-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 7

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 7

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 7
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


                 
ಪ್ರೀತಿಯ ಮಕ್ಕಳೇ.... ಸುಮ್ಮನೆ ಕುಳಿತಿದ್ದವನನ್ನು ಪ್ರವಾಸ ಹೊರಟಿದ್ದೀರಿ ಎಂದು ಕಳೆದ ಸಂಚಿಕೆಯಲ್ಲಿ ಓದಿ ಗಲಿಬಿಲಿಗೊಂಡಿರಬಹುದು. ನೀವು ರೈಲಿನಲ್ಲಿ ಕುಳಿತಿದ್ದೀರಿ ಎಂದು ಇಟ್ಟುಕೊಳ್ಳಿ. ರೈಲು ನಿಧಾನವಾಗಿ ಹೊರಡುತ್ತದೆ. ಪ್ಲಾಟ್ ಫಾರಂನಲ್ಲಿ ನಿಂತಿರುವ ನಿಮ್ಮ ಗೆಳೆಯನಿಗೆ ನೀವು ಚಲಿಸುತ್ತಿರುವಂತೆ ಕಂಡರೆ ನಿಮಗೆ ಪ್ಲಾಟ್ ಫಾರಂ ಚಲಿಸುವಂತೆ ಅನ್ನಿಸುತ್ತದೆ. ಹಾಗಾದರೆ ಇಲ್ಲಿ ಚಲಿಸುತ್ತಿರುವುದು ಯಾರು? ಪ್ಲಾಟ್ ಫಾರಂನಲ್ಲಿರುವವರಿಗೆ ರೈಲು ರೈಲಿನಲ್ಲಿರುವವರಿಗೆ ಪ್ಲಾಟ್ ಫಾರಂ. ಹಾಗಾದರೆ ಚಲನೆ ಸಾಪೇಕ್ಷವಾದುದು ಎಂದಾಯಿತು. ಈಗ ಇನ್ನೊಂದು ಉದಾಹರಣೆ ನೋಡೋಣ. ನೀವು ಮತ್ತು ನಿಮ್ಮ ಮಿತ್ರ ಇಬ್ಬರೂ ಸೇರಿ ನಿಮ್ಮ ಶಿಕ್ಷಕರ ಬಳಿ ಅನುಮತಿ ಕೇಳಿ ಮನೆಗೆ ಹೊರಡುತ್ತೀರಿ. ಬಸ್ಸಿನಲ್ಲಿ ಇಬ್ಬರೂ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುತ್ತೀರಿ. ಬಸ್ಸು ಹೊರಡುತ್ತದೆ. ಸ್ವಲ್ಪ ಹೊತ್ತಿನ ನಂತರ ನಿಮ್ಮ ಮಾಸ್ಟ್ರು ನಿಮಗೆ ಫೋನ್ ಮಾಡಿ ನೀವು ಎಲ್ಲಿದ್ದೀರಿ ಎಂದು ಕೇಳುತ್ತಾರೆ. ಲಾಲ್ ಬಾಗ್ ಸರ್ ಎನ್ನುತ್ತೀರಿ. ಸುರೇಶ ಎಲ್ಲಿ ಕೇಳುತ್ತಾರೆ. ನನ್ನ ಬಳಿಯೇ ಇದ್ದಾನೆ ಎನ್ನುತ್ತೀರಿ. ಈಗ ನೋಡಿ ನಿಮ್ಮ ಮಾಸ್ಟ್ರ ಪ್ರಕಾರ ನೀವು ನಾಲ್ಕು ಕಿಮೀ ದೂರ ಚಲಿಸಿದ್ದೀರಿ ಆದರೆ ಸುರೇಶ ನಿಮ್ಮ ಬಳಿಯೇ ಇದ್ದಾನೆ. ಅಂದರೆ ಚಲನೆ ಎನ್ನುವುದು ಸಾಪೇಕ್ಷ ಎಂದಾಯ್ತಲ್ಲ. ಚಲನೆಯನ್ನು ನಾವು ಯಾವುದೋ ಒಂದು ಉಲ್ಲೇಖ ಬಿಂದುವಿಗೆ (point of reference) ಸಂಬಂಧಿಸಿ ಹೇಳುತ್ತೇವೆ. ಇದನ್ನೇ ಅಲ್ಬರ್ಟ್ ಐನ್‍ಸ್ಟೈನ್ ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (theory of relativity) ಹೇಳಿದ್ದು. ಐನ್‍ಸ್ಟೈನ್ ರ ಪ್ರಕಾರ ನಮಗೆ ಎರಡು ಚೌಕಟ್ಟುಗಳಿವೆ (frames). ಒಂದು ಅವಕಾಶ (space) ಮತ್ತು ಇನ್ನೊಂದು ಸಮಯ (time). ಚಲನೆಯನ್ನು ಹೇಳುವಾಗ ನಾವು ಸಮಯ ಅಥವಾ ಆಧಾರ ಬಿಂದು (space) ಎರಡರಲ್ಲಿ ಯಾವುದಾದರೂ ಒಂದಕ್ಕೆ ಸಂಬಂದಿಸಿದಂತೆ ಹೇಳಬೇಕಾಗುತ್ತದೆ.

ಇನ್ನೊಂದು ಉದಾಹರಣೆ ನೋಡೋಣ. ನೀರಿನ ಕುದಿಯುವ ಬಿಂದು ಎಷ್ಟು ಎಂದು ಕೇಳಿದರೆ ನೀವು ಅದನ್ನು 100°C (212°F) ಎನ್ನುತ್ತೀರಿ. ನಾನು ಅದು 68°C ಎಂದರೆ ನನ್ನ ಸ್ನೇಹಿತರೊಬ್ಬರು 122°C ಎನ್ನುತ್ತಾರೆ. ಈ 3 ಉತ್ತರಗಳೂ ಸರಿ. ನೀವು ಹೇಳಿರುವುದು ಸಮುದ್ರ ತೀರದಲ್ಲಿ ಶುದ್ಧ ನೀರಿನದ್ದು, ನಾನು ಹೇಳಿದ್ದು ಎವರೆಸ್ಟ್ ನ ತುದಿಯಲ್ಲಿ ಮತ್ತು ನನ್ನ ಸ್ನೇಹಿತರು ಹೇಳಿದ್ದು ವೈಟ್ ಹಾಕಿದ ಕುಕ್ಕರ್ ನಲ್ಲಿ. ಅಂದರೆ ಅದಕ್ಕೂ ಒಂದು point of reference ಇದೆ ಅದ್ದರಿಂದ ಅದೂ ಸಾಪೇಕ್ಷವೇ ಎಂದಾಯಿತಲ್ಲ.

ಹಾಗಾದರೆ ಈ ಸಾಪೇಕ್ಷ ಸಿದ್ಧಾಂತ ಕೇವಲ ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವೇ ಅಲ್ಲ ಬೇರೆ ಕಡೆ ಕೂಡಾ ವಿಸ್ತರಿಸಬಹುದೇ ಎಂಬ ಅನುಮಾನ ಮೂಡಿದೆಯೇ? ಇದನ್ನು ಬೇರೆಲ್ಲಿ ವಿಸ್ತರಿಸಬಹುದು ನೋಡೋಣ.

ನಿಮಗೊಂದು ಪ್ರಶ್ನೆ. ನಿಮ್ಮ ವಯಸ್ಸೆಷ್ಟು? ನಿಮ್ಮ ಹುಟ್ಟಿದ ದಿನಾಂಕವನ್ನು ಆಧರಿಸಿ ಹೇಳಿದರೆ ಅದು 15 ವರ್ಷಗಳು. ನಿಮ್ಮ ನರಕೋಶಗಳು ಮತ್ತು ಅಸ್ಥಿ ಸ್ನಾಯುಗಳಿಗೆ ಸಂಬಂಧಿದಂತೆ ನಿಮ್ಮ ವಯಸ್ಸು ಸರಿ ಸುಮಾರು ಅಷ್ಟೇ. ನೀವು ಪ್ರತಿ ದಿನ ಹತ್ತಿರ ಹತ್ತಿರ 5 ಬಿಲಿಯನ್ ಚರ್ಮದ ಕೋಶಗಳನ್ನು ಕಳೆದುಕೊಳ್ಳುತ್ತೀರಿ. ಆದರೆ ಅದಕ್ಕೆ ಸರಿಯಾಗಿ ಹೊಸ ಕೋಶಗಳು ಹುಟ್ಟಿಕೊಳ್ಳುತ್ತವೆ. ಅಂದರೆ ಸರಿಸುಮಾರು 27 ದಿನಗಳಲ್ಲಿ ಹೊಸ ಚರ್ಮ ರೂಪುಗೊಳ್ಳುತ್ತದೆ. ಅಂದರೆ ಚರ್ಮದ ಪ್ರಕಾರ ನಿಮ್ಮ ಆಯುಷ್ಯದ ಪ್ರಕಾರ ನಿಮ್ಮ ವಯಸ್ಸು 27 ದಿನಗಳು. ನಿಮ್ಮ ಕೆಂಪು ರಕ್ತ ಕಣಗಳು 4 ರಿಂದ 6 ವಾರಗಳಲ್ಲಿ ಸಂಪೂರ್ಣವಾಗಿ ಹೊಸದಾಗುತ್ತದೆ. ಆದ್ದರಿಂದ ನಿಮ್ಮ ವಯಸ್ಸು 6 ವಾರಗಳು. ಅದೇ ನಿಮ್ಮ ಬಿಳಿರಕ್ತ ಕಣಗಳಾದರೆ 5 ರಿಂದ 25 ದಿಗಳ ಆಯಸ್ಸಿನವು. ಅಂದರೆ ನಿಮ್ಮ ವಯಸ್ಸು ಎಷ್ಟಾಯಿತು? ಇದೂ ಕೂಡಾ ಸಾಪೇಕ್ಷವಲ್ಲವೇ?
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article