-->
ಸವಿಜೇನು : ಸಂಚಿಕೆ - 02

ಸವಿಜೇನು : ಸಂಚಿಕೆ - 02

ಸವಿಜೇನು : ಸಂಚಿಕೆ - 02
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು


   ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು, ಕೀಟಗಳು, ಸರೀಸೃಪ ನವಿಲಿನಂತಹ ಪಕ್ಷಿಗಳ ಸಂತಾನ ಚಕ್ರ ಶುರು. ಅದರಂತೆ ಮಿಡತೆಗಳ ಮೊಟ್ಟೆಯೊಡೆದು ಶಿಶು ಮಿಡತೆಗಳು, ಮಧ್ಯ ವಯಸ್ಕ ಮಿಡತೆಗಳು ಯಾರಾದರೂ ನಡೆದಾಡಿದರೆ ಪ್ರಾಣಿಗಳು ಓಡಾಡಿದರೆ ನೂರಾರು ಸಂಖ್ಯೆಯಲ್ಲಿ ನಾನಾ ರಂಗಿನ ಮಿಡತೆಗಳು ಪುರ್ರನೇ ಹಾರಿ ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದವು. ಮುಂಗಾರು ಹಸಿರನ್ನು ಈ ಮಿಡತೆಗಳೇ ತಿಂದು ಖಾಲಿ ಮಾಡುವವು. ಅದು ಜಮೀನಿನಲ್ಲಿ ಭೂಮಿಯ ಉಳುಮೆ ಮಾಡಲು ಹುಲುಸಾದ ಕಾಲ. ಅಪ್ಪ ಎತ್ತುಗಳ ಕಟ್ಟಿ ನೇಗಿಲು ಹೊಡೆಯುತ್ತಿದ್ದರು. ಅಮ್ಮ ಹಳೆಯ ಕೂಳೆಗಳು, ಮುಳ್ಳುಗಳ ಆರಿಸುತ್ತಿದ್ದರು. ನಾನೂ ಮಡಿಕೆಯ ಸಾಲಿನಲ್ಲಿ ಮಣ್ಣಿನ ವಾಸನೆಯ ಆಹ್ಲಾದದೊಂದಿಗೆ ಸ್ವಲ್ಪ ಹೊತ್ತು ಕೂಳೆಗಳು ಆರಿಸಿದ್ದೆ. ಆಗ ನಮಗೆ ನಿರಂತರ ಕೆಲಸ ಮಾಡದೇ ಮಧ್ಯದಲ್ಲಿ ಆಕಡೆ-ಈಕಡೆ ರೆಸ್ಟ್ ನೆಪದಲ್ಲಿ ಸುತ್ತಾಡಿ ಬರುವುದು ಸಾಮಾನ್ಯವಾಗಿತ್ತು. ಹಾಗೆ ಸುತ್ತಾಡಿ ಬರಲು ಅಂದು ಅಲ್ಲೇ ಸಮೀಪದಲ್ಲಿದ್ದ ದಾಸಪ್ಪನ ಬೇಲಿಗೆ ಹೋದೆ. ನಾವು ಕೆಲಸ ಮಾಡುವಲ್ಲಿಗೆ ಹತ್ತಿರವಿದ್ದ ಆ ಬೇಲಿಯಲ್ಲಿ ಅಲ್ಲೊಂದು ಇಲ್ಲೊಂದು ಬೇವಿನಮರಗಳು, ಹುಣಸೇಮರಗಳು ಇದ್ದವು. ನಾನು ಬೇಲಿಗೆ ಹೋಗಿದ್ದು ಜೇನು ಹುಡುಕಲು! ಹಾಗೆ ಬೇಲಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಿರಲು ಅಲ್ಲೊಂದು ಎಂಟತ್ತು ಅಡಿಯ ಬಂದಗಳ್ಳಿಯ ಒಂದೇ ಒಂದು ಗಿಡ ಇತ್ತು. ಸಾಮಾನ್ಯವಾಗಿ ಜೇನು ಅದರಲ್ಲಿ ಇರಬಹುದು ಎಂಬ ಅಂದಾಜು ನನಗೆ ಇರಲಿಲ್ಲ. ಜೇನುಗೂಡು ಕಟ್ಟಲು ಅದು ಅಷ್ಟೊಂದು ಪ್ರಶಸ್ತ ಸ್ಥಳ ಅಂತ ನನಗನ್ನಿಸಿರಲಿಲ್ಲ. ಅವು ಗೂಡುಕಟ್ಟಲು ನನಗೇನು ಹೇಳಬೇಕಿತ್ತು??? ಅವೇ ಅಲ್ಲಿಯೇ ಗೂಡು ಕಟ್ಟಲು ಡಿಸೈಡ್ ಮಾಡಿ ಕಟ್ಟಿ ಆಗಿತ್ತು. ಹಾಗೇ ಮುಂದೆ ಸಾಗುತ್ತಿರುವಾಗ ಹತ್ತಾರು ಜೇನು ನೊಣಗಳು ಆ ಬಂದಗಳ್ಳಿಯ ಮೇಲೆ ಹಾರಾಡುತ್ತಿದ್ದವು. ನಾನು ಅದರ ಪಕ್ಕ ಇರುವ ಹೊಸಚಿಗುರು ಹಾಕಿದ ಹಳೇ ಹುಣಸೇಮರದಲ್ಲಿ ಜೇನು ಇರಬೇಕು ಎಂದು ಮೇಲೆ ಮೇಲೆ ನೋಡುತ್ತಿದ್ದೆ. ಆದರೆ ಆ ಹುಣಸೇಮರದಲ್ಲಿ ಕಾಣಲಿಲ್ಲವಾದರೂ ಬಂದಗಳ್ಳಿಯಲ್ಲಿ ಮೊರದಗಲದ ಜೇನು ಬಟಾ ಬಯಲಿನಲ್ಲಿ ಕಂಡಂತೆ ಕಣ್ಣಿಗೆ ಬಿತ್ತು. ಸಾಮಾನ್ಯವಾಗಿ ಜೇನುನೊಣಗಳು ಬೇಸಿಗೆಕಾಲದಲ್ಲಿ ಸೆಖೆಯಿಂದ ಮೈ ಆರಿಸಿಕೊಳ್ಳಲು ಮತ್ತು ಬಾಲ್ಯಾವಸ್ಥೆಯಲ್ಲಿರುವ ಭ್ರೂಣ, ಮೊಟ್ಟೆಗಳಿಗೂ, ಭ್ರೂಣ ಗಳಿಗೂ, ಇತರೆ ನೊಣಗಳಿಗೂ ಗಾಳಿ ಒದಗಿಸುವ ಉದ್ದೇಶದಿಂದ ಬಿಸಿಲು ಹೆಚ್ಚಾಗಿ ಉಂಬ್ರ ಆದಾಗ ದಿನಕ್ಕೆ ಎರಡ್ಮೂರು ಬಾರಿ ಅಥವಾ ದಿನಕ್ಕೆ ಕನಿಷ್ಠ ಒಮ್ಮೆಯಾದರೂ ಎದ್ದೇಳುವುದು ಉಂಟು. ಆಗ ವಸಂತಕಾಲ ಆದುದ್ದರಿಂದ ಆ ಕುರುಚಲು ಪರಿಸರದ ಬಹುತೇಕ ಗಿಡ ಮರಗಳು ಹೂ ಬಿಟ್ಟ ಕಾಲ. ಜೇನುನೊಣಗಳ ಪಾಲಿಗೆ ಇದೇ ಸಂತಾನಾಭಿವೃದ್ಧಿಗೆ ಪ್ರಸಕ್ತ ಕಾಲ. ಆದರೆ ಚಳಿಗಾಲ ಮತ್ತು ಮಳೆಗಾಲದಲ್ಲಿ ಅವು ಎದ್ದೇಳುವುದಿಲ್ಲ. ಮೂರ್ ನಾಲ್ಕು ನಿಮಿಷಗಳ ಕಾಲ ಸಂಪೂರ್ಣ ಎದ್ದು ಅಲ್ಲೇ ಸುತ್ತಾಡಿ, ಗಾಳಿ ಆಡಿಸಿಕೊಂಡು ವಿರಮಿಸಿದ ಮೇಲೆ ಪುನಃ ಗೂಡಿನಮೇಲೆ ಕುಳಿತುಕೊಳ್ಳುವವು. ಅಂದು ಹೆಚ್ಚುಕಡಿಮೆ ಇನ್ನೇನು ಎಲ್ಲಾ ಹುಳುಗಳು ಕುಳಿತುಕೊಳ್ಳುವ ಹೊತ್ತಿಗೆ ಸರಿಯಾಗಿ ನಾನು ಅಲ್ಲಿಗೆ ಹೋಗಿದ್ದರಿಂದ ನೋಡಲು ಸುಲಭವಾಗಿ ನನ್ನ ಕಣ್ಣಿಗೆ ಬಿತ್ತು. ಮೊರದಗಲ ಜೇನಿಗೆ ಹೊಂಬಾಳೆ ಗಾತ್ರದಷ್ಟು ತಲೆಯ ಭಾಗ ಇತ್ತು. ಹುಳು ಎದ್ದಿದ್ದರಿಂದ ಸ್ಪಷ್ಟವಾಗಿ ತುಪ್ಪ ಇರುವುದು ಕಂಡಿತ್ತು. ಮನುಷ್ಯನಿಗೆ ಈ ಜೇನುಗಳು ಇರುವಿಕೆ ಶೇ ೨೫% ಗೂ ಹೆಚ್ಚು ಗೊತ್ತಾಗುವುದು ಅವುಗಳು ಎದ್ದು ಹಾರಾಡುವುದರಿಂದಲೇ. ಬೇಸಿಗೆಯಲ್ಲಿ ನೀರಿನ ದಾಹ ಇವುಗಳಿಗೆ ತುಂಬಾ ಅಧಿಕ ವಾಗಿರುತ್ತದೆ. ಆ ಕಾರಣದಿಂದಲೇ ಅವುಗಳ ಓಡಾಟ ಅಧಿಕವಾಗಿರುತ್ತದೆ. ಈ ಚಟುವಟಿಕೆಯನ್ನು ಮನುಷ್ಯನು ಮಾತ್ರ ಬಹಳ ಸುಲಭವಾಗಿ ಗಮನಿಸಿಕೊಂಡು ಅವುಗಳ ಇರುವಿಕೆ ಕಂಡುಕೊಂಡು ಜೇನುಗಳನ್ನು ಕ್ರೌರ್ಯಕ್ಕೆ ಒಳಪಡಿಸುತ್ತಿದ್ದಾನೆ. ಅದರಂತೆ ನಾನು ಈ ಕೀಟಗಳ ಶೋಷಕ.. ಅಂದು ಕಂಡ ಈ ಜೇನು ಅಂದು ನೋಡಿದರೆ ಹಿರಿಜೇನು ಇದ್ದ ಹಾಗೆ ಇದ್ದುದರಿಂದ ಜೇನುರೊಟ್ಟಿಯ ಕೆಳಭಾಗದಲ್ಲಿ ರಾಣಿ ಜೇನಿನ ಹುಳುಗಳ ಕಿರುಬೆರಳಗಾತ್ರದಲ್ಲಿ ಒಂದು ಇಂಚು ಉದ್ಧದ ಗೂಡುಗಳು, ಹುಳುಗಳು ಇದ್ದುದರಿಂದ ಆಗ ನಾನು ಜೇನು ವಿಷಯದಲ್ಲಿ ಅಷ್ಟೊಂದು ಪರಿಣಿತ ಆಗದೇ ಇದ್ದುದರಿಂದ ಹೊಲದಲ್ಲಿ ಕೆಲಸಮಾಡುತ್ತಿದ್ದಲ್ಲಿಗೆ ಹಿಂದಿರುಗಿ ಬೇಲಿಹಾಕುತ್ತಿದ್ದ ನಮ್ಮ ಅಣ್ಣ ತಿಪ್ಪನನ್ನು ಮಚ್ಚು ಸಂಮೇತ‍ ಜೇನುತೆಗೆಯಲು ಕರೆದು ತಂದೆ.

ಅವನು ಅಷ್ಟೇನು ಜೇನುತೆಗೆಯುವವ ಅಲ್ಲದೇ ಇದ್ದರೂ ನನಗಿಂತ ಎತ್ತರದಲ್ಲಿ ದೊಡ್ಡವನು ಮತ್ತು ಸ್ವಲ್ಪ ಬಲಶಾಲಿ ಎನ್ನುವ ಕಾರಣಕ್ಕೆ ಅವನನ್ನು ಹಿಡಿದು ತಂದಿದ್ದೆ. ಆ ಜೇನು ಹೇಳಿಕೇಳಿ ಬಂದಗಳ್ಳಿಯಲ್ಲಿದ್ದುದರಿಂದ ಹೆಸರೇ ಹೇಳುವಂತೆ ದಪ್ಪನೆಯ ಗಾತ್ರ ಆಯತಾಕಾರದ್ದು. ಆದರೆ ಎಲ್ಲಾ ಕೋನಗಳಲ್ಲೂ ಅದನ್ನು ಆಳವಾಗಿ ಅದುಮಿದಂತೆ ಇತ್ತು ಅಲ್ಲಲ್ಲಿ ತೆಳ್ಳನೆಯ ಚೂಪನೆಯ ಮುಳ್ಳುಗಳೂ ಇದ್ದವು. ಅದನ್ನು ತುಸು ಮುಟ್ಟಿದರೂ ಥಟ್ಟನೇ ಅದರ ಹಾಲು ಥಟ ಥಟ ನೇ ಚಿಮ್ಮಿ ಸೋರುತ್ತಿತ್ತು. ಅದರ ನಾಲ್ಕೂ ಕೋನಗಳಲ್ಲಿ ಎಲ್ಲಿ ಮುಟ್ಟಿದರೂ ಸಹ ಪ್ರತಿ ಟಚ್ ಗೂ ನಾಲ್ಕೈದು ಹನಿಗಳು ಆ ಮಂದಗಳ್ಳಿಯ ಹಾಲು ಧಾರಾಕಾರವಾಗಿ ಜಿನುಗುತ್ತಿತ್ತು. ಗಿಡಕ್ಕೆ ಕಟ್ಟಿದ ಜೇನು ಕಳ್ಳಿಗಿಡದ ಅಂಚಿಗಿರದೇ ತುಸು ಒಳಭಾಗದಲ್ಲೇ ಇದ್ದುದರಿಂದ ಜೇನು ತೆಗೆಯಬೇಕೆಂದರೆ ಅನಿವಾರ್ಯವಾಗಿ ಜೇನಿಗೆ ಅಡ್ಡಲಾಗಿ ಇರುವುದೆಲ್ಲಾ ಕತ್ತರಿಸಬೇಕಿತ್ತು. ಇವನೂ ನಮ್ಮ ಅಣ್ಣ ತಿಪ್ಪ ನನಗೆ "ಹೇ ಬಿಡಲೇ ಬಾಳ ಸಿಕ್ಕೈತೆ ಹುಳಬೇರೆ ಘಾಟಿ ಇವೆ ಎಲ್ಲೆನ್ನ ಕಚ್ಚಿಗಿಚ್ಚಿಯಾವು" ಎಂದ. ಹೌದು ತುಪ್ಪ ಹೆಚ್ಚು ಇದ್ದಾಗ ಹುಳುಗಳು ತುಂಬಾ ಶಾರ್ಪ್ ಆಗಿ ಒಂದು ಕಡ್ಡಿ ಚಾಚಿದರೂ ಹತ್ತಾರು ಹುಳಗಳು ಒಮ್ಮೆಗೆ ರೋಷಾವೇಶದಿಂದ ಧಾಳಿಮಾಡುತ್ತವೆ. ಅಷ್ಟು ಜೇನು ತುಪ್ಪ ಮತ್ತು ಮಕರಂದ ಸಂಗ್ರಹಿಸಲು ಅದೆಷ್ಟು ಸಾವಿರ ಹೂಗಳು ತಾಕಿ ಬಂದಿರುತ್ತಾವೋ...?? ಅದೆಷ್ಟು ನಿಮಿಷ-ಗಂಟೆಗಳ ಶ್ರಮ ಅವು ಹಾಕಿರುತ್ತಾವೋ... ?? ಅಸಂಖ್ಯಾ ಹೂಗಳ ಸ್ಪರ್ಶಿಸಿ ತಂದ ತುಪ್ಪ ಮತ್ತು ಮೇಲಾಗಿ ಅವುಗಳ ಸಂತಾನ ನಾಶಕ್ಕೆ ಯತ್ನಿಸಿದವರ ಬಿಡಲಾಗುವುದೇ..?? ನಾವು ಮನುಷ್ಯರು ಬಿಡುತ್ತೇವೆಯೇ?? ಎಂಥಾ ಸಾಧು ಪ್ರಾಣಿಗಳು ಅವರ ಸಂತಾನ ನಾಶಕ್ಕೆ ಯತ್ನಿಸಿದರೆ ಬಿಡಲಾರವು. ಅದರಂತೆ ಒಂದೆರಡು ಜೇನು ಹುಳುಗಳು ಅವನಿಗೆ ಕಚ್ಚಿದವು. ಅವುಗಳ ಧಾಳಿಗೆ ಹೆದರಿದ ಇವನು ಸ್ವಲ್ಪವೇ ಹಿಂಜರಿದ. ನೋಡುತಿದ್ದ ನಾನು "ಬಿಡಬೇಡ ಬಿಡಬೇಡ ಬಾಳ ತುಪ್ಪ ಐತೆ" ಎಂದು ಪದೇ ಪದೇ ಹೇಳುತಿದ್ದೆ. ಅದಕ್ಕವನು ಮೇಲಿನಿಂದ ಅಡ್ಡ ಇರುವ ಎಲ್ಲ ಕಳ್ಳಿಯ ಅರೆಗಳನ್ನು ಮುಲಾಜಿಲ್ಲದೆ ಕತ್ತರಿಸಿದ. ಸಣ್ಣದಾಗಿ ಗೀರಿದಾಗ ಚಿಮ್ಮುವ ಹಾಲು ಪೂರಾ ಕಾಂಡವನ್ನೇ ಕತ್ತರಿಸಿದರೆ ಹಾಲು ಸೋರದೇ ಇರುತ್ತದೆಯೇ?? ಹಾಲಿನ ಕೊಳವೆಯೇ ಒಡೆದು ಹೋದ ಹಾಗೆ ಬಿಳಿ ಬಣ್ಣದ ಕಳ್ಳಿಯ ಹಾಲು ಫಳ ಫಳನೇ ಸುರಿದು ಹೆಚ್ಚು ಕಡಿಮೆ ಆ ಜೇನು ಕಳ್ಳಿಹಾಲಿನಿಂದಲೇ ಅಭಿಷೇಕ ಮಾಡಿದ ಹಾಗೆ ಸಂಪೂರ್ಣವಾಗಿ ಕಳ್ಳಿಹಾಲಿನಿಂದ ನೆನೆದು ಹೋಗಿತ್ತು. ಅಂತೂ ಜೇನು ಇರುವ ಕೊನೆ ಕತ್ತರಿಸಿದ ತಿಪ್ಪ "ಬಾರಿ ತುಪ್ಪ ಇದೆ ಕಣ್ಲೇ... ಹಿಡ್ಕೋ" ಎಂದು ನನಗೆ ಕೊಡಲು ಬಂದ. ನಾನು ಮುಳ್ಳನ್ನು ನೋಡಿ ಎರಡೂ ಕೈಯಲ್ಲಿ ಹಿಡಿದುಕೊಂಡರೆ ಮಣಬಾರ! ಜೇನು ಮತ್ತು ಕಳ್ಳಿ ಯ ಬಾರ ನನ್ನ ಕೈಯಲ್ಲಿ ಎತ್ತಲು ಆಗುತ್ತಿಲ್ಲ. ವಾಸ್ತವವಾಗಿ ಜೇನು+ಕಳ್ಳಿಕೊನೆ ಸೇರಿ ಭಾರ ಡಬಲ್ ಆಗಿತ್ತು. ಜೇನುಗೂಡು ರೊಟ್ಟಿಯಭಾಗ ನಾನು ಹಿಡಿದೆ ತುಪ್ಪದ ಭಾಗವನ್ನು ತಿಪ್ಪ ಹಿಡಿದು ಅಪ್ಪ ಅಮ್ಮ ಇರುವ ಜಾಗಕ್ಕೆ ತಂದೆವು.

ಅಷ್ಟೊತ್ತಿಗಾಗಲೇ ಹನ್ನೆರಡೂವರೆ ಒಂದು ಗಂಟೆಯಾಗಿ ಬಿಸಿಲು ಹೆಚ್ಚಾದ್ದರಿಂದ ಬೇಸಿಗೆಯ ಕೆಲಸಗಳೆಲ್ಲಾ half session ಆಗಿದ್ದುದರಿಂದ ಬೇಸಾಯ ಬಿಟ್ಟು ಅಪ್ಪ ಎತ್ತುಗಳಿಗೂ ನೆರಳಲ್ಲಿ ಕಟ್ಟಿ ನಾವಿರುವಲ್ಲಿಗೆ ಬಂದು ಅಮ್ಮನಿಗೆ "ನೀರು ಕೊಡು" ಎಂದು ಕೇಳಿದರು. ಆಗ ಈ ವಾಟರ್ ಬಾಟಲ್ ಎಲ್ಲಾ ಇರಲಿಲ್ಲ. ನಾವು ನೀರು ತೆಗೆದುಕೊಂಡು ಹೋಗಲು ನಮ್ಮದು ಎಣ್ಣೆಗೆಂಪು ಬಣ್ಣದ ಒಂದು ಪ್ಲಾಸ್ಟಿಕ್ ಕ್ಯಾನ್ ಇತ್ತು. ಅದರಲ್ಲಿದ್ದ ಅಲ್ಪ ಸ್ವಲ್ಪ ನೀರನ್ನು ಕ್ಯಾನ್ ಎತ್ತಿ ಗಟಗಟನೇ ಕುಡಿದು ಆ ಮುಳ್ಳು ಇರುವ ಜೇನಿನ ಕಳ್ಳಿಕೊನೆ ಹಿಡಿದು ಒಂದು ದೊಡ್ಡ ಟಿಪನ್ ಕ್ಯಾರಿಯರ್ ಮುಚ್ಚಳಕ್ಕೆ ಜೇನು ತುಪ್ಪ ಹಿಂಡಲು ಶುರುಮಾಡಿದರು. ಜೇನು ಹಿಂಡುತ್ತಲೇ ಜೇನುತುಪ್ಪ ಕಿತ್ತು ಎಲ್ಲರ ಅಂಗೈಗೆ ಹಾಕಿದರು. ಅಷ್ಟೊತ್ತಿಗೆ ನಾನು ತಟ್ಟೆಗೆ ಉದುರಿದ್ದ ತುಪ್ಪದ ಹನಿಗಳ ನೆಕ್ಕುತ್ತಾ ಸಿಕ್ಕ ಸಿಕ್ಕ ಕಡೆ ಜೇನು ಕಿತ್ಗೊಂಡ್ ತಿಂದಿದ್ದೆ. ಹೆಚ್ಚು ಕಡಿಮೆ ನನ್ನ ಪಾಲಿನ ತುಪ್ಪ ತಿಂದು ಬೆರಳು ಚೀಪುತ್ತಾ ಬೋನಸ್ಗಾಗಿ ಕಾಯುತ್ತಾ ಇದ್ದೆ. ಅಂದು ಸುಮಾರು ಒಂದೂವರೆ ಕೆಜಿಯಷ್ಟು ತುಪ್ಪ ಲಭ್ಯವಾಗಿತ್ತು. ಜೇನು ತುಪ್ಪಕ್ಕೆ ಮಾತ್ರ ಹೆಚ್ಚು ಬೇಡಿಕೆ ಆನಂತರ ಹೂವಿನ ಪ್ಲೇವರ್ ಇರುವ ಹಳದಿಯ ಮಕರಂದ ಅಥವಾ ಮೇಣ. ನಂತರದಲ್ಲಿ ಬೇಡಿಕೆ ಇದ್ದ ಭಾಗ ಅಂದರೆ ರೊಟ್ಟಿ/ತಟ್ಟಿ ಎಂದು ಕರೆಯುವ ಭ್ರೂಣ ಮತ್ತು ಶೈಶವ ಆವಸ್ಥೆಯ ಬಾಲನೊಣಗಳ ಗೂಡು. ಗೂಡು ಷಟ್ಕೋನಾಕಾರದ ಕೋಶಗಳಲ್ಲಿ ಹಾಲ್ನೊಣಗಳು ಇದ್ದವು. ಅವುಗಳೇ ಸಂತಾನ.. ಅಪ್ಪ ಮಾತ್ರ ಜೇನು ತಟ್ಟಿ ಹೆಚ್ಚು ತಿನ್ನುತ್ತಿದ್ದರು. ಅದು ತಿಂದರೆ ಹಾಲಿನಂತೆ ಇರುತಿತ್ತು. ಅಪ್ಪ ಅದನ್ನು ತಿನ್ನತ್ತಾ "ಇದನ್ನು ತಿನ್ನಬೇಕು ತಿಂದರೆ ಕಣ್ಣಿಗೆ ಬರುವುದಿಲ್ಲ" ಅಂದರೆ ಈಗ ಜುಲೈ ಆಗಷ್ಟ್ ತಿಂಗಳಲ್ಲಿ ಬರುವ 'ಮದ್ರಾಸ್ ಐ' ಆಗುವುದಿಲ್ಲ. ಹಾಗೆ ಅದೆಲ್ಲಾ ಹೇಳಲು ಬರದೇ "ಕಣ್ಣಿಗೆ ತುಂಬಾ ಒಳ್ಳೆಯದು ತಿನ್ರಲೇ" ಎಂದು ತಿನಿಸುತ್ತಿದ್ದರು. ಆದ್ಯತೆಯಂತೆ ಎಲ್ಲಾ ಭಾಗವನ್ನೂ ತಿಂದು ಉಳಿದ ರೊಟ್ಟಿಯ ಭಾಗವನ್ನು ಹೆಚ್ಚು ತಿಂದಿದ್ದೆ. ಅವು ಮೊಟ್ಟೆ ಇಟ್ಟು ಹದಿನೈದು ದಿನಗಳಿಗೊಮ್ಮೆ ಒಂದು ಸೈಕಲ್ ನಂತೆ ಮರಿ ಆಗಿ ನೋಣವಾಗುವವು. ಕೆಲವು ಖಾಲಿಕೋಶಗಳು, ಅರ್ಧ ಬೆಳೆದ ಭ್ರೂಣದ ಕೋಶಗಳಲ್ಲೆಲ್ಲಾ ಕಳ್ಳಿಯ ಹಾಲು ತುಂಬಿಕೊಂಡಿತ್ತು. ಅದೆಲ್ಲಾ ನಾನು ಹೆಚ್ಚೇ ತಿಂದೆನು. ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗದೇ ಇದ್ದುದಕ್ಕೂ , ಕೆಲಸ ಮಾಡಿ ಹೊಟ್ಟೆ ಹಸಿವಾಗಿದ್ದಕ್ಕೂ ಸಿಕ್ಕ ಜೇನುತುಪ್ಪ ಎಲ್ಲವನ್ನೂ ಇದ್ದ ನಾಲ್ಕು ಜನ ತಿಂದು ನೀರುಕುಡಿದಾಗ ನನಗೆ ಸ್ವಲ್ಪ ಹೊಟ್ಟೆಯಲ್ಲಿ ಉರಿ ಶುರುವಾಯಿತು. ಸಾರಾಯಿ ಕುಡಿದವರಂತೆ ಓಲಾಡುತ್ತಾ ತೋಲನ ಕಳೆದುಕೊಂಡೆ. ತಲೆತಿರುಗಿ ದಂತಾಗುತ್ತಿತ್ತು. ಜಾಸ್ತಿಜೇನು ತಿಂದಿದ್ದರಿಂದ ಹಾಗೆ ಆಗಿರಬೇಕೆಂದು ಹಾಗೆ ಅಲ್ಲೇ ಇದ್ದ ಕರಿ ಜಾಲಿಮರದ ನೆರಳಿನಲ್ಲಿ ನೆಲದಮೇಲೆ ಬಿದ್ದುಕೊಂಡೆ. ಬಿದ್ದುಕೊಂಡದ್ದಷ್ಟೇ ನನಗೆ ನೆನಪಿರುವುದು. ಅದರಂತೆ ಅಮ್ಮ, ಅಣ್ಣ ತಿಪ್ಪ ಎಲ್ರೂಗೂ ಹೀಗೆ ಆಗಿ ನನ್ನ ನಂತರ ಒಬ್ಬೊಬ್ಬರಾಗಿ ಮಲಗಿದ್ದರಂತೆ. ಆಗ ಅಪ್ಪನಿಗೆ ಈಚಲ ಹೆಂಡ ಕಟ್ಟಿ ಕುಡಿಯುವ ಹವ್ಯಾಸ ಇತ್ತಂತೆ. ಈಚಲ ಹೆಂಡ ಬಿಸಿಲು ಏರಿದ ಮೇಲೆ ಕುಡಿದರೆ ಹೀಗೆ ಅಮಲು ಬಂದಂತೆ ಆಗುತ್ತಿದ್ದ ಅನುಭವ ಅವರಿಗಾಗಿದೆ. ಹತ್ತಿಪ್ಪತ್ತು ನಿಮಿಷ ಆದ ನಂತರ ಅವರಿಗೂ ಅದು ತೀವ್ರವಾಗಿದೆ. ಒಮ್ಮೆ ಎಲ್ಲರನ್ನೂ ಎಬ್ಬಿಸಿದ್ದಾರೆ. ನಾವ್ಯಾರು ಎದ್ದಿಲ್ಲ. ತಕ್ಷಣಕ್ಕೆ ಯಾಕೆ ಇವರೆಲ್ಲರೂ ಎಚ್ಚರತಪ್ಪಿ ಮಲಗಿದ್ದಾರೆಂದು ಊಹಿಸಿ ಅದಕ್ಕೆ ಇವರೆಲ್ಲರೂ ತಿಂದ ಆ ಬಂದಗಳ್ಳಿಯ ಹಾಲೇ ಕಾರಣ ಎಂದು ಪತ್ತೆ ಹಚ್ಚಿ ಕ್ಯಾನ್, ಟಿಪನ್ ಕ್ಯಾರಿಯರ್ ಹಿಡಿದು ಒಂದು ಕಿಲೋಮೀಟರ್ ಹೋಗಿ ನೀರು ತೆಗೆದುಕೊಂಡು ಬಂದು ನಮ್ಮ ಮುಖಕ್ಕೆ ಚಿಮುಕಿಸಿ ಎಬ್ಬಿಸಿದರು. ಈಗಿನಷ್ಟು ತ್ವರಿತ ವೈದ್ಯಕೀಯ ಸೇವೆ ಆಗ ಇರಲಿಲ್ಲ. ಇದ್ದಿದ್ದರೆ ಅಂದಿನ ಎಮರ್ಜೆನ್ಸಿಗೆ ಅಂಬುಲೆನ್ಸ್ ಬರಬೇಕಿತ್ತು. ಅಷ್ಟೊತ್ತಿಗಾಗಲೇ ನನಗೆ ಪ್ರಜ್ಞೆ ತಪ್ಪಿ ಒಂದು ತಾಸು ಮೇಲೆ ಆಗಿರಬಹುದು. ಎದ್ದ ನಂತರ 'ಕಳ್ಳಿಹಾಲು ಜೇನು ತಿಂದಿದ್ದರಿಂದ ಹಿಂಗಾಗಿದೆ ಬಾಯಲ್ಲಿ ಬೆರಳಿಟ್ಟು ತಿರುವಿಕೊಳ್ಳಿ' (forceful vomit) ಎಂದು ಹೇಳುತಿದ್ದರು. vomit ಮಾಡಿದ್ರೂ ಪ್ರಯೋಜನ ಇರಲಿಲ್ಲ ಬಿಡಿ. ಅದೆಲ್ಲಾ ಅದಾಗಲೇ ರಕ್ತಗತವಾಗಿ ಮೆದುಳಿಗೆ ಹತ್ತಿದ್ದರಿಂದಲೇ ಪ್ರಜ್ಞೆ ತಪ್ಪಿ ಬಿದ್ದದ್ದು?? ಪೂರ ಪ್ರಜ್ಞಾ ಸ್ಥಿತಿಯಲ್ಲಿ ಇರಲಿಲ್ಲ. ನೀರುಕುಡಿದು ಓಲಾಡುತ್ತಾ ಸಾರಾಯಿ ಕುಡಿದವರಂತೆ ಮನೆಗೆ ನಡೆದು ಬಂದೆವು. ತಿಂದ ಜೇನು, ನೀರು ಎಲ್ಲಾ ಹೊರಹಾಕಿದ ಮೇಲೆ ಹೊಟ್ಟೆಯಲ್ಲಿ ರಣ ಸಂಕಟ ಆಗುತ್ತಿತ್ತು. ಆದರೂ ಬಲವಂತವಾಗಿ ವಾಮಿಟ್ ಮಾಡಿ ಮನೆಗೆ ಬಂದು ಇದ್ದ ಮಜ್ಜಿಗೆಯೆಲ್ಲಾ ಹಂಚಿಕೊಂಡು ಕುಡಿದು ಸಂಜೆ ನಾಲ್ಕೈದು ಗಂಟೆಗೆ ಎಲ್ಲರೂ ನಾರ್ಮಲ್ ಸ್ಥಿತಿಗೆ ಬಂದೆವು...!

ಅಂದಿನಿಂದ ಜೇನು ಹುಡುಕುವ ಅಭ್ಯಾಸ ಹವ್ಯಾಸವಾಯಿತಾದರೂ ಅವತ್ತಿನ ಆ ಅಮಲು, ಆ ಕಿಕ್ ಇನ್ನೂ ಹಸಿರಾಗಿದೆ; ಮರೆತಿಲ್ಲ. ಇನ್ನೂ ಬೇಲಿ, ಮರ, ಬಂಡೆಯ ಸಂದು ಹೀಗೆ, ಎಂಥದ್ದೇ ಸ್ಥಳದಲ್ಲಿದ್ದರೂ ಶತಗತಾಯ ಪ್ರಯತ್ನ ಮಾಡಿ ಜೇನು ತೆಗೆಯುವ ನಾನು ಕಳ್ಳೀ ಜಾತೀಯ ಗಿಡಮರಗಳಲ್ಲಿ ಕಟ್ಟಿರುವ ಜೇನುಗಳ ತಂಟೆಗೆ ನಾನು ಇಂದಿಗೂ ಹೋಗುವುದೇ ಇಲ್ಲ...
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************

   ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ....
ಕತ್ತಾಳಿಗುಮ್ಮಿಯಲ್ಲಿ ತೆಗೆಯಲು ಹೋಗಿದ್ದು ಒಂದು ಜೇನು. ಆದರೆ ಅಲ್ಲೇ ಸುತ್ತಲೂ ಕಂಡಿದ್ದು ನಾಲ್ಕು..! ಅದು ಎಂಟತ್ತು ಅಡಿ ಅಂತರದಲ್ಲಿ !! ಒಂದು ಜೇನನ್ನು ಕೀಳಲು ಹೋದಾಗ ಉಳಿದ ಗೂಡುಗಳ ಜೇನು ಹುಳುಗಳು ಅಟ್ಯಾಕ್.....

Ads on article

Advertise in articles 1

advertising articles 2

Advertise under the article