-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 9

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 9

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 9
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

                 
ಪ್ರೀತಿಯ ಮಕ್ಕಳೇ.... ಸುಮ್ಮನೇ ಗೊಂದಲ ಮೂಡಿಸಿ ಗೊಂದಲದಲ್ಲಿಯೇ ಮುಗಿದು ಹೋಗುವ ವಿಷಯಗಳನ್ನು ಹೇಳುತ್ತಾ ತಿಳಿದದ್ದೂ ಸುಳ್ಳು ಎನ್ನುವ ಸ್ಥಿತಿಗೆ ತಂದು ಮುಟ್ಟಿಸುತ್ತಿದ್ದೀರಿ. ದಯವಿಟ್ಟು ಒಂದು ಕಥೆ ಹೇಳಿ ಎಂದು ಒಬ್ಬರು ಸಂದೇಶ ಕಳಿಸಿದ್ದಾರೆ. ಆದರೆ ನಾನು ಕಥೆ ಹೇಳಲು ಕಥೆಗಾರನೂ ಅಲ್ಲ ಭಾಷಾಧ್ಯಾಪಕನೂ ಅಲ್ಲ. ನಾನು ಸೂತ್ರಗಳನ್ನು ಮಾನಗಳನ್ನು ಹೇಳಬಹುದಷ್ಟೇ. ಆದರೆ ಓದುಗರನ್ನು ಕಳೆದುಕೊಳ್ಳಬಾರದೆಂದು ಕಥೆ ಹೇಳುವುದು ಹೇಗೆ ಎಂದು ಅಮ್ಮನನ್ನು ಕೇಳಿದೆ. ಅವಳು ಒಂದಾನೊಂದು ಕಾಲದಲ್ಲಿ ಅಂತ ಸುರು ಮಾಡು ಕಥೆ ತಾನಾಗಿ ಬರುತ್ತದೆ ಎಂದಳು. ಒಂದಾನೊಂದು ಕಾಲದಲ್ಲಿ ಆದ ಮೇಲೆ ಒಂದಾನೊಂದು ಊರಿನಲ್ಲಿ ಎಂದು ಹೇಳಬೇಕಲ್ಲ ನನ್ನ ಕಥೆಯ ಕಾಲದಲ್ಲಿ ಊರು ಕೇರಿಗಳೇ ಇರಲಿಲ್ಲವಲ್ಲಾ ಎಂದೆ. ಓಹೋ ಇದು ನೀನಿಲ್ಲದ ಕಾಲದ ಕಥೆಯಾ ಹಾಗಾದರೆ ಸುಳ್ಳು ಕಥೆ ಎಂದು ಅಮ್ಮ ಎದ್ದು ಹೋದಳು. ಅವಳು ಕೇಳುವುದಿಲ್ಲವಾದ್ದರಿಂದ ನಿಮಗೆ ಹೇಳುತ್ತೇನೆ.

ಒಂದಾನೊಂದು ಕಾಲದಲ್ಲಿ ಊರು ಕೇರಿಗಳಿರಲಿಲ್ಲ. ಖಾಲಿ ಜಾಗ. ಅಲ್ಲಿ ನೆಲವಿಲ್ಲ, ಜಲವಿಲ್ಲ, ದನ ಕರುಗಳಿಲ್ಲ ಗಿಡ ಮರಗಳಿರಲಿಲ್ಲ. ಮತ್ತೆ? ಬರಿಯ ಕತ್ತಲು. ಧೂಳು ಅನಿಲಗಳಿಂದಾದ ಮೋಡಗಳು. ಅಂತಿಂತ ಮೋಡಗಳಲ್ಲ ಕೋಟ್ಯಂತರ ಕಿಲೋಮೀಟರ್ ವ್ಯಾಪ್ತಿಯವು. ಆ ಮೋಡಗಳು ದಟ್ಟವಾಗಿ ಮಳೆ ಬಂದರೆ ಊರೆಲ್ಲ ಕೊಚ್ಚಿ ಹೋದರೆ ಎಂದು ಭಯ ಬೀಳಬೇಡಿ. ಏಕೆಂದರೆ ಅಲ್ಲಿ ನೀರೂ ಇರಲಿಲ್ಲ ಕೊಚ್ಚಿ ಹೋಗಲು ಊರೂ ಇರಲಿಲ್ಲ. ಈ ಮೋಡಗಳ ಸಾಂದ್ರತೆಯಿಂದ ಅವುಗಳಲ್ಲಿ ಸುಳಿಗಳೇರ್ಪಟ್ಟವು. ಈ ಸುಳಿಯಲ್ಲಿ ಅಮ್ಮ ಮೊಸರು ಕಡೆಯುವಾಗ ಸಣ್ಣ ಸಣ್ಣ ಬೆಣ್ಣೆಯ ಮುದ್ದೆಗಳು ರೂಪುಗೊಳ್ಳುತ್ತವಲ್ಲ ಹಾಗೆ ಸಣ್ಣ ದೊಡ್ಡ ಮುದ್ದೆಗಳು ರೂಪುಗೊಂಡವು. ಹೀಗೆ ರೂಪುಗೊಂಡ ಮುದ್ದೆಗಳು ತಮ್ಮ ಅಕ್ಷದ ಸುತ್ತಲೂ ತಾವೇ ಸುತ್ತಲು ಪ್ರಾರಂಭಿಸಿದವು. ಅಂದರೆ ಪ್ರತಿಯೊಂದು ಬೆಕ್ಕಿನ ಬಿಡಾರ ಬೇರೆ ಎನ್ನುತ್ತಾರಲ್ಲ ಹಾಗೆ ಬೇರಾದವು. ಈ ಮುದ್ದೆಗಳ ಗಾತ್ರ ಅಧಿಕವಾದುದರಿಂದ ಅವುಗಳ ಸುತ್ತ ಇರುವ ಧೂಳು ಮತ್ತು ಅನಿಲಗಳನ್ನು ತಮ್ಮ ಕಡೆಗೆ ಸೆಳೆಯುವುದಲ್ಲದೆ ಅವುಗಳನ್ನು ತಮ್ಮ ಕೇಂದ್ರದ ಕಡೆಗೆ ಸೆಳೆಯತೊಡಗಿದವು. ಆ ಮುದ್ದೆಗಳಿಗೇನು ಗೊತ್ತು ಪಾಪ ಈ ಕೇಂದ್ರದ ಕಡೆಗೆ ಸೆಳೆಯುವ ಬಲ ಕೇಂದ್ರಾಭಿಮುಖ ಬಲವೋ ಗುರುತ್ವಾಕರ್ಷಣ ಬಲವೋ ಎಂದು. ಅದನ್ನು ಅವುಗಳಿಗೆ ತಿಳಿಸಲು ಮಾನವ ಹುಟ್ಟಿ ಬರಬೇಕಾಯಿತು. ಈಗ ಈ ಅನಿಲದ ಗೋಳ ನಿರಂತರವಾಗಿ ಒತ್ತಲ್ಪಡತೊಡಗಿತು. ವಾಲಿಬಾಲ್ ಗೆ ಗಾಳಿ ಹಾಕುವಾಗ ಸೈಕಲ್ ಪಂಪ್ ಬಿಸಿಯಾಗುವುದನ್ನು ಗಮನಿಸಿದ್ದೀರಲ್ಲ. ಹಾಗೆಯೇ ಈ ಸಂಪೀಡನ ಬಲದಿಂದ ಈ ಅನಿಲದ ಮುದ್ದೆಯ ಉಷ್ಣತೆ ಏರತೊಡಗಿತು. ಈ ಮುದ್ದೆ ಬಿಸಿಯಾದಾಗ ಹಿಗ್ಗುವ ಬದಲಾಗಿ ಅತಿ ಗುರುತ್ವದ ಕಾರಣದಿಂದ ಕುಗ್ಗತೊಡಗಿತು. ಇದರಿಂದ ಉಷ್ಣತೆ ಮತ್ತಷ್ಟು ಏರಿತು. ಎಷ್ಟು ಉಗುರು ಬೆಚ್ಚಗೆ? ಅನ್ನ ಬೇಯವಷ್ಟು? ಅಲ್ಲಪ್ಪ ಸರಿ ಸುಮಾರು 100 ಮಿಲಿಯನ್ ಡಿಗ್ರಿ ಸೆಂಟಿಗ್ರೇಡ್. ಇದು ಸೂರ್ಯ ಕೇಂದ್ರದ ಉಷ್ಣತೆಯ ಆರು ಪಟ್ಟು ಜಾಸ್ತಿ. ಈ ಉಷ್ಣತೆಯಲ್ಲಿ ಅಲ್ಲಿರುವ ಜಲಜನಕ, ಡ್ಯುಟಿರಿಯಮ್ ಟ್ರೀಷಿಯಂನಂತಹ ಜಲಜನಕದ ಐಸೋಟೋಪುಗಳು ಒಂಟಿಯಾಗಿರಲಾರದೆ ಬೆಸೆದುಕೊಂಡು ದೊಡ್ಡ ಪರಮಾಣು ಬೀಜಗಳಾದುವು. ಈ ಪರಿವರ್ತನೆಯಲ್ಲಿ ಪರಿವರ್ತನೆಯಾಗದೆ ಉಳಿದ ದ್ರವ್ಯರಾಶಿ ಶಕ್ತಿಯಾಗಿ ಬದಲಾಯಿತು. ಆ ಶಕ್ತಿ ಉಷ್ಣ ಮತ್ತು ಬೆಳಕಿನ ರೂಪದಲ್ಲಿತ್ತು. ಈಗ ಈ ಅನಿಲದ ಮುದ್ದೆ ಶಾಖ ಮತ್ತು ಬೆಳಕನ್ನು ಹೊರ ಸೂಸತೊಡಗಿತು. ಇದಕ್ಕೆ ಈಗ ಯಾರ ಸಹಾಯವೂ ಬೇಕಿರಲಿಲ್ಲ. ತನ್ನ ಒಡಲನ್ನು ತಾನೇ ದಹಿಸಿಕೊಂಡು ತನಗೆ ಬೇಕಾದ ಶಕ್ತಿ ಉತ್ಪತ್ತಿ ಮಾಡಿಕೊಳ್ಳತೊಡಗಿತು. ಹೀಗೆ ಹುಟ್ಟಿದ ಈ ಬೆಳಕಿನ ಗೋಲವನ್ನು ನಕ್ಷತ್ರಗಳು ಎಂದು ಕರೆಯತೊಡಗಿದರು.

ಓಹೋ ನೀವು ಹೇಳ ಹೊರಟಿರುವುದು ನಕ್ಷತ್ರಗಳ ಹುಟ್ಟಿನ ಕಥೆಯಾ ಎಂದು ಪ್ರಶ್ನೆ ಕೇಳಬೇಡಿ. ನಾನು ಹೇಳಿ ಕೇಳಿ ವಿಜ್ಞಾನ ಮಾಸ್ಟ್ರು ಹ್ಯಾರಿ ಪಾಟರ್ ಕಥೆ ಹೇಳಲು ನಾನೇನು ಅಡುಗೂಲಜ್ಜಿಯಾ? ಇದು ಕಥೆಯಾ ನಿಜವಾ ಎಂದು ಕೇಳಿದರೆ ವಿಜ್ಞಾನ ಹೇಳುವ ಕಥೆ. ಇದಕ್ಕೆ ಅಗತ್ಯವಾದ ಸಾಕ್ಷ್ಯ ನೀಡಬಹುದಾದ್ದರಿಂದ ಇದು ಒಂದು ರೋಚಕ ಕಥೆ ಏನಿಸಿದರೂ ಸತ್ಯವೇ. ಹಾಗಾದರೆ ಇದಕ್ಕೆ ಸಾಕ್ಷಿ ಏನು ಎಂದು ಕೇಳಿದರೆ... ನಾನು ಆರಂಭದಲ್ಲಿ ಹೇಳಿದೆನಲ್ಲ ಒಂದು ಮೋಡ ಬೀಸಿ ಬಂತೆಂದು. ಆ ಬೃಹತ್ ಮೋಡವನ್ನು ನೆಬ್ಯೂಲಾ (Nebula) ಎನ್ನುತ್ತೇವೆ. ನಾವು ಈಗ ಕಾಣುವ ಓರಿಯಾನ್ ನೆಬ್ಯೂಲಾ ಈಗ ಹೊಸ ನಕ್ಷತ್ರಗಳ ಹುಟ್ಟಿಗೆ ಕಾತರವಾಗಿರುವ ಒಂದು ಧೂಳಿನ ಮೋಡ. ಈ ನಕ್ಷತ್ರಗಳು ಹುಟ್ಟುವುದನ್ನು ನಾವು ನೋಡಬಹುದೇ ಎಂದು ನೀವು ಕೇಳಿದರೆ? ಸಾಧ್ಯವಿಲ್ಲ. ಏಕೆಂದರೆ ಮೊದಲು ಒಂದು ನಕ್ಷತ್ರ ರೂಪುಗೊಳ್ಳಲು ಒಂದು ಲಕ್ಷ ವರ್ಷಗಳು ಸಾಕು ಎನ್ನುತ್ತಿದ್ದರು ಆದರೆ ಈಗ ಕನಿಷ್ಠ ಒಂದು ಮಿಲಿಯನ್ ವರ್ಷಗಳು ಎಂದು ಹೇಳುತ್ತಿದ್ದಾರೆ. ನಕ್ಷತ್ರಗಳು ರೂಪುಗೊಳ್ಳುವ ಈ ಸಾಂದ್ರಗೊಂಡ ಮೋಡಗಳನ್ನು ನಕ್ಷತ್ರ ಮಡಿಗಳು (stellar nurseries) ಅಥವಾ ನಕ್ಷತ್ರ ಜನ್ಮ ಸ್ಥಳಗಳು (star formaing regions) ಎನ್ನುತ್ತೇವೆ. ಜಲಜನಕದ ಐಸೋಟೋಪ್ ಗಳು ಸಂಯೋಜನೆಗೊಂಡು ಹೀಲಿಯಂ ಪರಮಾಣು ಹುಟ್ಟುವುದನ್ನು ಬೀಜ ಸಮ್ಮಿಲನ (nuclear fusion) ಎನ್ನುತ್ತೇವೆ. ಜಲಜನಕದ ಬಾಂಬ್ ಗಳಲ್ಲಿ ನಾವು ಇದನ್ನು ಸಾಧ್ಯವಾಗಿಸಿದ್ದೇವೆ. ಮೂರು ಹೀಟರ್ ಗಳ ಮೂಲಕ ಬಾಂಬ್ ನ ತಿರುಳಿನ ಉಷ್ಣತೆಯನ್ನು 100 ಮಿಲಿಯನ್ ಡಿಗ್ರಿ ಸೆಂಟಿಗ್ರೇಡ್ ಗೆ ಏರಿಸುವುದು ನಮಗೆ ತಿಳಿದಿದೆ. ಈ ಎಲ್ಲಾ ಸಾಕ್ಷ್ಯಾಧಾರಗಳ ಸಹಾಯದಿಂದ ಕಟ್ಟಿದ ಕಥೆ ಇದು. ಸತ್ಯಕ್ಕೆ ತೀರಾ ಸನಿಹವಾದದ್ದು. ಆದರೆ ಇದು ಕಥೆಯೇ!

ಮುಂದಿನ ವಾರ ಭೂಮಿಯ ಮತ್ತು ಜೀವಿಗಳ ಹುಟ್ಟಿನ ಕಥೆ ತಿಳಿಯೋಣ. ಈಗ ನಿಮ್ಮ ಮನೆಗೆಲಸದ ಬಗ್ಗೆ ಗಮನಕೊಡುವ ಸಮಯವಲ್ಲವೇ?.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article