-->
ಸವಿಜೇನು : ಸಂಚಿಕೆ - 03

ಸವಿಜೇನು : ಸಂಚಿಕೆ - 03

ಸವಿಜೇನು : ಸಂಚಿಕೆ - 03
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ  ಜೇನುಹುಳುಗಳ ಪಾತ್ರ  ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ   'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ   ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ  ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು
            

ಅಪ್ಪ ಕಟು ಸ್ವಾವಲಂಬಿ.‌ ತನಗೆ ಗೊತ್ತಿಲ್ಲದ ಎಂಥಹ ಕೆಲಸವನ್ನಾದರೂ  ತಾನು ನೋಡಿರುವ ಕೇಳಿರುವ ಜ್ಞಾನದಿಂದ  ಜನ ನೋಡಿ ನಕ್ಕರೂ ಬಿಡದೇ ಅದನ್ನು ಮಾಡಲು ಹಿಂಜರಿಯದೇ ಮಾಡಿ ಸಾಧಿಸುತ್ತಿದ್ದರು. ಅದು ಸರಿಯಾದ ಲೆಕ್ಕಚಾರವಾಗಿಯೋ, ಶಾಸ್ತ್ರೀಯವಾಗಿಯೋ  ಎನ್ನದೇ ತಮಗೆ ತೋಚಿದ ಐಡಿಯಾ ಮತ್ತು ಅವರದೇ Tools ಗಳಿಂದ ಮಾಡುತಿದ್ದರು. ನೋಡುಗರಿಗೆ ಅದು ನಗೆಪಾಟಲಿನಂತಿದ್ದರೂ, ಅಸಂಗತವೆನಿಸುವಂತೆ ತೋರುತಿದ್ದರೂ ಪಟ್ಟು ಬಿಡದೇ ಮಾಡುತ್ತಿದ್ದರು. ಇದಕ್ಕೆ ಒಂದು ಉದಾಹರಣೆ ಎಂದರೇ ಬೇಸಿಗೆ ಕಾಲದಲ್ಲಿ ಹೊಂಗೆಯ ಎಲೆಗಳನ್ನು ಗೋಣಿಚೀಲದಲ್ಲಿ ತರಿದು ತಂದು ತಿಪ್ಪೆಯಲ್ಲಿ ಗುಂಡಿತೋಡಿ ಮುಚ್ಚಬೇಕಿತ್ತು. ನಮ್ಮ ಸುತ್ತಮುತ್ತಲಿನ ಯಾರೊಬ್ಬರೂ ಈ ತರ ಕೆಲಸ ಮಾಡುತ್ತಿರಲಿಲ್ಲ. ನಾವು ಮಾತ್ರ ಈ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದೇವೆಂಬಂತೆ ನಮಗೆ ಏನೋ ಸಂಕೋಚ... ಕೆಲವರು ನಾವು ಈ ಕೆಲಸ ಮಾಡುವುದನ್ನು  ನೋಡಿದವರು ಹ್ಹ ಹ್ಹ ಎಂದು  ನಕ್ಕವರೂ ಇದ್ದಾರೆ. ಹೀಯಾಳಿಸಿದವರೂ ಇದ್ದಾರೆ. ನಾನೂ ನನ್ನ ತಮ್ಮ ಈ ವಿಚಾರಕ್ಕೆ ಸೀಮೆಯಾಗೆ ಇಲ್ಲದ ಕೆಲಸ ನೀನೊಬ್ಬನೇ ಮಾಡಿಸುತ್ತಿದ್ದೀಯಾ ಎಂದು  ಅಪ್ಪನನ್ನು  ವಿರೋಧಿಸಿ ಮಾತಾಡಿದ್ದು ಇದೆ.

ತೊಂಬತ್ತನೆಯ ಇಸ್ವಿಯಲ್ಲಿ ನಮಗೆ ಮನೆ ಇರಲಿಲ್ಲ. ಗುಡಿಸಲೂ ಅಲ್ಲದ, ಜಂತಿಯ ಮನೆಯೂ ಅಲ್ಲದ, ಅತ್ತ ಪೂರಾ ತಗಡಿನ (SHEET) ಮನೆಯೂ ಅಲ್ಲದ ಸ್ವಲ್ಪ ಇಟ್ಟಿಗೆ, ಸ್ವಲ್ಪ ಕಲ್ಲಿನ, ಸ್ವಲ್ಪ ಜಂತಿಹಾಕಿದ ಎಲ್ಲಾ ಮಿಕ್ಸ್ ಮಾಡಿ ಕಟ್ಟಿದ ಒಂದು ಸಣ್ಣ ಕಚ್ಚಾಮನೆ. ಆರೆಂಟು ಜನಗಳಿಗೆ ಮನೆಯೊಳಗೆ ಜಾಗ ಆಗುತ್ತಿರಲಿಲ್ಲವಾದರೂ ಆಕಾಶವೇ ನಮಗೆ ಸೂರಾಗಿತ್ತು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮಳೆ ಬಂದ ದಿನಗಳು ಮಾತ್ರ ನಾವು ಮಳೆ ಬಿಡುವವರೆಗೆ ಮನೆಯೊಳಗೆ  ಆಸರೆ ಪಡೆದುಕೊಳ್ಳುತ್ತಿದ್ದೆವು. ಉಳಿದ ಎಲ್ಲಾ ದಿನಗಳಲ್ಲೂ ನಾವೆಲ್ಲರೂ ಮನೆಯ ಹೊರಗಡೆಯೇ  ಮಲಗುತ್ತಿದ್ದುದು. ಮನೆಕಟ್ಟಲು ಜಾಗವನ್ನೇನೋ ದಾಯಾದಿಗಳ ಕಲಹದೊಂದಿಗೆ ಗೊತ್ತು ಮಾಡಿಕೊಂಡರು. ಆದರೆ ಮನೆಕಟ್ಟಲು ಕಲ್ಲಾಗಲಿ ಇಟ್ಟಿಗೆಯಾಗಲಿ ಇರಲಿಲ್ಲ. ಕೊಂಡುಕೊಳ್ಳಬೇಕಿತ್ತು. ಕೊಂಡುಕೊಳ್ಳಲು ಅಷ್ಟು ದುಡ್ಡು ಕಾಸಾಗಲೀ ನಮ್ಮ ತಂದೆಯ ಬಳಿ ಆಗ ಎಲ್ಲಿ ಬರಬೇಕು..?? ಇದ್ದ ಆರು ಜನ ಮಕ್ಕಳ ಹೊಟ್ಟೆ ಬಟ್ಟೆಗೂ ಸಾಲದ ಜೀವನ. ಅದಕ್ಕೆ ಅಪ್ಪ  ಮುಂದಿನ ವರ್ಷ ಮನೆ ಕಟ್ಸೋಣ ಎಂದು ಇರುವ ಸಣ್ಣ ಮನೆಯಲ್ಲೇ ವಾಸವಾಗಿ ಸುಮ್ಮನಾದರು.

ನಮ್ಮೂರು ಬಂಜಗೆರೆ ಸಮೀಪ 'ರಾಮನ ಬಂಡೆ' ಎಂದು ಒಂದು ಮಟ್ಟಿ (ಸಣ್ಣಗುಡ್ಡದ ಆಕಾರದ ಬಂಡೆ) ಇದೆ. ಅದೊಂದು ಸಾಧಾರಣ ಏಕಶಿಲಾ ಬಂಡೆ. ನೆಲಮಟ್ಟದಿಂದ ಸುಮಾರು ನಲವತ್ತರಿಂದ ಅರವತ್ತು ಅಡಿ ಎತ್ತರ, ಐದುನೂರು ಮೀಟರ್ ಉದ್ದ ಮುನ್ನೂರು ಮೀಟರ್ ಅಗಲ ಇರಬಹುದು. ಅದರ ಮೇಲೆ ಒಂದು ಬೆಣಚು ಕಲ್ಲಿನ ರಚನೆ ಬಂಡೆಯುದ್ದಕ್ಕೂ  ಉತ್ತರ-ದಕ್ಷಿಣವಾಗಿ ಅರ್ಧ ಅಡಿ ಅಗಲದಷ್ಟು  ಗೆರೆ ಎಳೆದಂತ ಶಿಲಾರಚನೆ ಇದೆ. ಈ ಗೆರೆ ರಾವಣ ಸೀತಾಪಹರಣದ ವೇಳೆ ಪುಷ್ಪಕ ವಿಮಾನದಲ್ಲಿ ಸಾಗುವಾಗ ತನ್ನ ಸೆರಗು ಬಂಡೆಯಮೇಲೆ ಸವರಿ ಹೋದದ್ದರಿಂದ ಆ  ರೇಖೆ ರಚನೆ ಆಗಿದೆಯೆಂದು, ಜಂಟಿಗರಾಮೇಶ್ವರದಲ್ಲಿ ಜಟಾಯುವಿನ ಅಂತ್ಯ ಸಂಸ್ಕಾರ ಮಾಡಿದ ರಾಮ ಮತ್ತು ಲಕ್ಷ್ಮಣರು ಅದೇ ನೇರಕ್ಕೆ ದಕ್ಷಿಣ ದಿಕ್ಕಿಗೆ ಬರುವಾಗ ಅವರು ಆ ಮಟ್ಟಿಗೆ ಬೇಟಿಕೊಟ್ಟಿದ್ದರಂತೆ ಅಂದಿನಿಂದ ಅದು 'ರಾಮನ ಬಂಡೆ' ಎಂದು ಕರೆಯುವರು. ಆ ತರನೋಡಿದರೆ  ಕಾಕತಾಳೀಯವೋ ಅಥವಾ ಆಕಸ್ಮಿಕವೋ ಎಂಬಂತೆ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮನಬಂಡೆ ಹೆಚ್ಚು ಕಡಿಮೆ ಒಂದೇ ಸರಳರೇಖೆಯಲ್ಲಿವೆ. ಆದರೆ ಆ ಬೆಣಚು ಕಲ್ಲಿನ ಶಿಲಾ ರಚನೆ ಸೀತೆಯ ಸೆರಗಿಗೆ ಹೋಲಿಕೆ ಮಾಡಿದ ನಮ್ಮ ಪೂರ್ವಜರು ರಾಮನ ಮೇಲಿನ ಗೌರವ, ಭಕ್ತಿ ಜನಮಾನಸದಲ್ಲಿ ಯಾವ ಪರಿ ಇತ್ತು ಎಂಬುದಕ್ಕೆ ಉದಾಹರಣೆ ಕೊಡಬಹುದು.

ಮುಂದಿನ ವರ್ಷ ಮನೆಕಟ್ಟುವ ಯೋಜನೆ, ಯೋಚನೆ ಇದ್ದುದರಿಂದ  ಮನೆಕಟ್ಟಲು ಬೇಕಾಗುವ ಮುಖ್ಯ ಪರಿಕರಗಳನ್ನು ಜೋಡಿಸಿಕೊಳ್ಳುವ ಕೆಲಸ ಆರಂಭಿಸಿಕೊಂಡರು. ಅದಕ್ಕಾಗಿ ರಾಮನ ಬಂಡೆಯ ಮೇಲೆ ಸೈಜುಗಲ್ಲುಗಳನ್ನು ಹೊಡೆಯುವುದು.!ಹೆಬ್ಬಂಡೆಯಲ್ಲಿ  ಡೈನಮೈಟ್ ಅಥವಾ ಯಂತ್ರಗಳು ಬಳಸದೇ ಸೈಜುಗಲ್ಲು ಹೊಡೆಯುವುದು ತುಂಬಾ ಸವಾಲಿನ ಕೆಲಸ. ಇವ್ಯಾವುಗಳ ಸಹಾಯ ಇಲ್ಲದೇ ಎತ್ತಿನಗಾಡಿ ಕಟ್ಟಿಕೊಂಡು  ಬೆಂಕಿಯಲ್ಲಿ ಸುಡಬಹುದಾದ ದಹನ ವಸ್ತುಗಳ ಉರುವಲುಗಳನ್ನು ರಾಮನಬಂಡೆಗೆ ಸಾಗಿಸಿದರು. ದರಕಾಸಿನ ಜಮೀನಿನಲ್ಲಿ ಅರ್ಧ ಶತಮಾನದ ಹಳೆಯ ಸರ್ಕಾರಿ ಜಾಲಿ ಮರದ ಬೇರು ಸಹಿತ ಬುಡಗಳನ್ನು ಜೆ ಸಿ ಬಿ ಇಲ್ಲದ ಕಾಲದಲ್ಲಿ ನಮ್ಮ ತಂದೆ ತಾಯಂದಿರೇ ಎಬ್ಬಿಸಿ ಹಾಕಿದದ್ದರು‌. ಅವೆಲ್ಲವುಗಳನ್ನು  ಎತ್ತಿನಗಾಡಿಯಲ್ಲಿ  ಆ ಬಂಡೆಯ ಮೇಲೆ ಏರಿ ರಾಶಿ ಮಾಡಿದರು. ನಮ್ಮದು ಎತ್ತಿನಗಾಡಿಯಲ್ಲಿ ಸವಾರಿ ಮಾತ್ರ. ಬೇಸಿಗೆಯಲ್ಲಿ ಆ ಬಂಡೆಯ ಮೇಲೆ ಆ ಉರುವಲು ಎಲ್ಲಾ ಹಾಕಿ ದೊಡ್ಡ ಬೆಂಕಿಯನ್ನು ಹಚ್ಚಿ  ಸುಡುತ್ತಿದ್ದರು. ಸುಟ್ಟ ಸ್ಥಳದಲ್ಲಿಯೇ ದೊಡ್ಡ ಸುತ್ತಿಗೆ ಮತ್ತು ಮೇಕು ಇಟ್ಟು ಬಂಡೆಯನ್ನು ಹೊಡೆಯುತ್ತಿದ್ದರು. ಬೆಂಕಿಯ ಶಾಖದ ಪ್ರಮಾಣ ಎಷ್ಟಿರುತ್ತೋ ಅಷ್ಟು ಗಾತ್ರದ ಬಂಡೆ ಸಡಿಲವಾಗಿ ಪದರ ಪದರದಂತೆ ಪಟ ಪಟನೇ ಸಿಡಿದು ತೆರೆದುಕೊಳ್ಳುತ್ತಿದ್ದವು. ಆ ಬಂಡೆಯನ್ನು ಪುನಃ ಬೇಕಾದ ಅಳತೆಗೆ ಕಡಿದುಕೊಳ್ಳಬೇಕಿತ್ತು.  ಯಾವ ಅಳತೆಗೆ ಬೇಕೋ ಆ ಅಳತೆಗೆ ಕಲ್ಲುಗಳನ್ನಾಗಿ ಮಾಡುತ್ತಿದ್ದರು. ಆದರೆ ಈ ಕೆಲಸ ಅನಿವಾರ್ಯವಾಗಿ ಪ್ರಯೋಗಾರ್ಥವಾಗಿ, ದುಡ್ಡಿಲ್ಲದೇ  ಮನೆ ಕಟ್ಟಲು ಕಲ್ಲು ಒಟ್ಟುಮಾಡಲು ಮಾಡಿದ್ದು ಅವರು. ಆದರೆ ೨೦×೩೦ ಅಳತೆಯ ಮನೆಗೆ ಬೇಕಾಗುವ ಪೂರಾ ಕಲ್ಲು ಬಂಡೆಗಳನ್ನು  ಸಂಪೂರ್ಣ ಅಪ್ಪ ಅಮ್ಮ ಬೆವರು ಸುರಿಸಿ ಬೆಂಕಿಯಂತೆ ಸುಡುವ ಬಂಡೆಯ ಮೇಲೆ ಬರಿಗಾಲಲ್ಲಿ ಕಲ್ಲು ಒಡೆದು ಮನೆಯ ಕಟ್ಟಿದ್ದರು. ನಾನು ಆ ಬಂಡೆಗಲ್ಲು ಇರುವಲ್ಲಿಗೆ ಆಗಾಗ ಹೋಗುತ್ತಿದ್ದೆ. ಬಿರಿ ಬಿಸಿಲಿನಲ್ಲಿ ಬರಿಗಾಲಲ್ಲಿ ಬಂಡೆಯ ಮೇಲೆ ನಿಲ್ಲಲಾಗದೇ, ಇರಲಾಗದೇ ಅಲ್ಲೇ ಸಮೀಪ ಲಕ್ಕಲಿ ಗಿಡಗಳು, ಹೊಂಗೆ ಗಿಡಗಳು ಹಾಗೂ ಕತ್ತಾಳಿಯ ಸಾಲು ಇತ್ತು. ಅಲ್ಲಿ ನಾನು ಯಾವಾಗಲೂ ಕುಳಿತಿರುತ್ತಿದ್ದೆ. ಅಪ್ಪ ಅಮ್ಮ ನೀರು ಕೇಳಿದರೆ ಹೋಗಿ ಕೊಟ್ಟು ಬರುತ್ತಿದ್ದೆ. ಆದ್ದರಿಂದ ಅದೊಂದು ಸ್ಥಳ ನನಗೆ ಸವಿನೆನಪಾಗಿತ್ತು. ಆಗಾಗ ಅತ್ತ ಕಡೆ ಹಲವು ವರ್ಷಗಳ ನಂತರವೂ ಹೋಗಿಬರುತ್ತಿದ್ದೆ. 

ಒಂದು ಬೇಸಿಗೆಯಲ್ಲಿ ನನ್ನ ವ್ಯಾಪ್ತಿಯ ಜೇನು ಹುಡುಕಾಟ ಮುಗಿಸಿ ಎಲ್ಲೂ ತುಪ್ಪ ರೆಡಿ ಇರುವ ಜೇನು ಇಲ್ಲವೆಂದಾಗ  ಈ ಬಂಡೆ ಸಮೀಪ  ಜೇನು ಹುಡುಕಲು ಹೋಗಿದ್ದೆ. ಹಲವು ವರ್ಷಗಳ ಹಿಂದೆ ಕಾಲ ಕಳೆದ ಸವಿನೆನಪುಗಳ ಸ್ಮರಿಸುತ್ತಾ  ಆ ಸಾಲಿನಲ್ಲಿ ಹಾಗೆ ಹೋಗುತ್ತಿದ್ದಾಗ ಆ ಕತ್ತಾಳೆ ಗುಮ್ಮಿಯಲ್ಲಿ ನೆಲಕ್ಕೆ ಬಿಲ್ಲಿನಂತೆ ಬಾಗಿರುವ ಒಣಗಿದ ಕತ್ತಾಳಿಗರಿಯಲ್ಲಿ ಒಂದು ಅಡಿ ಉದ್ಧದ ಎರಡು ಅಡಿ ಅಗಲದ ಜೇನು ನೋಡಿದೆ. ನನಗೆ ಅದು ತೆಗೆಯುವುದು ಕ್ಲಿಷ್ಟಕರವಾದ್ದರಿಂದ ಮನೆಗೆ ಬಂದು ಅಣ್ಣ ತಿಪ್ಪನನ್ನು ಕರೆದುಕೊಂಡು ಹೋದೆ. ಇಬ್ಬರೂ ಬಂದು ಕತ್ತಾಳಿಗರಿಯನ್ನು ಕುಡುಗೋಲಿನಿಂದ ಗರಿ ಕೊಯ್ಯಲು ಮುಂದಾಗುವಾಗ ಅವನು ಅಲ್ಲೇ ಅದೇ ಕತ್ತಾಳಿ ಗುಮ್ಮಿಯಲ್ಲಿ ಆಚೆ ಬದಿಯಲ್ಲಿ ಇನ್ನೊಂದು ಜೇನು ನೋಡಿದ. ಅದು ದೊಡ್ಡದ ಸಣ್ಣದಾ ಎಂದು ನಾನು  ಬಗ್ಗಿ ಬಗ್ಗಿ ನೋಡಲು ನೋಡುವಾಗ ಅಲ್ಲೇ ಸಾಧಾರಣ ಮುಳ್ಳು ಬೇಲಿಗಳಲ್ಲಿ ಇನ್ನೂ ಒಂದು ಜೇನು ಕಂಡಿತು. ಹಾಗೇ ಮೇಲೆ ನೋಡಲು ಹೊಂಗೆಯ ಮರದ ಕೊಂಬೆಯಲ್ಲಿ ಒಂದು ಪಿಟ್ ಜೇನು ಇಟ್ಟಿದೆ. ಒಟ್ಟು ನಾಲ್ಕು ಜೇನುಗಳು.! ಅವು ಎಂಟತ್ತು ಅಡಿಗಳ ಅಂತರದಲ್ಲಿ ಇವೆ. ಈಗ ನಮಗೆ ಯಾವುದನ್ನು ಮೊದಲು ತೆಗೆಯಬೇಕು? ಯಾವುದನ್ನೂ ನಂತರ ತೆಗೆಯಲಿ ?? ಒಂದನ್ನು ಮುಟ್ಟಿದರೆ ಎಲ್ಲಾ ಗೂಡಿನಲ್ಲಿರುವ ನೊಣಗಳು ಒಮ್ಮೆಗೇ ಧಾಳಿಮಾಡಿದರೆ ಏನು ಮಾಡುವುದು?? ಎಂದು ಗೊಂದಲವಾಯಿತು. ನಾವಿಬ್ಬರೂ ಅಲ್ಲಿ ಓಡಾಡುತ್ತಿದ್ದ ಕಾರಣವಾಗಿ ಆ ಜೇನು ಹುಳುಗಳು ಝೀ.... ಝೀ... ಎಂದು ಝೇಂಕರಿಸುತ್ತಿವೆ. ಅದರ ಶಬ್ದ ನಮಗೆ ಒಂದರ ನಂತರ ಒಂದರಂತೆ ಪಿಸುಮಾತಿನಂತೆ ಕೇಳಿಸುತ್ತದೆ. ಅಪಾಯದ ಸನ್ನಿವೇಶ ಅವುಗಳಿಗೆ ಗೊತ್ತಾಗಿಟ್ಟಿದೆ. ಈಗ ಯಾವ ಜೇನನ್ನು ನಾವು ಕೀಳಲು ಮುಂದಾದರೆ ಎಲ್ಲಾ ಹುಳುಗಳು ಒಮ್ಮೆಲೆ ರೇಗಿ ಹಿಂದೆ ಮುಂದೆ ಮೇಲಿನಿಂದಲೂ ಧಾಳಿ ಮಾಡಿದರೆ??? ಅವು ಹಾಗೆ ಮಾಡಬಹುದೆಂಬ ಖಾತರಿಯೂ ನಮಗಿರಲಿಲ್ಲ. ಇದ್ದದ್ದು ಅನುಮಾನ. ಅನುಮಾನದಲ್ಲೆ ಜೇನಿಗೆ ಅಡ್ಡಲಾಗಿದ್ದ ಒಂದು ಕತ್ತಾಳಿ ಗರಿಯನ್ನು ಕತ್ತರಿಸಲು  ರಮ್ಮನೆ ಮುಖಕ್ಕೆ ಹಾರಿದ ಹತ್ತಾರು ಹುಳುಗಳು ತಿಪ್ಪನ ಹಣೆಗೊಂದು ಕೈಗೊಂದು ಚಟಾರನೇ ಹೊಡೆದವು. ನನ್ನ ಮೇಲೂ ಧಾಳಿಮಾಡಿದವಾದರೂ ನಾನು ಕೈ ಬೀಸುತ್ತಾ  ಓಡಿ ಹೋಗಿದ್ದಕ್ಕೆ  ಹೊಡೆತದಿಂದ ಪಾರಾದೆ. ಆ ಹೊಡೆತದ ರಭಸಕ್ಕೆ ಕೀಳಲು ಪ್ರಯತ್ನಿಸಿದ ಗೂಡಿನ ಹುಳುಗಳೇ ಪ್ರಯತ್ನಿಸಿದವೋ ಇತರೆ ಗೂಡಿನ ಹುಳುಗಳೇ ಪ್ರಯತ್ನಿಸಿದವೋ ಗೊಂದಲ ಮತ್ತು  ಭಯವಾಗಿ ಅಪ್ಪನನ್ನು ಕರೆದುಕೊಂಡು ಬರಲು  ಅಲ್ಲೇ ಸಮೀಪದ ಮನೆಗೆ ಬಂದೆವು.
ಮನೆಗೆ ಬಂದ ನಾನು ".. ಅಪ್ಪಾ... ಬಂಡೆ ಹತ್ರ ನಾಲ್ಕು ಜೇನು ಇದ್ದಾವೆ  ಕಿತ್ಕೊಂಡು ಬರಾಣ ಬಾ.." ಎಂದು ಕರೆದೆ.. "ಯಾಕ್ರೋ ಇಬ್ಬರು ಮನುಷ್ಯರು ಹೋಗಿ ಹಿಂದಕ್ಕೆ ಬಂದ್ರ??? ನಿಮ್ ಕೈಯಲ್ಲಿ ಆಗಲಿಲ್ಲವಾ??" ....  "ಅಲ್ಲಿ ನಾಲ್ಕು ಜೇನು ಒಂದೇ ಹತ್ರ ಇದಾವೆ... ಮೇಲೆ ಕಾಣಿಗೆ (ಹೊಂಗೆ) ಮರದಲ್ಲಿ ಒಂದು ಇದೆ.  ಒಂದನ್ನು ಕೀಳಲು ಹೋದರೆ ಬೇರೆವೆಲ್ಲವೂ ಎದ್ದು ಸರ್ವದಿಕ್ಕಿನಲ್ಲೂ ಬಂದು ಹೆಂಗಬೇಕೋ ಹಂಗೆ ಕಚ್ಚಿದ್ರೆ ಅಂತ ಭಯ... ಆಯಿತು."
"ಏನು ಆಗಲ್ಲ ಗಾಳಿ ಯಾವ ದಿಕ್ಕಿನಿಂದ ಬೀಸುವುದೋ ಅದರ ವಿರುದ್ಧದ ದಿಕ್ಕಿಗೆ ನೀವು ಇರಬೇಕು. ಗಾಳಿ ಮೇಲ್ಗಡೆ (ಪಶ್ಚಿಮ) ಯಿಂದ ಬೀಸಿದರೆ ನೀವು ಕೆಳಗಡೆ (ಪೂರ್ವ) ದಿಕ್ಕಿನಲ್ಲಿ ಇರಬೇಕು. ಕೆಳಗಡೆಯಿಂದ (ಪೂರ್ವ) ಗಾಳಿ ಬೀಸುತ್ತಿದ್ದರೆ ನೀವು ಮೇಲ್ಗಡೆ (ಪಶ್ಚಿಮ) ಗೆ ನಿಂತಿರಬೇಕು" ಎಂದು ಹೇಳಿದರು. ಗಾಳಿಯ ದಿಕ್ಕು ಮತ್ತು ಜೇನು ತೆಗೆಯುವವರು ಇರುವ ದಿಕ್ಕು ಒಂದೇ ಆದರೆ ಅವುಗಳಿಗೆ ವಾಸನೆ ಗೊತ್ತಾಗಿ ಅವು ನಿಮ್ಮ ಮೇಲೆ ಕಚ್ಚಲು ಎರಗುವವು ಎಂದೂ ಮನೆಯಲ್ಲಿಯೇ ಡೆಮೊ ಕೊಟ್ಟು ಹೋಗಿ ಕಿತ್ಕೊಂಡ್ ಬನ್ನಿ ಎಂದು ಮತ್ತೆ ಕಳುಹಿಸಿದರು. ಪುನಃ ಶಸ್ತ್ರಾಸ್ತ್ರ ಹಿಡಿದು, ಒಂದು ತಟ್ಟೆಯನ್ನೂ ಹಿಡಿದು ಮತ್ತೆ ಆ ಜೇನುಗಳು ಇದ್ದ ಸ್ಥಳಕ್ಕೆ ಬಂದು ತಲುಪಿದೆವು. ಬೇಸಿಗೆ ಆಗಿದ್ದರಿಂದ ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ ಎಂದು ತಿಳಿಯಲು ನಾವು ವಿಫಲರಾದೆವು. ಆಗ ನಮಗೆ ಬಳಕೆ ಇದ್ದದ್ದು ಪೂರ್ವ ದಿಕ್ಕನ್ನು ಕೆಳಗಡೆ ಪಶ್ಚಿಮಕ್ಕೆ ಮೇಲುಗಡೆ ಎಂದು ಇನ್ನೂ ದಕ್ಷಿಣಕ್ಕೆ ಗುಡ್ಡದ ಕಡೆ ಉತ್ತರಕ್ಕೆ ಈ ರಾಮನ ಬಂಡೆಯೇ ನಮಗೆ ಲ್ಯಾಂಡ್ ಮಾರ್ಕ್. ಅವುಗಳಿಗಷ್ಟೇ ನನ್ನ ದಿಕ್ಕುಗಳ ಜ್ಞಾನ. ಅಲ್ಲಿಗೆ ಬಂದು ನೋಡಿದರೆ ಗಾಳಿಯೇ ಬೀಸುತ್ತಿಲ್ಲ. ಒಂದು ಎಲೆಯೂ ಅಲಗಾಡುತ್ತಿಲ್ಲ! ಮರಳಿನ ಮೇಲೆಯೇ ನಿಂತಿದ್ದ ನಾವು ಒಂದು ಹಿಡಿ ಮರಳನ್ನು  ಎತ್ತಿ ತೂರಿದೆವು ತೂರಿದಾಗ ಗಾಳಿ ಸ್ವಲ್ಪ ಬೀಸುವ ಪ್ರಮಾಣ ಸ್ವಲ್ಪಮಟ್ಟಿಗೆ ಇದ್ದಿದ್ದರೂ ಗೊತ್ತಾಗುತ್ತಿತ್ತು. ಆದರೆ ಆ ಮಣ್ಣಿನ  ಒಂದು ದೂಳು ಕೂಡ ಆ ಕಡೆ ಈ ಕಡೆಗೆ ಹೋಗದೇ, ಚದುರದೇ ಈ ಬಾಂಬ್ ಹಾಕಿದಾಗ ಸುತ್ತಲೂ ಸ್ಪೋಟವಾಗುವ ಹಾಗೆ ದೂಳು ಸುತ್ತಲೂ ಸುತ್ತಿಕೊಳ್ಳುತ್ತಿತ್ತು. ನಾವು ಆ ದಿನಗಲ್ಲಿ ರಾತ್ರಿ ಹೊರಗಡೆ ಮಲಗುತ್ತಿದ್ದೆವು. ತಡರಾತ್ರಿವರೆಗೂ ಸಹಿಸಲಾಗದ ಸೆಕೆ. ಮಧ್ಯರಾತ್ರಿ ಹನ್ನೆರಡು ಒಂದು ಗಂಟೆಯಿಂದ ಸಾಧಾರಣವಾಗಿ ಪಶ್ಚಿಮ ದಿಕ್ಕಿನಿಂದ ಗಾಳಿಯು ಬೀಸುತ್ತಿತ್ತು. ಮುಂಜಾನೆ ಬಿಸಿಲಿನ ಪ್ರಮಾಣ ಹೆಚ್ಚಾದಂತೆ ಗಾಳಿ ಮಾಯ ಆಗುತ್ತಿತ್ತು.
"ತಿಪ್ಪ ಇಲ್ಲಿ ಬಾರ ಈ ಕಡೆ ನಿಂತುಕೊಂಡು ತೆಗಿ ನೀನು. ಗಾಳಿ ಹಿಂಗೇ ಮೇಲ್ಗಡೆಯಿಂದನೇ ಬೀಸೋದು" ಎಂದೆ ನಾನು.. "ಹ್ಞೂ ಸರಿ ನೋಡೋಣ" ಎಂದು ತಿಪ್ಪ ಪೂರ್ವಕ್ಕೆ  ಅಂದರೆ ಪಶ್ಚಿಮಾಭಿಮುಖವಾಗಿ ನಿಂತು ಆ ಕತ್ತಾಳಿ ಗುಮ್ಮಿಯಲ್ಲಿರುವ ಜೇನನ್ನು ತೆಗೆಯಲು ಶುರುಮಾಡಿದ. ನಾನು ಈ ಮೂರು ಗೂಡಿನ ಹುಳುಗಳು ಆಕ್ರಮಣ ಮಾಡಿಯಾವು ಎಂದು ಗಮನಕೊಟ್ಟು ನೋಡುತಲಿದ್ದೆ. ಇವನು  ಈ ಹುಳುಗಳು ಎಬ್ಬಿಸಿದಾಗ ಅಕ್ಕ ಪಕ್ಕ ಇದ್ದ ಹುಳುಗಳು ಎದ್ದೇಳಲೇ ಇಲ್ಲ. ಆದರೆ ಶತ್ರುಗಳ ಧಾಳಿ ಆಗಿದೆ ಎಂಬುದು ಅವುಗಳಿಗೆ ಸ್ಪಸ್ಟವಾಗಿ ಗೊತ್ತಾಗಿಹೋಗಿತ್ತು. ಯಾಕಂದ್ರೆ ನಂತರ ತೆಗೆದ ಜೇನುಗಳಲ್ಲಿ ತುಪ್ಪ ಕಡಿಮೆಯಾಗಿತ್ತು. ಶತ್ರುಗಳ ಧಾಳಿಯಾದರೆ ಅವು ಕುಳಿತ ಸ್ಥಳದಲ್ಲೇ  ನೂರಾರು ಹುಳುಗಳು ಒಟ್ಟಿಗೆ ಝೀ...ಝೀ... ಎಂದು ಶಬ್ಧ ಬರುವ ಹಾಗೆ ಗುಯ್ ಗುಡುತ್ತಾವೆ. ಇದು  ಹೊರಗಡೆಯೆಲ್ಲಾ ಕೇಳುವುದಿಲ್ಲ ಆ ಜೇನಿನ ಕೇಂದ್ರಭಾಗದಿಂದ  ಎಂಟತ್ತು  ಅಡಿಗಳ ಅಂತರದವರೆಗೆ ಪಿಸುಮಾತಿನಂತೆ ಕೇಳಿಸುವುದು. ಇದು ಅವುಗಳಿಗೆ ಅವೇ  ಕೊಟ್ಟುಕೊಳ್ಳುವ ಎಚ್ಚರಿಕೆಯ  ಸಂದೇಶ. ಇದಾದ ಕೆಲವೇ ಸೆಕೆಂಡ್ಗಳಲ್ಲಿ ಹುಳುಗಳು ಜೇನಿನ ತಲೆಯ ಭಾಗಕ್ಕೆ ಹತ್ತಿ  ಕಷ್ಟ ಪಟ್ಟು ತಮ್ಮ ಸಂತಾನಕ್ಕಾಗಿ ಸ್ಟಾಕ್ ಮಾಡಿರುವ ಆಹಾರ ಜೇನು ತುಪ್ಪವನ್ನು  ವೇಗವಾಗಿ ಹೀರಲು ಶುರುಮಾಡುತ್ತಾವೆ. ಇತರೆ ಹುಳುಗಳು ಶತ್ರುಗಳ ವಿರುದ್ಧ ಧಾಳಿ ಮಾಡಲು ಸಿದ್ಧವಾಗಿ ಹೆಲಿಕಾಪ್ಟರ್ ಇನ್ನೇನು ಹಾರುವುದು ಎಂಬಂತೆ ರೆಕ್ಕೆ ಬಡಿಯುತ್ತಾ ಕುಳಿತುಕೊಂಡಿರುತ್ತಾವೆ. ಒಂದು ಸಣ್ಣ ಕಡ್ಡಿ ಹುಳುಗಳ ಬಳಿ ಚಾಚಿದರೂ ಹಿಡಿದು ಕಚ್ಚುವಂತೆ ರೋಷಾವೇಷದಿ ಬಗ್ಗುವವು ಇಲ್ಲ ಹಾರುವವು. ಕೆಲವೊಮ್ಮೆ ನಾನು ದಟ್ಟವಾದ ಪೊದೆಗಳಲ್ಲಿ  ಜೇನಿದೆ ಎಂದು ಹುಳುಗಳ ಓಡಾಟದಿಂದ  ಗೊತ್ತಾಗಿರತ್ತೆ. ಆದರೆ ಅದು ಎಲ್ಲಿದೆ ಎಂದು ನಿಖರ ಸ್ಥಳ ಎಷ್ಟು ಹುಡುಕಿದರೂ ಕಾಣುವುದಿಲ್ಲ. ಆಗ ಅವು ಮಾಡುವ ಈ ಪಿಸುಮಾತಿನಂತಹ ಝೀ ಗುಡುವ ಝೇಂಕಾರದಿಂದಲೇ  ನಾನು ಖಚಿತ ಸ್ಥಳ ಪತ್ತೆ ಹಚ್ಚುತ್ತಿದ್ದೆ. 
ಅಂದು ಅಪ್ಪ ಹೇಳಿದ  ಆ ಗಾಳಿ  ಬೀಸುವ ವಿರುದ್ಧ ದಿಕ್ಕಿನಲ್ಲಿ ಜೇನು ತೆಗೆಯಲು ಆರಂಭಿಸಬೇಕು ಎನ್ನುವ ಟ್ರಿಕ್ ಬಹಳ ಚೆನ್ನಾಗಿ ವರ್ಕೌಟ್ ಆಗಿತ್ತು. ಅದರಂತೆ ಒಂದು ಹುಳುವೂ ಕಚ್ಚದಂತೆ ನಾಲ್ಕೂ ಜೇನನ್ನು ಒಂದಾದ ನಂತರ ಒಂದರಂತೆ ಕ್ರಮವಾಗಿ ಏಕ ಕಾಲದಲ್ಲಿ ತೆಗೆದುಕೊಂಡು ಶಿಕಾರಿಗೆ ಹೋದವರು ಭರ್ಜರಿ ಬೇಟೆ ಆದಾಗ ತಮಟೆ ನಗಾರಿ ಕೇಕೆ ಹಾಕುತ್ತಾ ಬರುವಂತೆ ಖುಷಿಯಿಂದಲೇ ಮನೆಗೆ ಬಂದು ಜೇನು ತುಪ್ಪ ತಿಂದು 180 ಮಿಲಿ ಲೀ ರಾಜಾ ಬಾಟಲಿಗೆ ಹಾಕಿ ಎತ್ತಿಟ್ಟೆವು. (ಮುಂದುವರೆಯುವುದು)
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************

ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ....
ದಟ್ಟವಾದ ಶೇಗುಣಸೆ ಪೊದರಿನ ಎತ್ತರದಲ್ಲಿ ಒಂದು ಜೇನು ಇದೆ... ಪೊದರೊಳಗೆ ದೊಡ್ಡದೊಂದು ಕಾಡುಹಂದಿ ಮಲಗಿದೆ... ನನ್ನ ಕಣ್ಣು ಜೇನಿನ ಮೇಲೆ.. ಕಾಡುಹಂದಿಯ ಕಣ್ಣು ನನ್ನ ಮೇಲೆ....!! ನಾಗೇಂದ್ರ ಬಂಜಗೆರೆ, ಶಿಕ್ಷಕರು Ads on article

Advertise in articles 1

advertising articles 2

Advertise under the article