ನಿಷ್ಪಾಪಿ ಸಸ್ಯಗಳು : ಸಂಚಿಕೆ - 34
Wednesday, January 24, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 34
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ? ಪರೀಕ್ಷೆಯತ್ತ ನಿಮ್ಮೆಲ್ಲರ ಚಿತ್ತ ಹೊರಳುತ್ತಿದ್ದರೂ ಪುಸ್ತಕ ನೋಡುತ್ತಾ, ಓದುತ್ತಾ ಊಟ ಮಾಡಬಾರದಲ್ವಾ? ಕೆಲವರು T.V ನೋಡ್ತಾ, ಮೊಬೈಲ್ ನೋಡ್ತಾ ಬಾಯಿಗೆ ಅನ್ನದ ತುತ್ತನ್ನು ಇಡುವುದನ್ನೂ ಕಾಣುತ್ತೇವೆ. ಇದು ಉತ್ತಮ ಕ್ರಮವಲ್ಲವೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಏಕೆಂದರೆ ಹಸಿವಿನ ಅನುಭವ ಆಗುವಾಗ ಜಠರ ಆಹಾರಕ್ಕಾಗಿ ಕಾಯುತ್ತಿರುತ್ತದೆ. ಬಾಯಲ್ಲಿ ಇಟ್ಟ ಆಹಾರವನ್ನು ನಾಲಿಗೆಯ ರಸಗ್ರಂಥಿಗಳು 'ರುಚಿಕರವಾಗಿ, ಸ್ವಾದಿಷ್ಟವಾಗಿ ಇದೆ' ಎಂದು ಮೆದುಳಿಗೆ ಸುದ್ದಿ ರವಾನಿಸುತ್ತಾ ಹಿತವಾಗಿ ಜಗಿದು ನುಂಗುವ ಕಾರ್ಯವನ್ನು ನಡೆಸುತ್ತದೆ. ಇಲ್ಲಿ ಆಹಾರದ ಪರಿಮಳವೂ ಮುಖ್ಯಪಾತ್ರ ವಹಿಸುತ್ತದೆ. ನಾಲಿಗೆಯು ಮೂಗಿನೊಂದಿಗೆ ಸೇರಿಕೊಂಡು ಘಮ ಘಮವನ್ನೂ ಆನಂದಿಸುವಾಗ ಮೊಬೈಲ್, ಟಿ.ವಿ ಗಳು ಎದುರಿದ್ದರೆ ಎಲ್ಲವೂ ಸಪ್ಪೆಯೆನಿಸುವುದು ಅಲ್ಲವೇ?
ಹೌದು ಮಕ್ಕಳೇ, ಕೆಲವು ಸೊಪ್ಪುಗಳನ್ನು ನಾವು ನಮ್ಮ ಆಹಾರ ಪದಾರ್ಥಗಳಲ್ಲಿ ಪರಿಮಳಕ್ಕಾಗಿಯೇ ಬಳಸುತ್ತೇವೆ. ಆಹಾರದ ಆಕಾಂಕ್ಷೆ ಸೃಷ್ಟಿಯಾಗಲಿಕ್ಕೂ ಈ ಪರಿಮಳದ ಅಗತ್ಯವಿರುತ್ತದೆ. ಇಂತಹ ಸಸ್ಯಗಳನ್ನು ಹೆಚ್ಚಾಗಿ ನಮ್ಮ ಮನೆಗಳ ಹಿತ್ತಲು, ಕೈತೋಟ ಅಥವಾ ತೋಟದ ಬದಿಗಳಲ್ಲಿ ಬೆಳೆಸಿಕೊಳ್ಳುತ್ತೇವೆ. ನಿಮ್ಮ ಮನೆಯಲ್ಲೂ ಖಂಡಿತವಾಗಿ ಇಂತಹ ಸಸ್ಯವೊಂದಿರಬಹುದು ಅಲ್ಲವೇ?
ನಮ್ಮ ಮನೆಗಳಲ್ಲಿ ಯಾವುದೇ ಒಗ್ಗರಣೆಯಲ್ಲಿಯೂ ಪಾಲ್ಗೊಂಡು ಆಹಾರದ ರುಚಿ ಹೆಚ್ಚಿಸುವ ಒಂದು ನಿಷ್ಪಾಪಿ ಸಸ್ಯ ಕರಿಬೇವು. ಅದನ್ನು ಅಮ್ಮ ಒಗ್ಗರಣೆಗೆ ಹಾಕಿದರೂ ಬಟ್ಟಲಿನ ಬದಿಗೆ ಸರಿಸಿಟ್ಟು ಬಿಸಾಡಿಬಿಡುವವರೂ ಕೆಲವರಿರುತ್ತಾರಲ್ಲವೇ? ಈ ಕರಿಬೇವು ಸಾಮಾನ್ಯವಾದುದಲ್ಲ ಗೊತ್ತಾ! ಕರಿಬೇವಿನ ಒಗ್ಗರಣೆ ಸಾರಿಗೊಂದು ಸಿಗ್ನೇಚರ್ ಹಾಕಿದಂತೆ! ಅಡುಗೆಗೆ ಭೂಷಣ ಕರಿಬೇವು. ಒಗ್ಗರಣೆಗೆ ಇದಿಲ್ಲವಾದರೆ ಸಪ್ಪೆ ಸಪ್ಪೆ..ಭಣ ಭಣ! ಕರಿಬೇವಿನ ಎಲೆಗಳಿಲ್ಲವಾದರೆ ಮಸಾಲೆ ಪದಾರ್ಥವೇ ರುಚಿಹೀನ ಎಂದೆನಿಸುವುದಿಲ್ಲವೇ?
ಈ ಕರಿಬೇವನ್ನು ಸಿಹಿಬೇವು, ಗಿರಿನಿಂಬ, ಕರಿಪತ್ತ, ಒಗ್ಗರಣೆ ಸೊಪ್ಪೆಂದೂ ಕರೆಯುವರು. ಉಷ್ಣವಲಯದ ಸಸ್ಯವಾದ ಕರಿಬೇವು ಏಷ್ಯಾ ಮೂಲದ ಸಸ್ಯ ಹಾಗೂ ಭಾರತೀಯ ಉಪಖಂಡಕ್ಕೆ ಸ್ಥಳೀಯ ಸಸ್ಯವೇ ಆಗಿದೆ. ನಾಲ್ಕರಿಂದ ಆರು ಮೀಟರ್ ಎತ್ತರ ಬೆಳೆಯುವ ಈ ಗಿಡ ಪೊದರಿನಂತೆ ಕೆಲವೊಮ್ಮೆ ಸಣ್ಣ ಮರಗಳಂತೆ ಬೆಳೆಯುತ್ತದೆ. ನಮ್ಮ ನಡುವೆ ಎರಡು ಜಾತಿಯ ಕರಿಬೇವು ಗಿಡಗಳಿವೆ. ಇವೆರಡರ ಎಲೆಗಳ ಗಾತ್ರದಲ್ಲಿ ವ್ಯತ್ಯಾಸ ಇರುತ್ತದೆ. ಸಣ್ಣ ಎಲೆಗಳ ಗಿಡದ ಸೊಪ್ಪು ಹೆಚ್ಚು ಸುವಾಸನೆಯಿಂದ ಕೂಡಿರುತ್ತವೆ. ಇದೊಂದು ಬಹುವಾರ್ಷಿಕ ಸಸ್ಯ. ಈ ಗಿಡದ ತೊಗಟೆ ಕಪ್ಪು, ಕಂದು ಬಣ್ಣವಿರುತ್ತದೆ. ಎಲೆಗಳು ಪರ್ಯಾಯ ಜೋಡಣೆಯಾಗಿ, ಸಂಯುಕ್ತ ಮಾದರಿಯ 9 ರಿಂದ 25 ರವರೆಗೆ ಕಿರಿಎಲೆಗಳ ಜೋಡಣೆಯಿದ್ದು ಗರಿಯಂತೆ ಸುಂದರ ವಿನ್ಯಾಸದಲ್ಲಿರುತ್ತದೆ. ಎಳೆ ಚಿಗುರುಗಳು ಕೆಂಪು ಕೆಂಪಾಗಿ ಮುದ್ದಾಗಿರುತ್ತವೆ. ಈ ಎಲೆಗಳ ಅಂಚಿನಲ್ಲಿ ರಸಗ್ರಂಥಿಗಳಿದ್ದು ಒಂದು ರೀತಿಯ ತೈಲದಂತಿರುತ್ತದೆ. ಅದಕ್ಕೇ ಎಲೆಗಳು ಸುವಾಸನೆ ಹೊಂದಿರುತ್ತವೆ. ರೆಂಬೆಗಳ ತುದಿಗಳಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಹೂ ಗೊಂಚಲುಗಳು ಕಾಣಿಸುತ್ತವೆ. ಬಿಳೀ ಬಣ್ಣದ ಐದು ದಳವಿರುವ ಪುಟಾಣಿ ಪುಷ್ಪವು ಐದು ಪುಷ್ಪಪತ್ರೆಗಳನ್ನೂ ಹೊಂದಿರುತ್ತವೆ. ಮಧ್ಯೆ ಕೇಸರಗಳಿದ್ದು ಹೂ ಒಣಗಿದ ಬಳಿಕ ಕಾಯಿಗಳಾಗಿ ಕೆಂಪು ಹಣ್ಣು ಪಕ್ವವಾದಾಗ ಕಪ್ಪಾಗಿ ಹೊಳಪಿನಿಂದ ಕೂಡಿದರೂ ಸೇವನೆಗೆ ಯೋಗ್ಯವಲ್ಲ. ಹಸಿಯಾಗಿರುವಾಗಲೇ ಈ ಬೀಜಗಳಿಂದ ಹೊಸಗಿಡವನ್ನು ಪಡೆಯಬಹುದಾದರೂ ಬಾಡಿದ ಅಥವಾ ಒಣಗಿದ ಬಳಿಕ ಗಿಡ ಹುಟ್ಟಲಾರದು. ಬೇರಿನ ಮೂಲಕವೂ ಈ ಸಸ್ಯವು ಸಂತಾನವನ್ನು ಮುಂದುವರಿಸುತ್ತದೆ.
ಜೌಗು ಪ್ರದೇಶದಲ್ಲಿ ಕರಿಬೇವು ಬೆಳೆಯದು. ಚಟ್ಟಿಯಲ್ಲೂ ಈ ಗಿಡ ಬೆಳೆಸ ಬಹುದಾದರೂ ಎಳೆಯ ಗಿಡದ ಎಲೆಗಳನ್ನು ಕೀಳುತ್ತಿದ್ದರೆ ಗಿಡವು ಸಾಯಬಹುದು. ತಮಿಳು ಸಾಹಿತ್ಯದಲ್ಲಿ 1ನೇ ಮತ್ತು 4ನೇ ಶತಮಾನದ ಸಾಹಿತ್ಯದಲ್ಲಿ ಈ ಸಸ್ಯದ ಹೆಸರು ಬಳಕೆ ಮಾಡಲಾಗಿದೆ.16ನೇ ಶತಮಾನದಲ್ಲಿ ತಮಿಳುನಾಡಿನಿಂದ ಮಸಾಲೆ ಪದಾರ್ಥಗಳ ಜೊತೆ ಇಂಗ್ಲೆಂಡ್ ಗೆ ಪರಿಚಯವಾಯಿತು. ತಮಿಳುನಾಡಿನಲ್ಲಿ ತಯಾರಿಸುವ ಬಹುಪಾಲು ಎಲ್ಲಾ ಅಡುಗೆ ಪದಾರ್ಥಗಳಲ್ಲಿ ಕೊತ್ತಂಬರಿ ಸೊಪ್ಪಿನ ಜೊತೆ ಕರಿಬೇವನ್ನು ಬಳಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಮೂರು ಸಾವಿರ ಎಕರೆ ಪ್ರದೇಶದಲ್ಲಿ ಇದೇ ಒಂದು ಕೃಷಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕರಿಬೇವಿನ ಕಾಡು ಆವರಿಸಿದೆಯೆಂದರೆ ಇದು ಬರೀ ಹಿತ್ತಲಗಿಡವಾಗಿ ಉಳಿದಿಲ್ಲವೆನ್ನಬಹುದು. ಕರಿಬೇವು ಕಾಡಿನ ಸಸ್ಯವೂ ಹೌದು ಜೊತೆಗೆ ವಾಣಿಜ್ಯ ಬೆಳೆಯಾಗಿಯೂ ರೈತನ ಜೊತೆಜೊತೆಗಿದೆ ಎನ್ನಬಹುದು.
ಕರಿಬೇವಿನ ಎಲೆಗಳಿಂದ ಆವೀಕರಣದ ಮೂಲಕ ಎಣ್ಣೆಯನ್ನು ಪಡೆದು ಸಾಬೂನುಗಳಿಗೆ ಕೊಡುವ ಸುಗಂಧ ದ್ರವ್ಯ ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಅಧಿಕ ಕ್ಯಾಲ್ಸಿಯಂ, ಕಬ್ಬಿಣದಂಶಗಳನ್ನು ಹೊಂದಿರುವ ಈ ಸಸ್ಯವು ಇಂಗು ಮತ್ತು ತೆಂಗಿನ ಕಾಯಿಗಳ ಜೊತೆ ಸೇರಿ ಚಟ್ನಿಯಾಗುತ್ತದೆ. ಸೂಪ್ ಆಗಿಯೂ ಬಳಸುತ್ತಾರೆ.
ಮುರ್ರಾಯ ಕೊಯೆನಿಗಿ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಕರಿಬೇವು ರುಟೇಸಿಯೇ ಕುಟುಂಬಕ್ಕೆ ಸೇರಿದೆ. ಜರ್ಮನಿಯ ಸಸ್ಯ ವಿಜ್ಞಾನಿಯಾದ ಜೊಹಾನ್ ಗೆರ್ಹಾರ್ಡ್ ಕೋನಿಂಗ್ ನ ಸ್ಮರಣಾರ್ಥ ಈ ಹೆಸರನ್ನಿಡಲಾಗಿದೆ.
ಈ ಸಸ್ಯವು ಭಾರತದಲ್ಲಿ ಒಂದು ಪಾರಂಪರಿಕ ಔಷಧೀಯ ಸಸ್ಯವಾಗಿದೆ. ತಲೆಕೂದಲುದುರುವಿಕೆ, ರಕ್ತದೊತ್ತಡ, ಜೀರ್ಣಾಂಗದ ಸಮಸ್ಯೆಗಳಿಗೆ, ಮಾನಸಿಕ ಒತ್ತಡ, ಆಮಶಂಕೆ, ಕೊಲೆಸ್ಟರಾಲ್, ಕಣ್ಣಿನ ಆರೋಗ್ಯಕ್ಕೆ, ಹೃದ್ರೋಗ, ಒಸಡುಗಳ ಬಲಪಡಿಸುವಿಕೆ, ಬಾಯಿಯ ದುರ್ಗಂಧ ಹೋಗಲಾಡಿಸಲು ಈ ಗಿಡದ ಎಲೆ, ಹೂ, ತೊಗಟೆಗಳನ್ನು ಬಳಸುತ್ತಾರೆ. ಸೌಂದರ್ಯವರ್ಧಕ ವಾಗಿಯೂ ಚರ್ಮದ ತಾಜಾತನ ಹಾಗೂ ಮುಖದ ಮೊಡವೆ ಮಚ್ಚೆಗಳ ನಿವಾರಣೆಗೂ ಬಳಸುವರು. ಗಟ್ಟಿಯಾದ ಈ ಗಿಡದಿಂದ ರೈತರು ವ್ಯವಸಾಯದ ಉಪಕರಣಗಳನ್ನು ತಯಾರಿಸುತ್ತಾರೆ.
ಮಕ್ಕಳೇ, ಈಗಲೂ ನಿಮಗೆ ಮಜ್ಜಿಗೆ, ಸಾರು, ಒಗ್ಗರಣೆಗಳಲ್ಲಿ ಸಿಕ್ಕಿದ ಕರಿಬೇವಿನ ಎಲೆಗಳನ್ನು ಬಿಸಾಡುವಿರಾ? ಇಲ್ಲ ತಾನೇ? ಈ ಗಿಡದ ಸೊಪ್ಪನ್ನು ಒಣಗಿಸಿ ಬಳಸಬಹುದಾದರೂ ಅಷ್ಟೊಂದು ಸುವಾಸನೆ ಇರುವುದಿಲ್ಲ. ಅಂಗಡಿಯಿಂದ ತಂದ ಸೊಪ್ಪಿಗೆ ಕೀಟನಾಶಕ ಸಿಂಪಡಿಸುವ ಸಾಧ್ಯತೆಯೇ ಹೆಚ್ಚು. ರೆಫ್ರಿಜರೇಟರಲ್ಲಿಟ್ಟರೆ ಪೋಷಕಾಂಶಗಳು ಕಳೆದು ಹೋಗುವುವು. ಆದ್ದರಿಂದ ಒಂದು ಪುಟಾಣಿ ಗಿಡ ನೆಟ್ಟು ದಿನನಿತ್ಯ ಬಳಸುವುದು ಜಾಣತನವಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************