ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 37
Saturday, December 2, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 37
ಲೇಖಕರು : ಪೂರ್ಣೇಶ್ ವಿ ಪಿ
ಸಮೂಹ ಸಂಪನ್ಮೂಲ ವ್ಯಕ್ತಿ
ಸಮೂಹ ಸಂಪನ್ಮೂಲ ಕೇಂದ್ರ ಚಿಕ್ಕಮಗಳೂರು ಚಿಕ್ಕಮಗಳೂರು ತಾಲೂಕು ಮತ್ತು ಜಿಲ್ಲೆ
Mob : +91 94492 40073
ಭಾರತದ ಭಾವಿ ಪ್ರಜೆಗಳನ್ನು ದೇಶನಿಷ್ಠರನ್ನಾಗಿ, ಸತ್ಪ್ರಜೆಗಳನ್ನಾಗಿ, ಸುಸಂಸ್ಕೃತರನ್ನಾಗಿ, ಉತ್ತಮ ಪೌರರನ್ನಾಗಿ, ದೇಶದ ಏಳಿಗೆಗೆ ಶ್ರಮಿಸುವ, ಸದ್ಭಾವದ, ಸಹಬಾಳ್ವೆಯ ಸಚ್ಚಾರಿತ್ರ್ಯವಂತರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪೌರನೀತಿಯ ಬೋಧನೆ ಮಹತ್ತರ ಪಾತ್ರ ವಹಿಸಬಲ್ಲದು. ಈ ನಿಟ್ಟಿನಲ್ಲಿ ಐದನೇ ತರಗತಿಯ ಸಮಾಜ ವಿಜ್ಞಾನದ ಪೌರನೀತಿಯ ಕಲಿಕಾ ಪ್ರಕ್ರಿಯೆ ಸಂದರ್ಭ ಹಾಗೂ ಮುಂದುವರೆದ ದಿನಗಳಲ್ಲಿ ಆದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಪುಟ್ಟ ಪ್ರಯತ್ನ ಇದಾಗಿದೆ.
ರಾಷ್ಟ್ರಗೀತೆ - ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆ. ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದು ಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಗಿದೆ. ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆಯು 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ರವೀಂದ್ರನಾಥ ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಪ್ರಕಟಣೆಗೆ ಮೊದಲು ಈ ಗೀತೆಯನ್ನು 27 ಡಿಸೆಂಬರ್ 1911ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ರವೀಂದ್ರನಾಥ ಠಾಕೂರ್ ಅವರು ಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದು ಭಾರತ ಇಬ್ಭಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸ ದಿರುವುದು ಗಮನಾರ್ಹ. ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ. ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಸಾವಧಾನ ಸ್ಥಿತಿಯಲ್ಲಿ ಅಲುಗಾಡದೆ ನಿಂತು ಗೌರವ ತೋರಬೇಕು. ಹಾಡುವಾಗ ಏನೇ ಆದರೂ ಸಮಸ್ಥಿತಿಯಲ್ಲೆ ಇರಬೇಕು. ಹಾಡುವಾಗ ಎದ್ದು ಇಲ್ಲಬೇಕು. ಮಾತನಾಡಬಾರದು. ನಾವು ಸಹ ಹಾಡಬೇಕು. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 48 ರಿಂದ 52 ಸೆಕೆಂಡುಗಳು. ಬೇರೆ ಯಾವುದೇ ಹಾಡನ್ನು ಈ ಹಾಡನ್ನು ಹಾಡುವ ಧಾಟಿಯಲ್ಲಿ ರಾಗ ಸಂಯೋಜನೆ ಮಾಡಬಾರದು. ಇಷ್ಟಾದರೂ ಶಿಕ್ಷಕರಾಗಿ ನಾವು ರಾಷ್ಟ್ರಗೀತೆಯ ಬಗ್ಗೆ ತಿಳಿದಿರಬೇಕಾದ ವಿಷಯ. ಇದರಲ್ಲಿ ಮಕ್ಕಳಿಗೆ ಸಾಕಾಗುವಷ್ಟು ಅರ್ಥಗರ್ಭಿತವಾಗಿ ಸಾವಕಾಶವಾಗಿ ಮುಖ್ಯ ಅಂಶಗಳನ್ನು ಆಗಾಗ ಮರುಕಳಿಸಿ ಸ್ಪಷ್ಟಪಡಿಸಿದ್ದಾಯಿತು. ಎಲ್ಲ ಮಕ್ಕಳನ್ನು ಎದ್ದು ನಿಲ್ಲಿಸಿ ನಾಲ್ಕಾರು ಬಾರಿ (ಸಾವಧಾನ ವಿಶ್ರಾಮ್) ಕಾಶನ್ ಕೊಟ್ಟು, ನಂತರ ರಾಷ್ಟ್ರಗೀತೆಯ ಪ್ರತಿ ಸಾಲುಗಳನ್ನು ಹೇಳಿಕೊಟ್ಟು ಹಾಡಿಸಿ, ಪೂರ್ಣವಾಗಿ ಅವರಿಂದಲೇ ಹಾಡಿಸಿ ಮನದಟ್ಟು ಮಾಡಿಸಿದ್ದಾಯ್ತು. ಇದರ ಅರ್ಥವನ್ನು ಹೇಳಿಯೂ ಆಯ್ತು.. ಮುಂದಿನ ಎಲ್ಲಾ ದಿನಗಳ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳುವಂತೆ ತಿಳಿಸಿದ್ದಾಯಿತು.
ಬೆಳ್ತಂಗಡಿ ತಾಲೂಕಿನ ನೇತ್ರಾವತಿ ದಡದಲ್ಲಿರುವ ಪುಟ್ಟ ಹಳ್ಳಿ ಮೊಗ್ರು. ಅಲ್ಲೊಂದು ಕಿರಿಯ ಪ್ರಾಥಮಿಕ ಶಾಲೆ. ಆ ಸಂದರ್ಭದಲ್ಲಿ ದಿನದ ಬೆಳಗಿನ ಪ್ರಾರ್ಥನೆ ಮತ್ತು ನಾಡಗೀತೆ ಹಾಗೂ ಸಂಜೆಯ ಸಮಯದಲ್ಲಿ ರಾಷ್ಟ್ರಗೀತೆ ಹಾಡುವಂತೆ ಆದೇಶವಿತ್ತು. ಒಂದು ದಿನ ಸಂಜೆ ರಾಷ್ಟ್ರಗೀತೆ ಹಾಡುವಾಗ ಪ್ರಕಾಶ ಎಂಬ ವಿದ್ಯಾರ್ಥಿಯ ಕಾಲಿಗೆ ಕಾಡು ಜಾತಿಯ ದೊಡ್ಡ ನೊಣ ಒಂದು (ದನ, ಜಾನುವಾರುಗಳಿಗೆ ಕಚ್ಚುವ ನೊಣ ಜಾತಿಯ ಕೀಟ) ಕಚ್ಚಲಾರಂಭಿಸಿತು. ಆದರೆ ಆ ವಿದ್ಯಾರ್ಥಿಯು ಕೊಂಚವೂ ಅಲುಗಾಡದೆ ಶಿಕ್ಷಕರು ಹೇಳಿದ ಮಾತನ್ನು ಪಾಲಿಸಿದ್ದ. ರಾಷ್ಟ್ರಗೀತೆ ಹಾಡಿ ಮುಗಿಸಿದ್ದ. ರಾಷ್ಟ್ರಗೀತೆ ಮುಗಿದಿದ್ದೆ ತಡ ಅವನ ಹಿಂದೆ ನಿಂತಿದ್ದ ಮಕ್ಕಳು ಸರ್.... ಪ್ರಕಾಶನ ಕಾಲಲ್ಲಿ ರಕ್ತ ....ರಕ್ತ.... ಎಂದು ಕಿರುಚತೊಡಗಿದರು. ಏನಾಯಿತು...? ಎಂದು ವಿಚಾರಿಸಿದಾಗ ದೊಡ್ಡ ನೊಣ ಒಂದು ಕಚ್ಚಿತೆಂದು ಗಮನಿಸಿದವರೆಲ್ಲರೂ ಹೇಳಿದರು. ಪರಿಶೀಲಿಸಿದಾಗ ಕಾಲಿನಿಂದ ತುಂಬಾ ರಕ್ತ ಹೊರಬರುತ್ತಿತ್ತು. ಅವನಿಗೆ ಕಚ್ಚಿದ್ದ ನೊಣ ಅಲ್ಲಿಯೇ ಗಿಡಗಳ ಮೇಲೆ ಹಾರಾಡುತ್ತಿತ್ತು...... ಹೆ ಪ್ರಕಾಶ ಇಷ್ಟು ಜೋರಾಗಿ ಕಚ್ಚಿ ರಕ್ತ ಬರುತ್ತಿದ್ದಾಗಲೂ ನಿನಗೆ ನೋವಾಗಲಿಲ್ಲವೇ? ಅದನ್ನು ಓಡಿಸಬಾರದೆ?? ಎಂದು ಕೇಳಿದಾಗ... "ರಾಷ್ಟ್ರಗೀತೆ ಹಾಡುವಾಗ ಏನಾದರೂ ಅಲುಗಾಡಬಾರದು ಎಂದು ನೀವೇ ಹೇಳಿದ್ದೀರಲ್ವಾ ಸರ್" ಎಂದು ಪ್ರಶ್ನಿಸಿದಾಗ ಮೌನವಾಗದೆ ಮತ್ತೇನೂ ಉತ್ತರ ಉಳಿದಿರಲಿಲ್ಲ....!! ಹುಡುಗನ ರಾಷ್ಟ್ರದ ಮೇಲಿನ ಅಭಿಮಾನವೋ.... ರಾಷ್ಟ್ರಗೀತೆಗೆ ಗೌರವವೋ ಗುರುಗಳ ಮೇಲಿನ ಭಕ್ತಿಯೋ.... ಹೆದರಿಕೆಯೋ.... ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಅನುಭವ ರಾಷ್ಟ್ರಗೀತೆಯ ಬಗ್ಗೆ ಯಾವುದೇ ವಿಷಯ ಬಂದಾಗಲೂ ನೆನಪಾಗದೆ ಇರದು....!
ಸಮೂಹ ಸಂಪನ್ಮೂಲ ವ್ಯಕ್ತಿ
ಸಮೂಹ ಸಂಪನ್ಮೂಲ ಕೇಂದ್ರ ಚಿಕ್ಕಮಗಳೂರು ಚಿಕ್ಕಮಗಳೂರು ತಾಲೂಕು ಮತ್ತು ಜಿಲ್ಲೆ
Mob : +91 94492 40073
*******************************************