-->
ಸ್ತ್ರೀಕುಲದ ಹೊನ್ನಕಳಶ : ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

ಸ್ತ್ರೀಕುಲದ ಹೊನ್ನಕಳಶ : ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

ಲೇಖನ : ಸ್ತ್ರೀಕುಲದ ಹೊನ್ನಕಳಶ : ಅಕ್ಷರಮಾತೆ  ಸಾವಿತ್ರಿಬಾಯಿ ಫುಲೆ
ಲೇಖಕಿ : ಸುಜಾತ ಎಂ ಜಿ
ಸಹಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಿವಗಂಗೆ , ನೆಲಮಂಗಲ ತಾಲ್ಲೂಕ್
ಬೆಂಗಳೂರು ಗ್ರಾಮಂತರ ಜಿಲ್ಲೆ.


"ಹೆಣ್ಣುಮಕ್ಕಳ ವಿದ್ಯೆಗೆ ದಾರಿದೀಪವಾದವರು
ಸಮಾಜದ ನೋವುನಿಂದನೆ ಮೆಟ್ಟಿನಿಂದವರು
ಅಕ್ಷರಕಲಿಸಲು ಹೆಣ್ಣುಮಕ್ಕಳ ಶಾಲೆ ತೆರೆದವರು
ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊನ್ನಕಲಶವಾದವರು."

ಜನವರಿ ಮೂರೆಂದರೆ ನಮಗೆ ಅಕ್ಷರಮಾತೆ ನೆನಪಾಗುವರು. ನಮ್ಮ ದೇಶದ ಮೊದಲ ಶಿಕ್ಷಕಿಯಾಗಿ ಅಕ್ಷರದ ಬೀಜವನ್ನು ಬೊಗಸೆಯಲ್ಲಿ ಹಿಡಿದುಕೊಂಡು ಅಕ್ಷರ ವಂಚಿತಲೋಕ ಪ್ರವೇಶಿಸಿದವರು. ಅಕ್ಷರದ ಅರಿವನ್ನು ಬೆಳಗಿಸಲು ಕಲ್ಲೇಟು, ನಿಂದನೆ, ಅಪಪ್ರಚಾರ ಎಲ್ಲಾ ಬಂದರೂ ದಿಟ್ಟತನದಿಂದ ಹೋರಾಡಿ ಗೆದ್ದವರು ಅವರೇ ನಮ್ಮ "ಸಾವಿತ್ರಿಬಾಯಿ ಫುಲೆರವರು".
ಸಾವಿತ್ರಿಬಾಯಿ ಫುಲೆ ರವರು ಜನಿಸಿದ್ದು 03-01-1831 ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್ ನಲ್ಲಿ. ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮಹಿಳೆಯರು ವಿದ್ಯೆ ಕಲಿಯಲು ಅನರ್ಹರು ಅಂತಿದ್ದ ಸಮಾಜದ ಕಠಿಣ ಸಂದರ್ಭದಲ್ಲಿ ಮೊದಲ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ವಿದ್ಯಾವಂತ ಮಹಿಳೆಯರಿಗೆ ಆಶಾಕಿರಣದಂತೆ ಶಿಕ್ಷಣದ ಮಹತ್ವ ತಿಳಿಸಿದರು. ಪತಿ ಯವರ ಬೆಂಬಲದಿಂದ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಾತ್ರ ಸಾಮಾಜಿಕ ಸಮಾನತೆ ತರಲು ಸಾಧ್ಯ ಎಂಬುದು ಸಾವಿತ್ರಿಬಾಯಿ ಫುಲೆ ಅವರ ಪತಿ ಜ್ಯೋತಿ ಬಾಪುಲೆ ಅವರ ಸಿದ್ಧಾಂತವಾಗಿತ್ತು. ಅದಕ್ಕಾಗಿ ಅವರು ಪತ್ನಿಗೆ ಶಿಕ್ಷಣ ಕೊಡಿಸಿ ಶಿಕ್ಷಕಿಯನ್ನಾಗಿಸುವ ಮೂಲಕ ಮಹಿಳೆಯರಿಗೆ ವಿದ್ಯೆ ನೀಡುವ ಹೊಸಮನ್ವಂತರಕ್ಕೆ ನಾಂದಿ ಹಾಡಿದರು. ಭಾರತದಲ್ಲಿ ಮೊಟ್ಟ ಮೊದಲ ಬಾರಿ ಪುಣೆಯಲ್ಲಿ ತಾತ್ಯಾಸಾಹೇಬ್ ಭೀಡೆ ಅವರ ಮನೆಯಲ್ಲಿ 1848 ರಲ್ಲಿ ಶಾಲೆಯೊಂದನ್ನು ತೆರೆದರು. ಜ್ಯೋತಿ ಬಾಪುಲೆ ಅವರು ತಮ್ಮ ಪತ್ನಿಗೆ ಶಿಕ್ಷಕಿಯಾಗಿ ಮುಂದುವರಿಯಲು ಎಲ್ಲಾ ರೀತಿಯ ಪ್ರೋತ್ಸಾಹ ಬೆಂಬಲ ನೀಡಿದರು. ಈ ಶಾಲೆ ಭಾರತದ ಪ್ರಥಮ ಖಾಸಗಿ ಮಹಿಳಾ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮಹಿಳಾ ಶಾಲೆಗೆ ಆಗ ಪ್ರವೇಶ ಪಡೆದವರು ಕೇವಲ ಆರು ಮಂದಿ...! ಈ ಪೈಕಿ ಓರ್ವ ಮರಾಠಿ, ಓರ್ವ ಕುರುಬ ಹಾಗೂ ನಾಲ್ವರು ಬ್ರಾಹ್ಮಣ ವಿದ್ಯಾರ್ಥಿಗಳಾಗಿದ್ದರು. ಪ್ರಬುದ್ಧ ಲೇಖಕಿ ಸಾವಿತ್ರಿಬಾಯಿ ಅವರ ಸಾಧನೆ ಕೇವಲ ಶಿಕ್ಷಕರಿಗೆ ಸೀಮಿತವಾಗಿರಲಿಲ್ಲ. ಅವರು ಶ್ರೀ ವಾಳ್ವೇಕರ ಅವರ ಸಂಪಾದಕೀಯದಲ್ಲಿ ಬರುತ್ತಿದ್ದ "ಗೃಹಿಣಿ" ಎಂಬ ನಿಯತಕಾಲಿಕೆಯಲ್ಲಿ ಲೇಖನಗಳನ್ನು1854 ರಲ್ಲಿ "ಕಾವ್ಯಫುಲೆ" ಎಂಬ ಅಭಂಗ್ ಶೈಲಿಯಲ್ಲಿ ಮೊದಲ ಕವನ ಸಂಕಲನ ರಚಿಸಿದ ಅವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗುತ್ತದೆ.

ಪ್ರಥಮ ಶಿಕ್ಷಕಿಯಾದ ಸಾವಿತ್ರಿ ಬಾಯಿಫುಲೆ ರವರು 1847 ರಲ್ಲಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದು ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ನೇಮಕಗೊಂಡರು. ಅವರದ್ದು ಕಷ್ಟಗಳ ಸರಮಾಲೆ. ಶಾಲೆಗೆ ಹೋಗುವ ದಾರಿಯಲ್ಲಿ ಸಿಕ್ಕ ಮಹಿಳೆಯರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಅಲ್ಲದೆ ಅವರ ಮೇಲೆ ಇಟ್ಟಿಗೆ ಮತ್ತು ಸಗಣಿಯಿಂದ ಹೊಡೆಯುತ್ತಿದ್ದರು. ಯಾವುದಕ್ಕೂ ಜಗ್ಗದೇ ಎದೆಗುಂದದೆ ಧೈರ್ಯದಿಂದ ತಾವು ಶಾಲೆಗೆ ಹೋಗುವಾಗ ಇನ್ನೊಂದು ಸೀರೆ ತೆಗೆದುಕೊಂಡು ಹೋಗುತ್ತಿದ್ದರು. ಶಾಲೆಗೆ ಬಂದಮೇಲೆ ಕೊಳಕಾದ ಸೀರೆ ಬಿಚ್ಚಿಟ್ಟು ಬೇರೆ ಸೀರೆ ತೊಟ್ಟು ಕೆಲಸ ನಿರ್ವಹಿಸುತ್ತಿದ್ದರು. ಹೀಗೆ ಫುಲೆ ದಂಪತಿಗಳು ಮಹಿಳೆಯರಿಗಾಗಿಯೇ ಶಾಲೆಗಳನ್ನು ಆರಂಭಿಸಿದರು. ಆರು ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಕ್ರಮೇಣ 235 ಮಹಿಳೆಯರು ದಾಖಲಾಗುವ ಗುರಿಮುಟ್ಟಿತು. ಕಲಿಕೆಯಲ್ಲಿ ಮಹಿಳೆಯರಿಗೆ ಇದ್ದ ಆಸಕ್ತಿಯನ್ನು ಎತ್ತಿತೋರಿಸುತ್ತದೆ. ಇವರ ಸಾಧನೆ ಮೆಚ್ಚಿ ಅಂದಿನ ಬ್ರಿಟಿಷ್ ಸರ್ಕಾರ ಪುಲೆ ದಂಪತಿಗಳನ್ನು ಗೌರವಿಸಿತ್ತು.
ಸಾವಿತ್ರಿಬಾಯಿ ಫುಲೆ ಅವರು ಆಗಿನ ಕಾಲದಲ್ಲೇ ಸಮಾಜದ ಒಳಿತಿಗಾಗಿ ಹೋರಾಟ, ಶಿಕ್ಷಣ ಎಲ್ಲರ ಹಕ್ಕು, ಬಿಸಿಯೂಟದಂತ ಯೋಜನೆಯನ್ನು ಅವರು 150 ವರ್ಷಗಳ ಹಿಂದೆಯೇ ಅನುಷ್ಠಾನಕ್ಕೆ ತಂದಿದ್ದರು. ಶಾಲೆಯನ್ನು ತೊರೆಯುವ ಮಕ್ಕಳಿಗೆ ಸ್ಪಂದಿಸಿ ಅವರಿಗೆ ಧನಸಹಾಯ ನೀಡುವ ಮೂಲಕ ಅವರನ್ನು ಶಾಲೆಯತ್ತ ಆಕರ್ಷಿಸುವಂತೆ ಅನೇಕ ಯೋಜನೆ ಜಾರಿಗೆ ತಂದಿದ್ದರು. ವಿಧವೆಯರಿಗೆ ತಲೆ ಬೋಳಿಸುವ ಪದ್ಧತಿಯನ್ನು ವಿರೋಧಿಸಿದರು. ಪುನರ್ವಸತಿ ಕೇಂದ್ರ ಸ್ಥಾಪಿಸಿ ಸಂತ್ರಸ್ತರ ನೆಮ್ಮದಿಗೆ ಕಾರಣರಾದರು. ಕೂಲಿಕಾರ್ಮಿಕರಿಗಾಗಿ ರಾತ್ರಿ ಶಾಲೆಯನ್ನು 1855 ರಲ್ಲಿ ಸ್ಥಾಪಿಸಿದರು. ಸಾಮಾಜಿಕ ಪಿಡುಗಿಗೆ ಸವಾಲೆಸೆಯುವ ಮೂಲಕ ನೂರಾರು ಮಹಿಳೆಯರು ಹಾಗೂ ಸಂತ್ರಸ್ತೆಯ ಮಕ್ಕಳ ಬದುಕಿಗೊಂದು ನೆಲೆ ಕೊಟ್ಟ "ಅಕ್ಷರ ಮಾತೆ ಸಾವಿತ್ರಿಬಾಯಿಫುಲೆ" ಅವರು ಅಂದಿಗೂ ಇಂದಿಗೂ ಮತ್ತು ಎಂದೆಂದಿಗೂ ಸ್ತ್ರೀ ಕುಲಕ್ಕೆ ಹೊನ್ನ ಕಳಶಪ್ರಾಯ. ಇಂಥ ಭಾರತದ ಶ್ರೇಷ್ಠ ಅಕ್ಷರ ಮಾತೆಯ ಜಯಂತಿಯನ್ನು ಜನವರಿ ಮೂರರಂದು ಆಚರಿಸುವ ಮೂಲಕ ಅವರನ್ನು ಸ್ಮರಿಸೋಣ....
........................................ಸುಜಾತ ಎಂ ಜಿ
ಸಹಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಗಂಗೆ ನೆಲಮಂಗಲ ತಾಲ್ಲೂಕು
ಬೆಂಗಳೂರು ಗ್ರಾಮಂತರ ಜಿಲ್ಲೆ.
Mob : +91 98866 71754
********************************************



Ads on article

Advertise in articles 1

advertising articles 2

Advertise under the article