-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 44

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 44

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 44
ಲೇಖಕರು : ರಮೇಶ್ ಕುಲಾಲ್ ಎನ್
ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕೆದೂರು
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
Mob : +91 94819 76291       
           

ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಕನ್ನಡ ಶಿಕ್ಷಕರ ಪಾಠದ ಶೈಲಿಯನ್ನು ಮೆಚ್ಚಿ ಮುಂದೊಂದು ದಿನ ನಾನೂ ಕನ್ನಡ ಶಿಕ್ಷಕನಾದರೆ..... ಎಂದು ಮನದಲ್ಲಿ ಯೋಚಿಸಿದ್ದುಂಟು. ಆ ಯೋಚನೆಯೇ ನಿಜವಾಗಿ ಬಿ ಎಡ್ ಮುಗಿಸಿ ಒಂದು ವರ್ಷದಲ್ಲೇ ಕನ್ನಡ ಶಿಕ್ಷಕನಾಗಿ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಇಲ್ಲಿ ಕರ್ತವ್ಯಕ್ಕೆ ಸೇರಿಕೊಂಡೆ. ಅದು ಇಂದಿಗೆ ಇಪ್ಪತ್ತು ವರ್ಷಗಳ ಹಿಂದೆ. 

ಮನೆಯಿಂದ ದೂರ ಉಳಿಯಬೇಕಾದ ಮತ್ತು ತುಳು ಭಾಷೆ ಮಾತನಾಡುವ ಮಕ್ಕಳು ಹಾಗೂ ಜನರೊಂದಿಗೆ ವ್ಯವಹರಿಸಬೇಕಾದ ಚಿಂತೆ ನನ್ನನ್ನು ಕಾಡುತ್ತಿತ್ತು. ಅದರೆ ನನ್ನ ವಿದ್ಯಾರ್ಥಿಗಳು ತೋರಿದ ಅಪಾರ ಪ್ರೀತಿ ಅದೆಲ್ಲವನ್ನು 'ಸೂರ್ಯ ರಶ್ಮಿಯು ಮಂಜುಗಡ್ಡೆಯನ್ನು ಕರಗಿಸಿ ನೀರಾಗಿಸುವಂತೆ' ದೂರ ಸರಿಸಿತು. ಕೆಲವೇ ದಿನಗಳಲ್ಲಿ ನಾನೂ ಆ ಊರಿನವನೇ ಆದೆ!‌‌

ಮಕ್ಕಳಲ್ಲಿ ಶಿಸ್ತು ಮೂಡಿಸಬೇಕು ಎಂಬ ಪ್ರಬಲ ಇಚ್ಛೆ ನನಗಿದ್ದ ಕಾರಣ ತುಸು ಕಠಿಣವಾಗಿಯೇ ಮಾತನಾಡುತ್ತಿದ್ದೆ. ಅದು ಎಲ್ಲ ಮಕ್ಕಳಿಗೂ ಇಷ್ಟವಾಗುತ್ತಿರಲಿಲ್ಲ ಎಂಬ ಸತ್ಯ ನನಗೆ ಮಕ್ಕಳ ಮುಖ ನೋಡಿಯೇ ತಿಳಿದು ಬಿಡುತ್ತಿತ್ತು. ಮತ್ತೆ ಎಷ್ಟು ಖಾರವಾಗಿ ಮಾತನಾಡಿದರೂ ಅಷ್ಟೇ ಸಿಹಿಯ ಮಾತುಗಳ ಮೂಲಕ ಅವರ ಮನ ಗೆಲ್ಲುವುದು ನನಗೆ ಅಭ್ಯಾಸವಾಯಿತು. ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ಮೋಜಿನ ಆಟವಾಡಲು ಒತ್ತಾಯಿಸಿದ್ದಕ್ಕೆ ಒಬ್ಬ ವಿದ್ಯಾರ್ಥಿ ಹೆದರಿ ದೂರ ಅಡಗಿ ನಿಂತಿದ್ದ ವಿಷಯ ತಿಳಿದು 'ಮಕ್ಕಳ ಮನಸ್ಸು ಹೂವಿನಂತೆ ಅದನ್ನು ಮೆಲ್ಲಗೆ ಬಿಡಿಸಬೇಕು, ಇಲ್ಲವಾದಲ್ಲಿ ಹೂವಿನ ಅಂದ ಕೆಡುವಂತೆ ಮಗುವಿನ ಮನಸ್ಸಿಗೆ ಘಾಸಿಯಾಗುತ್ತದೆ' ಎಂಬ ಸತ್ಯದ ಅರಿವು ಅಂದು ನನಗಾಯಿತು. 

ಪಂಜಿಕಲ್ಲು ಶಾಲೆಯಲ್ಲಿ ಇದ್ದ ಹತ್ತು ವರ್ಷಗಳಲ್ಲಿ ಕನ್ನಡದಲ್ಲಿ ಪ್ರತೀ ವರ್ಷ ಅತ್ಯುತ್ತಮ ಫಲಿತಾಂಶವೇ ಬರುತ್ತಿತ್ತು. ಇದಕ್ಕೆ ಮಕ್ಕಳು ಕನ್ನಡ ಪಾಠ ಮತ್ತು ನನ್ನ ಮೇಲೆ ಇಟ್ಟ ಪ್ರೀತಿ ಅಭಿಮಾನವೇ ಸಾಕ್ಷಿ ಎನ್ನಲು ನನಗೆ ಹೆಮ್ಮೆಯೆನಿಸುತ್ತದೆ. 'ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಿದ್ದಂತೆ' ಎಲ್ಲವನ್ನೂ ತನ್ನೊಳಗೆ ಇಳಿಸಿಕೊಳ್ಳುತ್ತವೆ. ಹಾಗಾಗಿ ನಾವು ಮಾರ್ಗದರ್ಶಕರಾಗಿರುವ ಜೊತೆಗೆ ಆದರ್ಶಪ್ರಾಯರಾಗಿರಬೇಕಾದ ಅಗತ್ಯ ತುಂಬಾನೇ ಇದೆ. ಶಾಲೆಯಲ್ಲಿ ತುಳು ಭಾಷೆ ಮಾತನಾಡಬೇಡಿ ಎಂದು ತುಸು ಬಿಗಿ ದನಿಯಲ್ಲಿ ಹೇಳುತ್ತಲೇ ಇದ್ದ ನಾನೇ ಅಲ್ಲಿ ತುಳು ಕಲಿತು ಮಕ್ಕಳೊಂದಿಗೆ ಮಾತನಾಡಿದಾಗ ತಮಾಷೆಯಾಗಿ ನಕ್ಕ ಮಕ್ಕಳು ಇನ್ನೂ ನೆನಪಾಗುತ್ತಿರುತ್ತಾರೆ.

ಕಾರ್ಕಳದ ಯರ್ಲಪಾಡಿ ಶಾಲೆಗೆ ಬಂದಾಗ ವಾತಾವರಣ ಅಷ್ಟೇನು ಭಿನ್ನವಾಗಿರಲಿಲ್ಲ. ಅದರಂತೆ ಇದೂ ಗ್ರಾಮೀಣ ಪ್ರದೇಶವೇ, ತುಳು ಮಾತನಾಡುವ ಪ್ರದೇಶವೇ ಆಗಿತ್ತು. ಇಲ್ಲಿ ಮಕ್ಕಳ ಗೈರು ಹಾಜರಿ ಒಂದು ಸಮಸ್ಯೆಯಾಗಿತ್ತು. ಮಕ್ಕಳು ಮತ್ತು ಪೋಷಕರೊಂದಿಗೆ ಮಾತನಾಡಿ ಆದಷ್ಟು ಗೈರು ಹಾಜರಿಯನ್ನು ಕಡಿಮೆ ಮಾಡಿದ ತೃಪ್ತಿ ನನಗಿದೆ. ಗ್ರಾಮೀಣ ಭಾಗದಲ್ಲಿ ಇನ್ನೂ ಕೆಲವು ಪೋಷಕರಿಗೆ ಶಿಕ್ಷಣದ ಮಹತ್ವದ ಅರಿವು ಇರದಿರುವುದು ಸೋಜಿಗವೆನಿಸುತ್ತದೆ. ಆ ಕಾರಣದಿಂದಲೇ ಇಂದೂ ಕೆಲವರ ಓದು ಎಸ್ ಎಸ್ ಎಲ್ ಸಿ ದಾಟುತ್ತಿಲ್ಲ. ಆ‌ ನಿಟ್ಟಿನಲ್ಲಿ ಅಲ್ಲಿ ನಾವು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸೇರಿ ಮಾಡಿದ ಪ್ರಯತ್ನ ಫಲ ಕೊಟ್ಟಿದೆ ಎಂದರೆ ತಪ್ಪಾಗಲಾರದು. ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆ, ಸಮಯ ಪಾಲನೆ ಬೆಳೆಸುವಲ್ಲಿ ಮೊದಮೊದಲು ಕಷ್ಟವೆನಿಸಿದರೂ ಮತ್ತೆ ಮಕ್ಕಳು ಸ್ಪಂದಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಅಲ್ಲಿನ ಏಳು ವರ್ಷವೂ ನನ್ನ ವಿಷಯದಲ್ಲಿ ನೂರು ಶೇಕಡಾ ಫಲಿತಾಂಶ ಬಂದಿರುವುದು ಮರೆಯಲಾಗದು.

ಇದೀಗ ಎರಡು ವರ್ಷಗಳಿಂದ ನನ್ನೂರು ಕುಂದಾಪುರದ ಸರಕಾರಿ ಪ್ರೌಢಶಾಲೆ ಕೆದೂರು ಇಲ್ಲಿ ನನ್ನ ಕಾರ್ಯ ಕ್ಷೇತ್ರ. ಇಲ್ಲಿಯ ಶಾಲಾ ಪರಿಸರ ಸ್ವಲ್ಪ ಭಿನ್ನ. ಅಲ್ಲಿ ತುಳುವಾದರೆ ಇಲ್ಲಿ ಕುಂದಾಪುರ ಕನ್ನಡ ಎಂದು ನೀವು ಎಣಿಸಿದರೆ ತಪ್ಪಾಗುತ್ತದೆ. ಇಲ್ಲಿ ವಸತಿ‌ನಿಲಯದ ಮಕ್ಕಳು. ಉತ್ತರ ಕರ್ನಾಟಕದ ಭಾಷೆ ಇಂದು ನನಗೆ ಹೆಚ್ಚು ಆಪ್ತವಾಗುತ್ತಿದೆ. ಮಕ್ಕಳ ಮಾತು ನನಗೆ ಖುಷಿ ಕೊಡುವ ಹಾಗೇ ಅವರ ಮಾತಿನ ಶೈಲಿ ನನ್ನ ಬಾಯಿಯಲ್ಲಿ ಬಂದಾಗ ಅವರೂ ಖುಷಿ ಪಡುತ್ತಾರೆ. ಒಂದು ದಿನ ನಾನು ಬರುವುದು ತಡವಾದರೆ ಉಳಿದ ಶಿಕ್ಷಕರಲ್ಲಿ ಕನ್ನಡ ಸರ್ ಬರಲಿಲ್ವ ಅಂತ ಕೇಳ್ತಾರಂತೆ. ಇದು ನನಗಂತೂ ಸಂತಸ ಕೊಡುವ ಸಂಗತಿ. ಎಂಟನೇ ತರಗತಿಯ ಆರಂಭದಲ್ಲಿ ಮಕ್ಕಳಲ್ಲಿರುವ ವರ್ತನೆಯನ್ನು ಬದಲಾಯಿಸಲು ನಾವು ಪಡುವ ಪ್ರಯಾಸ ಅಷ್ಟಿಷ್ಟಲ್ಲ. ಅವರು ಅರಿತು ಬದಲಾದಾಗ ನಮಗಾಗುವ ಆನಂದಕ್ಕೆ ಪಾರವೇ ಇಲ್ಲ. 
          
ಶಿಕ್ಷಣ, ಕಲಿಕೆ ಎಂದರೆ ಕೇವಲ ಅಂಕಗಳಿಕೆಯಲ್ಲ. ವರ್ತನೆಯಲ್ಲಿನ ಬದಲಾವಣೆ, ವಿವಿಧ ರೀತಿಯ ಅಭಿವೃದ್ಧಿ ಎಂಬ ಸತ್ಯ ಶಿಕ್ಷಕರಾದ ನಮಗಿರಬೇಕು. ಅಂಕಗಳ ಬೆನ್ನು ಹಿಡಿಯಲು ತಿಳಿಸಿ ಜೀವನದಲ್ಲಿ ಮುಗ್ಗರಿಸುವಂತಹ ಶಿಕ್ಷಣ ನಮ್ಮಿಂದ ಅವರಿಗೆ ಬೇಕಿಲ್ಲ. ಅವರನ್ನು ತಿದ್ದಿ ತೀಡಿ ಸ್ವಾಭಿಮಾನ, ಮತ್ತು ಆತ್ಮ ವಿಶ್ವಾಸ ಮೂಡಿಸುವ ಕೆಲಸ ನಮ್ಮಿಂದಾದರೆ ಅಷ್ಟೇ ಸಾಕಲ್ಲವೇ...
............................ ರಮೇಶ್ ಕುಲಾಲ್ ಎನ್.
ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕೆದೂರು
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
Mob : +91 94819 76291
*******************************************




Ads on article

Advertise in articles 1

advertising articles 2

Advertise under the article