-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 40

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 40

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 40
ಲೇಖಕರು : ರವೀಂದ್ರ ಆರ್ ಡಿ
ಭಾಷಾ ಶಿಕ್ಷಕ 
ಸರ್ಕಾರಿ ಪ್ರೌಢಶಾಲೆ ಲೋಕನಾಥಪುರ 
ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
Mob : +91 9242147403

             
ಸಾಮಾನ್ಯವಾಗಿ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬುದು ಬಹು ಜನಪ್ರಿಯವಾದ ಮಾತು. ಅದರಷ್ಟೇ ಮುಖ್ಯವಾದದ್ದು ಮನೆಯಿಂದ ಹೊರಬಂದು ಮೊದಲ ಬಾರಿಗೆ ಪ್ರವೇಶಿಸುವ ಇನ್ನೊಂದು ಪ್ರಪಂಚವೇ ನಮ್ಮ ಶಾಲೆಗಳು. ಶಾಲೆಗೆ ಬಂದ ನಂತರ ಮಗುವಿನ ಪ್ರಪಂಚವೆಲ್ಲಾ ಶಾಲೆಯೇ ಆಗಿ ಹೋಗುತ್ತದೆ. ತಾಯಿಂದ ಮಗು ತನ್ನ ಮೊದಲ ಶಾಲಾ ಗುರುವಿನ ಕಡೆಗೆ ವಾಲತೊಡಗುತ್ತದೆ. ಅದರ ಮುಂದಿನ ಪ್ರಪಂಚವೆಲ್ಲ ಶಾಲೆಯಲ್ಲಿನ ಗುರುವೇ ಆಕ್ರಮಿಸಿಬಿಡುತ್ತಾರೆ. ತನ್ನ ಗುರು ಏನೇ ಹೇಳಿದರೂ, ಏನೇ ಮಾಡಿದರೂ ಅದೇ ಸತ್ಯ. ಅದೇ ನಿತ್ಯ. ಗುರು ಹೇಳಿದ್ದನ್ನು ಮಗು ಎಂದೂ ಸುತಾರಂ ಬದಲಾಯಿಸಿಕೊಳ್ಳಲು ಒಪ್ಪುವುದಿಲ್ಲ. ಸ್ವತಃ ತನ್ನ ತಂದೆ ತಾಯಿ ಹೇಳಿದರೂ ಇಲ್ಲ ನನ್ನ ಗುರುಗಳು ಹೇಳಿದ್ದಾರೆ ಎಂದು ಅದಕ್ಕೆ ಅಂಟಿಕೊಂಡುಬಿಡುತ್ತದೆ. ಇದಕ್ಕೆ ಇನ್ನೊಂದು ಸೇರ್ಪಡೆಯಾಗುವಂತಹ ಘಟನೆ ಒಮ್ಮೆ ನಾನೊಂದು ಶಾಲೆಗೆ ಭೇಟಿ ನೀಡಿದಾಗ ಪ್ರತ್ಯಕ್ಷ ಅನುಭವಕ್ಕೆ ಬಂತು.

ಒಮ್ಮೆ ಒಂದು ಶಾಲೆಗೆ ಸಹಜವಾಗಿ ಭೇಟಿಗಾಗಿ ಹೋಗಿದ್ದೆ. ಯಾವುದೇ ಶಾಲೆಗೆ ಹೋದರೂ ನಾನು ಮೊದಲ ಪ್ರತ್ಯಕ್ಷ ಭೇಟಿ ನಲಿಕಲಿ ಕೊಠಡಿಗೆ. ಇದು ನಾನು ಬೆಳೆಸಿಕೊಂಡು ಬಂದ ರೂಢಿ. ಹಾಗೆ ಆ ಶಾಲೆಗೆ ಹೋದವನೇ ಮೊದಲು ನಲಿಕಲಿ ಕೊಠಡಿಗೆ ಪ್ರವೇಶಿಸಿದೆ. ಸದ್ಯ ತರಗತಿ ಕೊಠಡಿಯಲ್ಲಿ ಯಾವ ಶಿಕ್ಷಕರೂ ಇರಲಿಲ್ಲ. ಇರಲಿ ಎಂದುಕೊಂಡು ಕೊಠಡಿಯಲ್ಲಿರಬೇಕಾದ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಾ ಬಂದೆ. ನಂತರ ಮಕ್ಕಳ ಕಲಿಕೆಯನ್ನು ಗಮನಿಸುವ ಎಂಬುದು ನನ್ನ ಉದ್ದೇಶವಾಗಿತ್ತು. ಹಾಗೇ ಗಮನಿಸತ್ತಾ ಬಂದಾಗ ನಲಿಕಲಿ ತರಗತಿಗಳ ಹೃದಯ ಭಾಗವಾದ ಪ್ರಗತಿ ನೋಟವನ್ನು ಗಮನಿಸಿದೆ. ಈ ದಿನಾಂಕಕ್ಕೆ ಮಕ್ಕಳಲ್ಲಿ ಆಗಬೇಕಾದ ಕಲಿಕೆಗಿಂತ ಸುಮಾರು ಒಂದು ತಿಂಗಳ ಕಲಿಕೆ ಹಿಂದೆ ಇತ್ತು. ನನಗೆ ಆಶ್ಚರ್ಯವಾಯ್ತು. ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೋ? ಅಥವಾ ಗುರುತೇ ಹಾಕಿಲ್ಲವೋ? ಎಂದು. ಸಹಜವಾಗಿ ಎಲ್ಲ ಸಂಪೂರ್ಣವಾಗಿ ಪರಿಶೀಲಿಸಿದಾಗ ಹೆಚ್ಚಿನೆಲ್ಲ ಮಕ್ಕಳೂ ನಿರೀಕ್ಷಿತ ಮೆಟ್ಟಿಲನ್ನು ತಲುಪಿರುವುದು ಕಂಡು ಬಂದದ್ದರಿಂದ ಇದು ಶಿಕ್ಷಕರ ಕಡೆಯಿಂದ ಆದ ತಪ್ಪೆಂದು ಮನವರಿಕೆ ಆಯಿತು. ಹಾಗೇ ಉಳಿದೆಲ್ಲ ದಾಖಲೆಗಳನ್ನು ಪರಿಶೀಲಿಸಿ ಮಕ್ಕಳ ಕಲಿಕೆಯನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಮಕ್ಕಳ ಕೈನಲ್ಲಿದ್ದ ಕಲಿಕಾ ಸಾಮಗ್ರಿಗಳಿಗೂ ಪ್ರಗತಿ ನೋಟದಲ್ಲಿನ ಗುರುತುಗಳಿಗೂ ಹೊಂದಾಣಿಕೆಯೇ ಆಗದಿರುವುದನ್ನು ಗಮನಿಸಿದೆ. ಅಷ್ಟು ಹೊತ್ತಿಗೆ ತರಗತಿ ಶಿಕ್ಷಕರೂ, ಶಾಲೆಯ ಮುಖ್ಯ ಶಿಕ್ಷಕರೂ ತರಗತಿ ಕೊಠಡಿ ಪ್ರವೇಶಿಸಿದರು. ಅವರು ಬಂದ ತಕ್ಷಣ ಅವರ ಹತ್ತಿರ ಮಕ್ಕಳ ಕಲಿಕೆ, ಕಲಿಕಾ ಸಾಮಗ್ರಿ ಬಳಕೆಗಳ ಬಗ್ಗೆ ಮಾತನಾಡುತ್ತಾ ಕೆಲವು ಹೊತ್ತು ಕಳೆದೆ. ಹಾಗೇ ಮಾತನಾಡುತ್ತಾ ತರಗತಿ ಶಿಕ್ಷಕಿಯವರ ಹತ್ತಿರ ಮೇಡಂ ತರಗತಿ ಚೆನ್ನಾಗಿ ಸಿದ್ಧಗೊಳಿಸಿದ್ದೀರ, ಮಕ್ಕಳ ಕಲಿಕೆಯೂ ತೃಪ್ತಿಕರವಾಗಿದೆ. ಆದರೆ ನಲಿಕಲಿಯ ಅತಿಮುಖ್ಯ ದಾಖಲೆಯೂ, ಮಕ್ಕಳ ಸ್ವಾತಂತ್ರ್ಯ, ಸ್ವಕಲಿಕೆ, ಸ್ವವೇಗದ ಕಲಿಕೆಗೆ ಪ್ರತ್ಯಕ್ಷ ಸಾಕ್ಷಿಯಾದ ಪ್ರಗತಿ ನೋಟ ಯಾಕೆ ಇಂದಿನವರೆಗೆ ಗುರುತು ಮಾಡಿಲ್ಲ? ಇದೊಂದು ಕೊರತೆ ಏಕೆ? ಎಂದು ಕೇಳುತ್ತಾ ಗೋಡೆ ಮೇಲೆ ನೇತು ಹಾಕಿದ್ದ ನಲಿಕಲಿ ಪ್ರಗತಿ ನೋಟವನ್ನು ತೆಗೆದು ಕೊಂಡು ನೋಡಿ ಯಾವಾಗ ಗುರುತು ಹಾಕಿದ್ದೀರಿ? ಎಂದು ಅವರೆದುರು ಹಿಡಿದು ತೋರಿಸಲು ಸಿದ್ಧನಾದವನು ಅವಕ್ಕಾದೆ. ಏಕೆಂದರೆ ನಾನು ಬಂದಾಗ ಗುರುತು ಹಾಕಿರದಿದ್ದ ಪ್ರಗತಿನೋಟ ಈಗ ಅಪ್ ಟು ಡೇಟ್ ಗುರುತು ಹಾಕಲ್ಪಟ್ಟಿತ್ತು. ನನಗೆ ಆಶ್ಚರ್ಯದ ಮೇಲೆ ಆಶ್ಚರ್ಯ. ಈಗ ನೋಡಿದ್ದೇನೆ. ಒಂದು ತಿಂಗಳ ಗುರುತುಗಳು ಬಾಕಿ ಇದ್ದವು. ಈಗ ಇದು ಹೇಗಾಯ್ತು? ಎಂದು. ಶಿಕ್ಷಕರಿಬ್ಬರಿಗೂ ಹೇಳಿದಾಗ ಅವರುಗಳು ಸರ್ ಪೂರ್ಣ ಗುರುತು ಹಾಕಿದ್ದೇವಲ್ಲಾ ಎಂಬ ರಾಗ ತೆಗೆದರು. ನಾನು ಬಂದಾಗಲೇ ಅದರ ಫೋಟೋ ತೆಗೆದಿದ್ದೆ. ಅದನ್ನು ತೋರಿಸಿದಾಗ ಅವರಿಗೂ ಆಶ್ಚರ್ಯ. ಯಾರಿದನ್ನು ಮಾಡಿದ್ದು ಎಂದು. ಕೊನೆಗೆ ನಮ್ಮದೇ ಆದ ಉಪಾಯಗಳನ್ನು ಹುಡುಕಿ “ಇಷ್ಟು ಬೇಗ ಗುರುತುಗಳನ್ನು ಹಾಕಿದವರಿಗೆ ಒಂದು ಬಹುಮಾನ ನೀಡಬೇಕು ಮೇಡಂ, ಅಂಗಡಿಯಿಂದ ಬಹುಮಾನವಾಗಿ ಒಂದು ಜಾಮಿಟ್ರಿ ಬಾಕ್ಸ್ ತರಿಸಲು ಹಣ ಕೊಟ್ಟು, ಯಾರಿದನ್ನು ಮಾಡಿದ್ದು ನಿಂತುಕೊಳ್ಳಿ, ಅವರಿಗೊಂದು ಬಹುಮಾನ ನೀಡೋಣ” ಎಂದಾಗ ಒಬ್ಬ ಚೂಟಿ ಹುಡುಗಿ ಎದ್ದು ನಿಂತಳು. 

ನೋಡಲು ತುಂಬಾ ಚೂಟಿ ಆಗಿದ್ದಳು, ನಂತರ ಶಿಕ್ಷಕರಿಂದ ತಿಳಿದು ಬಂದಂತೆ ತರಗತಿಗೇ ಓದುವರದರಲ್ಲಿ ಮುಂದೆ ಇದ್ದ ಪುಟ್ಟಿ ಅವಳು. ಎಲ್ಲರೆದುರು ಘೋಷಿಸಿದಂತೆ ಬಹುಮಾನ ನೀಡಿ ಕಛೇರಿಗೆ ಕರೆಸಿ ನಿಧಾನಕ್ಕೆ ವಿಚಾರಿಸಿದಾಗ ಅವಳು ನೀಡಿದ ಉತ್ತರ ನಮ್ಮೆಲ್ಲರ ಕಣ್ಣುಗಳಲ್ಲಿ ಕಣ್ಣೀರು ತರಿಸಿತ್ತು. “ಸರ್ ತಾವು ಈ ಹಿಂದೆ ಶಾಲೆಗೆ ಬಂದಾಗಲೂ ಇವನ್ನೆಲ್ಲ ಪರಿಶೀಲಿಸಿದ್ದಿರಿ. ಜೊತೆಗೆ ಕೆಲವೊಂದು ಎಚ್ಚರಿಕೆಗಳನ್ನು, ಕೆಲವೊಂದಕ್ಕೆ ನಮ್ಮ ಮಿಸ್ ಅವರಿಗೆ ಅಭಿನಂದಿಸಿದ್ದನ್ನು ನೋಡಿದ್ದ ನೆನಪು ತಾವು ಪ್ರಗತಿ ನೋಟ ನೋಡುತ್ತಿದ್ದಾಗ ಬಂತು. ನಾವುಗಳು ಗುರುತು ಹಾಕದಿದ್ದದ್ದು ಸಹ ನೆನಪಾಯಿತು. ತಾವು ಆ ಕಡೆ ಗೋಡೆ ಮೇಲಿನ ದಾಖಲೆ ಗಮನಿಸುತ್ತಿದ್ದಾಗ, ಹಾಗೇ ನಮ್ಮ ಗುರುಗಳ ಹತ್ತಿರ ಮಾತನಾಡುತ್ತಿದ್ದಾಗ ನಾನೇ ಹೋಗಿ ಎಲ್ಲ ಗುರುತು ಹಾಕಿದೆ. ನನ್ನ ಕಡೆಯಿಂದ ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡೋಲ್ಲ ಸರ್. ಅಂದಂದಿನ ಕೆಲಸವನ್ನು ಅಂದಂದೇ ಮಾಡುತ್ತೇವೆ” ಎಂದು ಹೇಳಿದಾಗ ನಮ್ಮ ಕಣ್ಣಾಲಿಗಳು ತುಂಬಿ ಬಂದಿದ್ದವು. ಆ ಮಗು ತನ್ನ ಗುರುವಿನ ಮೇಲೆ ಇಟ್ಟ ಅಭಿಮಾನ, ಪ್ರೀತಿ, ಯಾರಿಂದಲೂ ನಮ್ಮ ಗುರುಗಳು ಮಾತುಗಳನ್ನು ಕೇಳಬಾರದೆಂಬ ಭಾವನೆ ಎದುರು ಅಂದು ನಾವೆಲ್ಲ ಕುಬ್ಜರಾಗಿ ಹೋದೆವು. 
......................................... ರವೀಂದ್ರ ಆರ್ ಡಿ
ಭಾಷಾ ಶಿಕ್ಷಕ 
ಸರ್ಕಾರಿ ಪ್ರೌಢಶಾಲೆ ಲೋಕನಾಥಪುರ 
ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
Mob : +91 9242147403
*******************************************Ads on article

Advertise in articles 1

advertising articles 2

Advertise under the article