ಲ್ಯಾಂಡ್ ಸ್ಕೇಪ್ ಕಲಾಶಿಬಿರ
Saturday, March 2, 2024
Edit
ಲೇಖನ : ಪಾಂಬೂರಿನಲ್ಲಿ
ಮಹಾಲಸಾ ವಿದ್ಯಾರ್ಥಿಗಳಿಂದ
ಲ್ಯಾಂಡ್ ಸ್ಕೇಪ್ ಕಲಾಶಿಬಿರ
ಬರಹ : ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
ಚಿತ್ರಗಳು : ಸೈಯದ್ ಆಸಿಫ್ ಆಲಿ, ಉಪನ್ಯಾಸಕರು
ಲಲಿತ ಕಲೆಗಳಲ್ಲಿ ಒಂದಾದ 'ಚಿತ್ರಕಲೆ' ಒಂದು ವಿಶಿಷ್ಟ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಚಿತ್ರವು ಒಂದು ಭಾಷೆಯಾಗಿ, ಒಂದು ಲಿಪಿಯಾಗಿ, ದೃಶ್ಯ ಕಲೆಯಾಗಿ ಒಟ್ಟು ನಾಗರಿಕತೆಯ ಅವಿಭಾಜ್ಯ ಅಂಗವಾಗಿ ಬೆಳೆದುಬಿಟ್ಟಿದೆ. ಆದಿಮಾನವನ ಕಾಲದಷ್ಟು ಪುರಾತನವಾಗಿರುವ ಚಿತ್ರಕಲೆಗೆ ವಿಶೇಷವಾದ ಸ್ಥಾನಮಾನ ಇದೆ. ಪಾಶ್ಚಾತ್ಯ ರ ಪ್ರಭಾವದಿಂದ ಭಾರತೀಯ ಚಿತ್ರಕಲೆಯಲ್ಲಿ ಬಹಳಷ್ಟು ಬದಲಾವಣೆಗಳಾದರೂ ಕೂಡ ತನ್ನದೇ ಆದ ಪ್ರಕಾರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶಾಲ ಭಾರತದಲ್ಲಿ ಹಲವಾರು ಪ್ರಾದೇಶಿಕ ಕಲೆಗಳು ಭಾರತದ ಚಿತ್ರಕಲಾ ಇತಿಹಾಸವನ್ನು ಶ್ರೀಮಂತ ಗೊಳಿಸಿದೆ. ಚಿತ್ರಕಲೆ ಒಂದು ವಿಷಯವಾಗಿ ಕಲಿಕೆಯ ಭಾಗವಾಗಿ ಹೊರಹೊಮ್ಮಿದ ಮೇಲೆ ಬಹಳಷ್ಟು ಸಂಶೋಧನೆಗಳು ನಡೆದಿವೆ.
ಭಾರತದಲ್ಲಿ ಬಹಳಷ್ಟು ಚಿತ್ರಕಲಾ ಮಹಾವಿದ್ಯಾಲಯಗಳು ಸ್ಥಾಪನೆಯಾಗಿ ಜಗದ್ವಿಖ್ಯಾತ ಕಲಾವಿದರು ಬೆಳಕಿಗೆ ಬರಲು ಕಾರಣವಾಯಿತು. 1978ರಲ್ಲಿ ಸ್ಥಾಪನೆಯಾದ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯವೂ ಚಿತ್ರಕಲಾ ಕ್ಷೇತ್ರದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದೆ. ಕರ್ನಾಟಕದ ಬೆರಳೆಣಿಕೆಯಷ್ಟು ಸರಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಇದೂ ಒಂದು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಏಕೈಕ ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯ ಇದಾಗಿದ್ದು ಮಂಗಳೂರಿನ ಕೇಂದ್ರ ಭಾಗದಲ್ಲಿ ನೆಲೆನಿಂತಿದೆ. ಸುಮಾರು 45 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ವಿದ್ಯಾಲಯವು ಸಾವಿರಾರು ಚಿತ್ರ ಕಲಾವಿದರನ್ನು ಹುಟ್ಟು ಹಾಕಿದೆ. ಖ್ಯಾತನಾಮ ಚಿತ್ರಕಲಾ ಉಪನ್ಯಾಸಕರು ಇಲ್ಲಿ ಮಾರ್ಗದರ್ಶನ ನೀಡುತ್ತಿದ್ದು ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿದೆ.
ಹತ್ತನೇ ತರಗತಿ ಅಥವಾ ಪಿಯುಸಿ ಉತ್ತೀರ್ಣರಾಗಿ ಪ್ರವೇಶಾತಿ ಬಯಸುವ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾರದ ಚಿತ್ರಕಲೆಗಳನ್ನು ಕಲಿಸಲಾಗುತ್ತದೆ. ಪೇಂಟಿಂಗ್ ಹಾಗೂ ಅಪ್ಲೈಡ್ ಆರ್ಟ್ ಎಂಬ ವಿಭಾಗಗಳಲ್ಲಿ ವಿವಿಧ ರೀತಿಯ ಪಠ್ಯಗಳಿದ್ದು ಚಿತ್ರಕಲೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಇಲ್ಲಿ ಬೋಧಿಸಲಾಗುತ್ತದೆ. ತರಗತಿಯೊಳಗೆ ಕಲಿಯುವ ಪ್ರಕ್ರಿಯೆ ಒಂದಾದರೆ ಹೊರಾಂಗಣ ಚಿತ್ರಕಲೆಯ ಅಭ್ಯಾಸವು ಕೂಡಾ ಇಲ್ಲಿನ ಒಂದು ಭಾಗವಾಗಿದೆ. ಕಾಲೇಜಿನ ನಾಲ್ಕು ಗೋಡೆ ಮಧ್ಯದಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಚಿತ್ರ ಮಾಡುವ ಅನುಭವ ವಿಶೇಷವಾದುದು. ನಿಸರ್ಗ ಚಿತ್ರಣದ ವಿಶೇಷ ಶಿಬಿರವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯವು ಪ್ರತಿವರ್ಷ ಇಲ್ಲಿ ನಡೆಸಲಾಗುತ್ತದೆ. ಈ ಶೈಕ್ಷಣಿಕ ಅವಧಿಯಲ್ಲಿ ಉಡುಪಿ ಜಿಲ್ಲೆಯ ಶಿರ್ವದ ಪಾಂಬೂರಿನ ಪರಿಚಯ ಸಂಸ್ಥೆಯ ಸಹಯೋಗದೊಂದಿಗೆ ಆ ಊರಿನ ನಿಸರ್ಗದ ರಮಣೀಯ ದೃಶ್ಯಗಳನ್ನು ಜಲವರ್ಣದಲ್ಲಿ ಸೆರೆಹಿಡಿಯಲಾಯಿತು.
ಈ ಶಿಬಿರದ ನಿರ್ದೇಶಕ ಸಯ್ಯದ್ ಆಸಿಫ್ ಆಲಿ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಉಪನ್ಯಾಸಕರು. ಅಂತರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರು. ಜಲವರ್ಣ, ತೈಲ ವರ್ಣ ಮಾಧ್ಯಮಗಳಲ್ಲಿ ವಿಶೇಷವಾಗಿ ತೊಡಗಿಸಿ ಕೊಂಡವರು. ನಿಸರ್ಗ ಚಿತ್ರಣ, ವ್ಯಕ್ತಿ ಚಿತ್ರಣಗಳಲ್ಲಿ ವಿಶೇಷ ನೈಪುಣ್ಯತೆಯನ್ನು ಸಾಧಿಸಿದವರು. ಸುಮಾರು 30 ವರ್ಷಗಳಿಂದ ಉಪನ್ಯಾಸಕರಾಗಿ ಅನುಭವವನ್ನು ಹೊಂದಿರುವ ಇವರು ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಜಲವರ್ಣ ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಮುನ್ನೆಲೆಗೆ ಕಾರಣರಾಗಿದ್ದಾರೆ. ಹಂಪಿ, ಚಿತ್ರದುರ್ಗ, ಬಾದಾಮಿ, ಪಟ್ಟದಕಲ್ಲು , ಉತ್ತರ ಕನ್ನಡ, ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಶ್ರೀರಂಗಪಟ್ಟಣ, ತುಮಕೂರಿನ ದೇವರಾಯ ದುರ್ಗಾ ಹೀಗೆ ಪ್ರಕೃತಿಯ ಮಡಿಲಲ್ಲಿ ಜಲವರ್ಣ ಕಲಾಕೃತಿಗಳನ್ನು ರಚಿಸುವುದು ಇವರ ನಿರಂತರ ಸಾಧನೆಗಳಲ್ಲಿ ಒಂದಾಗಿದೆ.
ಉಡುಪಿ ಜಿಲ್ಲೆಯ ಶಿರ್ವ ದ ಪಾಂಬೂರಿನಲ್ಲಿ ನಡೆದ ಈ ಲ್ಯಾಂಡ್ಸ್ಕೇಪ್ ಶಿಬಿರದಲ್ಲಿ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹತ್ತು ದಿನಗಳ ಕಾಲ ನಡೆದ ವಸತಿ ಸಹಿತ ಈ ಶಿಬಿರದಲ್ಲಿ ಪ್ರತಿ ವಿದ್ಯಾರ್ಥಿಗಳು ದಿನಂಪ್ರತಿ ಎರಡು ಕಲಾಕೃತಿಗಳಂತೆ 20ಕ್ಕಿಂತ ಹೆಚ್ಚು ಚಿತ್ರಗಳನ್ನು ರಚಿಸಿದರು. ಪಾಂಬೂರಿನ ಸುತ್ತಮುತ್ತಲಿನ ರಮಣೀಯ ಪ್ರಕೃತಿ ದೃಶ್ಯಗಳು ಇವರ ವಿಷಯ ವಸ್ತುಗಳಾಗಿದ್ದವು.
ಪ್ರತಿ ವಿದ್ಯಾರ್ಥಿಗಳು ಲ್ಯಾಂಡ್ ಸ್ಕೇಪ್ ಸ್ಟ್ಯಾಂಡ್, ಲ್ಯಾಂಡ್ ಸ್ಕೇಪ್ ಬೋರ್ಡ್, ಹ್ಯಾಂಡ್ ಮೇಡ್ ಪೇಪರ್, ಜಲವರ್ಣ ( water colour), ಬ್ರಷ್ ಇತ್ಯಾದಿ ಸಾಮಗ್ರಿಗಳೊಂದಿಗೆ ಬೆಳಗ್ಗೆನೇ ಸಿದ್ದರಾಗಿರುತ್ತಿದ್ದರು. ಕಲಾಕೃತಿಗಳ ರಚನೆಗೆ ಒಪ್ಪುವ ಸ್ಥಳಗಳನ್ನು ಆಯ್ದುಕೊಂಡು ಅನುಕೂಲವೆನಿಸುವ ಸ್ಥಳದಲ್ಲಿ ಕುಳಿತು ಚಿತ್ರರಚನೆಗೆ ತೊಡಗುವರು. ಎದುರಿಗೆ ಕಾಣುವ ಪ್ರಕೃತಿಯ ದೃಶ್ಯಗಳನ್ನು ಅನುಭವಿಸಿ ಬೆಳಗ್ಗಿನ ಸೂರ್ಯನ ಬೆಳಕಿನ ಬಣ್ಣಗಳನ್ನು ಗ್ರಹಿಸುವುದು ಚಿತ್ರದ ಮೊದಲ ಹಂತ. ಸೀಸದ ಕಡ್ಡಿಯಿಂದ ಭೂ ದೃಶ್ಯದ ರೇಖಾಚಿತ್ರವನ್ನು ರಚಿಸುವುದು ಎರಡನೇ ಹಂತ. ಎದುರಿಗೆ ಕಾಣುವ ನಿಸರ್ಗದ ಮೇಲೆ ಬೀಳುವ ಸೂರ್ಯನ ಬೆಳಕಿನ ವ್ಯತ್ಯಾಸಗಳನ್ನು ಗಮನಿಸಿ ಬೆಳಕಿನ ಬಣ್ಣಗಳನ್ನು ಗೊತ್ತಾದ ಪ್ರಮಾಣದಲ್ಲಿ ಬಳಸುವುದು ಮೂರನೇ ಹಂತ. ನೆರಳಿನ ಛಾಯೆಗಳನ್ನು ಅನುಭವಿಸಿ ಗಾಢವಾದ ಬಣ್ಣಗಳನ್ನು ಬಳಸುತ್ತಾ ಹ್ಯಾಂಡ್ ಮೇಡ್ ಪೇಪರ್ ಮೇಲೆ ಪಾರದರ್ಶಕ ರೀತಿಯಲ್ಲಿ ರಚಿಸುವ ಕಾರ್ಯ ನಿರಂತರವಾಗಿ ಸಾಗುತ್ತದೆ. ಹೀಗೆ ತೆಳುವಾದ ಬಣ್ಣದಿಂದ ಗಾಢವಾದ ಬಣ್ಣಕ್ಕೆ ತಿರುಗುವ ವಿವಿಧ ಹಂತಗಳನ್ನು ಪಾರದರ್ಶಕ ರೀತಿಯಲ್ಲಿ ಬಳಸುವಿಕೆಯಿಂದ ಜಲವರ್ಣದ ಕಲಾಕೃತಿಗಳು ನಿರ್ಮಾಣಗೊಳ್ಳುತ್ತದೆ.
ಜಲ ವರ್ಣದ ಮೇಲಿನ ಹಿಡಿತ ಸುಲಭದಲ್ಲಿ ಕೈ ಹಿಡಿಯುವುದಿಲ್ಲ. ಪ್ರಕೃತಿಯಲ್ಲಿ ಅಭ್ಯಾಸ ನಿರಂತರವಾಗಿರಬೇಕು. ಪ್ರತಿಯೊಂದು ನಿಮಿಷಗಳಿಗೂ ಕೂಡ ಸೂರ್ಯನ ಬೆಳಕಿನ ಪರಿಣಾಮ, ಬೇರೆ ಬೇರೆ ಬದಲಾವಣೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಬೆಳಗಿನ ಸಮಯ ಮತ್ತು ಸಂಜೆ ಸಮಯದಲ್ಲಿ ಕಾಣುವಂತ ಬಣ್ಣಗಳು, ಅವುಗಳ ನೆರಳಿನ ಛಾಯೆಗಳು ಆಗುವ ಬದಲಾವಣೆಗಳನ್ನು ನಾವು ಅನುಭವಿಸಿ ಕಣ್ಣಿನಿಂದ ನೋಡಿ ಗ್ರಹಿಸಿ ಅವಕಾಶದಲ್ಲಿ ಸೃಷ್ಟಿಸುವುದು ಬಹು ಮುಖ್ಯ. ಕಲಾವಿದ ಉಪನ್ಯಾಸಕ ಸೈಯದ್ ಆಸಿಫ್ ಆಲಿ ಅವರ ಸಮರ್ಥ ಮಾರ್ಗದರ್ಶನದಿಂದ ಎಲ್ಲಾ ವಿದ್ಯಾರ್ಥಿಗಳು ಜಲವರ್ಣವನ್ನು ಬಳಸುವ ರೀತಿಯ ವೈವಿಧ್ಯ ಕ್ರಮಗಳನ್ನು ಅರಿತುಕೊಂಡರು. ನೇರವಾಗಿ ಬೀಳುವ ಸೂರ್ಯನ ಕಿರಣಗಳು ನಿಸರ್ಗದ ಮೇಲೆ ಉಂಟಾಗುವ ಬಣ್ಣದ ವೈಪರೀತ್ಯಗಳನ್ನು ಸೂಕ್ಷ್ಮವಾಗಿ ಅವಕಾಶದ ಮೇಲೆ ಪ್ರಸ್ತುತಪಡಿಸುವ ಕಲೆಯನ್ನು ಕರಗತ ಮಾಡಿಕೊಂಡರು. ನಿಸರ್ಗ ಚಿತ್ರವನ್ನು ರಚಿಸುವಾಗ ರೇಖಾ ಚಿತ್ರವನ್ನು ಯಥಾದರ್ಶನ ನಿಯಮವನ್ನು ಪ್ರಧಾನವಾಗಿಟ್ಟುಕೊಂಡು ರಚಿಸುವುದು ಪದ್ಧತಿ. ಇದೇ ರೀತಿ ಬಣ್ಣಗಳನ್ನು ಬಳಿಯುವಲ್ಲಿಯೂ ಕೂಡ ಬಣ್ಣದ ಯಥಾದರ್ಶನವನ್ನು ಕೂಡ ಗಮನದಲ್ಲಿಟ್ಟುಕೊಂಡು ಬಳಿಯುವುದು ಪ್ರಧಾನ ಅಂಶವಾಗಿದೆ.
ಈ ರೀತಿಯ ಪದ್ಧತಿಯಿಂದ ಸೆರೆಹಿಡಿದ ಪ್ರಕೃತಿಯ ದೃಶ್ಯಗಳ ಅಂತರವನ್ನು ತಿಳಿಯಬಹುದಾಗಿದೆ. ಚಿತ್ರರಚನಕಾರ ಇದ್ದ ಸ್ಥಳದಿಂದ ಎದುರಿಗಿರುವ ಭೂ ದೃಶ್ಯಗಳ ಹತ್ತಿರ ಮತ್ತು ದೂರವನ್ನು ನೈಜತೆಯಿಂದ ಕಂಡುಹಿಡಿಯಬಹುದಾಗಿದೆ. ಹ್ಯಾಂಡ್ ಮೇಡ್ ಪೇಪರ್ ಮೇಲೆ ಮೂಡಿದ ಚಿತ್ರಗಳು ಪ್ರಾಕೃತಿಕ ನೈಜ ಸೌಂದರ್ಯವನ್ನು ಹಿಡಿದಟ್ಟುಕೊಳ್ಳುವಲ್ಲಿ ಇದು ನೆರವಾಗುತ್ತದೆ. ಹೀಗೆ ಮೂಡುವ ಪ್ರತಿಯೊಂದು ಚಿತ್ರಗಳು ಕೂಡ ಬಣ್ಣಗಳ ಏರಿಳಿತಗಳು, ನೆರಳು ಬೆಳಕಿನ ಆಟಗಳು, ಯಥಾ ದರ್ಶನದ ಒಟ್ಟು ಪ್ರಭಾವವನ್ನು ಕಾಣಬಹುದು.
ನಿರ್ಮಾಣಗೊಂಡ ವಿದ್ಯಾರ್ಥಿಗಳ ಕಲಾಕೃತಿಗಳು ಕಲಿಕೆಯ ಹಾದಿಯಲ್ಲಿ ಸಾಗಿದ ಪರಿಣಾಮಕ್ಕೆ ನಿದರ್ಶನವೆನಿಸಿತು. ಅಂದಾಜು ಒಟ್ಟು 600 ಕಲಾಕೃತಿಗಳು ಇಲ್ಲಿ ನಿರ್ಮಾಣ ಗೊಂಡವು. ಪ್ರತಿಯೊಂದು ಕಲಾಕೃತಿಗಳು ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ನಿರ್ಮಾಣಗೊಂಡವು. ಪಾಂಬೂರಿನ ಪರಿಸರದ ಆಸಕ್ತ ಎಲ್ಲಾ ಚಿತ್ರಕಲಾ ವೀಕ್ಷಕರಿಗೆ ಕಲಾಕೃತಿಗಳು ರಸದೌತಣವನ್ನು ನೀಡಿತು. ಪಾಂಬೂರಿನ 'ಪರಿಚಯ' ಸಂಸ್ಥೆಯ ವತಿಯಿಂದ ನಿತ್ಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕಲಾಸಕ್ತ ಊರ ಪರವೂರ ಹಿತೈಷಿಗಳ ಮನರಂಜನೆಗೆ ಅನುವು ಮಾಡಿಕೊಟ್ಟರು.
ಚಿತ್ರಗಳು : ಸೈಯದ್ ಆಸಿಫ್ ಆಲಿ, ಉಪನ್ಯಾಸಕರು
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************