ಜೀವನ ಸಂಭ್ರಮ : ಸಂಚಿಕೆ - 134
Sunday, April 21, 2024
Edit
ಜೀವನ ಸಂಭ್ರಮ : ಸಂಚಿಕೆ - 134
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ.... ಇಂದು ನಾವು ಬೀತೋವೆನ್ ಎಂಬ ಸಂಗೀತ ಸಾಧಕನ ಜೀವನದ ಒಂದು ಘಟನೆ ನೋಡೋಣ. ಬೀತೋವೆನ್ ಪಿಯಾನೋ ವಾದಕ. ಈತನ ಸಂಗೀತ ಕಚೇರಿಗೆ ಜನಸಾಗರವೇ ಸೇರುತ್ತಿತ್ತು. ಅಷ್ಟು ಜನರಿದ್ದರೂ ಸಹ ಮೌನ ತುಂಬಿರುತ್ತಿತ್ತು. ಜನ ಸಂಗೀತದಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಒಮ್ಮೆ ಸಂಗೀತ ಕಚೇರಿ ನಡೆಯುತ್ತಿತ್ತು. ಯುವಕರು, ತರುಣರು, ತರುಣಿಯರು ಮತ್ತು ಮುದುಕರು ಎಲ್ಲರೂ ಸೇರಿದ್ದರು. ಎಲ್ಲರೂ ಸಂಗೀತದಲ್ಲಿ ಮಂತ್ರಮಗ್ನರಾಗಿದ್ದರು. ಸಂಗೀತ ಎಷ್ಟು ಹೊತ್ತು ನಡೆಯುತ್ತೋ ಅಷ್ಟು ಹೊತ್ತು ಹಾಗೆ ಮೌನವಾಗಿ ಎಲ್ಲರೂ ತಲ್ಲೀನರಾಗಿದ್ದರು. ಸಂಗೀತ ಕಾರ್ಯಕ್ರಮ ಮುಗಿಯಿತು. ಆಗ ಒಬ್ಬ ಸುಂದರ ತರುಣಿ ಬೀತೋವೆನ್ ನನ್ನು ಭೇಟಿ ಮಾಡಿ ಹೀಗೆ ಹೇಳಿದಳು. "ದೇವರು ನಿಮಗೆ ನೀಡಿರುವ ಸಂಗೀತವನ್ನು ನನಗೆ ನೀಡಿದ್ದರೆ ನಾನು ಹೀಗೆ ಆಗಬಹುದಿತ್ತೇನೋ" ಎಂದಳು. ಅದಕ್ಕೆ ಬೀತೋವೆನ್ ಬಹಳ ಸುಂದರವಾಗಿ ಹೇಳಿದ ಮಾತು ನನಗೆ, ನಿಮಗೆ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ. "ದೇವರು ನನಗೆ ನಿಮಗೆ ಹತ್ತು ಬೆರಳು, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಒಂದು ಬಾಯಿ, ಎರಡು ಕಾಲು, ಎರಡು ಕೈ, ದೇಹ, ಸುಂದರ ಮನಸ್ಸು, ಬುದ್ಧಿ , ಭಾವ ಮತ್ತು ಜ್ಞಾನ ನೀಡಿದ್ದಾನೆ. ನಾನು ಇವುಗಳನ್ನು ಚೆನ್ನಾಗಿ ಬಳಸಿದೆ. ಹೇಗೆ ಬಳಸಿದೆ ಅಂದರೆ ದಿನಕ್ಕೆ ಹತ್ತು ಗಂಟೆಯಂತೆ 40 ವರ್ಷ ಬಳಸುತ್ತಲೇ ಇದ್ದೇನೆ. ಆದ್ದರಿಂದ ಸುಂದರರಾಗ ರಚಿಸಲು ಸಾಧ್ಯವಾಯಿತು. ನೀನು ಬಳಸಲಿಲ್ಲ ಹಾಗಾಗಿ ಹೀಗೆ ಇದ್ದೀಯೇ...!!" ಈ ಮಾತು ಎಷ್ಟು ಸುಂದರ ಅಲ್ಲವೇ. ಬೀತೋವೆನ್ ಗೆ ನೀಡಿದ ಎಲ್ಲಾ ಸಾಧನಗಳನ್ನು ನಿಸರ್ಗ ನಮಗೂ ಅಳವಡಿಸಿದೆ. ಜಗತ್ತನ್ನ ಶ್ರೀಮಂತ ಮಾಡಿ ನೀನು ಶ್ರೀಮಂತವಾಗಿ, ಸುಂದರವಾಗಿ, ಶಾಂತಿ ಸಮಾಧಾನದಿಂದ ಬಾಳು ಎಂದು ನಿಸರ್ಗ ಹೇಳಿದೆ. ಜೊತೆಗೆ ಈ ನಿಸರ್ಗ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಸಾಮರ್ಥ್ಯ ಅಳವಡಿಸಿದೆ. ಅದನ್ನು ಗುರುತಿಸಿ, ನಮ್ಮ ದೇಹದ ಅವಯವಗಳನ್ನು ಬಳಸಿದ್ದೆ ಆದಲ್ಲಿ ನಾವೆಲ್ಲ ಒಂದೊಂದರಲ್ಲಿ ಶ್ರೀಮಂತರಾಗುತ್ತೇವೆ. ಅದರ ಸೌಂದರ್ಯ ಮನಸ್ಸು ತುಂಬಿ ಶಾಂತಿ ಸಮಾಧಾನದಿಂದ ಬದುಕಲು ಸಾಧ್ಯವಾಗುತ್ತದೆ. ಚೆನ್ನಾಗಿ ಬಳಸುವುದು ಎಂದರೆ ಅಭ್ಯಾಸ ಮಾಡುವುದು, ಪ್ರಯತ್ನ ಪಡುತ್ತಲೇ ಇರುವುದು. ಹೀಗೆ ಬುದ್ಧಿ , ಮನಸ್ಸು , ಜ್ಞಾನ , ಭಾವ ಮತ್ತು ದೇಹವನ್ನು ಚೆನ್ನಾಗಿ ಬಳಸಿದರೆ, ನಾವೆಲ್ಲರೂ ಸಂಗೀತ ತಜ್ಞರು, ಕಲಾತಜ್ಞರು, ಸಾಹಿತ್ಯದಲ್ಲಿ ತಜ್ಞತೆ, ಶಿಲ್ಪ ತಜ್ಞರು, ನಾಟಕ ತಜ್ಞರು, ತಂತ್ರಜ್ಞಾನ ತಜ್ಞರು, ವೈದ್ಯ ತಜ್ಞರು, ವಿಜ್ಞಾನ ತಜ್ಞರು ಹೀಗೆ ನಾನಾರಂಗದಲ್ಲಿ ತಜ್ಞರಾಗಬಹುದಲ್ಲವೇ...
ಕೆಲವು ವರ್ಷಗಳ ಹಿಂದೆ ಜೇಸುದಾಸ್, ಹೆಸರಾಂತ ಹಿನ್ನೆಲೆ ಗಾಯಕ, ಸಂಗೀತಜ್ಞ, ಕರ್ನಾಟಕದಲ್ಲಿ ಒಂದು ಕಾರ್ಯಕ್ರಮ ನೀಡಿದರು. ಆಗ ಅವರಿಗೆ ಸುಮಾರು 74 ಅಥವಾ 75 ವರ್ಷ ಇರಬಹುದು. ಧ್ವನಿ ಅಷ್ಟು ಅದ್ಭುತ. ಅವರು ಈಗಲೂ ದಿನಕ್ಕೆ ಹತ್ತು ಗಂಟೆಯಂತೆ ಅಭ್ಯಾಸ ಮಾಡುತ್ತಾರೆ ಎಂದರೆ ನಾವೆಲ್ಲ ಇದನ್ನು ನೋಡಿ ಕಲಿಯಬೇಕು. ಅವರೇ ಹೇಳಿದ್ದು. ಹಿಂದುಗಳು ಲಕ್ಷ್ಮಿಯನ್ನು ಹಣದ ದೇವತೆಯಾಗಿ, ಸರಸ್ವತಿಯನ್ನು ಜ್ಞಾನದ ದೇವತೆಯಾಗಿ ಪೂಜಿಸುತ್ತೇವೆ. ನಾನು ಕಾರ್ಯಕ್ರಮ ನೀಡಿ ನೇರವಾಗಿ ಮನೆಗೆ ಹೋಗುತ್ತೇನೆ. ಲಕ್ಷ್ಮಿ ನನ್ನ ಹಿಂದೆ ಬರುತ್ತಾಳೆ. ಅಂದರೆ ಜ್ಞಾನಕ್ಕೆ ಅಷ್ಟು ಮಹತ್ವ ನೀಡಿದವರು ಅವರು. ಜ್ಞಾನದ ಹಿಂದೆ ಲಕ್ಷ್ಮಿ ಹೋಗುತ್ತಾಳೆ, ವಿನಹ ಲಕ್ಷ್ಮಿಯ ಹಿಂದೆ ಜ್ಞಾನ ಹೋಗುವುದಿಲ್ಲ, ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************