-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 39

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 39

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 39
ಲೇಖಕರು : ಡಾ. ಪ್ರಶಾಂತ್ ಕುಮಾರ್ ಕೆ ಎಸ್
ಕ್ಷೇತ್ರ ಸಮನ್ವಯಾಧಿಕಾರಿ
ಕ್ಷೇತ್ರ ಸಂಪನ್ಮೂಲ ಕೇಂದ್ರ
ಮಂಗಳೂರು ದಕ್ಷಿಣ ವಲಯ, ಬೋಳಾರ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94480 40225
             

    ಮಾನವ ಪ್ರಕೃತಿಯ ಕೂಸು. ನಿಸರ್ಗದ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ ಸಂಕುಲಗಳು ನಮಗೆ
ಚೈತನ್ಯ ನೀಡುವ ಸ್ಫೂರ್ತಿಯ ಸೆಲೆಗಳು. ಇವುಗಳ ಹೊರತಾದ ಮನುಷ್ಯನ ಜೀವನವನ್ನು ಊಹಿಸಲು ಸಾಧ್ಯವೇ? ಪ್ರಕೃತಿಯಲ್ಲಿ ಒಂದಾಗಿ ಬದುಕು ನಡೆಸುವುದರಲ್ಲಿ ಅಗಾಧ ಶಾಂತಿ ಇದೆ.
ತಾಯಿ ಒಡಲಿನಿಂದ ಪ್ರಕೃತಿಯ ಮಡಿಲಿಗಿಳಿಯುವ ನಾವು ಬಾಳ ಪಯಣವನ್ನು ಸಾಗಿಸುತ್ತಾ ಉತ್ತಮ ನಾಗರಿಕನಾಗಲು ಶಿಕ್ಷಣವೆಂಬ ಪ್ರಣತೆಯ ಜ್ಯೋತಿಯು ಅತ್ಯವಶ್ಯಕ. ಇಂತಹ ಮಹತ್ತರ ಜವಾಬ್ದಾರಿ ಹೊತ್ತು ಶಿಕ್ಷಣದ ತೇರನ್ನು ಮುನ್ನಡೆಸುವ ಕೈಂಕರ್ಯ ಶಿಕ್ಷಕನದ್ದಾಗಿರುತ್ತದೆ.
     
ಮುಗ್ಧ ಮಕ್ಕಳ ಮನದಲ್ಲಿ ಅದೆಷ್ಟೋ ಕನಸುಗಳು, ಕಲ್ಪನೆಗಳು, ಕೌತುಕಗಳಿರುತ್ತದೆ. ಮಗುವಿನ
ಕಲಿಕಾ ಪರಿಸರವು ಸ್ಪಂದಿಸುವ ರೀತಿಯನ್ನು ಆಧರಿಸಿ ಕಲಿಕೆ ಪರಿಪಕ್ವವಾಗುತ್ತಾ ಸಾಗುತ್ತದೆ. ಶಾಲಾ ಆವರಣದಲ್ಲಿರುವ ಸಮಸ್ತ ತರು-ಲತೆಗಳು, ಫಲ-ಪುಷ್ಪಗಳು, ಕೀಟ-ಪತಂಗಗಳು, ಗಿಡಗಂಟಿಗಳು ಕಲಿಕೆಗೆ
ಪೂರಕವಾದ ಹಾಗೂ ಪ್ರೇರಕನಾದ ಅವಿಚ್ಛಿನ್ನ ಅಂಶಗಳು, ಅವುಗಳೆಡೆಗೆ ಮಿಡಿಯುವ ಮನಸ್ಸು ಸದಾ ಪರಿಸರ ಸ್ನೇಹಿಯಾಗಿರುತ್ತದೆ. ಅದರಲ್ಲೂ ವೃಕ್ಷಗಳ ಒಡನಾಟ ಪಡೆದ ಶಿಕ್ಷಣದ ಸವಿ ಯಾವ
ಉಪಮೆಗೂ ನಿಲುಕದು. ಮುಖ್ಯಶಿಕ್ಷಕನಾಗಿ ಸೇವೆಗೆ ಸೇರಿದ ಸಂದರ್ಭದಲ್ಲಿ ಪಾವೂರಿನ ಸರಕಾರಿ ಪ್ರೌಢಶಾಲೆಯ ಕಲಿಕೆಯಂಗಳದ ವಟವೃಕ್ಷವೊಂದು ಆಗಾಗ ಸ್ಮೃತಿಪಟಲದಲ್ಲಿ ಹಾದು, ತಣ್ನೆರಳನ್ನು ನೀಡುತ್ತಿದೆ.

ಶಾಲೆಯ ಅಂಗಣದಲ್ಲಿರುವ ಆ ಮರದ ತಂಗಾಳಿಯ ಸ್ಪರ್ಶದಿಂದಲೇ ನಮ್ಮೆಲ್ಲರ ದಿನದ ಶುಭಾರಂಭ. ಆ ಮರಕ್ಕೂ, ಆ ಸ್ಥಳಕ್ಕೂ ಸುಮಾರು 40 ವಸಂತಗಳ ನಂಟಿದೆ ಎಂಬುದು ಅಲ್ಲಿನ ಪ್ರಕೃತಿ ಪ್ರಿಯರ ಅಭಿಮತ.
ವೃಕ್ಷದ ಹುಟ್ಟಿನ ಬಗ್ಗೆ... ಸುಮಾರು 40 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಕೊಳವೆ ಬಾವಿಯೊಂದಿತ್ತು. ಸ್ಥಳೀಯ ಪರಿಸರದಲ್ಲಿನ ವಾಹನ ಚಾಲಕರು ತಮ್ಮ ವಾಹನಗಳನ್ನು ಇಲ್ಲಿಂದಲೇ ನೀರು ತಂದು ಪಕ್ಕದಲ್ಲಿ ತೊಳೆಯುತ್ತಿದ್ದರು. ತೊಳೆದ ನೀರು ಹರಿದು ಪೋಲಾಗುತ್ತಿರುವುದನ್ನು ಕಂಡ ಯುವಕನೋರ್ವ ಅಲ್ಲೇ ಇದ್ದ ಸಸಿಯನ್ನು ಚಿಕ್ಕ ಗುಂಡಿ ತೋಡಿ ಊರಿಬಿಟ್ಟ... ನೋಡು ನೋಡುತ್ತಾ ಗಿಡ ಬೆಳೆದು ಮರವಾಗಿ ಅವನೊಂದಿಗೆ... ಸ್ಥಳೀಯ ಸಮುದಾಯದ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡಿತು.

ಪುಟ್ಟ ಸಸಿ ಇದ್ದಾಗಲೇ ಆಸುಪಾಸಿನವರಿಗೆ ಅದು ಬೆಸೆದ ಬಾಂಧವ್ಯ ಅನನ್ಯವಾಗಿತ್ತು. ಅದರ ಸನಿಹದಲ್ಲಿ ನಮ್ಮ ಜ್ಞಾನದೇಗುಲವು ನಿರ್ಮಾಣವಾಗುತ್ತಿರುವಾಗ ಆಟ, ಪಾಠ ಎಲ್ಲದಕ್ಕೂ ಆ ವೃಕ್ಷ ನೆರಳು ನೀಡಿದ್ದಲ್ಲದೆ ತರಗತಿ ಕೊಠಡಿ ಕೊರತೆಯಿದ್ದಾಗ ಪರೀಕ್ಷೆಗಳೂ ಆ ಮರದ ಆಶ್ರಯದಲ್ಲೇ ನಡೆಯುತ್ತಿದ್ದವು ಎಂಬುದು ಅಚ್ಚರಿಯಾದರೂ ವಾಸ್ತವವಾಗಿತ್ತು. ಶಾಲೆಯು ತನ್ನ ಮೂಲಭೂತ ಸೌಕರ್ಯಗಳನ್ನು ಹೊಂದಿ ಒಂದು ಸುಂದರ ಸಭಾಂಗಣದ ಅಗತ್ಯವಿದ್ದಾಗ ಅದೇ ಆಲದ ಮರದ ಬಳಿ ನಿರ್ಮಿಸುವುದೆಂದು ತೀರ್ಮಾನಿಸಲಾಯಿತು. ಆದರೆ ವಿಪರ್ಯಾಸವೆಂದರೆ ಆಪತ್ತಿನಲ್ಲಿ ಆಸರೆಯಾದ ಆಲದ ಮರ ಆಡಚಣೆಯಂತೆ ಕಂಡುಬಂತು. ಆ ಮರದ ಬುಡಕ್ಕೆ ಕೊಡಲಿಯೇಟು ಬೀಳುವ ಸಂದರ್ಭ ಬಂದಾಗ ಹೃದಯ ಹಿಸುಕಿದಂತಾಯ್ತು. ಇನ್ನೇನು ಮರದ ಬುಡಕ್ಕೆ ಕೊಡಲಿಯೇಟು... ಕೊಂಬೆಗಳಿಗೆ ಹಗ್ಗದ ಉರುಳು ಬಿತ್ತು ಎಂದುಕೊಂಡಾಗ ಅಲ್ಲಿ ಆ ಗಿಡ ನೆಟ್ಟ ವ್ಯಕ್ತಿಯೇ ಪ್ರತ್ಯಕ್ಷನಾಗಿ “ಮೊದಲು ನನ್ನ ಕೊರಳಿಗೆ ಉರುಳು ಬಿಗಿಯಿರಿ... ನಂತರ ವೃಕ್ಷಕ್ಕೆ... ಪ್ರಾಣ ಹೋದರೂ ಸರಿಯೇ, ಈ ಮರವ ಕಡಿಯಲು ಬಿಡೆ” ಎಂದು ಪಟ್ಟು ಹಿಡಿದು ಮರದ ರಕ್ಷಣೆಗೆ ನಿಂತರು. 
ಮರದ ಇತಿಹಾಸದ ಪುಟಗಳನ್ನು ಮಕ್ಕಳ ಎದುರು ತೆರೆದಿಟ್ಟಾಗ ವಿದ್ಯಾರ್ಥಿ ಸಮೂಹವೇ ಸಂವೇದನಾಶೀಲರಾಗಿ ವ್ಯಕ್ತಿಯ ಹೋರಾಟಕ್ಕೆ ಹೆಗಲಾಯ್ತು. ಮರದ ಕೊಂಬೆಗಳಿಗೆ ಬಿಗಿದ ಉರುಳು ಬಿಚ್ಚಿಕೊಂಡಿತು... ಕೊಡಲಿಯ ಕಾವು ತಣ್ಣಗಾಯಿತು. ಆಲದ ಮರ ಮರು ಹುಟ್ಟು ಪಡೆಯಿತು. ದುಃಖದ ಕಾರ್ಮೋಡ ಸರಿದು ಸಂತಸದ ಹೂಮಳೆ ಸುರಿದಂತಾಯಿತು. ಅಲ್ಲಿದ್ದ ಶಿಕ್ಷಕರು ಮಕ್ಕಳೆಲ್ಲರೂ ಪಟ್ಟ ಸಂತಸಕ್ಕೆ ಪಾರವೇ ಇರಲಿಲ್ಲ. ಮರು ವರುಷದಿಂದ ಪ್ರತಿ ವರ್ಷ ಪರಿಸರ ದಿನಾಚರಣೆಯಂದು ಮರುಹುಟ್ಟು ಪಡೆದ ವೃಕ್ಷದ ಜನ್ಮದಿನವನ್ನು ಆಚರಿಸಲು ಆರಂಭಿಸಿದೆವು. ವಿದ್ಯಾರ್ಥಿಗಳು ತಮ್ಮ ಒಡನಾಡಿಗಳ ಹುಟ್ಟು ಹಬ್ಬದಂದು ಸಂಭ್ರಮಿಸಿದಂತೆ ಕುಣಿದು ಕುಪ್ಪಳಿಸಿದರು. ಬಣ್ಣ ಬಣ್ಣದ ಶುಭಾಶಯ ಪತ್ರಗಳನ್ನು ಮರದ ರೆಂಬೆಗಳಲ್ಲಿ ತೂಗಿಸಿ ಸಂತಸಪಟ್ಟರು. ಆ ಮರದ ಕುರಿತು ಕವನ, ಜೀವನ ಚರಿತ್ರೆ ಬರೆಯುವುದು, ಕಥೆ, ಚಿತ್ರರಚನೆ ಮೊದಲಾದ ಅರ್ಥಪೂರ್ಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಭಾವಗಳನ್ನು ಅಭಿವ್ಯಕ್ತಿಸಿದ ರೀತಿ ಅನನ್ಯವಾಗಿತ್ತು. ಆ ವೃಕ್ಷಕ್ಕೆ 'ಸಂಹಿತ' ಎಂಬ ಅಭಿನಾಮ ನೀಡಲಾಯಿತು. ಸುಂದರ ನಾಮಫಲಕವೂ ಸಿದ್ಧವಾಯಿತು. ಅದೇ ಊರಿನ ಯುವಕ ಮಂಡಲವೊಂದು ತನ್ನದೇ ಖರ್ಚುವೆಚ್ಚದಲ್ಲಿ ಸುಂದರ ಕಟ್ಟೆಯೊಂದನ್ನು ಕಟ್ಟಿ ಅದರ ಸೊಬಗನ್ನು ವೃದ್ಧಿಸುವಂತೆ ಮಾಡಿದ್ದು ಅವಿಸ್ಮರಣೀಯ.
      'ವೃಕೋ ರಕ್ಷತಿ ರಕ್ಷಿತ:' ಎಂಬ ಉಕ್ತಿ ಘೋಷವಾಕ್ಯವಾಗಿ ಅನುರಣಿಸಿತು. ಮನ ಮುಟ್ಟುವ ಈ ಘಟನೆಯು ಹೊಸ ಚಿಂತನೆಗಳನ್ನು ಹುಟ್ಟು ಹಾಕಿ ನಿಸರ್ಗ ಪ್ರೀತಿಯನ್ನು ದ್ವಿಗುಣಗೊಳಿಸಿತು. ಹೆಮ್ಮರವಾಗುತ್ತಿರುವ ಆ ಆಲದ ಮರ ಎಲ್ಲರ ನೆನಪಿನಂಗಳದಲ್ಲಿ ಅಜರಾಮರ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರಕೃತಿಯಿಂದ ದೂರ ಸರಿಯುತ್ತಿರುವ ವಿದ್ಯಮಾನಗಳ ನಡುವೆ ವಿದ್ಯಾರ್ಥಿಗಳು ಮುನ್ನಡೆಯುತ್ತಿದ್ದಾರೆ. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಬೆಸೆಯಲು ಇಂತಹ ಹೃದಯಸ್ಪರ್ಶಿ ಘಟನೆಗಳೇ ಸ್ಪೂರ್ತಿಯಾಗಿ ಪ್ರಕೃತಿಯ ಆರಾಧಕನನ್ನಾಗಿ ಮಾಡಬಲ್ಲದು.
"ಆನಂದಮಯ ಈ ಜಗ ಹೃದಯ ಏತಕೆ ಭಯ ಮಾ ಸೂರ್ಯೋದಯ, ಚಂದ್ರೋದಯ ದೇವರ ದಯೆ ಕಾಣೋ" ಎಂಬ ಕುವೆಂಪುರವರ ವಾಣಿಯಂತೆ ಸುಂದರ ಪ್ರಕೃತಿ ಸೃಷ್ಟಿಯ ಅಮೂಲ್ಯ ಕೊಡುಗೆ. ವೃಕ್ಷಗಳೇ ನಮ್ಮ
ಜೀವಾಳ. ಶಾಲೆಯೆಂಬ ಉಪವನದ ಸುಂದರ ಕುಸುಮಗಳಾದ ಮಕ್ಕಳ ಮನದಲ್ಲಿ ಹಸಿರು ಸಿರಿಯ ಸೌರಭವು ಸೂಸುತಿರಲಿ... ಶಿಕ್ಷಣದ ಸುಗಂಧವು ಸುತ್ತೆಲ್ಲಾ ಪಸರಿಸಲಿ.
................. ಡಾ. ಪ್ರಶಾಂತ್ ಕುಮಾರ್ ಕೆ ಎಸ್
ಕ್ಷೇತ್ರ ಸಮನ್ವಯಾಧಿಕಾರಿ
ಕ್ಷೇತ್ರ ಸಂಪನ್ಮೂಲ ಕೇಂದ್ರ
ಮಂಗಳೂರು ದಕ್ಷಿಣ ವಲಯ, ಬೋಳಾರ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 98444 98123
*******************************************Ads on article

Advertise in articles 1

advertising articles 2

Advertise under the article