-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 43

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 43

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 43
ಲೇಖಕರು : ರವಿಕಲಾ
ಬಿ ಐ ಇ ಆರ್ ಟಿ
ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob : +91 94489 52002
                     

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದವಳು ನಾನು. ಹೀಗಿರುವಾಗ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಶಾಲೆಯಲ್ಲೂ ಕಲಿಯಲು ಸಾಧ್ಯವೇ...? ಎನ್ನುವ ಪ್ರಶ್ನೆ ನನ್ನಲ್ಲಿ ಸದಾ ಮೂಡುತ್ತಿತ್ತು. ಅನಿವಾರ್ಯ ಕಾರಣದಿಂದ ನಾನು ವಿಶೇಷ ಬಿ ಎಡ್ ನ್ನು ಮಾಡಬೇಕಾಗಿ ಬಂತು. ಆ ವಿಶೇಷ ಬಿ ಎಡ್ ತರಬೇತಿ ಸಮಯದಲ್ಲಿ ನನಗೆ ವಿಶೇಷ ಮಕ್ಕಳು ಕೂಡ ಸಾಮಾನ್ಯ ಮಕ್ಕಳೊಂದಿಗೆ ಸಂತಸದಿಂದ ಕಲಿಯಬಹುದು ಎನ್ನುವ ಭರವಸೆಯು ನನ್ನಲ್ಲಿ ಮೂಡಿಸಿತು. ಆದರೆ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಮಾರ್ಗದರ್ಶನ ನೀಡುವ ಅವಕಾಶ ಸಿಗಬೇಕೆನ್ನುವುದು ನನ್ನ ಕನಸಾಗಿತ್ತು. ಬಹಳಷ್ಟು ವರ್ಷಗಳ ನಂತರ ನನಗೆ ಅಂತಹ ಭಾಗ್ಯ ಒದಗಿ ಬಂತು.

2017 ರಲ್ಲಿ ನಾನು ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿಯಾಗಿ ಕರ್ತವ್ಯವನ್ನು ಮಾಡಲು ತೊಡಗಿದೆ. ಮೊದಮೊದಲು ಸ್ವಲ್ಪ ಕಷ್ಟವೆನಿಸಿದರೂ ಬಳಿಕ ನಾನು ಈ ವೃತ್ತಿಯಲ್ಲಿ ತುಂಬಾ ಸಂತೋಷಪಟ್ಟೆ. ವಿಶೇಷ ಅಗತ್ಯವುಳ್ಳ ಮಕ್ಕಳ ಮುಖದಲ್ಲಿ ಕಾಣುವ ಬೆಳಕು, ಅವರ ನಗು, ಅವರ ಸಂತಸ ನನಗೆ ಮತ್ತಷ್ಟು ಉತ್ಸಾಹವನ್ನು ನೀಡಿತ್ತು.

ನನ್ನೀ ವೃತ್ತಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಯು ಡಿ ಐ ಡಿ ಕಾರ್ಡನ್ನು (ಅಂಗವಿಕಲತೆ ಗುರುತಿನ ಚೀಟಿ) ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಡಿಸುವ ಸಮಯಲ್ಲಿ ಪೋಷಕರ ಮುಖದಲ್ಲಿ ಮೂಡುವ ಭರವಸೆಯ ನಗುವನ್ನು ಕಂಡಾಗ ನಮಗೆ ಧನ್ಯತಾಭಾವ ಎನಿಸುವುದು. ತುಂಬಾ ಅಂಗವೈಕಲ್ಯತೆಗೆ ಒಳಪಟ್ಟ ಗೃಹಾಧಾರಿತ ಮಕ್ಕಳ ಹೆತ್ತವರಂತು ಮನ ನೊಂದಿರುತ್ತಾರೆ. ನಾವು ಅವರ ಮನೆಗೆ ಭೇಟಿ ಕೊಟ್ಟು ಅವರ ಮಕ್ಕಳೊಂದಿಗೆ ಮಾತಾನಾಡಿ ಮಾರ್ಗದರ್ಶನ ನೀಡಿದಾಗ ತುಂಬಾ ಸಂತೋಷ ಪಡುತ್ತಾರೆ. ಅವರಿಗೆ ಉಪಯುಕ್ತ ವಾಗುವ ಸಾಧನ ಸಲಕರಣೆಗಳನ್ನು ನೀಡಿದಾಗ ಪಡುವ ಸಂಭ್ರಮಕ್ಕೆ ಮೇರೆಯೇ ಇಲ್ಲ...!!

ಸಾಮಾನ್ಯ ಶಾಲೆಯಲ್ಲಿ ಕೂಡ ವಿಶೇಷ ಅಗತ್ಯವುಳ್ಳ ಮಕ್ಕಳು ಕಲಿತು ಮುಂದಕ್ಕೆ ಬರಬಹುದು ಎನ್ನುವ ಭರವಸೆ ನನ್ನಲ್ಲಿ ಮೂಡಿಸಿರುವ ಅನೇಕ ನಿದರ್ಶನಗಳು ಇವೆ. ನನ್ನ ಆರು ವರ್ಷಗಳ ಅನುಭವದಲ್ಲಿ ಹಲವಾರು ಮಕ್ಕಳು ಉನ್ನತ ವಿದ್ಯಾಭ್ಯಾಸ ಹಾಗೂ ವಿಶೇಷ ಸಾಧನೆಯನ್ನು ಮಾಡಿರುತ್ತಾರೆ. ನಾನು ಮಂಗಳೂರು ಉತ್ತರ ವಲಯದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ನನ್ನ ವ್ಯಾಪ್ತಿಗೆ ಒಳಪಟ್ಟ ಗಾಂಧಿನಗರದ ಕಾರ್ತಿಕ, ಬೈಕಂಪಾಡಿಯ ತನುಶ್ರೀ ರಾಯ್, ಎರಡು ಕಣ್ಣು ಕಾಣದೆ ಸಂಪೂರ್ಣ ಅಂಧರಾಗಿರುವ ಜಯೇಶ್, ಜೀವನ್ ಹಾಗೂ ಜೀತೇಶ ಇಂದು ಸಿಎ ಮಾಡುತ್ತಿದ್ದಾರೆಂದರೆ ಯಾರಿಗೂ ಆಶ್ಚರ್ಯವಾಗದಿರದು.

ಜಯೇಶ್, ಜೀವನ್ ಹಾಗೂ ಜೀತೇಶ ಒಂದೇ ಕುಟುಂಬದ ಕುಡಿಗಳು. ತುಂಬು ಬಡತನ. ಕಲ್ಲು ಹೃದಯದವರು ಕೂಡ ಕಣ್ಣೀರು ಸುರಿಸಬಲ್ಲಂತಹ ಪರಿಸ್ಥಿತಿಯೊಳಗಡೆ ಇವರ ಬದುಕು. ಕೂಲಿ ಕಾರ್ಮಿಕರಾದ ವಿಶ್ವನಾಥ್ ಶೆಟ್ಟಿಗಾರ್ ಮತ್ತು ಊರ್ಮಿಳ ದಂಪತಿಯ ಮಕ್ಕಳು. ಹುಟ್ಟಿದ ಎಲ್ಲಾ ಮಕ್ಕಳು ಲೋಕವನ್ನು ಕಾಣದವರೆಂದರೆ ಯಾರ ಹೃದಯವೂ ಕೂಡ ತಲ್ಲಣಗೊಳ್ಳಬಹುದು...!! ಆದರೆ ಸೃಷ್ಟಿಯೇ ಬೇರೆ ದೇವರ ಆಶೀರ್ವಾದ, ಗುರುಬಲ ಇವರನ್ನು ಕಾಪಾಡಿದೆ ಎಂದರೆ ತಪ್ಪಲ್ಲ. ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕಾಟಿಪಳ್ಳ 5ರಲ್ಲಿ ಪೂರ್ಣಗೊಳಿಸಿದರೆ, ಪಿ.ಯು.ಸಿ. ವಿದ್ಯಾಭ್ಯಾಸವನ್ನು ನಾರಾಯಣ ಗುರು ಪದವಿ ಪೂರ್ವ ಕಾಲೇಜು ಕಾಟಿಪಳ್ಳದಲ್ಲಿ , ಬಳಿಕ ಎಲ್ಲರೂ ಮೂಡಬಿದ್ರೆಯ ಆಳ್ವಾಸ್ ನಲ್ಲಿ ವಾಣಿಜ್ಯ ಪದವಿ ಓದುತ್ತ ಸಿಎ ಆಗಬೇಕೆನ್ನುವ ಹಾದಿಯಲ್ಲಿದ್ದಾರೆ. 

ಈ ಮಕ್ಕಳು ಸರಕಾರಿ ಶಾಲೆಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ಕಲಿತು ಮುಂದಕ್ಕೆ ಬಂದಿದ್ದಾರೆ ಎನ್ನುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಷಯ. ಸರಕಾರಿ ಶಾಲೆಯು ಕೂಡ ವಿಶೇಷ ಮಕ್ಕಳಿಗೆ ಸಂತೋಷದ ಬೆಳಕನ್ನು ನೀಡಿದೆ ಎಂದಾಗ ನನ್ನ ಜೀವನ ಸಾರ್ಥಕವೆನಿಸುವುದು...!!

ಸರಕಾರ ಈ ಮಕ್ಕಳಿಗೆ ನೀಡುವ ಬೆಂಬಲವನ್ನು ಸಮರ್ಥವಾಗಿ ಅನುಷ್ಠಾನಗೊಳಿಸಬೇಕಾಗಿದೆ. ಇವರಿಗೆ ಸಿಗುವ ಭತ್ಯೆಗಳನ್ನು ಮತ್ತು ಸಾಧನ ಸಲಕರಣೆಗಳನ್ನು ಸರಿಯಾದ ಸಮಯಕ್ಕೆ ನೀಡುವ ಅವಶ್ಯಕತೆ ಇದೆ. ಗೃಹಾಧಾರಿತ ಮಕ್ಕಳಿಗೆ ಭೋಧನೆ ಮಾಡಲು ಗೌರವ ಶಿಕ್ಷಕರ ನೇಮಕಾತಿ ಅಗತ್ಯವಾಗಿ ಬೇಕಿದೆ. ಥೆರಪಿ ಕೇಂದ್ರಗಳಿಗೆ ಬರಲು ಅನುಕೂಲವಾಗುವ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಸಕಾರಾತ್ಮಕ ಮನೋಭಾವನೆ ಮತ್ತು ನಿಸ್ವಾರ್ಥ ಸೇವಾ ಮನೋಭಾವನೆ ಜಾಗೃತಿಯಾಗಬೇಕಾಗಿದೆ.
...................................................... ರವಿಕಲಾ
ಬಿ ಐ ಇ ಆರ್ ಟಿ
ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob : +91 94489 52002
*******************************************


Ads on article

Advertise in articles 1

advertising articles 2

Advertise under the article