-->
ಹೃದಯದ ಮಾತು : ಸಂಚಿಕೆ - 42

ಹೃದಯದ ಮಾತು : ಸಂಚಿಕೆ - 42

 ಹೃದಯದ ಮಾತು : ಸಂಚಿಕೆ - 42
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

       

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು ಗೌಣವಾಗಿ ಬಿಟ್ಟದ್ದಂತೂ ಸತ್ಯ. ಈ ಮಧ್ಯೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿಯಾಗಿದೆ. ಮತ್ತಷ್ಟು ಮಂದಿ ಮನೆ ಬಿಟ್ಟು ಓಡಿದ್ದೂ ಇದೆ.

ಇಲ್ಲಿ ಮುಧೋಳದ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ 625 ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾಳೆ. ಅವಳ ಸಾಧನೆಗೆ ಅಭಿನಂದನೆಗಳು. 7 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದಿದ್ದರೆ, 14  ಮಂದಿ 623, 21 ಮಂದಿ  622, 44 ಮಂದಿ 621 ಹಾಗೂ 64 ಮಂದಿ 620 ಅಂಕಗಳನ್ನು ಪಡೆದು ಉತ್ತಮ ಸಾಧಕರಾಗಿ ಮೂಡಿಬಂದಿದ್ದಾರೆ. ಇವರ ಸಾಧನೆ ಅಂಕಿತಾಳಿಗಿಂತ ಕಡಿಮೆಯೇನಲ್ಲ...! ಆದರೆ ಯೋಗ ಅವರಿಗಿರಲಿಲ್ಲ...!!

ಎಸ್ ಎಸ್ ಎಲ್ ಸಿ ಅಂಕಗಳು ಬದುಕನ್ನು ನಿರ್ಣಯಿಸದು. ಆದರೆ ಬದುಕಿಗೊಂದು ದಿಕ್ಕು ತೋರಿಸಬಹುದು. ಉತ್ತಮ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಲಷ್ಟೆ ಸದ್ಯಕ್ಕೆ ಅಂಕಗಳು ಸೀಮಿತಗೊಂಡಿರುವುದು ವಾಸ್ತವ. ಇದು ವಿದ್ಯಾರ್ಥಿ ಜೀವನದ ಮೊದಲ ಪ್ರಮುಖ ಪರೀಕ್ಷೆಯೆಂಬುವುದು ನಿಸ್ಸಂಶಯ. ಉತ್ತಮ ಅಂಕ ಪಡೆದವರು ಮಾತ್ರವೇ ಬದುಕನ್ನು ಗೆಲ್ಲಬಲ್ಲರು ಎಂಬುವುದು ರುಜುವಾತು ಪಡಿಸಲಾಗದು. ಕಡಿಮೆ ಅಂಕ ಪಡೆದವರು ಬದುಕನ್ನು ಗೆದ್ದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ.

ಇನ್ನು ಉತ್ತಮ ಅಂಕಗಳನ್ನು ಪಡೆದ ವಿಧಾನ (process) ಕೂಡಾ ಮುಖ್ಯವಾಗುತ್ತದೆ. ಹತ್ತಾರು ವರ್ಷಗಳ ಪ್ರಶ್ನೆಪತ್ರಿಕೆ ಉರು ಹೊಡೆದು ಪರೀಕ್ಷೆಯನ್ನೇ ಗುರಿಯಾಗಿಟ್ಟುಕೊಂಡು ಪಡೆದ ಅಂಕಗಳು ವಿದ್ಯಾರ್ಥಿಯ ನೈಜ ಪ್ರತಿಭೆಯ ಸೂಚಕವಾಗದು. ಆಟೋಟದಲ್ಲಿ ಬಿಂದಾಸ್ ಆಗಿ ತೊಡಗಿಸಿಕೊಂಡು, ಮದುವೆ, ಮುಂಜಿ, ಮದರಂಗಿ, ಉಪನಯನ, ಊರ ಜಾತ್ರೆ ಎಲ್ಲದರಲ್ಲೂ ಬೆರೆತು, ಪರೀಕ್ಷೆಯ ಚಿಂತೆಯಿಲ್ಲದೆ ವರ್ಷದ ಕೊನೆಯಲ್ಲಿ ಕಲಿತದನ್ನು ಮೆಲುಕು ಹಾಕಿ, ಒಂದಷ್ಟು ಓದಿ ಪರೀಕ್ಷೆ ಬರೆದು ಉತ್ತಮ ಸಾಧನೆ ತೋರಿದ ಮಕ್ಕಳೇ ನಿಜ ಸಾಧಕರಾಗಬಲ್ಲರು. ಅವರು ಬದುಕನ್ನು ಸ್ವಾದಿಸಬಲ್ಲರು. ಅವರೇ ಬದುಕನ್ನು ಗೆಲ್ಲಬಲ್ಲರು.

ಇನ್ನು ಉತ್ತಮ ಅಂಕಗಳು ಮಕ್ಕಳ ಮುಂದಿನ ಆಯ್ಕೆಯನ್ನು ಕೆಲವೊಮ್ಮೆ ಕಠಿಣಗೊಳಿಸಬಲ್ಲದು. ಪೋಷಕರ ಹಾಗೂ ಹಿತೈಷಿಗಳ ಒತ್ತಾಯಕ್ಕೆ ತಮಗಿಷ್ಟವಿಲ್ಲದ ಕೋರ್ಸ್ ಆಯ್ಕೆ ಮಾಡಿ ಹತಾಶರಾದ ವಿದ್ಯಾರ್ಥಿಗಳು ಅಸಂಖ್ಯ. ಪದವಿಪೂರ್ವ ತರಗತಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲವಾಗುತ್ತಿದೆ. ಮುಂದಿನ ಗುರಿಯ ಬಗ್ಗೆ ಪ್ರಶ್ನಿಸಿದರೆ ಬರುವ ಉತ್ತರಗಳು ಅಚ್ಚರಿ ಮೂಡಿಸುತ್ತವೆ. ವಿಜ್ಞಾನ ವಿದ್ಯಾರ್ಥಿಗಳ ಗುರಿ ವೈದ್ಯಕೀಯ ಅಥವಾ ಎಂಜಿನಿಯರ್ ಇವೆರಡಕ್ಕೆ ಮಾತ್ರವೇ ಸೀಮಿತ. ಕಾಮರ್ಸ್ ವಿದ್ಯಾರ್ಥಿಗಳ ಗುರಿ ಕೇವಲ ಸಿಎ ಗೆ ಸೀಮಿತಗೊಂಡರೆ, ಕಲಾ ವಿಭಾಗದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿಯ ಗುರಿ ವಕೀಲ ವೃತ್ತಿಗೆ ಸೀಮಿತಗೊಳ್ಳುತ್ತದೆ.

ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದರೊಂದಿಗೆ ಅವರ ಗುರಿಯನ್ನು ನಿರ್ಧಿಷ್ಟ ಪಡಿಸುವುದು ಕೂಡಾ ನಮ್ಮ ಹೊಣೆಗಾರಿಕೆಯಾಗಿದೆ. ಇದು ಪೋಷಕರು ಹಾಗೂ ಶಿಕ್ಷಕರ ಸಹಭಾಗಿತ್ವದಿಂದ ಸಾಧ್ಯ. ನಿಗದಿಪಡಿಸಿದ ಗುರಿಯು ಆತನ ಸಾಮರ್ಥ್ಯಕ್ಕೆ ಅನುಗುಣವಾಗಿರಬೇಕು. ಆತನ ಸಂಪೂರ್ಣ ಫೋಕಸ್ ಗುರಿಯೆಡೆಗೆ ಇರುವಂತೆ ನೋಡಿಕೊಳ್ಳುವುದು ಪೋಷಕರ ಹೊಣೆಗಾರಿಕೆ. ಅದು ಅಷ್ಟೊಂದು ಸುಲಭವಲ್ಲ. ತನ್ನ ಸುತ್ತಮುತ್ತ ನಡೆಯುತ್ತಿರುವ ವಿದ್ಯಾಮಾನಗಳಿಗೆ ಪೋಷಕರು ಪ್ರಚೋದನೆಗೊಳ್ಳುತ್ತಿರುವುದು ಹಾಗೂ ಅದು ಮಕ್ಕಳನ್ನು ಪ್ರಚೋದನೆ ಒಳಪಡಿಸು ತ್ತಿರುವುದರಿಂದ ಮಕ್ಕಳು ಗುರಿ ತಪ್ಪಿದ ಬದುಕಿನೆಡೆಗೆ ಸಾಗುತ್ತಿರುವುದು ಸಹಜ.

ವಿದ್ಯಾರ್ಥಿ ಜೀವನ ಓದಿನಿಂದ ಜ್ಞಾನವನ್ನು ಅರ್ಜಿಸುವ ಬಹುಮುಖ್ಯ ಕಾಲ. ನಂತರ ಪಡೆಯುವ ಜ್ಞಾನ ಅನುಭವದಿಂದಾಗಿರುತ್ತದೆ. ಸ್ವಲ್ಪ ಮಟ್ಟಿಗೆ ತನ್ನನ್ನು ತಾನು ನಿಯಂತ್ರಿಸಬಲ್ಲವ ಬದುಕಿನ ಬಯಕೆಗಳ ಸರದಾರನಾಗಬಲ್ಲ. ಆ ನಿಟ್ಟಿನಲ್ಲಿ ನಮ್ಮ ಮಕ್ಕಳ ಮುಂದಿನ ನಡೆ ಇರಲಿ. ಆಗ ಮಾತ್ರವೇ ಗಳಿಸಿದ ಅಂಕಗಳು ಮೌಲ್ಯಯುತವಾಗಬಲ್ಲದು.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article