-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 113

ಸ್ಫೂರ್ತಿಯ ಮಾತುಗಳು : ಸಂಚಿಕೆ - 113

ಸ್ಫೂರ್ತಿಯ ಮಾತುಗಳು : ಸಂಚಿಕೆ - 113
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   

ದೇಹ, ದೇಶ ಮತ್ತು ದೇವ ಈ ಮೂರಂಶಗಳು ಮನುಷ್ಯನ ವಿಕಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ಇವುಗಳೊಳಗಿನ ಸಂಬಂಧವೂ ಅವಿನಾಭಾವ. ಲೇಖನವನ್ನು ದೇಹ ಪ್ರೇಮಕ್ಕಷ್ಟೇ ಮೀಸಲಿಟ್ಟು ಮುಂದುವರಿಯುವೆ. ತಾಯಿಯ ಗರ್ಭದೊಳಗೆ ನವಮಾಸ ನಮ್ಮ ಬೆಳವಣಿಗೆಯ ನಂತರವೇ ನಮ್ಮ ಜನನವಾಗಿದೆ. ಜನನದ ನಂತರ ಕೆಲವು ಕಾಲ ದೇಹವನ್ನು ತಾಯಿ, ತಂದೆ ಮತ್ತು ಹಿರಿಯರು ಪೋಷಿಸುತ್ತಾರೆ, ನಮ್ಮ ಬೆಳವಣಿಗೆಗೆ ಪರಿಸರ, ಸಮಾಜ, ಸರಕಾರ ಎಲ್ಲದರ ಪಾತ್ರ ಬಹಳ ಮುಖ್ಯವಾದರೂ, ದೇಹ ಬಲಿತ ಮೇಲೆ ದೇಹವನ್ನು ಚೆನ್ನಾಗಿ ಕಾಪಾಡುವ ಹೊಣೆಗಾರಿಕೆ ಅವರವರದೇ ಆಗಿರುತ್ತದೆ.

ಪ್ರತಿಯೊಬ್ಬನೂ ಕುಟುಂಬದ ಭಾಗವಾಗಿರು ವಂತೆಯೇ ಸಮಾಜದ ಭಾಗವೂ ಹೌದು. ತನ್ನ ರಕ್ಷಣೆ, ವಿಕಾಸದ ಜೊತೆಗೆ ಸಮಾಜದ ರಕ್ಷಣೆ ಮತ್ತು ವಿಕಾಸದ ಬದ್ಧತೆ ಪ್ರತಿ ವ್ಯಕ್ತಿಗಿದೆ. ಎಲ್ಲ ಬದ್ಧತೆಗಳ ಯಶಸ್ವೀ ನಿರ್ವಹಣೆಗೆ ದೇಹದ ಯಾವುದೇ ಅಂಗಾಂಗಗಳಿಗೆ ಚ್ಯುತಿ ಬಾರದಂತೆ ವಹಿಸುವ ಎಚ್ಚರಿಕೆಯೇ ದೇಹ ಪ್ರೇಮ. ಸೌಂದರ್ಯೀಕರಣಕ್ಕಿಂತಲೂ ಮಿಗಿಲಾಗಿ ದೇಹದ ಆರೋಗ್ಯ ಮತ್ತು ಕಾರ್ಯಸಾಮರ್ಥ್ಯ ವರ್ಧನೆಯತ್ತ ನಮ್ಮ ಚಿತ್ತವಿರಬೇಕಾಗುತ್ತದೆ. ದೇಹದ ಸೃಷ್ಟಿಯಲ್ಲಿ ಸಾಧನೆಯ ಆಶಯವಿದೆ. ಉತ್ತಮ ಕೆಲಸಗಳನ್ನು ಮಾಡುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಲು ದೇಹ ಕಟಿಬದ್ಧವಾಗಬೇಕಾಗಿದೆ. ಈ ದೇಹ ಮನುಷ್ಯರೂ ಸೇರಿದಂತೆ ಇತರೆ ದೇಹಗಳಿಗೆ ಹಾನಿ ಮಾಡಬಾರದು. ನಮ್ಮ ದೇಹದ ಮೇಲೆ ನಮಗೆ ಪ್ರೀತಿಯಿರುವಂತೆಯೇ ಇತರ ದೇಹಿಗಳಿಗೂ ಅವರ ಅಥವಾ ಅವುಗಳ ದೇಹದ ಮೇಲೆ ಪ್ರೇಮ ಸಹಜ. ತಾವು ಪ್ರೇಮಿಸುವ ನಮ್ಮ ದೇಹಕ್ಕೆ ಇತರೆ ದೇಹಿಗಳಿಂದ ಆಘಾತ ಅಥವಾ ನೋವಾದರೆ ಉಂಟಾಗಬಹುದಾದ ದುಃಖದ ಪ್ರಮಾಣದ ಅರಿವು ಪ್ರತಿಯೊಬ್ಬರಿಗೂ ಇದ್ದಾಗ ಸಮಷ್ಠಿ ಸಂತಸದಿಂದಿರುತ್ತದೆ. ನೋವು ರಹಿತವಾದ ಸಮಾಜದ ಉದಯಕ್ಕೆ ಸ್ವದೇಹ ಪ್ರೇಮವೇ ಹೇತುವಾಗುತ್ತದೆ.

ಗ್ರೀಕರ ಕಥೆಗಳಲ್ಲಿ ಎಂಡ್ರೋಕ್ಲ್ ಎಂಬ ರೋಮನ್ ಗುಲಾಮನ ಕಥೆ ಇದೆ. ಆತ ತನ್ನ ಒಡೆಯನ ಹಿಂಸೆಯನ್ನು ತಾಳಲಾರದೆ ಅರಣ್ಯಕ್ಕೆ ಓಡುತ್ತಾನೆ. ಅರಣ್ಯ ಸೇರಿದ ಆತನಿಗೆ ಸಿಂಹವೊಂದರ ನರಳಾಟ ಕೇಳಿಸುತ್ತದೆ. ನರಳುವ ಧ್ವನಿಯ ಕಡೆಗೆ ಎಂಡ್ರೋಕ್ಲ್ ನಡೆದ. ಸಿಂಹವು ಆತನನ್ನು ನೋಡಿತಾದರೂ ತನ್ನ ಆಹಾರವೆಂದು ಆತನ ಮೇಲೆ ನೆಗೆದು ಬೀಳದೆ, ಬೇಸರ ಮತ್ತು ನೋವಿನಿಂದ ನರಳುತ್ತಿತ್ತು. ಎಂಡ್ರೋಕ್ಲ್ ಸಿಂಹದ ಸನಿಹ ಬಂದು ಅದನ್ನೇ ನೋಡುತ್ತಾನೆ. ಸಿಂಹ ಮಲಗಿದ್ದಲ್ಲಿಂದ ಎದ್ದು ನಿಲ್ಲಲು ಹವಣಿಸುತ್ತಿತ್ತು. ಪಾದವೊಂದರ ನೋವಿನಿಂದ ನಿಲ್ಲಲು ಅದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಈಗ ಎಂಡ್ರೋಕ್ಲ್ ಸಿಂಹದ ಪಾದವನ್ನು ಎತ್ತಿ ಹಿಡಿದ. ಅವನ ಮನ ಕರಗಿತು. ಉದ್ದನೆಯ ಮುಳ್ಳೊಂದು ಅದರ ಪಾದವನ್ನು ಗಾಯಗೊಳಿಸಿತ್ತು. ಆದುದಾಗಲಿ ಎಂದು ಭಗವಂತನ ಮೇಲೆ ಭಾರ ಹಾಕಿ ಆ ಮುಳ್ಳನ್ನು ಕಿತ್ತನು. ಗಾಯದ ಮೇಲೆ ಗಿಡ ಮೂಲಿಕೆ ಹಚ್ಚಿದನು. ಮುಳ್ಳನ್ನು ಕೀಳಲಾಗಿದ್ದರೂ ತಕ್ಷಣಕ್ಕೆ ನಿಲ್ಲುವ ಸ್ಥಿತಿಯಲ್ಲಿ ಸಿಂಹವಿರಲಿಲ್ಲ. ಸಿಂಹದ ಮುಖದಲ್ಲಿ ಗೆಲವನ್ನು ಗಮನಿಸಿದ ಎಂಡ್ರೋಕ್ಲ್ ಖುಷಿಯಿಂದ ಮುಂದೆ ಸಾಗಿದನು. ಅಷ್ಟರಲ್ಲಿ ತನ್ನ ಒಡೆಯನ ಆಳುಗಳು ತನ್ನನ್ನು ಹುಡುಕುತ್ತಾ ಕಾಡಿನೊಳಗೆ ಬಂದಿರುವುದನ್ನು ಆತ ಗಮನಿಸಿ ಮರಗಳೆಡೆಯಲ್ಲಿ ಅವಿತನು. ಆದರೆ ಒಬ್ಬ ಭಟ ಎಂಡ್ರೋಕ್ಲ್ ನನ್ನು ನೋಡಿಯೇ ಬಿಟ್ಟ. ಎಲ್ಲರನ್ನು ಸೇರಿಸಿ ಆತನನ್ನು ಸೆರೆ ಹಿಡಿದು ಒಡೆಯನ ಬಳಿಗೆ ಒಯ್ದರು. ಪಾಪ ಎಂಡ್ರೋಕ್ಲ್ ! ತನ್ನಿಂದ ಪರಾರಿಯಾದ ಗುಲಾಮ ಎಂಡ್ರೋಕ್ಲ್ ಗೆ ಒಡೆಯನು ಶಿಕ್ಷೆ ವಿಧಿಸಿದನು. ಹಸಿದ ಸಿಂಹದ ಬಾಯಿಗೆ ಆತನನ್ನು ಒಪ್ಪಿಸಲು ಆಜ್ಞೆ ಮಾಡಿದನು. ಭಟರು ಕಾಡೆಲ್ಲಾ ಅಲೆದು ಸಿಂಗವೊಂದನ್ನು ಹಿಡಿದೇ ಬಿಟ್ಟರು. ಬೋನಿನೊಳಗೆ ಹಾಕಿ ನಾಡಿಗೆ ತಂದರು. ಬಹಳ ದಿನ ಅದನ್ನು ಉಪವಾಸವಿಟ್ಟರು. ಪಾಪ ಸಿಂಹ! ಅದು ಹಸಿವೆಯಿಂದ ನರಳ ತೊಡಗಿತು. ಶಿಕ್ಷೆಗೆ ಇದೇ ಸುಸಂದರ್ಭವೆಂದು ಎಂಡ್ರೋಕ್ಲ್ ನನ್ನು ಸಿಂಹದ ಬೋನಿನ ಮುಂದೆ ಕೈ ಕಾಲು ಕಟ್ಟಿ ಮಲಗಿಸಲಾಯಿತು. ಸಿಂಹವಿರುವ ಬೋನಿನ ಕದ ತೆರೆಯಲಾಯಿತು. ಹಸಿದು ಬಸವಳಿದಿದ್ದ ಸಿಂಹ ಆವೇಶದಿಂದ ಆತನ ಮೇಲೆ ಹಾರಿತು. ಇನ್ನೇನು ಸಿಂಹ ಎಂಡ್ರೋಕ್ಲ್ ನನ್ನು ಸೀಳಿ ತಿನ್ನುತ್ತದೆ ಎಂದು ಎಲ್ಲರೂ ಊಹಿಸಿದರೆ ನಡೆದ ಕಥೆಯೇ ಬೇರೆ. ಸಿಂಹವು ಎಂಡ್ರೋಕ್ಲ್ ನಿಗೆ ಪ್ರದಕ್ಷಿಣೆ ಹಾಕ ತೊಡಗಿತು. ಅವನನ್ನು ಮೂಸಿ ನೋಡುತ್ತಿತ್ತು. ಸಿಂಹಕ್ಕೆ ಆತನ ಪರಿಚಯ ಸಿಕ್ಕಿತ್ತು. ಮುಳ್ಳು ಚುಚ್ಚಿ ದೇಹ ನೋವಿನಿಂದ ಕಂಪಿಸುತ್ತಿದ್ದಾಗ ತನ್ನ ಪಾದದ ಮುಳ್ಳು ಕಿತ್ತು ಉಪಚರಿಸಿದವನೇ ಇವನೆಂದು ಅದಕ್ಕೆ ತಿಳಿಯಿತು. ಅದು ಶಾಂತವಾಗಿ ಹೊರಟು ಹೋಯಿತು. ಎಂಡ್ರೋಕ್ಲ್ ಬದುಕಿ ಉಳಿದ. ಸಿಂಹದ ದೇಹಕ್ಕೆ ನೋವುಂಟಾದ ಸಂದರ್ಭದಲ್ಲಿ ಎಂಡ್ರೋಕ್ಲ್ ತೋರಿದ “ದೇಹ ಪ್ರೇಮ” ಆತನನ್ನು ಕಾಪಾಡಿತು.

ದೇಹ ಪ್ರೇಮವಿರುವೆಡೆ ಕೊಲೆ, ಸುಲಿಗೆ, ಹೊಡಿ, ಬಡಿ, ಪರಿಸರ ನಾಶ ಮುಂತಾದ ದುಷ್ಕೃತ್ಯಗಳು ಸಂಭವಿಸುವುದಿಲ್ಲ. ನಮಗೆ ನಮ್ಮ ದೇಹದ ಮೇಲೆಯೂ ಪ್ರೇಮವಿರಬೇಕು. ಅನ್ಯ ದೇಹಗಳ ಮೇಲೂ ಪ್ರೇಮವಿರಬೆಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article