಾವಿಯಿಂದ ಮೇಲಕ್ಕೆ ಬಂದು "ಸಾರ್ ಜೇನು ಹುಳುಗಳು... ಜೇನುಹುಳುಗಳು... ಕಚ್ಚಿ ಬಿಡ್ತು ಸಾರ್..." ಎಂದು ಬೊಬ್ಬೆ ಹೊಡೆಯುತ್ತಿದ್ದ. ಅಲ್ಲಿಯೇ ಎಲ್ಲೋ ಕೆಲಸ ಮಾಡುತ್ತಿದ್ದ ನಾನು ಅವನ ಮಾತನ್ನು ಕೇಳಿ ಅವನತ್ರ ಧಾವಿಸಿದೆ. ಅವನ ಬಲಗಣ್ಣ ಉಬ್ಬಿನ ಮೇಲೆ ಹಣೆಯ ಭಾಗದಲ್ಲಿ ಜೇನು ಕಚ್ಚಿದ್ದರಿಂದ ಜೇನಿನ ಕೊಂಡಿಯ ಮುಳ್ಳೊಂದನ್ನು ಕಚ್ಚಿದ ಜಾಗದಲ್ಲಿ ಚುಚ್ಚಿತ್ತು. ಅದನ್ನು ಉಗುರಿನಿಂದ ಕಿತ್ತು ತೆಗೆದು ಮತ್ತೆಲ್ಲಿ ಕಚ್ಚಿದೆ ಎಂದದ್ದಕ್ಕೆ ಮತ್ತೆ ಎಲ್ಲಿ ಇಲ್ಲ ಎಂದ ದೀಪಕ್... ನಂತರ ಜೇನುಗೂಡು ಕಟ್ಟಿದ್ದ ಸ್ಥಳಕ್ಕೆ ಬಂದ ನಾನು ಮಚ್ಚೊಂದನ್ನು ತೆಗೆದುಕೊಂಡು ಜೇನು ಕೀಳಲು ಮುಂದಾದೆ. ಜೇನು ಗೂಡು ಕಟ್ಟಿದ ಗಿಡವನ್ನು ಕಡಿಯುವುದು ಬೇಡವೆಂದೂ, ಇನ್ನೂ ಕೆಲವರು ಶಿಭಿರಾರ್ಥಿಗಳು ಎಲ್ಲರೂ ಇಲ್ಲೇ ಇರುವುದರಿಂದಾಗಿ ಈಗ ಜೇನು ಹುಳುಗಳನ್ನು ಎಬ್ಬಿಸಿದರೆ ಎಲ್ಲರಿಗೂ ಕಚ್ಚುವವೆಂದೂ. ಈಗ ಅದರ ಸುದ್ದಿಗೆ ಹೋಗುವುದು ಬೇಡ ಎಂದು ತಲೆಗೊಂದು ಮಾತನ್ನು ಹೇಳುತ್ತಿದ್ದರು. ಅವರೆಲ್ಲರೂ ಹೇಳಿದ ಮಾತನ್ನು ಕೇಳದೆ ಅವರಿನ್ನೂ ಬೇಡ ಬೇಡ ಎಂದು ಹೇಳುತ್ತಿರುವಾಗಲೇ ಜೇನು ಕತ್ತರಿಸಿ ಹೊರಗೆಳೆದು ತಂದೆ. ಅದಾಗಲೇ ನಾನು ಜೇನು ತೆಗೆಯುವ ವಿಷಯದಲ್ಲಿ ಬಹು ನಿಪುಣನೂ ಆಗಿದ್ದರಿಂದ ನನಗೂ ಕಚ್ಚಿಸಿಕೊಳ್ಳದೇ, ಜೇನುತುಪ್ಪಕ್ಕೂ ಹಾನಿ ಮಾಡಿಕೊಳ್ಳದೇ ಕಿತ್ತು ತಂದೆ. ಕಿತ್ತ ಜೇನನ್ನು NSS ಅಧಿಕಾರಿಗಳಿಗೂ ಶಿಭಿರಾರ್ಥಿಗಳಾಗಿ ಬಂದಿದ್ದ ಕೆಲವು 'ರಾಣಿಜೇನುಗಳಿಗೂ', ಅನೇಕ ಅಕ್ಕ, ಅಣ್ಣಂದಿರುಗಳಿಗೆ ಜೇನನ್ನು ಕಿತ್ತು ಹಂಚಿದ್ದೆ. ಜೇನುಹುಳುಗಳು ಪುನಃ ಅಲ್ಲೇ ಕೂರಬಾರದೆಂದು ಜೇನಿನ ರೊಟ್ಟಿಯನ್ನು ಬಾವಿಯಿಂದ ಎಂಟತ್ತು ಅಡಿ ದೂರದ ಕೊನೆಗೆ ಸಿಕ್ಕಿಸಿದ್ದೆ. ಆ ಹುಳುಗಳು ನಾನು ಸಿಕ್ಕಿಸಿದ ರೊಟ್ಟಿಯ ಮೇಲೆ ಅರ್ಧ ಭಾಗದಷ್ಟು ಮತ್ತು ಇನ್ನರ್ಧ ತಾವು ಗೂಡು ಕಟ್ಟಿದ್ದ ಜಾಗದಲ್ಲೇ ಯಾವುದೋ ಕೊನೆಗೆ ಕೂತವು. ಆದರೆ ಕೆಲಸ ಮಾಡಲು ಅಡ್ಡಿಯಾಗಬಾರದೆಂದು ಪುನಃ ಅವು ಕೂತಿದ್ದ ರೆಂಬೆಯನ್ನೆ ಕತ್ತರಿಸಿ ಎಸೆದುದರಿಂದ ಎಲ್ಲಾ ಹುಳುಗಳು ರೊಟ್ಟಿಯ ಮೇಲೆ ಹೋಗಿ ಕೂತವು. ಮನುಷ್ಯನ ಹಸ್ತಕ್ಷೇಪ ಈ ಜೇನುಹುಳುಗಳ ಕುಟುಂಬ ಮತ್ತು ಸಂತಾನಕ್ಕೆ ಸಂಚಕಾರವೆಂದು ಬಿಸಿಲಿಗೆ ರೊಟ್ಟಿಯ ಮೇಲೆ ಕೂತ ಆ ಹುಳುಗಳು ಬೆಂಕಿ ಇಟ್ಟು ಸುಟ್ಟಾರು ಎಂಬ ತಳಮಳದಿ ಕಾಲ ಕಳೆಯುತ್ತಿದ್ದವು. ಈ ಒಂದು ಘಟನೆ ಅಲ್ಲಿ ಅಂದು ನೆರೆದಿದ್ದ ಕ್ಯಾಂಪಿನವರೆಲ್ಲರಿಗೂ ಕೆಲವೇ ನಿಮಿಷಗಳಲ್ಲಿ ನಾನು ಚಿರಪರಿಚಿತನಾಗಿಬಿಟ್ಟೆ. ನನ್ನನ್ನು ಕಂಡ ಪ್ರತಿಯೊಬ್ಬರೂ ಗುಣಗಾನ ಮಾಡಿದ್ದೇ ಮಾಡಿದ್ದು. ನಿನಗೆ ಜೇನುಹುಳುಗಳು ಎಂದರೇ ಭಯವಿಲ್ಲವೇ?? ನಿನಗೆ ಮೊದಲೇ ಜೇನು ತೆಗೆಯುವ ಕಲೆ ಗೊತ್ತಿತ್ತ?? ನಿನಗೆ ಕಚ್ಚುವುದಿಲ್ಲವೇ?? ಹಾಗೆ ಹೀಗೆ ಎಂದು ಹತ್ತಾರು ಪ್ರಶ್ನೆಗಳ ಸುರಿಮಳೆ ಬಂದವು. ನಾನೂ ಕೂಡ ಅದರಲ್ಲಿ ಏನೋ ಮಹಾ ಪಂಡಿತನೆಂಬಂತೆ ನನಗೆ ಗೊತ್ತಿದ್ದ ಎಲ್ಲಾ ರೀತಿಯ ಮಾಹಿತಿಗಳನ್ನು ಕೇಳಿದವರಿಗೆಲ್ಲಾ ದೊಡ್ಡದಾಗಿ ಲೆಕ್ಚರಿಂಗ್ ಕೊಡುತ್ತಿದ್ದೆ. ಅದೊಂದು ತೆರನಾಗಿ ನನಗೆ ಗೊತ್ತಿರುವಷ್ಟು ಜೇನಿನ ಬಗ್ಗೆ ಬಹಳಷ್ಟು ಜನಗಳಿಗೆ ಗೊತ್ತಿಲ್ಲ... ನನಗೇ ಗೊತ್ತಿರುವುದು ಎಂಬ ಭ್ರಮೆ ನನಗಿತ್ತು ಎಂದು ನನಗೆ ಈಗ ಅನಿಸುತ್ತಿದೆ. ಆ ದಿನಾ ಪೂರಾ ಜೇನಿನ ಚರ್ಚೆಯಲ್ಲಿ ಕಳೆದು ಇತ್ತ ಕಲ್ಯಾಣಿಯ ಸ್ವಚ್ಚತಾ ಕಾರ್ಯಕ್ರಮ ನಮ್ಮೆಲ್ಲರ ಶ್ರಮದಾನ ದಿಂದ ನೆರವೇರಿತು.

ಆ ದಿನದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಕನ್ನಡ ನಾಡಿನ ರನ್ನದ ರತುನ ಕೇಳೋ ಕತೆಯನ್ನಾ... ನಾ ಹೇಳೋ ಕತೆಯನ್ನಾ... ಎಂಬ ಹಾಡನ್ನು ಜೋರಾಗಿ ಹಾಡಿದ್ದಕ್ಕೆ ಸಾರ್ವಜನಿಕರು ಮತ್ತು ಶಿಭಿರಾರ್ಥಿಗಳು ಹಾಡು ಮುಗಿಯುವವರೆಗೂ ಮಂತ್ರ ಮುಗ್ಧರಾಗಿದ್ದರು. ಮುಗಿದ ಮೇಲೆ ಅಭಿಮಾನದಿ ಗೌರವ ಪೂರಕ ಚಪ್ಪಾಳೆ ತಟ್ಟಿದ್ದರು. ಅಂದು ಗಾಯನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದೆ. ಅಭಿನಂದನೆಗಾಗಿ ಅಂದು ಬಾರಿಸಿದ ಆ ಚಪ್ಪಾಳೆಗಳೇ ಇಂದಿಗೂ ನಾನು ಹಾಡುವ ಗೀಳು ಇಟ್ಟುಕೊಂಡಿರುವುದು.

ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ ನಂತರ ನಾವು ಟ್ರಾಕ್ಟರ್ ಹತ್ತಿದಾಗಲೂ ಟ್ರಾಕ್ಟರ್ ನ್ನೇ ಪ್ರಿಡ್ಜ್ ಲ್ಲಿಟ್ಟು ಆಗತಾನೆ ಹೊರಗೆಳೆದು ತಂದಂತಿತ್ತು. ಟ್ರಾಕ್ಟರ್ ನಲ್ಲಿ ಹೋಗುವಾಗ ತಗ್ಗು ಗುಂಡಿಗಳ ದಡಕಿಗೆ ಟ್ರಾಲಿಯ ಕಂಠವನ್ನು ನಾಲ್ಕು ಬೆರಳಿನಿಂದ ಎರಡು ಸೆಕೆಂಡ್ ಹಿಡಿದುಕೊಳ್ಳಲಾಗಷ್ಟು ಈ ಕಬ್ಬಿಣ ತಣ್ಣಗೆ ಕೊರೆಯುತ್ತಿತ್ತು. ಸುತ್ತಲೂ ವಿಶಾಲವಾದ ಎರೆಹೊಲ.. ಎತ್ತ ನೋಡಿದರೂ ಸೂರ್ಯಕಾಂತಿ ಮತ್ತು ಕಡಲೆ ಗಿಡಗಳ ಹೊಲಗಳು. ವಿಶಾಲ ಹೊಲಗಳ ಮದ್ಯದಲ್ಲಿರುವ ಹನುಮನ ಆಲಯ. ಆಗ ತಾನೆ ರವಿಯ ಕಿರಣಗಳಿಗೆ ಬಿಳಿಯ ಇಬ್ಬನಿ ಹಿಮ್ಮೆಟ್ಟುತ್ತಲಿತ್ತು. ಹನುಮಾನ್ ದೇಗುಲ NSS ಕ್ಯಾಂಪಿನ ಸಹಾಯದಿಂದ ಸ್ವಚ್ಚತಾ ಕಾರ್ಯಗಳ ಆಗಬೇಕಿತ್ತು ಎಂಬಷ್ಟು ಗಲೀಜು ಆಗಿರಲಿಲ್ಲ.. ಕೆಲವೇ ಗಂಟೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಮುಗಿಯಿತು. ಆದರೆ ನಮ್ಮನ್ನು ಡ್ರಾಪ್ ಮಾಡಿದ ಟ್ರಾಕ್ಟರ್ ಯಾವುದೋ ಕೆಲಸದ ನಿಮಿತ್ತ ಚಳ್ಳಕೆರೆ ಎಪಿಎಂಸಿ ಮಾರುಕಟ್ಟೆಗೆ ಹೋದದ್ದರಿಂದ ನಮ್ಮನ್ನು ಕರೆದುಕೊಂಡು ಹೋಗಲು ಆ ಟ್ರಾಕ್ಟರ್ ಗೆ ಹಲವು ಗಂಟೆಗಳು ಬೇಕಾದ್ದರಿಂದ ನಮಗೂ ಮಾಡಲು ಕೆಲಸವಿಲ್ಲದರಿಂದ ದೇಗುಲದ ಪಕ್ಕದಲ್ಲಿ ಇದ್ದ ಒಂದು ಬೀಳುಬಿದ್ದ ಜಮೀನಿನಲ್ಲಿ ಎಂಟತ್ತು ವರ್ಷದ ಗಿಡಗಂಟೆಗಳು ಮುಳ್ಳು ಬೇಲಿಗಳು ಬೆಳೆದಿದ್ದವು. ಹಾಗೆ ನಾಲ್ಕಾರು ಜನ ಅದರೊಳಗೆ ಹೊಕ್ಕು ಜಲಬಾಧೆಯನ್ನು ನಿವಾರಿಸಿಕೊಳ್ಳುವಾಗಲೇ ಕಂಡಿತೊಂದು ಜೇನು. ಅವರೊಂದಿಗೆ ಅಲ್ಲಿ ಜೇನುಗೂಡು ಇರುವುದನ್ನು ಹಂಚಿಕೊಂಡೆ. ಹರಡಿಕೊಂಡ ಬಳ್ಳಾರಿ ಜಾಲಿಗಿಡದ ಒಣಗಿದ ಹುಲ್ಲಿನ ಮದ್ಯದಲ್ಲಿ ಕರ್ರಗೆ ಕಾಣುತಿತ್ತು. ನಾನು ಜೇನು ಕೀಳಲು ಅಣಿಯಾಗುತ್ತಿದ್ದಂತೆ ನಮ್ಮೊಂದಿಗೆ ಬಂದಿದ್ದವರು ಅವರ ಇಷ್ಟದ ಹುಡುಗಿಯರಿಗೆ ನಾನು ಕೀಳುವ ಜೇನನ್ನು ಇವನ ದೆಸೆಯಿಂದ ಹುಡುಗಿಯರಿಗೆ ಜೇನು ತಿನ್ನಿಸೋಣ ಎಂದು ಕ್ಯಾಂಪಿಗೆ ಬಂದಿದ್ದ ಹುಡುಗಿಯರನ್ನು ಕರೆದುಕೊಂಡು ಬಂದ.. ನಾನು ಜೇನು ತೆಗೆದುಕೊಂಡು ಪೊದೆಯಿಂದ ಹೊರಬರುವುದಕ್ಕೂ ಅವರೆಲ್ಲರೂ ಅಲ್ಲಿಗೆ ಬಂದು ಸೇರುವುದಕ್ಕೂ ಒಂದೇ ಆಯಿತು. ಹತ್ತು ಹನ್ನೆರಡು ಜನರಿದ್ದ ಗುಂಪಿಗೆ ಒಂದು ಜೇನು ಎಲ್ಲಿಗೆ ಆಗಬೇಕು??? ಎಲ್ಲರಿಗೂ ಒಂದೊಂದು ರೌಂಡು ಸಿಕ್ಕಿತ್ತು. ಯಾರಿಗೂ ಸಂತೃಪ್ತವಾಗಿ ಸಾಕಾಗಲಿಲ್ಲ. ಕೈ ಬೆರಳು ಚೀಪುತ್ತಲೇ ಇನ್ನೂ ಇದ್ದಾವೆನೋ ನೋಡು... ನೋಡು.. ತಿನ್ನೋಣ ಎಂದು ಎಲ್ಲರ ಒತ್ತಾಸೆಯಾಗಿತ್ತು. ನಾನು ಅವರ ಆಸೆಗೆ ತಣ್ಣೀರೆರಚಲಿಲ್ಲ. ನೋಡಬೇಕು... ಹುಡುಕುವೆ... ಸಿಕ್ಕರೆ ತೆಗೆದು ಕೊಡುವೆ ಎಂಬ ವಿಶ್ವಾಸನೀಯವಾಗಿ ಆಶ್ವಾಸನೆ ಕೊಟ್ಟೆ. ಸುತ್ತಾ ಮುತ್ತಾ ಹುಡುಕಲು ನೋಡಿದ ಪೊದೆಗಳಲ್ಲೆಲ್ಲಾ ಜೇನುಗಳೋ ಜೇನುಗಳು..!! ಎಂಟತ್ತು ಜೇನುಗಳು ವಿವಿಧ ಸೈಜಿನವು ಸಿಕ್ಕವು. ನಾನು ನೋಡಿದ ಜೇನುಗಳನ್ನು ನನಗಿಂತಲೂ ಮೊದಲೇ ಕೀಳಲು ಹೋದ ಸಿಟಿ ಪೋರನೊಬ್ಬ ಹಿಗ್ಗಾ ಮುಗ್ಗಾ ಸಿಕ್ಕ ಸಿಕ್ಕಲ್ಲಿಗೆ ಕಚ್ಚಿಸಿಕೊಂಡು ಓಡಿದ. ಕೊನೆಗೆ ಸಾವಕಾಶವಾಗಿ ಎಲ್ಲವನ್ನೂ ಒಂದೊಂದೇ ತೆಗೆದು ಎಲ್ಲರಿಗೂ ಹಂಚಿದೆ. ಹಾಗೇ ಅಲಗ ಅಲೆಯುತ್ತಾ ತಿರುಗುತ್ತಾ ಜೇನು ತಿನ್ನುತ್ತಾ ಅಡವಿಯೆಲ್ಲಾ ಸುತ್ತಿದ್ದೋ ಸುತ್ತಿದ್ದು. ಬಿಸಿಲಿನ ಧಗೆಗೆ ನೀರಿನ ಬಾಯಾರಿಕೆಗೆ ತತ್ತರಿಸಿ ನೀರು ಕುಡಿಯಲು ಬಂದವರೆಲ್ಲಾ ಹನುಮನ ದೇಗುಲ ಉಳಿದವರೆಲ್ಲರಿಗೂ ಹೇಳಿದ್ದರಿಂದ ಎಲ್ಲರೂ ಜೇನು ತಿನ್ನಲು ನಾವಿರುವ ಕಡೆ ಧಾವಿಸಿದರು. ನಮ್ಮ ತಂಡದ ಉಸ್ತುವಾರಿಗೂ ಒಂದಷ್ಟು ಜೇನು ತಿನ್ನಿಸಿದ್ದರಿಂದ ಅವರೂ ನನ್ನ ಕಡೆಗೆ ಸೆಳೆಯಲ್ಪಟ್ಟು ಪದೇ ಪದೇ ಆಯ್ತೆನ್ರೋ... ಬರ್ರಿ ಬರ್ರೀ ಎಂದು ಅಷ್ಟೆ ಸೀಟಿ ಹೊಡೆಯುತ್ತಿದ್ದರು. ಜೇನು ರುಚಿಯನ್ನು ನೋಡಿದ ಯಾರೂ ಅವರ ಸೀಟಿಯ ಶಬ್ಧವನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ಧನ ಮತ್ತು ಋಣ ಎರಡೂ ಆಯಾಮಗಳು ಅಲ್ಲೇ ಇದ್ದುದರಿಂದ ಯಾರು ಯಾರನ್ನೂ ಬಿಟ್ಟು ಕದಲುವ ಹಂತದಲ್ಲಿ ಇರಲಿಲ್ಲ. ನಮ್ಮ ತಂಡ ಮುನ್ನೆಡುಸುತ್ತಿದ್ದ ಮೇಲ್ವಿಚಾರಕರಿಗೆ ಪರಿಸ್ಥಿತಿ out of control ಆಗಿತ್ತು. ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ಸುತ್ತಾಡಿ ಬಿಸಿಲ ಧಗೆಗೆ ಬಾಯಾರಿಕೆ ತಡೆಯಲು ಆಗದೇ ಹಿಂದಿರುಗಿದೆವು. ಹೇರಳವಾಗಿ ಜೇನು ಸಿಕ್ಕಿದ್ದರಿಂದ ಶ್ರಮದಾನದ ನಡುವೆ ಜೇನು ಕಟ್ಟಿರುವಲ್ಲಿಗೆ ಹೋಗಿ ಜೇನುಕೀಳುವುದನ್ನು live ನೋಡುತ್ತಾ, ಹುಡುಗ ಹುಡುಗಿಯರ ಜೊತೆ ಪರಸ್ಪರ ಮಾತಾನಾಡುತ್ತಿದ್ದರೆ ಬಿಸಿಲು ಬಿಟ್ಟರೆ ನಾಕವೇ ಧರೆಗಿಳಿದಂತಿತ್ತು. ಜೇನು ಸೊಂಪಾಗಿ ಸಿಕ್ಕಿದ್ದರಿಂದಲೂ, ಮುಕ್ತವಾಗಿ ಪರಸ್ಪರ ಮಾತನಾಡಲು ಸಮಯಾವಕಾಶ ಸಿಕ್ಕಿದ್ದರಿಂದ ಎಲ್ಲರಿಗೂ ಖುಷಿಯಾಗಿತ್ತು. ಜೇನಿನ ಲೋಕಕ್ಕೆ ಹೋಗಿದ್ದ ನಾವು ಹಿಂತಿರುಗಿ ಬರುವಷ್ಟೊತ್ತಿಗೆ ನಮಗಾಗಿ ಟ್ರಾಕ್ಟರ್ ಬಂದು ಕಾಯುತ್ತಾ ನಿಂತಿತ್ತು. ಟ್ರಾಕ್ಟರ್ ಬಂದು ಅರ್ಧಗಂಟೆ ಮೇಲೆ ಆಗಿದೆ. ಶ್ರಮ ದಾನ ಮಾಡಲು ಹೋದವರು ಯಾರೂ ಶ್ರಮ ಮಾಡುವುದಿರಲಿ... ಯಾರೂ ಶ್ರಮದಾನ ಮಾಡುವ ಜಾಗದಲ್ಲೂ ಸಹ ಒಬ್ಬರೂ ಹಾಜರಿ ಇರಲಿಲ್ಲ. ಇಬ್ಬರು NSS ಅಧಿಕಾರಿಗಳು ಹಾಜರಿದ್ದರೂ ನೋಡಲು ಒಬ್ಬರಾದರೂ ವಿದ್ಯಾರ್ಥಿಗಳು ಇರದಿದ್ದುದು ಅವರಿಗೆ ಬೇಸರ ಉಂಟಾಗಿತ್ತು. ನಮಗಿಂತ ಮುಂದೆ ಹೋದವರು ಯಾರೋ ಹುಡುಗ ಹುಡುಗಿಯರೆಲ್ಲಾ ಜೇನು ತಿನ್ನಲು ಹೋಗಿದ್ದಾರೆ ಎಂಬ ಸುದ್ದಿಯನ್ನು ಕೇಳಿ "ಆ PUC ಹುಡುಗನೇ ಸರ್ ಎಲ್ಲರನ್ನೂ ಕರೆದುಕೊಂಡು ಹೋಗಿರುವುದು. ಅವನಿಗೆ ಸರಿಯಾಗಿ ವಾರ್ನ್ ಮಾಡಬೇಕೆಂದು ಅಂದರಂತೆ. ಆದರೇನು ಮಾಡುವುದು majority ಇದ್ದುದು ನಮ್ಮ ಕಡೆಯೇ... ಎಲ್ಲಾ ಸೀನಿಯರ್ ಹುಡುಗರು ಜೇನು ತಿನ್ನಲು ಸಹಮತ ಇದ್ದುದರಿಂದ ಅವರೇನು ಮಾಡಲಾಗದೇ ಹೊಟ್ಟೆತುಂಬಾ ನೀರು ಕುಡಿದು ಟ್ರಾಕ್ಟರ್ ಹತ್ತಿ ಕ್ಯಾಂಪ್ ವಸತಿ ಸ್ಥಳಕ್ಕೆ ಆಗಮಿಸಿದೆವು. ಅಂದಿನಿಂದ ಶಿಭಿರಾರ್ಥಿಗಳ ಪಾಲಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ತಮ್ಮನಾಗಿ ಕೆಲವು ಶಿಬಿರದ ಹುಡುಗರಿಗೆ ಅಳಿಯನೂ ಆದೆ. ಮನೆಯಿಂದ ತಂದ snacks, ಕ್ಯಾಂಪಿನಲ್ಲಿ ಮಾಡಿದ ಸ್ನ್ಯಾಕ್ಸ್ ಎಲ್ಲಾವೂ ಒಂದು ಕೈ ನನಗೆ ಅಧಿಕವೇ ಸಿಗುತ್ತಿತ್ತು. ಕೆಲವರಂತೂ ಇನ್ಮೇಲೆ ಎಲ್ಲಿಯಾದರೂ ಜೇನು ಸಿಕ್ಕರೆ ಎಲ್ಲರಿಗೂ ಹೇಳುವುದು ಬೇಡ. ಗುಟ್ಟಾಗಿ ನಾವಷ್ಟೇ ಹೋಗೋಣ ಎಂದು ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಿಯೇ ಶ್ರಮದಾನ ನಡೆಯುತ್ತಿರಲಿ ಇವತ್ತು ಜೇನು ಹುಡುಕಬೇಕೆಂದು ಅದಕ್ಕಾಗಿ ತಂಡದ ಸದಸ್ಯರೆಲ್ಲರೂ ಒಪ್ಪಿಗೆಯಿಂದ ನನ್ನನ್ನು ಕಳಿಸಿಕೊಡುತ್ತಿದ್ದರು. ಒಂದೆರಡು ದಿನ ಅಲ್ಲೇ ಹುಡುಕಾಡಿದರೂ ಜೇನು ಮಾತ್ರ ಸಿಕ್ಕಿರಲಿಲ್ಲ.

ಒಂದು ದಿನ ಶ್ರಮ ದಾನ ಮಾಡಿ ಮಧ್ಯಾಹ್ನ ಬಾವಿಯಲ್ಲಿ ಈಜಾಡಲು ಜೇನು ಹುಡುಕುತ್ತಾ ಹೋಗುವಾಗ ಹುಣಸೇ ಮರದಲ್ಲಿ ಹೆಜ್ಜೇನೊಂದನ್ನು ನೋಡಿದೆ. ಜೊತೆಗಿದ್ದವರಿಗೆ ತೋರಿಸಿದಾಗ ಹೇಗಾದರೂ ಮಾಡಿ ಈ ತುಪ್ಪ ತೆಗೆ ಎಂದು ಹೇಳುತ್ತಿದ್ದರು. ನಾನು ಯಾವತ್ತೂ ಹೆಜ್ಜೇನಿನ ಸುದ್ದಿಗೆ ಹೋಗಿಲ್ಲ. ನನ್ನ ಬಳಿ ಇದು ಅಸಾಧ್ಯ ಎಂದೇಳಿದ್ದಕ್ಕೆ ರಾತ್ರಿ ಸೀಮೆಎಣ್ಣೆ ತಂದು ಬೆಂಕಿ ಹಾಕುವ, ಹೆಲ್ಮೆಟ್ ಕಂಬಳಿ ಹೊದ್ದು ಜೇನುಕೀಳುವ ಎಂದು ನಾನಾ ಉಪಾಯಗಳನ್ನು ಹೇಳಿದರು. ಹೆಜ್ಜೇನು ಕೀಳುವುದು ನನ್ನಿಂದಾಗದ ಕೆಲಸ. ಬೇಕಾದರೇ ಇಲ್ಲೇ ಎಲ್ಲಿಯಾದರೂ ಸಣ್ಣ ಜೇನು ಸಿಕ್ಕರೆ ಕಿತ್ತುಕೊಡುವೆ ಎಂದು ಮನಸೋ ಇಚ್ಚೆ ಈಜಾಡಿದೆವು. ಈಜಾಡಿ ಹೊಟ್ಟೆಯು ಹಸಿವಾಗಿದ್ದಕ್ಕೆ ಈಜು ನಿಲ್ಲಿಸಿ ಒದ್ದೆಯಾದ ನಮ್ಮ ನಮ್ಮ 'ಝಂಡ' ಗಳನ್ನು ಕೈಯಲ್ಲಿ ಹಿಡಿದು, ಕೆಲವರು ತಲೆ ತಂಪಿರಲಿ ಎಂದು ತಲೆಯ ಮೇಲೆಯೇ ಈ 'ಝಂಡ' ಹಾಕಿಕೊಂಡು ನಡೆದು ಬರುವಾಗ ಬೇಲಿಯಲ್ಲಿ ಒಂದು ಜೇನು ನೋಡಿದೆ. ಅದು ನಮ್ಮ ಕ್ಯಾಂಪು ತಂಗಿದ್ದ ಶಾಲೆಯ ಕೊಂಚ ಸಮೀಪದಲ್ಲಿಯೇ...! ಎಲ ಒಂದೇ ಸ್ಥಳದಲ್ಲಿ ಎಲ್ಲರೂ ನಿಂತರೆ ಕ್ಯಾಂಪಿನ ಇತರರಿಗೆಲ್ಲಾ ಗೊತ್ತಾಗಿ ಅವರೆಲ್ಲರೂ ಬಂದರೆ ಈ ಜೇನು ಯಾರಿಗೂ ಸಾಲುವುದಿಲ್ಲ ಎಂದು ಎಲ್ಲರ ಅಭಿಪ್ರಾಯದಂತೆ ನಾನು ಸುನೀಲ ಮಾತ್ರ ಉಳಿದು ಜೇನು ಕಿತ್ತು ತರುವುದು. ಉಳಿದವರು ಸ್ವಲ್ಪವೇ ಮುಂದೆ ಹೋಗಿ ಬೇವಿನ ಮರದ ನೆರಳಿನಲ್ಲಿ ನಿಲ್ಲುವುದು. ಎಂದು ನಿರ್ಣಯಿಸಿದೆವು‌. ಹುಳುಗಳನ್ನು ಎಬ್ಬಿಸಿ ಜೇನು ತೆಗೆಯಲು ನೋಡಿದಾಗ ಹಸಿ ಬಳ್ಳಾರಿ ಜಾಲಿ ಕೊನೆಗೆ ಗೂಡುಕಟ್ಟಿದ್ದರಿಂದ ಆಯುಧ ರಹಿತ ವಾಗಿ ಕೊನೆಸಹಿತ ಕೀಳುವುದು ಅಸಾಧ್ಯ ಆಯಿತು. ಬೇವಿನ ಮರದ ನೆರಳಲ್ಲಿ ನಿಂತವರನ್ನು ಕೂಗಿ ಕರೆಯಲು ಕ್ಯಾಂಪಿನ ಕೇಂದ್ರದವರಿಗೆಲ್ಲರಿಗೂ ಹೇಗೋ ಗೊತ್ತಾಯಿತು. 'ಜೇನು' ಎಂಬ ಶಬ್ದಕೇಳಿದ ಎಲ್ಲರೂ ಎಲ್ಲೆಲ್ಲಿದ್ದರೋ ಅಲ್ಲಿಂದಲೇ ತಾಮುಂದು ನೀ ಮುಂದು ಎಂದು ಓಡಿಬಂದರು. ನಾನು ಜೇನುತುಪ್ಪವನ್ನು ಕಿತ್ತು ಕೊಡುತ್ತಿದ್ದೆ. ಜೇನುಹುಳುಗಳು ಹಾರಾಡುತ್ತಲೇ ಇದ್ದುದರಿಂದ ದೈರ್ಯ ಇರುವ ಒಂದಿಬ್ಬರು ಮಾತ್ರ ಬಂದು ತೆಗೆದುಕೊಂಡು ಇತರರಿಗೆ ಜೇನು ಹಂಚಿದರು. ನಾಲ್ಕೈದು ಜನ ಹುಡುಗರಿಗೆ ಎರಡ್ಮೂರು ಹುಡುಗಿಯರಿಗೆ ಜನರಿಗೆ ತಲಾ ಹತ್ತಿಪ್ಪತ್ತು ಗ್ರಾಂ ತುಪ್ಪ ಸಿಕ್ಕಿತ್ತು. ಉಳಿದವರಿಗೆ ಏನೂ ಸಿಗಲಿಲ್ಲ. ಜೇನು ಸಿಕ್ಕರೇ ಯಾರಿಗೂ ಹೇಳಬಾರದು ಎಂದು secret ಡೀಲ್ ಮಾಡಿಕೊಂಡವರು ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೂ ಮುಂದಿನ ದಿನಗಳಲ್ಲಿ ಜೇನು ಕಿತ್ತು ಕೊಡುವ ಭರವಸೆ ಕೊಟ್ಟೆ..

ಮುಂದಿನ ಒಂದೆರಡು ದಿನಗಳಲ್ಲಿ NSS camp ಸಮಾರೋಪ ಆಯಿತು. ಆದರೆ ಜೇನು ತಿನ್ನಬೇಕೆಂಬ ಕ್ಯಾಂಪಿನ ಹೆಣ್ಮಕ್ಕಳ ಬೃಹದಾಸೆ ಹಾಗೆ ಉಳಿಯಿತು. ಕಾಲೇಜು ಆರಂಭವಾದಾಗ ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಬಂದಾಗ ಎದುರಾಗುತ್ತಿದ್ದ ಶಿಭಿರಾರ್ಥಿಗಳು ಜೇನು ಹುಡುಕಿ ಕಿತ್ತು ಕೊಡಬೇಕೆಂದು ಮನವಿ ಮಾಡುತ್ತಿದ್ದರು. ಇನ್ನೂ ಕೆಲವರು ಹುಣಸೇಮರದ ಕೆಳಗೆ ಯಾವಾಗಲೂ ಗಿರ್ಮಿಟ್ ಮಂಡಕ್ಕಿ ತಿನ್ನುತ್ತಿದ್ದರು.. ಅವರದೂ ಅದೇ ಬೇಡಿಕೆ... ಎಂದಾದರೂ ಎಲ್ಲಿಯಾದರೂ ಹೋಗೋಣ. ನಮಗೆ ಕ್ಯಾಂಪಿನ ತರಹ ಜೇನು ಕಿತ್ತುಕೊಡಬೇಕು ಎಂದು ಹೇಳುತ್ತಿದ್ದರು. ನನಗೂ ಒಂದಷ್ಟು ಮಂಡಕ್ಕಿ, ನಿಪ್ಪಟ್ಟು ಹಾಗೆ ನನಗೂ complementary ಯಾಗಿ ಸಿಗುತ್ತಿತ್ತು. ನನ್ನ ಜೊತೆಯಲ್ಲಿ ಬರುತ್ತಿದ್ದ ಶಿವರಾಮನಿಗೂ ಹತ್ತು ದಿನಕ್ಕೆ ಹೀರೋ ಆಗಿಬಿಟ್ಟೀಯಾ... ಎಂದು ಆಗಾಗ ಹೇಳುತ್ತಿದ್ದ. ಇವರು ನಾನು ಕಂಡಾಗಲೆಲ್ಲಾ ಜೇನಿಗಾಗಿ ನನ್ನನ್ನು ಕೇಳುತಿದ್ದುದ್ದಕ್ಕೆ ಒಂದು ದಿನ ಐದಾರು ಜನ ಅಕ್ಕಂದಿರು ಒಂದಿಬ್ಬರು ಭಾವದಿಂರು ಚಂದ್ರವಳ್ಳಿಯ ಕಡೆ ಜೇನು ಹುಡುಕಲು ಹೋಗಿದ್ದೆವು. ನಾವೆಲ್ಲರೂ ಜೊತೆಗಿರುವುದನ್ನು ನೋಡಿದ ಕಾಲೇಜು ಸಿಬ್ಬಂದಿ ನಮ್ಮೆಲ್ಲರ ಮೇಲೆ ಒಂದು ಕಣ್ಣಿಟ್ಟಿದ್ದರೆ BA , BSC, B.com ಎಲ್ಲಾ ಹುಡುಗರು ನಮ್ಮ ಗುಂಪಿನಮೇಲೆ ನೂರಾರು ಕಣ್ಣುಗಳನ್ನು ಇಟ್ಟಿದ್ದರು. ಅಂದು ನಾವು ಜೇನು ಹುಡುಕಲು ಹೋಗಿದ್ದು ಚಂದ್ರವಳ್ಳಿಗೆ. ಸುಂದರ ಚಂದ್ರವಳ್ಳಿಯ ತೋಟದ ವರ್ಣನೆ ಅದ್ಬುತ.. ಮಾನವನ ಆದಿ ನೆಲೆಗಳಲ್ಲಿ ಚಂದವಳ್ಳಿಯು ಒಂದು.. ಕೆರೆಯ concept ಗೆ ಬಂದರೆ ಇತಿಹಾಸದ ದಾಖಲೆಗಳ ಪ್ರಕಾರ ಚಂದ್ರವಳ್ಳಿ ಕೆರೆಯೇ ಮೊದಲಕೆರೆ. ಸ್ವಚ್ಛಂದದ ಸಿಹಿನೀರ ಕೆರೆ. ನೋಡಲದ್ಭುತ..!! ಜೇನು ಹುಡುಕಲು ಬಂದ ನಮ್ಮ ಹುಡುಗರ ಗುಂಪು ನೂರಾರು ಕೋತಿಗಳು ಹುಣಸೇಮರದಿಂದ ಕೆರೆಯ ನೀರೊಳಗೆ ದುಮುಕಿ ಈಜಾಡುತ್ತಾ ಜಗಳವಾಡುತ್ತಾ, ಕಿರುಚಾಡುತ್ತಾ ಮಾಡುವ ಕೋತಿಯಾಟವ ನೋಡುತ್ತಾ ಕಾಲಕಳೆದೆವು. ನಮ್ಮ ಸುತ್ತಲೂ ದೊಡ್ಡ ದೊಡ್ಡ ಕಲ್ಲು ಹೆಬ್ಬಂಡೆ ಬೆಟ್ಟಗುಡ್ಡಗಳೇ ಇದ್ದುದ್ದರಿಂದ ನಾನು ಹುಡುಕುವ ಜೇನುಗಳು ಮಾತ್ರ ಅಂದು ಕಾಣಲೇ ಇಲ್ಲ. ದವಳಪ್ಪನ ಗುಡ್ಡದ ಕಡೆ ಹೋಗಬೇಕಿತ್ತು. ಹೋಗಿದ್ದರೆ ಸಿಗುತ್ತಿದ್ದವೇನೋ...?? ಆ ಕೋತಿಗಳ ಜೊತೆಗೆ ಈ ಕೋತಿಗಳು ಕೋತಿಯಾಟ ಶುರುಮಾಡಿದ್ದರಿಂದ ಹುಡುಕುವ ಇಂಟರೆಸ್ಟ್ ಇರಲಿಲ್ಲ. ಈ ದಿನಕ್ಕೆ ನಮ್ಮ NSS ಕ್ಯಾಂಪ್ ನ ಸದಸ್ಯರು ನಮಗೆ ಜೇನು ಬೇಕು ಎಂದು ಕೇಳುವುದು ಕಡಿಮೆ ಆಯಿತು. ಇದಾದ ಕೆಲದಿನಗಳ ನಂತರ ನಾನು ಕಾಲೇಜಿಗೆ ಹೋಗುವುದೇ ತ್ಯಜಿಸಿ ನಿತ್ಯ ಚಿತ್ರದುರ್ಗ ಕೋಟೆಯೇ ನನ್ನ ಕಾಲೇಜ್, ಅಡ್ವೆಂಚರ್‌, ಟೈಮ್ ಪಾಸ್, ಓದು ಬರಹ ಓಡಾಟ ಕೋಟೆಯೋಳಗೆ ಸಾಗಿತ್ತು. ಕೋಟೆಯೇ ಅವಿಭಾಜ್ಯ ಭಾಗ ಆಗಿ ಹೋಗಿತ್ತು. ಕೋಟೆಯೊಳಗೆ ಟ್ರೆಕ್ಕಿಂಗ್ ಮಾಡುವಾಗ ನಾನು ತಿಮ್ಮಣ್ಣ ಜೇನು ಕಿತ್ತು ಆಗಾಗ ತಿನ್ನುತ್ತಿದ್ದೆವು...
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************


Ads on article

Advertise in articles 1

advertising articles 2

Advertise under the article