ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 19
Tuesday, March 12, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 19
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ವಾರ ಜೀವಕೋಶದ ಒಳಗೆ ಪ್ರೋಟೀನ್ ಅಡುಗೆ ತಯಾರಿಯ ಬಗ್ಗೆ ತಿಳಿದೆವು. ಈ ಅಡುಗೆಯ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತದೆ (coding). ಈ ಸಂದೇಶವನ್ನಿಟ್ಟು ಕಳುಹಿಸುವ ಹಾರ್ಡ್ ವೇರ್ ಗಳಾದ RNA ಗಳ ಬಗ್ಗೆ ತಿಳಿದೆವು. ಈ RNA ಗಳನ್ನು ಸಿದ್ಧಪಡಿಸುವ ಮುಖ್ಯ ಬಾಣಸಿಗನೊಬ್ಬನಿದ್ದಾನಲ್ಲ ಆತನನ್ನು DNA ಎನ್ನುತ್ತೇವೆ. RNA ಗಳು ಏಕ ತಂತು ರಚನೆಗಳಾದರೆ ಅವುಗಳ ಸೃಷ್ಟಿಕರ್ತನಾದ ಈ DNA ಯ ರಚನೆ ಅಷ್ಟೊಂದು ಸರಳವಾಗಿರಲು ಸಾಧ್ಯವೇ? ನಿಜ. ಅವುಗಳು ಜೋಡಿ ಎಳೆಗಳ (double stranded) ಅಂದರೆ ಎರಡು RNA ಅಣುಗಳನ್ನು ಒಂದರ ಪಕ್ಕ ಒಂದನ್ನು ಇಟ್ಟು ಅವುಗಳಲ್ಲಿರುವ ಪ್ರತ್ಯಾಮ್ಲೀಯ ಅಣುಗಳನ್ನು ಪರಸ್ಪರ ಜೋಡಿಸಿಬಿಟ್ಟರೆ ಏಣಿಯಂತಹ ರಚನೆ ಸಿಗುತ್ತದೆ. ಈ ಏಣಿಯ ಕಾಲುಗಳು ಡಿ ಆಕ್ಸಿ ರೈಬೋಸ್ ಸಕ್ಕರೆಯ ಅಣುಗಳಿಂದಾಗಿದ್ದರೆ ಏಣಿಯ ಮೆಟ್ಟಿಲುಗಳು ಅಡಿನಿನ್ ಗ್ವಾನೀನ್, ಸೈಟೋಸಿನ್ ಮತ್ತು ಥೈಮಿನ್ ಗಳೆಂಬ ನಾಲ್ಕೇ ನಾಲ್ಕು ಬೇಸ್ ಗಳಿಂದಾಗಿವೆ. DNA ಯ ಏಣಿ ನೇರವಾಗಿಲ್ಲ ಅದರ ಬದಲಾಗಿ ಒಂದು ಅಕ್ಷದ ಸುತ್ತ ತಿರುಚಿದ ಹಾಗೆ (a double helix). ಈ DNA ಅಣುಗಳು ನಿಶ್ಚಿತವಾದ ಪ್ರೋಟೀನ್ ತಯಾರಿಕೆಯ ಕೋಡಿಂಗ್ ಮಾಡಬಲ್ಲ ಅಥವಾ ನಿಶ್ಚಿತವಾದ ಗುಣವನ್ನು ನಿಯಂತ್ರಿಸುವ ತುಂಡನ್ನು ಗುಣಾಣುಗಳು (gene) ಎನ್ನುತ್ತೇವೆ. ಒಂದು ಜೀನ್ ಕೆಲವು ನೂರು ಬೇಸ್ ಜೋಡಿಯಿಂದ 20 ಮಿಲಿಯನ್ ವರೆಗೆ ಬೇಸ್ ಜೋಡಿಯನ್ನು ಹೊಂದಿರಬಹುದು. ಈ ಜೀನ್ ಗಳು ಅನುವಂಶೀಯ ಗುಣಗಳ ಮೂಲ ಘಟಕಗಳು. ಈ ಜೀನ್ಗಳ ಒಟ್ಟು ಆಕರವನ್ನು ಕ್ರೋಮೋಸೋಮ್ ಗಳೆನ್ನುವರು. ಈ ವಿಶ್ವದಲ್ಲಿ ತನ್ನದೇ ತದ್ರೂಪು ಪ್ರತಿಯನ್ನು ತಾನೇ ತಯಾರಿಸಿಕೊಳ್ಳಬಲ್ಲ ಒಂದೇ ಒಂದು ವಸ್ತು ಎಂದರೆ ಅದು DNA ಮಾತ್ರ. ಆದ್ದರಿಂದ ಜೀವಿಗಳು ವಂಶಾಭಿವೃದ್ಧಿ ನಡೆಸುವ ಸಾಮರ್ಥ್ಯ ಪಡೆದಿರುವುದು ಅವುಗಳಲ್ಲಿರುವ DNA ಸಾಮರ್ಥ್ಯದಿಂದ ಮಾತ್ರ. ಒಂದು ಕೋಶ ಎರಡಾಗಿ ಒಡೆಯುವ ಅಂದರೆ ಕೋಶ ವಿಭಜನೆಗೆ ಮೊದಲು ಈ DNA ತನ್ನ ತದ್ರೂಪನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ಯಾರಾದರೂ ಸೃಷ್ಟಿಕರ್ತ ಯಾರು ಎಂದು ಕೇಳಿದರೆ ನಾನು DNA ಗಳನ್ನು ತೋರಿಸುತ್ತೇನೆ. ನೀವು ಹಣೆ ಬರೆಹ ಎಂದರೆ ನಾನು ಅವುಗಳನ್ನು ಜೀನ್ ಗಳು ಎನ್ನುತ್ತೇನೆ. ನಮ್ಮಿಬ್ಬರ ಶಬ್ಧಗಳು ಮಾತ್ರ ಬೇರೆ ಬೇರೆ ಆದರೆ ನಡೆಯುವ ಕೆಲಸ ಒಂದೇ.
ಈ DNA ಅಭಿವ್ಯಕ್ತಿಗೊಳ್ಳುವುದು RNA ಮೂಲಕ. DNA ಗೆ ಹೋಲಿಸಿದಾಗ RNA ಸರಳ ರಚನೆಗಳು. ಅಂದರೆ DNA ಯ ಸಾಫ್ಟ್‌ವೇರ್ ಅಂದರೆ RNA. ಆಂದರೆ RNAಯು DNA ಯ ಪರಿಷ್ಕೃತ ರೂಪ (transcribed form). ಅಪರೂಪಕ್ಕೆ ಈ RNA ಗಳೇ ಅನುವಂಶೀಯ ವಸ್ತುಗಳಾಗಿ ವರ್ತಿಸುತ್ತವೆ. ನಾವು ಸಸ್ಯ ವೈರಸ್‌ಗಳನ್ನು ಪರಿಶೀಲಿಸಿದರೆ ಅವುಗಳಲ್ಲಿ DNA ಇಲ್ಲ ಬದಲಾಗಿ RNA ಇದೆ. ಆದರೂ ಸಸ್ಯ ವೈರಸ್‌ಗಳು ವಂಶಾಭಿವೃದ್ಧಿ ನಡೆಸುತ್ತವೆ. ಏಕೆಂದರೆ ಇಲ್ಲಿ RNA ಅನುವಂಶೀಯ ವಸ್ತುವಾಗಿ ವರ್ತಿಸುತ್ತದೆ.
ಅಂದರೆ ಜೀವಿ ಪೂರ್ವ ಭೂಮಿಯಲ್ಲಿ (prebiotic earth) ಮೊದಲು DNA ಹೇಗೆ ರೂಪುಗೊಂಡಿತು ಎಂಬ ಪ್ರಶ್ನೆಗೆ ಉತ್ತರ ನೀವು ಸುಲಭವಾಗಿ ಹೇಳಬಲ್ಲಿರಿ. ಏಕೆಂದರೆ ಜೀವಿ ಉಗಮದ ಮಜಲುಗಳನ್ನು ಅಭ್ಯಾಸ ಮಾಡುತ್ತಾ ಬಂದಿರುವ ನಿಮಗೆ ಉತ್ತರ ಸರಳ. ಮೊದಲು RNA ರೂಪುಗೊಂಡಿತು ಆ ನಂತರ ಅದರಿಂದ DNA ವಿಕಾಸಗೊಂಡಿತು ಎನ್ನುವ ನಿಮ್ಮ ಉತ್ತರ ಸರಿ. ಈ RNA ಎಲ್ಲಿಂದ ಬಂತು? ಭೂಮಿಯ ಮೇಲೇ ರೂಪುಗೊಂಡಿತೇ ಅಥವಾ ವ್ಯೋಮದಿಂದ ಧರೆಗಿಳಿಯಿತೇ ಎಂದು ಕೇಳಿದರೆ ಎರಡನ್ನೂ ಸಮರ್ಥಿಸುವ ವಾದ ಮನುಕುಲದ ಬಳಿ ಇದೆ. ನಿಖರವಾದ ಉತ್ತರಕ್ಕಾಗಿ ನೀವು ವಿಜ್ಞಾನಿಗಳಾಗುವ ತನಕ ನಾನು ಕಾಯುತ್ತೇನೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************