-->
ಮಹಾ ಶಿವರಾತ್ರಿ : ಮಕ್ಕಳ ಕಥೆಗಳು - ಸಂಚಿಕೆ : 05

ಮಹಾ ಶಿವರಾತ್ರಿ : ಮಕ್ಕಳ ಕಥೆಗಳು - ಸಂಚಿಕೆ : 05

ಮಹಾ ಶಿವರಾತ್ರಿ : ಮಕ್ಕಳ ಕಥೆಗಳು - ಸಂಚಿಕೆ : 05
ಕಥೆ ರಚನೆ : ಅನ್ವಿತಾ ಆರ್ ಪೈ
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  
ಪೆರ್ವಾಜೆ, ಕಾರ್ಕಳ
ಉಡುಪಿ ಜಿಲ್ಲೆ

      ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು.... ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ಅದು ಏನೆಂದು ತಿಳಿದುಕೊಳ್ಳೋಣ......
       

ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ.

       ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. 

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ. ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ. 

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣ ಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ. 

ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ... ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ. ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.    ....................................... ಅನ್ವಿತಾ ಆರ್ ಪೈ
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  
ಪೆರ್ವಾಜೆ, ಕಾರ್ಕಳ
ಉಡುಪಿ ಜಿಲ್ಲೆ
******************************************




Ads on article

Advertise in articles 1

advertising articles 2

Advertise under the article