-->
ಜೀವನ ಸಂಭ್ರಮ : ಸಂಚಿಕೆ - 119

ಜೀವನ ಸಂಭ್ರಮ : ಸಂಚಿಕೆ - 119

ಜೀವನ ಸಂಭ್ರಮ : ಸಂಚಿಕೆ - 119
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 


                      
ಮಕ್ಕಳೇ, ಈ ಕಥೆ ಓದಿ.... ಒಂದು ಇರುವೆ ಮರ ಏರುತ್ತಿತ್ತು. ಆ ಮರ ತುಂಬಾ ದೊಡ್ಡದಾಗಿತ್ತು. ಅಲ್ಲೇ ಇದ್ದ ಮನುಷ್ಯ ಕೇಳಿದ, "ನೀನು ಏಕೆ ಮರ ಎರುತ್ತಿರುವೆ" ಎಂದು. ಇರುವೆ ಹೇಳಿತು, "ನನಗೊಂದು ಇಚ್ಛೆ ಇದೆ, ಈ ಮರದ ಮೇಲೆ ಒಂದು ಸುಂದರ ಹಣ್ಣು ಇದೆ, ಅದರ ಸುವಾಸನೆ ನನ್ನ ಮೂಗಿಗೆ ಬಡಿದಿದೆ, ನನ್ನ ಮನಸ್ಸು ಅದನ್ನು ತಿನ್ನಬೇಕು ಅನಿಸುತ್ತಿದೆ. ಅದಕ್ಕೆ ಏರುತ್ತಿದ್ದೇನೆ" ಎಂದಿತು. ಮನುಷ್ಯ ಹೇಳಿದ, "ನೀನು ಸಣ್ಣ ಇರುವೆ, ನಿನಗೆ ತಿನ್ನೋದಕ್ಕೆ ಏನು ಕೊರತೆ ಇದೆ. ಇಲ್ಲೇ ಕೆಳಗೆ ಸಾಕಷ್ಟು ಹಣ್ಣು ಬಿದ್ದಿದೆ, ಅದನ್ನು ತಿಂದು ಆರಾಮಾಗಿ ಇರಬಹುದುಲ್ಲಾ" ಎಂದನು. ಅದಕ್ಕೆ ಇರುವೆ ಹೇಳಿತು, "ನಾನು ಏರುತ್ತಿಲ್ಲ, ನನ್ನ ಎದೆಯೊಳಗೆ ಇರುವ ಇಚ್ಛೆ ಏರಿಸುತ್ತಿದೆ. ಕೆಳಗೆ ಬಿದ್ದಿರುವ ಹಣ್ಣು ಎಲ್ಲರೂ ತಿನ್ನುತ್ತಾರೆ, ಮೇಲಿರುವ ತಾಜಾ ಹಣ್ಣು ತಿನ್ನಬೇಕಲ್ಲ" ಎಂದಿತು. 

ಇಚ್ಛೆ ಇಲ್ಲದಿದ್ದರೆ ಜೀವನ ನಡೆಯುವುದು ಹೇಗೆ.? ಏನಾದರೂ ಸಾಧನೆ ಮಾಡಬೇಕಾದರೆ ಇಚ್ಛೆ ಬೇಕು. ಇಚ್ಛೆ ಎಂದರೆ ಬಲಾಢ್ಯವಾದ ಪ್ರೀತಿ. ಆ ಇಚ್ಛೆ ಇದ್ದರೆ ಏನಾದರೂ ಮಾಡಿಸುತ್ತದೆ. ಕುಳಿತುಕೊಳ್ಳುವಂತೆ ಮಾಡುತ್ತದೆ. ನಡೆದಾಡುವಂತೆ ಮಾಡುತ್ತದೆ. ಕೆಲಸ ಮಾಡುವಂತೆ ಮಾಡುತ್ತದೆ. ತ್ಯಾಗ ಮಾಡಿಸುತ್ತದೆ. ಮನೆ ಕಟ್ಟಿಸುತ್ತದೆ. ಅದೇ ಇಚ್ಛೆ ಮನೆ ಬಿಡಿಸುತ್ತದೆ. ಅಂತಹ ಬಯಕೆಯೇ ಇಚ್ಛೆ. 

ಬುದ್ಧ ಏಕೆ ಮನೆ ಬಿಟ್ಟ?. ಮಹಾವೀರ ಏಕೆ ಮನೆ ಬಿಟ್ಟನು? ಇಚ್ಛೆ ಆ ರೀತಿ ಮಾಡಿಸುತ್ತದೆ. ನಮಗೆಲ್ಲರಿಗೂ ಚೆನ್ನಾಗಿರಬೇಕೆಂಬ ಇಚ್ಛೆ. ಕನಸು ಬೀಳುತ್ತದೆ, ಆ ಕನಸೇ ಇಚ್ಛೆ. ಆ ಬಯಕೆ ದುಡಿಯಲು ಹೇಳುತ್ತಿದೆ. ಕಷ್ಟಪಡಲು ಹೇಳುತ್ತದೆ. ಎಂತಹ ಕಷ್ಟ ಬಂದರೂ ಎದುರಿಸುವಂತೆ ಹೇಳುತ್ತದೆ. ಅಂತ ಬಯಕೆಯೇ ಇಚ್ಛೆ.

ಶತಮಾನಗಳ ಹಿಂದೆ ಮಿಹಿರಸೇನ್ ಎನ್ನುವ ವ್ಯಕ್ತಿ ಇದ್ದನು. ಈತ ದೊಡ್ಡ ಈಜುಗಾರ ಮತ್ತು ವಕೀಲ. ಬಾಲ್ಯದಲ್ಲಿ ತಾಯಿಯೊಂದಿಗೆ ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದನು. ತಾಯಿ ಬಟ್ಟೆ ತೊಳೆಯುತ್ತಿದ್ದಳು. ಈತ ಇನ್ನು ಚಿಕ್ಕ ಹುಡುಗ. ನಾನು ನೀರಿನಲ್ಲಿ ಈಜಬೇಕು ಎಂದು ತಾಯಿ ಹತ್ತಿರ ಕೇಳಿದ. ತಾಯಿ ಹೇಳಿದಳು, "ಮೊದಲು ಈಜುಕಲಿ, ಈ ಕೆರೆಯಲ್ಲ ದೊಡ್ಡ ಸಾಗರವನ್ನು ಈಜಬಲ್ಲೆ , ಆ ಸಾಮರ್ಥ್ಯ ನಿನಗೆ ಇದೆ, ಎಂದಳು. ನಾವಾದರೆ ಅದು ಎರಡು ಅಡಿ ಆಳವಿದೆ. ಹೋಗಬೇಡ ಬಟ್ಟೆ ಒದ್ದೆಯಾಗುತ್ತದೆ. ಹೋಗಬೇಡ ನೆಗಡಿಯಾಗುತ್ತದೆ. ಹೋಗಬೇಡ ಮುಳುಗಿದರೆ ಕಷ್ಟ. ಹೋಗಬೇಡ ಎನ್ನುತ್ತಿದ್ದೆವು. ಆದರೆ ಮಿಹಿರಾಸೇನನ ತಾಯಿ ಆ ಮಗುವಿನಲ್ಲಿ ಎಂಥ ಭಾವ ತುಂಬಿದಳು. ಕೆರೆ, ಕೊಳ್ಳ, ಹಳ್ಳ, ನದಿ, ಯಾರು ಬೇಕಾದರೂ ಏರುತ್ತಾರೆ. ಕೆಲವೇ ಕೆಲವರು ಸಾಧನೆ ಮಾಡುತ್ತಾರಲ್ಲ ಹಾಗೆ ನೀನು ಸಾಧನೆ ಮಾಡಬೇಕು ಎಂದಳು. ಆಗಿನ್ನು ಈಜು ಕಲಿತಿರಲಿಲ್ಲ. ಆದರೆ ರಾತ್ರಿ ಮಲಗಿದ್ದಾಗ ಒಂದು ಕನಸು ಬೀಳುತ್ತದೆ, ಸಮುದ್ರದಲ್ಲಿ ಈಜಿದಂತೆ. ಆ ಕನಸು ಆತನ ಇಚ್ಛೆಯಾಯಿತು. ಆ ಇಚ್ಛೆ ಆತನನ್ನು ದೊಡ್ಡ ಈಜುಗರನ್ನಾಗಿ ಮಾಡುವಂತೆ ಪ್ರೇರೇಪಿಸಿತು. ಈಜು ಕಲಿತು, ತರಬೇತಿ ಹೊಂದಿ, ಭಾರತದಿಂದ ಶ್ರೀಲಂಕಕ್ಕೆ, ಹಿಂದೂ ಮಹಾಸಾಗರ ಈಜಿದನು. ಸಾಗರ ಎಂದರೆ ಕಿಲೋ ಮೀಟರ್ ಆಳ. ಸುತ್ತಮುತ್ತ ನೀರು. ಭಯಂಕರ ತೆರೆ. ಭಯಾನಕ ಜಲಚರಗಳು. ಇವುಗಳ ಮಧ್ಯೆ ಈಜುತ್ತಿದ್ದನು. ಈ ರೀತಿ ಸಾಧನೆಗೆ ಕಾರಣ ಇಚ್ಛೆ.
    
ಮಕ್ಕಳೇ ಇಚ್ಚೆಯಲ್ಲಿ ಎರಡು ವಿಧ. ಒಂದು ವಿಧದ ಇಚ್ಛೆ ಸ್ವರ್ಗ ನಿರ್ಮಾಣ ಮಾಡಿದರೆ, ಮತ್ತೊಂದು ವಿಧದ ಇಚ್ಛೆ ನರಕ ನಿರ್ಮಾಣ ಮಾಡುತ್ತದೆ. ಹೂವುಗಳ ಕಿತ್ತು ತಿಪ್ಪೆಯಲ್ಲಿ ಹಾಕಿದರೆ ಅದು ವಿನಾಶಕ ಇಚ್ಛೆ. ಆ ಹೂಗಳಲ್ಲಿ ಸುಂದರವಾಗಿರುವುದನ್ನು ಆಯ್ದು ಹೊಂದಿಸಿ ಸುಂದರ ಜೋಡಣೆ ಮಾಡಿದರೆ ಅದು ಸ್ವರ್ಗ. ಮಕ್ಕಳೇ ನಮ್ಮಲ್ಲಿ ಸ್ವರ್ಗ ನಿರ್ಮಾಣ ಮಾಡುವ ಇಚ್ಚೆ ಇರಲಿ, ಅಲ್ಲವೇ ಮಕ್ಕಳೇ
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article