-->
ಜಗಲಿ ಕಟ್ಟೆ : ಸಂಚಿಕೆ - 40

ಜಗಲಿ ಕಟ್ಟೆ : ಸಂಚಿಕೆ - 40

ಜಗಲಿ ಕಟ್ಟೆ : ಸಂಚಿಕೆ - 40
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಮಕ್ಕಳ ಜಗಲಿ ವ್ಯವಹಾರಿಕ ಸಂಬಂಧವನ್ನು ಮೀರಿದ ಆತ್ಮೀಯ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ಇದೆ. ಇತ್ತೀಚೆಗೆ ಸುಳ್ಯದಾಚೆ ಹೋಗಿದ್ದಾಗ ರಸ್ತೆ ಬದಿ ಪಾರ್ಕಿಂಗ್ ಮಾಡಿ ಕಾರಿಂದಿಳಿದೆ. ತಕ್ಷಣ ರಿಕ್ಷಾ ನಿಲ್ಲಿಸಿ ವ್ಯಕ್ತಿಯೊಬ್ಬರು ನನ್ನ ಮುಂದೆ ಬಂದು ನಿಂತರು. "ತಾವು ಮಕ್ಕಳ ಜಗಲಿಯವರಲ್ವೇ...  ಕಾರಲ್ಲಿರುವ ಹೆಸರು ನೋಡಿ ಅಂದಾಜು ಮಾಡಿದೆ... ನನ್ನ ಮಗ ಚಿತ್ರ ಮಾಡಿ ಮಕ್ಕಳ ಜಗಲಿಗೆ ಕಳಿಸುತ್ತಿರುತ್ತಾನೆ" ಎಂದು ಮಾತಿಗಿಳಿದರು. ಹೀಗೆ ಅನೇಕ ಬಾರಿ ಬೇರೆ ಬೇರೆ ಭಾಗಗಳಿಗೆ ಹೋದಾಗ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುವ ಅನೇಕ ಮಕ್ಕಳು, ಪೋಷಕರು ಬಂದು ಪರಿಚಯ ಮಾಡಿಕೊಳ್ಳುತ್ತಾರೆ. ಅನಿವಾರ್ಯವಾಗಿ ಹುಟ್ಟಿಕೊಂಡ ಮಕ್ಕಳ ಜಗಲಿಯು ಎಲ್ಲರನ್ನು ಒಂದೇ ಸೂರಿನೆಡೆಗೆ  ಸೇರಿಸಿಕೊಳ್ಳುತ್ತಿರುವುದನ್ನು ಕಂಡಾಗ ಸಂತೃಪ್ತ ಭಾವ ಮೂಡುತ್ತದೆ.
    ಒಂದೂರಲ್ಲಿ ಯುವಕರೆಲ್ಲ ಒಟ್ಟು ಸೇರಿ ನಿಸ್ವಾರ್ಥವಾಗಿ ಸೇವೆ ಮಾಡುವ ಧ್ಯೇಯವನ್ನು ಕಟ್ಟಿಕೊಂಡರು. ಇವರು ಸಮಾಜದ ಅಶಕ್ತ, ದುರ್ಬಲ, ಅನಾರೋಗ್ಯ ಪೀಡಿತ  ವ್ಯಕ್ತಿ , ಕುಟುಂಬಗಳಿಗೆ ಸಹಾಯ ಮಾಡುವ ದೊಡ್ಡ ಕೆಲಸವನ್ನು ಮಾಡಲು ಶುರು ಮಾಡಿದರು. ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ, ದೇಣಿಗೆಗಳನ್ನು ಸಂಗ್ರಹಿಸಿ ಫಲಾನುಭವಿಗಳಿಗೆ ಹಂಚುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆ ಅವರದಾಗಿತ್ತು. ಇತ್ತೀಚೆಗೆ ನಡೆದ ಅವರ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಸಂಘಟಕಕರು ಮಾತಾಡುತ್ತಾ, "ನಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಧ್ಯಮಗಳ ಮೂಲಕ ರಾಜ್ಯಾದ್ಯಂತ ವಿಶೇಷ ಜನಮನ್ನಣೆ ಗಳಿಸುತ್ತಾ ಇದೆ. ಇದಕ್ಕೆ ಕಾರಣ ಪ್ರತಿಯೊಬ್ಬ ಕಾರ್ಯಕರ್ತನ ನಿಸ್ವಾರ್ಥ ಸೇವೆ." ಹೇಳಿದ ಮಾತು ಬಹಳವಾಗಿ ತಟ್ಟಿತು. ನಿಸ್ವಾರ್ಥ ಎನ್ನುವುದು ಪ್ರಾಮಾಣಿಕವಾಗಿದ್ದಾಗ ಪಾರದರ್ಶಕವಾಗಿದ್ದಾಗ ಗೆಲುವು ನಿಶ್ಚಿತ. ಯಾವುದೇ ಕೆಲಸಗಳನ್ನು ಪ್ರತಿಫಲಾಪೇಕ್ಷೆಗಳಿಲ್ಲದೆ ಮಾಡಿದಾಗ ಹೆಸರು ಮತ್ತು ಕೀರ್ತಿ ತಂತಾನೆ ದೊರೆಯುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾದ ವಿಚಾರ.
       ಯಾವುದೇ ವಿಶೇಷ ಸಾಧನೆಗೈಯ್ಯದೆ, ತುಂಬಾ ಶ್ರಮಪಡದೆ,  ಹೆಸರು ಮತ್ತು ಕೀರ್ತಿಗಾಗಿ ಬಯಸುವವರ ಮಧ್ಯ ಇಂತಹ ನಿಸ್ವಾರ್ಥ ಮನಸ್ಸುಗಳು ಬಹಳ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಬದಲಾವಣೆಗಳಿಗೆ ಪ್ರೇರಕರಾಗೋಣ... ನಮಸ್ಕಾರ
     

:

ಕಳೆದ ಸಂಚಿಕೆಯ ಜಗಲಿಕಟ್ಟೆ - 39 ಅಂಕಣದಲ್ಲಿ  ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ,
      ನೋಡಿದ್ದನ್ನು ಮನಸ್ಸಿನಲ್ಲಿ ತುಂಬಿಕ್ಕೊಂಡು ಅದನ್ನು ಅನುಭವಿಸಿದಾಗ ಮಾತ್ರ ಅದು ಶಾಶ್ವತವಾಗಿ ಉಳಿಯುತ್ತದೆ ಎನ್ನುವ ಪತಂಜಲಿ ಮಹರ್ಷಿಯ 'ಉಪರಾಗ' ಎನ್ನುವ ಪದದ ಸುಂದರ ವಿಶ್ಲೇಷಣೆ ಶಿಕ್ಷಣಧಿಕಾರಿ ಜ್ಞಾನೇಶ್ ಸರ್ ರವರಿಂದ. ಅದ್ಭುತವಾಗಿತ್ತು ಸರ್.
     ಸೈಬರ್ ಕ್ರಾಂತಿಯಿಂದ ಏನು ಪ್ರಯೋಜನಗಳು, ಅದರಿಂದಾಗುವ ಹಾನಿಗಳು ಅದಕ್ಕೆ ನಾವು ಯಾವ ಮುಂಜಾಗರೂಕತೆ ವಹಿಸಬೇಕೆನ್ನುವದನ್ನು ರಮೇಶ್ ಬಾಯಾರ್ ಸರ್ ರವರು ವಿವರವಾಗಿ ತಮ್ಮ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ. 
     ನಾಸಾದ ಇತ್ತೀಚಿಗಿನ ವಾದದಂತೆ ಕ್ಷುದ್ರ ಗ್ರಹಗಳ ಡಿಕ್ಕಿ ಹೊಡೆಯುವಿಕೆಯಿಂದ ಭೂಮಿಯಲ್ಲಿದ್ದ ನೀರಿನ ಸೆಲೆ ಹೆಚ್ಚಾಗಲು ಕಾರಣವನ್ನು ದಿವಾಕರ್ ಸರ್ ಅವರು ಬಹಳ ಸುಂದರವಾಗಿ ತಿಳಿಸಿದ್ದಾರೆ.
     ಈ ಬಾರಿ ಅರವಿಂದ  ಸರ್ ರವರ ಪಕ್ಷಿ ವೀಕ್ಷಣೆಯ ಆಯಾಮದ ಪರಿಚಯದೊಂದಿಗೆ ಗುಲಾಬಿ ಕೆಬ್ಬಕ್ಕಿ ಎನ್ನುವ ಸುಂದರ ಹಕ್ಕಿಯ ಪರಿಚಯ ತುಂಬಾ ಚೆನ್ನಾಗಿತ್ತು.
    ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ವಿಜಯ ಮೇಡಂರವರಿಂದ ಲಕ್ಷ್ಮಣ ಫಲ ಗಿಡದ ಕುರಿತಾದ ವಿವರವಾದ ಮಾಹಿತಿ ಲಭ್ಯವಾಯಿತು. ಧನ್ಯವಾದಗಳು ಮೇಡಂ.
    ಕೆಲವೊಂದು ಪ್ರಾಣಿಗಳಲ್ಲಿ ಕೂಡಿ ಬಾಳುವ ಹಂಚಿ ತಿನ್ನುವ ಗುಣ ಹಾಗೂ ವಿಧೇಯತೆ ನಿಷ್ಠೆಯನ್ನು ಕಾಣಬಹುದು. ಆದರೆ ಅತಿ ಆಸೆಯಿಂದ ಮಾನವ ಹೇಗೆ ಸ್ವಾರ್ಥಿಯಾಗುತ್ತಾನೆ ಎಂಬುದನ್ನು ಯಾಕೂಬ್ ಸರ್ ರವರು ಬಹಳ ಅದ್ಭುತವಾಗಿ ಸೊಗಸಾಗಿ ತಮ್ಮ ಈ ಸಲದ ಸಂಚಿಕೆಯಲ್ಲಿ  ತಿಳಿಸಿದ್ದಾರೆ. ಧನ್ಯವಾದಗಳು ಸರ್.
    ಉಜ್ವಲ್ ರವರಿಂದ ಉಡುಪಿಯ ಮೆಕ್ಕೆ ಕಟ್ಟು ದೇವಾಲಯದ ಮರದ ಶಿಲ್ಪ ಕಲಾಕೃತಿಗಳ ಕುರಿತಾದ ಲೇಖನ ಸೊಗಸಾಗಿತ್ತು.
    'ಮರ ಏರಲಾರದ ಗುಮ್ಮ' ಸುಂದರವಾದ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
    ನನ್ನ ವಿದ್ಯಾರ್ಥಿನಿ ರೂಪಶ್ರೀ ಮೋಂತಿಮಾರು ಇವರು ತಮ್ಮ ವಿದ್ಯಾರ್ಥಿಯೋರ್ವನ ಪ್ರಾಮಾಣಿಕತೆಯ ಕುರಿತಾದ ಅನುಭವದ ಲೇಖನ ಶಿಕ್ಷಕರ ಡೈರಿ ಸಂಚಿಕೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. 
     ರಮೇಶ್ ಉಪ್ಪುಂದ ಇವರ ಪದದಂಗಳ ಸಂಚಿಕೆ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ಸರ್.
    ಈ ವಾರದಲ್ಲಿ ಸುಂದರ ಬರಹಗಳ ಮೂಲಕ ಜಗಲಿಯ ಅಂದವನ್ನು ಹೆಚ್ಚಿಸಿದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಎಲ್ಲರಿಗೂ ನಮಸ್ಕಾರಗಳು
         ಮನಸಿದ್ದರೆ ಮಾರ್ಗ, ಸಾಧಿಸುವ ಛಲವಿದ್ದರೆ, ಎದುರಾಗುವ ಯಾವುದೇ ಸಮಸ್ಯೆಗಳೂ ಕೇವಲವಾಗಿಯೆ ಕಾಣುತ್ತದೆ. ಅಂಜುತ್ತಾ ನಿಂತರೆ ಬಾಳಿನ ಗುರಿ ಎತ್ತಲೋ ಸಾಗುವ ಸಂದರ್ಭ ಎದುರಾಗಬಹುದು. ಅಂಕವನ್ನು  ಗಳಿಸುವ ಆತುರದಲ್ಲಿ ನಮ್ಮ ಕೈ ಹಿಡಿದಿರುವ ಒಳ್ಳೆಯ ಹವ್ಯಾಸಗಳಿಗೆ ವಿರಾಮ ನೀಡುವುದು ಸರಿಯಲ್ಲ ಎಂಬ ಸಂದೇಶ ಸಾರುವ ತಾರನಾಥ್ ಸರ್ ರವರ ಲೇಖನ ಉತ್ತಮವಾಗಿತ್ತು.
      ಜ್ಞಾನೇಶ್ ಸರ್ ಅವರ ಜೀವನ ಸಂಭ್ರಮದ 125ನೇ ಸಂಚಿಕೆ 'ಉಪರಾಗ' ವಿಶೇಷವಾಗಿತ್ತು. ಜ್ಞಾನೇಶ್ ಸರ್ ರವರು ಪರಿಚಯಿಸಿದ ಉಪರಾಗಗಳ ಮಾಹಿತಿ ಅದ್ಭುತವಾಗಿತ್ತು. "ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು" ಎಂಬ ಗಾದೆಯನ್ನೇ ಹೋಲುವಂತಿದ್ದ ಅವರ ಲೇಖನದ ಸಾರ ಕಣ್ಣಿಟ್ಟು ನೋಡುವುದಕ್ಕಿಂತ,  ಮನಪೂರ್ವಕವಾಗಿ ನಾವು ಯಾವುದೇ ವಿಚಾರಗಳನ್ನು ಅಥವಾ ವಸ್ತುಗಳನ್ನು ಗಮನಿಸಿದರೆ ಅದರ ನೈಜ ಸೌಂದರ್ಯ, ಮೌಲ್ಯವೆಲ್ಲವೂ ತಿಳಿದುಬರುತ್ತದೆ ಎಂಬ ಸತ್ಯಾಂಶವನ್ನು ಸಾದರ ಪಡಿಸಿದಂತಿತ್ತು.
      ರಮೇಶ್ ಸರ್ ರವರ ಅಪಾಯಕಾರಿ ಸೈಬರ್ ಎಂಬ ಲೇಖನವಂತೂ ನಮ್ಮ ಕಂಪ್ಯೂಟರ್ ಯುಗದ ಅವಾಂತರಗಳನ್ನು ಶೋಧಿಸುವಂತಿತ್ತು, ಜೊತೆಗೆ ನಾವುಗಳು ಎಚ್ಚೆತ್ತುಕೊಳ್ಳುವ ಅನಿವಾರ್ಯತೆಯ ಬಗ್ಗೆ ಮಾಹಿತಿಯುಕ್ತವಾಗಿತ್ತು.
        ಇಂದಲ್ಲಾ, ನಾಳೆ ನಾವೆಲ್ಲರೂ ನಮಗಿರುವ ಹೆಸರನ್ನು ಹೊರತು ಪಡಿಸಿ ಸರ್ವವನ್ನು ತ್ಯಜಿಸಿ  ಉಸಿರು ನಿಲ್ಲಿಸುವವರಿದ್ದೇವೆ ಎಂಬ ಸತ್ಯಾಂಶದ ಸಾರ ನಮಗೆಲ್ಲಾ ತಿಳಿದಿದ್ದರೂ, ಪ್ರತಿದಿನವೂ ನಡೆಸುವ ಜಂಜಾಟಗಳು , ಬದುಕಿನ ನೆಮ್ಮದಿಯನ್ನು ಕೆಡಿಸುವಂತಿರುವ ವರ್ತನೆಗಳು ತರವಲ್ಲ ಎಂಬ ನಿಲುವು ನಮ್ಮೊಳಗೆ ಮೂಡದೇ ಹೋದರೆ ಜೀವನ ಯಾನಕ್ಕೆ ಅರ್ಥವೇನು? ಎನ್ನುವಂತಹ ವಿಪರ್ಯಾಸಗಳಿಗೆ ಅನುಗುಣವಾಗಿ ಯಾಕೂಬ್ ಸರ್ ಬರೆದ ಮರಣಕ್ಕಿಂತ ದೊಡ್ಡ ಸತ್ಯವಿಲ್ಲವೆಂಬ ಲೇಖನವೂ ಚೆನ್ನಾಗಿತ್ತು.
       ಭೂಮಿಯಲ್ಲಿ ನೀರಿನ ಅಸ್ಥಿತ್ವದ ಬಗ್ಗೆ ದಿವಾಕರ ಸರ್ ರವರು ನೀಡಿರುವಂತಹ ವಿವರಣೆ ಸೊಗಸಾಗಿತ್ತು.
       ಅಲ್ಲದೆ ಮಕ್ಕಳ ಜಗಲಿಯಲ್ಲಿ ಮೂಡಿಬರುತ್ತಿರುವ ಪದದಂಗಳ ಅಂಕಣ, ಪುಸ್ತಕ ಪರಿಚಯ, ನಿಷ್ಪಾಪಿ ಸಸ್ಯಗಳು, ಹಕ್ಕಿಕತೆ ಮಕ್ಕಳ ಕತೆಗಳು, ಶಿಕ್ಷಕರ ಡೈರಿಗಳೆಲ್ಲವೂ ಸೊಗಸಾಗಿತ್ತು.              
        ಅಲ್ಲದೆ ಈ ವಾರದ ವಿಶೇಷ ಲೇಖನದಲ್ಲಿ ಮೂಡಿಬಂದ ಉಜ್ವಲ್ ರವರ ವಿವರಣಾತ್ಮಕವುಳ್ಳ ಮೆಕ್ಕೆಕಟ್ಟು( ಮರದ ವಿಗ್ರಹ) ಎಂಬ ಕಲಾತ್ಮಕ ರಚನೆಯೂ ಚೆನ್ನಾಗಿತ್ತು.     
    ಚಿಣ್ಣರಿಗಾಗಿ ರೂಪುಗೊಂಡ  
ನಲಿವಿನ ಜಗಲಿಯಿದು...... 
ಬೆಳೆದ ಮನಕೂ  ಆಸರೆಯಿತ್ತ
ಹೆಮ್ಮೆಯ ಜಗಲಿಯಿದು......
ಬೇರೂರಿ ಭದ್ರವಾಗಿದೆ ಜಗಲಿ
ಮಕ್ಕಳ ಮನದೊಳಗೆ . . . . . .
ಜಗಲಿಯ ಒಡೆತನ ತಲುಪಲಿ 
ನಾಡಿನ ಎಲ್ಲಾ ಮನೆಮನಗಳಿಗೆ.....
ನಿರೀಕ್ಷೆಯೊಂದಿಗೆ.......
....................................... ವಿದ್ಯಾ ಗಣೇಶ್
ಚಾಮೆತ್ತಮೂಲೆ ತರವಾಡುಮನೆ
ಕಡಬ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ
Mob: +91 99453 11853
******************************************


      ಓದುಗರ ಮಾತುಕತೆಯಲ್ಲಿ.....  ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಗಣೇಶ್ ಚಾಮೆತ್ತಮೂಲೆ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************







Ads on article

Advertise in articles 1

advertising articles 2

Advertise under the article