ಜಗಲಿ ಕಟ್ಟೆ : ಸಂಚಿಕೆ - 52
Wednesday, May 22, 2024
Edit
ಜಗಲಿ ಕಟ್ಟೆ : ಸಂಚಿಕೆ - 52
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ನಾವು ಸಣ್ಣವರಿರುವಾಗ ಅಜ್ಜಿ ಮನೆಗೆ ಹೋಗುವುದೆಂದರೆ ಏನೋ ಮಜ. ಶಾಲಾ ಬೇಸಿಗೆ ರಜಾ ಸಿಕ್ಕುವುದೇ ತಡ ಅಜ್ಜಿ ಮನೆಗೆ ಹೋಗುವ ತರಾತುರಿ. ನಮ್ಮ ಹಳ್ಳಿಯಲ್ಲಿ ಇರುವುದೇ ಲೆಕ್ಕದ ಬಸ್ಸು. ಬಸ್ಸು ಬರುವ ವೇಳೆಯ ಮುಂಚಿತವಾಗಿ ರಸ್ತೆ ಬದಿಯ ಮಾವಿನ ಮರದ ಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುವುದೇ ಒಂದು ಖುಷಿ. ಸುಮಾರು ಎರಡು- ಎರಡೂವರೆ ಗಂಟೆಯ ಪ್ರಯಾಣ. ಬಸ್ಸಿಳಿದು ಗದ್ದೆಗಳ ನಡು ದಾರಿಯಲ್ಲಿ ನಡೆಯುವುದೆ ಒಂದು ಸೊಬಗು. ಕೆರೆ ತೋಡು ದಾಟಿ ಎರಡು ಅಂತರದ ಅಂಗಳವನ್ನು ಮೆಟ್ಟಿಲೇರಿ ಮನೆ ಸೇರಿದರೆ ಏನೋ ಆನಂದ.
ಹಳ್ಳಿಯ ವಾತಾವರಣವೇ ಹಾಗೆ. ದೊಡ್ಡ ಕುಟುಂಬ. ಹತ್ತಿಪ್ಪತ್ತು ಮಕ್ಕಳು. ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಮಾವ ಹೀಗೆ ಎಲ್ಲರೂ ಅಜ್ಜಿ ಮನೆ ಸೇರಿದಾಗ ಸಂಭ್ರಮವೋ ಸಂಭ್ರಮ. ಅಂಗಳದಲ್ಲಿ ಭತ್ತದ ಖಜಾನೆ. ಹಟ್ಟಿ ತುಂಬಾ ದನ ಎಮ್ಮೆ ಕೋಣ. ಗೋಡೆಯಲ್ಲಿ ನೇತಾಡಿಸಿದ್ದ ದೇವರ ಫೋಟೋದ ಹಿಂದೆ ಗೂಡು ಕಟ್ಟಿದ ಗುಬ್ಬಚ್ಚಿಗಳು ಎಲ್ಲವೂ ಸುಂದರ. ಗುಬ್ಬಚ್ಚಿಗಳು ಬಾಯಲ್ಲಿ ಕಡ್ಡಿಯನ್ನು ಹೊತ್ತು ಗೂಡು ಕಟ್ಟುವುದು. ಕುಪ್ಪಳಿಸಿ ಕುಪ್ಪಳಿಸಿ ಅಂಗಳದಲ್ಲಿ ಬಿದ್ದ ಕಾಳನ್ನ ಹೆಕ್ಕುವ ದೃಶ್ಯ ನಮ್ಮನ್ನು ಆಕರ್ಷಿಸುತ್ತಿತ್ತು.
ಬಾಲ್ಯದಲ್ಲಿ ಕಂಡ ಅಜ್ಜಿ ಮನೆಯ ಗುಬ್ಬಚ್ಚಿಯ ದೃಶ್ಯ ಇಂದು ಕಾಡಲು ಒಂದು ಕಾರಣವೂ ಇದೆ. ಈಗ ಅಜ್ಜಿ ಮನೆಯಲ್ಲಿ ಗುಬ್ಬಚ್ಚಿಗಳ ಸುಳಿವಿಲ್ಲ. ಅಂಗಡಿ ಬದುಗಳಲ್ಲಿ ಕಂಡು ಬರುತ್ತಿದ್ದ ಗುಬ್ಬಚ್ಚಿಗಳ ದಂಡು ಈಗ ಕಾಣುತ್ತಿಲ್ಲ. ಕೆಲವೊಂದು ಭಾಗಗಳಲ್ಲಿ ಇರಬಹುದಾದರೂ ಹೆಚ್ಚಿನ ಭಾಗಗಳಲ್ಲಿ ಗುಬ್ಬಚ್ಚಿಗಳು ಕಣ್ಮರೆಯಾಗಿದೆ ಅಂತೂ ಸತ್ಯ. ಟವರ್ ಗಳ ನಿರ್ಮಾಣದಿಂದ ಗುಬ್ಬಚ್ಚಿಗಳ ಸಂತತಿ ನಿರ್ಮೂಲನವಾಗಿದೆ ಅಂತಲೂ ಹೇಳುತ್ತಾರೆ. ಆದರೆ ಈ ಸಲದ ಬೇಸಿಗೆಯಲ್ಲಿ ನಾವು ಪ್ರವಾಸ ಬಂದ ಊರಿನಲ್ಲಿ ಗುಬ್ಬಚ್ಚಿಗಳ ಸಂತತಿ ಇನ್ನೂ ಇದೆ... ಶಾಶ್ವತವಾಗಿದೆ ಅನಿಸುತ್ತದೆ.
ಹೌದು ನಾವು ಮಂಗಳೂರಿಂದ ದೂರದ ಗುಜರಾತಿಗೆ ಪ್ರಯಾಣ ಬೆಳೆಸಿದ್ದೆವು. ನಾವಿದ್ದ ಊರು ರಾಜಕೋಟ್ ಹತ್ತಿರದ ಟಂಕರ. ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದ ಸ್ವಾಮಿ ದಯಾನಂದ ಸರಸ್ವತಿ ಯವರ ಜನ್ಮ ಭೂಮಿ.
ಇಲ್ಲಿರುವ ಪ್ರತಿಯೊಂದು ಮನೆಗಳಲ್ಲೂ ಗುಬ್ಬಚ್ಚಿ ಗೂಡುಗಳಿವೆ. ಗುಬ್ಬಚ್ಚಿ ಗೂಡುಗಳಿಲ್ಲದ ಮನೆಗಳಿಲ್ಲ. ಪ್ರತಿ ಮನೆಯಲ್ಲೂ ಕಾಳು, ನೀರಿನ ಪ್ರತ್ಯೇಕ ತಟ್ಟೆಯನ್ನು ಪಕ್ಷಿಗಳಿಗೆ ಅನುಕೂಲವಾಗುವ ಜಾಗದಲ್ಲಿ ಇರಿಸುತ್ತಾರೆ. ಚಿಂವ್ ಚಿಂವ್ ಧ್ವನಿಮಾಡುತ್ತ ಸ್ವತಂತ್ರವಾಗಿ ತನ್ನ ಪಾಡಿಗೆ ಬದುಕುವ ಅವುಗಳನ್ನು ಕಂಡಾಗ ಕಣ್ಣಿಗೆ ಹಬ್ಬವಾಗುತ್ತದೆ. ಅಂಗಡಿ, ಬೀದಿ ಬದಿಗಳ ಮರಗಳಲ್ಲೂ ಗೂಡು, ಆಹಾರ, ನೀರು ಇಟ್ಟು ಪಕ್ಷಿಗಳಿಗೆ ನೆರವಾಗುತ್ತಾರೆ. ಈ ಕಾರಣದಿಂದ ಗುಬ್ಬಚ್ಚಿಗಳು ತಮ್ಮ ಸಂತತಿ ಉಳಿಸಿಕೊಂಡಿದೆ.
ಗುಬ್ಬಚ್ಚಿಗಳ ಸಂರಕ್ಷಣೆ ಈ ಊರಿನಲ್ಲಿ ಆಂದೋಲನವೇ ಆಗಿದೆ. ಇಂತಹದೊಂದು ಪ್ರಯತ್ನ ಪ್ರತಿಯೊಂದು ಊರಿಗೂ ಪ್ರೇರಣೆಯಾದರೆ ಜೀವ ವೈವಿಧ್ಯತೆಯ ಉಳಿವಿಗೆ ತನ್ನ ಅಳಿಲು ಸೇವೆ ಸಲ್ಲಿಸಿದಂತೆ ಆಗುವುದರಲ್ಲಿ ಸಂಶಯವಿಲ್ಲ.
ಮೊನ್ನೆ ಮೊನ್ನೆ ಬೇಸಿಗೆ ಶಿಬಿರದಲ್ಲೊಂದು ನನ್ನ ಆತ್ಮೀಯರು ಪರಿಸರ ಚಿಂತಕ ದಿನೇಶ್ ಹೊಳ್ಳರ ಜೊತೆ ಮಾತಾಡುತ್ತಿದ್ದೆ. ಇವರು 'ವನಚೇತನ' ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಅರಣ್ಯದೊಳಗೆ ಬದುಕುತ್ತಿರುವ ಮೂಲ ನಿವಾಸಿಗಳ ಅಭಿವೃದ್ಧಿಗೆ ಕಾರಣರಾಗುತ್ತಿದ್ದಾರೆ. ಇವರು ಮಾತಾಡುತ್ತಾ... "ಇಲ್ಲಿರುವ ಮೂಲ ನಿವಾಸಿಗಳು ಒಂದು ಮರದ ಗೆಲ್ಲು ಕಡಿಯಬೇಕಾದರೂ ಮರದ ಎದುರು ನಿಂತು ಪ್ರಾರ್ಥನೆ ಮಾಡುವುದು ಪದ್ಧತಿ. ನಂಬಿರುವ ದೇವರಿಗೆ ಹರಿಕೆಯ ಶಾಸ್ತ್ರವನ್ನು ಒಪ್ಪಿಸಿದ ಬಳಿಕವೇ ಮರದ ಕೊಂಬೆಗಳನ್ನು ಕಡಿಯುವುದು ಇಲ್ಲಿನವರ ವಾಡಿಕೆ. ಈ ರೀತಿಯ ಮನಸ್ಥಿತಿ ಯುನಿವರ್ಸಿಟಿಗಳಲ್ಲಿ ಪದವಿ ಗಳಿಸಿ ಅಧಿಕಾರಿಗಳೆನಿಸಿಕೊಂಡವರಿಗೆ, ಮರಗಳನ್ನು ಲೀಲಾಜಾಲವಾಗಿ ಮಾರಣ ಹೋಮ ಮಾಡಲು ಕಾರಣರಾಗುತ್ತಿರುವವರಿಗೆ ಇಲ್ಲದಿರುವುದು ಶೋಚನೀಯ...!! ಅನಕ್ಷರಸ್ಥ ಜನರಿಗಿರುವ ಕಾಳಜಿ ವಿದ್ಯಾವಂತರೆನಿಸಿರುವವರಿಗೆ ಇಲ್ಲವಲ್ಲಾ...!!" ಎಂದಾಗ ಶಿಕ್ಷಣ ಎಂದರೇನು...? ಅನಿಸುವುದು ಸಹಜ. ಒಟ್ಟಾಗಿ ಈ ಭೂಮಿಯನ್ನು ಪ್ರಾಕೃತಿಕವಾಗಿ ಉಳಿಸುವ ಸಂಕಲ್ಪ ಕೈಗೊಂಡರೆ ಜೀವವಿಧ್ಯತೆಯನ್ನು ಬೆಳೆಸಿದ ಕೀರ್ತಿ ಎಲ್ಲರದಾಗುತ್ತದೆ... ನಮಸ್ಕಾರ
ಕಳೆದ ಸಂಚಿಕೆಯ ಜಗಲಿಕಟ್ಟೆ - 51 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು,
ಯಾವುದನ್ನಾದರೂ ಪಡೆಯಬಹುದು ಆದರೆ ವಿದ್ಯೆ ದೊರಕಬೇಕಾದರೆ ಗುರುಗಳ ಸಾನ್ನಿಧ್ಯ ಹಾಗೂ ಸತತ ಪ್ರಯತ್ನ ಅಗತ್ಯ ಎಂಬುದನ್ನು ಯವಕ್ರೀತ ಮುನಿಯ ಕಥೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ನಿರೂಪಿಸಿದ್ದಾರೆ.
ಎಸ್ ಎಸ್ ಎಲ್ ಸಿ ಪ್ರಸ್ತುತ ವರ್ಷದ ರಾಜ್ಯದ ಫಲಿತಾಂಶದ ವಿಶ್ಲೇಷಣೆಯನ್ನು ರಮೇಶ್ ಸರ್ ರವರು ಬಹಳ ಸೊಗಸಾಗಿ ತಮ್ಮ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ಆಮ್ಲಜನಕವನ್ನು ಬಳಸಿ ಉಸಿರಾಟ ಕ್ರಿಯೆಯ ಮೂಲಕ ಕೋಶಗಳು ಗ್ಲುಕೋಸ್ ದಹನದಿಂದ ಶಕ್ತಿಯನ್ನು ಪಡೆಯುತ್ತವೆ. ಆಮ್ಲಜನಕದ ಇರುವಿಕೆ 2.7 ಬಿಲಿಯನ್ ವರ್ಷಗಳ ಹಿಂದೆ. ಅದರ ಮೊದಲೇ ವಾತಾವರಣದಲ್ಲಿ ಮಿಥೇನ್ ಅನಿಲ ಇದ್ದಾಗ 3.7 ಬಿಲಿಯನ್ ವರ್ಷಗಳ ಜೀವಿಗಳ ಬದುಕು ಮಿಥೇನ್ ನಲ್ಲಿ ಹೇಗೆ? ಕುತೂಹಲಕಾರಿ ಸಂಚಿಕೆ ದಿವಾಕರ್ ಸರ್ ರವರಿಂದ.
ವಿಜಯಾ ಮೇಡಂರವರಿಂದ ಸದಾ ಪುಷ್ಪದ ವಿವರಣಾತ್ಮಕ ಪರಿಚಯ ಈ ಸಲದ ಸಂಚಿಕೆಯಲ್ಲಿ ತುಂಬಾ ಸೊಗಸಾಗಿ ಮೂಡಿ ಬಂದಿದೆ.
ಮಕ್ಕಳ ಕವನಗಳಲ್ಲಿ ಕುಶಿಯವರ ಪ್ರಾಸಬದ್ಧವಾದ ಸುಂದರ ಕವನಗಳು ಚೆನ್ನಾಗಿದ್ದುವು. ಅಭಿನಂದನೆಗಳು ಕುಶಿಯವರಿಗೆ.
ಎಸ್.ಎಸ್.ಎಲ್. ಸಿ ನಂತರ ಮಕ್ಕಳ ಮುಂದಿನ ಗುರಿಯನ್ನು ನಿರ್ಧರಿಸಲು ಸಹಾಯಕವಾಗುವ ಚೆಂದದ ಲೇಖನ ಯಾಕೂಬ್ ಸರ್ ರವರಿಂದ.
ಸಂಚಿಯ ಕೊರಳಾಗ ಸಂಪೀನ ಹಾಡು ಎನ್ನುವ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
ನಾಗೇಂದ್ರರವರ ಈ ಸಲದ ಸವಿ ಜೇನು ಸಂಚಿಕೆಯಲ್ಲಿ ತಮ್ಮ ಹಾಸ್ಟೆಲ್ ಮಿತ್ರರೊಂದಿಗೆ ರೈಲ್ವೇ ಸ್ಟೇಶನ್ ನಲ್ಲಿ ಹೊಗೆ ಹಾಕಿ ಜೇನು ಕಿತ್ತು ಸಿಕ್ಕಿಬಿದ್ದ ಘಟನೆಯ ಕುರಿತಾದ ಅನುಭವ ಸೊಗಸಾಗಿ ಮೂಡಿ ಬಂದಿದೆ.
ಈ ಸಲದ ಪದದಂಗಳ ಸಂಚಿಕೆ ಕೂಡ ಸೊಗಸಾಗಿ ಮೂಡಿ ಬಂದಿದೆ.
ಈ ವಾರದ ಜಗಲಿಯಲ್ಲಿ ಲೇಖನ ಕಳಿಸಿದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ .. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************