-->
ಜೀವನ ಸಂಭ್ರಮ : ಸಂಚಿಕೆ - 118

ಜೀವನ ಸಂಭ್ರಮ : ಸಂಚಿಕೆ - 118

ಜೀವನ ಸಂಭ್ರಮ : ಸಂಚಿಕೆ - 118
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ

                      
     ಮಕ್ಕಳೇ.... ಈ ಕಥೆ ಓದಿ. ಒಂದು ಹೊಳೆ ಹರಿಯುತ್ತಿತ್ತು. ಹೊಳೆಯ ಒಂದು ಬದಿಯಲ್ಲಿ ಸುಂದರವಾದ ಊರು ಇತ್ತು. ಇನ್ನೊಂದು ಬದಿಯಲ್ಲಿ ದಟ್ಟ ಕಾಡು ಇತ್ತು. ಆ ಕಾಡಿನ ಬದಿಯಲ್ಲಿ ಒಬ್ಬ ಸಂತ ವಾಸವಾಗಿದ್ದನು. ಆತ ಪ್ರತಿದಿನ ಕಾಡಿನಲ್ಲಿ ಓಡಾಡಿಕೊಂಡು ಇರುತ್ತಿದ್ದನು. ಈ ಬದಿಯ ಊರಿನಲ್ಲಿ 70 ವರ್ಷದ ಮುದುಕ ತನ್ನ ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ವಾಸವಿದ್ದನು. ಸುಮಾರು 4 ಎಕರೆ ಜಮೀನು ಇತ್ತು. ಮನೆಯೂ ಇತ್ತು. ಬದುಕಲು ಕೊರತೆಯೇನು ಇರಲಿಲ್ಲ. ಆ ಮುದುಕನಿಗೆ ಒಂದು ಆಸೆ. ನಾನು ಸಾಯುವುದರೊಳಗೆ ಶ್ರೀಮಂತನಾಗಿ ಸಾಯಬೇಕು. ಅದನ್ನು ದುಡಿದು ಗಳಿಸಲು ಸಾಧ್ಯವಿಲ್ಲ ಯಾರಾದರೂ ಮಹಾತ್ಮರು ಇದ್ದರೆ ಅವರ ಬಳಿ ಹೋಗಿ ಅಂತಹ ವಿದ್ಯೆ ಕಲಿತು ಸಂಪಾದಿಸಬೇಕೆಂದು ತೀರ್ಮಾನಿಸಿದನು. ಆಗ ನದಿಯ ಆ ಬದಿಯಲ್ಲಿ ಇದ್ದ ಸಂತನ ಬಳಿಗೆ ಬಂದನು. ಮುಖ ಸಪ್ಪಗೆ ಇತ್ತು. ಇದನ್ನು ನೋಡಿದ ಸಂತ ಕೇಳಿದ, "ಏಕಪ್ಪಾ ಮುಖ ಸೊರಗಿದೆ" ಎಂದು. "ಏನು ಮಾಡಲಿ ಗುರುಗಳೇ, ದೇವರು ನನಗೆ ಏನು ಕೊಟ್ಟಿದ್ದಾನೆ....? ಗುರುಗಳೇ, ನಾಲ್ಕು ಜನರ ಮುಂದೆ ಎದ್ದು ಕಾಣಬೇಕಲ್ಲ" ಎಂದನು. ಆಗ ಗುರುಗಳು ಕೇಳಿದರು, "ಏನು ಕೊರತೆ ಹೇಳು" ಅಂದರು. ಆಗ ಮುದುಕ ಹೇಳಿದ, "ಒಂದು ಸಣ್ಣ ಮನೆ ಇದೆ. ಹೆಂಡ್ತಿ, ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಅವರನ್ನು ಪಡೆದುಕೊಂಡು ಏನು ಮಾಡುವುದು ಗುರುಗಳೇ..? ಅದನ್ನು ಪಡೆದುಕೊಂಡು ಬದುಕುವುದು ಮಹತ್ವವಲ್ಲ. ನಾಲ್ಕು ಜನರ ಮುಂದೆ ಎದ್ದು ಕಾಣಬೇಕಲ್ಲ" ಎಂದನು. ಗುರುಗಳು ಏನು ಬೇಕು ಎಂದರು. "ಸಂಪತ್ತು ಗಳಿಸಲು ಯಾವುದಾದರೂ ವಿದ್ಯೆ ಇದ್ರೆ ಹೇಳಿ" ಎಂದನು. ಅದೇನು ಮಹಾ ಎಂದು ಗುರುಗಳು ಆ ಮುದುಕನನ್ನು ಕರೆದುಕೊಂಡು ಕಾಡಿನ ಮದ್ಯೆ ಹೋದನು. ಹೋಗಿ ಹೋಗಿ ಸ್ವಲ್ಪ ದೂರ ಹೋದ ಮೇಲೆ ಗಿಡಗಳ ಗುಂಪು ಅದರ ಮಧ್ಯದಲ್ಲಿ ಒಂದು ಬಂಡೆ ಇತ್ತು. ಅದನ್ನು ಸರಿಸುವಂತೆ ಸಂತರು ಹೇಳಿದರು. ಮುದುಕ ಆ ಬಂಡೆ ಸರಿಸಿದ. ಅಲ್ಲಿ ಒಂದು ಹಂಡೆ ಅದರಲ್ಲಿ ಚಿನ್ನದ ನಾಣ್ಯಗಳು ತುಂಬಿದ್ದವು. ಇದನ್ನು ನೋಡಿದ ಮುದುಕನಿಗೆ ತುಂಬಾ ಸಂತೋಷವಾಯಿತು. ಇದು ನಿಮ್ಮದಾ ಗುರುಗಳೇ...? ಎಂದನು ಮುದುಕ. ಅದಕ್ಕೆ ಸಂತರು ಹೇಳಿದರು. "ಇಲ್ಲ..... ಎಲ್ಲಾ ನಿನ್ನದೆ ತೆಗೆದುಕೊಂಡು ಹೋಗು. ಆದರೆ ಒಂದು ನಿಬಂಧನೆ ಇದೆ. ಇದರಲ್ಲಿ ನೀನು ಎಷ್ಟು ಹೊರಲು ಸಾಧ್ಯ ಆಗುತ್ತದೆಯೋ, ಅಷ್ಟು ಹೊರು. ಮತ್ತೆ ಒಮ್ಮೆ ಮಾತ್ರ ತೆಗೆದುಕೊಂಡು ಹೋಗಬೇಕು" ಎಂದರು. ಆಗಲಿ ಎಂದು ಮುದುಕ ಮನೆಗೆ ತೆರಳಿದನು. ಮಾರನೆಯ ದಿನ ಒಂದು ಜೋಳದ ಚೀಲದೊಂದಿಗೆ ಬಂದನು. ಸಂತನು ಚಿನ್ನದ ನಾಣ್ಯ ಇರುವ ಜಾಗಕ್ಕೆ ಕರೆದುಕೊಂಡು ಹೋದನು. ಸಂತನು, ಮುದುಕನಿಗೆ ಹೇಳಿದನು. "ನಿನಗೆ ಹೊರಲು ಎಷ್ಟು ಸಾಧ್ಯವೊ ಅಷ್ಟನ್ನು ತುಂಬಿಕೊ" ಎಂದನು. ಮುದುಕ ಚಿನ್ನದ ನಾಣ್ಯಗಳನ್ನು ಚೀಲಕ್ಕೆ ತುಂಬುತ್ತ ಹೇಳಿದ. ಇದ್ಯಾವುದು ಮಹಾ ಗುರುಗಳೇ, ನಾನು ಎಷ್ಟೆಷ್ಟು ಹೊತ್ತಿದ್ದೇನೆ ಎಂದು. ಹಾಕಿದ ಹಾಕಿದ ಎತ್ತಲಾರದಷ್ಟು ತುಂಬಿದ. ವಯಸ್ಸು 70, ದೇಹ ದಣಿದಿದೆ. ಮನಸ್ಸು ತರುಣ ಆಗಿತ್ತು. ಎತ್ತಲು ನೋಡಿದ ಆಗಲಿಲ್ಲ. ಆಗ ಸಂತ ಹೇಳಿದ ಎತ್ತಲು ಸಹಾಯ ಮಾಡಲೇನು ಎಂದರು. ಹೌದು ಗುರುಗಳೇ, ನನ್ನ ಹೆಗಲ ಮೇಲೆ ಹೊರಿಸಿ, ನಾನು ತೆಗೆದುಕೊಂಡು ಹೋಗುತ್ತೇನೆ ಎಂದನು. ಸಂತನು ಎತ್ತಿ ಮುದುಕನ ಹೆಗಲ ಮೇಲೆ ಹೊರಿಸಿದನು. ತೂರಾಡುತ್ತ ತೂರಾಡುತ್ತ ನದಿಯ ಸಮೀಪಕ್ಕೆ ಮುದುಕ ಬಂದನು. ದೋಣಿಯಲ್ಲಿ ಹಾಕಿಕೊಂಡು ಹೋದರೆ, ಯಾರಾದರೂ ಏನೆಂದು ಕೇಳುತ್ತಾರೆ. ಹಾಗಾಗಿ ಹೆಗಲ ಮೇಲೆ ಹೊತ್ತು ನದಿಯಲ್ಲಿ ನಡೆದು ಹೋಗಲು ತೀರ್ಮಾನಿಸಿದ. ಸಂಜೆಯಾಗಿತ್ತು. ತೂರಾಡುತ್ತಾ ನದಿಗೆ ಇಳಿದನು. ಸ್ವಲ್ಪ ದೂರ ಹೋದನು. ಆಗ ಸಂತ ಹೇಳಿದ, ಬಹಳ ಭಾರ ಆದರೆ ಅದನ್ನು ಒಗೆದು ಬಿಡು ಎಂದು. ಕೆಟ್ಟ ಭಾರ ಸ್ವಲ್ಪ ದೂರ ಹೋದನು. ನೀರು ಎದೆಯ ಮಟ್ಟ ಬಂದಿತ್ತು. ಆಗ ಸನ್ಯಾಸಿ ಹೇಳಿದ ಭಾರ ಆದರೆ ಸ್ವಲ್ಪ ಚೆಲ್ಲು. ಮೊದಲು ನೀನು ಉಳಿ ಎಂದನು. ಆಗ ಮುದುಕ ಹೇಳಿದ, ಸಿಕ್ಕಿದ್ದು ಸಿಕ್ಕಿದೆ, ಇಂತಹದು ಇನ್ಯಾವಾಗ ಸಿಗುತ್ತೋ, ಇದೊಂದು ಸುವರ್ಣ ಅವಕಾಶ ಎಂದು ಹೇಳಿ ಮುಂದೆ ನಡೆದ. ದೇಹ ಸಾಕು ಅನ್ನುತ್ತಿತ್ತು, ಮನಸ್ಸು ಹೊರು ಅನ್ನುತ್ತಿತ್ತು. ಸ್ವಲ್ಪ ದೂರ ನಡೆದ ಆಗ ಶರೀರ ಹೇಳಿತು. ಇನ್ನು ನನ್ನ ಕೈಯಲ್ಲಿ ಆಗುವುದಿಲ್ಲ. ನಾನು ಮುಳುಗಿ ಹೋಗುತ್ತೇನೆ. ನಿನ್ನದನ್ನು ನೀನು ನೋಡಿಕೊ ಎಂದಿತು. ಆಗ ಈ ಮುದುಕ ಹೇಳಿದ ಇಷ್ಟು ವರ್ಷ ಉಣಿಸಿದ್ದೇನೆ, ತಿನ್ನಿಸಿದ್ದೇನೆ, ಮುಳುಗುತ್ತೀನಿ ಅಂತಿಯಲ್ಲ, ಸುಮ್ಮನೆ ನಡೆ ಎಂದು ನಡೆದನು. ಮುಂದೆ ಹೋಗುತ್ತಿದ್ದಂತೆ ತತ್ತರಿಸಿ ನೀರಿನಲ್ಲಿ ಬಿದ್ದನು. ಬಿದ್ದರೂ ನಾಣ್ಯದ ಮೂಟೆ ಬಿಡಲಿಲ್ಲ. ಆಗ ಸಂತ ಹೇಳಿದ. ಬಿಡು ಅದನ್ನ ಅಂದ. ಮುದುಕ ಹೇಳಿದ, ನಾ ಹೋದರೂ ಚಿಂತೆ ಇಲ್ಲ ನಾನು ಅದನ್ನು ಬಿಡುವುದಿಲ್ಲ ಎಂದು. ಹಣ ಕೆಟ್ಟದ್ದಲ್ಲ ಆದರೆ ಅತಿಯಾಗಿ ಹೊತ್ತರೆ ಕೆಟ್ಟದ್ದು. ಹೊರಬಾರದಂತಲ್ಲ. ಎಷ್ಟು ಹೊರಬೇಕೋ ಅಷ್ಟು ಹೊರಬೇಕು. ಬದುಕಿಗೆ ಬಹಳ ಬೆಲೆ ವಿನಹ, ಸಂಗ್ರಹಿಸಿದ ವಸ್ತುಗಳಿಗೆ ಅಲ್ಲ. ಎಷ್ಟು ಸಂಪತ್ತುಗಳನ್ನು ಗಳಿಸುತ್ತೇವೆ ಅದು ಮುಖ್ಯವಲ್ಲ, ಬದುಕು ಮಹತ್ವದ್ದು. ಜೀವವೇ ಹೋಗುವಾಗಲೂ ಬಿಡಲಿಲ್ಲ ಎಂದರೆ ಎಂತಹ ಅಜ್ಞಾನ. ಬದುಕು ಅಲಂಕರಿಸುವಂತಿದ್ದರೆ ಅದು ಸಂಪತ್ತು. ಇಲ್ಲದಿದ್ದರೆ ಅದು ಸಂಪತ್ತು ಅಲ್ಲ. ಸಂಪತ್ತನ್ನು ಗಳಿಸಬೇಕು. ಅದು ಭಾರ ಆಗಬಾರದು. ಮನುಷ್ಯನಿಗೆ ಅತಿ ಆಸೆ, ದುರಾಸೆ ಇರಬಾರದು. ಮುದುಕ ಸತ್ತ. ನಾಣ್ಯದ ಚೀಲ ಪುನಃ ಮೊದಲಿದ್ದ ಸ್ಥಳಕ್ಕೆ ಹೋಗಿತ್ತು. ಸಂತ ಹೇಳಿದ, ನೀನು ಅಲ್ಲೇ ಇರು, ಇಂತಹವರು ಬರುತ್ತಾರೆ. ನಾನು ಮಾರ್ಗದರ್ಶನ ಮಾಡುತ್ತಲೇ ಇರುತ್ತೇನೆ.
        
ಮಕ್ಕಳೇ ಈ ಕಥೆಯ ಉದ್ದೇಶ ಇಷ್ಟೇ. ಯಾವುದೂ ಅತಿ ಆಗಬಾರದು. ಕೆಲಸವೇ ಇರಲಿ, ಕಲಿಕೆ ಇರಲಿ, ನಿದ್ರೆ ಇರಲಿ, ಊಟವೇ ಇರಲಿ, ಯಾವುದೂ ಅತಿ ಆಗಬಾರದು. ಪ್ರತಿಯೊಂದು ಮಿತಿಯನ್ನು ಪಾಲಿಸುವಂತಿದ್ದರೆ ಜೀವನ ಸಂಭ್ರಮವಾಗುತ್ತಿದೆ. ಏಕೆಂದರೆ ದೇಹದ ಸಾಮರ್ಥ್ಯಕ್ಕೆ ಮಿತಿ ಇದೆ. ಬುದ್ಧಿಗೆ ಮಿತಿ ಇದೆ. ಜ್ಞಾನಕ್ಕೆ ಮಿತಿ ಇದೆ. ಕಲಿಕೆಗೆ ಮಿತಿ ಇದೆ. ಆ ಮಿತಿ ಅರಿತು ಮಿತಮಿತವಾಗಿ ಬದುಕಬೇಕು. ದೇಹದ ಸಾಮರ್ಥ್ಯಕಿಂತ ಹೆಚ್ಚು ಊಟ ಮಾಡಿದರೆ ಸಂತೋಷ ಕೊಡುವುದಿಲ್ಲ. ಪ್ರತಿಯಾಗಿ ಹೆಚ್ಚು ಊಟ ಮಾಡಿದರೆ ಅಜೀರ್ಣವಾಗಿ ಅನಾರೋಗ್ಯವಾಗುತ್ತದೆ. ಗಳಿಕೆ ಮೀರಿ ಖರ್ಚು ಮಾಡಿದರೆ ಆಪತ್ತು ತಂದುಕೊಳ್ಳುತ್ತೇವೆ. ಆದ್ದರಿಂದ ಯಾವುದೂ ಅತಿಯಾಗಬಾರದು. ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************




Ads on article

Advertise in articles 1

advertising articles 2

Advertise under the article