ಸವಿಜೇನು : ಸಂಚಿಕೆ - 01
Saturday, April 6, 2024
Edit
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು
ನನಗೆ ನಾಲ್ಕೈದು ವರ್ಷ ಇರಬಹುದು. ನಮ್ಮ ತಂದೆಯವರು ಕಿರುಬೆರಳ ಗಾತ್ರದ ಯಾವುದೋ ಒಂದು ಮರದ ಕಾಂಡದ ಜೊತೆ ತಟ್ಟೆಯಲ್ಲಿ ಏನೋ ಹಾಕಿಕೊಂಡು ಬಂದರು. ಆ ಕಾಂಡದಲ್ಲಿ ಒಂದು ಹಿಡಿಗಾತ್ರದ ದಪ್ಪ ಮತ್ತು ಈಗಿನ ನನ್ನ ಎರಡೂ ಅಂಗೈ ಅಗಲದಷ್ಟು ಏನೋ ಇರುವುದು ಕಂಡು ಏನೋ ತಂದಿದ್ದಾರೆ ಎಂದೆನಿಸಿತು. ತಿನ್ನೋಣ ಎಂದರೇ ಅದು ನಿಜವಾಗ್ಲೂ ತಿನ್ನುವುದೆಂಬ ಖಾತರಿ ಇಲ್ಲ.. ತಟ್ಟೆಯಲ್ಲಿ ಹಾಕಿಕೊಂಡು ಬಂದಿದ್ದರಿಂದ ಅದು ತಿನ್ನುವ ವಸ್ತುವೇ ಎಂಬ ನಂಬಿಕೆ. ಆಗ ನನಗೆ ಅಮ್ಮ ತೋರುಬೆರಳಿನಿಂದ ನನ್ನ ಬಾಯಿಗೆ ನೆಕ್ಕಿಸಲು ಅದರ ರುಚಿ ಸಿಹಿ ಸಿಹಿ..!! ಚೆನ್ನಾಗಿಯೇ ಇದೆ. ಆ ರುಚಿಯನ್ನು ಅದುವರೆಗೂ ನಾನು ತಿಂದಿದ್ದೂ ನನಗೆ ನೆನಪೇ ಇರಲಿಲ್ಲ. ಅದೇ ಮೊದಲ ನೆನಪು... ಸಿಹಿಯ ರುಚಿ ನಾಲಗೆಗೆ ಸಿಕ್ಕು ಅಬ್ಬಾ ಎಲ್ಲದೂ ನಾನೊಬ್ಬನೇ ತಿಂದು ಬಿಡಲೇ?? ಎನ್ನುವ ಬಯಕೆ ಮೊದಲ ಸಲನೇ ಅನಿಸಿಬಿಡ್ತು ನೋಡಿ. ನಾನು ಯಾವುದರ ಬಗ್ಗೆ ಹೇಳ್ತಾ ಇದ್ದೀನಿ ಅಂತ ಬಹುಶಃ ನಿಮಗೆ ಅರ್ಥ ಆಗಿರಬಹುದು. ಹೌದು ಅದೇ 'ಜೇನಿ' ನ ಬಗ್ಗೆಯೇ ನಾನು ಹೇಳ ಹೊರಟಿರುವ ವಿಷಯ.
ಜೇನು ಎಂದರೇನೇ ಎಷ್ಟೊಂದು ಮಧುರ ಅಲ್ಲವೇ? ಈ ಪ್ರಪಂಚದಲ್ಲಿ ನಾವು ಕೃತಕವಾಗಿ ಸೃಷ್ಠಿಸಿರುವ ಎಲ್ಲ ಸಿಹಿಗಳನ್ನು ಒಂದು ಬದಿ ಇರಿಸಿ, ಇನ್ನೊಂದು ಬದಿ ಜೇನು ತುಪ್ಪ ಮಾತ್ರ ಇರಿಸಿದರೆ ಖಂಡಿತ ಜೇನಿನ ಮೌಲ್ಯಯುತ ಗುಣಮಟ್ಟದ ತೂಕವೇ ಹೆಚ್ಚು ಅಂತಾನೇ ಹೇಳಬಹುದು. ಜೇನಿನ ಮುಂದೆ ಯಾವ ಸಿಹಿಯೂ ಸರಿ ಸಾಟಿ ಇಲ್ಲ. ಹಾಗೆ ವೈಜ್ಞಾನಿಕವಾಗಿ ನಾವು ಎಷ್ಟೋ ಮುಂದುವರೆದಿದ್ದರೂ ಎಷ್ಟೋ ಘಮ ಘಮ ಸಿಹಿ ಕಂಡುಹಿಡಿದು ತಯಾರಿಸಿದ್ದರೂ, ಉತ್ಪಾದಿಸಿದ್ದರೂ ಜೇನಿಗೆ ಸರಿ ಸಮಾನವಾಗಿ ಮತ್ತೊಂದು ಸುಮಧುರ ಆರೋಗ್ಯಕರ ದ್ರವ ಕೃತಕವಾಗಿ ಉತ್ಪಾದಿಸುವುದು ಅಸಾಧ್ಯ.. ಇಂತಹ ಮಧುರ ಜೇನಿನೊಂದಿಗೆ ನನ್ನ ಜೀವನದ ಸುಮಧುರ ಕ್ಷಣಗಳು ಯಾವ ಯೂನಿವರ್ಸಿಟಿಯೂ ನೀಡದ ಅನುಭವದ ಕಲಿಕೆಯ ಒಂದಷ್ಟು ರೋಚಕತೆಗಳನ್ನು ಹೇಳಬಯಸುವೆ.
ಅಂದು ನಮ್ಮ ಅಪ್ಪ ತಂದ ಅಮ್ಮ ತಿನಿಸಿದ ಜೇನಿನ ಸವಿಗೆ ಸೋತ ನಾನು ಅಂದಿನಿಂದ ನಾನು ಅದನ್ನು ತಿನ್ನಬೇಕೆಂದು ಸಿಕ್ಕ ಸಿಕ್ಕ ಬೇಲಿಯಲ್ಲೆಲ್ಲಾ ಹುಡುಕುತ್ತಿದ್ದೆ. ನನ್ನ ಬಾಲ್ಯದ ಜೀವನ ಸಂಪೂರ್ಣ ಕುರುಚಲು ಕಾಡಿನಂತಹ ಪೊದೆಗಳು ಮುಳ್ಳು ಬೇಲಿಯಲ್ಲೇ ಕಳೆದಿರುವುದು. ನನಗೆ ಹಾವುಗಳನ್ನು ನೋಡವುದೆಂದರೇ ಬಹಳ ಕ್ರೇಜ್... ಹಾವುಗಳ ನೋಡಲು ಹುಡುಕುವಾಗ ಜೇನು ಕಾಣುತ್ತಿದ್ದವು. ಜೇನು ಹುಡುಕುವಾಗ ಹಾವುಗಳೂ ಸಹ ಕಾಣುತ್ತಿದ್ದವು. ನನ್ನ ಬಾಲ್ಯದ ಆರಂಭದ ದಿನಗಳಲ್ಲಿ ನಾವು ವಾಸವಿದ್ದದ್ದು ಕಂದಾಯ ಗ್ರಾಮ ಯಂಜಮುತ್ತನ ಹಳ್ಳಿ ವ್ಯಾಪ್ತಿಯ 'ಮುದ್ದೇರು ಕಪ್ಪಲೇ' ಎಂಬ ಸ್ಥಳದಲ್ಲಿ. ಯಂಜಮುತ್ತನಹಳ್ಳಿ ಎಂಬ ಗ್ರಾಮ ಸಿಡುಬು, ಪ್ಲೇಗ್ ರೋಗಗಳು ಬರುವ ಮುನ್ನ ಅಲ್ಲಿ ಜನವಸತಿ ಪ್ರದೇಶ ಇತ್ತಂತೆ. ಯಾವಾಗ ಈ ಮಹಾಮಾರಿ ಸಿಡುಬುರೋಗ , ಪ್ಲೇಗ್ ರೋಗ ಬಂತೋ ಆಗ ಬದುಕಿಕೊಳ್ಳಲು ಈಗಿರುವ ನಮ್ಮ ಊರು ಬಂಜಗೆರೆ ಗ್ರಾಮ ಉದಯವಾಯಿತು ಎಂದು ನಮ್ಮ ತಾತ, ಇತರರು ಹೇಳುವುದನ್ನು ನಾನು ಕೇಳಿದ್ದೆ. ಆ ಮುದ್ದೇರು ಕಪ್ಪಲೇಯಲ್ಲಿ ಇದ್ದದ್ದು ನಮ್ಮ ಮನೆಗಳು ಹೊರತುಪಡಿಸಿದರೆ ಎಲ್ಲರೂ ಕುರಿಗಾಹಿಗಳೇ. ಕುರಿ ಸಾಕಾಣಿಕೆಯೇ ಅವರ ಮುಖ್ಯ ಉದ್ಯೋಗ. ರಾತ್ರಿಯ ವೇಳೆ ಕುರಿಗಳನ್ನು ಕೂಡುತ್ತಿದ್ದರು. 'ಕುರಿಯಹಟ್ಟಿ' ಕಟ್ಟಲು ಕುರಿಯ ಮರಿಗಳಿಗೆ ಮೇಯಿಸಲು ಜಾಲಿಮರದ ಕೊಂಬೆ, ರೆಂಬೆಗಳನ್ನು ಕೊಯ್ದು ಮರಿಗಳಿಗೆ ಮೇಯಿಸುತ್ತಿದ್ದರು. ಆ ರೆಂಬೆ ಕೊಂಬೆಗಳನ್ನು ತೋಳಗಳು, ನರಿಗಳೂ ಮತ್ತು ಕಳ್ಳರೂ ಬಾರದಿರಲು ಆ ಜಾಲಿಯ ರೆಂಬೆಕೊಂಬೆಗಳನ್ನು ಕುರಿಯ ಹಟ್ಟಿಯ ಸುತ್ತಾ ನೀಟಾಗಿ, ಎತ್ತರಕ್ಕೆ ಬೇಲಿಹಾಕಿರುತ್ತಿದ್ದರು. ಆ ಬೇಲಿ ಹಾಕುವುದು ಅದೊಂದು ಕಲೆಯೇ ಸರಿ. ಆ ಕುರಿಹಟ್ಟಿಯ ಬೇಲಿಯಲ್ಲಿಯೇ ನಾನು ಜೇನು ಮತ್ತು ಹಾವುಗಳನ್ನು ಹುಡುಕುತಿದ್ದುದು. ನನಗೆ ಆರೇಳು ವರ್ಷ ಇರಬಹುದು. ಆ ಬೇಲಿಯಲ್ಲೆಲ್ಲಾ ಬಗ್ಗಿ ಬಗ್ಗಿ ನೋಡುತ್ತಿದ್ದೆ. ಕಣ್ಣಿಗೆ ಕಾಣದಷ್ಟು ದಟ್ಟವಾಗಿರುವ ಬೇಲಿಯಲ್ಲಿ ಅಲ್ಲೇ ಬಿದ್ದಿರುವ ಮಣ್ಣು/ಮರಳನ್ನು ಬೊಗಸೆ ತುಂಬಾ ತುಂಬಿ ಆ ಬೇಲಿಯ ಮೇಲೆ ಹಾಕುತ್ತಿದ್ದೆ. ನನ್ನ ಆಲೋಚನೆಯೇನು ? ಆ ಮಣ್ಣು ಜೇನಿನ ಮೇಲೆ ಬಿದ್ದಾಗ ಆ ನೊಣಗಳು ಎದ್ದೇಳುತ್ತಾವೆ ಅನ್ನುವ ಆಲೋಚನೆಯಿಂದ ಮಣ್ಣುಹಾಕುತಿದ್ದೆ. ಆದರೆ ಆ ಮಣ್ಣಿನಿಂದ ಯಾವತ್ತೂ ಒಂದು ಜೇನನ್ನೂ ಪತ್ತೆ ಮಾಡಲಾಗಲಿಲ್ಲ.
ಬಾಲ್ಯದಲ್ಲಿ ನಮಗೆ ಬೇವಿನಹಣ್ಣು ಹೊಂಗೆಕಾಯಿಗಳನ್ನು ಆರಿಸಿ ತಂದು ಮಾರುವುದು ಒಂದು ಮುಖ್ಯ ಕೆಲಸ ಆಗಿತ್ತು. ಅದರಿಂದ ಬರುವ ಬಿಡಿಗಾಸು ಅಂದರೆ ವಾರಕ್ಕೆ ಎರಡರಿಂದ ಐದು ರುಪಾಯಿ.. ಅದಕ್ಕಾಗಿ ವಾರ ಪೂರ ಅದೇ ಕೆಲಸ ಮಾಡಿದರೂ ಸಿಕ್ಕುತ್ತಿದ್ದದು ಬಿಡಿಗಾಸು. ಹಾಗೆ ಒಂದು ಒಂದು ದಿನ ಬೇವಿನ ಹಣ್ಣು ತರಲು ಹೋದಾಗ ಗಾಳಿಗೆ ಉದುರಿದ್ದ ಹಣ್ಣು ಸಾಕಾಗದೇ ಮರಹತ್ತಿ ಕೊಂಬೆ ಅಲ್ಲಾಡಿಸಿ ಬೇವಿನಹಣ್ಣು ಉದುರಿಸುವ ಆಲೋಚನೆಯಿಂದ ಮರಹತ್ತುವ ಪ್ಲಾನ್ ಮಾಡಿದೆ. ಆದರೆ ಮರವು ಬೇಲಿಯಲ್ಲಿ ಇದ್ದುದರಿಂದ ಮರಹತ್ತಲು ಅಡ್ಡಲಾಗಿದ್ದ ಎರಡು ಮೂರು ಸರ್ಕಾರಿ ಜಾಲಿ ಮುಳ್ಳು ರೆಂಬೆಗಳನ್ನು ತೆಗೆದು ಮರ ಹತ್ತಬೇಕಿತ್ತು. ಹಾಗಾಗಿ ಮುಳ್ಳು ತೆಗೆಯಲು ಮುಂದಾದಾಗ ನನಗೆ ಒಂದು ಜೇನು ಕಂಡಿತು. ನಾನು ಮತ್ತು ನನ್ನ ಅಕ್ಕ ಕಮಲ ಇಬ್ಬರೇ ಹೋಗಿದ್ದೆವು. ಜೇನು ದೊಡ್ಡದಿದೆ ಬಹಳ ತುಪ್ಪ ಇರಬಹುದು ಎಂದು ಜೇನು ತೆಗೆಯಲು ನಿರ್ಧರಿಸಿದೆ. ಅಂದೇ ನಾನು ಸ್ವತಂತ್ರವಾಗಿ ಜೇನು ತೆಗೆಯಲು ಧೈರ್ಯ ಮಾಡಿದ್ದು. ಹುಳುಗಳು ಕಚ್ಚಬಾರದೆಂದು ತೆಗೆದುಕೊಂಡು ಹೋಗಿದ್ದ ಟವೆಲ್ ನ್ನು ಮುಖದ ತುಂಬಾ ಮುಚ್ಚಿಕೊಂಡು ಕಣ್ಣು ಕಾಣಲು ಮಾತ್ರ ಸ್ವಲ್ಪ ತೆರೆದು ಹಾಗೆ ಮತ್ತೊಂದು ಗಟ್ಟಿಕೋಲಿನಿಂದ ಬಡಿದು ಆ ಜೇನಿನ ರೆಂಬೆಯನ್ನು ಮುರಿಯುವುದು ನನ್ನ ಪ್ಲಾನ್ ಆಗಿತ್ತು. ಅದರಂತೆ ಮೊದಲು ಅದಕ್ಕಿದ್ದ ಅಡೆ ತಡೆ ಕಡ್ಡಿಗಳನ್ನು ತೆಗೆಯಬೇಕಲ್ಲ? ಆ ತೆಗೆಯುವ ವೇಳೆಯಲ್ಲಿ ನಾಲ್ಕಾರು ಹುಳುಗಳು ಸಹಜವಾಗಿ ಎದ್ದೇಳುತಿದ್ದವು. ಅದರಲ್ಲಿ ಒಂದು ಹುಳು ನನ್ನ ಕೈ ಬೆರಳ ಮಣಿಕಟ್ಟಿಗೆ ಕಚ್ಚಿತ್ತು. ಕಚ್ಚಿದ ಪರಿಣಾಮ ಉರಿ ಊತ ಶುರು ಆಗಿತ್ತು. ಆ ಹುಳು ಎದ್ದು ಗುಂಪಾಗಿ ಧಾಳಿ ಮಾಡುವ, ಕಚ್ಚುವ ಭಯಕ್ಕೆ ಹತ್ತು-ಹದಿನೈದು ಅಡಿ ದೂರ ಓಡಿ ಹೋಗುತ್ತಿದ್ದೆ. ಹೀಗೆ ಪುನಃ ಬಂದು, ಆ ಜೇನುಗೂಡಲು ಕೆಣಕಲು ಮತ್ತೆ ಕಚ್ಚಲು ಧಾಳಿ ಮಾಡಲು ಬಂದಾಗ ಕೈ ಬೀಸುತ್ತಾ ಮತ್ತೆ ಮತ್ತೆ ಓಡುತ್ತಿದ್ದೆ. ಎರಡ್ಮೂರು ಬಾರಿ ಹೀಗೆ ಪ್ರಯತ್ನ ಮಾಡಲು ಅವು ಅಟ್ಟಿಸಿಕೊಂಡು ಬರುತ್ತಿರಲು ಒಮ್ಮೊಮ್ಮೆ ಜೇನುಬೇಡ ಏನೂ ಬೇಡ ಸಿಕ್ಕಾಪಟ್ಟೆ ಹುಳುಗಳು ಕಚ್ಚಿಬಿಟ್ರೆ ಏನ್ ಗತಿ ಮನೆಗೋಗಿ ಅಪ್ಪ /ಅಣ್ಣನನ್ನು ಕರೆದುಕೊಂಡು ಬರುವ ಯೋಚನೆ ಮಾಡಿದೆನಾದರೂ ಕೊನೆಗೆ ಏನಾದ್ರೂ ಆಗಲಿ ನೋಡೆ ಬಿಡುವ ಎಂದು ಗಟ್ಟಿಧೈರ್ಯಮಾಡಿ ಗಟ್ಟಿಕೋಲಿನಿಂದ ಎರ್ರಾ ಬಿರ್ರಿ ಆ ಬೇಲಿ ಮತ್ತು ಜೇನಿಗೆ ಹೊಡೆದೆ. ಹೊಡೆದ ರಭಸಕ್ಕೆ ಜೇನುಗೂಡೇ ಛಿಧ್ರವಾಗಿ ಜೇನುತುಪ್ಪ ಸ್ಥಳದಲ್ಲೇ ಸೋರಲಾರಂಭಿಸಿತ್ತು. ಬೇವಿನ ಹಣ್ಣು ಆರಿಸಲು ಒಂದು ತಟ್ಟೆಯನ್ನೋ ಅಥವಾ ಡಬ್ಬಿಯನ್ನೋ ತೆಗೆದುಕೊಂಡು ಹೋಗುತ್ತಿದ್ದೆವು. ಅದರಂತೆ ಅಂದು ನಾನು ಒಂದು ತಟ್ಟೆಯನ್ನು ತೆಗೆದುಕೊಂಡು ಹೋಗಿದ್ದೆ. ಆ ತಟ್ಟೆಯೋ ಬೇವಿನ ಹಣ್ಣಿನ ಹಾಲು, ಮಣ್ಣು ಆಗಿತ್ತು. ಆಗ ಮಣ್ಣೆಲ್ಲಾ ನಮಗೆ ಲೆಕ್ಕಕಿರಲಿಲ್ಲ ಬಿಡಿ. ಸಗಣಿ ಕಸ ಬಾಚುವಾಗಲೇ ಸಗಣಿ ಕೈ ಯಿಂದನೇ ಜೇಬಲ್ಲಿ ಹಾಕಿ ಕೊಂಡಿರುವ ತಿನ್ನುವ ವಸ್ತುಗಳಿಗಾಗಿ ಕಿತ್ತಾಡಿಕೊಂಡು ತಿನ್ನುತಿದ್ದೆವು. ಇನ್ನೂ ಈ ತಟ್ಟೆ ಅದುಕ್ಕೆ ಹೋಲಿಸಿದರೆ ತುಂಬಾ ಕ್ಲೀನ್ ಇತ್ತು. ಹಾರಿಹೋದ ಜೇನು ನೊಣಗಳೆಲ್ಲಾ ತಲೆಯ ಮೇಲೆಯೇ ನೂರಾರು ಹುಳುಗಳು ಜುಯ್ ಎಂದು ಗುಂಯ್ಗುಡುತ್ತಾ ತಿರುಗುತ್ತಿವೆ. ಅವೆಲ್ಲಾ ಸೇರಿ ನನ್ನ ಮೇಲೆ ದಾಳಿ ಮಾಡಿದರೆ ನನ್ನ ಕಥೆ ಮುಗಿಯಿತೆಂಬ ನಡುಕ ಶುರುವಾಯಿತು. ಮುರಿದು ಹೋದ ಜೇನುಗೂಡಿನಿಂದ ಸೋರಿಹೋಗುತ್ತಿದ್ದ ಜೇನುತುಪ್ಪವನ್ನು ಕಸಕಡ್ಡಿ ಸಹಿತ ಎಲ್ಲವನ್ನೂ ತಟ್ಟೆಗೆ ತುಂಬಿದೆ. ಅಲ್ಲಿಂದ ದೂರ ಬಂದು ಜೇನನ್ನು ತಿನ್ನುತಿದ್ದೆವು. ಕೋಲಿನ ಹೊಡೆತಕ್ಕೆ ನಜ್ಜು ಗುಜ್ಜಾಗಿ ತುಪ್ಪದಲೆಲ್ಲಾ ಹುಳುಗಳು ಅರೆಜೀವವಾಗಿ ಸಿಕ್ಕಿ ಒದ್ದಾಡುತ್ತಿದ್ದವು. ಬೇವಿನ ಎಲೆಕಡ್ಡಿಗಳು ಜೇನುತುಪ್ಪದಲ್ಲಿ ಮಿಂದದ್ದರಿಂಗ ಬೇವಿನ ಎಲೆ ಕಡ್ಡಿಗಳನ್ನು ಚೀಪಿ ಚೀಪಿ ಎಸೆಯುತ್ತಿದ್ದೆವು. ತುಪ್ಪದಲ್ಲಿ ಒದ್ದಾಡುತಿದ್ದ ವಯಸ್ಕ ಹುಳುಗಳನ್ನು ಬಾಯಿಗೆ ಹಾಕಿ ಚಪ್ಪರಿಸುವಾಗ ಕೈಗೆ ಬಾಯಿಗೂ, ನಾಲಿಗೆ, ದವಡೆ, ತುಟಿ ಹೀಗೆ ಎಲ್ಲೆಂದರಲ್ಲಿ ಕಚ್ಚಿದ್ದವು. ಹಾಗೂ ಹೀಗೂ ಜೇನು ಕಿತ್ತು ತಿಂದಿದ್ದೆವು. ಅವತ್ತು ಪೂರಾ ಜೇನು ಕಿತ್ತದ್ದೇ ನಮ್ಮ ಸಾಧನೆ. ಬೇವಿನ ಹಣ್ಣಿನ ಪುಟ್ಟಿ ಖಾಲಿ ಖಾಲಿ!
ಜೇನುಕಿತ್ತ ಸಂತಸಕ್ಕೇ ನಮ್ಮ ಕೆಲಸ ಮರೆತೇ ಹೋಗಿತ್ತು. ಊದಿಕೊಂಡ ಮುಖವ ಮಾಡಿಕೊಂಡು ತಟ್ಟೆಗೆ ಅಂಟಿಕೊಂಡ ಜೇನುತುಪ್ಪವ ನೆಕ್ಕುತ್ತಾ, ಬೆರಳುಚೀಪುತ್ತಾ ಒಂದೆರಡು ಕೆಜಿಯಷ್ಟು ತೂಕವಿದ್ದ ಪುಟ್ಟಿಗಳನ್ನು ಹೊತ್ತು ಮನೆಗೆ ಹಿಂದಿರುಗಿದೆವು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************