ಹೃದಯದ ಮಾತು : ಸಂಚಿಕೆ - 32
Thursday, March 7, 2024
Edit
ಹೃದಯದ ಮಾತು : ಸಂಚಿಕೆ - 32
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಹುಟ್ಟಿದ್ದು ಬಡತನದ ಮನೆಯಲ್ಲಿ. ಅಪ್ಪ- ಅಮ್ಮನಿಗೆ ಇದ್ದದ್ದು ಒಂದಷ್ಟು ಹೊಲ. ಅದರಲ್ಲಿ ಬಿತ್ತಿ ಬೆಳೆದದ್ದು ಬದುಕುವುದಕ್ಕಷ್ಟೇ ಸಾಕಾಗುತ್ತಿತ್ತು. ಈ ಮಧ್ಯೆ ನಾವು ಆರು ಮಂದಿ ಹುಟ್ಟಿಕೊಂಡೆವು. ಎಲ್ಲಾ ಸರದಿಯಲ್ಲಿ ಹೆಣ್ಣಾಗಿ ಹುಟ್ಟುವ ಮುಂಚೆ, ಮನೆಗೊಬ್ಬ ಗಂಡಾಗಿ ಅಣ್ಣ ಹುಟ್ಟಿದ್ದ. ಆರು ಮಂದಿಯ ಹೊಟ್ಟೆ ತುಂಬಿಸಲು ನನ್ನವ್ವ ಬಹಳನೇ ಹೆಣಗಾಡುತ್ತಿದ್ದಳು. ಆಕೆ ಮಕ್ಕಳ ಹಸಿವು ತೀರಿಸಲು ತಾನು ಹಸಿದ ದಿನಗಳಿಗೆ ಲೆಕ್ಕವಿರದು.
ಅಣ್ಣ ದೊಡ್ಡವ. ಹೆಚ್ಚು ಕಲಿಯುವ ಸ್ಥಿತಿಯಿಲ್ಲ. ಒಡಹುಟ್ಟಿದ ತಂಗಿಯಂದಿರ ಜವಾಬ್ದಾರಿಗೆ ತಂದೆಯೊಂದಿಗೆ ಹೆಗಲು ಕೊಡಬೇಕಿತ್ತು. ಇತ್ತ ಮೂವರು ಅಕ್ಕಂದಿರು. ಒಬ್ಬಳು ತಂಗಿ. ಮನೆಯ ಸಂಕಷ್ಟ ನಾವು ಬೆಳೆದಂತೆ ಏರುತ್ತಿತ್ತು. ಅನ್ನ ಬೇಯಿಸಿದರೆ ಅದಕ್ಕೆ ಸಾರು ಇಲ್ಲದೆ ಅದೆಷ್ಟೋ ದಿನ ಸೇವಿಸಿದ ನೆನಪಿದೆ. ಬಟ್ಟೆ ಬರೆಗಳ ಬಗ್ಗೆ ಹೇಳಬೇಕಿಲ್ಲ. ಅಂದು ಶಾಲೆಯಲ್ಲಿ ಬಿಸಿಯೂಟ ಇರುತ್ತಿದ್ದರೆ, ಓಡೋಡಿ ಹೋಗಿ ಒಂದೊತ್ತಾದರೂ ಹೊಟ್ಟೆ ತುಂಬಿಸುತ್ತಿದ್ದೆವು. ಏನಿಲ್ಲ ಅಂದ್ರೂ ವರ್ಷಕ್ಕೆರಡು ಬಾರಿ ಸಿಗುವ ಜೊತೆ ಬಟ್ಟೆಯಲ್ಲಿ ಮಾನ ಮುಚ್ಚಿಕೊಳ್ಳುತ್ತಿದ್ದೆವು.
ನಾವೈದು ಮಂದಿ ಹೆಣ್ಣು ಮಕ್ಕಳು ಬೆಳೆದಂತೆ ಅಪ್ಪನ ಚಿಂತೆ ಹೆಚ್ಚುತ್ತಿತ್ತು. ಆತ ಅದ್ಹೇಗೋ ಕಷ್ಟದಿಂದ ಮೂವರು ಅಕ್ಕಂದಿರಿಗೂ ಮದುವೆ ಮಾಡಿಸಿದ. ಇನ್ನು ನಾನು ನನ್ನ ತಂಗಿ ಉಳಿದಿದ್ದು. ನನಗೆ ಕಲಿಯುವ ಹುಚ್ಚು. ಅದರಲ್ಲಿ ಸ್ವಲ್ಪ ಚುರುಕೂ ಇದ್ದೆ. ನನ್ನ ಆಸೆಗೆ ಮನೆಯಲ್ಲಿ ಯಾರೂ ಒಲ್ಲೆ ಅನ್ನಲಿಲ್ಲ. ನನ್ನನ್ನು ಬಿಟ್ಟು ತಂಗಿಗೆ ಮದುವೆ ಮಾಡಿಯೇ ಬಿಟ್ಟರು. ಒಡ ಹುಟ್ಟಿದವರೆಲ್ಲಾ ಸಂಸಾರದ ನೊಗ ಹೊತ್ತರೆ ನಾನೊಬ್ಬಳು ಕನಸಿನ ಗೋಪುರ ಕಟ್ಟುತ್ತಿದ್ದೆ.
ನಿರೀಕ್ಷೆಗಳು ಸುಳ್ಳಾಗಲಿಲ್ಲ. ಕಡೆಗೂ ನಾನು ಶಿಕ್ಷಕಿಯಾದೆ. ದೂರದ ಜಿಲ್ಲೆಯಲ್ಲಿ ಕೆಲಸ. ಏಕಾಂಗಿ ಹೆಣ್ಣು ನೂರಾರು ಮೈಲಿ ದೂರದ ಅಪರಿಚಿತ ಊರಿನಲ್ಲಿ ಬದುಕು ಕಟ್ಟಬೇಕಿತ್ತು. ಆದರೂ ಕೆಲಸ ಸಿಕ್ಕಿದ ಖುಷಿಯಲ್ಲಿ ಉಳಿದ ವಿಚಾರಗಳು ಗೌಣವಾಗಿತ್ತು. ದೊರೆತ ಕೆಲಸ ಮನೆಗೆ ಸಾಂತ್ವಾನ ನೀಡಲು ಸಾಕಾಯಿತು. ಅಂದಿನಿಂದ ಮನೆಯ ಸ್ಥಿತಿ ಬಹಳನೇ ಸುಧಾರಿಸಿತು. ಜೊತೆಗೆ ಅಣ್ಣನ ದುಡಿಮೆಯೂ ಮನೆಗೆ ಆಸರೆಯಾಯಿತು.
ಮನೆಯ ಸ್ಥಿತಿ ತಕ್ಕ ಮಟ್ಟಿಗೆ ನೆಮ್ಮದಿಯನ್ನು ತಂದಿತ್ತು. ಆದರೆ ವೃತ್ತಿ ಬದುಕಿನ ಸ್ಥಿತಿ ವಿಚಿತ್ರ. ನಾನೊಬ್ಬಳು ಹಟವಾದಿ. ನನಗೆ ಒಂದಷ್ಟು ಸಾಧಿಸಬೇಕೆಂಬ ಛಲ. ಕಂಡದ್ದು ಕಂಡಹಾಗೆ ಹೇಳುವ ಧೈರ್ಯ. ಆದರೆ ನನ್ನದೇ ಸ್ಟಾಫ್ ರೂಂ ನಲ್ಲಿ ಅಕ್ಕ ಪಕ್ಕ ಕುದಿಯುತ್ತಿರುವ ಅನುಭವ. ನಾವೆಲ್ಲಾ ಮಕ್ಕಳಿಗೆ ಮಾದರಿ ಅನ್ತಾರೆ. ಅದ್ಹೇಗೆ? ಮಾದರಿಯಾದೆವೋ? ಗೊತ್ತಿಲ್ಲ. ಅಡಿಯಿಂದ ಮುಡಿಯವರೆಗೂ ನಂಜಿನ ವಿಷ ತುಂಬಿ, ಸ್ನೇಹ, ಸಂಬಂಧಗಳ ನಾಟಕದ ಬದುಕು ನನ್ನ ಸುತ್ತ ಕಾಣ ತೊಡಗಿತು. ವೇಗ ನನ್ನಲ್ಲಿದೆ, ಅದಕ್ಕೆ ಬ್ರೇಕ್ ನನ್ನಲ್ಲಿರಲಿಲ್ಲ. ಅದು ಪಕ್ಕದವರ ಕೈಗಳಲ್ಲಿತ್ತು.
ಅಂತೂ ಸಾಧಿಸುವ ಹಟವಿದ್ದರೂ ಸಾಧಿಸಲಾಗದೆ ವರ್ಗಾವಣೆಗೊಂಡೆ. ಒಂದಷ್ಟು ಊರಿಗೆ ಹತ್ತಿರವೇ ಬಂದೆ. ಹೊರಡುವಾಗ ವಿದಾಯ ಹೇಳಿದರೋ ಇಲ್ಲ 'ಶನಿ ತೊಲಗಿತು' ಎಂದು ಮನದೊಳಗೆ ಅಂದುಕೊಂಡರೋ.... ತಿಳಿಯದು. ಹೊಸ ಶಾಲೆ ಹೊಸ ಹುರುಪನ್ನು ನೀಡಬಹುದೆಂಬ ಆಸೆಯೊಂದಿತ್ತು. ಆದರೆ "ಎಲ್ಲರ ಮನೆಯ ದೋಸೆ ತೂತು" ಎಂಬ ಗಾದೆ ಸುಳ್ಳಾಗಲು ಸಾಧ್ಯವಿಲ್ಲ. ಕಡೆಗೆ ನಮ್ಮ ಮನೆಯ ಕಾವಲಿ ತೂತಾಗದಿದ್ದರೆ ಸಾಕಿತ್ತು.
ನನಗೆ ಮಕ್ಕಳೆಂದರೆ ಬಹಳನೇ ಪ್ರೀತಿ. ಆ ಪ್ರೀತಿ ಸಹಿಸದವರು ನನ್ನೊಂದಿಗೆ ಸಹೋದ್ಯೋಗಿಯಾಗಿ!. ಮಕ್ಕಳ ಮನದಲ್ಲಿ ಅದೆಷ್ಟೋ ವಿಷ ಬೀಜ ಬಿತ್ತಿ, ಬೆಳೆ ತೆಗೆಯುವ ಪ್ರಯತ್ನ ಅವರದ್ದು. ಅನೇಕ ಬಾರಿ ಅದು ಫಲವೂ ಕೊಟ್ಟಿತ್ತು. ಆಗೆಲ್ಲಾ ಸತ್ತೇ ಬಿಡೋಣ ಅಂತ ಅನೇಕ ಸಲ ಯೋಚಿಸಿದ್ದಿದೆ. ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಮತ್ಸರ ನನ್ನ ಸುತ್ತ ಬೆಳೆಯುತ್ತಿತ್ತು. "ಈ ಜನ ಹೀಗ್ಯಾಕೆ?" ಅಂತ ಯೋಚಿಸಿದ್ದೆ. ಅವರೆಲ್ಲ ನನ್ನ ಹಾಗೇ ಶಿಕ್ಷಕರು ತಾನೇ?.. ಮಕ್ಕಳಿಗೆ ಆದರ್ಶ ಆಗಬೇಕಿತ್ತಲ್ವಾ?.. ನನಗನ್ನಿಸಿದ್ದು ಪರದೆ ಸರಿಸಿದರೆ ಅದೆಷ್ಟೋ ಮಂದಿಯ ಆದರ್ಶ ತೀರಾ ಬೆತ್ತಲೆಯಾಗಬಹುದು!
ನನ್ನ ಬೋಧನೆಯ ವಿಷಯದಲ್ಲಿ ವಿಶೇಷವಾಗಿ ಸಾಧಿಸಬೇಕೆಂಬ ತುಡಿತ. ನಾನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಸಾಧಕರನ್ನು ಓದುತ್ತಿದ್ದೆ. ಅವರು ನನ್ನ ಮನಸ್ಸಿಗೆ ತೀರಾ ಹತ್ತಿರವಾಗಿದ್ದರು. ನಾನು ಅವರುಗಳನ್ನು ನನ್ನ ಗುರುಗಳಾಗಿ ಸ್ಮರಿಸಿಕೊಳ್ಳುತ್ತಿದ್ದೆ. ಅದೂ ಏಕಲವ್ಯನಂತೆ. ನನ್ನ ವಿಷಯಕ್ಕೆ ಸಂಬಂಧಿಸಿ ಒಂದು ಕೊಠಡಿಯನ್ನು ರೂಪಿಸಬೇಕಿತ್ತು. ಅದು ಸಾಹಸವೇ ಸರಿ. ಸಹಕರಿಸಿದವರು ಹಲವು ಮಂದಿ. ಅಂತೂ ಸ್ವಲ್ಪ ಮಟ್ಟಿನ ಯಶಸ್ಸು ದೊರೆಯಿತು. ನನ್ನದೇ ಆದ ಅಸ್ತಿತ್ವ ಶಾಲೆಯಲ್ಲಿ ಚಿಗುರೊಡೆಯಿತು.
ಹೆಣ್ಣಾಗಿ ನಾನು ಸಾಧಿಸಿದೆ ಅಂತ ಒಂದು ಕ್ಷಣ ಅನ್ನಿಸಿತು. ಆದರೆ ಅದರೊಂದಿಗೆ ಅಕ್ಕ ಪಕ್ಕ ಉರಿಯೂ ಹೊತ್ತಿಕೊಂಡಿದ್ದು ವಿಪರ್ಯಾಸ. ನನ್ನ ಸಾಧನೆಗೆ ಅವರೆಲ್ಲಾ ಖುಷಿ ಪಡಬಹುದಿತ್ತು. ಅದರಿಂದ ಕಳೆದುಕೊಳ್ಳವಂತದ್ದು ಏನೂ ಇರಲಿಲ್ಲ. ತಾನಾಯಿತು, ತನ್ನದಾಯಿತು ಅಂತ ಇದ್ದಿದ್ದರೆ ಚೆನ್ನಾಗಿತೋ ಏನೋ?... ಹೌದು ಸಾಧಿಸ ಹೊರಟರೆ ಎಲ್ಲವನ್ನು ಎದುರಿಸುವ ಎದೆಗಾರಿಕೆ ಬೇಕು. ಅದನ್ನು ರೂಢಿಸಿಕೊಳ್ಳಬೇಕಿದೆ. ಸುತ್ತ ಮುತ್ತ ಹಬ್ಬುವ ವಿಷ ನಮ್ಮನ್ನಾವರಿಸುವ ಮುನ್ನ 'ಸಂಜೀವಿನಿ' ನಮ್ಮಲ್ಲಿರಬೇಕು.
ನಾನು ಬಡವಳಾಗಿ ಹುಟ್ಟಿದೆ. ಬಡತನ ಕೇವಲ ಹೊಟ್ಟೆ ಬಟ್ಟೆಗಿತ್ತು. ಆದರೆ ಮನಸ್ಸಿಗೆ ಶ್ರೀಮಂತಿಕೆ ಇತ್ತು. ನನ್ನ ವೃತ್ತಿ ಬದುಕಿನಲ್ಲಿ ಕಾಣುತ್ತಿರುವುದು ಇದಕ್ಕೆ ವ್ಯತಿರಿಕ್ತ. ಆದರೂ ನಾವು "ಸೋ ಕಾಲ್ಡ್ ರೋಲ್ ಮೋಡೆಲ್". ಅದೇನೇ ಇದ್ದರೂ ಗೆಲ್ಲುವ ಹಟವಿದೆ. ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ನನ್ನಲ್ಲಿದೆ. ನಾನು ಗೆಲ್ಲಲೇ ಬೇಕಿದೆ. ಏಕೆಂದರೆ ನಾನು ಗೆಲ್ಲಲು ಹೊರಟವಳು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಮುಖ್ಯ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************