-->
ಪ್ರಿಯ ವಿದ್ಯಾರ್ಥಿಗಳಿಗೆ ನನ್ನದೊಂದು ಕಿವಿಮಾತು

ಪ್ರಿಯ ವಿದ್ಯಾರ್ಥಿಗಳಿಗೆ ನನ್ನದೊಂದು ಕಿವಿಮಾತು

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 02
ಲೇಖನ : ಪ್ರಿಯ ವಿದ್ಯಾರ್ಥಿಗಳಿಗೆ ನನ್ನದೊಂದು ಕಿವಿಮಾತು
ಲೇಖಕರು : ಗೀತಾ ಶೆಟ್ಟಿ, ಕೆ ಇ ಎಸ್ 
ಉಪನ್ಯಾಸಕರು, ಡಯಟ್‌ 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ 
Mob : +91 87628 51848


     ಪ್ರೀತಿಯ ಮುದ್ದು ಮಕ್ಕಳೇ….. ನೀವೆಲ್ಲಾ ಮಾರ್ಚ್‌ 25 ರಿಂದ ಪ್ರಾರಂಭಗೊಳ್ಳುವ ಹತ್ತನೇ ತರಗತಿ ಪರೀಕ್ಷೆಯ ತಯಾರಿಯಲ್ಲಿದ್ದೀರಿ. ಯಾವುದೇ ಆತಂಕವಿಲ್ಲದೇ ಸುಲಲಿತವಾಗಿ ಪರೀಕ್ಷೆಯನ್ನು ಧೈರ್ಯವಾಗಿ, ಆತ್ಮವಿಶ್ವಾಸದಿಂದ ಎದುರಿಸಲು ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ. ಅತ್ಯುತ್ತಮ ಅಂಕ ಪಡೆದು ಉತ್ತಮ ಗ್ರೇಡ್ ನಲ್ಲಿ ಉತ್ತೀರ್ಣರಾಗುವ ಆಸೆ ನಿಮ್ಮದಾಗಿರಲಿ. ಏನೂ ಇಲ್ಲದೆ ಕಡಿಮೆ ಅಂಕ ತೆಗೆದು ಪಾಸ್‌ ಆದಲ್ಲಿ ನಿಮ್ಮ ಹೆತ್ತವರಿಗೆ, ನಿಮಗೆ ನಿರಂತರವಾಗಿ ಕಲಿಸಲು ಶ್ರಮ ವಹಿಸಿದ ನಿಮ್ಮ ಪ್ರೀತಿಯ ಶಿಕ್ಷಕರಿಗೆ ನೋವಾಗುವುದು ಖಂಡಿತ. ಆದ್ದರಿಂದ ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಪ್ರತಿ ಒಬ್ಬರಲ್ಲೂಇದ್ದು, ಅದನ್ನು ಸಾಧಿಸುವ ಗುರಿ ಮತ್ತು ಪ್ರಯತ್ನ ನಿಮ್ಮದಾಗಿರಲಿ, ಹೆದರಬೇಡಿ. ಆದರೆ ಉದಾಸೀನವೂ ಮಾಡಬೇಡಿ, ಏಕೆಂದರೆ ಇದು ನಿಮ್ಮ ಜೀವನದ ಯಶಸ್ಸಿನ ಮುನ್ನುಡಿಯಾಗಲಿದೆ.
      ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಭವಿಷ್ಯದ ತಳಪಾಯ. ಇದರಲ್ಲಿ ತೇರ್ಗಡೆಯಾದರೆ ಉತ್ತಮ ಬದುಕಿಗೆ ಬೇಕಾಗುವ ಬಹಳಷ್ಟು ಅವಕಾಶಗಳು ನಿಮ್ಮ ಮುಂದೆ ತೆರೆಯಲ್ಪಡುತ್ತವೆ. ನಿಮ್ಮಲ್ಲೇ ಕೆಲವರ ಮನಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆ ರಣರಂಗದಂತೆ ಬಿಂಬಿತವಾಗಿರಬಹುದು ಅಥವಾ ರಣರಂಗಕ್ಕೆ ಹೋಲಿಸಿ ನಿಮ್ಮನ್ನು ಹೆದರಿಸಿದವರೂ ಇರಬಹುದು. ಆದರೆ ಮಕ್ಕಳೇ ಇದು ಖಂಡಿತವಾಗಿಯೂ ರಣರಂಗವಲ್ಲ, ಬದಲಿಗೆ ಸ್ವ ಪ್ರಯತ್ನ, ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮಗಿದ್ದಲ್ಲಿ ನಿಮ್ಮ ಅಂತರಂಗದ ಸಾಕ್ಷಾತ್ಕಾರವಾಗಲೂ ಸಾಧ್ಯವಿದೆ. ನೀವು ಪರೀಕ್ಷೆ ಎದುರಿಸುವುದು ಕ್ಲಿಷ್ಟಕರವಾದುದಲ್ಲ. ಬದಲಿಗೆ ಪರೀಕ್ಷೆಯಲ್ಲಿ ಆತ್ಮವಿಶ್ವಾಸದಿಂದ ಮತ್ತು ಶಾಂತಚಿತ್ತದಿಂದ ಉತ್ತರಿಸುವುದು ಬಹಳ ಮುಖ್ಯ. ಫಲಿತಾಂಶದ ಬಗ್ಗೆ ಯಾವುದೇ ಕೀಳರಿಮೆ ನಿಮ್ಮಲ್ಲಿದ್ದರೆ ಅದನ್ನು ನಿಮ್ಮ ಮನಸ್ಸಿನಿಂದ ದೂರಗೊಳಿಸಿ.
       ನಿಮ್ಮ ಜೀವನದಲ್ಲಿ ಬಾಲ್ಯಕಾಲವೂ ಅತ್ಯಂತ ಪ್ರಮುಖವಾದ ಘಟ್ಟ. ವ್ಯಕ್ತಿತ್ವ ವಿಕಸನದ ಹಿನ್ನೆಲೆಯಲ್ಲಿ ನೀವು ಪಡೆದ ಶಿಕ್ಷಣ ಬಹುಮುಖ್ಯ. ನೀವು ಮುಂದೇನು ಆಗಬೇಕೆಂದು ಕನಸು ಕಾಣಲು ಶಿಕ್ಷಣ ನಿಮಗೆ ಮಾರ್ಗದರ್ಶಿ. ನೀವು ಕನಸನ್ನು ಕಾಣಲು ಪ್ರಯತ್ನಿಸಿ. ಗಣಿತಜ್ಙ ಶ್ರೀನಿವಾಸ್‌ ರಾಮಚಂದ್ರನ್‌ ಇವರಿಗೆ ಗಣಿತದ ಸೂತ್ರಗಳು ಹೊಳೆದದ್ದು ಕನಸ್ಸಿನಲ್ಲಿಯೇ. ನೀವು ಉತ್ತಮ ಆಲೋಚನೆಗಳ ಬಗ್ಗೆ ಗಮನ ಹರಿಸಲು ಪ್ರಯತ್ನಿಸಿ. ಇಂದಿನಿಂದಲೇ ಪ್ರಾರಂಭಿಸಿ.
ನೀವು ಸಂವಹನಗಳನ್ನು ಸೃಷ್ಟಿಸಿಕೊಳ್ಳಿ. ಯಾವ ರೀತಿಯಲ್ಲಿ ಓದುವುದು? ಓದಿದ್ದನ್ನು ಹೇಗೆ ಮನನ ಮಾಡಿಕೊಳ್ಳುವುದು? ಓದಿದ್ದನ್ನು ನೆನಪಿಟ್ಟುಕೊಳ್ಳಲು ಚುಟುಕಾಗಿ ಬರೆದಿಟ್ಟುಕೊಳ್ಳುವುದು ಒಂದು ಉತ್ತಮ ಅಬ್ಯಾಸ. ಎಲ್ಲಾ ವಿಷಯಗಳ ಬಗ್ಗೆ ನಿಮ್ಮ ಸರಿಯಾದ ತಯಾರಿ ಅತೀ ಅಗತ್ಯ. ಮಕ್ಕಳೇ.. ಯಾವುಧೇ ಪಾಠ ಅಥವಾ ವಿಷಯ ಓದಿದ ನಂತರ ಕಣ್ಣು ಮುಚ್ಚಿ ಸ್ವಲ್ಪ ಸಮಯ ಓದಿದ ವಿಷಯ ಮೆಲುಕು ಹಾಕಿ, ಅದು ನೆನಪಿನಾಳಕ್ಕೆ ತಲುಪುವಂತೆ ಮಾಡುವುದು ನಿಮ್ಮ ಯಶಸ್ಸಿನ ಅಡಿಪಾಯ ನೆನಪಿರಲಿ.
         ಪರೀಕ್ಷಾ ಫಲಿತಾಂಶದ ಬಗ್ಗೆ ಅತೀ ಹೆಚ್ಚು ಗಮನ ಕೊಡದೆ, ನಾನು ಅತ್ಯುತ್ತಮ ಸಾಧನೆ ಮಾಡಬೇಕು, ಮೇಲ್ಪಂಕ್ತಿಯಲ್ಲಿ ಉತ್ತೀರ್ಣನಾಗಬೇಕೆಂಬ ದೃಢ ಸಂಕಲ್ಪವಿರಲಿ. ಏನೇ ಆದರೂ ಸರಿಯೇ ಎಂಬ ತಿರಸ್ಕಾರ ಬೇಡವೇ ಬೇಡ. ಈ ರೀತಿ ಆಲೋಚನೆಯೆ ಭಯದ ವಾತಾವರಣವನ್ನು ಸೃಷ್ಟಿಸುವುದು. ನೆನಪಿರಲಿ ನೀವು, ನಿಮ್ಮ ಪ್ರಾಮಾಣಿಕ ಪ್ರಯತ್ನದ ಹಿಂದೆ ನೀವಿರಬೇಕೇ ಹೊರತು ಅಸ್ಪಷ್ಟ ದುರಾಸೆ ಬೇಡ. ಪ್ರಾಮಾಣಿಕ ಪ್ರಯತ್ನದಲ್ಲಿ ನಿಮಗೆ ಸಿಗುವ ಫಲ ನಿಜಕ್ಕೂ ತೃಪ್ತಿಕರವಾಗಿರುತ್ತದೆ ಮಕ್ಕಳೇ. ಪ್ರಾಮಾಣಿಕ ಪ್ರಯತ್ನದಲ್ಲಿ ದೊರಕಿದ ಫಲಿತಾಂಶದಲ್ಲಿ ತೃಪ್ತಿ ಪಡೆದು, ಬದುಕಿನ ಸುಂದರ ಕವಲುಗಳ ಜೊತೆ ನಿಮ್ಮ ಪ್ರಯಾಣ ಸಂತಸದಾಯಕವಾಗಲಿ..
          ಪರೀಕ್ಷೆಯ ವಿಷಯದಲ್ಲಿ ಶಾಂತ ಮನೋಭಾವ, ತಾಳ್ಮೆ, ಅತೀ ಅಗತ್ಯ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆಸಕ್ತಿಗೆ ಬೆಲೆ ಕಟ್ಟಿ. ಯಾರೋ ಹೇಳಿದರೆಂದು ಬಲವಂತಕ್ಕೆ ಬಲಿಯಾಗಬೇಡಿ. ನಿಮ್ಮ ಜೀವನದ ಶಿಲ್ಪಿ ನೀವೇ ಆಗಬೇಕು. ಅದರಲ್ಲಿ ಗುರು ಹಿರಿಯರ ಮಾರ್ಗದರ್ಶನ ಅವಶ್ಯಕ. ನೀವು ಬಯಸಿದ ಕ್ಷೇತ್ರದಲ್ಲಿ ಮುಂದುವರೆಯಲು ಪ್ರಯತ್ನ ಈಗಿನಿಂದಲೇ ಆರಂಭಿಸಿ. ಕೇವಲ ಹಣ ಗಳಿಸುವ ಉದ್ದೇಶದಿಂದ ವಿದ್ಯೆಯನ್ನು ಪಡೆಯದೇ ಸ್ವತಂತ್ರ ಚಿಂತನೆಯೊಂದಿಗೆ ಜೀವನ ರೂಪಿಸಲು ಈ ಪರೀಕ್ಷೆ ನಿಮಗೆ ಆಧಾರವಾಗಲಿ. ಆದ್ದರಿಂದ ಮಕ್ಕಳೇ ಪರೀಕ್ಷೆಯ ಭಯ ನಿಮಗಿರದಿರಲಿ, ಇದ್ದರೂ ಅದನ್ನೂ ಬಿಟ್ಟುಬಿಡಲು ಪ್ರಯತ್ನಿಸಿ.
         ಪರೀಕ್ಷೆ ಎದುರಿಸುವ ನಿಮಗೆ ಒಂದಿಷ್ಟು ತಯಾರಿಯೂ ಬೇಕಲ್ಲವೇ...? ಬೆಳಿಗ್ಗೆ ಆದಷ್ಟು ಬೇಗ ಏದ್ದು, ಆ ಪ್ರಶಾಂತ , ತಣ್ಣಗಿನ ಆಹ್ಲಾದಕರ ಮುಂಜಾನೆಯಲ್ಲಿ ಎದ್ದು ಹಾಸಿಗೆ, ಛಾಪೆ, ಹೊದಿಕೆ ಮಡಿಚಿಟ್ಟು, ನಿತ್ಯಕರ್ಮ ಮುಗಿಸಿ, ಒಂದು ಲೋಟ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದು, ದೇವರಿಗೆ ಮನದಲ್ಲಿ ಪ್ರಾರ್ಥನೆ ಸಲ್ಲಿಸಿ, ದೀರ್ಘವಾದ ಉಸಿರನ್ನು ಒಳಗೆ ತೆಗೆದುಕೊಂಡು, ಒಳಗಿನ ಉಸಿರನ್ನು ಹೊರಗೆ ಬಿಡುತ್ತಾ (ಸಾಧ್ಯವಾದಲ್ಲಿ ಕನಿಷ್ಟ ೨೧ ಬಾರಿ ಪ್ರಾಣಾಯಾಮ ಮಾಡಿ), ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಇದರಿಂದ ನಿಮ್ಮ ಮೈ ಮನಸ್ಸು ಶುಭ್ರ ಮತ್ತು ಸ್ವಚ್ಛವಾಗಿ ಒಳಗಿರುವ ಅಶುದ್ದತೆಯು ಹೊರಗೆ ಹೋಗುತ್ತದೆ. ಈ ಸಮಯದಲ್ಲಿ ಕಲಿತ ವಿಷಯವು ಮನಸಿನಾಳಕ್ಕೆ ಇಳಿದು ಪರೀಕ್ಷಾ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ. ನಿಮಗಿಷ್ಟದ ವಿಷಯ ಓದಲು ಪ್ರಾರಂಭಿಸಿ. ಈ ಸಮಯದಲ್ಲಿ ನಿಗದಿತ ವೇಳಾ ಪಟ್ಟಿಯಂತೆ ಮುಂಜಾನೆ ಮತ್ತು ಸಾಯಂಕಾಲ ನಿರ್ಧಿಷ್ಟ ವಿಷಯಗಳ ಓದನ್ನು ಗಮನವಿಟ್ಟು ಕಲಿಯಿರಿ. ಕಲಿತ ವಿಷಯ ಮನನ ಮಾಡಿಕೊಳ್ಳಿ...!!
           ನಿಮಗೆ ಬೇಕಾಗಿರುವುದು ಎಕಾಗ್ರತೆ. ಇದನ್ನು ನೀವು ಸಾಧಿಸಿದಲ್ಲಿ, ಯಶಸ್ಸು ನಿಮ್ಮದೇ. ನಮ್ಮ ಸುತ್ತ ಮುತ್ತ ಹರಿಯುವ ಮನಸ್ಸು, ಕಲಿಕೆಯ ಕಡೆ ಎಳೆಯುವುದೇ ಏಕಾಗ್ರತೆ. ಏಕಾಗ್ರತೆಯ ಸಮಯದಲ್ಲಿ ಮನಸ್ಸಿನ ಎಲ್ಲ ಆಲೋಚನೆಗಳು ಒಂದೇ ದಿಕ್ಕಿನಲ್ಲಿ ಹರಿಯುತ್ತದೆ. ಕಲಿಕೆ ಮಾತ್ರ ಮನಸ್ಸನ್ನು ಆವರಿಸುತ್ತದೆ. ಯಾವುದೇ ಪುಸ್ತಕ ಓದುವಾಗ ಅಥವಾ ಚಿಂತನೆ ಮಾಡುವಾಗ ಮನಸ್ಸು ಏಕಾಗ್ರತೆಯಲ್ಲಿದ್ದಲ್ಲಿ ಯಾವುದೇ ಶಬ್ದವೂ ನಿಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ಕಲಿತ ವಿದ್ಯೆ ಸಾರ್ಥಕ ಅಲ್ಲವೇ....?
         ನೀವು ಭವಿಷ್ಯದ ಬಗ್ಗೆ ಯೋಚಿಸುವುದನ್ನು ಸ್ವಲ್ಪ ಸಮಯದ ತನಕ ನಿಲ್ಲಿಸಿ. ಇಂದಿನಿಂದ ನಿಮ್ಮ ಸಮಯ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಉಪಯೋಗವಾಗುವಂತೆ ನಿಮ್ಮ ಆಲೋಚನೆಯಾಗಿರಬೇಕು. ಏಕಾಗ್ರತೆಯಿಂದ ಕಾರ್ಯಪ್ರವೃತ್ತರಾಗಿ, ಪರೀಕ್ಷೆಯಲ್ಲಿ ನೀವು ಬಯಸಿದಂತಹ ಫಲಿತಾಂಶ ಪಡೆಯಲು ನೀವೆ ಕಾರಣರಾಗಿರುತ್ತೀರಿ.
       ಮಕ್ಕಳೇ ನೀವು ಎಷ್ಟು ಓದಿದರೂ ನೆನಪಲ್ಲಿ ಉಳಿಯುತ್ತಿಲ್ಲ ಎಂದು ಬೇಸರಿಸಬೇಡಿ. ಬಿದಿರು ಹಠ ಹಿಡಿದು ಬೆಳೆದ ಮೇಲೆ ಕೃಷ್ಣನ ಕೊಳಲಾಯಿತು. ಮಕ್ಕಳನ್ನು ತೂಗುವ ತೊಟ್ಟಿಲಾಯಿತು. ವಯೋವೃದ್ದರ ಆಸರೆಯ ಊರುಗೋಲಾಯಿತು, ಅಲ್ಲವೆ...? ಹಾಗೇ ನೀವು ಹಠ ಹಿಡಿದು ಪ್ರಯತ್ನ ಮಾಡಿದಲ್ಲಿ ನಿಮ್ಮ ಜೀವನವೂ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಇಂದಿಗೆ ಸಾಕಷ್ಟು ದಿನಗಳು ಪರೀಕ್ಷೆಗೆ ಬಾಕಿ ಇದ್ದು, ಒಂದೊಂದು ದಿನವೂ ನಿಮ್ಮ ಬತ್ತಳಿಕೆಯಲ್ಲಿರುವ ಅಮೂಲ್ಯವಾದ ಬಾಣದಂತೆ ಗುರಿ ಮುಟ್ಟಲು ಆತ್ಮವಿಶ್ವಾಸದಿಂದ ಅರಿತು ಉಪಯೋಗಿಸಿದಲ್ಲಿ ಪರೀಕ್ಷೆ ನಿಮಗೆ ಖಂಡಿತವಾಗಿಯೂ ಸುಲಭ ಸಾಧ್ಯ...!!
      ಮಕ್ಕಳೇ ನಿಮ್ಮಲ್ಲಿರುವ ಚೇತನಗಳಿಗೆ ಗೊಬ್ಬರ ಹಾಕಿ, ಪ್ರಶಂಸೆಯ ನೀರೆರೆದು, ಅಸ್ವಸ್ಥ ರೆಂಬೆಗಳನ್ನು ಕತ್ತರಿಸಿ ಕಸಿ ಮಾಡಿದಂತೆ ನಿಮ್ಮನ್ನು ನಿಮ್ಮ ಶಿಕ್ಷಕರು, ಪೋಷಕರು ಮತ್ತು ನಿಮ್ಮ ಹತ್ತಿರದವರು ಈಗಾಗಲೇ ಸಿದ್ಧಗೊಳಿಸಿದ್ದಾರೆ. ನಿಮ್ಮ ಹೆತ್ತವರ ಮತ್ತು ಶಿಕ್ಷಕರ ಆಶೀರ್ವಾದದೊಂದಿಗೆ ಭಯವನ್ನು ದೂರ ಮಾಡಿ ಅಳುಕಿಲ್ಲದೇ, ಥಳುಕಿಲ್ಲದೇ, ಕೊಳಕಿಲ್ಲದೇ ಮನಸ್ಸನ್ನು ಅಣಿಗೊಳಿಸಿ. ಎಗ್ಗಿಲ್ಲದೇ, ನೆಗ್ಗಿಲ್ಲದೇ ನುಗ್ಗುವ ಸಾಮರ್ಥ್ಯ ಹೊಂದಿ ಮುಂದೆ ದೇಶ ಬೆಳೆಸುವ, ದೇಶ ಹಸನಾಗಿಸುವ, ದೇಶ ಹಸಿರಾಗಿಸುವ, ದೇಶ ಉಸಿರಾಗಿಸುವ ಶಿಲ್ಪಿಗಳಾಗಿ ಬೆಳೆಯಿರಿ ಎಂದು ನನ್ನ ಹಾರೈಕೆ, ಶುಭವಾಗಲಿ                .................................... ಗೀತಾ ಶೆಟ್ಟಿ, ಕೆ ಇ ಎಸ್ 
ಉಪನ್ಯಾಸಕರು, ಡಯಟ್‌ 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ 
Mob : +91 87628 51848
*******************************************


Ads on article

Advertise in articles 1

advertising articles 2

Advertise under the article