-->
ಮಕ್ಕಳ ಕಥೆಗಳು - ಸಂಚಿಕೆ : 07 ಜಗಲಿಯ ಮಕ್ಕಳ ಸ್ವರಚಿತ ಕಥೆಗಳು

ಮಕ್ಕಳ ಕಥೆಗಳು - ಸಂಚಿಕೆ : 07 ಜಗಲಿಯ ಮಕ್ಕಳ ಸ್ವರಚಿತ ಕಥೆಗಳು

ಮಕ್ಕಳ ಕಥೆಗಳು - ಸಂಚಿಕೆ : 07
ಸ್ವರಚಿತ ಕಥೆ ಬರೆದಿರುವ ಮಕ್ಕಳ ಜಗಲಿಯ ವಿದ್ಯಾರ್ಥಿಗಳು :
◾ ಜನನಿ ಪಿ , 8ನೇ ತರಗತಿ 
◾ ಶ್ರೀರಾಮ ಶರ್ಮ ಎಡಕ್ಕಾನ, 4ನೇ ತರಗತಿ
◾ ಯಶಸ್ವಿನಿ ಪಿ, 10ನೇ ತರಗತಿ 
◾ ಡಿ ಎಲ್ ಮಧುರ, 10ನೇ ತರಗತಿ 
◾ ಸಾತ್ವಿ ಡಿ, 8ನೇ ತರಗತಿ 
        
    
ಒಂದು ಊರಿನಲ್ಲಿ ಒಂದು ಮನೆಯಿತ್ತು. ಆ ಮನೆಯಲ್ಲಿ ಒಬ್ಬ ಮಗ ಹಾಗೂ ತಾಯಿ ವಾಸವಾಗಿದ್ದರು. ಆ ಮಗನ ಹೆಸರು ರಮೇಶ. ಇವರ ಈ ಸಣ್ಣ ಕುಟುಂಬದಲ್ಲಿ ತುಂಬಾ ಬಡತನವಿತ್ತು. ಆದರೆ ರಮೇಶನಿಗೆ ತಾನು ಕಲಿತು ದೊಡ್ಡ ಹುದ್ದೆಯನ್ನು ಸೇರಬೇಕೆಂದು ತುಂಬಾ ಆಸೆ. ಮಗನ ಆಸೆ ಈಡೇರಿಸಲು ತಾಯಿ ಕೂಲಿ ಕೆಲಸಕ್ಕೆ ಹೋಗಿ ಹಣ ಸಂಪಾದನೆ ಮಾಡಿ ಮಗನನ್ನು ಸರಕಾರಿ ಶಾಲೆಗೆ ಸೇರಿಸಿದಳು. ತಾಯಿಯು ತನ್ನ ಮಗನಿಗಾಗಿ ತುಂಬಾ ಕಷ್ಟ ಪಡುತ್ತಿದ್ದಳು. ತಾಯಿ ತುಂಬಾ ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದಳು. ನಂತರ ಮಗನಿಗೆ ಇಂಜಿನಿಯರ್ ಹುದ್ದೆ ಸಿಗುತ್ತದೆ. ಅದಕ್ಕಾಗಿ ರಮೇಶನು ನಗರಕ್ಕೆ ಹೋಗಬೇಕಾಯಿತು. ತನ್ನ ತಾಯಿ ಒಬ್ಬಳೇ ಮನೆಕೆಲಸ ಮಾಡಿಕೊಂಡು ಇರುತ್ತಿದ್ದಳು. ರಮೇಶನು ಒಂದು ತಿಂಗಳಿಗೊಮ್ಮೆ ತಾಯಿಯನ್ನು ನೋಡಲು ಬರುತ್ತಿದ್ದನು. ಹಾಗೆಯೇ ತನ್ನ ತಾಯಿಗೆ ಬೇಕಾದ ವಸ್ತುಗಳನ್ನು ತಂದುಕೊಡುತ್ತಿದ್ದನು. ನಂತರ ತಾಯಿಗೆ ವಯಸ್ಸಾಗುತ್ತದೆ. ಅದಕ್ಕಾಗಿ ರಮೇಶನಿಗೆ ಮದುವೆ ಮಾಡಲು ತಾಯಿಯು ಮುಂದಾಗುತ್ತಾಳೆ. ಅವನಿಗೆ ನಗರದ ಹುಡುಗಿಯ ಜೊತೆ ಮದುವೆ ಮಾಡುತ್ತಾಳೆ. ರಮೇಶನ ಹೆಂಡತಿಯ ಹೆಸರು ಸುಮ. ರಮೇಶನಿಗೆ ನಗರದಲ್ಲಿ ಕೆಲಸ ಇದ್ದ ಕಾರಣ ತನ್ನ ತಾಯಿ ಹಾಗೂ ಹೆಂಡತಿಯನ್ನು ನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಮನೆ ಕೆಲಸವನ್ನೆಲ್ಲಾ ರಮೇಶನ ತಾಯಿಯೇ ಮಾಡುತ್ತಿರುತ್ತಾಳೆ. ಕೆಲ ದಿನಗಳು ಕಳೆದಂತೆ ಸುಮ ಮತ್ತು ರಮೇಶನಿಗೆ ಗಂಡು ಮಗು ಹುಟ್ಟುತ್ತದೆ. ಕೆಲ ದಿನಗಳ ನಂತರ ಸುಮಾಳು, ರಮೇಶನ ಬಳಿ ನಿನ್ನ ತಾಯಿಯನ್ನು ಯಾವುದಾದರೂ ಅನಾಥಾಶ್ರಮಕ್ಕೆ ಬಿಟ್ಟು ಬಾ ಎಂದು ಹೇಳುತ್ತಾಳೆ. ರಮೇಶನಿಗೆ ತಾಯಿಯ ಮೇಲೆ ಬಹಳ ಪ್ರೀತಿಯಿತ್ತು. ಆದರೆ ಹೆಂಡತಿಯ ಮಾತು ಕೇಳಿ ರಮೇಶನ ಮನಸ್ಸು ಬದಲಾಗಿ ಪ್ರೀತಿಯಿಂದ ಸಾಕಿದ ತನ್ನ ತಾಯಿಯನ್ನು ಅನಾಥಾಶ್ರಮಕ್ಕೆ ಬಿಟ್ಟು ಬರುತ್ತಾನೆ. ಈಗ ನಾವು ಮೂರು ಜನ ಸಂತೋಷದಿಂದ ಇರಬಹುದೆಂದು ಸುಮ ಯೋಚಿಸುತ್ತಾಳೆ. ಒಂದು ದಿನ ರಮೇಶನ ಆರೋಗ್ಯ ಸರಿಯಿರಲಿಲ್ಲ. ತನ್ನ ಹೆಂಡತಿಯು ಯಾವುದೇ ಆರೈಕೆ ಮಾಡುವುದಿಲ್ಲ. ಮನೆಯಲ್ಲಿ ಅಡುಗೆಯು ಸಹ ಮಾಡಿರುವುದಿಲ್ಲ. ಆಗ ರಮೇಶನಿಗೆ ತನ್ನ ತಾಯಿಯ ನೆನಪಾಗುತ್ತದೆ. ರಮೇಶ ತನ್ನ ತಾಯಿಯನ್ನು ನೋಡಲೆಂದು ಅನಾಥಾಶ್ರಕ್ಕೆ ಹೋಗುತ್ತಾನೆ. ತಾಯಿಯು ತನ್ನ ಮಗನನ್ನು ಕಂಡ ತಕ್ಷಣ ಮಗನ ಬಳಿ, ಈ ಆಶ್ರಮಕ್ಕೆ ಕೆಲವು ವ್ಯವಸ್ಥೆಗಳು ಆಗಬೇಕಾಗಿದೆ ನೀನು ಈ ವ್ಯವಸ್ಥೆಯನ್ನು ಮಾಡಿಸು ಎಂದು ಹೇಳುತ್ತಾಳೆ. ಅದಕ್ಕೆ ರಮೇಶನು, ನಾನು ಯಾಕೆ ಮಾಡಬೇಕು ಎಂದು ಕೇಳುತ್ತಾಳೆ. ಏಕೆಂದರೆ ನಿನ್ನ ಮಗನು ನಿನ್ನನ್ನು ಇದೇ ರೀತಿ ಅನಾಥಾಶ್ರಮಕ್ಕೆ ಹಾಕಿದಾಗ ನಿನಗಾದರೂ ಈ ವ್ಯವಸ್ಥೆಗಳು ಇರಲಿ ಎಂದು ತಾಯಿ ಹೇಳುತ್ತಾಳೆ. ಆಗ ರಮೇಶನಿಗೆ ತನ್ನ ತಪ್ಪಿನ ಅರಿವಾಯಿತು. ನಾನು ನನ್ನ ಹೆಂಡತಿಯ ಮಾತು ಕೇಳಿ ಈ ರೀತಿ ಮಾಡಿದೆ. ನನ್ನನ್ನು ಕ್ಷಮಿಸು ಎಂದು ರಮೇಶನು ತನ್ನ ತಾಯಿಯ ಬಳಿ ಹೇಳಿದ. ತನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಹೋದ. ತನ್ನ ಬುದ್ಧಿ ಮಾತು ಹೇಳಿದ. ಆಗ ಸುಮಾಳ ಮನಸ್ಸು ಬದಲಾಯಿತು. ನಂತರ ಎಲ್ಲರೂ ಸಂತೋಷದಿಂದ ಜೀವನ ಮಾಡಿದರು.
.............................................. ಜನನಿ ಪಿ 
8ನೇ ತರಗತಿ 
ದ ಕ ಜಿ ಪಂ ಉ ಹಿ ಪ್ರಾ ಶಾಲೆ 
ಕೊಯಿಲ ಕೆ.ಸಿ.ಫಾರ್ಮ್
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
    

          
      ಒಬ್ಬ ಬೇಟೆಗಾರ ಇದ್ದ. ಆತ ಒಮ್ಮೆ 'ಚಂಪಾ' ಎಂಬ ದಟ್ಟವಾದ ಅರಣ್ಯದಲ್ಲಿ ಜಿಂಕೆಯ ಬೇಟೆಗಾಗಿ ಹೋದ. ಅವನಿಗೆ ಒಂದು ಜಿಂಕೆಯ ಹಿಂಡು ಮೇಯುತ್ತಿರುವುದು ಕಾಣಿಸಿತು. ಆತ ಬಿಲ್ಲನ್ನು ಸಿದ್ದಪಡಿಸಿಕೊಂಡು ಬಾಣ ಬಿಟ್ಟ. ಕ್ಷಿಪ್ರವಾಗಿ ಹಾದು ಬಂದ ಆ ಬಾಣ ಒಂದು ಮರಿ ಜಿಂಕೆಯನ್ನು ಸಾಯಿಸಿತು. ಬೇಟೆಗಾರ ಆ ಜಿಂಕೆಯನ್ನು ಹಿಡಿದು ವಾಪಸ್ಸು ಬರುತ್ತಿದ್ದ. ದೊಡ್ಡ ಹುಲಿಯೊಂದು ಅವನ ಮೇಲೆ ಆಕ್ರಮಣ ಮಾಡಿತು. ಬೇಟೆಗಾರ ಆ ಮರಿ ಜಿಂಕೆಯನ್ನು ಬಿಟ್ಟು ಹುಲಿಯ ಮೇಲೆ ಬಾಣ ಬಿಟ್ಟ. ಆ ಬಾಣ ಹುಲಿಯ ದೇಹವನ್ನು ಹೊಕ್ಕಿತು. ಆ ಹುಲಿ ನೋವಿನಿಂದ ನರಳುತ್ತ ಮುಂದೆ ಬಂದು ಬೇಟೆಗಾರನ ತೊಡೆಯನ್ನು ಕಚ್ಚಿತು. ಬೇಟೆಗಾರ ನೋವಿನಿಂದ ನರಳುತ್ತ ಸತ್ತ. ಆತನ ಮೇಲೆ ಬಿದ್ದ ಹುಲಿಯೂ ಸತ್ತಿತು ಒಂದು ಹಸಿದ ತೋಳ ಆ ಮಾರ್ಗವಾಗಿ ಆಹಾರ ಹುಡುಕುತ್ತ ಹೊರಟಿತ್ತು. ಅದು ಜಿಂಕೆ, ಹುಲಿ ಮತ್ತು ಬೇಟೆಗಾರನನ್ನು ನೋಡಿತು. ಖುಷಿಯಿಂದ ಕೇಕೆ ಹಾಕಿತು. "ಓ! ನನಗಿಂದು ಪುಷ್ಕಳವಾದ ಭೋಜನಕ್ಕೆ ಸಾಕಷ್ಟಾಯಿತು. ನಾನಿದನ್ನು ಶೇಖರಿಸಿ ಇಡುವೆ. ಇದು ನನಗೆ ಕನಿಷ್ಠ ಪಕ್ಷ ಎರಡು ತಿಂಗಳ ಭೋಜನದ ಸಮಸ್ಯೆ ಕೊಡುವದಿಲ್ಲ. ಮೊದಲು ನಾನು ಮನುಷ್ಯನನ್ನು ತಿನ್ನುವೆ, ನಂತರ ಜಿಂಕೆ ಮತ್ತು ಕೊನೆಗೆ ಹುಲಿ. ತಕ್ಷಣ ಅದರ ಲಕ್ಷ್ಶ ಬಿಲ್ಲಿನ ಮೇಲೆ ಬಿದ್ದಿತು. "ಆಹಾ! ಈ ಬಿಲ್ಲಿನ ತಂತಿ ಕರಿಯ ಕರುಳಿನಿಂದ ಮಾಡಿದುದಾಗಿದೆ. ಕುರಿಯ ಕರುಳಿನಷ್ಟು ರುಚಿ ಇನ್ನೊಂದಿಲ್ಲ. ನಾನು ಮೊದಲು ಇದನ್ನು ಚೀಪಿ ನಂತರ ಭೋಜನ ಮಾಡುವೆ" ಅಂದುಕೊಂಡಿತು. ಅದು ಬಿಲ್ಲಿನ ತಂತಿಯನ್ನು ಕಡಿದ ಕೂಡಲೆ ಬಾಣವು ಅದರ ಹೊಟ್ಟೆಯನ್ನು ಹೊಕ್ಕು ಅದು ಸಾವನ್ನಪ್ಪಿತು.
ನೀತಿ: ಯಾರು ಯಾವ ವಸ್ತುವನ್ನು ಅತಿಯಾಗಿ ಆಶಿಸುವರೋ ಅಂತಹ ವಸ್ತುವು ಅವರ ಹಣೆಯಲ್ಲಿ ಬರೆದಿರದಿದ್ದರೆ ಅನುಭವಿಸಲಾರರು. ಅತಿಯಾಸೆ ಗತಿಗೇಡು.
.......................... ಶ್ರೀ ರಾಮ ಶರ್ಮ ಎಡಕ್ಕಾನ
4ನೇ ತರಗತಿ
B P P A L P S ಪೆರ್ಮುದೆ
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
******************************************

                   

ಸರಸ್ವತಿ ಎಂಬಾಕೆ ಹೀರೆಕೊಪ್ಪ ಎಂಬ ಹಳ್ಳಿಯಲ್ಲಿ ಜನಿಸಿದಳು. ಸರಸ್ವತಿ ಪ್ರಾಮಾಣಿಕ ಹುಡುಗಿ. ಆದರೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿಲ್ಲ. ಆಕೆಯ ತಂದೆ ತಾಯಿ ಆಕೆಯನ್ನು ಓದಲು ಒತ್ತಾಯ ಮಾಡಿದರೂ ಆಕೆ ಓದಲಿಲ್ಲ. ಕೇವಲ ಒಂದು ವರ್ಷ ಮಾತ್ರ ಶಾಲೆಗೆ ಹೋದಳು. ನಂತರ ವಿದ್ಯಾಭ್ಯಾಸ ನಿಲ್ಲಿಸಿದಳು. ಈಗ ಅವಳಿಗೆ 18 ವರ್ಷ ವಯಸ್ಸಾಗಿತ್ತು. ಅವಳಿಗೆ ಅವರ ಅಪ್ಪ  ಅಮ್ಮ ರಾಜೇಶ್ ಎಂಬ ಹುಡುಗನಿಗೆ ಕೂಟ್ಟು  ಮದುವೆ ಮಾಡಿದರು. ರಾಜೇಶ್ ತುಂಬಾ ಒಳ್ಳೆಯ ಮನುಷ್ಯ. ಇಬ್ಬರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಸರಸ್ವತಿ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ಈಗ ಅವರಿಗೆ ಮಗು ಸಾಕಲು ಕಷ್ಟವಾಗುತ್ತಿತ್ತು. ಆಗ ಸರಸ್ವತಿ ಎರಡು ಎಮ್ಮೆಗಳನು ಸಾಕಲು ಶುರು ಮಾಡಿದಳು ಮತ್ತು ಹಾಲು ಕರೆಯುತಿದ್ದಳು. ರಾಜೇಶ್ ಬೇರೆಯವರ ಜಮೀನಿನಲಿ ಕಷ್ಟಪಟ್ಟು ದುಡಿಯುತ್ತಿದ್ದನು. ಸರಸ್ವತಿಯ ಮಗಳ ಹೆಸರು ರೇಖ. ಅವಳನ್ನು  ಶಾಲೆಗೆ ಕಳಿಸುತಿದ್ದರು. ಅವಳು ಓದಿನಲ್ಲಿ ಚುರುಕಾಗಿದ್ದಳು. ರೇಖನಿಗೆ ನಾನೆನ್ನುವ ಅಹಂ ಜಾಸ್ತಿ. ಈಗ ಅವಳಿಗೆ 20 ವರ್ಷವಾಗಿತ್ತು. ಅವಳ ಅಪ್ಪ ಅಮ್ಮ ಅವಳಿಗೆ ಮದುವೆ ಮಾಡಲು ನಿರ್ಧರಿಸಿದರು. ಒಬ್ಬ ಹುಡುಗನಿಗೆ ಕೂಟ್ಟು  ಮದುವೆ ಮಾಡಿದರು. ಕೆಲವು ವರ್ಷಗಳ ನಂತರ ರೇಖ ತನ್ನ ಅಪ್ಪ ಅಮ್ಮನಲ್ಲಿ ತನಗೆ ತನ್ನ ಆಸ್ತಿಯಲ್ಲಿ ಪಾಲು ಕೊಡಿ ಎಂದು ಹಟ ಮಾಡಿದಳು. ಆದರೆ ಸರಸ್ವತಿ ರಾಜೇಶ್ ಗೆ ಮನೆ ಬಿಟ್ಟು ಬೇರೆ ಯಾವ ಆಸ್ತಿಯೂ ಇರಲಿಲ್ಲ. ಮಗಳಿಗೆ ಎಷ್ಟು ಸಮಾಧಾನ ಮಾಡಿದರು  ಅವಳು  ಒಪ್ಪಲಿಲ್ಲ. ಆಗ ರಾಜೇಶ್ ಅವನ ಮನೆಯನ್ನು ಮಗಳಿಗೆ ಕೂಟ್ಟನು. ರೇಖ ತುಂಬಾ ಸಂತೋಷಗೊಂಡು ಹೊರಟಳು. ಒಂದು ವಾರ ಬಿಟ್ಟು ಗಂಡನ ಮಾತು ಕೇಳಿ  ಮತ್ತೆ  ಅಪ್ಪ ಅಮ್ಮನ ಬಳಿ ಬಂದು "ನೀವು ಮನೆ ಖಾಲಿ ಮಾಡಿ ಇದು ನನ್ನ  ಮನೆ" ಎಂದಳು. ಆಗ ಸರಸ್ವತಿ ಮತ್ತು ರಾಜೇಶ್ ... "ಮಗಳೆ ನಮಗೆ ಯಾವ ಆಸ್ತಿಯೂ  ಇಲ್ಲ  ಮನೆಯೂ ಇಲ್ಲ. ನಮಗೆ ವಯಸ್ಸಾಗಿದೆ. ನಾವು ತುಂಬಾ ದಿನ ಬದುಕಲ್ಲ. ನಾವು ಇರುವ ತನಕ ನಮಗೆ ಒಂದು ಮನೆ ಬೇಕು. ದಯವಿಟ್ಟು ನಮ್ಮನ್ನು  ಇಲ್ಲಿಯೇ ಇರಲು ಬಿಡು" ಎಂದು ಕೇಳಿಕೊಳ್ಳುತ್ತಾರೆ. ಆದರೆ ರೇಖ ಮತ್ತು ಅವಳ ಗಂಡ ರಾಜೇಶ್ ಮತ್ತು ಸರಸ್ವತಿಯನ್ನು ಕತ್ತು  ಹಿಡಿದು ಹೊರ ತಳ್ಳಿದರು. ಆ ಮನೆಯನ್ನು ಮಾರಿ ಶ್ರೀಮಂತಿಕೆಯ ಬದುಕು ಅನುಭವಿಸುತಿದ್ದರು. ಒಂದು ದಿನ ಅವಳ ಗಂಡ ಕೆಲಸಕ್ಕೆ ಹೋಗುವಾಗ ಅವನಿಗೆ ವಾಹನ ಅಪಘಾತವಾಯಿತು ಮತ್ತು ಅವನು ತೀರಿ ಹೋದನು. ರೇಖಾಳ ಅತ್ತೆ ಮಾವ ಅವಳನ್ನು ಆಚೆ ಹಾಕಿದರು. ಆಗ ಅವಳಿಗೆ ಇರಲು ಮನೆ ಇಲ್ಲವಾಯಿತು. ಮಕ್ಕಳ ಪೋಷಣೆ ಮಾಡಲು ಹಣವಿಲ್ಲದಂತಾಯಿತು. ಆಗ ಅವಳು ತನ್ನ  ಅಪ್ಪ ಅಮ್ಮನನ್ನು ನೆನೆದು ಅವರನ್ನು ನೋಡಲು ಹೋದಳು. ಆಗ ಅವರು ಕೂಲಿ ಕೆಲಸ ಮಾಡುತಿದ್ದರು. ಅವಳು ಎಲ್ಲಾ ವಿಷಯ ಹೇಳಿದಳು. ಆಗ ಸರಸ್ವತಿ ರಾಜೇಶ್ ಅವಳನ್ನು  ಸಮಾಧಾನ ಮಾಡಿದರು. ಅವಳನ್ನು ಅವರ ಕೈಲಾಗುವ ತನಕ ಸಾಕಿದರು. ಈಗ ಅವಳಿಗೆ  ಅವಳ ತಪ್ಪಿನ ಅರಿವಾಯಿತು. ತನ್ನ ತಂದೆ ತಾಯಿಯರ ಜೊತೆ ಸುಖವಾಗಿ ಬಾಳಿದಳು.
ನೀತಿ:  ಅಪ್ಪ-ಅಮ್ಮ ಮಕ್ಕಳ ಮೊದಲ ದೇವರು ಎಂಬುದನ್ನು ಮರೆಯಬಾರದು.  
............................................ ಯಶಸ್ವಿನಿ ಪಿ. 
10ನೇ ತರಗತಿ 
ಸೈಂಟ್ ಜೋಸೆಫಿನ್ ಪಬ್ಲಿಕ್ ಸ್ಕೂಲ್ 
ಬೆಂಗಳೂರು
******************************************


                    

ಇತ್ತೀಚಿನ ದಿನಗಳಲ್ಲಿ ಬದುಕುವುದು ಕಷ್ಟಸಾಧ್ಯ. ಅದರಲ್ಲೂ ಕೆಲಸ ಎಂದರೆ ಅಸಾಧ್ಯ. ಈ ಮಧ್ಯೆಯಲ್ಲಿ‌ ಭೇದ ಭಾವಗಳು. ಹೀಗೆ ಒಂದು ಊರಿನಲ್ಲಿ ಎರಡು ಕುಟುಂಬಗಳು ವಾಸವಾಗಿದ್ದವು. ಒಂದು ಕುಟುಂಬವು ಬಡ ಕುಟುಂಬ ಹಾಗೂ ಇನ್ನೊಂದು ಕುಟುಂಬವು ಶ್ರೀಮಂತ ಕುಟುಂಬವಾಗಿತ್ತು. ಬಡ ಕುಟುಂಬದ ಮನೆಯ ಯಜಮಾನನ ಹೆಸರು ರಾಜು. ಪತ್ನಿಯ ಹೆಸರು ಸುಮಾ. ಈ ದಂಪತಿಗಳಿಗೆ ಒಂದು ಗಂಡು ಮಗ ಇನ್ನೊಂದು ಹೆಣ್ಣು ಮಗಳು ಇದ್ದರು. ಇವರದ್ದು ಬಡ ಕುಟುಂಬವಾಗಿದ್ದರಿಂದ ದುಡಿದು ಜೀವನ ಸಾಗಿಸಬೇಕಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಣ ಬೇಕು. ಆದರೂ ಹೇಗಾದರೂ ಮಾಡಿ ಶಾಲೆಗೆ ಕಳುಹಿಸುತ್ತಿದ್ದರು. ಮಕ್ಕಳು ಕಲಿಯುವುದರಲ್ಲೂ, ಕೆಲಸದಲ್ಲೂ ಮುಂದಿದ್ದರು. ಶಾಲೆಯಿಂದ ಬಂದು ಮಕ್ಕಳು ಕೆಲಸಕ್ಕೆ ಹೋಗಿ ತಂದೆ-ತಾಯಿಗಳಿಗೆ ಸಹಾಯ ಮಾಡಿ ಬೆಳಿಗ್ಗೆ ಎದ್ದು ಓದಿ ಶಾಲೆಗೆ ಹೋಗುತ್ತಿದ್ದರು. ಆದರೆ ಒಂದು ದಿವಸ ಇದ್ದಕ್ಕಿದ್ದಂತೆ ರಾಜುವಿನ ಮಗ ಕಲಿಯುವುದರಲ್ಲಿ ಹಿಂದೆ ಬಿದ್ದನು. ಇವನನ್ನು ಶಾಲೆಯಿಂದ ಹೊರಹಾಕಿದರು. ಇದರಿಂದ ನೊಂದುಕೊಂಡ ತಂದೆ-ತಾಯಿಯಗಳಿಗೆ ಶ್ರೀಮಂತ ಕುಟುಂಬದ ಯಜಮಾನ ನವೀನನು ಇವರನ್ನು ಹೀಯಾಳಿಸುತ್ತಿದ್ದನು. ಇವನ ಮಗನು ಕಲಿಯುವುದರಲ್ಲಿ ಮುಂದೆ ಹೋದನು. ಆಗ ಅಹಂಕಾರ ಬಂದ ಕಾರಣ ರಾಜುವಿನ ಕುಟುಂಬವನ್ನು ಕೀಳಾಗಿ ನೋಡುತ್ತಿದ್ದನು. ಆದರೆ ರಾಜು ಯಾವುದೇ ರೀತಿಯ ಭೇದ ಭಾವವನ್ನು ಮಾಡುತ್ತಿರಲಿಲ್ಲ. ಇವನ ಮನಸ್ಸು ಮೃದುವುಳ್ಳ ಒಳ್ಳೆಯ ಮನಸ್ಸಾಗಿತ್ತು. ರಾಜುವಿನ ಮಗನು ಒಂದು ದಿವಸ ಇದ್ದಕ್ಕಿದ್ದಂತೆ ಕಾಣೆಯಾದನು. ಎಲ್ಲಿ ಹುಡುಕಿದರೂ ಸಿಗಲಿಲ್ಲ. ರಾಜುವಿನ ಕುಟುಂಬದವರು ಮಗ ಇಲ್ಲದೆ ಹೇಗೆ ಜೀವನ ಸಾಗಿಸಲು ಸಾಧ್ಯ ಎಂದು ಬೇಜಾರಾಗಿದ್ದಾಗ ನವೀನನು ಇನ್ನಷ್ಟು ಬೈದು ಹೀಯಾಳಿಸಿದನು. ಆದರೆ ರಾಜುವಿನ ಕುಟುಂಬದವರು ಎಷ್ಟೇ ಮಾರ್ಯಾದೆಯನ್ನು ಕಳೆದುಕೊಂಡರೂ ಇದನ್ನು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಕೊನೆಗೆ ಒಂದು ದಿನ ಇದೇ ಪರಿಸ್ಥಿತಿ ನವೀನನ ಕುಟುಂಬದವರಿಗೂ ಬಂತು. ಆಗ ಇವರಿಗೆ ‌ಮಾಡಿದ ತಪ್ಪಿನ ಅರಿವಾಯಿತು. ನಾವು ಕೂಡ ಇದೇ ಪರಿಸ್ಥಿತಿಯಲ್ಲಿರುವಾಗ ಇನ್ನೊಬ್ಬರಿಗೆ ಯಾವುದೇ ರೀತಿಯ ಭೇದ-ಭಾವ ಇಲ್ಲದೆ, ಹೀಯಾಳಿಸದೆ, ಕೀಳಾಗಿ ನೋಡದೆ, ಬೈಯದೆ, ಬೇರೆಯವರ ಮನಸ್ಸಿಗೆ ನೋಯಿಸದೆ, ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಮನಸ್ಸಿನಿಂದ ಸಮಾನ ರೀತಿಯಲ್ಲಿ ನೋಡಬೇಕೆಂದು ತಿಳಿಯಿತು.            
...................................... ಡಿ ಎಲ್ ಮಧುರ 
10ನೇ ತರಗತಿ 
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢಶಾಲೆ ರಾಮಕುಂಜ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


        
ಒಂದು ಊರಿನಲ್ಲಿ ಒಂದು ಕಾಡಿತ್ತು. ಅಲ್ಲಿ ಪ್ರಾಣಿಗಳು ವಾಸವಾಗಿದ್ದವು. ಅಲ್ಲೆ ಒಂದು ದೂರದಲ್ಲಿ ಪುಟ್ಟ ಮನೆಯಿತ್ತು. ಅಲ್ಲಿ ಒಬ್ಬಳು ಹುಡುಗಿ ಇದ್ದಳು. ಅವಳ ಹೆಸರು ಕಲ್ಯಾಣಿ. ಅವಳು ಒಂಟಿಯಾಗಿದ್ದಳು. ಅವಳಿಗೆ ಪ್ರಾಣಿಗಳು ಎಂದರೆ ಅಚ್ಚು ಮೆಚ್ಚು. ಅವಳು ಯಾವಾಗಲೂ ಆ ಕಾಡಿಗೆ ಹೋಗಿ ಪ್ರಾಣಿಗಳ ಜೊತೆ ಆಟವಾಡಿ ಖುಷಿಯಿಂದ ಮನೆಗೆ ತೆರಳಿ ಬರುತ್ತಿದ್ದಳು. ಒಂದು ದಿನ ಒಂದು ಹಕ್ಕಿಯನ್ನು ನೋಡಿದಳು. ಆ ಹಕ್ಕಿಯ ಕಾಲಿಗೆ ನೋವಾಗಿತ್ತು. ಅದನ್ನು ನೋಡಿದ ಕಲ್ಯಾಣಿ ಅದಕ್ಕೆ ಮದ್ದು ಹುಡುಕಬೇಕೆಂದು ಯೋಚಿಸಿದಳು. ಆ ಹಕ್ಕಿಯ ಕಾಲಿಗೆ ಮದ್ದು ಹಾಕಿದಳು. ಅದು ಹುಷಾರಾಯಿತು. ಕಲ್ಯಾಣಿಗೆ ಧನ್ಯವಾದ ಹೇಳಿ ಅದು ಖುಷಿಯಿಂದ ಹಾರಿ ಹೋಯಿತು. 
      ಒಂದು ದಿನದ ನಂತರ. ಕಲ್ಯಾಣಿ ತರಕಾರಿ ತರಲು ಅಂಗಡಿಗೆ ಹೋದಳು. ಅವಳಿಗೆ ಜಿಲೇಬಿ ಎಂದರೆ ತುಂಬಾ ಇಷ್ಟ. ಕಲ್ಯಾಣಿ ದಾರಿಯಲ್ಲಿ ಜಿಲೇಬಿಯನ್ನು ನೋಡಿದಳು. ದಾರಿಯ ಕೆಳಗೆ ಕೆಸರು ಇತ್ತು. ಕಲ್ಯಾಣಿ ಜಿಲೇಬಿಯನ್ನು ನೋಡುತ್ತಾ ಬಂದಳು. ಆಗ ಕೆಸರಿನ ಮೇಲೆ ಕಾಲಿಟ್ಟು ಜಾರಿ ಬೀಳುತ್ತಾಳೆ. ಅವಳ ಕೈಗೆ ಗಾಯವಾಯಿತು. ಕಲ್ಯಾಣಿ ಸಹಾಯ ಮಾಡಿದ ಹಕ್ಕಿ ಬಂದು ಕಲ್ಯಾಣಿಯನ್ನು ನೋಡುತ್ತದೆ. ಆ ಹಕ್ಕಿ ಕಾಡಿನಲ್ಲಿರುವ ಪ್ರಾಣಿಗಳನ್ನು ಕರೆಯುತ್ತದೆ. ಅವುಗಳು ನೋಡಿ ಮದ್ದು ತಂದು ಅವಳಿಗೆ ಹಚ್ಚುತ್ತದೆ. ಕಲ್ಯಾಣಿ ಪ್ರಾಣಿಗಳಿಗೆ ಮತ್ತು ಪಕ್ಷಿಗೆ ಧನ್ಯವಾದ ಹೇಳುತ್ತಾಳೆ.
................................................. ಸಾತ್ವಿ ಡಿ
8ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


             

ಒಂದಾನೊಂದು ಊರಿನಲ್ಲಿ ಒಂದು ಕಾಡಿತ್ತು. ಅಲ್ಲಿ ಪ್ರಾಣಿ-ಪಕ್ಷಿಗಳು ವಾಸವಾಗಿದ್ದವು. ಒಂದು ದಿನ ಪಕ್ಷಿಗಳು ಗುಂಪು ಸೇರಿದ್ದವು. ಆವಾಗ ಎಲ್ಲಾ ಪಕ್ಷಿಗಳು ಕಾಗೆಯನ್ನು ನೋಡಿ ನಗುತ್ತಾ ..... ಕಾಗಕ್ಕ ಕಾಗಕ್ಕ ನೀನು ಕಪ್ಪಾಗಿರುವೆ ಮತ್ತು ನಿನಗೆ ಹಾಡು, ನೃತ್ಯ ಯಾವುದು ಬರಲ್ಲ ಎಂದು ತಮಾಷೆ ಮಾಡುತ್ತಿದ್ದವು. ಆದರೆ ಕೋಗಿಲೆ ಮಾತ್ರ ಸುಮ್ಮನಿತ್ತು. ಯಾಕೆಂದರೆ ಅದು ಕಾಗೆಯ ಗೆಳತಿಯಾಗಿತ್ತು. ಕಾಗೆ ಬೇಸರದಿಂದ ಹೋಯಿತು. ಕೋಗಿಲೆ ಬಂದು ಸಮಾಧಾನ ಮಾಡಿ, ನಾನು ಕೂಡ ಕಪ್ಪಾಗಿರುವೆ ನನ್ನ ಧ್ವನಿಯಿಂದ ಎಲ್ಲರೂ ಮೈಮರೆಯುತ್ತಾರೆ ಹಾಗಾಗಿ ನನ್ನನ್ನು ತಮಾಷೆ ಮಾಡುವುದಿಲ್ಲ. ನೀನು ಪಿಟೀಲು ನುಡಿಸುವುದನ್ನು ಕಲಿ. ನಾವು ನಾಳೆ ಒಂದು ಸಭೆಯನ್ನು ಏರ್ಪಾಡು ಮಾಡೋಣ. ನಾನು ಹಾಡು ಹೇಳುತ್ತೇನೆ ನೀನು ಪಿಟೀಲು ನುಡಿಸು ಎಂದು ಕೋಗಿಲೆ ಹೇಳುತ್ತದೆ. ಕಾಗೆ ಆಯ್ತು ಕೋಗಿಲೆ ಎನ್ನುತ್ತದೆ. ಕೋಗಿಲೆ ಎಲ್ಲಾ ಪಕ್ಷಿಗಳನ್ನು ನಾಳೆಯ ಸಭೆಗೆ ಕರೆಯುತ್ತದೆ. ಒಂದು ದಿನದ ನಂತರ. ಕಾಗೆ ಪಿಟೀಲು ನುಡಿಸುವುದನ್ನು ಕಲಿತು ಸಭೆಗೆ ಬಂದಿತ್ತು. ಸಭೆಗೆ ಎಲ್ಲಾ ಪಕ್ಷಿಗಳು ಬಂದವು. ಕೋಗಿಲೆ ಹಾಡು ಹೇಳುವುದನ್ನು ಶುರುಮಾಡಿತು. ಕಾಗೆ ಪಿಟೀಲು ನುಡಿಸುವುದನ್ನು ಶುರುಮಾಡಿತು. ಎಲ್ಲಾ ಪಕ್ಷಿಗಳಿಗೆ ಕಾಗೆ ಪಿಟೀಲು ನುಡಿಸುವುದನ್ನು ಕೇಳಿ ಆಶ್ಚರ್ಯವಾಯಿತು. ಎಲ್ಲಾ ಪಕ್ಷಿಗಳು ಚಪ್ಪಾಳೆ ತಟ್ಟಿದವು. ಕಾಗೆಗೆ ತುಂಬಾ ಖುಷಿಯಾಯಿತು. ಪಕ್ಷಿಗಳು ಊಟ ಮುಗಿಸಿಕೊಂಡು ಹೋದವು. ಕಾಗೆ ಕೋಗಿಲೆಗೆ ಧನ್ಯವಾದ ಹೇಳಿತು.
................................................. ಸಾತ್ವಿ ಡಿ
8ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article