-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 22

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 22

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 22
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
         

ಪ್ರೀತಿಯ ಮಕ್ಕಳೇ...... "ತೇನವಿನಾ ತೃಣಮಪಿ ನ ಚಲತಿ" ಎಂಬ ಮಾತನ್ನು ಎಲ್ಲರೂ ಕೇಳಿದ್ದೀರಿ. ನೀನಿಲ್ಲದೇ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಆಸ್ತಿಕ ಮಹಾಶಯರಿಗೆ ನೀನು ಎಂದರೆ ದೇವರು ಎಂಬರ್ಥ. ಆದರೆ ವಿಜ್ಞಾನ ವಿದ್ಯಾರ್ಥಿಗಳಾದ ನಮಗೆ ನೀನು ಎಂದರೆ ಶಕ್ತಿ ಎಂದರ್ಥ. ಹೌದು ಶಕ್ತಿ (ಬಲ) ಇಲ್ಲದೆ ಈ ಪ್ರಪಂಚದಲ್ಲಿ ಯಾವ ವ್ಯವಹಾರವೂ ನಡೆಯುವುದಿಲ್ಲ. ನಿಮ್ಮ‌ ವಾಹನ ಚಲಿಸಬೇಕಾದರೆ ಅದರಲ್ಲಿರುವ ಇಂಧನ ಆಮ್ಲಜನಕದೊಂದಿಗೆ ಉರಿದು ಶಕ್ತಿ ಬಿಡುಗಡೆಯಾಗಬೇಕು. ಇಂಧನ ಉರಿಯದೇ ಶಕ್ತಿ ಬಿಡುಗಡೆಯಾಗದು. ಶಕ್ತಿಯ ವಿನಃ ವಾಹನ ಮುಂದೆ ಚಲಿಸದು. ಜೀವಿಗಳಲ್ಲಿ ನಡೆಯುವ ಪ್ರತಿಯೊಂದು ಚಯಾಪಚಯ ಕ್ರಿಯೆಗಳಿಗೂ (metabolism) ಶಕ್ತಿ ಬೇಕು. ಈ ಶಕ್ತಿ ಬಿಡುಗಡೆ ಕ್ರಿಯೆಯೇ ಉಸಿರಾಟ (respiration). ನಾವು ಚಿಕ್ಕವರಿರುವಾಗ ಉಸಿರಾಟ ಎಂದರೆ ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಬಿಟ್ಟು ಬಿಡುವುದು ಎಂದು ಹೇಳಿಕೊಡುತ್ತಿದ್ದರು. ಇದು ಉಸಿರಾಟದ ಒಂದು ಪೂರಕ ಕ್ರಿಯೆ ಅಷ್ಟೇ. ಇದನ್ನು ಅನಿಲ ವಿನಿಮಯ (gaseous exchange) ಅಂತ ಕರೆಯುತ್ತೇವೆ. ಇದು ನಡೆಯುವುದು ಶ್ವಾಸಾಂಗದಲ್ಲಿ (respiratory organ). ಮಾನವ, ಹಕ್ಕಿ, ಆಮೆಗಳಲ್ಲಿ ಶ್ವಾಸಕೋಶ, ಮೀನುಗಳಲ್ಲಿ ಕಿವಿರು, ಕೀಟಗಳಲ್ಲಿ ಶ್ವಾಸನಳಿಕೆಗಳು, ಎರೆಹುಳುವಿನಲ್ಲಿ ಚರ್ಮ ಹೀಗೆ.... ಆದರೆ ಉಸಿರಾಟ ಎಂದರೆ ಗ್ಲುಕೋಸ್ ಆಮ್ಲಜನಕದೊಂದಿಗೆ ಉರಿದು ಶಕ್ತಿ ಬಿಡುಗಡೆಯಾಗುವ ಕ್ರಿಯೆ. ಈ ಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ನಡೆಯುವುದು ಜೀವಕೋಶದ ಒಳಗಡೆ. ಬ್ಯಾಕ್ಟೀರಿಯಾಗಳಂತಹ ಪ್ರೋ ಕ್ಯಾರಿಯೋಟಿಕ್ ಕೋಶಗಳಲ್ಲಿ ಇದು ಕೋಶ ಪೊರೆಯಲ್ಲಿ ನಡೆದರೆ ಬಹುಕೋಶೀಯ ಜೀವಿಗಳ ಯೂಕ್ಯಾರಿಯೋಟಿಕ್ ಕೋಶಗಳಲ್ಲಿ ಇದು ಮೈಟೊಕಾಂಡ್ರಿಯಗಳಲ್ಲಿ ನಡೆಯುತ್ತದೆ. ಉಸಿರಾಟದಿಂದ ಶಕ್ತಿ ಬಿಡುಗಡೆಯಾಗುವುದರಿಂದ ಮೈಟೊಕಾಂಡ್ರಿಯಗಳನ್ನು ಕೋಶದ ಶಕ್ತಿಯುತ್ಪಾದನೆಯ ಕೇಂದ್ರಗಳು (powerhouse of the cell) ಎನ್ನುತ್ತೇವೆ. ಉಸಿರಾಟದ ವೇಳೆ ಬಳಕೆಯಾಗದ ಶಕ್ತಿಯು ಮೈಟೊಕಾಂಡ್ರಿಯದಲ್ಲಿರುವ ಅಡಿನೋಸಿನ್ ಡೈಫಾಸ್ಫೇಟ್ ಗಳನ್ನು (ADP) ಅಡಿನೋಸಿನ್ ಟ್ರೈಫಾಸ್ಫೇಟ್ ಗಳಾಗಿ (ATP) ಪರಿವರ್ತಿಸುತ್ತವೆ. ಕೋಶಕ್ಕೆ ಶಕ್ತಿ ಬೇಕಾದಾಗ ಈ ಏಟಿಪಿ ಏಡಿಪಿಯಾಗಿ ಬದಲಾಗುತ್ತದೆ. ಆದ್ದರಿಂದ ಏಟಿಪಿಯನ್ನು ಶಕ್ತಿಯ ಚಲಾವಣೆ (energy currency) ಎನ್ನುವುದು.

ಉಸಿರಾಟ ಎನ್ನುವುದು ಜೀವಿಗಳ ಅತಿ ಮುಖ್ಯವಾದ ಲಕ್ಷಣ. ಇದೇ ಜೀವಿಗಳಿಗೂ ನಿರ್ಜೀವಿಗಳಿಗೂ ಇರುವ ಪ್ರಮುಖ ವ್ಯತ್ಯಾಸ. ಈ ಉಸಿರಾಟಕ್ಕೆ ಆಮ್ಲಜನಕ ಬೇಕು. ಅಂದರೆ ನಾವು ಆಮ್ಲಜನಕದ ಇತಿಹಾಸ ಕೆದಕಿದರೆ ಜೀವಿಯ ಇತಿಹಾಸ ತಿಳಿಯಬಹುದೇ ಎಂಬುದು ಈಗಿನ ಪ್ರಶ್ನೆ. ಈ ವಿಶ್ವದಲ್ಲಿ ಮೊದಲು ಕಾಣಿಸಿಕೊಂಡದ್ದು ಜಲಜನಕ ಮತ್ತು ಅದರ ಐಸೋಟೋಪುಗಳು. ಜಲಜನಕ ಹುಟ್ಟಿದ 8 ಮಿಲಿಯನ್ ವರ್ಷಗಳ ನಂತರ. ಆದರೆ ಆ ಉಷ್ಣತೆಯಲ್ಲಿ ಆಮ್ಲಜನಕ ಸ್ವತಂತ್ರ ಅಂದರೆ ಅಣು ಅಥವಾ ಪರಮಾಣು (molecular oxygen) ರೂಪದಲ್ಲಿರುವುದು ಸಾಧ್ಯವಿಲ್ಲ. ಭೂಮಿ ರೂಪುಗೊಳ್ಳುತ್ತಿರುವಾಗ ಕೂಡಾ ಆಮ್ಲಜನಕ ಸಂಯುಕ್ತಗಳ ರೂಪದಲ್ಲಿತ್ತೇ ಹೊರತು ಅಣು ರೂಪದಲ್ಲಿರಲಿಲ್ಲ. ಅಂದರೆ ಆಗಿನ‌ (ಜೀವ ಪೂರ್ವ) ವಾತಾವರಣದಲ್ಲಿದ್ದುದು ಸಾರಜನಕ, ಮಿಥೇನ್, ಅಮೋನಿಯಾ, ಇಂಗಾಲದ ಡೈಆಕ್ಸೈಡ್ ಇವುಗಳೇ. ಅಂದರೆ ಆಮ್ಲಜನಕ ಈಗಿನಂತೆ ಸ್ವತಂತ್ರ ರೂಪದಲ್ಲಿರಲೇ ಇಲ್ಲ. ಹಾಗಾದರೆ ಆಮ್ಲಜನಕ ಭೂ ವಾತಾವರಣದಲ್ಲಿ ಯಾವಾಗ ಕಾಣಿಸಿಕೊಂಡಿತು ಎಂದು ಹುಡುಕುತ್ತಾ ಹೋದರೆ ಅದು ಕಾಣಿಸಿದ್ದು 2.7 ಬಿಲಿಯನ್ ವರ್ಷಗಳ ಹಿಂದೆ ಎಂದು ತಿಳಿದು ಬರುತ್ತದೆ. ಉಸಿರಾಟ ಯೋಗ್ಯ ಗಾಳಿ ಎಂದರ 19.5% ಆಮ್ಲಜನಕವಿರಬೇಕು. ಅದಕ್ಕಿಂತ ಕಡಿಮೆಯಾದರೆ ಅದನ್ನು ಆಮ್ಲಜನಕ ಕೊರತೆ ಎಂದು ಪರಿಗಣಿಸಲಾಗುತ್ತದೆ. ಅಂದರೆ ಜೀವೋದ್ಭವ ಅದರ ನಂತರವೇ ಇರಬೇಕಲ್ಲ ಎಂದರೆ ಅಲ್ಲ. ಮೊದಲ ಜೀವದ ಕುರುಹು ಸಿಕ್ಕಿದ್ದು 3.7 ಬಿಲಿಯನ್ ವರ್ಷಗಳ ಹಿಂದೆ. ಅಂದರೆ ಆಮ್ಲಜನಕ ಇಲ್ಲದೇ ಜೀವ ಸಾಧ್ಯವೆಂದಾಯಿತು. 

ಅಂದರೆ ಉಸಿರಾಟವಿಲ್ಲದ ಜೀವಿ!! ಆ ಜೀವಿ ಯಾವುದು? ಆ ಜೀವಿಯ ಲಕ್ಷಣಗಳೇನು? ಮುಂದಿನ ಸಂಚಿಕೆಯಲ್ಲಿ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article