-->
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05
ಲೇಖನ : ಅಂದವಾದ ಕೈ ಬರಹ
ಲೇಖಕಿ : ಅಂಬಿಕಾ
ಚಿತ್ರಕಲಾ ಶಿಕ್ಷಕರು
ಬೆಂಗ್ರೆ ಕಸಬ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ.
ಮೊ. ನಂ : +91 98459 93780
           

ಹಾಯ್ ಮಕ್ಳ...ಹೇಗಿದ್ದೀರಿ?..
      Exam ವಾರಿಯರ್ಸ್‌ ಆಗಿ ಪರೀಕ್ಷಾ ಹಬ್ಬಕ್ಕೆ ಸಜ್ಜಾಗಿದ್ದೀರಿ ಅಲ್ವಾ?. ಸರಿ ಮೊದಲಿಗೆ All the best ಹೇಳಿ, ನಾನು ಹೇಳ ಹೊರಟಿರುವ ವಿಷಯಕ್ಕೆ ಬರ್ತೀನಿ ಆಯ್ತಾ...
    ಮುದ್ದು ಮಕ್ಳ... ಸ್ಪಷ್ಟ ಓದು, ಶುದ್ಧ ಬರಹ ಎಂಬ ಗುಣಾತ್ಮಕ ಶಿಕ್ಷಣದ ಈ ಧ್ಯೇಯ ಸಾಲು ನಿಮಗೆಲ್ಲ ಗೊತ್ತೇ ಇದೆ. ಮಾನವನು ಪ್ರಗತಿ ಪಥದಲ್ಲಿ ಸಾಗಿ ಬರಲು ಭಾಷೆ ಮತ್ತು ಬರಹ ಪ್ರಮುಖ ಸಾಧನಗಳಾಗಿವೆ. ಭಾಷೆ ಬಲ್ಲ ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ. ಭಾಷೆ ಮತ್ತು ಬರಹದಿಂದಾಗಿ ಹಿರಿಯರ ಜ್ಞಾನಾನುಭವಗಳನ್ನು ಉಳಿಸಿ ಬೆಳೆಸಿಕೊಂಡು ಇಂದಿಗೂ ಮಾನವ ಸಮಾಜ ಪ್ರಗತಿ ಹೊಂದುತ್ತಲೆ ಇದೆ. ಗುರುತು ಗೆರೆಗಳಿಂದ ಆರಂಭವಾದ ಬರಹ ಈಗ ಕಂಪ್ಯೂಟರ್ ಕೀ ಬೋರ್ಡ್ ಮತ್ತು ಮೊಬೈಲ್ ಟಚ್ ವರೆಗೆ ಬೆಳೆದು ಬಂದಿದೆ. ಆದರೆ ದೇಹ ಮನಸ್ಸನ್ನು ಬೆಳೆಸುವ ಯೋಗದಂತೆ ಇರುವ ಬರವಣಿಗೆ ಅಂದರೆ ಅದು ಕೈ ಬರಹ. ಉತ್ತಮ ಕೈ ಬರಹ ವ್ಯಕ್ತಿಯ ಆಸ್ತಿ ಮತ್ತು ವ್ಯಕ್ತಿತ್ವದ ಭಾಗವೇ ಸರಿ. ಅಂದವಾದ ಕೈ ಬರಹದಿಂದ ಉತ್ತಮ ವಿದ್ಯಾರ್ಥಿ ರೂಪುಗೊಳ್ಳುತ್ತಾನೆ. ಅಂದವಾದ ಬರವಣಿಗೆ ಮೌಲ್ಯ ಮಾಪಕರ ಮನಸ್ಸನ್ನು ಸೂರೆಗೊಳ್ಳುತ್ತದೆ. ಗಾಂಧಿಯವರು ಹೇಳಿದಂತೆ poor handwriting shows imperfect education. ಆದ್ದರಿಂದ ಉತ್ತಮ ಕೈ ಬರಹದ ಅಭ್ಯಾಸ ಶೈಕ್ಷಣಿಕ ವ್ಯವಸ್ಥೆಯ ಭಾಗವೇ ಆಗಿದೆ. 
     ಚಿತ್ರಕಲೆಯನ್ನು ತಿಳಿದಿರುವ ನಿಮಗೆಲ್ಲರಿಗೂ ಗೊತ್ತಿರುವಂತೆ ಭಾವಚಿತ್ರ ನಮ್ಮ ಮುಖಭಾವ ಬಿಂಬಿಸಿದರೆ ಕೈ ಬರಹ ನಮ್ಮ ಮನಸ್ಸಿನ ಭಾವಗಳನ್ನು ಬಿಂಬಿಸುತ್ತದೆ. ಉತ್ತಮ ಕೈ ಬರಹವನ್ನು ಮುತ್ತು ಪೋಣಿಸಿದಂತೆ ಎಂದು ಹೊಗಳಿದರೆ, ಕೈ ಬರಹ ಚೆನ್ನಾಗಿಲ್ಲದಿದ್ದರೆ ಕಾಗೆ ಕಾಲು, ಗುಬ್ಬಿ ಕಾಲು ಎಂದು ತಮಾಷೆ ಮಾಡುವುದುಂಟು. ಹತ್ತು ಬಾರಿ ಓದುವುದು, ಒಂದು ಬಾರಿ ಬರೆಯುವುದಕ್ಕೆ ಸಮ ಎಂದು ಹೇಳುತ್ತಾರೆ. 
ಅಂದವಾದ ಕೈ ಬರಹ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಭಾವನಾತ್ಮಕ ಬಾಂಧವ್ಯಕ್ಕೆ ಕೈ ಬರಹವೇ ಮುನ್ನುಡಿ. ಪರೀಕ್ಷೆಯಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿರುವ ಈ ಕೈ ಬರಹದಿಂದಲೇ ವಿದ್ಯಾರ್ಥಿಗಳಾದ ನಿಮ್ಮ ಕಲಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಹಾಗಾಗಿ ಅಂದವಾದ ಕೈ ಬರಹದ ಮೂಲಕ ಪರೀಕ್ಷೆಯನ್ನು ಅಂದಗೊಳಿಸಿ ಆನಂದವಾಗಿರಿ.
   ಪ್ರತಿ ಭಾಷೆಯ ಲಿಪಿಗೂ ಅದರದ್ದೇ ಆದ ಲಕ್ಷಣಗಳಿರುತ್ತವೆ. ಕೈ ಬರಹ ತನಗೆ ಮತ್ತು ಓದುಗನಿಗೆ ಅರ್ಥವಾಗುವಂತಿರಬೇಕು. ಅಕ್ಷರಗಳ ಗಾತ್ರ (Font size) ಒಂದೇ ಆಗಿರಬೇಕು. ಪದಗಳು ಹಾಗೂ ಸಾಲುಗಳ ನಡುವೆ ಸೂಕ್ತ ಅಂತರವಿರಬೇಕು. ಸಾಲುಗಳು ನೇರವಾಗಿರಬೇಕು. ಅಕ್ಷರಗಳು ಒಂದರ ಪಕ್ಕ ಒಂದಿರಬೇಕೇ ಹೊರತು ಒಂದರ ಮೇಲೊಂದಾಗಲಿ, ತಾಗಿಕೊಂಡಾಗಲಿ, ದೂರದೂರವಾಗಲೀ ಇರಬಾರದು. ಲೇಖನ ಚಿಹ್ನೆಗಳು, ಗುಣಿತಾಕ್ಷರ, ಒತ್ತಾಕ್ಷರಗಳು, ಅಲ್ಪ ಪ್ರಾಣ, ಮಹಾ ಪ್ರಾಣ ಅಕ್ಷರಗಳನ್ನು ಸರಿಯಾಗಿ ಬರೆಯಬೇಕು. ಕೈ ಬರಹ ಸ್ಪಷ್ಟವಾಗಿ ತಪ್ಪಿಲ್ಲದಂತೆ ಶುದ್ಧವಾಗಿರಬೇಕು. ಅರ್ಥವತ್ತಾದ ವಾಕ್ಯಗಳ ಜೋಡಣೆಯಿದ್ದರೆ ವಿಷಯವು ಮನಮುಟ್ಟುತ್ತದೆ. ಒತ್ತಿ ಬರೆಯುವುದು, ಚಿತ್ತು ಕಾಟು ಮಾಡದಿರುವುದು, ಸ್ವಚ್ಛವಾಗಿರುವುದು ಸೂಕ್ತ. ಹಿಡಿಯಲು soft ಆಗಿರುವ ಪೆನ್ನನ್ನು ಬಳಸಿ. ಲೇಖನಿಯನ್ನು (pen) ಮೂರು ಬೆರಳುಗಳಲ್ಲಿ ಹಿಡಿಯುವುದನ್ನು ಅಂದರೆ ಹೆಬ್ಬೆರಳು ತೋರು ಬೆರಳು ಪೆನ್ನಿಗೆ ಆಧಾರವಾಗಿರುವಂತೆ ಸೂಕ್ತ ಅಂತರದಲ್ಲಿ ಹಿಡಿದಿರಬೇಕು. ಸೂಕ್ತವಾದ ವೇಗದಿಂದ ಅಂದವಾಗಿ ತಪ್ಪಿಲ್ಲದಂತೆ ಬರೆಯುವುದು ಉತ್ತಮ ಅಭ್ಯಾಸದ ಉನ್ನತ ಫಲಿತಾಂಶವಾಗಿದೆ. 
     ಕೈಗಳೇ ಇಲ್ಲದವರು ಕಾಲುಗಳಲ್ಲಿ ಬರೆಯುವುದನ್ನು ನೋಡಿದ್ದೇವೆ. ಇವರ ಬರವಣಿಗೆಯ ಪ್ರೀತಿ ಪ್ರೇರಣೆಯಾಗಲಿ. ಗತಕಾಲದ ಹಿರಿಯರ ಬರವಣಿಗೆಯ ಫಲವಾದ ಸಾಹಿತ್ಯ, ಇತಿಹಾಸ, ವಿಜ್ಞಾನ ಮುಂತಾದ ಪುಸ್ತಕಗಳಿಂದ ಕಲಿತ ವಿಷಯಗಳು ಬದುಕಿಗೆ ದಾರಿದೀಪವಾಗಲಿ. ಉತ್ತರ ಪತ್ರಿಕೆಯ ಅಂದವಾದ ಬರವಣಿಗೆ ನಿಮ್ಮ ಕಲಿಕಾ ಪ್ರಗತಿ ನೋಟದ ಗುರುತಾಗಲಿ ಎಂದು ಶುಭ ಹಾರೈಸುತ್ತೇನೆ.
.................................................. ಅಂಬಿಕಾ
ಚಿತ್ರಕಲಾ ಶಿಕ್ಷಕರು
ಬೆಂಗ್ರೆ ಕಸಬ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ.
ಮೊ. ನಂ : +91 98459 93780
******************************************


Ads on article

Advertise in articles 1

advertising articles 2

Advertise under the article