-->
ಹೃದಯದ ಮಾತು : ಸಂಚಿಕೆ - 43

ಹೃದಯದ ಮಾತು : ಸಂಚಿಕೆ - 43

ಹೃದಯದ ಮಾತು : ಸಂಚಿಕೆ - 43
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


                

ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು ಜಗತ್ತಿನ ಅಗರ್ಭ ಶ್ರೀಮಂತ. ಮೃತ್ಯು ಪಾಶಕ್ಕೆ ಕೊರಳೊಡ್ಡುವ ಮುನ್ನ ಮನದಾಳದ ಮಾತುಗಳು ಹೊರಹೊಮ್ಮುತ್ತಿವೆ. ವ್ಯಾಪಾರ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಗಿಟ್ಟಿಸಿ, ಗೆಲುವಿನ ಪ್ರತಿರೂಪ ಆತನಾಗಿದ್ದ. ಆತನಿಗೆ ಉಸಿರಾಡಲು ಜೋಡಿಸಿರುವ ಯಂತ್ರಗಳ ಮಧ್ಯೆ ಮೃತ್ಯು ದೇವತೆ ನಗುತ್ತಿರುವ ಶಬ್ಧ ಕೇಳಿಸುತ್ತಿದೆ. "ಪ್ರಪಂಚದ ಅತ್ಯಂತ ದುಬಾರಿ ಮಂಚ ಯಾವುದು ಗೊತ್ತಾ? ಅದು ನೀನು ರೋಗಗ್ರಸ್ಥನಾಗಿ ಮಲಗಿರುವ ಮಂಚ. ನಿನ್ನ ಕಾರನ್ನು ಓಡಿಸಲು ಒಬ್ಬ ಚಾಲಕನನ್ನು ನೇಮಿಸಿಕೊಳ್ಳಬಲ್ಲೆ. ನಿನಗೆ ಸಂಪಾದನೆ ನೀಡುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬಲ್ಲೆ. ಆದರೆ ನಿನ್ನ ರೋಗ ಹಾಗೂ ನೋವನ್ನು ಅನುಭವಿಸಬಲ್ಲ ವ್ಯಕ್ತಿಯನ್ನು ನಿನ್ನ ದುಡ್ಡಿನಿಂದ ನೇಮಿಸಿಕೊಳ್ಳಲಾಗದು. ಕಳೆದು ಕೊಂಡ ಏನನ್ನೂ ಮತ್ತೆ ಪಡೆಯಬಹುದು. ಆದರೆ ಜಾರಿದ ಜೀವನವನ್ನು ಮತ್ತೆ ಪಡೆಯಲಾಗದು. ಅದೆಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಜೀವನಕ್ಕೆ ತೆರೆ ಬೀಳುವ ದಿನ ಬಂದೇ ಬರುತ್ತದೆ. ಆಗ ಎಷ್ಟೇ ನೊಂದು ಕೊಂಡರೂ ಜೀವನ ಮತ್ತು ಕಾಲ ಮರಳಿ ಬಾರದು" ಎಂದು ತನ್ನ ಮನದಾಳದ ಭಾವನೆಗಳಿಗೆ ಆಸ್ಪತ್ರೆಯ ಮಂಚದಿಂದಲೇ ಡೈರಿಯ ಮೇಲೆ ಅಕ್ಷರ ರೂಪ ಕೊಡುತ್ತಿರುವ ಆ ವ್ಯಕ್ತಿ ವೇದನೆಯಿಂದ ಜರ್ಝರಿತನಾಗಿದ್ದಾನೆ.

ಹಣ, ಅಂತಸ್ತು, ಅಧಿಕಾರ ಸಂಪಾದಿಸಿದ ಮೇಲೆ ಅದರಾಚೆ ಪ್ರೀತಿ, ಸಹಾಯ, ಸೇವೆ, ಸಂಬಂಧ ಹೀಗೆ ಮತ್ತೊಂದು ಪ್ರಪಂಚನೂ ಇದೆ ಎಂಬುವುದನ್ನು ನಾವು ಮರೆತು ಬಿಡುತ್ತೇವೆ. ಸಂಪತ್ತಿಗೆ ಬೆಲೆ ಕೊಡುವ ನಾವು ಕಾಲ್ಪನಿಕ ಜಗತ್ತನ್ನು ನಮ್ಮ ಸುತ್ತ ಸೃಷ್ಟಿಸಿಕೊಂಡಿದ್ದೇವೆ. ಆದರೆ ಅವ್ಯಾವುದೂ ನಮ್ಮ ಕೊನೆಯ ಪ್ರಯಾಣದಲ್ಲಿ ನಮ್ಮ ಜೊತೆ ಬರುವುದಿಲ್ಲ ಎಂಬುವುದು ವಾಸ್ತವ. ಅಂತಿಮವಾಗಿ ನಾವು ಬಿಟ್ಟು ಹೋಗುವುದು ನೆನಪುಗಳನ್ನು ಮಾತ್ರ. ಇವೆಲ್ಲಾ ಸತ್ಯಸಂಗತಿಗಳು ಕೊನೆ ಕ್ಷಣಗಳನ್ನು ಎಣಿಸುತ್ತಿರುವ ಆತನನ್ನು ಕಾಡತೊಡಗಿವೆ. ಹತಾಶನಾಗಿ ನೆನಪುಗಳು ಸಹಿಸಲಸಾಧ್ಯ ವೇದನೆಯ ಮಧ್ಯೆ ಚಿಮ್ಮುತ್ತಿದೆ.

ಹೌದು ಅಲ್ಲಿ ಮಲಗಿರುವ ವ್ಯಕ್ತಿ ಸಂಪತ್ತಿನ ಒಡೆಯ. ತನ್ನ ಬುದ್ಧಿಚಾತುರ್ಯ ಹಾಗೂ ದೃಢ ನಿರ್ಧಾರದಿಂದ ಉದ್ಯಮ ಜಗತ್ತನ್ನು ಆಳಿದ ಸಾಧಕ. 'ಸ್ಟೀವ್ ಪೌಲ್ ಜಾಬ್ಸ್' ತಾಂತ್ರಿಕ ಲೋಕದ ಅನರ್ಘ್ಯ ವ್ಯಕ್ತಿತ್ವ. ಆತನ ಬದುಕೊಂದು ವಿಚಿತ್ರ ಹಾಗೂ ವಿಸ್ಮಯ. ಭವಿಷ್ಯದ ಸಾಧಕರಿಗೊಂದು ದಾರಿದೀಪ. ಕ್ಯಾಲಿಫೋರ್ನೀಯದಲ್ಲಿ ಆತನದ್ದು ಅಚಾತುರ್ಯದ ಹುಟ್ಟು. ಮದುವೆ ಮುಂಚೆ ಮಗುವಿಗೆ 1955ರಲ್ಲಿ ಜನ್ಮ ನೀಡಿದ್ದಳು ಆತನ ತಾಯಿ. ಭ್ರೂಣ ಹತ್ಯೆ ಅಪರಾಧವೇ ಆತನ ಜನ್ಮಕ್ಕೆ ಹೇತುವಾಯಿತು. ತಾಯಿತನಕ್ಕೆ ಹೊಂದಿಕೊಳ್ಳಲಾಗದ ಪರಿಸ್ಥಿತಿ ಆಕೆಯದ್ದು. ಪೌಲ್ ಮತ್ತು ಲಾರಾ ಮಧ್ಯಮ ವರ್ಗದ ದಂಪತಿಗಳು, ತಾಯಿಗೆ ಬೇಡವಾದ ಮಗುವನ್ನು ದತ್ತು ಪಡೆದು ಸಾಕಿ ಬೆಳೆಸಿದರು. ಆ ಮಗು ಮುಂದೆ ಬೆಳೆದ ರೀತಿಯೇ ಒಂದು ದಂತಕತೆ.

ಸಾಕು ತಂದೆ ಮೆಕ್ಯಾನಿಕ್. ತಾಯಿ ಅಕೌಂಟೆಂಟ್. ಬರುವ ಆದಾಯ ಮನೆಯ ಖರ್ಚಿಗಷ್ಟೇ ಸಾಕಾಗುತ್ತಿತ್ತು. ಶಾಲೆಗೆ ಸೇರಿದ ಸ್ಟೀವ್ ಕೀಟಲೆಯ ಹುಡುಗನಾಗಿದ್ದ. ಆ ಕಾರಣಕ್ಕಾಗಿಯೇ ಶಾಲೆಯಿಂದ ಹಲವು ಬಾರಿ ಹೊರಹಾಕಲ್ಪಟ್ಟಿದ್ದ. ಆತನಿಗೆ ತರಗತಿಯ ಗೋಡೆಗಳು ಜೈಲಿನಂತೆ ಭಾಸವಾಗುತ್ತಿತ್ತು. ತಂದೆಯ ವರ್ಕ್ ಶಾಪ್ ನಲ್ಲಿ ಕಂಪ್ಯೂಟರ್ ಗಳು ಆತನಿಗೆ ಆಸಕ್ತಿ ಮೂಡಿಸುತ್ತಿತ್ತು. ಮುಂದೆ 'ಸೈಂಟ್ ಫೋರ್ಡ್' ನ ದುಬಾರಿ ಕಾಲೇಜಿನಲ್ಲಿ ಪದವಿಗಾಗಿ ಪ್ರವೇಶ ಪಡೆದಿದ್ದ. ತನ್ನ ಹೆತ್ತವರು ತಾವು ದುಡಿದ ಎಲ್ಲವನ್ನೂ ತನ್ನ ದುಬಾರಿ ಶಿಕ್ಷಣಕ್ಕಾಗಿ ವ್ಯಯ ಮಾಡುತ್ತಿರುವುದು ಗಮನಿಸಿದ ಆತ ವ್ಯಥೆಗೊಂಡಿದ್ದ.

ಬಿಡುವಿನ ಅವಧಿಯಲ್ಲಿ ಬೀದಿ ಬದಿಯ ಬಾಟ್ಲಿ ಹೆಕ್ಕಿ ಗಳಿಸಿದ ಹಣದಿಂದ ಊಟದ ಖರ್ಚು ನಿಭಾಯಿಸ ತೊಡಗಿದ. ಮನೆಯಿಂದ ಏಳು ಕಿ ಮೀ. ದೂರದ ಹರೇ ಕೃಷ್ಣ ಮಂದಿರದಲ್ಲಿ ವಾರಕ್ಕೊಮ್ಮೆ ಭರ್ಜರಿ ಊಟವಿರುತ್ತಿತ್ತು. ಅದಕ್ಕಾಗಿ ಪ್ರತಿವಾರ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ವಸತಿಗೃಹದಲ್ಲಿ ತನಗೆಂದು ಯಾವುದೇ ಕೊಠಡಿ ಇರಲಿಲ್ಲ. ಗೆಳೆಯರ ಕೊಠಡಿಯಲ್ಲಿ ನೆಲದ ಮೇಲೆ ಮಲಗಿ ದಿನ ದೂಡುತ್ತಿದ್ದ. ಅದಾಗ್ಯೂ ಆರೇ ತಿಂಗಳಲ್ಲಿ ಕಾಲೇಜನ್ನು ತೊರೆದೇ ಬಿಟ್ಟ. ತನಗಿಷ್ಟವಿಲ್ಲದ ವಿಷಯಗಳು ಕಲಿಯಲು ಆತನ ಮನಸ್ಸು ಒಪ್ಪಲೇ ಇಲ್ಲ. ಆತ ರೀಡ್ ಕಾಲೇಜಿನಲ್ಲಿ "ಕ್ಯಾಲಿಗ್ರಾಫಿ" ಕಲಿಯತೊಡಗಿದ. ಉದ್ದೇಶವಿಲ್ಲದೆ ಕಲಿತ ಈ ವಿದ್ಯೆಯೇ ಆತನ ಬದುಕಿನಲ್ಲಿ ಮುಂದೆ ನಿರ್ಣಾಯಕ ತಿರುವು ನೀಡಿದ್ದು ಇತಿಹಾಸ.

ಕಂಪ್ಯೂಟರ್ ತಂತ್ರಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಸ್ಟೀವ್ ಗೆಳೆಯ 'ಸ್ಟೀವ್ ವಾಜ್ ನೈಕ್' ಜೊತೆ ತಂದೆಯ ಮೆಕ್ಯಾನಿಕ್ ಶಾಪ್ ನಲ್ಲೇ ಆ್ಯಪಲ್-1 ಕಂಪೆನಿಯನ್ನು ಆರಂಭಿಸಿ ಹೊಸ ಚರಿತ್ರೆಗೆ ಬುನಾದಿ ಹಾಕಿದ. ಅದಕ್ಕಾಗಿ ತನ್ನಲ್ಲಿದ್ದ VW Bus ಹಾಗೂ ಆ ಕಾಲದ ಪ್ರತಿಷ್ಠಿತ HP-65 ಕ್ಯಾಲ್ಕುಲೇಟರ್ ನ್ನು ಮಾರಾಟ ಮಾಡಿ ಬಂಡವಾಳ ಹಾಕಿದ್ದ. ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ 533% ಬೆಳವಣಿಗೆ ಸಾಧಿಸಿದ ಈ ಕಂಪೆನಿ ಅದ್ಭುತ ಇತಿಹಾಸವನ್ನು ಸೃಷ್ಟಿಸಿತು. 1984 ರಲ್ಲಿ Mac ತಂತ್ರಜ್ಞಾನವನ್ನು ಅಳವಡಿಸಿದ್ದು ಆ್ಯಪಲ್ ಕಂಪೆನಿಯ ಪ್ರಮುಖ ತಿರುವಾಗಿತ್ತು.

ಆ್ಯಪಲ್ ಕಂಪೆನಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸ ಬಯಸಿದ. ಅದಕ್ಕಾಗಿ ಮೆಕ್ಸಿಕೋದ ಪ್ರತಿಭಾವಂತ ಜಾನ್ ಸ್ಕೆಲ್ಲಿಯನ್ನು ಕಂಪೆನಿಯ ಸಿಇಒ ಆಗಿ ನಿಯುಕ್ತಿಗೊಳಿಸಿದ. ಆದರೆ ಅದೇ ಜಾನ್ ಸ್ಕೆಲ್ಲಿ ''ಸ್ಟೀವ್ ಜಾಬ್ಸ್' ನನ್ನು ಆ್ಯಪಲ್ ಕಂಪೆನಿಯಿಂದಲೇ ಹೊರದಬ್ಬಿದ. ಭವಿಷ್ಯದ ಭರವಸೆ ಕಮರಿದಂತೆ ಒಂದು ಕ್ಷಣ ಭಾಸವಾದರೂ, ಸೋಲಿನಲ್ಲೂ ಎದ್ದು ನಿಲ್ಲುವ ಅಪ್ರತಿಮ ಎದೆಗಾರಿಕೆ 'ಸ್ಟೀವ್' ನಲ್ಲಿತ್ತು. ಆತ ಪ್ರತಿದಿನ ಎದ್ದು ಕನ್ನಡಿಯ ಮುಂದೆ ನಿಂತುಕೊಳ್ಳುತ್ತಿದ್ದ. "ಇಂದೇ ನನ್ನ ಜೀವನದ ಕೊನೆಯ ದಿನ" ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದ. "ಈ ದಿನವೇ ನಾನು ವಿಶೇಷವಾದದ್ದನ್ನು ಸಾಧಿಸಬೇಕು" ಎಂಬ ನಿರ್ಧಾರ ಪ್ರತಿದಿನ ಅವನದ್ದಾಗಿತ್ತು. ಆತ ತನ್ನದೇ ಆದ 'Next' ಕಂಪೆನಿಯನ್ನು ಸ್ಥಾಪಿಸಿದ. ತಾನು ಕಲಿತ "ಕ್ಯಾಲಿಗ್ರಾಫಿ" ಜ್ಞಾನ ಬಳಸಿ ಅದ್ಭುತ ಅಕ್ಷರ ವಿನ್ಯಾಸವನ್ನು ಕಂಪ್ಯೂಟರ್ ನಲ್ಲಿ ಮೂಡಿಸಿ ಕಂಪ್ಯೂಟರ್ ಕ್ಷೇತ್ರವನ್ನೇ ಬೆರಗುಗೊಳಿಸಿದ. Next ಕಂಪ್ಯೂಟರ್ ಕ್ಷೇತ್ರದಲ್ಲಿ ಸಂಚಲನವನ್ನೇ ಮೂಡಿಸಿತು. "ಅನಿಮೇಷನ್ ಆ್ಯಂಡ್ ವಿಜುವಲೈಜೇಶನ್ ಎಫೆಕ್ಟ್ ಕಂಪೆನಿ" PIXAR ನ್ನು ಸ್ಥಾಪಿಸಿ ಎಲ್ಲರನ್ನೂ ಬೆರಗುಗೊಳಿಸಿದ. 

'ಸ್ಟೀವ್ ಜಾಬ್ಸ್' ನ ಪ್ರತಿಭೆಯಿಂದ ವಂಚಿತಗೊಂಡ ಆ್ಯಪಲ್ ಕಂಪೆನಿ ದಿವಾಳಿಯ ಅಂಚನ್ನು ತಲುಪಿತು. ಅನ್ಯ ದಾರಿಯಿಲ್ಲದೆ ಅದು Next ನ್ನು ತನ್ನಲ್ಲಿ ವಿಲೀನಗೊಳಿಸಿ ಜವಾಬ್ದಾರಿಯನ್ನು ಮತ್ತೊಮ್ಮೆ ಸ್ಟೀವ್ ಜಾಬ್ಸ್ ಗೆ ಒಪ್ಪಿಸಿತು.
ಅಲ್ಲಿಂದಲೇ ಸ್ಟೀವ್ ಜಾಬ್ಸ್ ನ ಹೊಸ ಅಧ್ಯಾಯ ಆರಂಭಗೊಂಡದ್ದು. ಆತನ ಬುದ್ದಿಚಾತುರ್ಯತೆ ಹಾಗೂ ಸಂಶೋಧನಾ ಮನೋಭಾವ ಅದ್ಭುತ ಯಶಸ್ದು ನೀಡಿತು. 1998 ರಲ್ಲಿ ಮೊತ್ತ ಮೊದಲ 'All in one' ಕಂಪ್ಯೂಟರ್ iMax ಬಿಡುಗಡೆಗೊಂಡಿತು. ಮುಂದಿನ ಐದೇ ತಿಂಗಳಲ್ಲಿ 8 ಲಕ್ಷ ಕಂಪ್ಯೂಟರ್ ಮಾರಾಟವಾಗಿದ್ದು ಉದ್ಯಮ ಲೋಕದ ವಿಸ್ಮಯವಾಗಿತ್ತು. USB ಯನ್ನು ಮೊತ್ತ ಮೊದಲಾಗಿ ಅಳವಡಿಸಿದ ಕೀರ್ತಿ ಈ ಕಂಪೆನಿದ್ದಾಯಿತು.

ಸ್ಟೀವ್ ಜಾಬ್ಸ್ ನ ಹೊಸತನ ಅಲ್ಲಿಗೇ ಕೊನೆಗೊಂಡಿರಲಿಲ್ಲ. 2007 ರಲ್ಲಿ ಬಿಡುಗಡೆಗೊಂಡ IPhone ವಿಶ್ವವನ್ನೇ ಬೆರಗುಗೊಳಿಸಿತು. ಬಿಡುಗಡೆಗೊಂಡ 30 ಗಂಟೆಗಳಲ್ಲಿ 2 ಲಕ್ಷದ 70 ಸಾವಿರ IPhone ಗಳು ಮಾರಾಟಗೊಂಡು ಚರಿತ್ರೆಯನ್ನೇ ನಿರ್ಮಿಸಿತು. ಸ್ಟೀವ್ ಜಾಬ್ಸ್ ರ ಅಪ್ರತಿಮ ಚಿಂತನೆಗಳು ಆ್ಯಪಲ್ ಕಂಪೆನಿಯನ್ನು ಜಗತ್ತಿನ ಸರ್ವಶ್ರೇಷ್ಠ ಕಂಪೆನಿಯಾಗಿ ರೂಪಿಸಿತು. 49 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ಹೊಂದಿರುವ ಅದರ ಮೌಲ್ಯ ಇಂದು ಮೌಲ್ಯ 2 ಲಕ್ಷದ 63 ಸಾವಿರ ಕೋಟಿ ಡಾಲರ್ ಗೂ ಮೀರಿ ನಿಂತಿದೆ.

ಯಶಸ್ಸಿನ ಶಿಖರದಲ್ಲಿದ್ದ ಸ್ಟೀವ್ ಜಾಬ್ಸ್ 2003ರಲ್ಲಿ ಮಾನಸಿಕವಾಗಿ ಅಘಾತಗೊಂಡ. ಅಚಾನಕ್ ಆತನಿಗೆ ಮೆಧೋಜೀರಂಕ ಗ್ರಂಥಿಯ ಕ್ಯಾನ್ಸರ್ ಭಾದಿಸಿತು. ನಂತರದ ಬದುಕು ಅದರೊಂದಿಗೆ ಹೋರಾಟವಾಗಿತ್ತು. ಆತ ಕೊನೆಯ ದಿನಗಳಲ್ಲಿ ತಾನು ಡೈರಿಯಲ್ಲಿ ಬರೆದ ಸಾಲುಗಳು ಎಲ್ಲರಿಗೂ ಎಚ್ಚರಿಕೆಯ ಗಂಟೆಗಳಾಗಿವೆ. ಆತ 2011 ರಲ್ಲಿ ತನ್ನ 56ರ ಪ್ರಾಯದಲ್ಲಿ ಈ ಜಗತ್ತಿಗೆ ವಿದಾಯ ಹೇಳಿದ್ದ. ಅದೇನೂ ಸಾಯುವ ವಯಸ್ಸಾಗಿರಲಿಲ್ಲ. ಆದರೂ ತನ್ನ ಸಾಧನೆಯ ಮೂಲಕ ಕಾಲ ಕಾಲಕ್ಕೂ ಮಾದರಿಯಾಗಿ ಬದುಕಿದ. ಆತನ ವಿದಾಯ ಕೂಡಿಟ್ಟ ಸಂಪತ್ತಿನಿಂದ ಜೀವವನ್ನು ಉಳಿಸಲಾಗದು ಎಂಬ ಬದುಕಿನ ಸತ್ಯವನ್ನು ಮತ್ತೊಮ್ಮೆ ನೆನಪಿಸಿತು.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************



Ads on article

Advertise in articles 1

advertising articles 2

Advertise under the article