-->
ಹೃದಯದ ಮಾತು : ಸಂಚಿಕೆ - 37

ಹೃದಯದ ಮಾತು : ಸಂಚಿಕೆ - 37

ಹೃದಯದ ಮಾತು : ಸಂಚಿಕೆ - 37
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


          ಬದುಕು ರೂಪಿಸುವ ಗಟ್ಟಿ ನಿರ್ಧಾರಗಳು
ಪಿಯುಸಿ ಫಲಿತಾಂಶ ಈಗಷ್ಟೆ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಿರ್ಣಾಯಕವಲ್ಲ. ಆದರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಒಂದು ದಿಕ್ಕನ್ನು ತೋರುವಲ್ಲಿ ಅದು ಬಹುಮುಖ್ಯ ಪಾತ್ರ ವಹಿಸುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ಈ ಫಲಿತಾಂಶ ಪೋಷಕರಿಗೆ ತಮ್ಮ ಮಕ್ಕಳ ಮುಂದಿನ ಹಾದಿಯನ್ನು ನಿರ್ಧರಿಸಲು ಪೂರಕ ಪಾತ್ರ ವಹಿಸುತ್ತದೆ.

ಬಹುತೇಕ ವಿದ್ಯಾರ್ಥಿಗಳ ಅಂಕಗಳು ಅಚ್ಚರಿ ಮೂಡಿಸುತ್ತಿದೆ. ನಿರೀಕ್ಷೆಯನ್ನೂ ಮೀರಿ ಗಳಿಸಿರುವ ಅಂಕಗಳು ಅದರ ನೈಜತೆಯ ಬಗ್ಗೆ ಸಂಶಯ ಮೂಡಿಸುತ್ತಿದೆ. ಆದರೂ ಪಡೆದ ಅಂಕಗಳನ್ನು ನಿರಾಕರಿಸುವಂತಿಲ್ಲ. ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಮೀರಿ ಪಡೆದ ಅಂಕಗಳು ಆತನ ಭವಿಷ್ಯ ನಿರ್ಧರಿಸುವಲ್ಲಿ ಎಡವಬಹುದಾದ ಸಾಧ್ಯತೆಯಿದೆ.

ಪಿಯುಸಿ ಫಲಿತಾಂಶದಲ್ಲಿ ಅಂಕಗಳಿಗಿಂತಲೂ, ಆ ಹಂತದಲ್ಲಿ ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳೇ ಆತನ ಭವಿಷ್ಯವನ್ನು ಕಟ್ಟಿಕೊಡುತ್ತದೆ. ಆ ನಿರ್ಧಾರದಲ್ಲಿ ಮತ್ತಷ್ಟು ಕಠಿಣ ಶ್ರಮದ ತುಡಿತವಿರಬೇಕು. ಭವಿಷ್ಯದ ಕನಸಿರಬೇಕು. ಆಗ ಮಾತ್ರವೇ ಯಶಸ್ವಿ ಬದುಕಿಗೆ ಮುನ್ನುಡಿ ಬರೆಯಬಹುದು. ಅಂತಹ ಗಟ್ಟಿ ನಿರ್ಧಾರ ತಾಳಿ ಯಶಸ್ವಿಯಾದ ನೂರಾರು ಮಂದಿಯನ್ನು ಉದಾಹರಿಸಬಹುದು.

ಗೋವಿಂದ ಜಯಸ್ವಾಲ್ ಉತ್ತರಪ್ರದೇಶದ ವಾರಣಾಸಿಯ ನಿವಾಸಿ. ಅಟೋ ಕಾರ್ಮಿಕನ ಮಗ. 8×10 ಅಡಿಯ ಕಚ್ಛಾ ಮನೆ ಹಾಗೂ ಒಂದಷ್ಟು ಪಾಳುಬಿದ್ದ ಜಮೀನು ಅಪ್ಪನಿಗಿತ್ತು. ಜಯಸ್ವಾಲ್ ಸ್ನೇಹಿತನ ಮನೆಗೆ ಆಟವಾಡಲು ಹೋದಾಗ, ಸ್ನೇಹಿತನ ಪೋಷಕರು "ಆತ ಅಟೋ ಡ್ರೈವರ್ ಮಗ, ಆತನೊಂದಿಗೆ ಬೆರೆಯಬೇಡ" ಎಂದು ಸ್ನೇಹಿತನನ್ನು ತಡೆದಿದ್ದರು. ತೀವ್ರ ಆಘಾತಗೊಂಡಿದ್ದ ಆತ ಅಂದೇ ಗಟ್ಟಿ ನಿರ್ಧಾರ ತಾಳಿದ್ದ. ಪುಸ್ತಕ ಖರೀದಿಸಲು ಹಣವಿಲ್ಲದಿದ್ದರೂ ಕಾಡಿ ಬೇಡಿ ವಿಜ್ಞಾನ ಪದವಿಯನ್ನು ಆತ ಪೂರೈಸಿದ್ದ. 

ಪದವಿ ಪಡೆದ ಜಯಸ್ವಾಲ್ ಅವಮಾನಿಸಿದವರ ಮುಂದೆ ತಲೆಯೆತ್ತಿ ನಡೆಯಲು ನಿರ್ಧರಿಸಿದ್ದ. ಅದಕ್ಕಾಗಿ ಅವನು ಐಎಎಸ್ ಕನಸು ಕಂಡ. "ಕೆಲಸ ಮಾಡಿ ನಾಲ್ಕು ಕಾಸು ಸಂಪಾದಿಸು, ಅದು ಬಿಟ್ಟು ಐಎಎಸ್ ಮಾಡುವ ಹಗಲು ಕನಸು ಬೇಡ" ಎಂದು ಸ್ನೇಹಿತರು ಬುದ್ಧಿ ಹೇಳಿದರೂ, ಜಯಸ್ವಾಲ್ ತನ್ನ ನಿರ್ಧಾರ ಬದಲಿಸಲಿಲ್ಲ. ಅದಾಗಲೇ ಅಮ್ಮ ತೀರಿಕೊಂಡಿದ್ದಳು. ಮಗನ ಒತ್ತಾಯಕ್ಕೆ ಮಣಿದ ಅಪ್ಪ ತನ್ನಲ್ಲಿದ್ದ ಅಲ್ಪ ಜಮೀನನ್ನು ಮಾರಿ ಹತ್ತು ಸಾವಿರ ಮಗನ ಕೈಗಿತ್ತಿದ್ದ. ಅದು ಸಾಲದೇ ಹೋದಾಗ ಟ್ಯೂಷನ್ ಮಾಡಿ ಅಲ್ಪ ಸಂಪಾದಿಸಿ ಐಎಎಸ್ ಆತ ಬರೆದಿದ್ದ. ಗೋವಿಂದ ಜಯಸ್ವಾಲ್ ಗಟ್ಟಿ ನಿರ್ಧಾರ, ಕಠಿಣ ಶ್ರಮದಿಂದ ಬದುಕನ್ನು ಗೆದ್ದೇ ಬಿಟ್ಟ. ಐಎಎಸ್ ನಲ್ಲಿ 48 ನೇ ರ್ಯಾಂಕ್ ಪಡೆದ. ಅಪ್ಪ ಮತ್ತು ಅಕ್ಕಂದಿರ ಸಹಿತ ಇಂದು ಸಂಪೂರ್ಣ ಕುಟುಂಬದ ಹೊಣೆ ಹೊತ್ತಿದ್ದಾನೆ. ಅಲ್ಲದೆ ಹನ್ನೆರಡು ಅನಾಥ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ಹೊತ್ತಿದ್ದಾನೆ.

ಹಾಸನ ಜಿಲ್ಲೆಯ ಅರೆಹಳ್ಳಿ ಗ್ರಾಮದ ರುಬಿಯಾ ರೆಹಮಾನ್ ಮನೆಯಲ್ಲಿ ತೀರಾ ಬಡತನ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಕೆ ಪ್ರತಿದಿನ ಮನೆ ಮನೆ ತೆರಳಿ ಹಾಲು ಮಾರುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಆದರೆ ಆಕೆಯ ನಿರ್ಧಾರ ಅಚಲವಾಗಿತ್ತು. ಅದಕ್ಕಾಗಿ ಕಠಿಣ ಶ್ರಮದ ಹೊರತು ಅನ್ಯ ಮಾರ್ಗವಿರಲಿಲ್ಲ. ನಿದ್ದೆಗೆಟ್ಟು ಓದಿದ ಆಕೆ ಇಂದು ಎಂ.ಬಿ.ಬಿ.ಎಸ್ ಪದವಿ ಸ್ವೀಕರಿಸಿದಾಗ ಇಡೀ ಊರೇ ಆಕೆಯ ಬಗ್ಗೆ ಹೆಮ್ಮೆ ಪಟ್ಟಿತು.

ಈ ಮೇಲಿನ ಇಬ್ಬರು ಸೀಮಿತ ಉದಾಹರಣೆಗಳಷ್ಟೆ. ತರಕಾರಿ ಮಾರುವ ತಳ್ಳುಗಾಡಿಯ ಅಡಿಯಲ್ಲಿ ಓದಿ ಸಾಧನೆ ಮಾಡಿದ ಮಕ್ಕಳಿದ್ದಾರೆ. ಕಸದ ತೊಟ್ಟಿಯ ದುರ್ನಾತದ ಮಧ್ಯೆ ಓದಿ ಸಾಧನೆಗೈದವರಿದ್ದಾರೆ. ಅವರುಗಳ ಗಟ್ಟಿ ನಿರ್ಧಾರಗಳು ಹಾಗೂ ಆ ನಿಟ್ಟಿನಲ್ಲಿ ಅವರ ಕಠಿಣ ಶ್ರಮಗಳೇ ಅವರುಗಳನ್ನು ಸಾಧಕರನ್ನಾಗಿಸಿದೆ. ಪಿಯುಸಿ ಹಂತದಲ್ಲೇ ಮೀಸೆ ಚಿಗುರೊಡೆದಾಗ ದ್ವಿಚಕ್ರ ಓಡಿಸುವುದಾಗಲಿ, ಆ್ಯಪಲ್ ಫೋನ್ ಗಳಾಗಲಿ ಕನಸುಗಳಾದಾಗ ಭವಿಷ್ಯ ಕರಾಳವಾಗುವುದು ನಿಸ್ಸಂಶಯ. ಹದಿನೆಂಟರ ಹರೆಯದಲ್ಲಿ ಸಂಪಾದಿಸಬಹುದಾದ ಒಂದಷ್ಟು ಸಾವಿರ ಬದುಕನ್ನು ಎಂದಿಗೂ ಕಟ್ಟದು. ಪಿಯುಸಿ ಅಂಕಗಳ ಹೊರತಾಗಿ, ನಂತರದ ಏಳೆಂಟು ವರ್ಷಗಳ ಕಠಿಣ ಶ್ರಮ ನಮ್ಮ ಭವಿಷ್ಯ ನಿರ್ಧರಿಸುತ್ತದೆ ಎಂಬ ಅರಿವು ಮಕ್ಕಳಲ್ಲಿ ಮೂಡಿಸಬೇಕಿದೆ. ಆಗಲೇ ಫಲಿತಾಂಶಗಳು ಅರ್ಥಪೂರ್ಣವಾಗುತ್ತದೆ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************




ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


Ads on article

Advertise in articles 1

advertising articles 2

Advertise under the article