-->
ಬೆಂಬಲದ ಫಲವೇ ಸಫಲತೆ - ಕಥೆ

ಬೆಂಬಲದ ಫಲವೇ ಸಫಲತೆ - ಕಥೆ

ಮಕ್ಕಳ ಜಗಲಿಯಲ್ಲಿ ಕಥೆ
ಬರಹ : ದೀಪ್ತಿ ಬಿ
ದ್ವಿತೀಯ ಬಿ ಎ
ಸಂತ ಆಗ್ನೇಸ್ ಕಾಲೇಜು ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ



     ಬೆಂಬಲದ ಫಲವೇ ಸಫಲತೆ
ಒಂದು ಭಾನುವಾರ. ನನ್ನೆಲ್ಲಾ ಕೆಲಸಗಳನ್ನು ಮುಗಿಸಿ ಟಿವಿಯ ಮುಂದೆ ಬಂದು ಕುಳಿತೆ. ಕೆಲಕಾಲ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿದ ನಂತರ ವಾರ್ತೆಯಲ್ಲಿ ಏನಿದೆ ನೋಡೋಣ ಎಂದು ಚಾನೆಲ್ ಬದಲಾಯಿಸಿದೆ. ಅಂದು ಅಲ್ಲಿ ಬಂದ ವಿಚಾರವಾರ್ತೆ ನನ್ನ ಮನ ಕಲಕಿತು.
        ಅದು 1998-99 ನೇ ಶೈಕ್ಷಣಿಕ ವರ್ಷ. ಹತ್ತನೇ ತರಗತಿಯಲ್ಲಿ ಸುಮಾರು ಐವತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರು. ಒಬ್ಬಾಕಿ ಹುಡುಗಿ. ಅವಳ ಹೆಸರು ಸುಮಾ. ಆಕೆ ಅಷ್ಟೇನೂ ಶ್ರೀಮಂತ ಕುಟುಂಬದವಳಲ್ಲ; ಕಡುಬಡತನದವಳೂ ಅಲ್ಲ. ಶಾಲೆಗೆ ಬರುತ್ತಿದ್ದಳು, ತರಗತಿಯಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡುತ್ತಿದ್ದಳು. ಆದರೆ ಕಲಿಕೆಯಲ್ಲಿ ತುಸು ನಿಧಾನ. ಎಂದಿನಂತೆ ತರಗತಿಗೆ ಬಂದ ಗುರುಗಳು ಅಂದು ವಿದ್ಯಾರ್ಥಿಗಳಿಗೆ ಒಂದೊಂದು ವಿಷಯಗಳನ್ನು ನೀಡಿ ಒಂದು ನಿಮಿಷದ ಕಾಲ ವಿಷಯದ ಕುರಿತು ಮಾತನಾಡಲು ಹೇಳಿದರು. ಎಲ್ಲಾ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ವಿಷಯಗಳ ಬಗ್ಗೆ ಉತ್ತಮವಾಗಿ ಮಾತನಾಡಿದರು. ಆದರೆ ಸುಮಾ ಮಾತ್ರ ಎದ್ದು ನಿಲ್ಲಲೂ ಹೆದರಿ ಗುರುಗಳು ಕೇಳಿದಾಗ ಅತ್ತೇ ಬಿಟ್ಟಳು. ತನ್ನ ಸಹಪಾಠಿಗಳೆಲ್ಲಾ ಆಕೆಯನ್ನು ಕಂಡು ಗೇಲಿ ಮಾಡಿ ನಗತೊಡಗಿದರು.
          ಹೀಗೆ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿ ವಿದ್ಯಾರ್ಥಿಗಳು ಶಾಲೆಯಿಂದ ತೆರಳುತ್ತಾರೆ. ಎಲ್ಲರೂ ಒಳ್ಳೆಯ ಕೆಲಸಕ್ಕೆ ಸೇರುತ್ತಾರೆ. ಹಲವು ವರ್ಷಗಳು ಕಳೆದವು. ಒಂದು ದಿನ 1999ರಲ್ಲಿ ಹತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಸ್ನೇಹ ಸಮ್ಮಿಲನದ ದಿನದಂದು ಎಲ್ಲಾ ಹಿರಿಯ ವಿದ್ಯಾರ್ಥಿಗಳೂ ಉತ್ತಮ ರೀತಿಯಲ್ಲಿ ತಯಾರಾಗಿ ಬರುತ್ತಾರೆ. ತಮ್ಮ ಸ್ನೇಹಿತ-ಸ್ನೇಹಿತೆಯರನ್ನು ಕಂಡು ಸಂತೋಷದಿಂದ ಹಲವಾರು ನೆನಪುಗಳ ಮೆಲುಕು ಹಾಕುತ್ತಾರೆ.
     ‌ ಅದಾಗಲೇ ಕಾರ್ಯಕ್ರಮ ಆರಂಭವಾಗುತ್ತದೆ. ಗುರುಗಳು ಕಾರ್ಯಕ್ರಮಕ್ಕೆ ಶುಭ ಕೋರಿ, "ಇದೀಗ ನಾನು ನಿಮಗೆಲ್ಲರಿಗೂ ಒಂದು ಸುವಿಚಾರವನ್ನು ತಿಳಿಸುತ್ತಿದ್ದೇನೆ" ಎಂದರು. ಎಲ್ಲರೂ ಮೌನದಿಂದ, ಆಸಕ್ತಿಯಿಂದ ಗುರುಗಳ ಮಾತಿಗೆ ಕಿವಿಗೊಡುತ್ತಾರೆ. ಆಗ ಗುರುಗಳು "ನಿಮ್ಮ ಬ್ಯಾಚ್ ನಲ್ಲಿ ಕಲಿಯುತ್ತಿದ್ದ ಒಬ್ಬಳು ಹುಡುಗಿ ಇದೀಗ ನಿಮ್ಮ ಮುಂದೆ ಐಎಎಸ್ ಅಧಿಕಾರಿಯಾಗಿ ನಿಂತಿದ್ದಾಳೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ. ಸಹಪಾಠಿಗಳೆಲ್ಲರಿಗೂ ಸಂತಸವೋ ಸಂತಸ. ಯಾರು ಆಕೆ ಎಂದು ಆಶ್ಚರ್ಯದಿಂದ ನೋಡಿದಾಗ, ಆಕೆ ಇನ್ನಾರೂ ಅಲ್ಲ ಅಂದು ಒಂದು ವಿಷಯದ ಕುರಿತು ನಿಮಿಷ ಮಾತನಾಡಲು ಹೆದರಿದ ಆ ಹುಡುಗಿ ಸುಮಾ. ಸುಮಾ ಐಎಎಸ್ ಅಧಿಕಾರಿ ಎಂದು ತಿಳಿದ ಆಕೆಯ ಸಹಪಾಠಿಗಳೆಲ್ಲರೂ ಹೆಮ್ಮೆಯಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅಂದೊಂದು ದಿನ ಗೇಲಿ ಮಾಡಿದ ಸ್ನೇಹಿತರು ಇಂದು ಆಕೆಯ ಜೊತೆಗೆ ಒಂದು ಫೋಟೋ ತೆಗೆದುಕೊಳ್ಳಲು ಹಂಬಲಿಸಿದರು.
    ‌ ಅಷ್ಟು ಸಮಯ ಮೌನವಾಗಿದ್ದ ಆಕೆ ವೇದಿಕೆಗೆ ಬಂದು, ಆನಂದ ಭಾಷ್ಪವಿತ್ತು ಮೊಟ್ಟ ಮೊದಲಿಗೆ ತನ್ನ ಗುರುಗಳ ಕಾಲಿಗೆ ವಂದಿಸುತ್ತಾಳೆ. ತನ್ನ ಕಣ್ಣೊರೆಸಿಕೊಳ್ಳುತ್ತಾ, "ಇಂದು ನಾನು ಇಲ್ಲಿ ನಿಂತು ಮಾತನಾಡಲು ಹಾಗೂ ಅಧಿಕಾರಿಯಾಗಲು ಕಾರಣೀಕರ್ತ ಈ ನನ್ನ ಗುರುಗಳು. ಅಂದು ನಾನು ಅಳುತ್ತಾ ಕೂತಾಗ ನೀವೆಲ್ಲಾ ನಗೆಯಾಡಿ ಹೋದಿರಿ. ಆದರೆ ನಂತರ ಬಂದು ನನಗೆ ಸಮಾಧಾನವನ್ನು ತಿಳಿಸಿ ನನ್ನ ಭಯವನ್ನು ಹೋಗಲಾಡಿಸಿ ಪ್ರತಿಯೊಂದು ಹೆಜ್ಜೆಯಲ್ಲೂ ನನಗೆ ಶಕ್ತಿಯಾಗಿ ನಿಂತ ಈ ಗುರುಗಳ ಬೆಂಬಲವೇ ಇಂದು ನನ್ನ ಸಫಲತೆಗೆ ಕಾರಣ" ಎಂದು ಹೇಳುವಾಗ ಸುಮಾಳ ಗಂಟಲು ಗದ್ಗದಿತವಾಯಿತು... ಅಂದು ವಾರ್ತೆಯಲ್ಲಿ ಈ ಕಥೆಯನ್ನು ಕಂಡು ನನ್ನ ಕಣ್ಣಂಚಲ್ಲಿ ಬಂದದ್ದು ಆನಂದ ಭಾಷ್ಪವೋ ಅಥವಾ ನೋವಿನ ಕಣ್ಣೀರೋ ಎಂಬುದು ನನಗರಿಯದು!
         ಪ್ರತಿಯೊಬ್ಬ ಮನುಷ್ಯನ ಜೀವನದ ಮೂಲ ಉದ್ದೇಶ ಸಫಲತೆ. ತನ್ನ ಹುಟ್ಟಿನಿಂದ ಸಾವಿನವರೆಗೂ ಆತ ಒಂದಲ್ಲಾ ಒಂದು ರೀತಿಯ ಹೋರಾಟಕ್ಕೆ ಮುಂದಾಗುತ್ತಾ, ಸಫಲತೆಯಡೆಗೆ ತಲುಪುವ ಕನಸನ್ನು ಹೊಂದಿರುತ್ತಾನೆ. ಪ್ರತಿಯೊಬ್ಬ ಮನುಷ್ಯನ ಸಫಲತೆಯ ಹಿಂದೆಯೂ ಒಂದು ಪ್ರಾಮಾಣಿಕ ವ್ಯಕ್ತಿಯ ಅಥವಾ ಶಕ್ತಿಯ ಬೆಂಬಲವಿರುತ್ತದೆ. ಆ ಬೆಂಬಲದ ಪ್ರತಿಫಲವೇ ಸಫಲತೆ....
................................................. ದೀಪ್ತಿ ಬಿ
ದ್ವಿತೀಯ ಬಿ ಎ
ಸಂತ ಆಗ್ನೇಸ್ ಕಾಲೇಜು ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************


Ads on article

Advertise in articles 1

advertising articles 2

Advertise under the article