ಜಗಲಿ ಕಟ್ಟೆ : ಸಂಚಿಕೆ - 33
Monday, January 8, 2024
Edit
ಜಗಲಿ ಕಟ್ಟೆ : ಸಂಚಿಕೆ - 33
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಸಾಹಿತ್ಯ ಲೋಕದ ಕಣ್ಮಣಿ ಕಡಲತಡಿಯ ಡಾ. ಅಮೃತ ಸೋಮೇಶ್ವರ ನಮ್ಮನ್ನಗಲಿ ವಾರವೇ ಕಳೆಯಲಿಲ್ಲ. ನಂಗಂತೂ ತುಂಬಾ ನೋವಿದೆ. ಕಿರಿಯರನ್ನೂ ಗೌರವಿಸುವ ಸ್ನೇಹಮಯಿ ವ್ಯಕ್ತಿತ್ವದ ನಿಗರ್ವಿ ಮಹಾನುಭಾವರನ್ನು ಕಳೆದುಕೊಂಡ ಭಾವ ನನ್ನನ್ನು ಕಾಡುತ್ತಾ ಇದೆ. ಅದಕ್ಕೆ ಕಾರಣವೂ ಇದೆ. ನಾನು ವೃತ್ತಿ ಜೀವನ ಆರಂಭಿಸಿ ಆಯೋಜಿಸಿದ ಮೊದಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎನ್ನುವುದು ನನ್ನ ಹೆಮ್ಮೆಯ ವಿಷಯವಾಗಿತ್ತು. ಕೇವಲ ಐದು ತಿಂಗಳಲ್ಲಿ 250 ಕ್ಕಿಂತಲೂ ಮಿಕ್ಕಿ ಮಕ್ಕಳನ್ನು ಸೇರಿಸಿ ನಾಲ್ನೂರಕ್ಕಿಂತಲೂ ಮಿಕ್ಕಿ ಕಲಾಕೃತಿಗಳನ್ನು ಅಣಿಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ಅಂತಹ ಒಂದು ಸುಂದರ ಕಾರ್ಯಕ್ರಮ "ಚಿನ್ಮಯ ಚಿತ್ರ ಸಂಭ್ರಮ" ದಲ್ಲಿ ಭಾಗವಹಿಸಿ ನಮಗೆ ಸ್ಪೂರ್ತಿ ನೀಡಿದ ಇವರ ಮಾತುಗಳು ಇನ್ನೂ ಕಿವಿಯಲ್ಲಿ ಹಾಗೆ ಇದೆ. ಕಿರಿಯರಾದ ನಮಗೂ ಪ್ರೇರಣೆ ನೀಡಿ ಮುನ್ನುಗ್ಗುವ ಶಕ್ತಿಗೆ ಇಂಬು ಕೊಟ್ಟವರು ಇವರೇ.. ನನ್ನ ಮದುವೆ ಸಂಭ್ರಮದಲ್ಲೂ ಭಾಗಿಯಾಗಿ ಕವನಗಳ ಸಾಲುಗಳಿಗೆ ಸಾಕ್ಷಿಯಾಗಿ ಮೆರುಗು ತುಂಬಿದವರು ಇವರು. ಕಲಾಕಮ್ಮಟಗಳಿಗೆ ರಾಣಿ ಅಬ್ಬಕ್ಕ ಸಹಿತ ಹಲವಾರು ವಿಚಾರ ಇತಿಹಾಸದ ನೆರವನ್ನು ಸದಾ ಒದಗಿಸುತ್ತಿದ್ದು ಇವರೇ... ಪುಸ್ತಕಗಳಿಗೆ ರೇಖಾಚಿತ್ರ ಬರಿಸಿ ಬೆನ್ನು ತಟ್ಟಿದವರು ಇವರೇ... ಇನ್ನು ಇವರು ನೆನಪು ಮಾತ್ರ....!!
ಮಕ್ಕಳ ಜಗಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಸಾವಿರಾರು ಸಂಖ್ಯೆಯಲ್ಲಿ ಚಿತ್ರಕಲಾ ಕೃತಿಗಳನ್ನು ಕಳುಹಿಸಿಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪ್ರೋತ್ಸಾಹ ನೀಡಿದ ಶಿಕ್ಷಕರಿಗೆ ಮತ್ತು ಪೋಷಕರಿಗೆ ಧನ್ಯವಾದಗಳು. ಜಗಲಿಯ ಅದೆಷ್ಟೊ ಹಿತೈಷಿಗಳು ತಮ್ಮ ಸ್ಟೇಟಸ್ ಹಾಗೂ ಇನ್ನಿತರ ವಾಟ್ಸಾಪ್ ಗ್ರೂಪ್ಗಳಲ್ಲಿ ಮಾಹಿತಿಯನ್ನು ಹಂಚುವ ಮೂಲಕ ಅಮೂಲ್ಯ ಸಹಕಾರವನ್ನು ನೀಡಿದ್ದೀರಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ತಮ್ಮ ಮನೆ ಮಕ್ಕಳ ಜಗಲಿಯನ್ನು ತಾವೆಲ್ಲರೂ ಸೇರಿ ಬೆಳಿಸುತ್ತಿದ್ದೀರಿ. ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ಧನ್ಯ ನಮನಗಳು.
ಕಳೆದ ಸಂಚಿಕೆಯ ಜಗಲಿಕಟ್ಟೆ - 32 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಮಸ್ಕಾರಗಳು ಸರ್.... ಎರಡು ದಿನದ ಹಿಂದೆ ಜಗಲಿಯ ಅಕ್ಕನ ಪತ್ರದ ತೇಜಸ್ವಿ ಮೇಡಂ ತಮ್ಮ ಶಾಲೆಯಲ್ಲಿ ಅಳವಡಿಸಿಕೊಂಡ ತರಗತಿಯಾಚೆಗಿನ ಕಲಿಕೆಯನ್ನು ತನ್ನ ಶಾಲಾ ಮಕ್ಕಳು ಸಂಭ್ರಮಿಸುವುದನ್ನು ಸ್ವರೂಪ ಬಳಗದ ಜತೆ ಹಂಚಿಕೊಂಡಿದ್ದರು. ಓದಿ ತುಂಬಾ ತುಂಬಾ ಖುಷಿಯಾಗಿತ್ತು. ಈಗ ಯಾಕೂಬ್ ಸರ್ ಹೃದಯದ ಮಾತು ಸಂಚಿಕೆಯ ಈ ಬಾರಿಯ ಲೇಖನ ಓದಿ ನಿಮ್ಮಂತಹ ಅತ್ಯುತ್ತಮ ಶಿಕ್ಷಕನನ್ನು ಪಡೆದ ನಡ ಶಾಲೆಯ ವಿದ್ಯಾರ್ಥಿಗಳು ಅದೆಷ್ಟೂ ಭಾಗ್ಯಶಾಲಿಗಳು ಎಂದೆನಿಸಿತು. ವಿಜ್ಞಾನದ ಪ್ರಯೋಗಾಲಯದ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಗಣಿತಕ್ಕೂ ಪ್ರಯೋಗಾಲಯವಿದೆ ಎಂದು ತಿಳಿದದ್ದು ನಿಮ್ಮಿಂದ. ಅದೂ ಸರಕಾರಿ ಶಾಲೆಯಲ್ಲಿ, ಅದಕ್ಕಾಗಿ ನೀವು ಪಟ್ಟ ಶ್ರಮವನ್ನು ಹಿಂದೆ ವಾರ ಪತ್ರಿಕೆಗಳಲ್ಲಿ ಓದಿದ್ದೆ. ನಿಮ್ಮ ಕುರಿತಾದ ಲೇಖನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಹರುಷದಿಂದ ನನ್ನ ಮಕ್ಕಳಿಗೆ ಓದಿ ಹೇಳಿದ್ದೆ. ಶಿಕ್ಷಣ ಮಂತ್ರಿಯಾಗಿದ್ದ ಸುರೇಶ್ ಕುಮಾರ್ ಸರ್ ನಿಮ್ಮ ಶಾಲೆಗೆ ಭೇಟಿ ನೀಡಿದ್ದನ್ನೂ ಓದಿದ್ದೆ. ಮಕ್ಕಳ ಜಗಲಿಯಲ್ಲಿ ನೀವೇ ಲೇಖನ ಬರೆದು ನಮಗೆಲ್ಲಾ ಓದುವ ಖುಷಿಯನ್ನು ನೀಡುತ್ತಿದ್ದೀರಿ. ನಿಮ್ಮ ಭಡ್ತಿ ಹೊಂದಿದ ವೃತ್ತಿಜೀವನವು ಸದಾ ಕ್ರೀಯಾಶೀಲವಾಗಿರಲಿ, ಆರೋಗ್ಯ ಸಮೃದ್ಧಿಯಿಂದಿರಲಿ ಎಂದು ಆಶಿಸುತ್ತೇನೆ.
ಈ ವಾರ ಜಗಲಿಯಲ್ಲಿ ಪ್ರಕಟಗೊಂಡ ಎಲ್ಲಾ ಲೇಖನಗಳು ಉತ್ತಮವಾಗಿದ್ದವು. ಕಂಚುಕುಟುಗ ಹಕ್ಕಿಯ ಪರಿಚಯ ಲೇಖನ ಓದಿ ಖುಷಿಯಾಯ್ತು. ಹೊಸ ಕ್ಯಾಲೆಂಡರ್ ವರುಷ ಸಲುವಾಗಿ ಮಕ್ಕಳು ಬರೆದ ಲೇಖನ ಚೆನ್ನಾಗಿತ್ತು. ಇದನ್ನೆಲ್ಲಾ ಜಗಲಿಯಲ್ಲಿ ಪ್ರಕಟಿಸಿ ನಮಗೆ ಓದುವ ಖುಷಿಯನ್ನು ನೀಡುತ್ತಿರುವ ತಾರಾನಾಥ್ ಕೈರಂಗಳ ಸರ್ ನಿಮ್ಮ ಬಳಗಕ್ಕೆ ನನ್ನ ಅಂತರಾಳದ ಧನ್ಯವಾದಗಳು.
W/o ಶ್ರೀನಿವಾಸ ದೈಪಲ
'ಚೈತನ್ಯ ' ನೆಲ್ಯಡ್ಕ, ಅಂತರ
ನರಿಕೊಂಬು ಅಂಚೆ ಮತ್ತು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲರಿಗೂ ನಮಸ್ಕಾರಗಳು...
ನಮ್ಮೆಲ್ಲರ ಬಾಳಯಾನ ಕೆಲವೊಂದಷ್ಟು ನೆನಪುಗಳ ಹಾಗೂ ಅನುಭವಗಳ ರಾಶಿಯನ್ನು ನಮ್ಮ ಜೋಳಿಗೆಗೆ ತುಂಬಿಸಿಕೊಳ್ಳುತ್ತಾ ಮುಂದೆ-ಮುಂದೆ ಸಾಗುತ್ತಿದೆ. ವರುಷಗಳು ನಿಮಿಷಗಳಂತೆ ತಿರುಗುತ್ತಾ, ದಿನಗಳು ಕ್ಷಣಗಳಂತೆ ಓಡುತ್ತಾ - ಓಡುತ್ತಾ ಗೋಡೆಗೆ ನೇತು ಹಾಕುವ ಕ್ಯಾಲೆಂಡರ್ ಗೆ ವಿದಾಯ ಕೋರುವ ಕಾರ್ಯವನ್ನು ಪ್ರತೀ ಬಾರಿಯೂ ಶರವೇಗದಲ್ಲಿ ಮಾಡುತ್ತಿದೆ. ನಾವೆಲ್ಲಾ ಹಳೆ ವರುಷ ಹೋಗಿ ಹೊಸ ವರುಷ ಬಂದಿದೆ ಎಂಬ ಹುಮ್ಮಸ್ಸಿನಲ್ಲಿ ಕುಣಿದಾಡುವುದೇನೋ ನಿಜ. ಆದರೆ ಹೊಸವರುಷದ ಆಗಮನ ಜೊತೆ ಜೊತೆಗೆ ನಮ್ಮಲ್ಲರ ವಯಸ್ಸಿನ ಏರಿಕೆಯ, ಆಯಸ್ಸಿನ ಇಳಿಕೆಯ ಕಾರ್ಯಗಳು ಇಲ್ಲಿ ಚಾಚೂತಪ್ಪದೆ ನಡೆಯುತ್ತಿರುವುದಂತು ಸುಳ್ಳಲ್ಲ.
ಕಳೆದು ಹೋದ ನಿನ್ನೆಗಳು ನಮಗೆಂದೂ ಸಿಗಲಾರವು. ಮುಂಬರುವ ನಾಳೆಗಳು ಹೇಗಿವೆ? ಎಂಬುವುದ ಕಲ್ಪಿಸುವುದೇ ಅಸಾಧ್ಯ. ಆದ್ದರಿಂದ ವಾಸ್ತವವನ್ನು ಅರಿತು ವರ್ತಮಾನದ ಸ್ಥಿತಿಗತಿ ಏನಿದೆ, ಅವೆಲ್ಲವನ್ನೂ ಸಮಚಿತ್ತದಿಂದ ಅನುಭವಿಸುವ ಮನಸ್ಥಿತಿಯನ್ನು ದೇವರು ನಮಗೆಲ್ಲರಿಗೂ ದಯಪಾಲಿಸಲಿ ಎಂಬ ಕೋರಿಕೆ ನಮ್ಮದಾಗಲಿ.
ಜೀವನ ತುಂಬಾ ಚಿಕ್ಕದು. ಇಚ್ಚಿಸಿದಂತಹ ಸಾಧನೆಗಳೆಡೆಗೆ ಗುರಿತಲುಪಲು ಅವಿರತವಾಗಿ ಹೆಜ್ಜೆ ಇಡುವ ಕಾಯಕವನ್ನು ನಿಸ್ವಾರ್ಥದಿಂದ ಮಾಡುವವರಾಗೋಣ. 2023 ನಮಗೆ ನೀಡಿದ ಸಿಹಿ ನೆನಪುಗಳನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಾ, ಕಹಿಯಿಂದ ಕಲಿತ ಪಾಠಗಳನ್ನು ಬದುಕಿಗೆ ಅಳವಡಿಸುತ್ತಾ ಇದೀಗ ನಾವು ಪಾದಾರ್ಪಣೆಗೈದಿರುವ 2024ರ ಹೊಸ್ತಿಲು ನಮಗೆ ಮತ್ತಷ್ಟೂ ಉತ್ಸಾಹಿಗಳಾಗಿ ಬದುಕನ್ನು ಸವಿಯಲು ಅವಕಾಶ ಒದಗಿಸಲಿ ಎಂಬ ಸದಾಶಯದೊಂದಿಗೆ... ಮಕ್ಕಳಜಗಲಿಯ ನನ್ನೆಲ್ಲಾ ಬಂಧುಗಳಿಗೆ ಹೊಸ ವರುಷದ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಈ ವಾರದ ಮಕ್ಕಳ ಜಗಲಿಯಲ್ಲಿ ಮೂಡಿ ಬಂದ ಹೊಸ ವರುಷವನ್ನು ಹರ್ಷದಿಂದಲೇ ಬರಮಾಡಿಕೊಂಡ ಮಕ್ಕಳ ಕವನಗಳು ಹಾಗೂ ಲೇಖನಗಳು ತುಂಬಾನೇ ಚೆನಾಗಿದ್ದವು. ಆರ್ಟ್ ಗ್ಯಾಲರಿಯಲ್ಲಿ ಮೂಡಿಬಂದ ಚಿತ್ರ ಚಿತ್ತಾರಗಳು ವೈಭವ ಪೂರ್ಣವಾಗಿದ್ದವು. ರೇಖೆಗಳನ್ನು ಗೀಚಿದ ಕಲೆಗಾರ ನಮ್ಮ ಊರಿನ ನೆರೆ ಊರಿನವರಾದರೂ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಮಕ್ಕಳ ಜಗಲಿ ಮರೆಯಲ್ಲಿ ನಿಂತ ಕಲೆಗಾರರಿಗೆ ಬೆಳಕು ಚೆಲ್ಲಿ ಮೆರುಗು ತುಂಬುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದೆ.
ಪ್ರತೀವಾರವೂ ಜಗಲಿ ಕಟ್ಟೆ ಮಾತುಕತೆಗೆ ನಿರಂತರವಾಗಿ ತಮ್ಮ ಅನಿಸಿಕೆಗಳನ್ನು ಬರೆಯುತ್ತಾ, ಎಲ್ಲಾ ಲೇಖಕರಿಗೆ, ಕವಿಗಳಿಗೆ, ಚಿತ್ರಕಲಾವಿದರಿಗೆ ಹೀಗೆ... ಪ್ರತೀಯೋರ್ವರಿಗೂ ಹುರಿದುಂಬಿಸುತ್ತಿರುವ ರಾಮಮೂರ್ತಿ ಸರ್ ರವರ ಬರಹವು ಸೊಗಸಾಗಿ ಬರುತ್ತದೆ. ಬಹುಶ: ಒಂದು ವಾರ ಜಗಲಿಯಲ್ಲಿ ಪ್ರಕಟವಾದ ಯಾವುದೇ ಲೇಖನಗಳನ್ನು ಓದದಿದ್ದರೂ, ರಾಮಮೂರ್ತಿಯವರ ವಾರದ ಮಾತುಕತೆಯ ಸಂಚಿಕೆ ಓದಿದರೆ ಸಾಕು. ಓದದೇ ಮಿಸ್ ಮಾಡಿಕೊಂಡ ಎಲ್ಲಾ ಬರಹಗಳ ಸಾರಾಂಶವನ್ನು ಬಹಳ ಅಚ್ಚುಕಟ್ಟಾಗಿ ವರ್ಣಿಸುತ್ತಿದ್ದಾರೆ. ತಮಗೆ ಧನ್ಯವಾದಗಳು ಸರ್.
ಈ ವಾರದ ಎಲ್ಲಾ ಲೇಖನಗಳು ಸೊಗಸಾಗಿ ಪ್ರಕಟವಾಗಿವೆ. ಯಾಕೂಬ್ ಸರ್ ತಾವು ಶಾಲೆಯಿಂದ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ವರ್ಗಾವಣೆಯಾಗಿರಬಹುದು ಆದರೆ ಮಕ್ಕಳ ಜಗಲಿಯಲ್ಲಿ ಸದಾ ಚೈತನ್ಯದಾಯಕವಾದ ಲೇಖಕರಾಗಿ ಬೆಳಗಿರಿ ಎಂಬ ಆಶಯ ನಮ್ಮದು.
ಈ ವಾರ ನಾನಂತು ಮಕ್ಕಳ ಜಗಲಿಯ ವೇದಿಕೆಗೆ ತುಂಬಾನೇ ಋಣಿಯಾಗಿದ್ದೇನೆ. ಯಾಕೆಂದರೆ, SDM ಕಾಲೇಜಿನಲ್ಲಿ ಕಲಿಯುತ್ತಿರುವ ನನ್ನ ಮಗಳು ಪ್ರಣಮ್ಯ , ಈ ವರುಷ ಮಕ್ಕಳ ಜಗಲಿ ಆಯೋಜಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮಳಾಗಿ "ಕವನಸಿರಿ" ಪ್ರಶಸ್ತಿಗೆ ಅರ್ಹಳಾದ ಸಮಾಚಾರ ತಿಳಿದು, ಅವಳ ಕಾಲೇಜಿನ ಎಲ್ಲಾ ಉಪನ್ಯಾಸಕರು ತುಂಬಾನೇ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕವನ ರಚನೆಯಲ್ಲಿ ಆಸಕ್ತಿ ಹೊಂದಿರುವ ಪ್ರಣಮ್ಯಳಿಗೆ ಮಕ್ಕಳ ಜಗಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದಂತಿದೆ. ಅವಳ ಕಲೆಯನ್ನು ಹುರಿದುಂಬಿಸಿ ಪೋಷಿಸುವ ಉಪನ್ಯಾಸಕರ ವೃಂದ ಇದೀಗ ಅವಳಿಗೆ ದೊರಕಿದೆ. ಮಗಳ ಕನಸಿನ ಹಾದಿಗೆ ಬೆಳಕು ತೋರಿದ "ಮಕ್ಕಳಜಗಲಿ" ಗೆ ಅನಂತ ವಂದನೆಗಳು... ಶುಭಾಶಯಗಳೊಂದಿಗೆ .......
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ...
"ಅತಿಯಾದರೆ ಅಮೃತವೂ ವಿಷ" ಎನ್ನುವ ಗಾದೆ ಮಾತಿನಂತೆ ಸುಂದರ ಕಥೆಯೊಂದರ ಮೂಲಕ ಅತಿ ಶ್ರೀಮಂತಿಕೆಯ ಆಶೆ ಜೀವಕ್ಕೆ ಹೇಗೆ ಅಪಾಯವಾಗಬಲ್ಲದು ಎಂಬುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ಸುಂದರವಾಗಿ ನಿರೂಪಿಸಿದ್ದಾರೆ.
ಸಂಸ್ಕೃತಿ - ವಿಕೃತಿ ಲೇಖನದ ಮೂಲಕ ಸಂಸ್ಕೃತಿ ಮಾನವನ ಉನ್ನತಿಗೆ ಹಾಗೂ ವಿಕೃತಿ ಮಾನವನ ಅವನತಿಗೆ ಹೇಗೆ ಕಾರಣವಾಗಬಲ್ಲದು ಎನ್ನುವುದನ್ನು ಉದಾಹರಣೆಗಳೊಂದಿಗೆ ರಮೇಶ್ ಸರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
ಈ ಸಲದ ವೈಜ್ಞಾನಿಕ ಲೇಖನದಲ್ಲಿ ದಿವಾಕರ ಸರ್ ರವರು ನಕ್ಷತ್ರದ ಹುಟ್ಟು ಹೇಗೆ ಆಗುತ್ತದೆ ಎಂಬುದನ್ನು ಕಥೆಯಾಗಿ ಹೇಳಿದ ರೀತಿ ಬಹಳ ಮನೋಜ್ಞವಾಗಿತ್ತು.
ತಾಮ್ರದ ಪಾತ್ರೆಯ ಶಬ್ಧದ ಕೂಗಿನ ಸುಂದರ ಹಕ್ಕಿಯ ಸೊಬಗಿನ ಪರಿಚಯ - ಧನ್ಯವಾದಗಳು ಅರವಿಂದ ಸರ್.
ವಿಜಯ ಮೇಡಂರವರಿಂದ ಈ ಸಲ ಅತಿ ವಿರಳವಾಗಿ ಕಾಣಸಿಗುವ ಎಕ್ಕ ಗಿಡದ ಪರಿಚಯ ಸೊಗಸಾಗಿತ್ತು.
ಯಾಕೂಬ್ ಸರ್ ಈ ಸಲದ ತಮ್ಮ ಸಂಚಿಕೆಯನ್ನು ವೃತ್ತಿ ಜೀವನದ ಅನುಭವದ ತುಣುಕುಗಳನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾರೆ.
ಸುಜಾತಾ ಮೇಡಂರವರಿಂದ ಸಾವಿತ್ರಿ ಬಾಯಿ ಪುಲೆಯವರ ಕುರಿತಾದ ಲೇಖನ ಚೆನ್ನಾಗಿತ್ತು.
ಮಕ್ಕಳ ಕವನಗಳು ಹಾಗೂ ಕಥೆಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಎಲ್ಲಾ ಮಕ್ಕಳಿಗೆ.
ವಾಣಿಯಕ್ಕನವರ "ಧನಿಯರ ಸತ್ಯನಾರಾಯಣ" ಪುಸ್ತಕದ ಪರಿಚಯ ಚೆನ್ನಾಗಿತ್ತು. ಪುಸ್ತಕದ ಕುರಿತಾಗಿ ಕುತೂಹಲ ಮೂಡಿಸಿತು. ಆರ್ಟ್ ಗ್ಯಾಲರಿಯಲ್ಲಿ ಗೌರವ್ ರವರ ಚಿತ್ರಗಳು ಅದ್ಭುತವಾಗಿವೆ.
ಕಲಿಕೆಯಲ್ಲಿ ಹಿಂದುಳಿದರೂ ಜೀವನದ ಕಲಿಕೆಯಲ್ಲಿ ಯಶಸ್ವಿಯಾಗಿ ಉತ್ತಮ ಶಿಲ್ಪಿಯಾದ ವಿದ್ಯಾರ್ಥಿಯ ಕುರಿತಾದ ಕಮಲಾಕ್ಷ ಸರ್ ರವರ ಅನುಭವದ ಮಾತು ತುಂಬಾ ಇಷ್ಟವಾಯಿತು.
ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆಗೆ ನೂರರ ಸಂಭ್ರಮ ಅಭಿನಂದನೆಗಳು ರಮೇಶ್ ಸರ್ ಗೆ.
ಈ ವಾರದ ಜಗಲಿ ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಗಣೇಶ್ ಚಾಮೆತ್ತಮೂಲೆ, ಕವಿತಾ ಶ್ರೀನಿವಾಸ .... ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************