ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 47
Friday, March 22, 2024
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 47
ಲೇಖಕರು : ಸತೀಶ್ ಕುಮಾರ್ ಕರ್ನಿರೆ
M.Sc (Phy /Che) M.Ed
ಶಿಕ್ಷಕರು, ಮುಚ್ಚೂರು ಶಾಲೆ
ಮಂಗಳೂರು (ದಕ್ಷಿಣ ವಲಯ)
ದಕ್ಷಿಣ ಕನ್ನಡ ಜಿಲ್ಲೆ
Mob: +91 99809 53868
ನಾನೆಷ್ಟು ಅಂಕ ನೀಡಲಿ...
ಆತ್ಮೀಯ ವಿದ್ಯಾರ್ಥಿಗಳೇ ಈಗ ಪರೀಕ್ಷೆಯ ಹೊತ್ತು. ಚೆನ್ನಾಗಿ ಅಭ್ಯಾಸ ಮಾಡಿ ತಯಾರಾಗುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಪರೀಕ್ಷೆ ಯಾವಾಗ ಎನ್ನುವ ಗೊಂದಲ ಇನ್ನೊಂದೆಡೆ. ಅದೇನೇ ಇದ್ದರೂ ಈ ಪರೀಕ್ಷೆಯಲ್ಲಿ ನೀವೆಲ್ಲ ಯಶಸ್ವಿಯಾಗಿ ಎನ್ನುವುದೇ ನನ್ನ ಶುಭ ಹಾರೈಕೆ. ನನ್ನ ಕಥಾ ನಾಯಕಿ ನಿಮ್ಮೆಲ್ಲರಿಗೂ ಆದರ್ಶ. ನಾನು ಗಣಿತ - ವಿಜ್ಞಾನ ಶಿಕ್ಷಕನಾಗಿ ಅದೆಷ್ಟೋ ಪೇಪರ್ ಗಳನ್ನು ತಿದ್ದಿದ್ದೇನೆ. ಆದರೆ ನನಗೆ ದೊರೆತ ಈ ವಿದ್ಯಾರ್ಥಿನಿಯ ಪೇಪರಿಗೆ ನಾನೆಷ್ಟು ಅಂಕ ನೀಡಲಿ...? ಎನ್ನುವ ಗೊಂದಲ ನನಗೆ ಉಂಟಾಗಿದೆ. ಈ ಸಮಸ್ಯೆಗೆ ನಿಮ್ಮಿಂದ ಪರಿಹಾರ ಸಿಗುವುದೇ...? ನನ್ನ 15 ವರ್ಷಗಳ ಶಿಕ್ಷಕ ವೃತ್ತಿ ಜೀವನದಲ್ಲಿ ನಾನು ಮಾಡಿದ್ದು ಸರಿಯೇ ಎನ್ನುವ ಜಿಜ್ಞಾಸೆ ನನ್ನ ಮನದಲ್ಲಿ ಮೂಡಿದೆ.
ನಾನು ಕರ್ತವ್ಯ ನಿರ್ವಹಿಸುತ್ತಿರುವ ಮುಚ್ಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಗೆ ಹೊಸದಾಗಿ ಇಬ್ಬರು ಅವಳಿ- ಜವಳಿ ವಿದ್ಯಾರ್ಥಿನಿಯರು ಪ್ರವೇಶ ಪಡೆದರು. ದೊಡ್ಡವಳು ಚೈತ್ರ, ಚಿಕ್ಕವಳು ಚಿತ್ರ. ಅಕ್ಕ ಚೈತ್ರ ವಿಶೇಷ ಅಗತ್ಯತೆ ಉಳ್ಳ ಮಗು. ಅವಳ ತಂಗಿ ಚಿತ್ರ ಎಲ್ಲರಂತೆ ಸಾಮಾನ್ಯ ಮಗು. ಆದರೆ ತಂಗಿ ಚಿತ್ರಳಿಗೆ ಅಕ್ಕನಾಗಿ ಜವಾಬ್ದಾರಿಯಿಂದ ಅವಳನ್ನು ನೋಡಿಕೊಳ್ಳುವ ಪರಿಸ್ಥಿತಿ. ಈ ಚೈತ್ರ ಮಾತನಾಡುವಾಗ ಸ್ವಲ್ಪ ತೊದಲುತ್ತಾಳೆ ಹಾಗೂ ಉಳಿದವರು ಏನು ಹೇಳುತ್ತಾರೆ ಅದನ್ನೇ ಪುನರಾವರ್ತನೆ ಮಾಡುತ್ತಾಳೆ. ಒಳ್ಳೆ ಮನಸ್ಸಿರುವ ಹುಡುಗಿ ತರಗತಿಯಲ್ಲಿ ಎಲ್ಲರಂತೆ ಪಾಠ ಕೇಳುತ್ತಾಳೆ. ಉಳಿದ ವಿದ್ಯಾರ್ಥಿಗಳು ಯಾವ ರೀತಿ ನೋಟ್ಸ್ ಬರೆಯುತ್ತಾರೋ ಅದೇ ರೀತಿ ನೋಟ್ಸ್ ಬರೆಯುತ್ತಾಳೆ. ಓದಲು ಬರುವುದಿಲ್ಲ ಅಕ್ಷರ ಗುರುತಿಸಲು ಬರುವುದಿಲ್ಲ. ಆದರೆ ಅವಳ ಬರಹ ಯಾವುದೋ ಒಂದು ಉದ್ದನೆ ಜೋಡು ಲಿಪಿಯಾಗಿ ಮುಂದುವರೆಯುತ್ತಾ ಹೋಗುತ್ತದೆ. ಎಲ್ಲರೂ ನೋಟ್ಸ್ ತೋರಿಸಬೇಕಾದರೆ ಅವಳು ಕೂಡ ನೋಟ್ಸ್ ತೋರಿಸುತ್ತಾಳೆ. ನಾನು ಅದಕ್ಕೆ ರೈಟ್ ಮಾರ್ಕ್ ಹಾಕುತ್ತೇನೆ. ವಿಜ್ಞಾನದ ಚಿತ್ರಗಳನ್ನು ಬಿಡಿಸುತ್ತಾಳೆ, ಆದರೆ ಅದು ಒಂದು ಗೀಚಿದ ಚಿತ್ರವಾಗಿರುತ್ತದೆ. ಅದು ತೋರಿಸಿದಾಗ ನಾನು ಅದಕ್ಕೂ ರೈಟ್ ಮಾರ್ಕ್ ಹಾಕಿ ಗುಡ್ ನೀಡುತ್ತೇನೆ. ಅವಳ ಪುಸ್ತಕ ನೋಡದಿದ್ದರೆ ಅವಳು ಸಿಟ್ಟಾಗುತ್ತಾಳೆ. ನನ್ನ ಪುಸ್ತಕಕ್ಕೆ ರೈಟ್ ಹಾಕಿ ಎಂದು ಓಡಿಕೊಂಡು ಬರುತ್ತಾಳೆ. ಪ್ರತಿದಿನ ಶಾಲೆಗೆ ಬರುತ್ತಾಳೆ. ಪರೀಕ್ಷೆ ಬಂದಿದೆ ಪರೀಕ್ಷೆ ಪೇಪರ್ ಎಲ್ಲರಿಗೆ ನೀಡುವಂತೆ ತಿದ್ದಿ ಅವಳಿಗೂ ನೀಡಬೇಕು. ಅರ್ಧ ಪೇಪರ್ ನೀಡುವ ಹಾಗಿಲ್ಲ. ಉತ್ತರ ಪತ್ರಿಕೆಯಲ್ಲಿ ಅವಳ ಹೆಸರು ಬರೆಯುತ್ತಾಳೆ ಇನ್ನು ಉತ್ತರದಲ್ಲಿ ಅದೇ ರೀತಿ ಉದ್ದನೆಯ ಜೋಡಿ ಬರಹ ಮುಂದುವರಿಯುತ್ತಾ ಹೋಗುತ್ತದೆ. ಪರೀಕ್ಷೆ ಮುಗಿದ ನಂತರ ಅವಳು ಪೇಪರ್ ಕೇಳುತ್ತಾಳೆ. ಪೇಪರ್ ತಿದ್ದಲೇ ಬೇಕು. ಪೇಪರ್ ನೀಡಿದಾಗ ನನ್ನ ಪೇಪರ್ ಕೊಡಿ ನನಗೆ ಮಾರ್ಕೆಷ್ಟು? ಎಂದು ಕೇಳುತ್ತಾಳೆ. ಕೊಟ್ಟ ಪೂರ್ತಿ ಪೇಪರ್ ನಲ್ಲೂ ಅವಳು ಬರೆಯುತ್ತಾಳೆ. ನಾನು ಪರೀಕ್ಷೆ ಪೇಪರ್ ತಿದ್ದಿ ನೀಡಿದಾಗ ಅವಳಿಗೆ ತುಂಬಾ ಸಂತೋಷ. ಆಕೆಯ ಮುಖದಲ್ಲಿ ಮಂದಹಾಸ, ತನ್ಮಯತೆ ಕಾಣುತ್ತದೆ. ಏಕೆಂದರೆ ನಾನು ರೈಟ್ ಮಾರ್ಕ್ ಹಾಕಿ ಗುಡ್ ಎಂದು ನೀಡುತ್ತೇನೆ. ಎಲ್ಲರ ಹಾಗೆ ಸಾಮಾನ್ಯರಾಗಿರುವ ಮಕ್ಕಳು ನಕಲು ಮಾಡುತ್ತಾರೆ. ಆಗ ನನಗೆ ಸಂತ ಕಬೀರರ ಈ ಮಾತು ನೆನಪಿಗೆ ಬರುತ್ತದೆ. ಸಂತ ಕಬೀರರು ಹೇಳುವ ಮಾತು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು.... "ದೀಪದ ಬೆಳಕಿನಲ್ಲಿ ಒಬ್ಬ ಗೀತೆಯನ್ನು ಓದಬಲ್ಲ ಮತ್ತು ಒಬ್ಬಾತ ಕಳ್ಳತನ ಮಾಡಬಲ್ಲ ಅದು ದೀಪದ ತಪ್ಪಲ್ಲ ಮನುಷ್ಯ ಗುಣದ ತಪ್ಪು." ಆ ಹುಡುಗಿ ಈಗ 8 ನೇ ತರಗತಿ. 6ನೇ ಯಲ್ಲಿ ಅವಳು ಬರೆದ ಉತ್ತರ ಪತ್ರಿಕೆಗೂ ಈಗ ಬರೆದ ಉತ್ತರಕ್ಕೂ ಅಜಗಜಾಂತರ. ಈಗ ಕನ್ನಡ ವರ್ಣಮಾಲೆಯನ್ನು ಹೋಲುವ ಅವಳ ಲಿಪಿ. ಮುಂದೊಂದು ದಿನ ಅಕ್ಷರ ಬರೆಯಬಹುದು. ಆದರೆ ಅವಳಲ್ಲಿ ಸೋಮಾರಿತನ ಇಲ್ಲ.
ಈ ಮುಗ್ಧ ಹುಡುಗಿ ಬರೆದ ಪರೀಕ್ಷೆ ಪೇಪರಿಗೆ ನಾನೆಷ್ಟು ಅಂಕ ನೀಡಲಿ ? ಪ್ರಶ್ನೆಯಾಗಿ ಉಳಿದುಬಿಟ್ಟಿತು. ಆದರೆ ಒಂದು ರೈಟ್ ಮಾರ್ಕ್ ಮತ್ತು ಗುಡ್ ಅವಳಲ್ಲಿ ಹಸನ್ಮುಖ ತರುವುದಾದರೆ, ನನ್ನ ವೃತ್ತಿ ಜೀವನದಲ್ಲಿ ಅದೇ ಸಾರ್ಥಕತೆ. ಓದಲು ಬರೆಯಲು ಬರುವ ಅದೆಷ್ಟು ಮಕ್ಕಳು, ಸೋಮಾರಿತನದಿಂದ ಪರೀಕ್ಷೆ ಪೇಪರ್ ಖಾಲಿ ಬಿಟ್ಟು ಬರುವಾಗ ಈ ಹುಡುಗಿ ಅವರಿಗೆ ಆದರ್ಶ. ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಏಕೆಂದರೆ ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು. ಎನ್ನುವ ಈ ಮಾತಿನೊಂದಿಗೆ ನನ್ನ ಅನುಭವವನ್ನು ಓದಿದ ನಿಮಗೆ ಧನ್ಯವಾದಗಳು.
M.Sc (Phy /Che) M.Ed
ಶಿಕ್ಷಕರು, ಮುಚ್ಚೂರು ಶಾಲೆ
ಮಂಗಳೂರು (ದಕ್ಷಿಣ ವಲಯ)
ದಕ್ಷಿಣ ಕನ್ನಡ ಜಿಲ್ಲೆ
Mob: +91 99809 53868
*******************************************