-->
ಸವಿಜೇನು : ಸಂಚಿಕೆ - 07

ಸವಿಜೇನು : ಸಂಚಿಕೆ - 07

ಸವಿಜೇನು : ಸಂಚಿಕೆ - 07
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು

     
ನಮ್ಮ ಹಳ್ಳಿಗಾಡಿನ ಅಡವಿಯಲ್ಲಿ ಇಚ್ಛಾನುಸಾರ ತಿರುಗಿ ನನ್ನದೇ ತಿರುಗಾಟದ ಜಾಲವನ್ನು ಮಾಡಿಕೊಂಡಿದ್ದ ನಾನು ನನ್ನ ಎಂಟನೇ ತರಗತಿಗೆ ನನ್ನ ವ್ಯಾಪ್ತಿಯನ್ನು ಬಿಟ್ಟು ಹಾಸ್ಟೆಲ್ ಸೇರಬೇಕಾಯಿತು. ಸಹಜವಾಗಿ ಅಪರಿಚಿತ ನಗರ ಜೀವನ ಪದ್ದತಿ ನಮ್ಮ ಹಳ್ಳಿಗರಿಗೆ ಅಷ್ಟಾಗಿ ಅಚ್ಚುಮೆಚ್ಚೆನಿಸುವುದಿಲ್ಲ ವಾದರೂ ಶಾಲೆಯಿಂದ ಹಾಸ್ಟೆಲ್, ಹಾಸ್ಟೆಲ್ ನಿಂದ ಶಾಲೆ ಹೀಗೆ ಈ ಎರಡರ ಮದ್ಯೆಯೇ ತಿರುಗಾಡಿ ನಮ್ಮೂರೆ ನಮಗೆ ಚಂದ ಎನಿಸಿದ್ದು ಸುಳ್ಳಲ್ಲ. ನಮ್ಮ ಹಾಸ್ಟೆಲ್ ಇದ್ದುದು ಚಳ್ಳಕೆರೆ ನಗರದ APMC ಮಾರುಕಟ್ಟೆಯ ಬಳಿ. ಆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣಕ್ಕಾಗಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಂತೆಯೇ ಇಡೀ ನಗರವಾಸಿಗಳೆಲ್ಲರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಯಾರೂ ಯಾರನ್ನೂ ಮಾತಾಡಿಸುತ್ತಿರಲಿಲ್ಲ. ನಗರದ ನಾಗರಿಕರು ಆರ್ ಸಿ ಸಿ ಯಿಂದ ದೊಡ್ಡ ದೊಡ್ಡ ಮನೆಗಳ ಕಟ್ಟಿಸಿ ದುಡ್ಡು ಹಣಕಾಸಿನಲ್ಲಿ ಮಾತ್ರ ಶ್ರೀಮಂತರೇ ವಿನಃ ನಮ್ಮ ಹಳ್ಳಿಗುಡಿಸಲ ಹೃದಯ ಶ್ರೀಮಂತರಂತೆ ಎಂದೂ ಅಲ್ಲ. ಇದು ನಗರ ವಿಸ್ತರಿಸಿದಂತೆಲ್ಲಾ ಹೃದಯ ವೈಶಾಲ್ಯತೆ ಕುಗ್ಗಿ ಸಂಕುಚಿತಗೊಂಡು ಈಗ ಸ್ವಾರ್ಥಪರ ಜೀವನ ಈ ನಗರದ ನಾಗರೀಕರದು...

ಹಳ್ಳಿ ವಿದ್ಯಾರ್ಥಿಗಳು ನಗರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಲೋಸುಗ ಇರುವ ಸರ್ಕಾರದ ಯೋಜನೆಗಳಲ್ಲೊಂದು ಈ ಹಾಸ್ಟೆಲ್. ಎಲ್ಲರೂ ಹಳ್ಳಿಯವರೇ, ಬಹುತೇಕ ಎಲ್ಲರ ಆರ್ಥಿಕ ಸ್ಥಿತಿಗತಿಗಳೂ ಒಂದೇ ಇದ್ದರೂ ಅದರಲ್ಲೂ ಮೇಲು- ಕೀಳು, ಜ್ಯೂನಿಯರ್-ಸೀನಿಯರ್ ಹೀಗೆ ಸ್ತರ ವ್ಯವಸ್ಥೆ ಇದ್ದೇ ಇತ್ತು. ಜ್ಯೂನಿಯರ್ ಆದ ನಾನು ಹಾಸ್ಟೆಲ್ ಪದ್ಧತಿಗೆ ಒಗ್ಗಿಕೊಳ್ಳಲು ಒಂದೆರಡು ತಿಂಗಳುಗಳು ಬೇಕಾಯಿತು. ಅಷ್ಟೊತ್ತಿಗಾಗಲೇ ಸಮಾನಮನಸ್ಕ ಗೆಳೆಯರ ಸರ್ಕಲ್ ಒಂದು ರಚನೆಯಾಗಿ ನಮ್ಮ ಆಟ, ಓಡಾಟ, ಕೂಗಾಟ, ಕಿರುಚಾಟ, ಈಜಾಟ ಒಡನಾಟ, ಕಳ್ಳಾಟ ಎಲ್ಲವೂ ಮುಂದುವರೆದಿತ್ತು.

ಹಾಸ್ಟೆಲ್ ನಲ್ಲಿ ಸಾಮಾನ್ಯವಾಗಿ ಶನಿವಾರ ಭಾನುವಾರ ಅಥವಾ ವಾರದ ಮದ್ಯೆ ಯಾವುದಾದರೂ ರಜಾದಿನ ಬಂದರೆ ವಿದ್ಯಾರ್ಥಿಗಳು ಯಾರೂ ಉಳಿಯುತ್ತಿರಲಿಲ್ಲ. ಉಳಿದರೂ ಎಂಟತ್ತು ಜನ ಅಷ್ಟೇ. ಹಾಸ್ಟೆಲ್ ಜೀವನ ಅಡ್ಜೆಸ್ಟ್ ಆದಂತೆಲ್ಲಾ ನಾನು ಈ ಶನಿವಾರ ಭಾನುವಾರ ಇತರ ರಜಾದಿನಗಳಲ್ಲಿ ಅಲ್ಲೇ ಉಳಿಯಲು ಶುರುಮಾಡಿದೆ. ನಾಲ್ಕೈದು ಜನ ಪಟ್ಟಾಲಂ ಸೇರಿ ಎಪಿಎಂಸಿ ಎಲ್ಲಾ ತಿರುಗುತ್ತಾ, ಎಪಿಎಂಸಿಯ ಹೊರಗಡೆ ರೈಲ್ವೆ ಟ್ರಾಕ್ ಗೆ ಹೋಗಿ ರೈಲುಹಳಿಗಳ ಮೇಲೆ ಯಾರು ಕಾಲನ್ನು ಕೆಳಗಿಡದೆ ಬಹು ದೂರ ನಡೆಯುತ್ತಾರೋ ಅವನು ಆ skill ಅಲ್ಲಿ Expert ಎಂದು ಇರುವ ನಾಲ್ಕೈದು ಜನರಲ್ಲಿ ಈ ಸ್ಪರ್ಧೆ ದಿನದಿಂದ ದಿನಕ್ಕೆ ತೀವ್ರ ಹಗ್ಗಜಗ್ಗಾಟದಂತಹ ತಿರುವನ್ನು ಪಡೆದು ಕಿಲೋಮೀಟರ್ ಗಟ್ಟಲೇ ಹಳಿಗಳ ಮೇಲೆ ನಡೆದೂ ಯಾರಿಗೂ ಯಾರೂ ಸೋಲನ್ನು ಒಪ್ಪಿಕೊಳ್ಳದೇ ಸ್ಪರ್ಧೆಯನೊಡ್ಡುವಷ್ಟು ನಾನು ದೇವರಾಜ expert ಆದೆವು. ಇನ್ನುಳಿದವರು ವರುಣ, ಧನಂಜಯ, ಅಂಜನಿ ಆಗಾಗ ನಮ್ಮ ಜೊತೆಗೆ ಸ್ಪರ್ಧೆಗೆ ಇಳಿಯುತ್ತಿದ್ದರಾದರೂ ನಮಗಿಂತ ಸ್ವಲ್ಪವೇ ದಪ್ಪ ಇದ್ದ ಗೋವಿಂದ ಮಾತ್ರ "ನಾನು ಆಟಕ್ಕೆ ಬರುವುದಿಲ್ಲ.... ನಾನು ಇಲ್ಲೇ ರೈಲು ಹಳಿಗಳ ಮೇಲೇಯೇ ಕುಳಿತಿರುತ್ತೇನೆ ನೀವು ಹೋಗಿ ಬನ್ನಿ" ಎಂದೂ ಅಲ್ಲಿಯೇ ಕುಳಿತಿರುತ್ತಿದ್ದ.

ಎಷ್ಟು ದಿನ ಅಂತಾ ಒಂದೇ ಆಟ ಆಡುವುದು??ಹಾಸ್ಟೆಲ್ ನಲ್ಲಿ ಕವಳ ಸರಿಯಾಗಿ ಬಾರಿಸಿದ್ದರೆ ರೈಲು ಹಳಿಗಳ ಮೇಲೆ ನಮ್ಮ ಆಟ ಬಹುದೂರ ಸಾಗುತ್ತಿತ್ತು. ಯಾರಿಗಾದರೂ ಒಬ್ಬರಿಗೆ ಆಸಕ್ತಿ ಕಡಿಮೆ ಆಯಿತೆಂದರೇ ಆಟ ಅಲ್ಲಿಗೆ ಬಂದ್. ಹೋಗಿ ಬರುವ ನಿರ್ಜನ ಹಾದಿಯಲ್ಲಿ ನನ್ನ ಕಲ್ಲು ನಿನಗಿಂತ ಮುಂದೆ ಹೋಗುವುದು ಇಲ್ಲ ಇಲ್ಲ ನನ್ನ ಕಲ್ಲು ನಿನಗಿಂತ ಮುಂದೆ ಹೋಗುವುದೆಂದು ಕಲ್ಲು ಹೊಡೆಯುತ್ತಾ ಬೆಳಗಿನ ಹೊತ್ತು ಸಾಯಂಕಾಲದ ಹೊತ್ತು ಊಟದ ಸಮಯಕ್ಕೆ ಸರಿಯಾಗಿ ಹಾಸ್ಟೆಲ್ ಗೆ ಹಿಂತಿರುಗುತ್ತಿದ್ದೆವು.

ರೈಲುಗಳ ಇಂಜಿನಿಯರಿಂಗ್, ಅಲ್ಲಿರುವ ಸಿಗ್ನಲ್ ತೋರಿಸುವ ವಿಧಾನ ಮತ್ತು ಸಂಕೇತಗಳು ನಮಗೆ ಆರಂಭದಲ್ಲಿ ಏನೇನು ಅರ್ಥ ಆಗುತ್ತಿರಲಿಲ್ಲ. ನಮ್ಮ ಜೊತೆ ಆಟಕ್ಕೆ ಬಾರದೇ ಸುಮ್ಮನೇ ಕುಳಿತುಕೊಂಡಿರುತ್ತಿದ್ದ ಗೋವಿಂದ ಒಂದು ದಿನ ಸಿಗ್ನಲ್ ಕೊಡುವ ಕೈ ಕಂಬ ಒಂದು ಪ್ಯಾನಿನ ರೆಕ್ಕೆಯಂತಹ ತನ್ನ ಕೈಯನ್ನು ಎತ್ತಿದೆ. ಇಷ್ಟು ಹೊತ್ತು ಆ ಕೈ ಅಡ್ಡ ಬಿದ್ದಿತ್ತೆಂದು ಈಗ ಅದು ತನ್ನ ಕೈಯನ್ನು ಎತ್ತಿಕೊಂಡಿದೆ ಎಂದು ಇನ್ನೂ ಸ್ವಲ್ಪ ಸಮಯದಲ್ಲಿ ರೈಲು ಬರುತ್ತದೆಂದು ಹೇಳಿದ. ನಮಗೂ ಅವನಿಗೂ ರೈಲು ಕಾಣುವವರೆಗೂ ಆ ಕೈ ಎತ್ತಲು ಸ್ಟೇಶನ್ ಮಾಸ್ಟರ್ ಸ್ವಿಚ್ ಹಾಕುವರೆಂದು, ಇಲ್ಲ ಇಲ್ಲ ರೈಲು ಓಡಿಸುವ ಡ್ರೈವರ್ (loco pilot) ರೈಲು ಬರುತ್ತಿದೆ ಎಂದು ತಿಳಿಸಲು ಅವರ ಬಳಿ ಏನೋ ಇರುತ್ತದೆ ಅವರು ಇದನ್ನು ಕೈ ಎತ್ತುವಂತೆ ಮಾಡುತ್ತಾರೆ ಎಂದು ಈ ವಿಷಯಕ್ಕೆ ಸುಧೀರ್ಘ ಚರ್ಚೆಯಾಗಿ ರೈಲನ್ನು ನೋಡಿದ ಮೇಲೆ ಯಾರು ಸ್ವಿಚ್ ಹಾಕಿದರೇನು?? ಒಟ್ಟಾರೆ ಆ ಕೈ ಕಂಬ ಕೈ ಎತ್ತಿಕೊಂಡರೆ ರೈಲು ಬರುವ ಮುನ್ಸೂಚನೆ ಎಂದು ಗೋವಿಂದನ ಮಾತನ್ನು ಒಪ್ಪಿಕೊಳ್ಳಬೇಕಾಯಿತು. ಪ್ರತಿದಿನವೂ ಬೆಳ್ಳಿಗ್ಗೆ ನಮ್ಮ ತಂಡ ಬೆಳಗಿನ ಎಲ್ಲಾ ಕೆಲಸಗಳನ್ನು ಅಲ್ಲಿಯೇ ಮುಗಿಸಲು ಹೋಗುತ್ತಿದ್ದೆವು. ಈ ಆಟ ಆ ಕೈ ಕಂಬದ ನೋಟ ನಿರಂತರವಾಗಿ ಸಾಗಿತ್ತು. ಒಂದು ದಿನ ಚಳಿಗಾಲ ಮುಗಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ಒಂದು ಪೊದೆಯಲ್ಲಿ ಜೇನನ್ನು ಪತ್ತೆ ಹಚ್ಚಿದೆ. ಇವು ನಮ್ಮೂರಿನ ಜೇನುಹುಳುಗಳಲ್ಲ. ಬೇರೆ ಊರಿನ ಜೇನುಹುಳುಗಳು ಕಚ್ಚಬಹುದೇನೋ ಎಂಬ ಆತಂಕದಲ್ಲಿ ನಾನು ದೇವರಾಜ ಯಶಸ್ವಿಯಾಗಿ ಜೇನನ್ನು ಕಿತ್ತು ತಂದೆವು. ವರುಣ ಧನಂಜಯ ಅಂಜಿನಿಗೆ ಯಾರಿಗೂ ಸಿಗದಂತಹ ಅಮೂಲ್ಯವಾದದ್ದು ನಮಗೆ ಸಿಕ್ಕಿದೆ ಅದೊಂದು ಬೆಲೆಕಟ್ಟಲಾಗದ ಪರಮ ವಸ್ತುಗಳಲ್ಲಿ ಒಂದು ಎಂದು ಭಾವಿಸಿ ಒಂದು ಹನಿಯಷ್ಟು ವ್ಯರ್ಥಮಾಡದೇ ಎಲ್ಲರೂ ತಿಂದಿದ್ದೆವು. ಇದರ ನಡುವೆ ನನ್ನ ಜೇನು ಹುಡುಕುವ ಜೇನು ಕೀಳುವ ಅಭ್ಯಾಸ ಅವರಿಗೂ ಗೊತ್ತಾಗಿತ್ತು. ನಮ್ಮ ತಂಡದಲ್ಲೇ ಇದ್ದ ದೇವರಾಜನಿಗೂ, ಗೋವಿಂದನಿಗೂ ಜೇನು ನೋಡುವ, ಕೀಳುವ ಅಭ್ಯಾಸ ಇದ್ದುದರಿಂದ ನಮ್ಮೂವರ ಜೊತೆಯನ್ನು ಇತರರು ಬಿಡಲೊಪ್ಪದೇ ಆಗಾಗ 'ಜೇನು ಹುಡುಕಿಕೊಡು' ಎಂದು ಕೇಳುತ್ತಾ ನಮ್ಮ ಸಂಗಡ ಬಿಡದೇ ಸದಾ ಜೊತೆಯಲ್ಲೇ ನಾವೆಲ್ಲರೂ ಇರುತ್ತಿದ್ದೆವು. ಗೋವಿಂದ ಮಾತ್ರ ಅಡುಗೆ ಭಟ್ಟ ರುದ್ರನ ಜೊತೆಗೆ ಆಗಾಗ ಅಡುಗೆ ಸಹಾಯಕನಾಗಿ ಇರುತ್ತಿದ್ದ.

ಒಂದು ದಿನ ಫೆಬ್ರವರಿ ತಿಂಗಳ ಕೊನೆಯ ದಿನಗಳು. ನಮಗೆ ರಜಾದಿನಗಳಲ್ಲಿ ಮಾಡಲು ಯಾವ ಕೆಲಸವೂ ಇಲ್ಲದೇ ಅಲ್ಲಿ ಇಲ್ಲಿ ತಿರುಗುವುದೇ ನಮ್ಮ ಕಾಯಕವಾಗಿತ್ತು. ಎಲ್ಲರೂ ದಿನಲೂ ಹೋಗುತ್ತಿದ್ದ ಜಾಗವನ್ನು ಬಿಟ್ಟು ಬೇರೆಕಡೆಗೆ ಹೋಗಲು ನಿರ್ಧರಿಸಿ ಮಾರ್ಕೆಟ್ ಒಳಗೆ ನುಗ್ಗಿದೆವು. ಮಾರ್ಕೆಟ್ ಎಂಟ್ರಿ ಆದಾಗ ಕಡಲೇಕಾಯಿ ತಿನ್ನಲು ಶುರುಮಾಡಿದ ನಾವು ಇರುವ ಎಲ್ಲಾ ಜೇಬುಗಳ ತುಂಬಾ ತುಂಬಿಸಿಕೊಂಡು ಮಾರ್ಕೆಟ್ ನ ದಕ್ಷಿಣದ exit ನಿಂದ ರೈಲ್ವೆ ಟ್ರ್ಯಾಕ್ ಕಡೆಗೆ ಹೋದೆವು. ಅಲ್ಲೊಂದು ಹುತ್ತದ ಸಮೀಪದಲ್ಲಿ ಒಂದು ಸರ್ಕಾರಿ ಜಾಲಿ ಗಿಡಗಳಿಗೆ ಹಬ್ಬಿದ ಶೇಗುಣಸೆ ಪೊದೆಯಲ್ಲಿ ಜೇನಿರುವುದನ್ನು ಸುಮಾರು ಐವತ್ತು ಮೀಟರ್ ದೂರದಿಂದಲೇ ಹುಡುಗರಿಗೆ ಹೇಳಿದೆ. ಹತ್ತಿರ ಹೋಗಿ ತುಪ್ಪ ಇದೆಯೇ ಎಂದು ಪರೀಕ್ಷಿಸಿ ನೋಡಿದರೆ ತುಪ್ಪ ತುಂಬಿತುಳುಕುವಂತೆ ಇತ್ತು. ನಾವು ಅಲ್ಲಿಗೆ ಹೋಗಿದ್ದು ಗ್ರಹಿಸಿದ ಹುಳುಗಳು ತುಪ್ಪವನ್ನು ಕಾಪಾಡಿಕೊಳ್ಳಲು ಅಲರ್ಟ್ ಆದವು. ಹೊಟ್ಟೆ ಏನು ಹಸಿವಿರಲಿಲ್ಲ. ತುಂಬಿಕೊಂಡು ಬಂದಿದ್ದ ಶೇಂಗಾ ಎಲ್ಲರ ಜೇಬಲ್ಲಿ ಗೆಜ್ಜೆಯಂತೆ ಶಬ್ದಮಾಡುತ್ತಾ ಇದ್ದವು. ಆದರೂ ಜೇನನ್ನು ಬಿಡಲಾದೀತೇ??? ಸಾಧ್ಯವೇ ಇರಲಿಲ್ಲ. ಎಲ್ಲರೂ ಜೇನಿನ ಮಂಭಾಗದಲ್ಲೇ ನಿಂತಿದ್ದೆವು. ದೇವರಾಜ ಜೇನು ತೆಗೆಯಲು ಮುಂದಾದ. ಇನ್ನೂ ಪೂರ್ಣ ಆರಂಭಿಸಿರಲಿಲ್ಲ. ತುಸು ಹೊರಗಿನ ಕಡ್ಡಿಗಳನ್ನು ಅಲ್ಲಾಡಿಸಿದಕ್ಕೆ ರೊಚ್ಚಿಗೆದ್ದ ಹುಳುಗಳು ಏಕಾಏಕಿ ಧಾಳಿ ಮಾಡಿದವು. ಯಾರೂ ಅವುಗಳ ಧಾಳಿಗೆ ಸಿದ್ಧರಿಲ್ಲದರಿಂದ ದೇವರಾಜನಿಗೆ ಮೂರ್ನಾಲ್ಕು ಹುಳು ಹೊಡೆದವು. ಸುತ್ತಾಮುತ್ತಾ ನಿಂತಿದ್ದ ಎಲ್ಲರಿಗೂ ಒಂದೋ ಎರಡೋ ಅಟ್ಟಿಸಿಕೊಂಡು ಬಂದು ಕಚ್ಚಿದ್ದವು. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿಹೋದೆವು. ನಾವೆಲ್ಲಾ ಓಡಿ ಹೊಗಿದ್ದಕ್ಕೆ ದೇವರಾಜನೂ ಓಡಿ ಬಂದ. ನನಗೂ ಒಂದು ಹುಳ ಕಿವಿಗೆ ಕಚ್ಚಿತ್ತು. ಒಂದೆರಡು ನಿಮಿಷಗಳಲ್ಲಿ ಪುನಃ ಒಟ್ಟಿಗೆ ಸೇರಿದ ನಾವು ನಮ್ಮ ಜೊತೆಯಲ್ಲಿದ್ದ ಅಂಜನಮೂರ್ತಿ ಎಂಬುವವನು official ಮಗನಾದುದ್ದರಿಂದ ಅವನು ನಮ್ ತರ ಒರಟಾಗಿ ಬದುಕು ಕಾಣದೇ ಇದ್ದುದರಿಂದ ಅವನಿಗೆ ಜೇನು ಹುಳ ಕಚ್ಚಿದ್ದಕ್ಕೆ ಏನೋ ವಿಷದ ಹಾವೇ ಕಚ್ಚಿದೆಯೆನೋ ಎಂಬಂತೆ ಬಾಯಿ ಬಾಯಿ ಬಡಿದುಕೊಂಡು ಎಡ ಮುಂಗೈಯನ್ನು ಒಂದೇ ಸಮನೆ ಅಲ್ಲಾಡಿಸುತ್ತಿದ್ದ. ಕಚ್ಚಿದ ಜಾಗದಲ್ಲಿ ಜೇನು ಹುಳದ sting (ಕೊಂಡಿಯಂತ ಮುಳ್ಳು) ಅಲ್ಲೇ ಇದ್ದುದರಿಂದ ಉರಿ ಜಾಸ್ತಿಯಾಗಿ ಭಗ ಭಗನೇ ಊದಿಕೊಳ್ಳತೊಡಗಿತ್ತು. ಎಂದೂ ಜೇನು ಹುಳುಗಳ ಕಚ್ಚಿಸಿಕೊಳ್ಳದವರಿಗೆ ವಿಪರೀತ ಉರಿ ಎನಿಸುವುದು ಸಾಮಾನ್ಯ. ಒಂದೆರಡು ಬಾರಿ ಕಚ್ಚಿಸಿಕೊಂಡರೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿ ಉರಿ ಸಾಧಾರಣ ಎನಿಸಬಹುದು. ಆದರೆ ಆ ಕೊಂಡಿಯಂತಹ ಮುಳ್ಳನ್ನು ತಕ್ಷಣವೇ ತೆಗೆದರೆ ಉರಿ ಮತ್ತು ಭಾವು ಆಗುವ ಪ್ರಮಾಣ ತಗ್ಗುವುದು. ಜೇನು ಹುಳುಗಳು ಕಚ್ಚಿದಾಗ ಮುಳ್ಳನ್ನು ತೆಗೆದುಹಾಕಬೇಕೆಂದು ಉಗುರಿನಿಂದ ಮುಳ್ಳನ್ನು ತೆಗೆದುಹಾಕಿ ನಾನೂ ಒಮ್ಮೇ ಜೇನು ತೆಗೆಯಲು ಪ್ರಯತ್ನಿಸುತ್ತೇನೆಂದು ಅಲ್ಲೇ ಬೇಲಿಯಲ್ಲಿದ್ದ ಒಣ ಮುಳ್ಳುರೆಂಬೆಯ ಕಾಲಲ್ಲಿ ತುಳಿದು ಮುರಿದು ಕೋಲನ್ನಾಗಿ ಮಾಡಿಕೊಂಡೆ. ಜೇನಿನ ಬಳಿ ಹೋದವನೇ ಆ ಕೋಲಿನ ಸಹಾಯದಿಂದ ಜೇನು ಗೂಡು ಕಟ್ಟಿದ್ದ ಕೊನೆಯನ್ನು ಒತ್ತುತ್ತಾ ಹಿಂದಕ್ಕೆ ಮುಂದಕ್ಕೆ ಒತ್ತುತ್ತಾ ಹುಳುಗಳನ್ನು ಎಬ್ಬಿಸಿದೆ. ಆ ಹುಳುಗಳು ನನ್ನನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದವಾದರೂ ನಾನು ಮುಖ ಎತ್ತದೇ ಒಂದೇ ಸಮನೇ ಅಲ್ಲಾಡಿಸಿದ್ದರಿಂದ ಒಂದೆರಡು ಹುಳುಗಳು ಕೈಯ ಬೆರಳುಗಳಿಗೂ, ಮೊಣಕೈಗೂ ಕಚ್ಚಿದವಾದರೂ ಜೇನುತೆಗೆಯವಲ್ಲಿ ಸಫಲನಾದೆ. ಸುಮಾರು ಒಂದು ಕೆಜಿಯಷ್ಟು ಒಳ್ಳೆಯ ತುಪ್ಪ. ಸಮೃದ್ಧ ತುಪ್ಪ ಸಿಕ್ಕದ್ದರಿಂದ ಜೇನುಹುಳುಗಳು ರೊಟ್ಟಿಯ ಭಾಗದಲ್ಲೂ ಅಲ್ಲಲ್ಲಿ ಸುಮಾರು ಜೇನುತುಪ್ಪವನ್ನು ತುಂಬಿ ಇಟ್ಟಿದ್ದವು. ಎಲ್ಲರೂ ಹಂಚಿಕೊಂಡು ತಿಂದೆವು. ಅಂಜಿನಿಯ ಕೈಯ ಊತ ಹೆಚ್ಚಾಗಿದ್ದುದರಿಂದ ಇಪ್ಪತ್ತು ಮೂವತ್ತು ಗ್ರಾಂ ಹೆಚ್ಚಾಗಿ ತಿನಿಸಿದೆವು. ಹಾಗೆ ಜೇನು ತಿನ್ನುತ್ತಾ ರೈಲ್ವೆ ಹಳಿಯ ಮೇಲೆ ಹತ್ತಿ ಸ್ಪರ್ಧೆ ಇಲ್ಲದೇ ಹಾಗೆ ನಡೆದುಬರುತ್ತಿದ್ದೆವು. ನಾವು ಆ ಟ್ರ್ಯಾಕ್ ಗೆ ಸೇರಿಕೊಂಡಿದ್ದ ಸಮೀಪದಲ್ಲಿ ರೈಲು ಸಿಗ್ನಲ್ ಕೊಡುವ ಕೈ ಕಂಬ ಇತ್ತು. ಅದೇ ಈ ಮೇಲೆ ಹೇಳಿದ ರೈಲು ಬಂದಾಗ ಕೈ ಎತ್ತುವುದು. ರೈಲು ಬಾರದೇ ಇರುವಾಗ ಕೈಯನ್ನು ಅಡ್ಡಲಾಗಿ ಹಾಕಿರುವಂತೆ ಇರುತ್ತಿತ್ತು. ಅದರ ಮೇಲೆ ಹತ್ತಲು ಎಂಟತ್ತು ಹೆಜ್ಜೆಯ ಕಬ್ಬಿಣದ ಏಣಿಯೂ ಇತ್ತು. ಅದಕ್ಕೆ ಬೆಂಬಲವಾಗಿ ರೈಲ್ವೇ ಹಳಿಯ ಅಡಿ ಹಾಸುವ ಪ್ಲಾಟ್ ಫಾರಂ ಪಟ್ಟಿಗಳನ್ನು ಬೋರಲಾಗಿ ಇಟ್ಟಿದ್ದರು. ನಾವು ಹಾಗೇ ಮಾತಾಡುತ್ತಾ ಈ ಕಂಬದಲ್ಲಿ ರೈಲು ಬರುವ ಮುನ್ನಾ ಕೈ ಎತ್ತುವಂತೆ ಮಾಡುವ ವಿಧಾನ ಹೇಗಿದೆ ಎಂಬುದನ್ನು ನೋಡುತ್ತಿದ್ದೆವು. ಹಾಗೇ ನೋಡುತ್ತಿರುವಾಗ ಬೆಂಬಲವಾಗಿ ಬೋರಲಾಗಿ ನಿಲ್ಲಿಸಿದ್ದ ಪಟ್ಟಿಗಳ ಅಡಿಯಲ್ಲಿ ಒಂದು ಜೇನು ಗೂಡು ಕಟ್ಟಿತ್ತು. ಆಗತಾನೆ ಕೆಲವೇ ನಿಮಿಷಗಳ ಹಿಂದೆ ಕಚ್ಚಿಸಿಕೊಂಡಿದ್ದ ಉರಿ ಇನ್ನೂ ಉರಿಯುತ್ತಲೇ ಇದ್ದುದರಿಂದ ಈ ಜೇನು ಬೇರೆ ಅಲ್ಲಾಡಿಸಲೂ ಆಗದ, ಒತ್ತೊಯ್ಯಲೂ ಆಗದ ರೈಲ್ವೆ ಹಾಸುಪಟ್ಟಿಗೆ ಗೂಡು ಕಟ್ಟಿದ್ದರಿಂದ ಹುಳುಗಳು ಕಚ್ಚುವ ಸಾದ್ಯತೆ ಹೆಚ್ಚಿನ ಮಟ್ಟದಲ್ಲಿದ್ದುದರಿಂದ ಇದನ್ನು ಬಿಡಿಸಲು ಇನ್ನೊಂದು ದಿನ ಇಟ್ಟುಕೊಳ್ಳಲು ತೀರ್ಮಾನಿಸಿ ಹಾಸ್ಟೆಲ್ ಗೆ ಹಿಂದಿರುಗಿದೆವು.

ನಮ್ಮ ತಂಡ ಹಾಸ್ಟೆಲ್ ನಿಂದ ಹೋರಹೋಗುತ್ತಿರುವುದು ಜೇನು ಬಿಡಿಸಿ ತಿನ್ನಲಿಕ್ಕೆ ಎಂದು ವಾರ್ಡನ್ ಆದಿಯಾಗಿ ಎಲ್ಲರಿಗೂ ಗೊತ್ತಾಗಿತ್ತು. ಅನೇಕ ಹುಡುಗರು ನಮ್ಮ ತಂಡ ಎಲ್ಲಿಯಾದರೂ ಹೊರಟರೆಂದರೇ ಇವರು ಜೇನು ಹುಡುಕಲು, ಜೇನುಕೀಳಲೇ ಹೋಗುತ್ತಿದ್ದಾರೆಂದು ಅವರಿದ್ದ ಸ್ಥಿತಿಯಲ್ಲಿಯೇ ನಮ್ಮ ಹಿಂದೆ ಬರಲು ಸಿದ್ದರಿದ್ದರು. ಅದಕ್ಕಾಗಿ ಅವರನ್ನೂ ನಮ್ಮ ಜೊತೆಗೆ ಸೇರಿಸಿಕೊಳ್ಳಲು ಮನೆಯಿಂದ ತಂದ ತಿಂಡಿಗಳನ್ನು ಕೊಡುವುದು, ಇಲ್ಲವೇ ಅಂಗಡಿಗಳಲ್ಲಿ ಅದೂ ಇದು ಕೊಡಿಸಿವುದು ಮಾಡುತ್ತಿದ್ದರು. ಜೇನು ಹುಡುಕಲು ಹದಿನೈದು ಇಪ್ಪತ್ತು ಹುಡುಗರನ್ನು ಕರೆದುಕೊಂಡು ಹೋಗಿ ದೊಂಬಿ ಮಾಡುವ ಪರಿಸ್ಥಿತಿಯಲ್ಲಿ ನಾವೂ ಇರಲಿಲ್ಲ. ಆದ್ದರಿಂದ ನಾವು ಜೇನು ಕೀಳಲು ಹೋಗಲೇ ಬೇಕೆಂದರೆ ಒಬ್ಬೊಬ್ಬರಾಗಿ ಸ್ವತಂತ್ರವಾಗಿ ಅವರ ಪಾಡಿಗೆ ಅವರು ಹೊರಟು ಹೋಗಿ ಕೊನೆಗೆ ನಿಗದಿಪಡಿಸಿದ ಸ್ಥಳದಲ್ಲಿ ಎಲ್ಲರೂ ಕೂಡಿಕೊಂಡು ಆಮೇಲೆ ಜೇನು ಹುಟ್ಟುಗಳನ್ನು ಬಿಡಿಸಲು ಹೋಗುತ್ತಿದ್ದೆವು. ಅಂದು ಹೀಗೆ ಮಾತಾಡಿದಂತೆ ಅವರವರ ಪಾಡಿಗೆ ಅವರು ಹೊರಟು ಹುರಿಗಡಲೆ ಮಿಲ್ ಬಳಿ ಸೇರಬೇಕೆಂದು ಸೂಚಿಸಿದ್ದರಿಂದ ಎಲ್ಲರೂ ಎತ್ತೆತ್ತಲಿಂದಲೋ ಬಂದು ನಮ್ಮ ತಂಡ ಸೇರಿಕೊಂಡರು. ಹುರಿಗಡಲೆಯ ವಾಸನೆ ನಮ್ಮನ್ನು ಕೆರಳಿಸಿದ್ದರಿಂದ ಗೇಟಿನಿಂದ ಒಳಹೋಗಿ 'ನಾವು ಹಾಸ್ಟೆಲ್ ಹುಡುಗರು ತಿನ್ನಲು ಹುರಿಗಡಲೆ ಬೇಕು' ಎಂದು ಕೇಳಿಕೊಂಡಾಗ ಯಾರೊ ಪುಣ್ಯಾತ್ಮ ಒಬ್ಬೊಬ್ಬರಿಗೆ ಒಂದೊಂದು ಬೊಗಸೆ ತುಂಬಾ ತುಂಬಿಕೊಟ್ಟಿದ್ದ. ಕಡಲೆಯ ಮುಕ್ಕುತ್ತಾ ಹನ್ನೊಂದು ಹನ್ನೊಂದು ವರೆ ಸುಮಾರಿಗೆ ಆ ಜೇನಿದ್ದ ರೈಲ್ವೇ ಸಿಗ್ನಲ್ ಕೈ ಕಂಬದ ಬಳಿ ಬಂದೆವು. ಹಿಂದೆ ಕಚ್ಚಿಸಿಕೊಂಡಂತೆ ಇಂದು ಜೇನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಅಂಜಿನಿ ಒಂದು ಟವೆಲ್ ಅನ್ನೂ ತೆಗೆದುಕೊಂಡು ಬಂದಿದ್ದ. ಅವನು ಕೈ ಕಂಬದಿಂದ ಸುಮಾರು ದೂರದಲ್ಲಿ ನಿಂತಿದ್ದ. ಇತ್ತ ಗೊವಿಂದ ನಮ್ಮೆಲ್ಲರಿಗಿಂತಲೂ ಹಿರಿಯ. ಅವನು ಅಡುಗೆ ರೂಂ ಗೆ ಹೋದಾಗ ಒಂದು ಬೆಂಕಿ ಪೊಟ್ಟಣ ಜೇಬಿನಲ್ಲಿ ಹಾಕಿಕೊಂಡು ಬಂದಿದ್ದ. ಈ ಬಾರಿ ನನ್ನ ಜೊತೆ ದೇವರಾಜನಿಗಿಂತ ಗೋವಿಂದನೇ ನಿರ್ಣಾಯಕ ಪಾತ್ರ ವಹಿಸಿದ್ದ. ಅಂಜಿನಿಯ ಹತ್ತಿರ ಟವೆಲ್ ಇಸ್ಕೊಂಡ್ ಮುಖ, ತಲೆಯ ಸುತ್ತಲೂ ಸುತ್ತಿ ಕಣ್ಣಿನ ಭಾಗ ಮಾತ್ರ ತೆರೆದುಕೊಂಡು ಅಲ್ಲೇ ಅಕ್ಕ ಪಕ್ಕ ಬಿದ್ದಿದ್ದ ಕಸ ಕಡ್ಡಿಗಳನ್ನು ಒಟ್ಟುಮಾಡಿ ಬೆಂಕಿ ಹಚ್ಚಿ ಜೇನಿನ ಸಮೀಪ ತಂದಿಟ್ಟ. ಹೊಗೆಗೆ ಸ್ವಲ್ಪ ಹಾರಿದ ಹುಳುಗಳು ಹೊಗೆ ತಾಗದ ಇನ್ನೊಂದು ಬದಿಯಲ್ಲಿ ಹಾಗೇ ಕುಳಿತಿದ್ದವು. ಹೊಗೆ ಇದ್ದುದ್ದರಿಂದಲೋ ಏನೋ ಅಂಥಾ ತೀಕ್ಷ್ಣವಾದ ದಾಳಿ ಮಾಡಲಿಲ್ಲ. ನಾನು ಕೈಯಲ್ಲಿ ತಂಗಟಿ ಸೊಪ್ಪು ಹಿಡಿದು ಅಲ್ಲಾಡಿಸುತ್ತಾ ಬಾಯಿಂದ ಗಾಳಿ ಊದಿ ಹುಳುಗಳನ್ನು ಎಬ್ಬಿಸಿದೆ. ಅಲ್ಲಿಂದ ಸುಮಾರು 600-700 ಮೀಟರ್ ಇದ್ದ ಸ್ಟೇಶನ್ ಸಿಬ್ಬಂದಿಗೆ ಸಿಗ್ನಲ್ ಕಂಬದ ಕೆಳಗೇ ಹೊಗೆ ಹಾಕಿದ್ದು, ನಾವು ಬೇರೆ ಏನನ್ನೋ ಅಲ್ಲಿ ಮಾಡುತ್ತಿದ್ದುದನ್ನು ಗಮನಿಸಿದ ಅವರು ಯಾರೋ ಗ್ಯಾಂಗ್ ಮ್ಯಾನನಂತಿದ್ದ ಒಬ್ಬರನ್ನು ಕಳಿಸಿದರು. ಹತ್ತಿರ ಬರುತ್ತಾ ಬರುತ್ತಾ ಜೇನು ಕಿತ್ತು ಹಾಗೆ ಹಂಚಿಕೊಂಡು ತಿನ್ನುತ್ತಾ ಇದ್ದುದರಿಂದ ಏನ್ರೋ ಜೇನಾ ?? ಎಂದು ಕೇಳಿದರು. ಅವರು ಸ್ಟೇಷನ್ ಕಡೆಯಿಂದಲೇ ಬಂದಿದ್ದು ನೋಡಿ ರೈಲ್ವೆ ಅವರೇ ಎಂದೆನಿಸಿತ್ತಾದರೂ ಯಾಕೋ ಆತ್ಮೀಯತೆ ಯಿಂದ ಮಾತಾಡಿದ್ದಕ್ಕೆ ಅಲ್ಲವೇನೋ ಎನಿಸಿತು. ಅಂಜಿನಿ ಹತ್ತಿರ ಬಂದ ಆ ಮನುಷ್ಯ ಏಕಾ ಏಕಿ ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು "ಕಳ್ಳ ನನ್ ಮಕ್ಕಳ ರೈಲು ಸಿಗ್ನಲ್ ಕಂಬಕ್ಕೆ ಬೆಂಕಿ ಇಟ್ಟಿದ್ದಿರಾ...??? ನಡೆಯಿರಿ ಎಲ್ಲರೂ ಸ್ಟೆಷನ್ ಹತ್ತಿರ" ಎಂದರು. ನಮಗೆ ಓಡಿ ಹೋಗಲು ಅವಕಾಶ ಇತ್ತಾದರೂ ಅಂಜಿನಿಯನ್ನು ಅವರು ಹಿಡಿದುಕೊಂಡಿದ್ದರಿಂದ ಕಾಲ್ಕೀಳದೇ ಸಂಪೂರ್ಣವಾಗಿ ಶರಣಾಗಿ ಎಲ್ಲರೂ ಒಟ್ಟಿಗೆ "ನಡೀ ಅಣ್ಣ ಬರುತ್ತೀವಿ ನಾವೇನು ಮಾಡಿಲ್ಲ... ಜೇನನ್ನು ಮಾತ್ರ ತೆಗೆದಿದ್ದೇವೆ." ಅಂತ ಹೇಳಿ ಹೊರಟೆವು. ಅಷ್ಟೊತ್ತಿಗೆ ಎರಡಡಿ ಒಣಹುಲ್ಲಿಗೆ ಹಚ್ಚಿದ್ದ ಬೆಂಕಿ ನಾಮಾವಶೇಷವಾಗಿ ಆರಿಹೋಗಿತ್ತು. ಆ ರೈಲು ನೌಕರ ಅಂಜಿನಿಯ ಕೈಯನ್ನು ಹಿಡಿದೇ ಸಿಗ್ನಲ್ ಕೈ ಕಂಬದಲ್ಲಿ ಏನಾದರೂ ಸುಟ್ಟುಹಾಕಿದ್ದಾರೆಯೇ ಎಂದು ವೀಕ್ಷಣೆ ಮಾಡಿದರು. ಜೇನು ತೆಗೆಯುವಾಗ ಬೆಂಕಿಹಾಕಬಾರದೆಂದು ಗೊತ್ತಾಗಲಿಲ್ಲವಾದರೂ ಜೇನು ತಿನ್ನುವ ಆಸೆಯಲ್ಲಿ ನಮ್ಮಿಂದ ತಪ್ಪೊಂದು ನಡೆದಿದೆ. ಎಲ್ಲರ ಎದೆಯಲ್ಲೂ ಡವ.. ಡವ... ಏನಾಗುವುದೋ ಏನೋ ??ಹೊಡೆಯುವರೋ..?? ಹಾಸ್ಟೆಲ್ ವಾರ್ಡನ್ ನ್ನು ಕರೆಸುವರೋ..??? ಯಾವ ನಿರ್ಣಯಕ್ಕೂ ಬಾರದೇ ಗಾಬರಿಯಾಗಿ 'ಭಯ' ಅಷ್ಟೇ ನಮ್ಮನ್ನು ಕಾಡುತ್ತಾ ಬಾಯಾರಿಕೆಗೆ ಬಾಯಿ ಒಣಗುತ್ತಾ ಇತ್ತು. ಏನಾಗುವುದೋ ಏನೋ ಎಂಬ ಆತಂಕದಿಂದ ಸ್ಟೇಷನ್ಗೆ ನಡೆದು ಬಂದೆವು. ಆತಂಕದಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದೇವೆ. ಏನೂ ಮಾತಾಡಲಾಗುತ್ತಿಲ್ಲ. ನೌಕರನ ಕೈಯಲ್ಲಿ ಬಂಧಿಯಾದ ಅಂಜಿನಿ ಮಾತ್ರ ಭಯದಿಂದ ನಡುಗುತ್ತಿದ್ದಾನೆ. ಆಗ ಸ್ಟೇಶನ್ ನಲ್ಲಿ ನೌಕರರು, ಒಬ್ಬಿಬ್ಬರು ಪ್ರಯಾಣಿಕರು ಬಿಟ್ಟರೇ ಯಾರು ಇರಲಿಲ್ಲ. ಯಾವುದೋ ಒಂದು ರೂಂಗೆ ನಮ್ಮನ್ನ ಹಾಕಿದರು. 'ಕೂತ್ಕಳ್ರಿ... ಸಾರ್ ಬರುತ್ತಾರೆ' ಎಂದೇಳಿ ಆ ನೌಕರ ಹೋದ...

ನಮ್ಮನ್ನು ಪೋಲಿಸ್ ಸ್ಟೇಶನ್ನಿಗೆ ಕಳಿಸ್ತಾರ...??? ಅಥವಾ ಪೋಲಿಸರನ್ನೇ ಕರೆಸುತ್ತಾರಾ...??? ಎಂಬ ಆತಂಕ ಹೆಚ್ಚಿ ಗಂಟಲು ಒಣಗುತ್ತಿತ್ತು. ಆ ಸ್ಟೇಷನ್ ಮಾಸ್ಟರ್ ಹಿಂದಿಯವರು ಅನ್ಸತ್ತೆ... ಅವರಿಗೆ ನಮ್ಮನ್ನು ಕರೆದುಕೊಂಡು ಬಂದವನು ಅನುವಾದ ಮಾಡುತ್ತಿದ್ದ. ಕೊನೆಗೆ ಯಾರೋ ಒಬ್ಬ ಪೋಲಿಸೋ ಸೆಕ್ಯುರಿಟಿ ಗಾರ್ಡೋ ಗೊತ್ತಾಗಲಿಲ್ಲ. ಪ್ಯಾಂಟ್ ಮಾತ್ರ ಖಾಕಿ ಅಗಿತ್ತು. ನಮ್ಮನ್ನೆಲ್ಲಾ ಉದ್ದೇಶಿಸಿ ಕನ್ನಡ, ಅಸಂಕೃತ ಬಾಷೆಯಲ್ಲಿ ಒಂದಷ್ಟು ಬಯ್ದರು. ನಮ್ಮದೆಲ್ಲರದೂ ಒಂದೇ ಉತ್ತರ. "ಸಾರ್ ನಾವು BCM ಹಾಸ್ಟೆಲ್ ಹುಡುಗರು... ಜೇನನ್ನು ಮಾತ್ರ ಕಿತ್ತಿದ್ದೇವೆ. ಕೈಯಲ್ಲಿ ಅಂಟಿದ ಜೇನು ಹಾಗೆ ಇದೆ.. ಬೆಂಕಿಯನ್ನು ಹಾಕಿದ್ದು ತಪ್ಪು ಆದರೆ ಇನ್ಮೇಲೆ ಇಲ್ಲೆಲ್ಲಿ ಬರುವುದಿಲ್ಲ.." ಎಂದು ಎಲ್ಲರನ್ನೂ ನಿಂದು ಯಾವ ಊರು ನಿನ್ನದು ಯಾವ ಊರು ಎಂದು ಕೇಳುತ್ತಾ ಅವರು "ಇನ್ಮೇಲೆ ರೈಲು ಹಳಿಗಳ ಮೇಲೆ ಎಲ್ಲಿಯಾದರೂ ಕಂಡಿರೋ... ನಿಮಗೆ ಬಾಯಲ್ಲಿ ಹೇಳುವುದಿಲ್ಲ..." ಎಂದು ಲಾಠಿಯನ್ನು ಗೊಡೆಗೆ ಬಡಿದರು. "ಇಲ್ಲಾ ಸರ್ ಬರುವುದಿಲ್ಲ" ಎಂದು ಹೇಳಿ ಆ ಸಿಗ್ನಲ್ ಕಂಬದಲ್ಲಿ ಏನು ಸುಟ್ಟುಹೋಗಿಲ್ಲ ತಾನೇ ಎಂದು ಗಾರ್ಡ ನಿಂದ ಖಚಿತ ಪಡಿಸಿ ಕೊಂಡು ನಮ್ಮನ್ನು ಬಿಟ್ಟರು. ಅಷ್ಟೊತ್ತಿಗಾಗಲೇ ಗಂಟಲು ವಿಪರೀತ ಒಣಗಿದ್ದರಿಂದ ಅಲ್ಲೇ ನೀರು ಕುಡಿದು ಇನ್ಮೇಲೆ ಎಲ್ಲಿಯೂ ಬರುವುದು ಬೇಡ.. ಮತ್ತೆ ಸಿಕ್ಕರೆ ನಮ್ಮನ್ನು ಹೊಡೆಯಬಹುದು‌ ಅಥವಾ ಪೋಲಿಸ್ ಸ್ಟೇಷನ್ಗೆ ಕಳಿಸಬಹುದೆಂದು ಅಂದಿನಿಂದ ಅತ್ತ ಕಡೆ ಹೋಗುವುದನ್ನು ಕಡಿಮೆ ಮಾಡಿದೆವು. ಹೋದರೂ ರೈಲ್ವೆ ಗೆ ಸಂಬಂದಿಸಿದ ಯಾವ ವಸ್ತುಗಳನ್ನು ಕಾಲಲ್ಲಿ ಮುಟ್ಟಲೂ ಭಯ ಆಗುತ್ತಿತ್ತು. ಕೆಲವು ದಿನಗಳಾದ ನಂತರ ನಮ್ಮ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂತು. ಶಾಲೆ ಮತ್ತು ಹಾಸ್ಟೆಲ್ ಪುನರಾರಂಭ ಆದಾಗ ನಮ್ಮ ಹಾಸ್ಟೆಲ್ ಅಲ್ಲಿಂದ ದೂರ ಅಂದರೆ ಬೆಂಗಳೂರು ರಸ್ತೆಯಿಂದ ಚಿತ್ರದುರ್ಗದ ರಸ್ತೆಗೆ ಸ್ಥಳ ಬದಲಾಯಿಸಿದ್ದರಿಂದ ಪುನಃ ನಾವು ಆ ರೈಲ್ವೇ ಹಳಿಗಳ ಕಡೆಹೋಗಲಿಲ್ಲ.. ಹೊಸ ಸ್ಥಳದಲ್ಲಿ ಬೇರೆ ಬೇರೆ ಕಡೆ ಜೇನು ಹುಡುಕುವ ಕಾರ್ಯ ಮುಂದುವರೆಸಿದವು. ಆದರೆ ದೇವ, ಗೋವಿಂದ, ವರುಣ, ಧನಂಜಯ ಹತ್ತನೇ ತರಗತಿ ಮುಗಿದದ್ದರಿಂದ ಅವರು ಹಾಸ್ಟೆಲ್ ನಿಂದ ನಿರ್ಗಮಿಸಿದರು. ಹೊಸ ಹುಡುಗ ರೊಂದಿಗೆ ನನ್ನ ತಿರುಗುವ ಅಭ್ಯಾಸ ಹಾಗೇ ಇತ್ತು... ಆದರೆ ಜೇನು ಕೀಳಲು ನಾನೆಂದೂ ಬೆಂಕಿಯನ್ನು ಹಾಕಿ ಹುಳುಗಳ ಕೊಂದು ಜೇನು ಕಿತ್ತು ತಿಂದಿಲ್ಲ...
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************


Ads on article

Advertise in articles 1

advertising articles 2

Advertise under the article